ಬಳ್ಳಾರಿ | ದಲಿತ ಎಂಬ ಕಾರಣಕ್ಕೆ ಹೋಟೆಲ್‌ನಲ್ಲಿ ಊಟ ನಿರಾಕರಣೆ

ಬಳ್ಳಾರಿ: ದಲಿತ ಯುವಕನಿಗೆ ಸ್ಥಳೀಯ ಹೋಟೆಲ್‌ನಲ್ಲಿ ಆಹಾರ ನಿರಾಕರಿಸಿ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾಗಿದೆ. ಘಟನೆಯ ವಿಡಿಯೊ ವೈರಲ್ ಆಗಿದ್ದು,       ಅದರಲ್ಲಿ ಮಹಿಳೆಯೊಬ್ಬರು ‘ಹೋಟೆಲ್ ಮುಚ್ಚುತ್ತೇನೆ, ಆದರೆ ನಿಮಗೆ ಊಟ ನೀಡುವುದಿಲ್ಲ’ ಎಂದು ಹೇಳುತ್ತಿರುವುದು ದಾಖಲಾಗಿದ್ದು, ತೀವ್ರ ಆಕ್ರೋಶ ಉಂಟು ಮಾಡಿದೆ.

ಘಟನೆಯು ಬಳ್ಳಾರಿ ಜಿಲ್ಲೆಯಲ್ಲಿ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದದಲ್ಲಿ ನಡೆದಿದ್ದು, 27ರ ವರ್ಷದ ದಲಿತ ಯುವಕನಿಗೆ ಸ್ಥಳೀಯ ಹೋಟೆಲ್‌ನಲ್ಲಿ ಆಹಾರ ನಿರಾಕರಿಸಲಾಗಿದೆ. ದಲಿತ ಎಂಬ ಕಾರಣಕ್ಕೆ ‘ಹೋಟೆಲ್ ಮುಚ್ಚುತ್ತೇನೆ, ಆದರೆ ನಿಮಗೆ ಊಟ ನೀಡುವುದಿಲ್ಲ’ ಎಂದು ಯುವಕನಿಗೆ ಸೇವೆಯನ್ನು ನಿರಾಕರಿಸಿರುವುದು ವೈರಲ್ ವಿಡಿಯೊದಲ್ಲಿ ದಾಖಲಾಗಿದೆ. ಈ ತಾರತಮ್ಯದ ವಿರುದ್ಧ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದು ಮಹಿಳೆಯನ್ನು ತರಾಟೆಗೆ ಪಡೆದಿದ್ದಾರೆ. ಈ ವೇಳೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೊ | ಪ್ರಮುಖ ಆರೋಪಿ ಈಮನಿ ನವೀನ್ ಬಂಧನ

ಘಟನೆ ಬಗ್ಗೆ ಮಾತನಾಡಿರುವ ಕುರುಗೋಡು ಪೊಲೀಸ್ ಇನ್ಸ್‌ಪೆಕ್ಟರ್ ಎಂ ಸುಪ್ರೀತ್, ವಿಡಿಯೋ ವೈರಲ್ ಆದ ನಂತರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ವಿಡಿಯೋ ಹಳೆಯದಾಗಿದ್ದು, ಆದರೂ ಹೋಟೆಲ್ ಮಾಲೀಕ ಗುರುಬಸವಯ್ಯ ಮತ್ತು ಅವರ ಪತ್ನಿ ನಾಗವೇಣಿ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿದ್ದಾರೆ.

“ನಾವು ಸ್ವಯಂಪ್ರೇರಣೆಯಿಂದ ಘಟನೆಯನ್ನು ಪರಿಗಣಿಸಿದ್ದು, ಮಹೇಶ್ ಎಂದು ಗುರುತಿಸಲಾದ ಸಂತ್ರಸ್ತರನ್ನು ಕರೆಸಿ ಕೊಂಡು ಅವರಿಂದ ದೂರನ್ನು ಸ್ವೀಕರಿಸಿದ್ದೇವೆ. ಆರೋಪಿ ದಂಪತಿಯನ್ನು ಬಂಧಿಸಿದ್ದು, ಅವರ ವಿರುದ್ಧ ಎಸ್‌ಸಿ/ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇವೆ. ಅವರನ್ನು ಶುಕ್ರವಾರ ಕುರುಗೋಡು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಜೆಎಂಎಫ್‌ಸಿ) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದು ಎಂ. ಸುಪ್ರೀತ್ ಹೇಳಿದ್ದಾರೆ.

ಗ್ರಾಮದಲ್ಲಿ ಗುರುವಾರ ತಹಶೀಲ್ದಾರ್ ರಾಘವೇಂದ್ರ ಹಾಗೂ ಅಧಿಕಾರಿಗಳು ಶಾಂತಿ ಸಭೆ ನಡೆಸಿದ್ದಾರೆ. ಯಾವುದೇ ಸಲೂನ್, ಹೋಟೆಲ್ ಅಥವಾ ಪ್ರಾವಿಷನ್ ಶಾಪ್ ಮಾಲೀಕರು ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದಾರೆ ಎಂದು ಕಂಡುಬಂದರೆ ಅವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಅದಾಗ್ಯೂ, ಘಟನೆಯು ವ್ಯಾಪಕ ಖಂಡನೆಯನ್ನು ಹುಟ್ಟುಹಾಕಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ ಇರುವ ಬಗ್ಗೆ ತೀವ್ರ ಕಳವಳ ಹುಟ್ಟುಹಾಕಿದೆ.

ಇದನ್ನೂ ಓದಿ: ಟ್ರಕ್ ಚಾಲಕರ ಮುಷ್ಕರ | ನೆರೆ ರಾಜ್ಯಕ್ಕೆ ಸಾಗಾಣೆಯಿಲ್ಲದೆ ರಾಜ್ಯದಲ್ಲಿ ತರಕಾರಿ ಬೆಲೆ ಕುಸಿತ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೇರಮರಡಿ ಗ್ರಾಮದ ಗೊಲ್ಲರ ಬೀದಿಯಲ್ಲಿ ನಡೆದ ಮತ್ತೊಂದು ಪ್ರಕರಣದ ಬೆನ್ನಲ್ಲೇ ಈ ಘಟನೆ ನಡೆದಿದೆ. ಜಾತಿಯ ಕಾರಣಕ್ಕೆ ಗೊಲ್ಲರ ಬೀದಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಎಂಬ ದಲಿತ ಯುವಕನ ಮೇಲೆ ದೈಹಿಕ ಹಲ್ಲೆ ನಡೆಸಲಾಗಿತ್ತು. ಹಲ್ಲೆ ಖಂಡಿಸಿ ದಲಿತ ಸಂಘಟನೆಗಳು ಗ್ರಾಮಕ್ಕೆ ನುಗ್ಗಿ ಪ್ರತಿಭಟನೆ ನಡೆಸಿದ್ದವು.

ಮಾರುತಿ ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಹಲ್ಲೆ ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಂತರ, ಜಿಲ್ಲಾಡಳಿತವು ಗೊಲ್ಲ ಸಮುದಾಯವನ್ನು ಜನವರಿ 9 ರಂದು ದೇವಾಲಯದ ಬಾಗಿಲು ತೆರೆಯಲು ಮತ್ತು ದಲಿತರಿಗೆ ದೇವಾಲಯದ ಒಳಗೆ ಬಿಡುವಂತೆ ಒತ್ತಾಯಿಸಿದೆ.

ಜನವರಿ 10 ರಂದು ಮೈಸೂರು ಸಮೀಪದ ಕೆಂಚಲಗೋಡು ಗ್ರಾಮದಲ್ಲಿ ದಲಿತರನ್ನು ಗ್ರಾಮದ ಲಕ್ಷ್ಮೀನಾರಾಯಣ ದೇವಸ್ಥಾನಕ್ಕೆ ಪ್ರವೇಶಿಸದಂತೆ ಮೇಲ್ವರ್ಗದ ಜನರು ತಡೆದಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದು ಕಂದಾಯ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಧಾವಿಸಿ ಸಂತ್ರಸ್ತರಿಂದ ಹೇಳಿಕೆ ಪಡೆದುಕೊಂಡಿದ್ದೇವೆ ಎಂದು ಬಳ್ಳಾರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಜೆ.ಸತೀಶ್ ತಿಳಿಸಿದ್ದಾರೆ.

ವಿಡಿಯೊ ನೋಡಿ: ಪ್ರಧಾನಿ ಮೋದಿಯವರ ‘ರಾಮಜಪ’ ರಾಜಕಾರಣ ಭಾರತವನ್ನು ಎಲ್ಲಿಗೆ ಕೊಂಡೊಯ್ಯುತ್ತಿದೆ? Janashakthi Media

Donate Janashakthi Media

Leave a Reply

Your email address will not be published. Required fields are marked *