‘ಬೆಳಕಿನ ಬೆಳೆ’ ಮಾಲಿಕೆಯ `ಜಿ.ಎನ್. ದೇವಿ – ಆಯ್ದ ಬರಹಗಳು’ ಬಿಡುಗಡೆ

ಆಧುನಿಕ ಭಾರತೀಯ ಚಿಂತನೆ ಎಂದರೆ ‘ಪ್ರಾಚೀನ ಭಾರತೀಯ’ ಅಥವಾ ‘ಆಧುನಿಕ ಪಾಶ್ಚಿಮಾತ್ಯ’ ಚಿಂತನೆಗಳ ಕಾಪಿಯಷ್ಟೇ ಅಥವಾ ಅದರ ಭಾಷ್ಯವಷ್ಟೇ ಎಂಬುದು ಸಾಮಾನ್ಯ ಅನಿಸಿಕೆ. ಕನ್ನಡದಲ್ಲಿ ಪ್ರಕಟವಾದ ಪುಸ್ತಕಗಳೂ ಅದೇ ಚಿತ್ರಣ ನೀಡುತ್ತವೆ. ಇಂತಹ ಸಂದರ್ಭದಲ್ಲಿ ಆಧುನಿಕ ಭಾರತೀಯ ಚಿಂತಕರ ಆಯ್ದ ಬರಹಗಳ ಮೂಲಕ ಅವರ ಚಿಂತನೆ ಪರಿಚಯ ಮಾಡುವ ‘ಬೆಳಕಿನ ಬೆಳೆ’ ಎಂಬ ಮಾಲಿಕೆ ಗಮನ ಸೆಳೆದಿತ್ತು. ಈ ಮಾಲಿಕೆಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿದ 7 ಪುಸ್ತಕಗಳು ಗಮನ ಸೆಳೆದಿದ್ದವು. ಆದರೆ ಈ ಮಾಲಿಕೆಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮುಂದುವರೆಸುತ್ತಿಲ್ಲ ಎಂದು ತಿಳಿದು ಬಂತು….

ಈ ಮಾಲಿಕೆಯ ಪ್ರಕಟಣೆಯನ್ನು ಡಾ.ಎಂ.ಜಿ.ಹೆಗಡೆ ಅವರ ಸಂಪಾದಕತ್ವದಲ್ಲಿ ಮುಂದುವರೆಸಿ ಪೂರ್ಣಗೊಳಿಸುವ ಜವಾಬ್ದಾರಿಯನ್ನು ಕ್ರಿಯಾ ಮಾಧ್ಯಮ ವಹಿಸಿಕೊಂಡಿದೆ. ‘ಬೆಳಕಿನ ಬೆಳೆ’ ಮಾಲಿಕೆಯ ಎಂಟನೆಯ ಪುಸ್ತಕವಾಗಿ ಮತ್ತು ಈ ಮಾಲಿಕೆಯಲ್ಲಿ ಕ್ರಿಯಾ ಮಾಧ್ಯಮದ ಪ್ರಕಟಣೆಗಳಲ್ಲಿ ಮೊದಲನೆಯದಾಗಿ, ಪ್ರಸಿದ್ಧ ಚಿಂತಕ ಗಣೇಶ ದೇವಿ ಅವರ ಆಯ್ದ ಬರಹಗಳ ಪುಸ್ತಕ ಪ್ರಕಟಣೆ ನಾಳೆ (ಅಕ್ಟೋಬರ್ 29ರಂದು) ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಬಿಡುಗಡೆಯಾಗುತ್ತಿದೆ.

ಒರ್ಫಿಯಸ್‌ನ ಹಾಡು, ಅಪೂರ್ಣ ರಕ್ತಕಣ, ಕಳ್ಳನೆನಿಸಿಕೊಂಡ ಅಲೆಮಾರಿ, ಹಿಂಸೆಯ ಪೂರ್ವಾಪರ, ಭಾಷೆಯ ಇರವು: ಜ್ಞಾನ, ಸಮಾಜ ಮತ್ತು ವಾಚೋಹೀನತೆ, ವಾಚೋಹೀನತೆ, ಸ್ಮೃತಿಯ ಭವಿಷ್ಯ – ದೇವಿ ಅವರ ಈ ಐದು ಪ್ರಸಿದ್ಧ ಲೇಖನಗಳು ಪುಸ್ತಕದಲ್ಲಿ ಇವೆ.

ಈ ಸಂದರ್ಭದಲ್ಲಿ ಜಿ.ಎನ್.ದೇವಿ ಅವರ ಕಿರು ಪರಿಚಯ, ಅನುವಾದಕರ (ಡಾ.ಎಂ.ಜಿ ಹೆಗಡೆ) ಮಾತುಗಳು, ಡಾ.ರಾಜೇಂದ್ರ ಚೆನ್ನಿ ಅವರು ಪುಸ್ತಕದ ಕುರಿತ ವಿದ್ವತ್ಪೂರ್ಣ ವಿಶ್ಲೇಷಣೆ, ದೇವಿ ಅವರ ಬರಹದ ಸ್ಯಾಂಪಲ್, ‘ಬೆಳಕಿನ ಬೆಳೆ’ ಮಾಲಿಕೆಯ ಪರಿಚಯ – ನೀಡುವ ಪುಸ್ತಕದ ಆಯ್ದ ಭಾಗಗಳನ್ನು ಇಲ್ಲಿ ಕೊಡುತ್ತಿದ್ದೇವೆ.

ಜಿ. ಎನ್. ದೇವಿ – ಕಿರು ಪರಿಚಯ

ಮಹಾರಾಷ್ಟ್ರದ ಪುಣೆಯ ಬೋರ್ ಗ್ರಾಮದಲ್ಲಿ 1950ರ ಅಗಸ್ಟ್ 1ರಂದು ಜನಿಸಿದ ಗಣೇಶ್ ದೇವಿಯವರು ವಿಮರ್ಶಕ, ಚಿಂತಕ, ಸಂಸ್ಥಾಪಕ, ಸಂಘಟಕ ಮತ್ತು ಶಿಕ್ಷಣ ತಜ್ಞರು.

ಮಹಾರಾಷ್ಟ್ರದ ಶಿವಾಜಿ ವಿಶ್ವವಿದ್ಯಾಲಯ ಮತ್ತು ಲಂಡನ್‌ನ ಲೀಡ್ಸ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಲೀಡ್ಸ್ ಮತ್ತು ಯೇಲ್ ವಿಶ್ವವಿದ್ಯಾಲಯಗಳಲ್ಲಿ ಫೆಲೊಶಿಪ್‌ಗಳನ್ನು ಹೊಂದಿದ್ದರು; ಟಿ.ಎಚ್.ಬಿ.ಸೈಮನ್ಸ್ ಫೆಲೋ(1991-92) ಮತ್ತು ಜವಾಹರಲಾಲ್ ನೆಹರು ಫೆಲೋ(1994-96)ಆಗಿದ್ದರು.

ಬರೋಡಾದ ಸಯಾಜಿರಾವ್ ವಿಶ್ವವಿದ್ಯಾಲಯಲದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ (1980-96) ಅವರು ವಿಮುಕ್ತ ಮತ್ತು ಅಲೆಮಾರಿ ಬುಡಕಟ್ಟುಗಳು ಮತ್ತು ಆದಿವಾಸಿಗಳ ಭಾಷೆ-ಬದುಕು ಸಂರಕ್ಷಣೆಗಾಗಿ ಕೆಲಸ ಮಾಡಲು ತಮ್ಮ ಶೈಕ್ಷಣಿಕ ವೃತ್ತಿ ಜೀವನವನ್ನು ತ್ಯಜಿಸಿದರು. ಈ ಕೆಲಸದ ಸಮಯದಲ್ಲಿ ಅವರು ಬರೋಡಾದಲ್ಲಿ ಭಾಷಾ ಸಂಶೋಧನೆ ಮತ್ತು ಪ್ರಕಟಣೆ ಕೇಂದ್ರ, ತೇಜಗಡದಲ್ಲಿ ಆದಿವಾಸಿ ಅಕಾಡೆಮಿಯಂತಹ ಸಂಸ್ಥೆಗಳನ್ನು ಸ್ಥಾಪಿಸಿದರು; ಡಿಎನ್‌ಟಿ ಹಕ್ಕುಗಳ ಕ್ರಿಯಾ ಕೇಂದ್ರದಂತಹ ಉಪಕ್ರಮಗಳಿಗೆ ಚಾಲನೆ ನೀಡಿದರು. ನಂತರ ಅವರು ಇತಿಹಾಸದಲ್ಲಿ ಅತಿ ದೊಡ್ಡ ಭಾಷೆಗಳ ಸಮೀಕ್ಷೆಯಾದ `ಭಾರತೀಯ ಭಾಷೆಗಳ ಲೋಕ ಸರ್ವೇಕ್ಷಣೆ’ಯನ್ನು ಸುಮಾರು ಮೂರು ಸಾವಿರ ಸ್ವಯಂ ಸೇವಕರ ಸಹಾಯದಿಂದ ನಡೆಸಿ ಐವತ್ತು ಬಹುಭಾಷಾ ಸಂಪುಟಗಳಲ್ಲಿ ಪ್ರಕಟಿಸಿದರು.

ಸದ್ಯ ಧಾರವಾಡದಲ್ಲಿ ನೆಲೆಸಿರುವ ಅವರು ಗಾಂಧಿ-ಅಂಬೇಡ್ಕರ್ ವಿಚಾರಗಳಿಂದ ಸ್ಫೂರ್ತವಾದ `ದಕ್ಷಿಣಾಯಣ’ ಆಂದೋಲನವನ್ನು ಮುನ್ನಡೆಸುತ್ತಿದ್ದಾರೆ. ಮರಾಠಿ, ಗುಜರಾತಿ ಮತ್ತು ಇಂಗ್ಲೀಷ್‌ನಲ್ಲಿ ಸಾಹಿತ್ಯ, ಭಾಷಾಶಾಸ್ತ್ರ, ತತ್ತ್ವಶಾಸ್ತ್ರ, ಸಂಸ್ಕೃತಿ ವಿಮರ್ಶೆಯಂತಹ ವಿವಿಧ ಕ್ಷೇತ್ರಗಳಲ್ಲಿ ತೊಂಭತ್ತರಷ್ಟು ಪ್ರಭಾವಶಾಲಿ ಕೃತಿಗಳನ್ನು ಪ್ರಕಟಿಸಿರುವ ಅವರಿಗೆ ಸಾಹಿತ್ಯ ಕ್ಷೇತ್ರದ ಕಾರ್ಯಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಇಂಗ್ಲೀಷ್ ಸಾಹಿತ್ಯ ವಿಮರ್ಶೆಗಾಗಿ `After Amnesia’ ಕೃತಿಗೆ, 1993), ಮಹಾರಾಷ್ಟ್ರ ಫೌಂಡೇಶನ್ ಪ್ರಶಸ್ತಿ (ಮರಾಠಿ ಕೃತಿ `ವಾನಪ್ರಸ್ಥ’ಕ್ಕೆ, 2007)ಗಳಿಂದ ಹಿಡಿದು, ಯುನೆಸ್ಕೋದ ಲಿಂಗ್ವಾಪ್ಯಾಕ್ಸ್ ಪ್ರಶಸ್ತಿ (ಭಾಷಾ ವೈವಿಧ್ಯದ ಸಂರಕ್ಷಣಾ ಕಾರ್ಯಕ್ಕಾಗಿ, 2011); ಭಾರತ ಸರಕಾರದ ಪದ್ಮಶ್ರೀ (ಆದಿವಾಸಿ-ಬುಡಕಟ್ಟುಗಳ ಸೇವೆಗಾಗಿ, 2014) ಗಳವರೆಗೆ ಪ್ರಶಸ್ತಿಗಳ ಸರಮಾಲೆಯೇ ಅವರಿಗೆ ಸಂದಿದೆ.

‘ಅನುವಾದಕರ ಮಾತು’ನಿಂದ

ಹೆಜ್ಜೆ ಹೆಜ್ಜೆಗೂ ಎಡರು ತೊಡರು, ಅನುಮಾನ ಅಪಮಾನ, ಪ್ರತಿಬಂಧ ಪ್ರತಿರೋಧಗಳನ್ನು ಎದುರಿಸುತ್ತ ಅಪಾಯದ ಅಂಚಿನಲ್ಲೇ ನಡೆಯಬೇಕಾದ, ಸಿದ್ಧಿಯ ಖಚಿತ ಭರವಸೆಯೂ ಇಲ್ಲದ ಸಾಧನೆಯ ದಾರಿಯದು. ಈ ಅನುಭವವೇ – ವಾನಪ್ರಸ್ಥದಲ್ಲಿ ಕಲಿತದ್ದು, ಧ್ಯಾನಿಸಿದ್ದು, ಕನಸು ಕಂಡಿದ್ದು, ಅದನ್ನು ನನಸಾಗಿಸಲು ಹೆಣಗಿದ್ದು – ಕಳೆದ ಇಪ್ಪತ್ತೈದು ವರ್ಷಗಳ ದೇವಿಯವರ ಬರವಣಿಗೆಯ ಕೇಂದ್ರವಾಗಿದೆ. `ಪ್ರತಿ ಪೀಳಿಗೆಯಲ್ಲೂ ಪ್ರತಿ ಶತಮಾನದಲ್ಲೂ ಈ ಜಗತ್ತನ್ನು ಹೆಚ್ಚು ಸುಂದರವೂ ಮಾನವೀಯವೂ ಆಗಿಸಲು ಚಿಮ್ಮುವ ಮನುಷ್ಯ ಚೈತನ್ಯ’ದಲ್ಲಿ ಅಪಾರವಾದ ಭರವಸೆ ಅವರ ವಾನಪ್ರಸ್ಥದ ಹಿಂದಿನ ಚೋದನೆಯಾಗಿರುವಂತೆ `ನಮ್ಮೆಲ್ಲರಿಗೂ ಲಭ್ಯವಿರುವ ಮಾನವೀಯ ಚೈತನ್ಯವನ್ನು ಮನುಕುಲ ಕಾಪಿಟ್ಟುಕೊಳ್ಳಬೇಕಾದರೆ ನಮ್ಮದೇ ಕಾಲದಲ್ಲಿ ನಾವು ಒರ್ಫಿಯಸ್‌ನ ಹಾಡನ್ನು ಹಾಡಲೇಬೇಕು’ ಎಂಬ ಒತ್ತಾಸೆ ಅವರ ಬರವಣಿಗೆಯ ಹಿಂದಿನ ಪ್ರೇರಕ ಶಕ್ತಿಯಾಗಿದೆ. ಈ ಇಪ್ಪತ್ತೈದು ವರ್ಷಗಳ ಬರವಣಿಗೆಯಿಂದ ಆಯ್ದ ಕೆಲವು ಮುಖ್ಯ ಲೇಖನಗಳ ಕನ್ನಡಾನುವಾದ ಪ್ರಸ್ತುತ ಸಂಪುಟದಲ್ಲಿದೆ.

ಆರಂಭದ ಮೂರು ಲೇಖನಗಳು ದೇವಿಯವರ ‘ತೇಜಗಡ  ಪ್ರಯೋಗ’ವನ್ನು ಕುರಿತು ಹೇಳುವ ನೆಪದಲ್ಲಿ, ನಿಡುಗಾಲ ಪರೀಕ್ಷಿಸದೇ ಒಪ್ಪಿಕೊಂಡು ಈಗ ನಮ್ಮ ವಾಡಿಕೆಯ ಗ್ರಹಿಕೆಯ ಭಾಗವಾಗಿರುವ ಪರಿಕಲ್ಪನೆಗಳನ್ನು ಪ್ರಶ್ನಿಸುತ್ತವೆ; ನಮ್ಮ ಸಮಾಜ ಸಂಸ್ಕೃತಿಗಳ ಕುರಿತು ಪುನರಾಲೋಚಿಸುವಂತೆ ಒತ್ತಾಯಿಸುತ್ತವೆ.

ದೇವಿಯವರ ಬರಹದಲ್ಲಿ ಆಗೀಗ ಅನಿರೀಕ್ಷಿತ ಲಂಘನಗಳೂ ವಾಚಕರ ಧ್ಯಾನಕ್ಕೆ ಮತ್ತು ಶೋಧಕ್ಕೆ ಆಹ್ವಾನ ನೀಡುವ ಗ್ಯಾಪ್‌ಗಳೂ ಇರುವುದಿದೆ. ಉದಾಹರಣೆಗೆ ಅವರು ನಿರೂಪಿಸುವ ‘ಕತೆಯ ಕತೆ’ಯನ್ನು ನೋಡಬಹುದು. ಆ ಕತೆಯ ಪ್ರಕಾರ ಮನುಷ್ಯ ಪ್ರಜ್ಞೆಗೆ ದೇಶಕಾಲಗಳೊಂದಿಗೆ ವ್ಯವಹರಿಸಲು ಅನುವು ಮಾಡಿಕೊಡುವ ಭಾಷೆ, ಕಲ್ಪನೆ ಮತ್ತು ಸ್ಮೃತಿಗಳೇ ಕತೆಯ ಹುಟ್ಟಿಗೂ ಕಾರಣವಾಗುತ್ತವೆ. ಮನುಷ್ಯ ಜೀವಿಗೆ ಮಾತ್ರವೇ ಅನ್ಯದ ಬೋಧವಿರುವುದರಿಂದ ಅನ್ಯತೆಯನ್ನು ಮೀರುವ ಹಂಬಲದಲ್ಲಿ ಕತೆ ಕೇಳುವ ಒತ್ತಾಸೆಯೂ ಇರುತ್ತದೆ.

ಸಂಪುಟದ ಕೊನೆಯ ಲೇಖನ ಮನುಷ್ಯನ ಉತ್ಕ್ರಾಂತಿಯ ಚರಿತ್ರೆಯಲ್ಲಿ ಕಂಡುಬರುವ ಪ್ರಮುಖ ಪಲ್ಲಟಗಳ ತರ್ಕದ ಹಿನ್ನೆಲೆಯಲ್ಲಿ ಸದ್ಯ ಜಾಗತಿಕವಾಗಿ ಘಟಿಸುತ್ತಿರುವ ಡಿಜಿಟಲ್ ಕ್ರಾಂತಿಯ, ಅದರ ಪರಿಣಾಮವಾದ ಭಾಷೆಗಳ ಅವಸಾನದ ಕುರಿತು ಚಿಂತಿಸುತ್ತದೆ.

-ಡಾ.ಎಂ.ಜಿ.ಹೆಗಡೆ

ಪರ್ಯಾಯದ ಹುಡುಕಾಟ

ಪ್ರಸ್ತುತ ಕೃತಿಯಲ್ಲಿ ಮೂರು ಬಹುಮುಖ್ಯ ವಿಷಯಗಳನ್ನು ಕುರಿತು ದೇವಿಯವರು ಧ್ಯಾನಿಸಿ ಬರೆದ ಬರಹಗಳ ಅನುವಾದಗಳಿವೆ. ಪಶ್ಚಿಮ ಹಾಗೂ ಪೂರ್ವಗಳ ವಿದ್ವತ್ತು, ಜಗತ್ತಿನ ಮಹಾನ್ ಕೃತಿಗಳ ಆಳವಾದ ಓದು, ಚರಿತ್ರೆಯ ದಾರ್ಶನಿಕವಾದ ತಿಳುವಳಿಕೆ ಹಾಗೂ ಸಾಮಾಜಿಕ ಬದ್ಧತೆಗಳು ಮುಪ್ಪುರಿಗೊಂಡು ಸೃಷ್ಟಿಸಿದ ಜ್ಞಾನವು ಈ ಬರಹಗಳಲ್ಲಿದೆ. ಅಪ್ರಾಮಾಣಿಕವಾದ ಭಾಷಾಡಂಬರದ “ಜಾಗತಿಕ” ಚಿಂತನೆಯ ಹಗಲುವೇಷದ ಬದಲಾಗಿ ಇಪ್ಪತ್ತನೆಯ ಶತಮಾನದಿಂದ ಇತ್ತೀಚೆಗೆ ಮನುಷ್ಯ ಕುಲವು ಎದುರಿಸಿದ ಆತ್ಮಘಾತುಕವಾದ ಹಿಂಸೆಗಳು, ಅತಾರ್ಕಿಕವಾದ ಸ್ವವಿನಾಶ, ಸಿನಿಕತನವುಳ್ಳ ಹತಾಶೆ ಇವುಗಳ ಜೊತೆಗೆ ಇವೆಲ್ಲವನ್ನು ಬದಲಾಯಿಸಬೇಕು ಎನ್ನುವ, ‘ಇನ್ನೊಂದು ಜಗತ್ತು ಸಾಧ್ಯವಿದೆ’ ಎನ್ನುವ ನೈತಿಕವಾದ ನಂಬಿಕೆ ಈ ಬರಹಗಳಲ್ಲಿದೆ….. ಎಂ.ಜಿ. ಹೆಗಡೆಯವರ ಮಾಂತ್ರಿಕ ಅನುವಾದವು ದಟ್ಟವಾದ, ಸಂಕೀರ್ಣವಾದ ಅನುಭವಗಳನ್ನು ಕನ್ನಡದಲ್ಲಿ ಅದ್ಭುತವಾಗಿ ಹಿಡಿದುಕೊಡುತ್ತದೆ…. ನನಗಂತೂ ಈ ಕೃತಿಯನ್ನು ಓದಿದ್ದು ಇಳಿವಯಸ್ಸಿನಲ್ಲಿ ದೊರೆತ ಶಿಕ್ಷಣವಾಗಿದೆ.

– ಡಾ. ರಾಜೇಂದ್ರ ಚೆನ್ನಿ

ಒರ್ಫಿಯಸ್‌ನ ಹಾಡು

ಬಹಳ ಹಿಂದೆ –ಎಷ್ಟೆಂದರೆ ಐತಿಹಾಸಿಕ ಯುಗಗಳಲ್ಲಿ ಅಲ್ಲ, ಪೌರಾಣಿಕ ಕಲ್ಪಗಳಲ್ಲಿ- ಒರ್ಫಿಯಸ್ ತನ್ನ ಪ್ರೀತಿಯ ಯುರಿಡಿಸಿಯನ್ನು ಮೃತ್ಯುಲೋಕದಿಂದ ಮರಳಿ ತರಲು ಹೋರಾಟ ನಡೆಸಿದ. ಮೃತ್ಯುದೇವತೆಯು ಒರ್ಫಿಯಸ್‌ಗೆ ಯುರಿಡಿಸಿಯನ್ನು ಹಿಂತಿರುಗಿಸಲು ಒಪ್ಪಿದ. ಆದರೆ ಅವಳು ಅವನನ್ನು ಅನುಸರಿಸಿಕೊಂಡು ಹೋಗುತ್ತಿರುವಾಗ ನಿಜಕ್ಕೂ ಅವಳು ತನ್ನನ್ನು ಹಿಂಬಾಲಿಸುತ್ತಿರುವಳೆ ಎಂದು ಅವನು ಹಿಂತಿರುಗಿ ನೋಡುವಂತಿಲ್ಲ ಎಂದು ಷರತ್ತು ವಿಧಿಸಿದ. ಒರ್ಫಿಯಸ್ ಕತ್ತಲೆಯ ಜಗತ್ತಿನಿಂದ ಹೊರಬಂದಾಗ ಯುರಿಡಿಸಿ ದಿಟವಾಗಿಯೂ ತನ್ನನ್ನು ಹಿಂಬಾಲಿಸಿ ಬರುತ್ತಿದ್ದಾಳೆ ಎಂಬ ನಂಬಿಕೆಯ ಬಲದ ಮೇಲೇ ಕವನಗಳನ್ನು ರಚಿಸಿ ಗಟ್ಟಿಯಾಗಿ ಹಾಡುತ್ತಿದ್ದ – ಯುರಿಡಿಸಿಗೆ ತನ್ನೆದೆಯ ತವಕ ತಲ್ಲಣಗಳ ನಿವೇದನೆಯಾಗಿ; ಪ್ರಿಯತಮೆಯನ್ನು ಮೃತ್ಯುಮುಖದಿಂದ ರಕ್ಷಿಸಿ ತಂದ ಯಶೋಗೀತೆಯಾಗಿ; ಅದೆಲ್ಲಕ್ಕಿಂತ, ಯುರಿಡಿಸಿ ವಾಸ್ತವವಾಗಿಯೂ ತನ್ನನ್ನು ಹಿಂಬಾಲಿಸುತ್ತಿರುವುದು ಹೌದೇ ಎಂಬ ಆಂತಕವನ್ನು ಗೆಲ್ಲುವ ಉಪಾಯವಾಗಿ. ಅವನ ದೈವಿಕ ಸಂಗೀತಕ್ಕೆ ಮರುಳಾಗಿ ಲಕ್ಷಾಂತರ ಹಕ್ಕಿಗಳು ಯುರಿಡಿಸಿಯನ್ನು ಹಿಂಬಾಲಿಸಿದವೆಂದು ಹೇಳುತ್ತಾರೆ. ಅವುಗಳ ಕಿವಿಗದು ಸಂಗೀತ; ಅದರೆ ಒರ್ಫಿಯಸ್‌ಗೆ ಅದು ಯಾತನೆಯ ಗೀತೆ; ಹಾಗೆಯೇ ನಂಬಿಕೆಯ ಘೋಷಣೆ! ಒರ್ಫಿಯಸ್‌ನ ಆ ಹಾಡು ಪ್ರತಿಯೊಬ್ಬ ಪ್ರವರ್ತಕನ ಕ್ರಿಯೆಯಲ್ಲೂ ಪ್ರತಿಧ್ವನಿಸುತ್ತದೆ.

– ಗಣೇಶ್ ದೇವಿ (ಒರ್ಫಿಯಸ್‌ನ ಹಾಡು)

ಬೆಳಕಿನ ಬೆಳೆ ಮಾಲಿಕೆ

`ಬೆಳಕಿನ ಬೆಳೆ’ ಬೇಂದ್ರೆಯವರಿಂದ ದೊರಕಿಸಿಕೊಂಡ ಪದಗುಚ್ಛ. `ಹುಲುಸಿರಲಮ್ಮ ಬೆಳಕಿನ ಬೆಳೆಗೆ’ ಅವರ `ಪ್ರಾರ್ಥನೆ’ಯ ಒಂದು ಸಾಲು, `ಬೆಳಕಿನ ಬೆಳೆ ಬೆಳೆಸಲಿಕ್ಕೆ ಬೆಳೆಯ ಬಾಳು ಬೆಳೆದು ಬಂತು’ ಈ ಮಾಲಿಕೆಗೆ ಆದರ್ಶವಾಗಿದೆ. ಬೆಳೆಯ ಬಾಳಿನ ಸಾರ್ಥಕ್ಯವಿರುವುದೇ ಬೆಳಕಿನ ಬಾಳನ್ನು ಬೆಳೆಸುವುದರಲ್ಲಿ.

ಬಹುಭಾಷಿಕವಾದ ನಮ್ಮ ದೇಶದಲ್ಲಿ ಬೆಳಕಿನ ಬೆಳೆ ಹಲವು ಭಾಷೆಗಳಲ್ಲಿ ಬೆಳೆದು ಬಂದಿದೆ. ಇವನ್ನು ಕನ್ನಡದಲ್ಲಿ ದೊರಕಿಸಿಕೊಳ್ಳುವುದಕ್ಕಾಗಿ ಬೇರೆ ಬೇರೆ ಭಾಷೆಗಳ ಚಿಂತಕರ ಆಯಾ ಭಾಷಾವಲಯದಲ್ಲಿ ಚರ್ಚೆಯನ್ನು ಹುಟ್ಟುಹಾಕಿದ, ಕನ್ನಡದ ಸಂದರ್ಭಕ್ಕೂ ಪ್ರಸ್ತುತವಾದ ಆರೆಂಟು ಲೇಖನಗಳ ಅನುವಾದವನ್ನೂ, ಪ್ರಸ್ತಾವನೆ, ಪರಿಚಯವನ್ನೂ ಹೊಂದಿರುವ ಐವತ್ತು ಸಂಪುಟಗಳ ಮಾಲಿಕೆಯಾಗಿ `ಬೆಳಕಿನ ಬೆಳೆ’ಯನ್ನು ಯೋಜಿಸಲಾಗಿದೆ. ಈ ಮಾಲಿಕೆಯಲ್ಲಿ ಇರಾವತಿ ಕರ್ವೆ, ರವೀಂದ್ರನಾಥ ಟಾಗೋರ್, ಎಂ ಹಿರಿಯಣ್ಣ, ಡಿ.ಡಿ.ಕೊಸಾಂಬಿ, ಬಿಮಲಕೃಷ್ಣ ಮತಿಲಾಲ್, ನಿರ್ಮಲ ವರ್ಮ, ನಾಮವರ ಸಿಂಗ್ ರ ಬರಹಗಳ ಸಂಪುಟಗಳನ್ನು `ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ವು ಈಗಾಗಲೇ ಪ್ರಕಟಿಸಿದೆ. ಮಾಲಿಕೆಯ ಮುಂದಿನ ಸಂಪುಟಗಳನ್ನು `ಕ್ರಿಯಾ ಮಾಧ್ಯಮ’ವು ಬೆಳಕಿಗೆ ತರಲಿದೆ.

ದಾದಾಬಾಯಿ ನವರೋಜಿ, ಕಾಳಿದಾಸ ಭಟ್ಟಾಚಾರ್ಯ, ಸುದೀಪ್ತ ಕವಿರಾಜ, ಅಮರ್ತ್ಯ ಸೇನ್, ಆನಂದ ಕುಮಾರಸ್ವಾಮಿ, ಕಮಲಾದೇವಿ ಚಟ್ಟೋಪಧ್ಯಾಯ, ಸೂಸಿ ಫಾರು, ರೊಮಿಲಾ ಥಾಪರ್, ಐಜಾ಼ಜ್‌ ಅಹ್ಮದ್, ಎಂ.ಎನ್.ರಾಯ್, ದುರ್ಗಾ ಭಾಗವತ, ರಾಹುಲ ಸಾಂಕೃತ್ಯಾಯನ, ಭೀಖು ಪರೇಖ್, ವಿವೇಕಾನಂದ, ಗೋಪಿನಾಥ ಕವಿರಾಜ, ರಾಜಾಜಿ, ಗಾಯತ್ರಿ ಸ್ಪಿವಾಕ್, ಪಾರ್ಥ ಚಟರ್ಜಿ, ಲೀಲಾ ಗಾಂಧಿ, ರಾಧಾಕೃಷ್ಣನ್ ಮೊದಲಾದವರ ಬರಹಗಳ ಸಂಪುಟಗಳು ಈ ಮಾಲಿಕೆಯಲ್ಲಿ ಬರಲಿವೆ.

ಡಾ. ಎಂ.ಜಿ ಹೆಗ್ಡೆಯವರು ಪ್ರಧಾನ ಸಂಪಾದಕರಾಗಿರುವ ಈ ಮಾಲಿಕೆಯಲ್ಲಿ ಕನ್ನಡದ ನುರಿತ ಅನುವಾದಕರೂ ಕೆಲವರು ಹೊಸ ಅನುವಾದಕರೂ ಕೈಜೋಡಿಸಿದ್ದಾರೆ – ಬೆಳಕಿನ ಬೆಳೆ ಹುಲುಸಾಗಲೆಂದು.

Donate Janashakthi Media

Leave a Reply

Your email address will not be published. Required fields are marked *