ಬೆಂಗಳೂರು: ಬಂಡವಾಳ ಕೇಂದ್ರೀತ, ಅಪರಾಧ ಕೇಂದ್ರೀತ, ಕೋಮುವಾದಿ ಕೇಂದ್ರೀತ ಬೆಂಗಳೂರು ನಿಜವಾಗಿಯೂ ದುಡಿಯುವ ವರ್ಗ ಕೇಂದ್ರೀತ ನಗರವಾಗಿದೆ. ಜನವಿರೋಧಿ-ದೇಶವಿರೋಧಿ ನೀತಿಗಳನ್ನು ಜನತೆಯ ನಡುವೆ ಕೊಂಡ್ಯೊಯ್ಯುವ ಜನರ ಐಕ್ಯತೆಯನ್ನು ಎತ್ತಿಹಿಡಿಯುವ ಮೂಲಕ ಸಿಐಟಿಯು ದುಡಿಯುವ ವರ್ಗದೊಂದಿಗೆ ಕೆಲಸ ಮಾಡುತ್ತಿದೆ ಎಂದು ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಹೇಳಿದರು.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿ ಕಛೇರಿ ʻಜ್ಯೋತಿಬಸು ಭವನʼ ನವೀಕೃತಗೊಂಡ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ನವೀಕೃತಗೊಂಡ ಕಟ್ಟಡ ಉದ್ಘಾಟನೆಗೊಳ್ಳುವುದೆಂದರೆ, ಸಿಐಟಿಯು ಸಂಘಟನೆಯು ಕಾರ್ಮಿಕರ ನಡುವೆ ತನ್ನ ಚಟುವಟಿಕೆಯನ್ನು ವಿಸ್ತರಿಸಿಕೊಂಡಿದೆ ಎಂಬುದು. ಕಾಮ್ರೇಡ್ ಜ್ಯೋತಿಬಸು ಅವರು, ಸಿಐಟಿಯು ಆರಂಭದಿಂದ ಉಪಾಧ್ಯಕ್ಷರಾಗಿ ಮತ್ತು ಸಂಘಟಿತ ಕಾರ್ಮಿಕರೊಂದಿಗೆ, ರಾಜಕೀಯದೊಂದಿಗೂ ತಮ್ಮ ತಾವು ತೊಡಗಿಸಿಕೊಂಡವರು. ಬೆಂಗಳೂರು ಕಾರ್ಮಿಕ ವರ್ಗದ ಕೇಂದ್ರವಾಗಿ ವಿಸ್ತರಣೆಗೊಳ್ಳುತ್ತಿದೆ. ಆ ಮೂಲಕ ಸಂಘಟನಾತ್ಮಕ ಹೋರಾಟಕ್ಕೆ ಮಾರ್ಗದರ್ಶನ ಕೇಂದ್ರವಾಗಿ ಈ ಕಟ್ಟಡವೂ ವಿಸ್ತರಣೆಗೊಂಡಿದೆ. ಸಿಐಟಿಯು ಸಂವಿಧಾನವು ಆಳುವ ವರ್ಗದ ಜನ ವಿರೋಧಿ ನೀತಿಗಳನ್ನು, ಶೋಷಣಾ ಸಮಾಜ ವ್ಯವಸ್ಥೆಯನ್ನು ಸೋಲಿಸುವುದರ ಮೂಲಕ ಕಾರ್ಮಿಕ ವರ್ಗದ ರಾಜಕೀಯ ಗುರಿಯನ್ನು ಸಾಧಿಸುವುದಾಗಿದೆ ಎಂದರು.
2023ರ ಜನವರಿಯಲ್ಲಿ ನಡೆಯಲಿರುವ ಸಿಐಟಿಯು ಅಖಿಲ ಭಾರತ ಸಮ್ಮೇಳನ ನಡೆಯುತ್ತಿದ್ದು, ಜನರ ಹಕ್ಕುಗಳನ್ನು ಬಲಪಡಿಸುವುದರೊಂದಿಗೆ, ದೈನಂದಿನ ಪ್ರಶ್ನೆಗಳಿಗೆ ಸ್ಪಂದಿಸುವ ಮೂಲಕ ದೇಶದ ಜನ ವಿಭಾಗವನ್ನು ಉಳಿಸುವ ಕಾರ್ಯದಲ್ಲಿ ಸಿಐಟಿಯು ತೊಡಗಿಸಿಕೊಂಡಿದೆ. ಕಳೆದ ವರ್ಷ ಜಂಟಿ ವೇದಿಕೆಯ ಮೂಲಕ ಹಮ್ಮಿಕೊಂಡ ಎರಡು ದಿನದ ಅಖಿಲ ಭಾರತ ಮುಷ್ಕರವು ಕೋಮುವಾದಿ-ಕಾರ್ಪೊರೇಟ್ ಕೇಂದ್ರೀತ ಸಖ್ಯತೆಯನ್ನು ಬಯಲಿಗೆಳೆಯವಂತ ಕಾರ್ಯವನ್ನು ಮತ್ತಷ್ಟು ಮುಂದಕ್ಕೆ ಒಯ್ಯಲಾಯಿತು. ಆಳುವ ವರ್ಗದ ಜನ ವಿರೋಧಿ ನೀತಿಗಳನ್ನು ಸೋಲಿಸುವುದು ಅವಶ್ಯಕವಾಗಿದೆ. ದುಡಿಯುವ ವರ್ಗಕ್ಕೆ ನಮ್ಮ ವೈರಿ ಯಾರೆಂಬುದನ್ನು ತಿಳಿಸುವಂತಾಗಬೇಕು. ಈ ಕೇಂದ್ರವು ಅದಕ್ಕೆ ಕೆಲಸ ಮಾಡುತ್ತದೆ ಎದರು.
ರಾಜ್ಯ ರಾಜಕೀಯ ಚಟುವಟಿಕೆಯ ಪ್ರಮುಖ ಕೇಂದ್ರ ಬೆಂಗಳೂರು. ಇಲ್ಲಿ ಸಿಐಟಿಯು ಅಖಿಲ ಭಾರತ ಸಮ್ಮೇಳನ ಹಮ್ಮಿಕೊಂಡಿರುವುದು ದೊಡ್ಡ ಸವಾಲೇ. ಸಮ್ಮೇಳನವನ್ನು ರಾಜ್ಯದ ಎಲ್ಲಾ ಕಡೆಗಳಲ್ಲಿ ಕೊಂಡೊಯ್ಯುವ ಮೂಲಕ ಉತ್ತಮ ರೀತಿಯ ಬೆಳವಣಿಗೆಯಾಗುತ್ತಿದೆ. ಸಂದೇಶದ ತೆಗೆದುಕೊಂಡು ಹೋಗುವುದೆಂದರೆ, ಸಮ್ಮೇಳನ ಯಶಸ್ಸಿಗೆ ಮುನ್ನಡೆಯಾಗಿದೆ. ನಿಧಿ ಸಂಗ್ರಹ ಮಾಡುವ ಮೂಲಕ ಜನರ ಬಳಿಗೆ ಸಂಘಟನೆ ತಲುಪಿಸಲಾಗುತ್ತಿದೆ.
ಕಾರ್ಮಿಕರು ಮತ್ತು ರೈತರ ಸಖ್ಯತೆಯೊಂದಿಗೆ ಕಳೆದ ಸೆಪ್ಟಂಬರ್ 05ರಂದು ದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸಮಾವೇಶವು ಜನರ ಹಕ್ಕುಗಳ ರಕ್ಷಣೆಗಾಗಿ 2023ರ ಏಪ್ರಿಲ್ 05ರಂದು ಜಂಟಿ ಹೋರಾಟಕ್ಕೆ ಕರೆ ನೀಡಲಾಗಿದೆ. ಇದರಲ್ಲಿ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರನ್ನು ದೊಡ್ಡ ಪ್ರಮಾಣದಲ್ಲಿ ಅಣಿನೆರೆಸುವ ಕೆಲಸ ಆಗಬೇಕಾಗಿದೆ. ಈ ಹಿಂದೆ ದೆಹಲಿಯಲ್ಲಿ ಜರುಗಿದ ರೈತ-ಕಾರ್ಮಿಕರ ಸಖ್ಯತೆಯ ಜಂಟಿ ಹೋರಾಟದಲ್ಲಿ 1.80 ಲಕ್ಷ ಜನ ಅಣಿನೆರೆದಿದ್ದರು. ಇದೀಗ ಮತ್ತೆ ಮುಂಬರುವ 2023, ಸೆಪ್ಟಂಬರ್ 05ರ ಹೋರಾಟದಲ್ಲಿಯೂ 3 ಲಕ್ಷಕ್ಕೂ ಹೆಚ್ಚಿನ ಜನರನ್ನು ಅಣಿನೆರೆಸುವ ಕೆಲಸ ಆಗಬೇಕಿದೆ. ಇದರಲ್ಲಿ ಕರ್ನಾಟಕದ ದುಡಿಯುವ ವರ್ಗದ ಪಾತ್ರವೂ ಮಹತ್ವದ್ದಾಗಿದೆ. ಆ ಮೂಲಕ ಕೋಮುವಾದಿ-ಕಾರ್ಪೊರೇಟ್ ಕೇಂದ್ರೀತ ಸಖ್ಯತೆಯನ್ನು ಸೋಲಿಸುವ ಗುರಿ ಸಾಧಿಸಬೇಕು ಎಂದು ಹೇಳಿದರು.
ರೈತ-ಕಾರ್ಮಿಕರ ನಡುವಿನ ಹೋರಾಟ ಬಲಪಡಿಸಲು, ವ್ಯಾಪಾಕ ಪ್ರಚಾರವನ್ನು ಕೈಗೊಳ್ಳಲು ಜ್ಯೋತಿಬಸು ಭವನ ದೊಡ್ಡ ಪಾತ್ರವನ್ನು ನಿರ್ವಹಿಸಲಿದೆ ಎಂದು ಹೇಳಿದರು.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಜ್ಯೋತಿ ಬಸು ಭವನ ಈ ಹಿಂದೆ ಬ್ಯಾಂಕ್ ನೌಕರರ ಸಂಘಟನೆಯಾದ ಕರೂರ್ ವೈಶ್ಯ ಬ್ಯಾಂಕ್ ಯೂನಿಯನ್ ನ ಕಟ್ಟಡವಾಗಿತ್ತು. ಅವರು ಕಟ್ಟಡವನ್ನು ಮಾರಾಟ ಮಾಡಬೇಕಾದ ಸಂದರ್ಭ ಎದುರಾದಾಗ, ಇದನ್ನು ಕಾರ್ಮಿಕ ವರ್ಗಕ್ಕೆ ಮೀಸಲಾಗಿರುವಂತೆ ನಿಶ್ಚಯಿಸಿದರು. ಅಂದು ಅವರು ಕಟ್ಟಡವನ್ನು ಸಿಐಟಿಯು ಸಂಘಟನೆಗೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಿದರು. ಅವರ ಈ ಕಾರ್ಯ ಸ್ಮರಿಸಿವುದು ಅವಶ್ಯವಾಗಿದೆ. ಬ್ಯಾಂಕ್ ನೌಕರರ ಅಂದುಕೊಂಡಂತೆ ನಿರೀಕ್ಷೆಗೂ ಮೀರಿ ಇಂದು ಕಾರ್ಮಿಕರ ನಡುವೆ ಸಂಘಟನೆ ವಿಸ್ತರಿಸಿಕೊಳ್ಳುವ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಿಐಟಿಯು ಸಂಘಟನೆಗೆ ಬಹಳ ವರ್ಷಗಳ ಕಾಲ ತನ್ನದೇ ಆದ ಸ್ವಂತ ಕಟ್ಟಡವಿರಲಿಲ್ಲ. ಇಂದು ಕೆಆರ್ ಪುರದಲ್ಲಿ ಸೂರಿ ಭವನ, ಸಂಪಂಗಿರಾಮನಗರದಲ್ಲಿ ಸೂರಿ ಭವನ, ಬಸವನಗುಡಿಯಲ್ಲಿ ಜ್ಯೋತಿಬಸು ಭವನ ಕಾರ್ಯವನ್ನು ನಿರ್ವಹಿಸುತ್ತಿದೆ. ಆ ಮೂಲಕ ರಾಜ್ಯದಲ್ಲಿ ಸಿಐಟಿಯು ವಿಸ್ತಾರವಾಗುತ್ತಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಾ ಚಟುವಟಿಕೆಗಳು ಸ್ತಬ್ಧಗೊಂಡ ಸಂದರ್ಭದಲ್ಲಿ ಸಿಐಟಿಯು ಸಂಘಟನೆ ಮುಂಚೂಣಿಯಾಗಿ ಮಧ್ಯಪ್ರವೇಶ ಮಾಡುವ ಮೂಲಕ ಬಿಡುವಿಲ್ಲದಂತೆ ತೊಡಗಿಸಿಕೊಂಡಿದೆ. ಕಾರ್ಮಿಕರ ಆರ್ಥಿಕ ಬೇಡಿಕೆಗಳಿಗಾಗಿ ಮಾತ್ರವಲ್ಲ, ಬದಲಾಗಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಪರಿಹಾರಗಳನ್ನು ನೀಡುವ ಕೆಲಸ ಮಾಡಲಾಗಿದೆ. ಮೆಡಿಕಲ್ ಕಿಟ್ ನೀಡುವುದು, ಆರೋಗ್ಯ ಸಂಬಂಧಿಸಿ ಸಲಹೆಗಳನ್ನು ನೀಡುವುದು, ಮಾನಸಿಕ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡಲಾಗಿದೆ. ಆಮ್ಲಜನಕ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕೇಂದ್ರ ಸ್ಥಾಪಿಸಲಾಯಿತು. ನಂತರದ ದಿನಗಳಲ್ಲಿ ಶ್ರಮಿಕರ ಕ್ಲಿನಿಕ್ ಆರಂಭ ಮಾಡಿ ಅತಿ ಹೆಚ್ಚಿನ ಜನರು ಕೇಂದ್ರಕ್ಕೆ ಬರುವಂತ ಮಾಡಲಾಗಿದೆ ಎಂದರು.
ಬೆಂಗಳೂರಿನಲ್ಲಿ ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನ ಜರುಗುತ್ತಿದ್ದು, ಸಮ್ಮೇಳನವನ್ನು ಯಶಸ್ಸಿನೊಂದಿಗೆ ದುಡಿಯುವ ವರ್ಗ ರಾಜಕೀಯ ಶಕ್ತಿಯನ್ನು ಬಲಪಡಿಸುವ ಕಾರ್ಯವೂ ಆಗಬೇಕಾಗಿದೆ. ರಾಜಕೀಯ ಬದಲಾವಣೆಯ ಗುರಿಯೆಡೆ ಮುನ್ನಡೆಯಬೇಕಿದೆ. ಸಮ್ಮೇಳನದ ಅಂಗವಾಗಿ ಬೆಂಗಳೂರಿನಲ್ಲಿ ಬೀದಿಬದಿ ನಿಧಿ ಸಂಗ್ರಹ ಮಾಡಲಾಗಿದೆ. ಆ ಮೂಲಕ ಪ್ರಚಾರ ಹುರುಪುಪಡೆದುಕೊಂಡಿದೆ. ಜನವರಿ 22ರಂದು ಅಖಿಲ ಸಮ್ಮೇಳನ ಅಂಗವಾಗಿ ನಡೆಯಲಿರುವ ಬೃಹತ್ ಬಹಿರಂಗ ಸಭೆಗೆ ಕೆಂಪು ಸೈನ್ಯವನ್ನು ಅಣಿನೆರೆಸಿ ರಾಜಕೀಯ ಸಂದೇಶ ರವಾನಿಸುವ ಕೆಲಸ ಆಗಬೇಕಾಗಿದೆ. ನಮ್ಮ ಶತ್ರುಗಳಿಗೆ ದುಡಿಯುವ ಜನರ ರಾಜಕೀಯ ಶಕ್ತಿ ಮರಳಿ ಬರುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ಕೆ.ಎನ್.ಉಮೇಶ್ ಮಾತನಾಡಿ, ಜ್ಯೋತಿ ಬಸು ಉದ್ಘಾಟನೆಗೊಳ್ಳುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಒಂದೇ ಜಿಲ್ಲಾ ಸಮಿತಿ ಇತ್ತು. ಇಂದು ಬೆಂಗಳೂರು ಉತ್ತರ, ದಕ್ಷಿಣ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಾಗಿ ನಾಲ್ಕು ಜಿಲ್ಲಾ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ನಡೆಯುವ ಕಡಲೆಕಾಯಿ ಪರಿಷೆ ಸಂದರ್ಭದಲ್ಲಿ ಒಮ್ಮೆ ಕಾರ್ಮಿಕರು ಕಛೇರಿಗೆ ಭೇಟಿ ನೀಡಿದ್ದರು. ಅವರೊಂದಿಗೆ ಅವರ ಮಕ್ಕಳು ಸಹ ಭೇಟಿ ನೀಡಿದ್ದಾಗ ʻಇದು ನಮ್ಮಪ್ಪನ ಆಫೀಸ್ʼ ಎಂದರು. ಅಂದರೆ, ಇದು ಯಾರ ಒಬ್ಬರ ಕಛೇರಿಯಲ್ಲ ದುಡಿಯುವ ವರ್ಗದ ಎಲ್ಲಾ ಜನರ ಕಛೇರಿಯಾಗಿದೆ. ಕೋವಿಡ್ ಸಂದರ್ಭದಲ್ಲಿ ಕೆಲಸ ಅನುಭವದ ಆಧಾರದಲ್ಲಿ ನಂತರದ ದಿನಗಳಲ್ಲಿ ಕಳೆದ ವರ್ಷ ಅಕ್ಟೋಬರ್ ಸಮಯದಲ್ಲಿ ಈ ಕಛೇರಿಯನ್ನು ವಿಸ್ತರಿಸಬೇಕೆಂದು ನಿರ್ಧರಿಸಲಾಯಿತು. ಇಂದು ಕಟ್ಟಡ ನವೀಕೃತಗೊಂಡು ಉದ್ಘಾಟನೆಯಾಗಿದೆ. ಕಛೇರಿ ಉದ್ಘಾಟನಾ ಅವಧಿಯಲ್ಲಿ ಜೊತೆಗಿದ್ದ ಕಾರ್ಮಿಕರೊಂದಿಗೆ ಇಂದು ಬೆಳವಣಿಗೆ ಹಂತವಾಗಿ ಅಸಂಘಟಿತ ಕಾರ್ಮಿಕರಾದ ಮನೆಗೆಲಸಗಾರರು, ಕಟ್ಟಡ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳ ನಡುವೆ ಸಿಐಟಿಯು ವಿಸ್ತರಿಸಿದೆ ಮಾತ್ರವಲ್ಲ. ಅವರ ಕೊಡುಗೆ ಬಹಳ ದೊಡ್ಡದಿದೆ ಎಂದು ಸ್ಮರಿಸಿದರು.
ಕಾರ್ಮಿಕರ ನಡುವೆ ಸಿಐಟಿಯು ಸಂಘಟನೆಯ ಕಾರ್ಯಚಟುವಟಿಕೆಗಳು ವಿಸ್ತರಿಸದಂತೆಲ್ಲಾ ವಲಯ ಮಟ್ಟದಲ್ಲಿಯೂ ಸಂಘಟನೆಯು, ತನ್ನದೇ ಆದ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ಕಾರ್ಮಿಕರ ನಡುವಿನ ಈ ಬೆಳವಣಿಗೆ ದುಡಿಯುವ ವರ್ಗದ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬೇಕಿದೆ. ಸಿಐಟಿಯು ಅಖಿಲ ಭಾರತ ಸಮ್ಮೇಳನಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಈ ಒಟ್ಟು ದಿನಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕಾರ್ಯ ಆಗಬೇಕಾಗಿದೆ ಎಂದರು.
ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ. ಪ್ರಕಾಶ್ ಮಾತನಾಡಿ, ಇತ್ತೀಚಿಗೆ ಅಮೆರಿಕಾ ತನಿಖಾ ಸಂಸ್ಥೆಯೊಂದು ಮೂರು ವರದಿಗಳನ್ನು ಬಿಡುಗಡೆ ಮಾಡಿದ್ದು, ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ಬಂಧನಕ್ಕೆ ಒಳಗಾದ ಸ್ಟ್ಯಾನ್ ಸ್ವಾಮಿ ಅವರು ಆದಿವಾಸಿಗಳೊಂದಿಗೆ ಕೆಲಸ ಮಾಡುತ್ತಿದ್ದರು. ದೇಶದಲ್ಲಿ ಗಣಿ ಲಾಭಿ ವ್ಯಾಪಕವಾಗಿದ್ದು, ಅದರ ವಿರುದ್ಧ ಸ್ಟ್ಯಾನ್ ಸ್ವಾಮಿ ಅವರ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಅವರು ಬಂಧನಕ್ಕೆ ಒಳಗಾಗಿ ಜೈಲಿನಲ್ಲಿಯೇ ಆಸುನೀಗಬೇಕಾದ ಪರಿಸ್ಥಿತಿ ಎದುರಾಯಿತು. ಸ್ಟ್ಯಾನ್ ಸ್ವಾಮಿ ಅವರಿಗೆ ತಿಳಿಯದಂತೆ ಕಂಪ್ಯೂಟರ್ ಹ್ಯಾಕರ್‌ಗಳು ಅವರ ಕಂಪ್ಯೂಟರ್ ಗೆ 40 ಕಡತಗಳು ರವಾನೆಯಾಗಿದೆ. ಅಂದರೆ, ಇದರ ಹಿಂದೆ ವ್ಯವಸ್ಥಿತವಾದ ತಂಡವೊಂದು ಕೆಲಸ ಮಾಡಿದೆ. ಆದರೆ, ಈ ಪ್ರಕರಣದಲ್ಲಿ ತನಿಖೆಯನ್ನು ನಡೆಸುತ್ತಿರುವ ಎನ್‌ಐಎ ತಂಡ ಅಮೆರಿಕಾ ತನಿಖಾ ಸಂಸ್ಥೆ ಬಿಡುಗಡೆಗೊಳಿಸಿರುವ ವರದಿ ಬಗ್ಗೆ ಒಂದಂಶವನ್ನು ಗಣನೆಗೆ ತೆಗೆದುಕೊಂಡಿಲ್ಲ. ಯುಎಪಿಎ ಕಾಯ್ದೆಯಡಿ ಬಂಧನಕ್ಕೆ ಒಳಗಾದ 17-18 ಮಂದಿ ಇನ್ನೂ ಜೈಲಿನಲ್ಲಿಯೇ ಇದ್ದಾರೆ. ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸುತ್ತಾ ಬರಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ರೈತ ಕಾರ್ಮಿಕರ ಹೋರಾಟಗಾರರ ಮೇಲೆಯೂ ಇಂತಹ ಗೂಢಚಾರ್ಯೆ ಕೆಲಸಗಳು, ಹ್ಯಾಕರ್ ಗಳ ಕೆಲಸಗಳು ನಡೆಯುವ ಸಾಧ್ಯತೆಗಳು ಇವೆ. ಹಾಗಾಗಿ ಇಂತಹ ನೀತಿಗಳನ್ನು ಬಯಲುಗೊಳಿಸಲು ನಾವು ಮನೆ ಮನೆ ಪ್ರಚಾರವನ್ನು ವಿಸ್ತರಿಸುವ ಅವಶ್ಯಕತೆ ಇದೆ ಎಂದರು.
ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಬಿ.ಎನ್. ಮಂಜುನಾಥ್ ಮಾತನಾಡಿ, ಕಾರ್ಮಿಕರ ನಡುವೆ ನಮ್ಮ ಬೆಳವಣಿಗೆ ಮತ್ತು ನಂತರದಲ್ಲಿ ಎದುರಾದ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ನಮ್ಮ ಮಧ್ಯಪ್ರವೇಶದಿಂದಾಗಿ ಸಂಘಟನೆ ವಿಸ್ತರಣೆಯಾಗಿದೆ. ಅಲ್ಲದೆ, ಸದಸ್ಯತ್ವದ ಪ್ರಮಾಣ ಗುಣಾತ್ಮಕವಾಗಿ ಬದಲಾವಣೆಯಾಗಿದೆ. ನವೀಕೃತಗೊಂಡ ಜ್ಯೋತಿ ಬಸು ಭವನದ ಕಾರ್ಯಚಟುವಟಿಕೆಯಲ್ಲಿಯೂ ನಮ್ಮ ಜವಾಬ್ದಾರಿ ಹೆಚ್ಚಿದ್ದು, ಎಲ್ಲರೂ ಹೊಣೆ ಹೊರುವ ಮೂಲಕ ಕ್ರಿಯಾಶೀಲವಾಗಿ, ವೇಗವಾಗಿ ಕೆಲಸ ಮಾಡುವುದು ಆಗಬೇಕಾಗಿದೆ. ನಿಗದಿತ ದಿನಾಂಕದೊಳಗೆ ನವೀಕೃತ ಕಟ್ಟಡದ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಿದ ಕಟ್ಟಡ ಕಾರ್ಮಿಕರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಅಖಿಲ ಭಾರತ ಸಮ್ಮೇಳನದ ಅಂಗವಾಗಿ ಡಿಸೆಂಬರ್ 19ರಂದು ಬಿ ಟಿ ರಣದಿವೆ ಅವರ ಜನ್ಮದಿನದಂದು ಹಮ್ಮಿಕೊಂಡಿರುವ ಸಾಮೂಹಿಕ ನಿಧಿ ಸಂಗ್ರಹ ಮತ್ತು ಡಿಸೆಂಬರ್ 24ರಂದು ಬಸವನಗುಡಿ ನ್ಯಾಷನಲ್ ಕಾಲೇಜು, ಎಚ್ ಎನ್ ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮದ ಭಿತ್ತಿಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಅಲ್ಲದೆ, ನವೀಕೃತ ಕಟ್ಟಡದ ವಿನ್ಯಾಸಗಾರ ಎನ್. ದಯಾನಂದ್ ಅವರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಸ್ವಾಗತವನ್ನು ಸಿಐಟಿಯು ಬೆಂಗಳೂರು ಉತ್ತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಮುನಿರಾಜು, ನಿರೂಪಣೆಯನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜು ಮತ್ತು ವಂದಾನಾರ್ಪಣೆಯನ್ನು ದಕ್ಷಿಣ ಜಿಲ್ಲಾ ಸಮಿತಿ ಖಜಾಂಚಿ ದೇವಿಕಾ ಅವರು ನೆರವೇರಿಸಿದರು. ವೇದಿಕೆಯಲ್ಲಿ ಉತ್ತರ ಜಿಲ್ಲಾ ಸಮಿತಿ ಅಧ್ಯಕ್ಷ ಪ್ರತಾಪ್ ಸಿಂಹ, ಖಜಾಂಚಿ ಟಿ.ಲೀಲಾವತಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಹೆಚ್ ಎನ್ ಗೋಪಾಲಗೌಡ ಅವರು ಧ್ವಜಾರೋಹಣ ಮಾಡಿದರು ಮತ್ತು ತಪನ್ ಸೇನ್ ಅವರು ನಾಮಫಲಕವನ್ನು ಉದ್ಘಾಟನೆ ಮಾಡಿದರು. ಕೆ.ಎಸ್.ಲಕ್ಷ್ಮಿ ಮತ್ತು ತಂಡದವರು ಕ್ರಾಂತಿಗೀತೆಗಳನ್ನು ಹಾಡಿದರು.
ವರದಿ: ವಿನೋದ ಶ್ರೀರಾಮಪುರ