ಲಿಂಗರಾಜ್ ಮಳವಳ್ಳಿ
741 ಚದರ ಕಿಮೀ ವಿಸ್ತೀರ್ಣದ ಬೆಂಗಳೂರು ನಗರದಲ್ಲಿ 2011ರ ಜನಗಣತಿಯಂತೆ ಸುಮಾರು 85 ಲಕ್ಷ ಮತದಾರರಿದ್ದಾರೆ. 11 ವರ್ಷಗಳಲ್ಲಿ ಬೆಂಗಳೂರು ಸಾಕಷ್ಟು ಬೆಳೆದಿದೆ. ಜನಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ದಶಕದ ಹಿಂದಿನ ಗಣತಿ ಆಧಾರದಲ್ಲಿ ರಚಿಸುವ ವಾರ್ಡ್ ವೈಜ್ಞಾನಿಕವಾಗಿರಲು ಸಾಧ್ಯವಿಲ್ಲ. ಇದು ಒಂದೆಡೆಯಾದರೆ. ಪುನರ್ ವಿಂಗಡಣೆ ವೇಳೆ ‘ಪಕ್ಷ’ಪಾತದಿಂದ ನಡೆದುಕೊಳ್ಳಲಾಗಿದೆ ಎಂದು ಜಯನಗರ ಶಾಸಕಿ ಸೌಮ್ಯರೆಡ್ಡಿ ನೇರವಾಗಿ ಆರೋಪಿಸಿದ್ದಾರೆ. ಅದಕ್ಕೆ ಆಧಾರಗಳನ್ನೂ ಒದಗಿಸಿದ್ದಾರೆ.
ಆಡಳಿತ ಕೇಂದ್ರೀಕರಣವಾಗಿರುವುದನ್ನು ಸಡಿಲಗೊಳಿಸುವ ಉದ್ದೇಶದಿಂದ 1976ರ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಸ್ (ಕೆಎಂಸಿ) ಕಾಯ್ದೆಗೆ ತಿದ್ದುಪಡಿ ತಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡುಗಳ ಸಂಖ್ಯೆಯನ್ನು 198 ವಾರ್ಡುಗಳಿಂದ 243ಕ್ಕೆ ಹೆಚ್ಚಿಸಲಾಗಿದೆ. ನಗರದ ವ್ಯಾಪ್ತಿಯನ್ನು ಹೆಚ್ಚಿಸದೇ ವಾರ್ಡುಗಳ ರಚನೆಯ ಗಾತ್ರವನ್ನು ಕಡಿಮೆ ಮಾಡಲಾಗಿದೆ.
ದೇಶದ ನಾಲ್ಕನೇ ಅತಿದೊಡ್ಡ ಪಾಲಿಕೆಯಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 2019ರಲ್ಲೇ ನಡೆಯಬೇಕಿದ್ದ ಚುನಾವಣೆಯನ್ನು ಕುಂಟು ನೆಪಗಳನ್ನು ಮುಂದೊಡ್ಡಿ ಬರೊಬ್ಬರಿ ಎರಡು ವರ್ಷ ತಳ್ಳಿತ್ತು. ಆದರೆ ಸುಪ್ರೀಂ ಆದೇಶದಿಂದಾಗಿ ಒಲ್ಲದ ಮನಸ್ಸಿಂದ ಚುನಾವಣೆ ನಡೆಸುವ ಅನಿವಾರ್ಯ ನಿರ್ಧಾರಕ್ಕೆ ಸರ್ಕಾರ ಬಂದಿದೆ.
ವಾರ್ಡುಗಳ ಪುನರ್ ವಿಂಗಡಣೆ ಕಸರತ್ತು ಪೂರ್ಣಗೊಳಿಸಿ, ಇದೀಗ ಕೆಟಗರಿ ಕಸರತ್ತು ಶುರುಮಾಡಿಕೊಂಡಿದೆ. ಎಂಟು ವಾರಗಳಲ್ಲಿ ಚುನಾವಣೆ ನಡೆಸಬೇಕಾದ ಗಡುವು ಇರುವುದರಿಂದಾಗಿ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ ವಾರ್ಡ್ಗಳ ರಚನೆ ವೈಜ್ಞಾನಿಕವಾಗಿಲ್ಲ, ಪ್ರಾಯೋಗಿಕವಾಗಿಲ್ಲ, ಭೌಗೋಳಿಕ ರಚನೆ ಅಸಂಬದ್ಧವಾಗಿದೆ, ಒಂದು ಪ್ರದೇಶವನ್ನು ಹಲವು ವಾರ್ಡ್ಗಳಿಗೆ ಹಂಚಲಾಗಿದೆ, ಇದರಿಂದ ವಾರ್ಡ್ನ ನಾಗರಿಕರಿಗೆ ಅನಾನುಕೂಲತೆ ಆಗಲಿದೆ, ವಾರ್ಡ್ ಅಭಿವೃದ್ಧಿ ಯೋಜನೆ ರೂಪಿಸಲು ಇದು ತೊಡಕಾಗಲಿದೆ ಎಂಬ ಹಲವು ದೂರು ಕೇಳಿ ಬಂದಿವೆ. ಹೀಗಾಗಿ ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ಮಾಡಲಾಗುತ್ತಿರುವ ಈ ಮರು ವಿಂಗಡಣೆ, ಅಭಿವೃದ್ಧಿ ಯೋಜನೆ ಜಾರಿಗೆ ಕಂಟಕವಾಗಿ ಪರಿಣಮಿಸಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೀಗ ವಾರ್ಡುಗಳ ಪುನರ್ ವಿಂಗಡಣೆ ಮುಗಿದಿದೆಯಾದರೂ, ಪಾರದರ್ಶಕವಾಗಿ ನಡೆದಿಲ್ಲ, ಪಕ್ಷಪಾತದಿಂದ ಮಾಡಲಾಗಿದೆ, ಸ್ಥಳೀಯ ನಾಗರಿಕರ ಅಭಿಪ್ರಾಯ ಪಡೆದಿಲ್ಲ, ಸ್ಥಳೀಯ ಶಾಸಕರ ಮರ್ಜಿಯಂತೆ ಮರುವಿಂಗಡಣೆ ಮಾಡಲಾಗಿದೆ ಎಂಬ ಆಕ್ಷೇಪವೂ ಬಲವಾಗಿದೆ. 198 ವಾರ್ಡುಗಳಿದ್ದಾಗ ಕೆಲ ವಾರ್ಡುಗಳು 80 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದಲ್ಲಿ, ಕೆಲವು ವಾರ್ಡುಗಳಲ್ಲಿ ಕೇವಲ 25 ಸಾವಿರ ಜನಸಂಖ್ಯೆ ಇತ್ತು. ಜತೆಗೆ ವಿಸ್ತೀರ್ಣದಲ್ಲೂ ಅಸಮಾನತೆ ಇತ್ತು. ಗಡಿಯನ್ನು ಗುರುತಿಸುವಾಗಲೂ ಗೊಂದಲಗಳಿದ್ದವು. ಹಾಗೆಯೇ ಜನಸಂಖ್ಯೆಯನ್ನು ಸರಾಸರಿ ಲೆಕ್ಕ ಹಾಕಿದರೂ ಪ್ರತಿ ವಾರ್ಡ್ 40 ಸಾವಿರ ಮೀರುತ್ತಿತ್ತು. ಹೀಗಾಗಿ ವಾರ್ಡುಗಳ ಮರುವಿಂಗಡಣೆ ಆಗಲೇಕೆಂಬ ಕೂಗು ಕೇಳಿ ಬಂದಿತ್ತು. ಹೀಗಾಗಿ ಕೆಎಂಸಿ 2020 ತಿದ್ದುಪಡಿ ಕಾಯ್ದೆ ರೂಪಿಸಿ ವಾರ್ಡುಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ಎರಡು ವರ್ಷ ಚುನಾವಣೆ ಮುಂದೂಡಿದ್ದಕ್ಕೆ ಕೊಟ್ಟ ಕಾರಣಗಳಲ್ಲಿ ಇದು ಬಲವಾದ ಕಾರಣವಾಗಿತ್ತು!
ನಗರ ತಜ್ಞರು ಮತ್ತು ಬಿ.ಎಸ್.ಪಾಟೀಲ್ ವರದಿಯೂ ಹೇಳುವಂತೆ ವಾರ್ಡ್ನ ಮಿತಿಯನ್ನು 25 ಸಾವಿರ ಜನಸಂಖ್ಯೆಗೆ ಸೀಮಿತಗೊಳಿಸಬೇಕೆನ್ನುವ ಸಲಹೆ ಆಧರಿಸಿ, ಇದೀಗ 2011ರ ಜನಗಣತಿಯಂತೆ ಪ್ರತಿ ವಾರ್ಡ್ 30 ಸಾವಿರ ಜನಸಂಖ್ಯೆಗೆ ರೂಪಿಸಲಾಗಿದೆ ಎನ್ನಲಾಗಿದೆ. ರಾಜಕಾಲುವೆ, ಮುಖ್ಯರಸ್ತೆ, ವಿಧಾನಸಭಾ ಕ್ಷೇತ್ರದ ಗಡಿ ಇತ್ಯಾದಿ ಆಧಾರದಲ್ಲಿ ವಾರ್ಡ್ನ ಗಡಿಗಳನ್ನು ತೀರ್ಮಾನಿಸಬೇಕು ಎಂಬುದಾಗಿತ್ತು. ಆದರೆ ಬಿಜೆಪಿ ಶಾಸಕರ ಅಣತಿಯಂತೆ ಗಡಿಗಳನ್ನು ಗುರುತಿಸಲಾಗಿದೆ ಎಂದು ಗಂಭೀರ ಆರೋಪಗಳು ಎದ್ದುಬಂದಿವೆ.
741 ಚದರ ಕಿಮೀ ವಿಸ್ತೀರ್ಣದ ಬೆಂಗಳೂರು ನಗರದಲ್ಲಿ 2011ರ ಜನಗಣತಿಯಂತೆ ಸುಮಾರು 85 ಲಕ್ಷ ಮತದಾರರಿದ್ದಾರೆ. 11 ವರ್ಷಗಳಲ್ಲಿ ಬೆಂಗಳೂರು ಸಾಕಷ್ಟು ಬೆಳೆದಿದೆ. ಜನಸಂಖ್ಯೆ ಏರಿಕೆಯಾಗಿದೆ. ಹೀಗಾಗಿ ದಶಕದ ಹಿಂದಿನ ಗಣತಿ ಆಧಾರದಲ್ಲಿ ರಚಿಸುವ ವಾರ್ಡ್ ವೈಜ್ಞಾನಿಕವಾಗಿರಲು ಸಾಧ್ಯವಿಲ್ಲ. ಇದು ಒಂದೆಡೆಯಾದರೆ. ಪುನರ್ ವಿಂಗಡಣೆ ವೇಳೆ ‘ಪಕ್ಷ’ಪಾತದಿಂದ ನಡೆದುಕೊಳ್ಳಲಾಗಿದೆ ಎಂದು ಜಯನಗರ ಶಾಸಕಿ ಸೌಮ್ಯರೆಡ್ಡಿ ನೇರವಾಗಿ ಆರೋಪಿಸಿದ್ದಾರೆ. ಅದಕ್ಕೆ ಆಧಾರಗಳನ್ನೂ ಒದಗಿಸಿದ್ದಾರೆ.
ಉದಾಹರಣೆಗೆ, ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರೂ ವಾರ್ಡುಗಳು 39 ಸಾವಿರ ಮತದಾರರನ್ನು ಹೊಂದಿವೆ. ಬಿಜೆಪಿ ಶಾಸಕರು ಪ್ರತಿನಿಧಿಸುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 11 ವಾರ್ಡುಗಳಲ್ಲಿ ತಲಾ 30 ಸಾವಿರ ಮತದಾರರಿದ್ದಾರೆ! ಹೀಗಾಗಿ ಕಾಂಗ್ರೆಸ್ ಶಾಸಕರ ಆರೋಪ ಸುಖಾಸುಮ್ಮನದಲ್ಲ ಎಂಬುದು ಸ್ಪಷ್ಟ.
ವಾರ್ಡ್ ರಚಿಸುವಾಗ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳುವಾಗಲೇ ಅದರ ಭೌಗೋಳಿಕ ವ್ಯಾಪ್ತಿಯನ್ನೂ ಪರಿಗಣಿಸಬೇಕಾಗುತ್ತದೆ. ಪ್ರತಿ ವಾರ್ಡ್ನಲ್ಲಿ ಎಷ್ಟು ಕಿಮೀ ರಸ್ತೆಗಳು ಇವೆ ಎಂಬುದೂ ಮುಖ್ಯವಾಗುತ್ತದೆ. ಆದರೆ ಈ ಅಂಶವನ್ನು ಬಹುತೇಕ ಉಪೇಕ್ಷಿಸಲಾಗಿದೆ. ಉದಾಹರಣೆಗೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾಉ 170 ಕಿಮೀ ಉದ್ದದ ರಸ್ತೆಗಳಿದ್ದು, 7 ವಾರ್ಡುಗಳಿದ್ದವು. ಅದೇ ರೀತಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 21 ಕಿಮೀ ರಸ್ತೆಗಳಿದ್ದು, ಇಲ್ಲಿಯೂ 7 ವಾರ್ಡುಗಳಿದ್ದವು. ಇದರಿಂದಾಗಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗುತ್ತದೆ, ಹೀಗಾಗಿ ಜನಸಂಖ್ಯೆಯ ಜತೆಗೆ ಭೌಗೋಳಿಕ ವ್ಯಾಪ್ತಿಯನ್ನೂ ಪರಿಗಣಿಸಬೇಕೆಂಬ ಮಾರ್ಗಸೂಚಿಯನ್ನು ಇಲ್ಲಿ ಬಹುತೇಕ ಪಾಲಿಸಿಲ್ಲ.
ಒಂದು ಗ್ರಾಮ ಅಥವಾ ಒಂದು ಬಡಾವಣೆ ಒಂದು ವಾರ್ಡ್ನಲ್ಲಿ ಒಳಪಡುವುದು ವೈಜ್ಞಾನಿಕವಾಗಿ ಸರಿಯಾದುದು. ಇಡೀ ಗ್ರಾಮ ಅಥವಾ ಬಡಾವಣೆಯ ಸಮಸ್ಯೆಗಳನ್ನು ಪರಿಹರಿಸಲು ಇದೇ ಕಾರ್ಯಸಾಧು ವಿಧಾನ. ಒಂದು ಬಡಾವಣೆಯನ್ನು ನಾಲ್ಕು ವಾರ್ಡ್ಗಳಿಗೆ ಹಂಚಿದರೆ ನಾಲ್ಕು ಜನ ಪಾಲಿಕೆ ಸದಸ್ಯರು, ನಾಲ್ಕು ಜನ ಇಂಜಿನಿಯರ್, ನಾಲ್ಕು ಆರೋಗ್ಯ ನಿರೀಕ್ಷಕರನ್ನು ಸಂಪರ್ಕಿಸಬೇಕಾಗುತ್ತದೆ. ನಗರ ಯೋಜನೆಯ ಅಧಿಕಾರಿಗಳಿಗೆ ತಿಳಿಯದ ವಿಚಾರವೇನಲ್ಲ! ಆದರೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಆಡಳಿತರೂಢ ಪಕ್ಷದ ಅಣತಿಯಂತೆ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ. ಉದಾಹರಣೆಗೆ ಬೇಗೂರು ವಾರ್ಡ್ಗೆ ಬೇಗೂರಿನ ಮುಕ್ಕಾಲು ಭಾಗ ಪ್ರದೇಶವನ್ನು ಕಾಳೇನ ಅಗ್ರಹಾರ ವಾರ್ಡ್ಗೆ, ಕಾಳೇನ ಅಗ್ರಹಾರ ಗ್ರಾಮದ ಮುಕ್ಕಾಲು ಭಾಗವನ್ನು ಗೊಟ್ಟಿಗೆರೆ ವಾರ್ಡ್ಗೆ ಸೇರ್ಪಡೆ ಮಾಡಿರುವುದನ್ನು ವೈಜ್ಞಾನಿಕ ವಿಧಾನ ಎನ್ನಲು ಸಾಧ್ಯವೇ?
ವಾರ್ಡುಗಳ ಗಡಿ ನಿರ್ಧರಿಸುವಾಗಲೂ ಪಕ್ಷಪಾತದ ಆರೋಪ ಕೇಳಿ ಬಂದಿದೆ. ಉದಾಹರಣೆಗೆ ಹೆಚ್‌ಎಸ್‌ಆರ್ ವಾರ್ಡ್ಗೆ ಈ ಹಿಂದೆ ಬಡಾವಣೆಯ ಏಳೂ ಸೆಕ್ಟರ್‌ಗಳು ಸೇರಿದ್ದವು. ಮರುವಿಂಗಡಣೆ ತರುವಾಯ ಹೆಸರಿಗಷ್ಟೆ ಹೆಚ್‌ಎಸ್‌ಆರ್ ವಾರ್ಡ್ ಆಗಿದ್ದು, ನಾಲ್ಕು ವಾರ್ಡುಗಳಿಗೆ ಹಂಚಲಾಗಿದೆ. ಹೊಸೂರು ರಸ್ತೆ ಪಶ್ಚಿಮಕ್ಕಿರುವ ಸುಮಾರು ನಾಲ್ಕು ಕಿಮೀ ದೂರವಿರುವ ಬೆರಟೇನ ಅಗ್ರಹಾರದವರೆಗೂ ವಿಸ್ತರಿಸಿದೆ! ಹಾಗೆಯೇ ರೂಪೇನ ಅಗ್ರಹಾರ ವಾರ್ಡ್ ಬಿಟಿಎಂ ವಿಧಾನಸಭಾ ಕ್ಷೇತ್ರದ ಗಡಿ ಸಿಲ್ಕ್ಬೋರ್ಡ್ ನಿಂದ ಆರಂಭವಾಗಿ ಆನೇಕಲ್ ವಿಧಾನಸಭಾ ಕ್ಷೇತ್ರದ ಗಡಿ ಸಿಂಗಸAದ್ರದವರೆಗೂ ವಿಸ್ತರಿಸಲಾಗಿದೆ. ಇದೂ ಕೂಡ ಸುಮಾರು 7.4 ಕಿ.ಮೀ. ದೂರವಿದೆ. ಈ ಎರಡೂ ವಾರ್ಡ್ಗಳ ನಕ್ಷೆಗಳು ಒಂದು ರೀತಿಯ ವಿ.ಸಿ.ನಾಲೆಯಂತೆ ಗೋಚರಿಸುತ್ತವೆ. ಮುಸ್ಲಿಂ ಸಮುದಾಯ ಹೆಚ್ಚಿರುವ ಮಂಗಮ್ಮನಪಾಳ್ಯದ ಮದಿನಾ ನಗರವನ್ನು ಮೂರು ವಾರ್ಡ್ಗಳಿಗೆ ಹರಿದು ಪಾಲು ಮಾಡಲಾಗಿದೆ. ಆಶ್ಚರ್ಯವೆಂದರೆ ಹೆಚ್‌ಎಸ್‌ಆರ್ ಬಡಾವಣೆಯ
ಅಪಾರ್ಟ್ಮೆಂಟ್‌ವೊAದರ ಎ&ಬಿ ಬ್ಲಾಕ್‌ಗಳು ಒಂದು ವಾರ್ಡ್ಗೆ ಸೇರ್ಪಡೆಗೊಂಡಿದ್ದರೆ ಸಿ ಬ್ಲಾಕ್ ಅನ್ನು ಮತ್ತೊಂದು ವಾರ್ಡ್ಗೆ ಸೇರಿಸಲಾಗಿದೆ! ಅಲ್ಪಸಂಖ್ಯಾತರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಬಂಡೇಪಾಳ್ಯವನ್ನು ಮೂರು ವಾರ್ಡ್ಗಳಿಗೆ ಹಂಚಲಾಗಿದೆ. ಇಂತಹ ಎಡವಟ್ಟುಗಳು ಯಾವ ಪ್ರಮಾಣದಲ್ಲಿವೆ ಎಂದರೆ ವಾರ್ಡ್ ಮರು ವಿಂಗಡಣೆ ಕುರಿತು 233 ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಹೇಳಲಾಗುತ್ತಿದೆ. ಆದರೆ ಆನ್‌ಲೈನ್ ಮೂಲಕ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ!
ಇಂತಹ ಕಸರತ್ತಿನ ಮಸಲತ್ತೇನೆಂದರೆ ಬಿಜೆಪಿ ಗೆಲ್ಲಲು ಸಾಧ್ಯವಾಗುವಂತೆ ತನ್ನ ಪ್ರತಿಸ್ಪರ್ಧಿ ಪಕ್ಷದ ಮತಗಳು ಹರಿದು ಹಂಚಿಹೋಗುವAತೆ ಮಾಡುವ ಯತ್ನದ ಫಲವಾಗಿ ಇಂತಹವುಗಳು ಸಂಭವಿಸಿವೆ ಎಂಬ ಗುರುತರ ದೂರು ದಾಖಲಾಗಿವೆ. ದೂರನ್ನು ಪುಷ್ಠೀಕರಿಸುವಂತೆ ವಾರ್ಡುಗಳ ಅಪ್ರಾಯೋಗಿಕ ಮರುವಿಂಗಡಣೆಯ ಎಡವಟ್ಟುಗಳು ದಂಡಿಯಾಗಿ ಸಿಗುತ್ತವೆ.