ಬೆಂಗಳೂರು: ನಾಳೆಯಿಂದ ಆರಂಭವಾಗಿ ಹತ್ತು ದಿನಗಳ ಕಾಲ ನಡೆಯಲಿರುವ ನಾಡಹಬ್ಬ ದಸರಾ ಕಾರ್ಯಕ್ರಮದಲ್ಲಿ ದುರ್ಗಾ ದೇವಿಯ ಆರಾಧನೆ ನಡೆಯಲಿದೆ. ಬೆಂಗಳೂರು ನಗರದಲ್ಲಿಯೂ ವಿವಿದೆಡೆ ಆಚರಣೆಗಳು ನಡೆಯುತ್ತವೆ. ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಗಮನದಲ್ಲಿಟ್ಟುಕೊಂಡು ಹಬ್ಬ ಆಚರಣೆ ಮಾಡುವಂತೆ ಬಿಬಿಎಂಪಿ ಸೂಚನೆ ನೀಡಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ನೂತನ ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದು, ಅಕ್ಟೋಬರ್ 11ರಿಂದ 15ರವರೆಗೆ ದುರ್ಗಾ ಉತ್ಸವವನ್ನು ನಡೆಸಬೇಕೆಂದು ನಾಗರಿಕರಿಗೆ ಸೂಚನೆ ನೀಡಲಾಗಿದೆ. ಈ ಬಾರಿ ನವರಾತ್ರಿಯು ಅಕ್ಟೋಬರ್ 7 ರಿಂದ ಆರಂಭವಾಗುತ್ತದೆ.
ಇದನ್ನು ಓದಿ: ದಸರಾ ಆಚರಣೆ : ಮೈಸೂರು ಮತ್ತು ರಾಜ್ಯದ ಇತರ ಭಾಗಗಳಿಗೆ ಪ್ರತ್ಯೇಕ ಮಾರ್ಗಸೂಚಿ
ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೂ ಸಹ ಇಂತಹ ಸಂದರ್ಭದಲ್ಲಿ ಸರಳ ರೀತಿಯಲ್ಲಿ ಹಬ್ಬವನ್ನು ಆಚರಿಸಲು ಬಿಬಿಎಂಪಿ ಸೂಚಿಸಿದೆ. ಜನತೆ ಮೈಮರೆತು ಕೊರೊನಾ ಹರಡುವಿಕೆಯಾಗದಂತೆ ತಡೆಯೊಡ್ಡಬೇಕಾಗಿದೆ ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕಾ ಕ್ರಮವನ್ನು ವಹಿಸಿ ನವರಾತ್ರಿ ಆಚರಣೆಗೆ ಕೆಲವು ನಿರ್ಬಂಧಗಳನ್ನು ಹೇರಿದೆ.
ಹೊಸ ಮಾರ್ಗಸೂಚಿಯಲ್ಲಿರುವ ನಿರ್ಬಂಧಗಳು
* ದೇವಿ ವಿಗ್ರಹದ ಗಾತ್ರ ನಾಲ್ಕು ಅಡಿಗಳಿಗಿಂತ ಹೆಚ್ಚಿರಬಾರದು.
* ವಿಗ್ರಹ ಪ್ರತಿಷ್ಠಾಪನೆಗೆ ಮುನ್ನ ವಿಗ್ರಹಗನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು.
* ಆಯಾ ವಲಯದ ಜಂಟಿ ಆಯುಕ್ತರ ಅನುಮತಿಯೊಂದಿಗೆ ಪ್ರತಿ ವಾರ್ಡ್‌ಗೆ ಕೇವಲ ಒಂದು ವಿಗ್ರಹ ಸ್ಥಾಪನೆ ಮಾಡಬೇಕು.
* ಪ್ರಾರ್ಥನೆ ಸಮಯದಲ್ಲಿ 50ಕ್ಕಿಂತಲೂ ಹೆಚ್ಚಿನ ಜನರಿಗೆ ಅನುಮತಿ ನೀಡಲಾಗಿಲ್ಲ.
* ಸಿಹಿ ತಿಂಡಿಗಳು, ಹಣ್ಣುಗಳು ಹಾಗೂ ಹೂವುಗಳ ವಿತರಣೆಯನ್ನು ನಿಷೇಧಿಸಲಾಗಿದೆ.
* ಸಂಘದ ವ್ಯವಸ್ಥಾಪಕರು ಕೊರೊನಾ ಸೂಕ್ತ ನಡವಳಿಕೆ ಕುರಿತು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸುವತ್ತ ಗಮನ ಹರಿಸಬೇಕು.
* ಸರಳ ಪ್ರಾರ್ಥನೆ ಹಾಗೂ ಪುನಸ್ಕಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
* ಸಿಂಧೂರ್ ಖೇಲಾ ಆಚರಣೆಯಲ್ಲಿ ಒಂದು ಬಾರಿಗೆ 10 ಜನರಿಗೆ ಮಾತ್ರ ಅವಕಾಶ ನೀಡಬೇಕು.
* ವಿಸರ್ಜನೆ ಸಂದರ್ಭ ಡಿಜೆ/ಡ್ರಮ್ಸ್ ಕಾರ್ಯಕ್ರಮ ಆಯೋಜಿಸುವಂತಿಲ್ಲ.
ಅಕ್ಟೋಬರ್ 7ರಿಂದ ನವರಾತ್ರಿ ಆರಂಭವಾಗಲಿದ್ದು, ಅಕ್ಟೋಬರ್ 15ರವರೆಗೆ ಉತ್ಸವ ನಡೆಯಲಿದೆ. ಅಕ್ಟೋಬರ್ 15ರಂದು ವಿಜಯದಶಮಿ ಆಚರಿಸಲಾಗುತ್ತದೆ.