ಪವಿತ್ರ ಎಸ್ , ಸಹಾಯಕ ಪ್ರಾಧ್ಯಾಪಕರು
“ಬೆಂಗಳೂರು” ಎಂದಾಕ್ಷಣ ಒಂದು ಕಾಲದಲ್ಲಿಎಲ್ಲರ ಹುಬ್ಬೇರುತ್ತಿದ್ದವು. ಏಕೆಂದರೆ, ಬೆಂಗಳೂರು ಸಿಲಿಕಾನ್ ವ್ಯಾಲಿ, ಐಟಿ ಸಿಟಿ, ಇಲ್ಲಿನ ಐಷಾರಾಮಿ ಜೀವನ, ಮೂಲಭೂತ ಸೌಕರ್ಯಗಳು, ಸಾರಿಗೆ ಸಂಪರ್ಕ ವ್ಯವಸ್ಥೆ, ಎಲ್ಲದಕ್ಕಿಂತಲೂ ಮುಖ್ಯವಾಗಿ ಹವಾಮಾನ, ಹಸಿರು ಉದ್ಯಾನವನಗಳು ಎಲ್ಲರನ್ನೂ ಕೈಬೀಸಿ ಕರೆದು ತನ್ನ ಒಡಲಲ್ಲಿ ಸೇರಿಸಿಕೊಳ್ಳುತ್ತಿತ್ತು ಬೆಂಗಳೂರು. ನಾವು ಚಿಕ್ಕವರಿರುವಾಗ ಬೆಂಗಳೂರಿನಲ್ಲಿ ಕೃಷಿ ಮಾಡುತ್ತಿದ್ದರು ಎಂದರೆ, ಇಂದು ನಂಬದ ಜನರಿದ್ದಾರೆ. ಭೂಮಿಯನ್ನು ಹದಗೊಳಿಸಿ ಬಿತ್ತನೆ ಮಾಡುವುದೆಲ್ಲಿ? ಈಗಿನ ಕಾಂಕ್ರೀಟ್ ನಗರವೆಲ್ಲಿ? ಎಂಬಂಥಹ ಪ್ರಶ್ನೆಗಳನ್ನು ಸಹಜವಾಗಿಯೇ ಕೇಳುತ್ತಾರೆ. ಯಲಹಂಕ ದಿಂದ ಮಾರ್ಕೆಟ್ ವರೆಗಿನ ದಾರಿಗುಂಟ ಸಾಗಿದರೆ ಬೃಹತ್ತಾದ ಸಾಲುಮರಗಳು, ಬೇಸಿಗೆಯಲ್ಲೂ ಚಳಿಗಾಲದ ಅನುಭವವನ್ನೇ ನೀಡುತ್ತಿದ್ದ ಆಗಿನ ಬೆಂಗಳೂರು ನಗರವೆಲ್ಲಿ? ಈಗ ನೆರಳಿಗಾಗಿ, ನೀರಿಗಾಗಿ, ಶುದ್ದ ಗಾಳಿಗಾಗಿ ಹಂಬಲಿಸುತ್ತಿರುವ ಕಲುಷಿತಗೊಂಡ ಬೆಂಗಳೂರು ನಗರವೆಲ್ಲಿ?
ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುತ್ತಿದ್ದ ಸಾಲುಮರಗಳು ಇಂದು ಅಭಿವೃದ್ಧಿಯ ಹೆಸರಿನಲ್ಲಿ ಕಣ್ಮರೆಯಾಗಿವೆ. ವಲಸಿಗರ ಸ್ವರ್ಗ ಎಂದೇ ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಇಂದು ಶಾಪಗ್ರಸ್ತವಾಗುತ್ತಿದೆ. ನಮ್ಮದು ಬೆಂಗಳೂರು ಎಂದರೆ ಒಂದು ಕಾಲದಲ್ಲಿ ಆಶ್ಚರ್ಯದಿಂದ ನೋಡುತ್ತಿದ್ದ ಜನ, ಇಂದು ನಿಮ್ಮೂರಲ್ಲಿ ನೀರೇ ಇಲ್ಲ ಎಂದು ವ್ಯಂಗ್ಯವಾಡುವ ಮಟ್ಟಕ್ಕೆ ಇಳಿದಿದೆ. ಎಲ್ಲ ಮೂಲಭೂತ ಸೌಕರ್ಯಗಳು ಸಿಗುತ್ತಿದ್ದ ಬೆಂಗಳೂರು ನಗರ ಇಂದು ನರಕದಂತೆ ಕಾಣುತ್ತಿದೆ. ನೀರು ಸಮೃದ್ಧವಾಗಿದ್ದಾಗ ಎಲ್ಲರ ಕನಸಿನ ನಗರವಿದು. ಯಾರನ್ನಾದರೂ ಮುಂದಿನ ನಿಮ್ಮ ಯೋಜನೆ ಏನು? ಎಂದು ಕೇಳಿದರೆ, ಶಿಕ್ಷಣ ಮುಗಿದ ನಂತರ ಬೆಂಗಳೂರು ನಗರದಲ್ಲಿ ಉದ್ಯೋಗಕ್ಕೆ ಸೇರಿ, ಸೈಟ್ ಖರೀದಿ ಮಾಡಿ ಮನೆ ಕಟ್ಟಿಸಿ ಇಲ್ಲೇ ಸೆಟಲ್ ಆಗಿ ಬಿಡುವುದು ಎಂದು ಉತ್ತರ ನೀಡುತ್ತಿದ್ದರು. ಉತ್ತರ ಭಾರತೀಯರಂತೂ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದೆ ಇಟ್ಟಿದ್ದು. ಅಲ್ಲಿಯವರೆಗೂ ಸ್ವರ್ಗವೇ ಈ ಬೆಂಗಳೂರು.
ಏನಾಗಿದೆ ಇಂದು………
ಬೆಂಗಳೂರಿನ ಜನಸಂಖ್ಯೆ 1 ಕೋಟಿ 40 ಲಕ್ಷಕ್ಕೂ ಮೀರಿದೆ. ಒಂದು ಅಂದಾಜಿನ ಪ್ರಕಾರ ಕರ್ನಾಟಕ ರಾಜ್ಯದ ಜನಸಂಖ್ಯೆಯೇ 6 ಕೋಟಿ ಇದೆ. ಅದರಲ್ಲಿ ಬೆಂಗಳೂರು ನಗರ ಒಂದರಲ್ಲಿಯೇ ಒಂದು ಕೋಟಿಗೂ ಅಧಿಕ ಜನಸಂಖ್ಯೆ…. ಇನ್ನು ಬೆಂಗಳೂರು ಬೆಳೆಯುತ್ತಿರುವ ವೇಗ ನೋಡಿದರೆ, ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಎಂಬ ಭಯವಿತ್ತು. ಬೆಂಗಳೂರು ತನ್ನ ಕಬಂಧ ಬಾಹುಗಳನ್ನು ಚಾಚುತ್ತಾ, ಹೊಸೂರು, ಬಿಡದಿ, ದಾಬಸ್ ಪೇಟೆ, ದೇವನಹಳ್ಳಿ ಹೊಸಕೋಟೆ ವರಗೋ ವಿಸ್ತಾರಗೊಳ್ಳುತ್ತಲೇ ಇದೆ. ಈ ನಗರೀಕರಣಕ್ಕೆ ಕಡಿವಾಣ ಬೀಳುತ್ತಿಲ್ಲ.
ಬೆಂಗಳೂರಿನ ಕೆರೆಗಳೆಲ್ಲ ಎಲ್ಲಿ ಹೋದವು?
ವರ್ಷಪೂರ್ತಿ ನೀರಿನ ಪೂರೈಕೆದಾರರಾಗಿದ್ದ ಈ ಕೆರೆಗಳು ಬೆಂಗಳೂರಿನ ಜೀವನಾಡಿಗಳು. 1960ರಲ್ಲಿ 280 ಕ್ಕಿಂತಲೂ ಹೆಚ್ಚು ಕೆರೆಗಳಿದ್ದವು ಎಂಬ ಮಾಹಿತಿ ಇದೆ. ಆದರೆ ಈಗ ಲೆಕ್ಕ ಮಾಡುತ್ತಾ ಹೋದರೆ ಬೆರಳೆಣಿಕೆಯಷ್ಟೇ ಸಿಗುತ್ತದೆ. ಆ ಕೆರೆಗಳಿದ್ದ ಜಾಗ ಏನಾಗಿದೆ? ಎಂಬ ಪ್ರಶ್ನೆಯೊಂದಿಗೆ ಮುಖಾಮುಖಿ ಯಾದರೆ…. ಇಂದು ಆ ಸ್ಥಳದಲ್ಲಿ ಅಪಾರ್ಟ್ಮೆಂಟ್ ಗಳು ಬಸ್ ನಿಲ್ದಾಣಗಳು ಐಷಾರಾಮಿ ಮಾಲ್ಗಳು ಕೆಲವೊಂದು ಕಡೆ ಸ್ಲಂಗಳು ಸಹ ತಲೆ ಎತ್ತಿ ನಿಂತಿವೆ. ಕೆರೆ ಒತ್ತುವರಿ ಹೆಸರಿನಲ್ಲಿ ಜಾಗ ತೆರವುಗೊಳಿಸಿ ಸ್ಲಂ ಗಳನ್ನು ಮಾತ್ರ ಖಾಲಿ ಮಾಡಿಸಬಹುದೆ ಹೊರತು ಶ್ರೀಮಂತರ ಕಟ್ಟಡಗಳನ್ನಲ್ಲ.ನೀರಿಲ್ಲದೆ ಬರಗಾಲಕ್ಕೆ ತುತ್ತಾಗಿರುವ ಬೆಂಗಳೂರು ನಗರವನ್ನು ಶಪಿಸುತ್ತಾ ಖಾಲಿ ಮಾಡುತ್ತಿದ್ದಾರೆ. ಈ ಬೆಂಗಳೂರಿಗೆ ಉದ್ಯೋಗ ಹುಡುಕಿ ಬಂದ ಉದ್ಯೋಗಿಗಳು ತಮ್ಮ ಸ್ವಂತ ಸ್ಥಳಗಳಿಗೆ ಸದ್ದಿಲ್ಲದೆ ಜಾಗ ಖಾಲಿ ಮಾಡಿ ಹೋಗುತ್ತಿದ್ದಾರೆ. ಕೇಳಿದರೆ ದುಡ್ಡು ಎಷ್ಟೇ ಕೊಟ್ಟರು ನೀರು ಕೊಡುತ್ತಿಲ್ಲ ಮೂಲಭೂತ ಅವಶ್ಯಕತೆಗಳಿಗೂ ನೀರಿಲ್ಲ ಹೇಗೆ ಬದುಕುವುದು ಹೇಳಿ? ಎಂದು ಪ್ರಶ್ನಿಸುತ್ತಾರೆ.
ಇವರಿಗಾಗಿ ಅಭಿವೃದ್ಧಿ ಮಾಡಿ, ಮೂಲಭೂತ ಸೌಕರ್ಯಗಳನ್ನು ನೀಡಿ, ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಿ ಕರೆಸಿಕೊಂಡು, ಐಷಾರಾಮಿ ಜೀವನ ಮಾಡಲು ಅವಕಾಶ ಕಲ್ಪಿಸಿದ ನಗರಕ್ಕೆ ಇವರಿಂದ ಸಿಕ್ಕ ಲಾಭವಾದರೂ ಏನು? ಈ ನಗರಕ್ಕೆ ಆಗಿರುವ ತೊಂದರೆಗೆ ಇವರು ಒಂದು ಸಣ್ಣ ಪರಿಹಾರವನ್ನಾದರೂ ಸೂಚಿಸುತ್ತಿದ್ದಾರೆಯೇ? ಇಲ್ಲಿ ಸಮಸ್ಯೆ ಇದೆ ಅಂತ ಅವರ ಊರಿಗೆ ಹೋಗುವುದು ಅವರ ಊರಿನಲ್ಲಿ ಉದ್ಯೋಗವಿಲ್ಲ ಅಂತ ಬೆಂಗಳೂರಿಗೆ ಬರೋದು…. ಇದೇ ಇವರ ದೊಡ್ಡ ಸಾಧನೆಯಾಗಿದೆ.
ಪ್ರಕೃತಿ ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು ಪೂರೈಸುತ್ತದೆಯೆ ಹೊರತು ಆತನ ದುರಾಸೆಯನ್ನಲ್ಲ ಎಂದು ಮಹಾತ್ಮ ಗಾಂಧಿ ಹೇಳುತ್ತಾರೆ…. ಪ್ರಕೃತಿಯನ್ನ ಇನ್ನಿಲ್ಲದಂತೆ ನಾಶ ಮಾಡಿ ಮನುಷ್ಯ ತಾನು ಉಳಿಯಬೇಕು ಎಂದು ಪ್ರಯತ್ನ ಪಡುತ್ತಿರುವ ಇಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಏನು ತಾನೆ ಹೇಳುವುದು?