ಸರಕಾರದ ತರಾತುರಿ ನಿರ್ಧಾರಕ್ಕೆ ಕಾಂಗ್ರೆಸ್, ಸಿಪಿಐಎಂ, ಅಮ್ ಆದ್ಮಿ ಪಕ್ಷಗಳ ವಿರೋಧ
ಬೆಂಗಳೂರು: ಬಿಬಿಎಂಪಿ ವಾರ್ಡ್ ಗಳನ್ನು 243 ಕ್ಕೆ ಏರಿಕೆ ಮಾಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಸೂದೆ-2020 ನ್ನು ಕರ್ನಾಟಕ ಸರ್ಕಾರ ನಿನ್ನೆ ನಡೆದ ಅಧಿವೇಶನದಲ್ಲಿ ಅಂಗೀಕರಿಸಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ಅನುಪಸ್ಥಿತಿಯಲ್ಲಿ ಮಸೂದೆ ಅಂಗೀಕಾರಗೊಂಡಿದೆ. ಬಿಬಿಎಂಪಿ ಮಸೂದೆ 2020 ನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಮಂಡಿಸಿದರು. ಈ ಮಸೂದೆಯ ಉದ್ದೇಶ ಬೆಂಗಳೂರಿನ 198 ವಾರ್ಡ್ ಗಳನ್ನು 243 ಕ್ಕೆ ಏರಿಕೆ ಮಾಡುವುದಷ್ಟೆ ಅಲ್ಲದೇ ಬಿಬಿಎಂಪಿಯ ಸರಹದ್ದಿನಲ್ಲಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳನ್ನೂ ಬಿಬಿಎಂಪಿಗೆ ಒಳಗೊಳ್ಳುವಂತೆ ಮಾಡುವುದಾಗಿದೆ ಎಂದು ಹೇಳಿದ್ದಾರೆ.
ಈ ಕಾಯ್ದೆಯು ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿರುವ ಪ್ರದೇಶಗಳನ್ನು ಕನಿಷ್ಟ 1 ಕಿ.ಮೀ ವರೆಗೂ ಸೇರಿಸಿಕೊಂಡು, ಎಲೆಕ್ಟ್ರಾನಿಕ್ ಸಿಟಿ, ಮಹದೇವಪುರದ ಹೊರವಲಯದಲ್ಲಿರುವ ಕೆಲವು ಐಟಿ ಪಾರ್ಕ್ ಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತೆಗೆದುಕೊಂಡು ಅದರ ಆದಾಯ ಹೆಚ್ಚಿಸುವಂತೆ ಮಾಡುವುದಕ್ಕೂ ಸಹಕಾರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಮೇಯರ್ ಹಾಗೂ ಉಪ ಮೇಯರ್ ಅವರ ಅಧಿಕಾರಾವಧಿಯನ್ನು ಒಂದು ವರ್ಷದಿಂದ 2 ವರೆ ವರ್ಷಕ್ಕೆ ಏರಿಕೆ ಮಾಡಲಾಗಿದೆ ಎಂದೂ ಮಾಧುಸ್ವಾಮಿ ಮಸೂದೆ ಯಲ್ಲಿನ ಪ್ರಸ್ಥಾಪಿತ ವಿಚಾರಗಳನ್ನು ತಿಳಿಸಿದ್ದಾರೆ. ಪ್ರತಿ ವಿಧಾನಸಭಾ ವ್ಯಾಪ್ತಿಗೂ ಈಗ 6-8 ವಾರ್ಡ್ ಗಳಿದ್ದು ಇನ್ನು ಮುಂದೆ 3-4 ವಾರ್ಡ್ ಗಳಷ್ಟೇ ಇರಲಿದ್ದು, ಆಡಳಿತಕ್ಕೆ ಸುಲಭವಾಗಲಿದೆ. ಝೋನ್ ಗಳ ಸಂಖ್ಯೆಯನ್ನು 8-15 ಕ್ಕೆ ಏರಿಕೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ಬಿಬಿಎಂಪಿಯ ಹೊಸ ವ್ಯಾಪ್ತಿಗೆ ಗ್ರಾಮ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗಳನ್ನೂ ಸೇರಿಸಿಕೊಳ್ಳುವುದು ಮಸೂದೆಯ ಪ್ರಮುಖ ಪ್ರಸ್ಥಾಪಿತ ವಿಷಯವಾಗಿದೆ.
ಮಸೂದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಸದನದಲ್ಲಿ ವಿಪಕ್ಷಗಳ ಗೈರಿನಲ್ಲಿ ಈ ರೀತಿಯ ಬಿಲ್ ಗಳನ್ನು ಪಾಸು ಮಾಡಿಕೊಳ್ಳುವ ಮೂಲಕ ಬಿಜೆಪಿ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸುತ್ತಿದೆ. ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಅದೊಂದು ಜನವಿರೋಧಿ ಸರಕಾರವಾಗಿದೆ. ವಿಧೇಯಕವನ್ನು ಪರಾಮರ್ಶೆಗೆ ಒಳಪಡಿಸಬೇಕು, ತಜ್ಞರ ಅಭಿಪ್ರಾಯವನ್ನು ಪಡೆದು ವಿಕೇಂದ್ರೀಕರಣಕ್ಕೆ ಪೂರಕವಾದ ಮಸೂದೆಯನ್ನು ಸಿದ್ಧಪಡಿಸಬೇಕು ಎಂದು ಕಾಂಗ್ರೆಸ್ ಶಾಸಕ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಸೂದೆಯನ್ನು ಅಂಗೀಕಾರ ಮಾಡಲು ಬಿಜೆಪಿ ತರಾತುರಿಯಲ್ಲಿ ಮುಂದಾಗಿದ್ದು ಖಂಡನೀಯ ಎಂದು ಸಿಪಿಐಎಂ ಆರೋಪಿಸಿದೆ. ವಾರ್ಡ್ ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು ಎನ್ನುವುದು ಬಿಜೆಪಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ರಾಜಕೀಯ ಹಿತಾಸಕ್ತಿ ಎದ್ದು ಕಾಣುತ್ತದೆ. ತನ್ನ ವಿರುದ್ದ ಮತ ಹಾಕುವವರನ್ನು ಒಂದು ಕಡೆ, ತನ್ನ ಪರವಾಗಿ ಮತ ಹಾಕುವವರನ್ನು ಒಂದು ಕಡೆ ಸೇರಿಸುವ ಅಪಾಯ ಇದೆ. ಮೇಯರ್ ಅವಧಿ ಐದು ವರ್ಷಗಳು ಎಂದು ಕನ್ನಡ ಪ್ರತಿಯಲ್ಲಿದ್ದರೆ, ಇಂಗ್ಲೀಷ್ ನಲ್ಲಿ 30 ತಿಂಗಳು ಎಂದಿದೆ. ಸರಕಾರದ ಅವಸರದ ನಡೆಗೆ ಈ ಗೊಂದಲವೆ ಸಾಕ್ಷಿಯಾಗಿದೆ. ಬೆಂಗಳೂರು ನಗರ ಅಭಿವೃದ್ಧಿಯಾಗಬೇಕಾದರೆ, ನಾಗರಿಕ ಸ್ನೇಹಿಯಾಗಿ ಇರಬೇಕಾದರೆ ಬಿ.ಎಸ್ ಪಾಟೀಲ್ ರವರು ಕೊಟ್ಟಿರುವ ವರದಿಯನ್ನು ಜಾರಿ ಮಾಡಬೇಕು. ಚಿಕ್ಕಾದಾಗಿ, ಚೊಕ್ಕದಾಗಿ ಕಾಣಬೇಕಾದರೆ ಬಿಬಿಎಂಪಿಯನ್ನು ಐದು ಮಹಾನಗರ ಪಾಲಿಕೆಗಳನ್ನಾಗಿ ಮಾಡಬೇಕು ಎಂದು ಸಿಪಿಐಎಂ ನ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಕೆ.ಎನ್. ಉಮೇಶ್ ತಿಳಿಸಿದ್ದಾರೆ.
ಚುನಾವಣೆಯನ್ನು ಮುಂದುಡೂವುದಕ್ಕಾಗಿ ಈ ಮಸೂದೆಯ ಅಸ್ತ್ರವನ್ನು ಬಳಸಲಾಗುತ್ತಿದೆ ಎಂದು ಅಮ್ ಆದ್ಮಿ ಪಾರ್ಟಿ ಆರೋಪಿಸಿದೆ. ಈ ಬಾರಿಯ ಬಿಬಿಎಂಪಿಯಲ್ಲಿ ಸೋಲುವ ಭಯದಿಂದ ಬಿಜೆಪಿ ಈ ನಿರ್ಧಾರ ಮಾಡಿದೆ. ಸಹಜವಾಗಿ ವಾರ್ಡಗಳ ಸಂಖ್ಯೆ ಹೆಚ್ಚಳವಾದರೆ ವಾರ್ಡ್ ಗಳಿಗೆ ಮೀಸಲಾತಿಯನ್ನು ನಿಗದಿ ಪಡಿಸಬೇಕಾಗುತ್ತದೆ. ಅದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ ಹಾಗಾಗಿ ಈ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದಿರುವುದು ಬಿಜೆಪಿಯವರ ಪುಕ್ಕಲುತನ ತೋರಿಸುತ್ತದೆ ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದ್ದಾರೆ.