ಬೆಂಗಳೂರು: ಕುಡಿದ ನಶೆಯಲ್ಲಿದ್ದ ವೈದ್ಯರ ತಂಡ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಆತನ ಮೇಲೆ ಮೂತ್ರ ವಿಸರ್ಜಿಸಿದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಯಲಹಂಕ ನಿವಾಸಿ ಆಟೋ ಚಾಲಕ ಮುರಳಿ ಎಂಬುವವರ ಮೇಲೆ ಖಾಸಗಿ ಆಸ್ಪತ್ರೆಯ ವೈದ್ಯ ರಾಕೇಶ್ ಶೆಟ್ಟಿ ಎನ್ನುವವರು ಹಲ್ಲೆ ನಡೆಸಿ, ವೈದ್ಯ ಸ್ನೇಹಿತರ ಜೊತೆ ಸೇರಿ ಅಟೋ ಚಾಲಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಘಟನೆಯ ವಿವರ : ಆರೋಪಿ ರಾಕೇಶ್ ಬಾಗಲೂರಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ. ಹಲವು ಬಾರಿ ಮುರಳಿ ಆಟೋದಲ್ಲೇ ಪ್ರಯಾಣಿಸಿ ಸಲುಗೆ ಬೆಳೆಸಿಕೊಂಡಿದ್ದ. ನ.4ರಂದು ಖಾಸಗಿ ಹೋಟೆಲ್ನಲ್ಲಿ ವೈದ್ಯರಿಂದ ಪಾರ್ಟಿ ನಡೆಯುತ್ತಿತ್ತು. ಈ ವೇಳೆ ವೈದ್ಯ ರಾಕೇಶ್ನ ಅಣತಿಯಂತೆ ಅಡುಗೆ ವಸ್ತುಗಳನ್ನು ಸಾಗಿಸಲು ಹೋಟೆಲ್ಗೆ ಆಟೋ ಚಾಲಕ ಬಂದಿದ್ದ. ಆಗ ಮತ್ತೊಬ್ಬ ವೈದ್ಯನನ್ನು ಆಟೋದಲ್ಲಿ ಕರೆದುಕೊಂಡು ಬರುವಂತೆ ರಾಕೇಶ್ ಸೂಚಿಸಿದ್ದ. ಅದರಂತೆ ವೈದ್ಯ ಸ್ವಾಮಿಯನ್ನು ಆಟೋ ಚಾಲಕ ಕರೆತಂದಿದ್ದ. ಬರುವುದು ತಡವಾಯ್ತೆಂದು ರಾಕೇಶ್ ಕುಡಿದ ಮತ್ತಿನಲ್ಲಿ ಚಾಲಕನಿಗೆ ತರಾಟೆಗೆ ತೆಗೆದುಕೊಂಡಿದ್ದ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ.
ಬಳಿಕ ಸಿಟ್ಟಿಗೆದ್ದ ರಾಕೇಶ್, ತನ್ನನ್ನು ರೋಗಿಗಳ ಎದುರು ಆಟೋಚಾಲಕ ಮುರುಳಿ ಅವಮಾನಿಸಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದ. ಇದಕ್ಕೆ ಆತನ ಸಹಚರರು ಸಾಥ್ ಕೊಟ್ಟಿದ್ದು, ಚಾಲಕನನ್ನು ವಿವಸ್ತ್ರಗೊಳಿಸಸಿ ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿ ಹೀನ ಕೃತ್ಯವೆಸಗಿ ಅಲ್ಲಿಂದ ವೈದ್ಯರ ಗ್ಯಾಂಗ್ ಪರಾರಿಯಾಗಿದೆ.
ಮಾರನೇ ದಿನ ಎಚ್ಚರಗೊಂಡ ಚಾಲಕ, ಬೆತ್ತಲೆಯಾಗಿಯೇ ಹೊರಬಂದು ಸ್ಥಳೀಯರ ನೆರವಿನಿಂದ ಮನೆಗೆವರಿಗೆ ವಿಷಯ ತಿಳಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯಲಹಂಕ ಆಸ್ಪತ್ರೆಗೆ ಮುರುಳಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಸಂಬಂಧ ರಾಕೇಶ್ ಶೆಟ್ಟಿಯನ್ನು ಬಂಧಿಸಲಾಗಿದೆ. ಉಳಿದ ವೈದ್ಯರು ತಲೆಮರೆಸಿಕೊಂಡಿದ್ದು ತನಿಖೆ ಕಾರ್ಯ ಮುಂದುವರೆದಿದೆ.