ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಿಎಂಟಿಸಿ ದರ ದುಪ್ಪಟ್ಟು – ಅರ್ಧದಷ್ಟು ಟಿಕೆಟ್ ದರ ಕಡಿತಗೊಳಿಸಲು ಆಗ್ರಹ

ಬೆಂಗಳೂರು : ಸಾರ್ವಜನಿಕ ಸಾರಿಗೆ ಸಾಮಾನ್ಯ ಜನರ ಜೀವನಾಡಿ. ಪ್ರತಿನಿತ್ಯ ಲಕ್ಷಾಂತರ ಜನ ಅದರಲ್ಲಿ ಪ್ರಯಾಣ ಮಾಡುತ್ತಾರೆ. ಬೆಂಗಳೂರಿನಂತಹ ದೊಡ್ಡನಗರಗಳಲ್ಲಿ ಸಾಮಾನ್ಯ ಜನರ ಮಿತ್ರನಾಗಿದೆ. ಆದರೆ ದರ ಹೆಚ್ಳಳದ ಪರಿಣಾಮ ಸಾಮಾನ್ಯನ ಜೇಬನ್ನು ಸುಡುತ್ತಿದೆ. ಇದೇ ವೇಳೆ ದರ ಪರಿಷ್ಕರಣೆಯಾಗಬೇಕು. ಹೆಚ್ಚಿನ ದರವನ್ನು ಪಡೆಯಲಾಗುತ್ತಿದೆ. ಇಷ್ಟೊಂದು ದರವನ್ನು ಪಡೆಯುತ್ತಿರುವುದು ಯಾಕೆ ಎಂಬ ಪ್ರಶ್ನೆಗಳು ಕೂಡ ಈಗ ಎದ್ದಿವೆ.

ಹೌದು ಈ ಕುರಿತಾಗಿ ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕ ಅದಲಾತ್‌ ಮೂಲಕ ಸಾರ್ವಜನಿಕ ಸಾರಿಗೆಯ ಪ್ರಯಾಣಿಕರ ಕುಂದುಕೊರತೆಗಳನ್ನು ಆಲಿಸಿ ಸರಕಾರಕ್ಕೆ ಮನವಿ ಸಲ್ಲಿಸಿದೆ. ಬಿಎಂಟಿಸಿ ಹಾಗೂ ಇತರೆ ಸಾರ್ವಜನಿಕ ಸಾರಿಗೆಯ ದರಗಳನ್ನು ಕಡಿತಗೊಳಿಸುವಂತೆ ಆಗ್ರಹವನ್ನು ಮಂಡಿಸಿದೆ.

ಬಿಎಂಟಿಸಿ ಬಸ್ ಸೇವೆಗಳನ್ನು ಪ್ರತಿ ದಿನ ಲಕ್ಷಾಂತರ ಜನರು ತಮ್ಮ ಜೀವನೋಪಾಯಕ್ಕಾಗಿ ಬಳಸುತ್ತಾರೆ. ಆದರೆ, ಬಿಎಂಟಿಸಿ ಬಸ್ ಟಿಕೆಟ್ ದರಗಳು ಇಡೀ ದೇಶದಲ್ಲಿಯೇ ಇತರೆ ಯಾವುದೇ ರಾಜ್ಯಗಳಲ್ಲಿಯೂ ಇಲ್ಲದಷ್ಟು ದುಬಾರಿ ಆಗವೆ. ಇದರ ದರಗಳು ನಗರದ ದೊಡ್ಡ ಸಂಖ್ಯೆಯ ಜನರಿಗೆ ಕೈಗೆಟಕುವಂತಿಲ್ಲ. ಆರ್ಥಿಕ ಸಂಕಷ್ಟತೆ ಮತ್ತು ಕೋವಿಡ್ ಸಾಂಕ್ರಾಮಿಕವು ಹೆಚ್ಚಿನ ಸಂಖ್ಯೆಯಜನರನ್ನು,ಅದರಲ್ಲಿಯೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಕಡು ಬಡತನಕ್ಕೆ ದೂಡಿದೆ.ಕೈಗೆಟಕುವ ಸಾರಿಗೆ ವ್ಯವಸ್ಥೆಯ ಕೊರತೆ ಈ ಜನರನ್ನು ಬಡತನದ ಸುಳಿಗೆ ಸಿಲುಕಿಸಿದ್ದು, ತಮ್ಮ ಸ್ವಂತ ಪ್ರಯತ್ನಗಳಿಂದ ಹೊರಗೆ ಬರುವುದು ಸಾಧ್ಯವಾಗುತ್ತಿಲ್ಲ ಎಂಬ ಅಂಶ ಈಗ ಹೊರಗೆ ಬಿದ್ದಿದೆ. ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಸರಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸಿನ ವಿವರಣೆಯನ್ನು ಈ ಕೆಳಗಿನಂತೆ ನೋಡಬಹುದಾಗಿದೆ.

ಬಸ್ ಟಿಕೆಟ್ ದರಗಳನ್ನು ಮಹತ್ತರವಾದ ಪ್ರಮಾಣದಲ್ಲಿ ಇಳಿಕೆ ಮಾಡಿದರೆ ಸಾಮಾನ್ಯ ಜನರಿಗೆ ಬಹಳ ಅನುಕೂಲವಾಗುತ್ತದೆ ಮತ್ತು ಆರ್ಥಿಕ ಅವಕಾಶಗಳನ್ನು ಪಡೆದುಕೊಳ್ಳಲು ನೆರವಾಗಿ ಜೀವನ ಸುಧಾರಿಸುತ್ತದೆ; ಮಹಿಳೆಯರಿಗೆ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರಿಗೆ, ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಸ್ ಪ್ರಯಾಣವನ್ನು ಉಚಿತಗೊಳಿಸುವುದರಿಂದ ಹೆಚ್ಚಿನ ಓಡಾಡುವ ಶಕ್ತಿ ಲಭಿಸುತ್ತದೆ. ಜನರು ವಸ್ತುಗಳನ್ನು ಖರೀದಿಸಲು, ಕೆಲಸಕ್ಕೆ ಹೋಗಲು, ಶಿಕ್ಷಣ ಪಡೆಯಲು, ವೈದ್ಯಕೀಯ ಸೇವೆಗಳನ್ನು ಪಡೆಯಲು ಆಸ್ಪತ್ರೆಗಳುಹಾಗೂ ಚಿಕಿತ್ಸಾಲಯಗಳಿಗೆ ಹೋಗುವಂತಹ ತಮ್ಮ ದೈನಂದಿನ ಅಗತ್ಯಗಳಿಗಾಗಿ ನಗರದಾದ್ಯಂತ ಪ್ರಯಾಣಿಸುತ್ತಾರೆ. ಸಾರಿಗೆಯೇ ನಗರದ ಜೀವಾಳ. ಈ ಹಿನ್ನೆಲೆಯಲ್ಲಿ ಜನರು ಘನತೆಯುಳ್ಳ ಜೀವನ ನಡೆಸಲು ಹಾಗೂ ನಗರದ ಕಾರ್ಯಚಟುವಟಿಕೆಗಳು ಮುನ್ನಡೆದುಕೊಂಡು ಹೋಗಲು ಸರಿಯಾದ ಸಾರಿಗೆ ವ್ಯವಸ್ಥೆಯ ಲಭ್ಯತೆ ಮತ್ತು ದೊರೆಯುವಿಕೆ ನಿರ್ಣಾಯಕವಾಗುತ್ತದೆ.

ಬಿಎಂಟಿಸಿ ಬಸ್ ಟಿಕೆಟ್ ದರಗಳು ಭಾರತದ ಇತರೆಯಾವುದೇ ನಗರಗಳಲ್ಲಿರುವ ಬಸ್ ಟಿಕೆಟ್ ದರಗಳಿಂತಲೂ ಅತ್ಯಂತ ದುಬಾರಿಯಾಗಿದೆ. ಬಿಎಂಟಿಸಿ ಬಸ್ಸುಗಳು ಈ ಅತ್ಯಂತ ದುಬಾರಿ ಟಿಕೆಟ್ ದರಗಳು ಈಗಾಗಲೇ ಕಡಿಮೆಯಾಗಿರುವ ನಗರಬಡವರ
ಆದಾಯಕ್ಕೆ ಕೊಳ್ಳಿ ಇಟ್ಟಿದೆ. ಅನೇಕ ಜನರು ಸಾರಿಗೆವೆಚ್ಚಗಳನ್ನು ಉಳಿಸುವುದಕ್ಕಾಗಿ ದೂರದವರೆಗೂ ನಡೆದುಕೊಂಡೇ ಹೋಗುವಂತಾಗಿದೆ. ಇಡೀ ಕುಟುಂಬದ ಸದಸ್ಯರು ಸಾರಿಗೆ ವೆಚ್ಚಗಳನ್ನುಭರಿಸುವುದು ಸಾಧ್ಯವಾಗದೇ ಇರುವ ಕಾರಣದಿಂದಾಗಿ ಆರೋಗ್ಯ ಅಥವಾ ತಮ್ಮ ಮಕ್ಕಳ ಪೌಷ್ಠಿಕತೆ ಹಾಗೂ ಶಿಕ್ಷಣದಂತಹ ಇತರೆ ವೆಚ್ಚಗಳನ್ನು ಅನಿವಾರ್ಯವಾಗಿ ಕಡಿತಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬೆಂಗಳೂರು ಬಸ್‌ ಪ್ರಯಾಣಿಕರ ವೇದಿಕೆ ಆಗ್ರಹಿಸಿದೆ.

ಮುಂಬೈ ನಗರದಲ್ಲಿ 2019ರಲ್ಲಿ ಬಸ್ ಟಿಕೆಟ್ ದರಗಳನ್ನು ಕಡಿಮೆಗೊಳಿಸಲಾಯಿತು ಹಾಗೂ ವಿವಿಧ ಹಂತಗಳಿಗೆರೂ.5 (5ಕಿ.ಮೀ.ವರೆಗೆ), ರೂ.10 (5-10 ಕಿ.ಮೀ.ಗಳಿಗೆ), ರೂ.15 (10-15 ಕಿ.ಮೀ.ಗಳಿಗೆ) ಹಾಗೂ ರೂ.20 (15 ಕಿ.ಮೀ. ಮೀರಿ) ದರವನ್ನು ನಿಗಧಿಪಡಿಸಲಾಯಿತು. ಇದೇ ವರ್ಷದಲ್ಲಿ ದೆಹಲಿ ಸರ್ಕಾರ ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತಗೊಳಿಸುವ ಮೂಲಕ ಮಹತ್ತರವಾದ ಕ್ರಮವನ್ನು ಕೈಗೊಂಡಿತು. ಏಪ್ರಿಲ್ 2021ರಲ್ಲಿ ಪಂಜಾಬ್ ಸರ್ಕಾರ ರಾಜ್ಯದಾದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಎಲ್ಲಾ ಮಹಿಳೆಯರಿಗೂ ಬಸ್ ಪ್ರಯಾಣ ಉಚಿತಗೊಳಿಸಿತು, ಇದರಿಂದ ಪಂಜಾಬ್ ರಾಜ್ಯದ 1.3 ಕೋಟಿ ನಿವಾಸಿಗಳಿಗೆ ಅನುಕೂಲವಾಗಿದೆ. ತಮಿಳುನಾಡು ಸರ್ಕಾರ ಮೇ 2021ರಲ್ಲಿ ಇದೇ ರೀತಿಯ ಒಂದು ನೀತಿಯನ್ನು ಅನುಸರಿಸಿತು. ಈ ಮೇಲಿನ ರಾಜ್ಯ ಹಾಗೂ ನಗರ ಸರ್ಕಾರಗಳು ಅಲ್ಲಿನ ಬಸ್ ನಿಗಮಗಳಿಗೆ ಮಹಿಳೆಯರಿಗೆ ನಿರ್ಣಾಯಕವಾಗಿರುವಂತಹ ಕೈಗೆಟಕುವ ಸಂಚಾರ ವ್ಯವಸ್ಥೆಯಿರುವ ಸಾಮಾಜಿಕ ಹಾಗೂ ಆರ್ಥಿಕ ಹಣಕಾಸಿನ ಬೆಂಬಲ ಮತ್ತು ಹೆಚ್ಚು ಅವಕಾಶಗಳನ್ನು ಒದಗಿಸುತ್ತಿವೆ. ಮುಂಬೈನಲ್ಲಿ ಬಾಂಬೆ ಮುನಿಸಿಪಲ್ ಕಾರ್ಪೊರೇಷನ್ ಬಸ್ ನಿಗಮಕ್ಕೆ ಬೆಂಬಲ ನೀಡಲು ರೂ.600 ಕೋಟಿ ಹಣಕಾಸಿನ ನೆರವನ್ನು ಮಂಜೂರು ಮಾಡಿದೆ. ತಮಿಳುನಾಡಿನಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತಗೊಳಿಸಿದ್ದು, ಇದರಿಂದ ತಮಿಳುನಾಡು ಸರ್ಕಾರಕ್ಕೆ ವಾರ್ಷಿಕ ರೂ.1,200 ವೆಚ್ಚವಾಗುತ್ತಿದೆ. ದೆಹಲಿ, ಪಂಜಾಬ್ ಹಾಗೂ ತಮಿಳುನಾಡು ರಾಜ್ಯಗಳು ರಾಜ್ಯದಾದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಪ್ರಯಾಣವನ್ನು ಉಚಿತಗೊಳಿಸಿವೆ. ಇದರಿಂದಾಗಿ ಆ ರಾಜ್ಯಗಳಲ್ಲಿ ಜನರ ಮಾಸಿಕ ಉಳಿತಾಯ ಪ್ರಮಾಣ ಹೆಚ್ಚಾಗಿವೆ ಎಂದು  ಸಮೀಕ್ಷೆಗಳ ಮೂಲಕತಿಳಿದು ಬಂದಿದೆ.   ಹಾಗಾಗಿ ಕರ್ನಾಟಕದಲ್ಲೂ ಇಂತಹದ್ದೆ ಮಾದರಿಗಳನ್ನು ಜಾರಿ ಮಾಡಬೇಕಿದೆ.

ಬೃಹತ್ ಶ್ರೀಮಂತಿಕೆ ಇರುವಂತಹ ಬೆಂಗಳೂರು ನಗರದಲ್ಲಿ ಅಷ್ಟೇ ಗಂಭೀರ ಸ್ವರೂಪದ ಬಡತನ ಹಾಗೂ ಅಸಮಾನತೆಯೂ ರಾರಾಜಿಸುತ್ತಿದೆ. ನಗರದ ಅಂದಾಜು 25% ರಿಂದ 35%ರಷ್ಟು ಜನಸಂಖ್ಯೆ ಕೊಳಗೇರಿಗಳಲ್ಲಿ ವಾಸಿಸುತ್ತಿದೆ. 2017ರಲ್ಲಿ ನಡೆಸಿದಂತಹ ಒಂದು ಅಧ್ಯಯನದ ಪ್ರಕಾರ ನಗರದ ಕೊಳಗೇರಿಯಲ್ಲಿ ವಾಸಿಸುವ ಓರ್ವ ವ್ಯಕ್ತಿಯ ಮಾಸಿಕ ಆದಾಯ ಕೇವಲ ರೂ.3,000 ಇತ್ತೀಚಿನ ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ ಕಳೆದ 5 ವರ್ಷಗಳಲ್ಲಿ ಕಡು ಬಡತನದಲ್ಲಿರುವ ಶೇ.40ರಷ್ಟು ಜನರ ಆದಾಯ ಗಳಿಕೆ ಶೇ.30ರಿಂದ ಶೇ.50ರಷ್ಟು ಕುಸಿದಿದೆ. ಸಾಂಕ್ರಾಮಿಕದ ನಂತರದ ಲ್ಲಂತೂ ಮಧ್ಯಮವರ್ಗಕ್ಕೆ ಇಳಿಯುವ ಮೂಲಕ ನಗರಪ್ರದೇಶದ ಬಡತನ ನಗರಗಳಲ್ಲಿರುವ ದಿನಗೂಲಿಗಳು, ಸಣ್ಣವ್ಯಾಪಾರಸ್ಥರು, ಎದುರಿಸುತ್ತಿರುವುದು ಸಮೀಕ್ಷೆಯ ದತ್ತಾಂಶ ಸೂಚಿಸುತ್ತದೆ.

ಹಾಗಾಗಿ, ಕರ್ನಾಟಕ ಸರ್ಕಾರ 2022-23ರ ಆಯವ್ಯಯದಲ್ಲಿ ಬಿಎಂಟಿಸಿಗೆ, ಬಸ್ ಟಿಕೆಟ್ ದರಗಳನ್ನು ಕಡಿಮೆಗೊಳಿಸಲು ಹಾಗೂ ಮಹಿಳೆಯರಿಗೆ ಬಸ್ ಪ್ರಯಾಣವನ್ನು ಉಚಿತವಾಗಿ ಲಭ್ಯಗೊಳಿಸಲು ಹಣವನ್ನು ಹಂಚಿಕೆ ಮಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *