ದಾವಣಗೆರೆ: ಕಡು ಬಡತನದಲ್ಲಿನ ಕುಟುಂಬವೊಂದು ಜೀವನ ನಡೆಸುವುದು ದುಸ್ತರವಾಗಿರುವ ಇಂದಿನ ದಿನಗಳಲ್ಲಿ ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಬೆಳೆದ ಬೆಳೆಗೆ ಪದೇ ಪದೇ ಹಾನಿಯಾಗುತ್ತಿದ್ದರೆ, ಜೀವನ ನಿರ್ವಹಣೆ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದೆ. ಹೀಗಿರುವಾಗ ಹರಿಹರ ತಾಲ್ಲೂಕು ಸಾರಥಿ ಗ್ರಾಮದ ರೈತ ಮಹಿಳೆ ಕೊಟ್ರಮ್ಮ ಎಂಬ ಮಹಿಳೆ ತನ್ನ ಬೆಳೆ ರಕ್ಷಣೆಗಾಗಿ ಏಕಾಂಗಿ ಹೋರಾಟಕ್ಕೆ ಮುಂದಾಗಿರುವ ಪ್ರಸಂಗ ನಡೆದಿದೆ.
ಗಂಡ ಮತ್ತು ಮಗ ಕೂಲಿನಾಲಿ ಮಾಡಿದರೆ, ಈಕೆ ಒಬ್ಬಳೇ ಇದ್ದ ಅರ್ಧ ಎಕರೆ ಭೂಮಿಯನ್ನು ಬಳಸಿಕೊಂಡು ಬೆಳೆ ಬೆಳೆದು ಜೀವನ ಮಾಡುತ್ತಿದ್ದಾಳೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಕೆ ಬೆಳೆದಿದ್ದ ಅಲ್ಪಸ್ಪಲ್ಪ ಬೆಳೆ ಕೂಡ ಕೈಗೆ ಎಟುಕುತ್ತಿಲ್ಲ. ಬೆಳೆ ಕೈಗೆ ಸಿಗದೆ ನಾಶವಾಗುತ್ತಿದೆ.
ಇದ್ಯಾವುದೂ ಪರಿಸರ ಕೈವಾಡವಲ್ಲ. ಬದಲಾಗಿ ಅಲ್ಲಿ, ತನ್ನ ಜಮೀನಿನ ಪಕ್ಕದಲ್ಲಿ ಮಣ್ಣು ಸಾಗಣೆ ಲಾರಿಗಳ ಧೂಳಿನಿಂದ ತನ್ನ ಬೆಳೆಗೆ ಹಾನಿ ಸಂಭವಿಸುತ್ತಿರುವುದು ಮಹಿಳೆಯ ಸಂಕಷ್ಟಕ್ಕೆ ಕಾರಣವಾಗಿದೆ. ಇದರಿಂದ ರಸ್ತೆಯಲ್ಲಿ ಸಾಗುತ್ತಿರುವ ಲಾರಿಗೆ ಅಡ್ಡಲಾಗಿ ಕುಳಿತ ಮಹಿಳೆ ಕೊಟ್ರಮ್ಮ ಧರಣಿ ನಡೆಸಲು ಮುಂದಾಗಿದ್ದಾರೆ. ಮಣ್ಣು ಧೂಳಿನಿಂದಾಗಿ ಸಾಲುಸಾಲಾಗಿ ಬರುತ್ತಿರುವ ಬೃಹದಾಕಾರದ ಲಾರಿಗಳು, ಲಾರಿಗಳನ್ನು ತಡೆದು ನಿಲ್ಲಿಸಿರುವ ಕೊಟ್ರಮ್ಮ ಲಾರಿಗಳ ಧೂಳಿನಿಂದಾಗಿ ಹಾಳಾಗಿರುವ ಬೆಳೆ ಕೈಗೆ ಸಿಗದಿರುವುದಕ್ಕೆ ಆಕ್ರೋಶಗೊಂಡಿದ್ದಾರೆ.
ಒಂದು ಬೆಳೆಗೆ 30 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದರೂ ನಷ್ಟವಾಗುತ್ತಿದೆ. ನಾಲ್ಕೈದು ಬೆಳೆ ಹೀಗೆಯೇ ನಷ್ಟವಾಗಿದೆ. ಇದರಿಂದ ರೋಸಿ ಹೋದ ಬಡ ರೈತ ಮಹಿಳೆ ಏಕಾಂಗಿಯಾಗಿ ಲಾರಿಗಳು ಚಲಿಸುವ ದಾರಿಯಲ್ಲಿ ಅಡ್ಡಲಾಗಿ ಕುಳಿತು ಪ್ರತಿಭಟನೆ ಮಾಡಿದ್ದಾರೆ.
ಇದನ್ನೂ ಓದಿ : 205 ಕೆಜಿ ಈರುಳ್ಳಿಗೆ ರೈತ ಪಡೆದದ್ದು 8.36 ರೂಪಾಯಿ!
ಅರ್ಧ ಎಕರೆಯಲ್ಲಿ ಕುಟುಂಬ ನಿರ್ವಹಣೆಯೆಂಬುದ ಕಷ್ಟವಾಗಿರುವುದರಿಂದ ನನ್ನ ಪತಿ ಚಂದ್ರಪ್ಪ, ಇಬ್ಬರು ಮಕ್ಕಳು ಕೂಲಿ ಕೆಲಸಕ್ಕೆ ಹೋಗುತ್ತಾರೆ. ನಾನು ಜಮೀನಿನಲ್ಲಿ ಬೆಳೆ ಬೆಳೆಯುತ್ತೇನೆ. ಈಗಾಗಲೆ ₹25,000 ಖರ್ಚು ಮಾಡಿದ್ದೇನೆ. ಧೂಳಿನಿಂದಾಗಿ ಬೆಳೆ ಕೈಗೆ ಸಿಗುತ್ತಿಲ್ಲ. ಒಂದು ದಿನಕ್ಕೆ 50ರಿಂದ 75 ಲೋಡ್ ಮಣ್ಣು ಸಾಗಣೆ ಮಾಡುತ್ತಿದ್ದು, 150 ಬಾರಿ ಈ ರಸ್ತೆಯಲ್ಲಿ ಭಾರಿ ಗಾತ್ರದ ಲಾರಿಗಳು ಓಡಾಡಿದರೆ ನಮ್ಮ ಬೆಳೆಯ ಗತಿ ಏನಾಗಬೇಕು ಎಂದು ಪ್ರಶ್ನಿಸಿದ್ದಾರೆ.
ಹರಿಹರ ತಾಲ್ಲೂಕಿನ ಸಾರಥಿ, ಚಿಕ್ಕ ಬಿದರಿ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಗ್ರಾಮದ ರೈತರು ಪ್ರತಿನಿತ್ಯ ಅನುಭವಿಸುತ್ತಿರುವ ನರಕ ಯಾತನೆ ಎಂದರೆ ಲಾರಿಗಳ ಧೂಳು. ತುಂಗಾಭದ್ರ ನದಿಯ ತಟದಲ್ಲಿರುವ ರೈತರ ಜಮೀನುಗಳಿಂದ ಮಣ್ಣನ್ನು ಇಟ್ಟಿಗೆ ಭಟ್ಟಿಗಳಿಗೆ ಸಾಗಿಸುತ್ತಾರೆ. ಮಣ್ಣು ಸಾಗಾಣಿಕೆ ಪರವಾನಗಿ ಪಡೆದರೂ, ಇದೊಂದು ಮಾಫಿಯಾವಾಗಿ ಬೆಳೆದು ಹೆಮ್ಮರವಾಗಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರತಿನಿತ್ಯ ನೂರಾರು ಲಾರಿಗಳು ಮಣ್ಣು ಹೇರಿಕೊಂಡು ಹೋಗುತ್ತಿದೆ. ಹೋಗುವ ಹಾದಿಯಲ್ಲಿ ಸಿಗುವ ಜಮೀನಿಗಳಿಗೆ ಲಾರಿಗಳ ಧೂಳು ಹೆಚ್ಚಾಗಿದ್ದು, ಅ ಧೂಳು ಬೆಳೆಗಳನ್ನು ನಾಶಪಡಿಸುತ್ತಿವೆ.
ರೈತ ಮಹಿಳೆ ಕೊಟ್ರಮ್ಮ ಅವರ ಜಮೀನಿಗೆ ಮಾತ್ರವೇ ಹೀಗೆ ತೊಂದರೆಯಾಗುತ್ತಿಲ್ಲ. ದಾರಿಯ ಅಕ್ಕಪಕ್ಕದಲ್ಲಿರುವ ಜಮೀನುಗಳಿಗೂ ಇದೇ ರೀತಿ ತೊಂದರೆಯಾಗಿದೆ. ರಸ್ತೆಗಳು ಹೇಳತೀರದ ರೀತಿ ಹಾಳಾಗಿವೆ. ಅದರೆ ಯಾರೂ ಕೂಡ ಧ್ವನಿ ಎತ್ತಲು ಮುಂದೆ ಬರುತ್ತಿಲ್ಲ. ದಿಟ್ಟ ಮಹಿಳೆ ಕೊಟ್ರಮ್ಮ ಮಾತ್ರ ತಾನು ಮಕ್ಕಳಂತೆ ಬೆಳೆಸಿದ ಬೆಳೆಗಳು ಹಾಳಾಗುತ್ತಿರುವುದನ್ನು ನೋಡಿ ಇಡೀ ಮಣ್ಣು ಮಾಫಿಯಾ ವಿರುದ್ದ ತಿರುಗಿ ಬಿದ್ದಿದ್ದಾಳೆ!
ಕರ್ನಾಟಕ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಪ್ರಭುಗೌಡ ಮಾತನಾಡಿ, ‘ರೈತರ ಭೂಮಿಯಲ್ಲಿ ಮಣ್ಣನ್ನು ಅಗೆದು ತೆಗೆಯಲು ಇಂತಿಷ್ಟು ಮಿತಿಗಳಿರುತ್ತವೆ. ಆದರೆ, ಹತ್ತಾರು ಅಡಿಗಳಷ್ಟು ಅಂದರೆ, 20ರಿಂದ 30 ಅಡಿವರೆಗೆ ಮಣ್ಣು ಮಾರಿಕೊಳ್ಳುವ ಪ್ರವೃತ್ತಿ ಸರಿಯಲ್ಲ. ತಾಲ್ಲೂಕಿನ ನದಿ ಮತ್ತು ಹಳ್ಳದ ದಡದ ಭೋಗೋಳಿಕ ರಚನೆಯೇ ವಿಕಾರಗೊಳ್ಳುತ್ತದೆ. ನದಿ, ಹಳ್ಳಗಳ ಪ್ರವಾಹದ ನೀರು ದಡದ ಗ್ರಾಮಗಳ ಜಮೀನುಗಳಿಗೆ ನುಗ್ಗುತ್ತದೆ. ಕಂದಾಯ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಕ್ಷಣ ಮಣ್ಣು ಸಾಗಣೆ ತಡೆಯಬೇಕು. ತಪ್ಪಿದಲ್ಲಿ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಸಿದ್ದಾರೆ.
ಒಟ್ಟಾರೆಯಾಗಿ ಇಡೀ ಮಣ್ಣು ಮಾಫಿಯಾ ವಿರುದ್ಧ ಎಷ್ಟೇ ಅಧಿಕಾರಿಗಳಿಗೆ ಮನವಿ ಮಾಡಿದರೂ ಕೂಡ ಅಧಿಕಾರಿಗಳು ರಾಜಕೀಯ ಮುಖಂಡರ ಒತ್ತಡಕ್ಕೆ ಮಣಿಯಲಿದ್ದಾರೆ. ಶಾಸಕರು ಹಾಗೂ ಜನಪ್ರತಿನಿಧಿಗಳು ಜನರಿಂದ ಮತ ಹಾಕಿಸಿಕೊಳ್ಳುವುದಷ್ಟೇ ಅಲ್ಲ ಅವರ ಕಷ್ಟಕ್ಕೆ ಕೂಡ ಸ್ಪಂದಿಸಬೇಕಿದೆ. ಏನೇ ಆಗಲಿ ಕೊಟ್ರಮ್ಮನ ದಿಟ್ಟತನ ಮಣ್ಣು ಮಾಫಿಯಾದವರಿಗೆ ಸ್ವಲ್ಪಮಟ್ಟಿಗೆ ನಡುಕ ತಂದಿದೆ. ಮುಂದೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದು ಕಾದು ನೋಡಬೇಕಿದೆ.