ಬಿಬಿಎಂಪಿ ಕಸದ ಲಾರಿಗೆ ಇನ್ನೆಷ್ಟು ಬಲಿ ಬೇಕು..?

ಗುರುರಾಜ ದೇಸಾಯಿ

ಪದೇಪದೇ ಸಿಲಿಕಾನ್‌ ಸಿಟಿಯಲ್ಲಿ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಪದೇ ಪದೇ ಅಪಘಾತ ಸಂಭವಿಸುತ್ತಿದೆ. ವಾರಕ್ಕೊಂದರಂತೆ ದುರ್ಘಟನೆಗಳು ನಡೆಯುತ್ತಿವೆ. ಬಿಬಿಎಂಪಿ ಕಸದ ವಾಹನಗಳು ʻಕಿಲ್ಲರ್‌ ಲಾರಿಗಳುʼ ಎಂಬ ಕುಖ್ಯಾತಿಯನ್ನು ಪಡೆದಿವೆ.  ಬಿಬಿಎಂಪಿ ಲಾರಿಗಳನ್ನು ನೋಡಿದರೆ ಭಯವಾಗುವ ವಾತಾವರಣ ಸೃಷ್ಟಿಯಾಗಿದೆ. ಒಂದೇ ತಿಂಗಳಲ್ಲಿ ನಾಲ್ಕು ಜನರನ್ನು ಬಿಬಿಎಂಪಿ ಲಾರಿಗಳು ಬಲಿ ಪಡೆದಿವೆ ಎಂದರೆ ರಸ್ತೆಯಲ್ಲಿ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಓಡಾಡುವುದಾದರೂ ಹೇಗೆ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಬರುತ್ತಿದೆ.

ಬೆಂಗಳೂರಿನಲ್ಲಿ ಕಸದ ಲಾರಿಗಳು ಹೇಗಂದರೆ ಹಾಗೇ ಚಲಿಸುವ ಮೂಲಕ ಜನರ ಪ್ರಾಣವನ್ನು ತೆಗೆಯುತ್ತಿವೆ. ಬಿಬಿಎಂಪಿಯ ಅಧಿಕೃತ ಮಾಹಿತಿಯ ಪ್ರಕಾರ ಒಂದು ತಿಂಗಳಲ್ಲಿ ನಾಲ್ಕರಿಂದ ಐದು ಅಪಘಾತಗಳು ಸಂಭವಿಸುತ್ತಿವೆ. ಈ ಅಪಘಾತಗಳು ಸಂಭವಿಸಿದಾಗಲೆಲ್ಲ ಜನ ಆಕ್ರೋಶ ವ್ಯಕ್ತ ಪಡಿಸುತ್ತಲೇ ಇದ್ದಾರೆ. ಆದರೆ ಬಿಬಿಎಂಪಿ ಮಾತ್ರ ಇನ್ನೂ ಎಚ್ಚುತ್ತುಕೊಳ್ಳುತ್ತಿಲ್ಲ.  ಸುರಕ್ಷತೆ ಇಲ್ಲದ ವಾಹನಗಳು, ತರಬೇತಿ ಇಲ್ಲದ ಚಾಲಕರು, ರಸ್ತೆ ನಿಯಮಗಳ ಉಲ್ಲಂಘನೆಯಂತಹ ಅಂಶಗಳು ಅಪಘಾತಕ್ಕೆ ಪ್ರಮುಖ ಕಾರಣವಾಗಿ ಸಿಗುತ್ತಿವೆ.

ಕಿಲ್ಲರ್‌ ಬಿಬಿಎಂಪಿ :  ಕಳೆದ ಮಾ.21 ರಂದು ಶಾಲೆ ಹೋಗುವ 14 ವರ್ಷದ ಬಾಲಕಿ ಅಕ್ಷಯಾ ರಸ್ತೆ ದಾಟುತ್ತಿದ್ದ ವೇಳೆ ಚಾಲಕ ನಿಯಂತ್ರಣ ತಪ್ಪಿದ ಪಾಲಿಕೆ ಕಸದ ವಾಹನ ಆಕೆಯ ಮೇಲೆ ಹರಿದ ಪರಿಣಾಮ ಸಾವನ್ನಪ್ಪಿದ್ದಳು. ಈ ಘಟನೆಗೆ ಪರಿಹಾರ ನೀಡಿ ಆಕೆಯ ಪೋಷಕರನ್ನು ಸಮಾಧಾನ ಪಡಿಸಿದ ಬೆನ್ನಲ್ಲೆ ಬಾಗಲೂರಿನಲ್ಲಿ ಮಾ.31ರಂದು ರೇವಾ ಕಾಲೇಜ್‌ ಬಳಿ ಬಾಗಲೂರು ನಿವಾಸಿ ರಾಮಯ್ಯ ಮೇಲೆ ಕಸದ ಲಾರಿ ಹರಿದು ಮೃತಪಟ್ಟಿದ್ದರು.

ಈ ಎರಡೂ ಘಟನೆಗಳು ಮಾಸುವ ಮುನ್ನವೇ ಏಪ್ರಿಲ್‌ 18 ರಂದು  ನಾಯಂಡಹಳ್ಳಿಯಲ್ಲಿ ಕಸದ ಲಾರಿ ಹರಿದು ಪದ್ಮಿನಿ ಸಾವನ್ನಪ್ಪಿದ್ದಾರೆ.  ಬಿಬಿಎಂಪಿ ಕಸದ ಲಾರಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಮೇ 14  ರಂದು ಥಣಿ ಸಂದ್ರ ಮುಖ್ಯ ರಸ್ತೆಯಲ್ಲಿ ಕಸದ ಲಾರಿ ಹರಿದು ಡೆಲಿವರಿ ಬಾಯ್ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆ ಸುರಪುರ ಮೂಲದ ದೇವಣ್ಣ(25) ಮೃತಪಟ್ಟ ವ್ಯಕ್ತಿ. ಬೈಕ್‌ಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿದ್ದಾರೆ. ಜು.9ರಂದು ನಾಗರಬಾವಿ ರಿಂಗ್ ರಸ್ತೆ ಸಮೀಪದ ಸರ್ವೀಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿತ್ತು. ಮಾನಸ ನಗರ ಬಸ್ ನಿಲ್ದಾಣ ಕಡೆಯಿಂದ ಚಂದ್ರಾಲೇಔಟ್ ಕಡೆಗೆ ತೆರಳುತ್ತಿದ್ದ ಬಿಬಿಎಂಪಿ ಕಸದ ಲಾರಿ, ಮುಂದೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಮರಿಯಪ್ಪನಪಾಳ್ಯದ ವಿಜಯಕಲಾ (37) ಅದೇ ದಿನ ಚಿಕಿತ್ಸೆ ಲಿಸದೆ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಪತಿ ಯೋಗೇಂದ್ರ (41) ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿತ್ತಾದರೂ ಗುರುವಾರ ಅಸುನೀಗಿದ್ದಾರೆ.

ಈ ಎಲ್ಲಾ ಸಾವುಗಳು ಸಂಭವಿಸಿದ ನಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಪದ್ಮಿನಿಯವರು ಮೃತರಾದ ನಂತರ ಅವರ ಮಕ್ಕಳು ಅನಾಥರಾಗಿದ್ದಾರೆ. ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡ ಮಕ್ಕಳ ಸಂಕಷ್ಟವನ್ನು ಕೇಳುವವರು ಯಾರೂ ಇಲ್ಲದಂತಾಗಿದೆ.  ದುಡಿಮೆಗೆಂದು ವಲಸೆ ಬಂದಿದ್ದ ದೇವಣ್ಣ ಸಾವಿನಿಂದ ಕುಟುಂಬ ಬೀದಿಗೆ ಬಿದ್ದಿದೆ. ವಿಜಯಕಲಾ ಮತ್ತು ಯೋಗೇಂದ್ರ ದಂಪತಿ ಸಾವಿನ ನಂತರ ಅವರ ಕುಟುಂಬ ಕಣ್ಣಿರಿನಲ್ಲಿ ಕೈ ತೆಳೆಯುವಂತಾಗಿದೆ. ಬಿಬಿಎಂಪಿ ಒಂದಿಷ್ಟು ಪರಿಹಾರ ಘೋಷಿಸಿದ್ದು ಬಿಟ್ಟರೆ ಅವರಿಗೆ ಯಾವ ಸಹಾಯವೂ ಸಿಕ್ಕಿಲ್ಲ. ಘೋಷಣೆಯಾದ ಹಣವೂ ಇನ್ನೂ ಅವರನ್ನು ತಲುಪಿಲ್ಲ ಎಂಬ ಮಾಹಿತಿ ಇದೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಈ ಲಿಂಕ್ ಬಳಸಿ

ಪಾದಚಾರಿ ಮಾರ್ಗದ ಕೊರತೆ : ಪಾದಚಾರಿಗಳಿಗೆ ನಗರದಲ್ಲಿ ಪ್ರಾಮುಖ್ಯತೆಯೇ ಇಲ್ಲವಾಗಿದೆ. ರಸ್ತೆಗಳೆಂದರೆ ಕೇವಲ ವಾಹನಗಳ ಸಂಚಾರಕ್ಕೆ ಸೀಮಿತ ಎಂಬಂತೆ ಆಗಿದೆ. ಯಾವುದೇ ವಾಹನದಲ್ಲಿ ಹೋಗುವವರು ಮೊದಲಿಗೆ ಮತ್ತು ಕೊನೆಗೆ ಪಾದಚಾರಿಗಳೇ ಆಗಿರುತ್ತಾರೆ. ಮಹಿಳೆಯರು, ಮಕ್ಕಳು, ವೃದ್ಧರು, ಅಂಗವಿಕಲರು ರಸ್ತೆ ದಾಟುವುದೇ ಕಷ್ಟವಾಗಿದೆ. ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ(ಸಿಬಿಡಿ) ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ಮಾತ್ರ ಪಾದಚಾರಿ ಮಾರ್ಗಗಳು ಉತ್ತಮವಾಗಿವೆ. ನಗರ ಹೊರ ವಲಯದಲ್ಲಿ ವಿಸ್ತಾರಗೊಳ್ಳುತ್ತಿದೆ. ಜಯನಗರ, ಬಸವನಗುಡಿ, ಮಲ್ಲೇಶ್ವರದಂತೆ ಯೋಜನಾಬದ್ಧವಾಗಿ ಬೆಳೆಯುತ್ತಿಲ್ಲ. ಹಳ್ಳಿಗಳೇ ನಗರವಾಗಿ ಮಗ್ಗಲು ಬದಲಿಸುತ್ತಿವೆ. ಅಲ್ಲಿಗೆ ಪೂರಕವಾದ ಬೇರೆ ರೀತಿಯ ಪಾದಚಾರಿ ಮಾರ್ಗಗಳನ್ನು ನಿರ್ಮಿಸುವತ್ತ ಗಮನ ಹರಿಸಬೇಕಿದೆ. ರಸ್ತೆ ಅಭಿವೃದ್ಧಿ ಬದಲು ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಮೊದಲ ಆದ್ಯತೆ ದೊರೆಯಬೇಕಿದೆ. ಅದೇ ರೀತಿ ನಗರದಲ್ಲಿ ವಾಹನಗಳ ವೇಗಕ್ಕೂ ಕಡಿವಾಣ ಹಾಕಬೇಕಿದೆ.

ಚಾಲಕರಿಗೆ ತರಬೇತಿ ಅಗತ್ಯ : ಬಿಬಿಎಂಪಿ ಕಸದ ಲಾರಿಗಳನ್ನು ಓಡಿಸುವ ಚಾಲಕರು ಪಾಲಿಕೆಯ ಗೈಡ್‌ಲೈನ್ಸ್ ಅನ್ನು ಚಾಲಕರು ಗಾಳಿಗೆ ತೂರಿದ್ದಾರಾ? ಎನ್ನುವ ಮಾತುಗಳು ಕೇಳಿ ಬರುತ್ತಿವೆ. ರಸ್ತೆಯಲ್ಲಿ ನಿಧಾನವಾಗಿ ಚಾಲನೆ ಮಾಡುವ ಬಗ್ಗೆ ವಿಶೇಷ ತರಬೇತಿ ಕೊಡುವ ಅಗತ್ಯವಿದೆ. ಬೇರೆ ವಾಹನಗಳು ಮತ್ತು ಜನರ ಪ್ರಾಣ ಲೆಕ್ಕಿಸದೆ ಚಾಲನೆ ಮಾಡುವವರ ಪರವಾನಗಿ ರದ್ದುಗೊಳಿಸಬೇಕು. ಅಲ್ಲದೇ ಲಾರಿಗಳು ಸುಸ್ಥಿತಿಯಲ್ಲಿ ಇವೆಯೇ ಎಂಬುದನ್ನೂ ಪರಿಶೀಲಿಸಬೇಕು. ಎಲ್ಲಾ ಕಾಂಪ್ಯಾಕ್ಟರ್, ಟಿಪ್ಪರ್​ಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಿರುವ ಕುರಿತು ಸಾರಿಗೆ ಪ್ರಾಧಿಕಾರ ದೃಢೀಕರಿಸಬೇಕು. ಈ ಬಗ್ಗೆ ಕಾರ್ಯಪಾಲಕ ಅಭಿಯಂತರರು ಹಾಗೂ ಟ್ರಾಫಿಕ್ ಪೊಲೀಸರೊಂದಿಗೆ ಚೆಕ್ಕಿಂಗ್ ಕೈಗೊಂಡು ವಾಹನ ಸಂಚಾರ ಯೋಗ್ಯವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು.‌

ಇದನ್ನೂ ಓದಿಒಂದು ಪ್ರದೇಶ ನಾಲ್ಕು ವಾರ್ಡುಗಳಿಗೆ ಹಂಚಿಕೆ! ಬಿಬಿಎಂಪಿ ವಾರ್ಡ್ ಮರುವಿಂಗಡಣೆಯ ಎಡವಟ್ಟುಗಳು

ಚಾಲಕರ ಬಳಿ ಚಾಲನಾ ಪರವಾನಗಿ ಇದೆಯೇ ಎಂಬುದನ್ನು ಮೊದಲು ಪರೀಕ್ಷಿಸಬೇಕಿದೆ. ಸಾಮಾನ್ಯವಾಗಿ ಚಾಲಕರು ಬೈಕ್, ಕಾರು ಮತ್ತು ಟ್ರಾಕ್ಟರ್ ಓಡಿಸಬಹುದು. ಎಲ್‌ಎಂವಿ & ಟ್ರ್ಯಾಕ್ಟರ್ ಚಾಲನೆ ಲೈಸೆನ್ಸ್ ಮಾತ್ರ ಹೊಂದಿದ್ದಾನೆ. ಹೆವಿ ಮೋಟಾರ್ ವೆಹಿಕಲ್ ಲೈಸೆನ್ಸ್ ಹೊಂದಿಲ್ಲ ಎಂಬ ಮಾಹಿತಿ ಇದೆ. ಪ್ರಮುಖವಾಗಿ ಕಸದ ಲಾರಿಗಳು ಫ್ಲೈ ಓವರ್​ಗಳ ಅಕ್ಕಪಕ್ಕದಲ್ಲಿ ಬಹಳ ವೇಗವಾಗಿ ಸಂಚರಿಸುತ್ತವೆ.‌ ಇಂತಹ ಜಾಗದಲ್ಲಿ ಮಾರ್ಗ ಮಧ್ಯೆಯ ರಸ್ತೆ ವಿಭಜಕದ ಎತ್ತರ ಏರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವೇಗದ ಮಿತಿಗೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಬೇಕಿದೆ. ಒಟ್ಟಾರೆ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರ ಪ್ರಾಣ ರಕ್ಷಣೆಯಾಗಬೇಕು.

ವೇಗಕ್ಕೆ ನಿಯಂತ್ರಣವೇ ಇಲ್ಲದೆ ಲಾರಿ ಚಾಲನೆ ಮಾಡುವುದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರಿಗೆ ಪ್ರಾಣಕ್ಕೆ ಬೆಲೆಯೇ ಇಲ್ಲವಾಗಿದೆ. ಬಿಬಿಎಂಪಿ ಚಾಲಕರ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಜನ ಕಾನೂನು ಕೈಗೆತ್ತಿಕೊಳ್ಳುತ್ತಾರೆ. ಅದಕ್ಕೆ ಅವಕಾಶ ಆಗದಂತೆ ಬಿಬಿಎಂಪಿ ಚಾಲಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಬೇಕು ಮತ್ತು ಸುಸ್ಥಿತಿಯಲ್ಲಿರುವ ಲಾರಿಗಳನ್ನಷ್ಟೇ ರಸ್ತೆಗೆ ಇಳಿಸಬೇಕು. ಪಾದಚಾರಿಗಳು ರಸ್ತೆ ದಾಟಲು ಮತ್ತು ರಸ್ತೆ ಬದಿಯಲ್ಲಿ ಸುರಕ್ಷಿತವಾಗಿ ನಡೆದು ಸಾಗಲು ಅನುಕೂಲ ಆಗುವಂತೆ ಮಾರ್ಗಗಳನ್ನು ಕಲ್ಪಿಸಬೇಕು ಎನ್ನುತ್ತಾರೆ ಬಸವನಗುಡಿಯ ಅಟೋ ಡ್ರೈವರ್‌ ರಾಘವೇಂದ್ರ.

ವಾಹನ ಚಾಲಕರು ಜೋರಾಗಿ ವಾಹನವನ್ನು ಚಲಾಯಿಸುತ್ತಾರೆ. ಶಾಲಾ – ಕಾಲೇಜು ಇದೆ ಎಂದು ಗೊತ್ತಿದ್ದರೂ ಈ ರೀತಿ ಓಡಿಸುತ್ತಾರೆ. ಬಹುಷಃ ತರಬೇತಿ ಇಲ್ಲದ ಚಾಲಕರು ಇಲ್ಲವೆ ಕುಡಿದು ವಾಹನ ಚಲಾಯಿಸುವ ಚಾಲಕರ ಸಂಖ್ಯೆ ಹೆಚ್ಚಿರುವ ಕಾರಣ ಇಂತಹ ಅಪಘಾತಗಳು ನಡೆಯುತ್ತಿವೆ. ಕೇವಲ ಪರಿಹಾರ ನೀಡಿದರಷ್ಟೆ ಸಾಲದ, ಅವರ ಮೇಲೆ ಅವಲಂಬಿತರಾಗಿದ್ದ ಕುಟುಂಬಕ್ಕೆ ಕೆಲಸ ನೀಡುವುದು ಹಾಗೂ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡುವ ಯೋಜನೆಗಳು ಜಾರಿಗೆ ಬರಬೇಕು ಮುಖ್ಯವಾಗಿ ಇಂತಹ ಅಪಘಾತಗಳು ನಡೆಯದಂತೆ ಬಿಬಿಎಂಪಿ ಎಚ್ಚರಿಕೆ ವಹಿಸಬೇಕು ಎಂದೆನ್ನುತ್ತಾರೆ ಖಾಸಗಿ ಶಾಲಾ ಶಿಕ್ಷಕಿ ಜಿ. ರೂಪಾ.

ನಗರ ಪ್ರದೇಶದಲ್ಲಿ ವೇಗಕ್ಕೆ ನಿಯಂತ್ರಣವೇ ಇಲ್ಲದೆ ಲಾರಿ ಚಾಲನೆ ಮಾಡುವುದರಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಜನರಿಗೆ ಪ್ರಾಣಕ್ಕೆ ಬೆಲೆಯೇ ಇಲ್ಲವಾಗಿದೆ. ಬಿಬಿಎಂಪಿ ಚಾಲಕರ ನಿರ್ಲಕ್ಷ್ಯ ಇದೇ ರೀತಿ ಮುಂದುವರಿದರೆ ಜನ ಕಾನೂನು ಕೈಗೆತ್ತಿಕೊಳ್ಳುತ್ತಾರೆ. ಅದಕ್ಕೆ ಅವಕಾಶ ಆಗದಂತೆ ಚಾಲಕರಿಗೆ, ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಬೇಕು ಮತ್ತು ಸುಸ್ಥಿತಿಯಲ್ಲಿರುವ ಲಾರಿಗಳನ್ನಷ್ಟೇ ರಸ್ತೆಗೆ ಇಳಿಸಬೇಕು. ಪಾದಚಾರಿಗಳು ರಸ್ತೆ ದಾಟಲು ಮತ್ತು ರಸ್ತೆ ಬದಿಯಲ್ಲಿ ಸುರಕ್ಷಿತವಾಗಿ ನಡೆದು ಸಾಗಲು ಅನುಕೂಲ ಆಗುವಂತೆ ಮಾರ್ಗಗಳನ್ನು ಕಲ್ಪಿಸಲು ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *