ಬೇಡಿಕೆ ಇಟ್ಟಿದ್ದು 3 ಕೋಟಿ ಲಸಿಕೆ-ಬಂದದ್ದು 8 ಲಕ್ಷ ಮಾತ್ರ: ಪಿ ರವಿಕುಮಾರ್‌

ಬೆಂಗಳೂರು: ಕೇಂದ್ರದಿಂದ ಲಸಿಕೆ ಬಾರದೆ ನಾವು ಏನು ಮಾಡಲು ಆಗುವುದಿಲ್ಲ.  ನಮಗೆ ಇಲ್ಲಿಯವರೆಗೆ 8 ಲಕ್ಷ ಲಸಿಕೆಯಷ್ಟೇ ಬಂದಿದೆ. ನಾವು 3 ಕೋಟಿ ಲಸಿಕೆ ಆರ್ಡರ್ ಕೊಟ್ಟಿದ್ದು, ನಮಗೆ ತಲುಪಿದ್ದು 8 ಲಕ್ಷ ಲಸಿಕೆಯಷ್ಟೇ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಕೋವಿಡ್‌ ಸೋಂಕಿಗೆ ಒಳಗಾಗುವವರ ಸಂಖ್ಯೆ ಅಧಿಕವಾಗುತ್ತಿದೆ. ಈಗ ಕೊರೊನಾ ಲಸಿಕೆ ಅಭಾವ ಸೃಷ್ಠಿಯಾಗಿದೆ. ರಾಜ್ಯದ ಹಲವು ಕಡೆಗಳಲ್ಲಿ ಎರಡನೇ ಡೋಸ್‌ ಪಡೆಯಲು ಬಂದವನ್ನು ವಾಪಸ್‌ ಕಳುಹಿಸಲಾಗುತ್ತಿದೆ. ಈ ಬಗ್ಗೆ ಮಾತನಾಡಿದ ಪಿ ರವಿಕುಮಾರ್‌ ಅವರು ‘45 ವರ್ಷ ದಾಟಿದ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದ್ದು, ಪ್ರತಿ 15 ದಿನಕ್ಕೆ 15 ಲಕ್ಷ ಡೋಸ್‌ ಲಸಿಕೆಗಳು ಬೇಕಾಗಿದೆ. ಆದರೆ, ಕೇಂದ್ರ ಸರಕಾರವು ರಾಜ್ಯಕ್ಕೆ  12 ದಿನಗಳಲ್ಲಿ 8 ಲಕ್ಷ ಮಾತ್ರ ಬಂದಿದೆ. ನಮಗೆ ಲಸಿಕೆ ಬಂದಂತೆ ನಾವು ಜನರಿಗೆ ಕೊಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

‘ರಾಜ್ಯಕ್ಕೆ ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಯನ್ನೂ ಪೂರೈಸುವಂತೆ ಕೇಳಿದ್ದೇವೆ. ಮೊದಲ ಡೋಸ್‌ ಪಡೆದವರಿಗೆ ಎರಡನೇ ಡೋಸ್‌ ಕೊಡುತ್ತೇವೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರಕಾರ ಉಚಿತವಾಗಿ ಲಸಿಕೆ ನೀಡುತ್ತಿದೆ. 15 ದಿನಗಳಲ್ಲಿ 80 ಸಾವಿರ ಮಾತ್ರ ಕೋವ್ಯಾಕ್ಸಿನ್‌ ಲಸಿಕೆ ಬಂದಿದೆ. ಇನ್ನುಳಿದ ಮೂರು ದಿನಗಳಲ್ಲಿ 7 ಲಕ್ಷ ಡೋಸ್‌ ಬರಬಹುದು ಎಂದು ನಿರೀಕ್ಷಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ಇದನ್ನು ಓದಿ: ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!

ʻರಾಜ್ಯದಲ್ಲಿ ಲಸಿಕೆ ಉತ್ಪಾದನೆಗೆ ಯಾವುದೇ ಕಂಪನಿ ಮುಂದೆ ಬಂದಿಲ್ಲ. ಲಸಿಕೆ ತಯಾರಿಸಲು ಯಾವುದಾದರೂ ಯಾವುದೇ ಕಂಪನಿ ಮುಂದೆ ಬಂದರೂ ಅಂತಹ ಕಂಪನಿಗಳಿಗೆ ಸಹಾಯ ಮಾಡಲಾಗುವುದು.

‘ಲಸಿಕೆ ಪೂರೈಕೆ ನಮ್ಮ ಕೈಯಲ್ಲಿಯೂ ಇಲ್ಲ. ಎರಡು ಲಸಿಕೆ ಉತ್ಪಾದಕ ಕಂಪನಿಗಳಾದ ಸೀರಂ ಮತ್ತು ಭಾರತ್‌ ಬಯೋಟೆಕ್‌ ಸಂಸ್ಥೆಗಳು ಉತ್ಪಾದಿಸುವ ಲಸಿಕೆಯಲ್ಲಿ ಶೇ. 50ರಷ್ಟು ಸರಕಾರಕ್ಕೆ ಉಳಿದ ಶೇ. 50ರಷ್ಟು ಖಾಸಗಿ ಅವರಿಗೆ ಮಾರಾಟ ಮಾಡಲು ಅವಕಾಶ ಕೊಡಲಾಗಿದೆ.

ಏಪ್ರಿಲ್ 2ನೇ ವಾರದಲ್ಲಿ ಲಸಿಕೆಗೆ ಆರ್ಡರ್ ನೀಡಿದ್ದು, ಮೇ 1ರಿಂದ ನಮಗೆ ಪೂರೈಕೆ ಮಾಡುತ್ತಿದ್ದಾರೆ. ಸದ್ಯ ಬೇರೆ ದೇಶಗಳಲ್ಲಿ ಉತ್ಪಾದಿಸುವ ಲಸಿಕೆ ಆಮದಿಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜತೆಗೆ, 1 ಕೋಟಿ ಡೋಸ್ ನೀಡಲು ಭಾರತ್ ಬಯೋಟೆಕ್‌ಗೆ ಹಾಗೂ 2 ಕೋಟಿ ಡೋಸ್ ನೀಡಲು ಸೆರಮ್‌ಗೆ ಬೇಡಿಕೆ ಇಟ್ಟಿದ್ದೇವೆ. ಲಸಿಕೆ ತರಿಸಿಕೊಳ್ಳುವುದಕ್ಕೆ ಸಕಲ ಪ್ರಯತ್ನವನ್ನೂ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಅದರ ಖಾಸಗೀಕರಣ

ನಾವು ಲಸಿಕೆ ಪೂರೈಕೆಗಾಗಿ ಒತ್ತಡ ಹಾಕುತ್ತಿದ್ದೇವೆ. ಭಾರತದಲ್ಲಿ ಎರಡು ಕಂಪನಿಗಳು ಮಾತ್ರ ಲಸಿಕೆ ಉತ್ಪಾದನೆ ಮಾಡುತ್ತಿವೆ. ಆ ಎರಡು ಕಂಪನಿಗಳು ಇಡೀ ದೇಶಕ್ಕೆ ಲಸಿಕೆ ಪೂರೈಸಬೇಕು. ಸದ್ಯ ಪರಿಸ್ಥಿತಿಯಲ್ಲಿ ಲಸಿಕಾ ಅವಶ್ಯಕತೆ ತೀವ್ರವಿರುವುದರಿಂದ ಬೇರೆ ಬೇರೆ ದೇಶಗಳಿಂದಲೂ ಆಮದು ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಅದಕ್ಕೆ ಭಾರತ ಸರ್ಕಾರದ ಅನುಮತಿ ಬೇಕಾಗಿದೆ ಎಂದು ಪಿ. ರವಿಕುಮಾರ್ ಹೇಳಿದರು.

ಜುಲೈ ತಿಂಗಳಿನಿಂದ ಲಸಿಕೆ ಪೂರೈಕೆ ಪ್ರಮಾಣವನ್ನು ಜಾಸ್ತಿ ಮಾಡುವುದಾಗಿ ಈ ಕಂಪನಿಗಳು ಹೇಳಿತ್ತಿವೆ. ಕರ್ನಾಟಕ ಒಂದೇ ಅಲ್ಲ, ಇಡೀ ದೇಶದಲ್ಲಿ ಲಸಿಕೆ ಕೊರತೆ ಇದೆ. ಕೇಂದ್ರ ಸರ್ಕಾರ ಸರಾಸರಿ ಆಧಾರದಲ್ಲಿ ಎಲ್ಲ ರಾಜ್ಯಗಳಿಗೂ ಲಸಿಕೆಯನ್ನು ಹಂಚುತ್ತಿದೆ’ ಎಂದರು.

ಇದನ್ನು ಓದಿ: 10 ದಿನಕ್ಕೆ 5 ಲಕ್ಷ ರೂಪಾಯಿ ಬಿಲ್: ಕೊರೊನಾ ಸೋಂಕಿತರ ಸುಲಿಗೆ ಮಾಡುತ್ತಿರುವ ಮಂಗಳೂರು ಖಾಸಗಿ ಆಸ್ಪತ್ರೆ

’18 ರಿಂದ 45 ವಯೋಮಾನದವರಿಗೆ ಲಸಿಕೆಗಳನ್ನು ರಾಜ್ಯವೇ ಖರೀದಿಸಿ ನೀಡುತ್ತಿದೆ. ಅದಕ್ಕಾಗಿ 3 ಕೋಟಿ ಡೋಸ್‌ಗೆ ಬೇಡಿಕೆಯನ್ನು ಸಲ್ಲಿಸಿದ್ದೇವೆ. ಅದರಲ್ಲಿ ನೆನ್ನೆ ದಿನದವರೆಗೂ 7 ಲಕ್ಷ ಕೋವಿಶೀಲ್ಡ್‌ ಬಂದಿದೆ.  ಅದನ್ನು 200 ಕಡೆ ಇಟ್ಟಿದ್ದೇವೆ. ಈ ವಯೋಮಾನದವರಿಗೆ ಕೊಡಲು ನಮಗೆ 6 ಕೋಟಿ ಡೋಸ್‌ ಬೇಕಾಗಿದೆ. ಒಂದೇ ಬಾರಿ ಲಸಿಕೆಯನ್ನು ತಂದು ಇಟ್ಟುಕೊಳ್ಳಲು ಆಗುವುದಿಲ್ಲ. ರಾಜ್ಯದ ಸುಮಾರು 200 ಕಡೆಗಳಲ್ಲಿ ಲಸಿಕೆಯನ್ನು ಸಂಗ್ರಹಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. 3 ಕೋಟಿ ಡೋಸ್‌ ಪೂರೈಕೆಯಾದರೆ ಅದನ್ನು ವಿತರಿಸಲು ನಮಗೆ 4 ತಿಂಗಳು ಬೇಕಾಗಬಹುದು’ಎಂದೂ ವಿವರಿಸಿದ್ದಾರೆ.

ರಷ್ಯಾದ ಸ್ಪುಟ್ನಿಕ್ ಲಸಿಕೆ ಪಡೆಯಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ. ಇನ್ನೂ ಬೇರೆ ಕಂಪನಿಗಳ ಲಸಿಕೆಗೆ ಕೇಂದ್ರ ಸರ್ಕಾರದ ಅನುಮತಿ ನಿರೀಕ್ಷಿಸುತ್ತಿದ್ದೇವೆ.  ನಾವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದೇವೆ. ಬೇರೆ ಕಂಪನಿಗಳ ಲಸಿಕೆ ಪಡೆಯಲು ಶೀಘ್ರ ಅನುಮತಿ ನೀಡಲು ಮನವಿ ಮಾಡಿದ್ದೇವೆ ಎಂದು ಪಿ ರವಿಕುಮಾರ್ ಹೇಳಿದರು.

Donate Janashakthi Media

Leave a Reply

Your email address will not be published. Required fields are marked *