ಈ ಚಿತ್ರಗಳು ಇಡೀಜಗತ್ತನ್ನು ಆಘಾತಗೊಳಿಸುತ್ತಿವೆ. ಒಂದು ಆಧುನಿಕ ನಾಗರೀಕ ಸಮಾಜವು ದೇಶದ ಪ್ರಜೆಗಳನ್ನು ಹೀಗೆ ಹಿಂಸ್ರಪಶುಗಳಾಗಿ ನೋಡಬಹುದೆ? ಹಿಂದೆ ಸರ್ಕಸ್ಸಿನಲ್ಲಿ ಪ್ರಾಣಿಗಳನ್ನು ಬಂಧನದಲ್ಲಿಡುತ್ತಾರೆಎಂದು ಪ್ರಾಣಿದಯಾ ಸಂಘಗಳು ವಾದಿಸಿದ್ದರಿಂದ ಸರ್ಕಸ್ ಕಂಪನಿಗಳು ಅವನ್ನು ಕೈಬಿಟ್ಟವು. ಕೆಲವು ನಿಂತೇ ಹೋದವು. ಆ ಪ್ರಾಣಿಗಳಿಗೂ ಮುಳ್ಳಿನ ನೆಲವನ್ನು ಸಿದ್ಧಮಾಡಲಾಗಿರಲಿಲ್ಲ. ಈಗ ಪ್ರಭುತ್ವವು ರೈತರ ಮೇಲೆ ಇಂಥ ಪ್ರಯೋಗಗಳನ್ನು ಮಾಡುತ್ತಿವೆ. ನನಗೆ ಆತಂಕವೂ ಅನ್ನಿಸಿತು. ಪ್ರಭುತ್ವದ ಉದ್ದೇಶಗಳು ಏನಿವೆ? ಇಡೀ ಪ್ರದೇಶವನ್ನು ಬಯಲು ಸೆರೆಮನೆ ಮಾಡುವುದೇ ಅಥವಾ ಇನ್ನೂ ಕರಾಳವಾದ ಯೋಜನೆ ಇದೆಯೆ? ಇಂಥ ಪದಗಳನ್ನು ಯಾವ ಕಾರಣಕ್ಕೂ ಬಳಸಕೂಡದು ಎಂದು ಸರಕಾರವು ಆಜ್ಞೆ ಮಾಡಿದೆ. ಆದರೆ ಅದೇಕೋ ಹಿಟ್ಲರ್ ಕಾಲದ ಚಿತ್ರಗಳು ಮನಸ್ಸಿಗೆ ಬರುತ್ತಿವೆ.
– ಪ್ರೊ. ರಾಜೇಂದ್ರಚೆನ್ನಿ
ಮೊನ್ನೆ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಒಂದು ಚಿತ್ರವನ್ನು ನೋಡಿ ವಿಚಿತ್ರವಾದ ಭಾವನೆಗಳು ಉಂಟಾದವು. ಚಿತ್ರದಲ್ಲಿ ದೆಹಲಿ ಪೋಲೀಸರ ನಿರ್ದೇಶನದ ಮೇರೆಗೆ ಒಬ್ಬ ಕೆಲಸದವನು ನೆಲದ ಮೇಲೆ ಬಗ್ಗಿ ಕುಳಿತು ಥೇಟು ರೈತನಂತೆ ಭತ್ತದ ಸಸಿ ನೆಡುತ್ತಿರುವಂತೆ ಮೊಳೆಗಳನ್ನು ಹಸಿ ಸಿಮೆಂಟ್ನಲ್ಲಿ ನೆಡುತ್ತಿದ್ದಾನೆ. ಇದುದೆಹಲಿ ಪೋಲೀಸರು ರೈತರು ಓಡಾಡದಂತೆ ಮಾಡಲು ಕಂಡು ಹಿಡಿದಿರುವ ಅಮಾನುಷ ಮತ್ತು ವಿಕೃತವಾದ ವಿಧಾನ. ಇನ್ನೊಂದು ಚಿತ್ರದಲ್ಲಿ ಸುತ್ತಲೂತಂತಿಬೇಲಿಯನ್ನು ಹಾಕುತ್ತಿದ್ದಾರೆ. ಇನ್ನೊಂದು ಕಡೆಗೆ ಬಸ್ಸುಗಳನ್ನು ತಡೆಗೋಡೆಯಾಗಿ ನಿಲ್ಲಿಸಿದ್ದಾರೆ. ಈ ಚಿತ್ರಗಳು ಇಡೀಜಗತ್ತನ್ನು ಆಘಾತಗೊಳಿಸುತ್ತಿವೆ. ಒಂದು ಆಧುನಿಕ ನಾಗರೀಕ ಸಮಾಜವು ದೇಶದ ಪ್ರಜೆಗಳನ್ನು ಹೀಗೆ ಹಿಂಸ್ರಪಶುಗಳಾಗಿ ನೋಡಬಹುದೆ? ಹಿಂದೆ ಸರ್ಕಸ್ಸಿನಲ್ಲಿ ಪ್ರಾಣಿಗಳನ್ನು ಬಂಧನದಲ್ಲಿಡುತ್ತಾರೆ ಎಂದು ಪ್ರಾಣಿದಯಾ ಸಂಘಗಳು ವಾದಿಸಿದ್ದರಿಂದ ಸರ್ಕಸ್ ಕಂಪನಿಗಳು ಅವನ್ನುಕೈಬಿಟ್ಟವು. ಕೆಲವು ನಿಂತೇ ಹೋದವು. ಆ ಪ್ರಾಣಿಗಳಿಗೂ ಮುಳ್ಳಿನ ನೆಲವನ್ನು ಸಿದ್ಧಮಾಡಲಾಗಿರಲಿಲ್ಲ. ಈಗ ಪ್ರಭುತ್ವವು ರೈತರ ಮೇಲೆ ಇಂಥ ಪ್ರಯೋಗಗಳನ್ನು ಮಾಡುತ್ತಿವೆ. ನನಗೆ ಆತಂಕವೂ ಅನ್ನಿಸಿತು. ಪ್ರಭುತ್ವದ ಉದ್ದೇಶಗಳು ಏನಿವೆ? ಇಡೀ ಪ್ರದೇಶವನ್ನು ಬಯಲು ಸೆರೆಮನೆ ಮಾಡುವುದೇ ಅಥವಾ ಇನ್ನೂ ಕರಾಳವಾದ ಯೋಜನೆ ಇದೆಯೆ? ಇಂಥ ಪದಗಳನ್ನುಯಾವಕಾರಣಕ್ಕೂ ಬಳಸಕೂಡದು ಎಂದು ಸರಕಾರವು ಆಜ್ಞೆ ಮಾಡಿದೆ. ಆದರೆ ಅದೇಕೋ ಹಿಟ್ಲರ್ ಕಾಲದ ಚಿತ್ರಗಳು ಮನಸ್ಸಿಗೆ ಬರುತ್ತಿವೆ. ಆ ಕಾಲದ ಯಾತನಾ ಶಿಬಿರಗಳ ಬಗ್ಗೆ ಅಧ್ಯಯನ ಮಾಡಿದ್ದರಿಂದ ಆ ಚಿತ್ರಗಳು ಮತ್ತೆ ಮತ್ತೆ ನೆನಪಾಗುತ್ತಲೇ ಇರುತ್ತವೆ. ದುಷ್ಟರಾಜಕೀಯದಲ್ಲಿ ಯಾವುದೂ ಅಸಾಧ್ಯವಲ್ಲ.
ಒಂದು ಮಾತಂತೂ ನಿಜ. ರೈತರ ಒಗ್ಗಟ್ಟು ಹೋರಾಟದ ಛಲ ಬೆಳೆಯುತ್ತಲೇ ಇವೆ. ಇದನ್ನು ನಿಭಾಯಿಸುವ ಸಾಮರ್ಥ್ಯವು ಪ್ರಭುತ್ವಕ್ಕೆ ಇಲ್ಲ. ಸೈನಿಕರು, ಪೋಲೀಸರ ಮೇಲೆ ಸರಕಾರಕ್ಕೆಇರುವ ನಂಬಿಕೆ ಪ್ರಜೆಗಳ ಮೇಲೆ ಇಲ್ಲ. ವಿರೋಧಾಭಾಸವೆಂದರೆ ಅತ್ಯಂತ ಜನಪ್ರಿಯ ನಾಯಕರೆಂದು ಬಿಂಬಿಸಲಾಗಿರುವವರಿಗೆ ರೈತರನ್ನು ಮಾತನಾಡಿಸಲು ಆಸಕ್ತಿಯೂ ಇಲ್ಲ, ಧೈರ್ಯವೂ ಇಲ್ಲ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂಥ ವಿದ್ಯಮಾನವು ನಡೆದಿಲ್ಲ. ನೆಹರೂ, ಶಾಸ್ರ್ತೀ, ಇಂದಿರಾಗಾಂಧಿ ಇವರು ಜನರಿಂದ ದೂರವಿದ್ದಿರಲಿಲ್ಲ. ಇನ್ನು ವಲ್ಲಭ್ಭಾಯಿ ಪಟೇಲರು, ಮೌಲಾನಾಅಬುಲ್ಕಲಮ್ರಂಥ ಮಹಾನ್ ನಾಯಕರು ಜನರ ಮಧ್ಯೆಯೇ ಬದುಕಿದವರು. ಗಾಂಧಿಯವರಿಗಂತೂ ವೈಯಕ್ತಿಕ ಜೀವನವೇ ಇರಲಿಲ್ಲವೆನ್ನಿಸುವಷ್ಟು ಸಾರ್ವಜನಿಕ ವ್ಯಕ್ತಿಯಾಗಿದ್ದರು. ಕೆಲವು ಚಿಂತಕರ ಪ್ರಕಾರ ಭಾರತೀಯ ರಾಜಕೀಯದ ಸ್ವರೂಪವು ಬದಲಾದದ್ದು ಹತ್ಯೆಯಾದ ಗಾಂಧಿಯವರನ್ನ ಸೈನ್ಯದ ವಾಹನದ ಮೇಲೆ ಸೈನ್ಯದ ಜೊತೆಗೆ ಚಿತಾಗಾರಕ್ಕೆ ಕರೆದುಕೊಂಡು ಹೋಗಿದ್ದರಿಂದ. ನೆಹರು ಪ್ರಧಾನ ಮಂತ್ರಿಗಳಾದ ಮೇಲೆ ಅವರ ನಿವಾಸದ ವೈಭವವನ್ನು ನೋಡಿ ಕುಪಿತರಾದ ಜೆ.ಸಿ. ಕುಮಾರಪ್ಪನವರು ಎತ್ತಿನಗಾಡಿಯಲ್ಲಿ ಅವರನ್ನು ಕಾಣಲು ಹೊರಟರು. ಇಷ್ಟಾದರೂ ನೆಹರು ಜನರಿಂದ ದೂರವಾಗಲಿಲ್ಲ. ಸಂಕಷ್ಟದ ಸಂದರ್ಭಗಳಲ್ಲಿ ನಮ್ಮ ರಾಜಕೀಯನಾಯಕರು ಜನರ ಮಧ್ಯೆ ಎಗ್ಗಿಲ್ಲದೆ ಪ್ರವೇಶ ಮಾಡುತ್ತಿದ್ದರು.
ಅನ್ನದಾತರ ಹೋರಾಟಕ್ಕೆ ಹೆಚ್ಚಿದ ಸೆಲೆಬ್ರಿಟಿಗಳ ಬೆಂಬಲ
ರೈತರೊಂದಿಗೆ ಮಾತನಾಡುವುದು ತನ್ನ ವರ್ಚಸ್ಸಿಗೆ ಕಮ್ಮಿಎಂದು ಸರಕಾರವು ಭಾವಿಸಿದಂತಿದೆ. ನಾನು ನಿಗದಿತ ಸಭೆಗಳಲ್ಲಿ ತೂಕವಿಲ್ಲದ ಮಂತ್ರಿಗಳು ರೈತರ ಜೊತೆಗೆ ಮಾತನಾಡುವುದರ ಬಗ್ಗೆ ಹೇಳುತ್ತಿಲ್ಲ. ನನ್ನ ದೇಶದ ನನ್ನ ಜನ, ನಮ್ಮ ರೈತರು ಎನ್ನುವ ಪ್ರೀತಿಯೇ ಇಲ್ಲದ ದುರಹಂಕಾರಿ ಸರಕಾರದ ಬಗ್ಗೆ ಹೇಳುತ್ತಿದ್ದೇನೆ. ನಮ್ಮ ರಾಜಕೀಯ ವರ್ಗವು ತಾನು ಜನರನ್ನು “ಆಳುತ್ತೇನೆ” ಎನ್ನುವ ದುಷ್ಟ ನಂಬಿಕೆಯನ್ನು ಬೆಳೆಸಿಕೊಂಡು ಬಿಟ್ಟಿದೆ. ಆಧುನಿಕ ಹಾಗೂ ನಾಗರೀಕ ದೇಶಗಳಲ್ಲಿ ಇಂಥ ವಿದ್ಯಮಾನವು ಕಾಣುವುದಿಲ್ಲ. ಬರಾಕ್ ಓಬಾಮಾ ಸರದಿ ಸಾಲಿನಲ್ಲಿ ನಿಂತು ತನ್ನ ಜೋಬಿನಿಂದ ದುಡ್ಡುಕೊಟ್ಟು ಕಾಫಿ ಕೊಳ್ಳುವ ಫೋಟೋಗಳನ್ನು ನೋಡಿದ್ದೇವೆ. ನ್ಯೂಝಿಲೆಂಡ್ನ ಮಹಿಳಾ ಪ್ರಧಾನಿ ಹೋಟೆಲ್ನಲ್ಲಿ ಊಟ ಮಾಡಲು ಜಾಗ ಸಿಗದಿದ್ದಾಗ ಅಲ್ಲಿಂದ ಒಂದು ಮಾತೂ ಇಲ್ಲದೆ ಹೊರಟು ಹೋಗಿದ್ದರ ಬಗ್ಗೆ ವರದಿಗಳನ್ನು ಓದಿದ್ದೇವೆ. ಅನೇಕ ಪ್ರಜಾಪ್ರಭುತ್ವವಾದಿ ದೇಶಗಳಲ್ಲಿ ಪ್ರಧಾನ ಮಂತ್ರಿಗಳು ಸಾರ್ವಜನಿಕ ಬಸ್ನಲ್ಲಿ ಕೆಲವೊಮ್ಮೆ ಸೈಕಲ್ನಲ್ಲಿಕಚೇರಿಗೆ ಹೋಗಿ ಬರುತ್ತಾರೆ.
ರೈತ ಪ್ರತಿಭಟನೆಗಳ ಮೇಲೆ ದಿಲ್ಲಿ ಪೋಲೀಸ್ ರ ಅಮಾನವೀಯ ಮುತ್ತಿಗೆ
ಆದರೆ ನಮ್ಮ ದೇಶದಲ್ಲಿ ಮೂಗು ಒರೆಸಿಕೊಳ್ಳಲೂ ಬರದ ಒಬ್ಬ ಎಂ.ಎಲ್.ಎ. ಚಕ್ರವರ್ತಿಯಂತೆ ನಟಿಸುತ್ತಾನೆ. ಇಂಥ ಹುಟ್ಟಾ ಮೂರ್ಖರನ್ನು ಮತ್ತು ನಕಲಿ ನಾಯಕರನ್ನು ನೋಡಿ ಚೆನ್ನಾಗಿ ನಕ್ಕು ಬಿಡಬಹುದು. ಆದರೆ ಈ ಧೋರಣೆ ಈಗ ಯಾವ ಅಪಾಯದ ಹಂತಕ್ಕೆ ತಲುಪಿದೆಯೆಂದರೆ ಅಧಿಕಾರ ಮತ್ತು ಪ್ರಜೆಗಳ ನಡುವೆ ಕಂದಕಗಳಿವೆ. ಶತ್ರು ರಾಷ್ಟ್ರಗಳ ಗಡಿಗಳ ಸುತ್ತ ತಂತಿ ಬೇಲಿಗಳನ್ನು ಹಾಕುವಂತೆ ರೈತರ ಪ್ರತಿಭಟನೆಯ ಸುತ್ತ ಹಾಕಲಾಗಿದೆ. ಜನವರಿ 26ರ ಗಲಭೆಗಳು ಅಕ್ಷಮ್ಯವೆನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೆ ಆಗ ರೈತರು ಕೇಳಿದ “ಯಾಕೆ, ದೆಹಲಿ ನಮ್ಮದೂ ಅಲ್ಲವೆ?” ಎನ್ನುವ ಪ್ರಶ್ನೆಗೆ ಉತ್ತರವೇನು? ರಾಜಧಾನಿಯೆಂದರೆ ಇಡೀ ದೇಶದ ಒಂದು ಭಾವನಾತ್ಮಕ ಸಂಕೇತವೂ ಹೌದು. ಪ್ರಜೆಗಳು ಬಂದರೆ ದೆಹಲಿಯು ಸಂಭ್ರಮಿಸಬೇಕು. ದೆಹಲಿ ನಾಗರೀಕರು ಸಂಭ್ರಮಿಸಿದರು. ಆದರೆ ಗಲಭೆಗಳನ್ನು ಹುಟ್ಟು ಹಾಕಿದ ಸರಕಾರವು ಶತ್ರುಗಳು ನುಗ್ಗಿ ಬಿಟ್ಟಿದ್ದಾರೆನ್ನುವಂತೆ ಪ್ರತಿಕ್ರಿಯಿಸಿತು. ಇತಿಹಾಸದಲ್ಲಿ“ದೆಹಲಿ ದೂರ ಅಸ್ತ” (ದೆಹಲಿ ದೂರವಿದೆ) ಎನ್ನುವ ಮಾತು ಕೇಳಿ ಬಂದಿತ್ತು. ಈಗ ಮತ್ತೆ ವಿಭಿನ್ನವಾದ ಅರ್ಥದೊಂದಿಗೆ ಅದೇ ಮಾತು ಕೇಳಿ ಬಂದಿದೆ.
ಇನ್ನೂಆಶ್ಚರ್ಯದ ಸಂಗತಿಯೆಂದರೆ ರೈತರಿಗೆ ಏನು ಬೇಕಿದೆಯೆನ್ನುವುದು ರೈತರಿಗಿಂತ ನನಗೆ ಗೊತ್ತು ಎಂದು ಪ್ರಭುತ್ವವು ಹೇಳುತ್ತಿರುವುದು. ಹಾಗಿದ್ದರೆ ತಮಗೆ ಏನು ಒಳ್ಳೆಯದು ಎಂದುಗೊತ್ತಿಲ್ಲದ ರೈತರ ಮತವನ್ನುಇನ್ನೆಂದೂ ಕೇಳುವುದಿಲ್ಲವೆಂದು ಪ್ರಭುತ್ವವು ಅಥವಾ ಆಡಳಿತ ಪಕ್ಷವು ಸಾರ್ವಜನಿಕವಾಗಿ ಹೇಳಲು ಸಿದ್ಧವಿದೆಯೆ? ಸಂವಾದ, ಚರ್ಚೆ ಎಂದರೆ ವಿರೋಧವೆಂದುಕೊಳ್ಳುವ ಪ್ರಭುತ್ವವು ಖಂಡಿತವಾಗಿ ಸರ್ವಾಧಿಕಾರಿ ರಾಜಕೀಯದ ಕಡೆಗೆ ಹೊರಟಿದೆ. ಇದು ಖಂಡಿತವಾಗಿ ಅಪಾಯದ ಲಕ್ಷಣವಾಗಿದೆ. ಅಷ್ಟು ಮಾತ್ರವಲ್ಲ ಭಾರತದ ಪ್ರಜಾಪ್ರಭುತ್ವವನ್ನು ಟೀಕಿಸಿದರೂ ಅದರ ಬಗ್ಗೆ ಕುತೂಹಲ, ಮೆಚ್ಚುಗೆ ಇಟ್ಟುಕೊಂಡಿದ್ದ ಪಶ್ಚಿಮವು ಇಂದು ಭಾರತದ ಬಗ್ಗೆ ತೀವ್ರ ಅನುಮಾನಗಳನ್ನು ಇಟ್ಟುಕೊಂಡಿದೆ. ಒಂದು ಮುಖ್ಯಜಾಗತಿಕ ವರದಿಯ ಪ್ರಕಾರ ಜಗತ್ತಿನ Four Difficult Countries ನಲ್ಲಿ ಭಾರತವೂ ಒಂದಾಗಿದೆ. ರೈತ ಚಳುವಳಿಯು ಆಧುನಿಕ ಕಾಲದ ಅತಿದೊಡ್ಡ ಚಳುವಳಿಯಾಗಿರುವುದರಿಂದ ಇಡಿ ಜಗತ್ತು ಭಾರತದತ್ತ ನೋಡುತ್ತಿರುವುದು ಸಹಜವಾಗಿದೆ. ಜಗತ್ತು ನಮ್ಮ ಬಗ್ಗೆ ಏನು ಹೇಳಬೇಕು ಮತ್ತು ಏನು ಹೇಳಬಾರದು ಎನ್ನುವುದನ್ನುತಾನು ನಿರ್ದೇಶಿಸುತ್ತದೆ ಎಂದು ಸರಕಾರವು ಅಂದುಕೊಳ್ಳುವುದು ಮೂರ್ಖತನದ ಪರಮಾವಧಿ. ಜಗತ್ತು ಸ್ವತಂತ್ರವಾಗಿದೆ. ಅದು ಮುಕ್ತ ವಿಮರ್ಶೆಯಲ್ಲಿ ನಂಬಿಕೆ ಹೊಂದಿದೆ. ಅಲ್ಲದೆ ಜಗತ್ತು ಒಂದು ಕುಟುಂಬವೆಂದು ಪ್ರಾಮಾಣಿಕವಾಗಿ ನಂಬಿರುವ ಅನೇಕರು ರೈತರ ಚಳುವಳಿ ಬಗ್ಗೆ ಖಂಡಿತ ಮಾತನಾಡುತ್ತಾರೆ. ಇದನ್ನು ನಿಲ್ಲಿಸುವ ಮುಳ್ಳುಗಳು, ತಂತಿ ಬೇಲಿಗಳು ಇಲ್ಲವೆನ್ನುವುದು ನೆನಪಿನಲ್ಲಿರಬೇಕು.