ಬೆಂಗಳೂರು : ನಗರದಲ್ಲಿನ ಬಿಡಿಎ ಅಧಿಕಾರಿಗಳ ಲಂಚಾವತಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಈಗ ಬರೋಬ್ಬರಿ 1 ಕೋಟಿ 70 ಲಕ್ಷ ಲಂಚವನ್ನು ಪಡೆದಂತ ಆರೋಪದಲ್ಲಿ ಬಿಡಿಎ ಇಬ್ಬರು ಅಧಿಕಾರಿಗಳು, ಓರ್ವ ಬ್ರೋಕರ್ ವಿರುದ್ಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಮಾ ರಾಜು ನೀಡಿದ್ದ ದೂರಿನಂತೆ ಎಫ್ಐಆರ್ ದಾಖಲು ಮಾಡಲಾಗಿದೆ. ಬಿಡಿಎ ಅಧಿಕಾರಿಗಳಾದ ಮಹೇಶ್ ಕುಮಾರ್, ಶಿವರಾಜ್, ಬಿಡಿಎ ಬ್ರೋಕರ್ ಮೋಹನ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಬೆಂಗಳೂರಿನ ಆರ್.ಟಿ. ನಗರ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.
ಅರ್ಕಾವತಿ ಬಡಾವಣೆಯಲ್ಲಿ ಸ್ವಾಧೀನ ಪಡಿಸಿಕೊಂಡ ತಮ್ಮ ಜಮೀನಿಗೆ ಪರಿಹಾರ ನೀಡುವಂತೆ ಹೇಮಾ ರಾಜು ಅವರು ಬಿಡಿಎ ಕಚೇರಿಗೆ ಅಲೆದು, ಅಲೆದು ಸುಸ್ತಾಗಿದ್ದರು. ಇವರನ್ನು ಪರಿಚಯಿಸಿಕೊಂಡಿದ್ದಂತ ಬಿಡಿಎ ಸೂಪರಿಡೆಂಟ್ ಮಹೇಶ್ ಕುಮಾರ್ ಪರಿಚಯ ಮಾಡಿಕೊಂಡು, ಆ ಬಳಿಕ ಬ್ರೋಕರ್ ಮೋಹನ್ ಕುಮಾರ್ ಪರಿಚಯಿಸಿ, ಆರಂಭದಲ್ಲೇ ಪರಿಹಾರ ಕೊಡಿಸೋದಕ್ಕೆ ಎಕರೆಗೆ 50 ಲಕ್ಷ ಲಂಚಕ್ಕೆ ಬೇಡಿಕೆ ಇಡುತ್ತಾರೆ.
ಈ ಲಂಚವನ್ನು ಮೊದಲಿಗೆ ಮಾತುಕತೆಗೆ ಕರೆದಂತ ಸ್ಥಳದಲ್ಲಿ ಮುಂಗಡವಾಗಿ 50 ಲಕ್ಷ ನೀಡಿದಂತ ಮಹಿಳೆಯಿಂದ ಹಂತ ಹಂತವಾಗಿ ಮಹೇಶ್ ಕುಮಾರ್, ಬ್ರೋಕರ್ ಮೋಹನ್ ಕುಮಾರ್ ಹಾಗೂ ಬಿಡಿಎ ಡೆಪ್ಯೂಟಿ ಕಮೀಷನರ್ ಶಿವರಾಜ್ ಅವರು 1.70 ಕೋಟಿ ಹಣವನ್ನು ವಸೂಲಿ ಮಾಡಿದ್ದಾರೆ. ಹೀಗೆ ಲಂಚ ಪಡೆದಂತ ಇವರು ಯಾರೂ ಮಹಿಳೆಗೆ ಭೂಸ್ವಾದೀನ ಸಂಬಂಧ ಬರಬೇಕಿದ್ದಂತ ಪರಿಹಾರವನ್ನು ಕೊಡಿಸಿಲ್ಲ.
ಇದರಿಂದಾಗಿ ಬೇಸತ್ತ ಮಹಿಳೆ ತಾನು ನೀಡಿದಂತ ಹಣ ಕೇಳಿದ್ದಕ್ಕೆ, ಸುಫಾರಿ ಕೊಟ್ಟು ಹತ್ಯೆ ಮಾಡುವಂತ ಬೆದರಿಕೆ ಹಾಕಿದ್ದರಿಂದ, ಆರೋಪಿಗಳ ವಿರುದ್ಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಹಣ ವಾಪಾಸ್ ಕೊಡಿಸುವಂತೆ, ತಮಗೆ ರಕ್ಷಣೆ ನೀಡುವಂತೆ ದೂರು ನೀಡಿದ್ದಾರೆ. ಈ ದೂರು ಪಡೆದಂತ ಪೊಲೀಸರು, ಐಪಿಸಿ ಸೆಕ್ಷನ್ 1860ರಡಿಯಲ್ಲಿ 506, 406, 409 ಮತ್ತು 420 ಕಲಂಗಳಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.