ಬೆಂಗಳೂರು: ಆಗಸ್ಟ್ 1ರಿಂದ 8ರ ನಡುವೆ ಬೆಂಗಳೂರಿನಲ್ಲಿ ಸಾಮಾನ್ಯವಾಗಿ 28 ಮಿಲಿ ಮೀಟರ್ ವಾಡಿಕೆ ಮಳೆಯಾಗುತ್ತದೆ ಆದರೆ ಈ ಬಾರಿ ದಾಖಲೆಯ 143 ಮಿಲಿ ಮೀಟರ್ ಮಳೆಯಾಗಿದೆ. ಅಂದರೆ ವಾಡಿಕೆ ಮಳೆಗಿಂದ ಶೇಕಡಾ 410ರಷ್ಟು ಹೆಚ್ಚು ಮಳೆ ಬಿದ್ದಿದೆ ಎಂದು ವರದಿಯಾಗಿದೆ.
ಭಾರಿ ಮಳೆಯಿಂದ ಬೆಂಗಳೂರಿನ ಹಲವು ಬಡಾವಣೆಗಳು ಜಲಾವೃತವಾಗಿವೆ. ಕರ್ನಾಟಕದ ಹಲವೆಡೆ ನಿರಂತರ ಮಳೆಯಾಗುತ್ತಿರುವುದು ಜನರ ಸಂಕಷ್ಟವನ್ನು ಹೆಚ್ಚಿಸಿದೆ. ರಾಜ್ಯಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ರಾಜ್ಯದ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಜಲಾಶಯಗಳು ಕೂಡ ತುಂಬಿದ್ದು, ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗಿದೆ.
ಕಳೆದ ಎರಡು ದಶಕಗಳಲ್ಲಿ ಬೆಂಗಳೂರು ನಗರದಲ್ಲಿ ಯೋಜಿತವಲ್ಲದ ಮತ್ತು ಕ್ಷಿಪ್ರ ವಿಸ್ತರಣೆಯಿಂದಾಗಿ ಹೆಚ್ಚಿನ ಕೆರೆಗಳು ಮತ್ತು ರಾಜಕಾಲುವೆಗಳು ಅತಿಕ್ರಮಗೊಂಡಿವೆ. ಮಳೆ ನೀರು ತನ್ನ ಸ್ವಾಭಾವಿಕ ಮಾರ್ಗವನ್ನು ಕಂಡುಕೊಳ್ಳಲು ಸಾಧ್ಯವಾಗದೆ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನುಗ್ಗುವುದರಿಂದ ಪ್ರತಿ ಬಾರಿ ಮಳೆಯಾದಾಗಲೂ ಬೆಂಗಳೂರಿನ ಒಂದಿಲ್ಲೊಂದು ಸಮಸ್ಯೆಗಳು ಅನಾವರಣವಾಗುತ್ತದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, “ಮಳೆಗಾಲದಲ್ಲಿ ಎದುರಾಗುವ ಸಮಸ್ಯೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದಾಗಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಕಳೆದ ಬಾರಿ ಮಳೆಯಿಂದ ಆದ ಅನಾಹುತ ಮರುಕಳಿಸದಂತೆ ನಿಗಾ ವಹಿಸಲಾಗುತ್ತಿದೆ. ತ್ಯಾಜ್ಯ ವಸ್ತುಗಳಿಂದ ಚರಂಡಿ ಮುಚ್ಚಿಹೋಗಿರುವ ಕಾರಣ ಪ್ರಮುಖ ರಸ್ತೆಗಳು ಮತ್ತು ಹೊರ ವರ್ತುಲ ರಸ್ತೆಯಲ್ಲಿರುವ ಬಹುತೇಕ ಎಲ್ಲಾ ಚರಂಡಿಗಳನ್ನು ತೆರವುಗೊಳಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.
“ನೀರಿನ ಪ್ರವಾಹವನ್ನು 100 ಮಿಲಿ ಮೀಟರ್ ಮಳೆಗೆ ಹೋಲಿಕೆ ಮಾಡಿಗಾಗ ಈ ಬಾರಿ ಮಳೆಯಿಂದ ತೊಂದರೆಗೊಳಗಾದವರ ಸಂಖ್ಯೆ ತೀರಾ ಕಡಿಮೆ. ನಾವು ದ್ವಿತೀಯ ಮತ್ತು ಪ್ರಾಥಮಿಕ ಚರಂಡಿಗಳನ್ನು ಸಾಕಷ್ಟು ಸ್ವಚ್ಛಗೊಳಿಸಿದ್ದೇವೆ ಮತ್ತು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಪ್ರವಾಹ ಸಮಸ್ಯೆ ಕಡಿಮೆಯಾಗಿದೆ” ಹೇಳಿದರು.
ಕರ್ನಾಟಕ ರಾಜ್ಯದ ಅಂಕಿಅಂಶಗಳ ಪ್ರಕಾರ, ರಾಜ್ಯದ ಅಂದಾಜು 70 ಮಿಲಿಯನ್ ಜನಸಂಖ್ಯೆಯ ಕಾಲು ಭಾಗದಷ್ಟು ಜನರು ನೆಲೆಸಿರುವ ಬೆಂಗಳೂರಿನಲ್ಲಿ ಜೂನ್ 1 ರಿಂದ ಆಗಸ್ಟ್ 8 ರ ನಡುವೆ 441 ಮಿಮೀ ಮಳೆಯಾಗಿದೆ, ಇದು ಸಾಮಾನ್ಯ ಮಟ್ಟವಾದ 194 ಮಿಮೀಗಿಂತ 127% ಕ್ಕಿಂತ ಹೆಚ್ಚು ಎಂದು ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದಿಂದ ವರದಿಯಾಗಿದೆ.
14 ಪ್ರವಾಹ ಪೀಡಿತ ಜಿಲ್ಲೆ- ಪ್ರವಾಹ, ಭೂಕುಸಿತದಿಂದ 73 ಮಂದಿ ಸಾವು
ರಾಜ್ಯದಲ್ಲಿ ಪ್ರವಾಹ, ಮಳೆ ಸಂಬಂಧಿತ ಅನಾಹುತಗಳಿಂದ ಜೂನ್ 1 ರಿಂದ ಇಲ್ಲಿಯವರೆಗೆ 73 ಮಂದಿ ಸಾವನ್ನಪ್ಪಿದ್ದಾರೆ. 7,386 ಜನರನ್ನು 75 ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿಕೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ 14 ಜಿಲ್ಲೆಗಳ 161 ಗ್ರಾಮಗಳು ಪ್ರವಾಹ ಭಾದಿತವಾಗಿವೆ. 21,727 ಜನರು ಪ್ರವಾಹದ ಹೊಡೆತಕ್ಕೆ ಸಿಲುಕಿದ್ದಾರೆ. ಗುಡುಗಿನಿಂದ 15 ಮಂದಿ ಸಾವನ್ನಪ್ಪಿದ್ದು, ಮರ ಬಿದ್ದು ಐವರು, ಮನೆ ಕುಸಿತದಿಂದ 19 ಮಂದಿ ಸಾವನ್ನಪ್ಪಿದ್ದಾರೆ. 24 ಮಂದಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. 9 ಮಂದಿ ಭೂ ಕುಸಿತ, ಹಾಗೂ ಒಬ್ಬರು ವಿದ್ಯುತ್ ಅವಘಡದಿಂದ ಮೃತಪಟ್ಟಿರುವುದಾಗಿ ತಿಳಿಸಿದರು.
ʻʻ ಮಳೆಯಿಂದಾಗಿ 500 ಕ್ಕೂ ಹೆಚ್ಚು ಪ್ರಾಣಿಗಳು ಸಾವನ್ನಪ್ಪಿವೆ. ಜೂನ್ 1 ರಿಂದ 1.53 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ಹೆಚ್ಚಿನ ಪ್ರದೇಶಗಳು ಮೌಲ್ಯಮಾಪನ ಮಾಡಲಾಗುತ್ತಿದೆ. ಬೆಳೆ ಹಾನಿಯಾದ ಜಮೀನುಗಳ ರೈತರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಈ ವರ್ಷ ಮಳೆಯಿಂದಾಗಿ, 11,768 ಕಿಲೋ ಮೀಟರ್ ರಸ್ತೆ, 1,152 ಸೇತುವೆಗಳು, 122 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 2,249 ಅಂಗನವಾಡಿ ಕೇಂದ್ರಗಳು ಹಾಗೂ 95 ನೀರಾವರಿ ಕೊಳಗಳು ಹಾನಿಯಾಗಿವೆ. ತೀವ್ರಗತಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲೆಗಳಲ್ಲಿ 857 ಕೋಟಿ ಲಭ್ಯವಿದೆ ಎಂದು ತಿಳಿಸಿದರು.
ಪ್ರವಾಹ ಸಂಬಂಧಿತ ಅನಾಹುತಗಳಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಇದರಲ್ಲಿ 4 ಲಕ್ಷ ರೂಪಾಯಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯನ್ನು ಸಹ ಒಳಗೊಂಡಿದೆ ಎಂದು ಮಾಹಿತಿ ನೀಡಿದರು.
ಭಾರೀ ಮಳೆಯಿಂದ ಮನೆ ಕಳೆದುಕೊಂಡು ಕಾಳಜಿ ಕೇಂದ್ರ ಮತ್ತು ನೆಂಟರಿಷ್ಟರ ಮನೆಯಲ್ಲಿರುವ ಸಂತ್ರಸ್ಥರಿಗೆ ಅಗತ್ಯ ದಿನ ಬಳಕೆ ವಸ್ತುಗಳನ್ನೂಳಗೊಂಡ ಕಿಟ್ ಗಳನ್ನು ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.