ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಹಾಗೂ ಸಾಂಕ್ರಾಮಿಕ ರೋಗಗಳ ತಡೆಗೆ ನೀಡಬೇಕಾದ ಅಗತ್ಯ ಅನುದಾನವನ್ನು ನೀಡದೆ ಮಹಾನಗರವು ಎದುರಿಸುತ್ತಿರುವ ಸಾಂಕ್ರಾಮಿಕದ ಸವಾಲನ್ನು ಕಡಿಮೆ ಅಂದಾಜು ಮಾಡಿದ್ದಾರೆಂದು ಸಿಪಿಐ(ಎಂ) ಟೀಕಿಸಿದೆ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಬಿಬಿಎಂಪಿ 2021-22 ರ ಆಯವ್ಯಯ ಮಂಡನೆ ಆಗಿದೆ. ಬಿಬಿಎಂಪಿ ಆರ್ಥಿಕ ಇಲಾಖೆಯ ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಅವರು ಒಟ್ಟು 9,291 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಆಡಳಿತಗಾರರ ಅಧ್ಯಕ್ಷತೆಯಲ್ಲಿ ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.
ಬಿಬಿಎಂಪಿಗೆ ಚುನಾವಣೆ ನಡೆಯದೆ ಕಾರಣ ಜನಪ್ರತಿನಿಧಿಗಳು ಆಯ್ಕೆಯಾಗಿಲ್ಲದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಅಧ್ಯಕ್ಷತೆಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದರು.
ಬಿಬಿಎಂಪಿ ಕಾಯ್ದೆಯನ್ವಯ ಸೆಕ್ಷನ್ 196ರ ಪ್ರಕಾರ ಪಾಲಿಕೆಯ ಬಜೆಟ್ ಅಂದಾಜು ಯಾವ ವರ್ಷಕ್ಕೆ ಸಂಬಂಧಿಸಿದೆಯೋ ಆ ವರ್ಷದ ಆರಂಭಕ್ಕೆ ಕನಿಷ್ಠ ಮೂರು ವಾರಗಳಿಗೆ ಮುಂಚೆ ಅದನ್ನು ಅಂಗೀಕರಿಸತಕ್ಕದ್ದು. ಇದರ ಪ್ರಕಾರ ಈಗಾಗಲೇ ಬಿಬಿಎಂಪಿ ಬಜೆಟ್ ಅಂಗೀಕಾರಗೊಳ್ಳಬೇಕಿತ್ತು. ಆದರೆ ಬಿಬಿಎಂಪಿಯಲ್ಲಿ ಚುನಾಯಿತ ಕೌನ್ಸಿಲ್ ಅಸ್ತಿತ್ವದಲ್ಲಿಲ್ಲದ ಕಾರಣ ಬಜೆಟ್ ರೂಪಿಸುವ ಹೊಣೆಗಳೆಲ್ಲವೂ ಆಡಳಿತಾಧಿಕಾರಿಯವರದ್ದಾಗಿದೆ.
2021-2022ನೇ ಸಾಲಿನ ಬಿಬಿಎಂಪಿ ಬಜೆಟ್ನಲ್ಲಿ ಸಿಬ್ಬಂದಿ ವೆಚ್ಚಗಳು 1,267.75 ಕೋಟಿ ರೂಪಾಯಿ. ಆಡಳಿತ ವೆಚ್ಚ 250.37 ಕೋಟಿ ರೂಪಾಯಿ. ಬ್ಯಾಂಕ್ ಸಾಲ ಮತ್ತು ಬಡ್ಡಿ ಪಾವತಿ ₹296.87 ಕೋಟಿ. ಕಾರ್ಯಕ್ರಮಗಳ ವೆಚ್ಚ 424.25 ಕೋಟಿ ರೂಪಾಯಿ. ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 2115.63 ಕೋಟಿ ರೂ. ಸಾರ್ವಜನಿಕ ಅಭಿವೃದ್ಧಿ ಕಾಮಗಾರಿಗೆ ₹4,587.68 ಕೋಟಿ. ಠೇವಣಿ ಮತ್ತು ಕರಗಳ ಮರುಪಾವತಿ ₹344.25 ಕೋಟಿ. ಒಟ್ಟು 9,291 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆಯಾಗಿದೆ.
2021-2022ನೇ ಸಾಲಿನ ಬಿಬಿಎಂಪಿ ಬಜೆಟ್ನಲ್ಲಿ ವಾರ್ಡ್ಗಳಲ್ಲಿ ಪಾದಚಾರಿ ಮಾರ್ಗ ಅಭಿವೃದ್ಧಿಗೆ ₹20 ಲಕ್ಷ ರೂ ಅನುದಾನ. ಬೆಂಗಳೂರಿನ ಕೆರೆಗಳ ಸಂರಕ್ಷಣೆಗೆ 10 ಕೋಟಿ ರೂಪಾಯಿ. 2007ರಲ್ಲಿ ಸೇರ್ಪಡೆಯಾದ 110 ಹಳ್ಳಿಗಳ ಅಭಿವೃದ್ಧಿ. ಹಳ್ಳಿಗಳ ಅಭಿವೃದ್ಧಿಗೆ 1,000 ಕೋಟಿ ರೂಪಾಯಿ ಮೀಸಲು. ಟ್ರಾಫಿಕ್ ಕಂಟ್ರೋಲ್‌ಗೆ 12 ಹೈಡೆನ್ಸಿಟಿ ಕಾರಿಡಾರ್ ಅಳವಡಿಕೆ. ಸಬರ್ಬನ್ ರೈಲುಗಳಿಗೆ ಮೆಟ್ರೋ, ಬಿಎಂಟಿಸಿ ಸಂಪರ್ಕ. ಸ್ಮಾರ್ಟ್ ಸಿಟಿ, ಟೆಂಡರ್ ಶ್ಯೂರ್ ಕಾಮಗಾರಿ ಮುಂದುವರಿಕೆ. ಬೆಂಗಳೂರಿನ ಸೌಂದರ್ಯಕ್ಕಾಗಿ 25 ಕೆರೆಗಳ ಪುನಶ್ಚೇತನ. ಖಾತಾ, ಆಸ್ತಿ ತೆರಿಗೆ, ಜನನ ಮರಣ, ಪ್ರಮಾಣ ಪತ್ರ, ಉದ್ಯಮ ಪರವಾನಗಿ, ಕಟ್ಟಡ ನಕ್ಷೆ ಸೇವೆಗೆ ಆನ್‌ಲೈನ್ ವ್ಯವಸ್ಥೆ ಜಾರಿ ಕುರಿತು ಬಜೆಟ್ ನಲ್ಲಿ ಪ್ರಸ್ಥಾಪಿಸಲಾಗಿದೆ.
ಬಿಬಿಎಂಪಿ ಬಜೆಟ್ ಬಗ್ಗೆ ಸಾರ್ವಜನಿಕರು ನಿರಾಶೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಅಭಿವೃದ್ಧಿಗೆ ಆಧ್ಯತೆ ನೀಡಲಾಗಿಲ್ಲ. ಕಸ ನಿರ್ವಹಣೆ ಸಮಸ್ಯೆ ದಿನೆ ದಿನೆ ಹೆಚ್ಚಾಗುತ್ತಿದೆ. ವಾಯು ಮಾಲಿನ್ಯ ಹೆಚ್ಚಾಗಿದ್ದು ಅದರ ಬಗ್ಗೆ ಸರಿಯಾದ ಕ್ರಮಗಳನ್ನು ಈ ಬಜೆಟ್ ನಲ್ಲಿ ನೀಡಿಲ್ಲ ಎಂದು ಶಾಂತಿನಗರದ ನಿವಾಸಿ ನರೇಂದ್ರ ಆರೋಪಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2021-22ನೇ ಸಾಲಿನ ಆಯ-ವ್ಯಯ ಅಂದಾಜು ಮಾಡುವಲ್ಲಿ ಬಿಬಿಎಂಪಿ ಆಡಳಿತಗಾರರು ಕೋವಿಡ್ ಸಾಂಕ್ರಾಮಿಕದ ಅಪಾಯ ಮನಗಾಣುವಲ್ಲಿ ಮತ್ತು ಜನತೆಯ ಆರೋಗ್ಯಕ್ಕೆ ಗಮನ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ(ಎಂ), ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.
9,286 ಕೋಟಿ ರೂಗಳ ಬಜೆಟ್ ನಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಹಾಗೂ ಸಾಂಕ್ರಾಮಿಕ ರೋಗಗಳ ತಡೆಗೆ ನೀಡಬೇಕಾದ ಅಗತ್ಯ ಅನುದಾನವನ್ನು ನೀಡದೆ ಮಹಾನಗರವು ಎದುರಿಸುತ್ತಿರುವ ಸಾಂಕ್ರಾಮಿಕದ ಸವಾಲನ್ನು ಕಡಿಮೆ ಅಂದಾಜು ಮಾಡಿದ್ದಾರೆಂದು ಸಿಪಿಐ(ಎಂ) ಟೀಕಿಸಿದೆ. ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕೆ ಯಾವುದೇ ಹಣ ಮೀಸಲಿಡದಿರುವುದು ರಾಜ್ಯ ಬಿಜೆಪಿ ಸರ್ಕಾರ ಮತ್ತು ಆಡಳಿತಗಾರರು ಕೋವಿಡ್ ಸವಾಲನ್ನು ಮನಗಾಣುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂಬುದನ್ನು ತೋರುತ್ತದೆ. 2020-21ರ ಆಯ-ವ್ಯಯದಲ್ಲಿ ಸಾಂಕ್ರಾಮಿಕ ಕಾಯಿಲೆಗಳ ತಡೆಗೆ 89 ಕೋಟಿ ರೂಗಳನ್ನು ಮೀಸಲಿರಿಸಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬೇಕಿದೆ. ವೈದ್ಯಕೀಯ ಮತ್ತು ಸಾಮಾನ್ಯ ಸಾರ್ವಜನಿಕ ಆರೋಗ್ಯಕ್ಕೆ 2020-21 ರ ಪರಿಷ್ಕೃತ ಆಯ-ವ್ಯಯದಂತೆ 443 ಕೋಟಿ ರೂಗಳನ್ನು ಮೀಸಲಿರಿಸಿದ್ದರೆ 2021-22 ರ ಸಾಲಿಗೆ ಕೇವಲ 337 ಕೋಟಿ ರೂಗಳನ್ನು ಮೀಸಲಿರಿಸಿರುವುದು ಆರೋಗ್ಯದ ಕಡೆಗೆ ಬಿಬಿಎಂಪಿಯ ನಿರ್ಲಕ್ಷ್ಯದ ನಡಿಗೆಯನ್ನು ತೋರುತ್ತದೆ. ಕೋವಿಡ್ ಹರಡುತ್ತಿರುವ ಪ್ರಸಕ್ತ ವರ್ಷದಲ್ಲಿ ರಾಜ್ಯ ಸರ್ಕಾರದ ಕೋವಿಡ್-19 ಅನುದಾನ 300 ಕೋಟಿ ರೂಗಳಿಂದ 60 ಕೋಟಿ ರೂಗಳಿಗೆ ಇಳಿಕೆಯಾಗಿರುವುದನ್ನು ಬಿಬಿಎಂಪಿ ಬಜೆಟ್ ತೋರಿಸಿದೆ ಎಂದು ಬೆಂಗಳೂರು ದಕ್ಷಿಣ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಎನ್. ಉಮೇಶ್ ಆರೋಪಿಸಿದ್ದಾರೆ.
ಇದನ್ನೂ ಓದಿ : ಕಸ ನಿರ್ವಹಣೆ ಶುಲ್ಕ ಹೆಚ್ಚಳ ವಿರೋಧಿಸಿ ಬಿಬಿಎಂಪಿ ಚಲೋ
ಬಿಬಿಎಂಪಿ ಬಜೆಟ್ ಪ್ರಮುಖ ಅಂಶಗಳು :
ಪ್ರತಿ ಮಳೆಗಾಲದಲ್ಲಿ ನಗರದಲ್ಲಿ ಸಂಭವಿಸುವ ಪ್ರವಾಹ ಪರಿಸ್ಥಿತಿ ತಪ್ಪಿಸಲು ಬಿಬಿಎಂಪಿ ಶೂನ್ಯ ಪ್ರವಾಹ ಗುರಿಯನ್ನು ಇರಿಸಿಕೊಂಡಿದ್ದು , ಇದಕ್ಕಾಗಿ 60 ಕೋಟಿ ಅನುದಾನ ಮೀಸಲಿರಿಸಿದೆ. ಬೃಹತ್ ಮಳೆ ನೀರುಗಾಲುವೆಗಳ ಹೂಳೆತ್ತುವುದು ಹಾಗೂ ನಿರ್ವಹಣೆಗಾಗಿ ಈ ಅನುದಾನ ಬಳಕೆ ಮಾಡಿಕೊಂಡು ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿ ಕೊಳ್ಳಲು ತೀರ್ಮಾನಿಸಲಾಗಿದೆ. ಅತಿ ಹೆಚ್ಚು ಪ್ರವಾಹ ಸಂಭವಿಸುವ ದುರ್ಬಲ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ನೀರುಗಾಲುವೆಗಳ ಮತ್ತು ಚರಂಡಿಗಳ ರಿಪೇರಿ ಕಾರ್ಯಗಳನ್ನು ಪೂರ್ವಭಾವಿಯಾಗಿ ಕೈಗೆತ್ತಿಕೊಳ್ಳುವ ವಿಚಾರ ಬಜೆಟ್‍ನಲ್ಲಿ ಪ್ರಸ್ತಾಪವಾಗಿದೆ. 100 ಕೋಟಿ ರೂ.ಗೂ ಅಧಿಕ ಆರ್ಥಿಕ ವ್ಯವಹಾರ ಹೊಂದಿರುವ ಕಂಪೆನಿಗಳಿಗೆ ಕೆರೆಗಳನ್ನು ದತ್ತು ನೀಡುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಕೆರೆಗಳ ಸರಹದ್ದನ್ನು ಸಂರಕ್ಷಿಸಲು 10 ಕೋಟಿ, ಕೆರೆಗಳ ನಿರ್ವಹಣೆಗೆ 31 ಕೋಟಿ ರೂ.ಗಳ ಅನುದಾನ ಮೀಸಲಿರಿಸಲಾಗಿದೆ.
ವಲಯಗಳಿಗೆ 2000 ಕೋಟಿ: ಪಾಲಿಕೆ ಆಯವ್ಯಯದ ಶೇ.50ರಷ್ಟು ಅನುದಾನವನ್ನು ಮುಂದಿನ ಕೆಲವು ವರ್ಷಗಳಲ್ಲಿ ವಲಯ ಮಟ್ಟದಲ್ಲಿ ಹಂಚಿಕೆ ಮಾಡಲು ಬಿಬಿಎಂಪಿ ಬಜೆಟ್‍ನಲ್ಲಿ ತೀರ್ಮಾನಿಸಲಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಆಯವ್ಯಯದ ಶೇ.50ರಷ್ಟು ಅನುದಾನವನ್ನು ವಲಯ ಮಟ್ಟದಲ್ಲಿ ಹಂಚಿಕೆ ಮಾಡಲು ಗುರಿ ಇರಿಸಲಾಗಿದೆ. ಪ್ರಸಕ್ತ ಸಾಲಿನ 2000 ಕೋಟಿ ರೂ.ಗಳ ಅನುದಾನವನ್ನು ವಲಯಗಳಿಗೆ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ. ಇದು ಪಾಲಿಕೆ ಕಾರ್ಯ ನಿರ್ವಹಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ನಾಂದಿಯಾಗಲಿದೆ. ಪಾಲಿಕೆ ಹಾಲಿ ಇರುವ ಕಾಮಗಾರಿಗಳ ಸಂಖ್ಯೆ ನೀಡುವ ವ್ಯವಸ್ಥೆಯನ್ನು ಪರಿಷ್ಕರಿಸಲಾಗುತ್ತದೆ. ಈ ಆರ್ಥಿಕ ಶಿಸ್ತು ವ್ಯವಸ್ಥೆ ಏ.1ರಿಂದಲೇ ಜಾರಿಗೆ ಬರಲಿದೆ.
ಇ-ಆಸ್ತಿ ತಂತ್ರಾಂಶಕ್ಕೆ ಹೆಚ್ಚಿನ ಒತ್ತು : 2021-2022ನೇ ಸಾಲಿನ ಬಿಬಿಎಂಪಿ ಬಜೆಟ್ ಯಾರಿಗೂ ಹೊರಯಾಗದ ರೀತಿಯಲ್ಲಿ ಜನಸ್ನೇಹಿಯಾಗಿದೆ. ತೆರಿಗೆ ಹೆಚ್ಚಳವೂ ಇಲ್ಲ, ಹೊಸ ತೆರಿಗೆ ಹೆಚ್ಚಳ ಪ್ರಸ್ತಾಪ ಇಲ್ಲ. ವಲಯವಾರು ಮಟ್ಟದಲ್ಲಿ ವಾರ್ಡ್ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆಡಳಿತಾತ್ಮಕ ಅಧಿಕಾರ ವಿಕೇಂದ್ರೀಕರಣಕ್ಕೆ ₹2,000 ಕೋಟಿ ತೆಗೆದಿರಿಸಲಾಗಿದೆ. ಆಸ್ತಿ ತೆರಿಗೆಯ ಶೇ.1ರಷ್ಟು ವಾರ್ಡ್ ಅಭಿವೃದ್ಧಿಗೆ ಮೀಸಲು ಇಡಲಾಗಿದೆ. ಇ-ಆಸ್ತಿ ತಂತ್ರಾಂಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಪಾಲಿಕೆ ಆಸ್ತಿಗಳ ಬಾಡಿಗೆ ಹೆಚ್ಚಳ ಇಲ್ಲ : ಬಿ ಖಾತೆಗಳನ್ನ ಎ ಖಾತೆಯಾಗಿ ಬದಲಾವಣೆಗೆ ಅಸ್ತು. ಪಾಲಿಕೆ ಆಸ್ತಿಗಳ ಬಾಡಿಗೆ ಹೆಚ್ಚಳ ಇಲ್ಲ. ಒಸಿ, ಸಿಸಿ ಪಡೆಯಲು ಹೊಸ ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಲಾಗುವುದು. ಘನತ್ಯಾಜ್ಯ, ಕಸ ವಿಲೇವಾರಿಗೆ ₹1,622 ಕೋಟಿ ಮೀಸಲು ಇಡಲಾಗಿದೆ. 67 ಹೊಸ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಲಿದೆ.
ಕೆ.ಆರ್.ಮಾರ್ಕೆಟ್ ಕಟ್ಟಡ ಅಡಮಾನ ಮುಕ್ತ : ವಿನಾಕಾರಣ ದುಂದುವೆಚ್ಚಕ್ಕೆ ಬಜೆಟ್‌ನಲ್ಲಿ ಕಡಿವಾಣ. ಶಿಕ್ಷಣ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಪಾರ್ಕ್, ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮಾತ್ರ ಅವಕಾಶ. ಉಳಿದ ಹೊಸ ಕಾಮಗಾರಿಗಳಿಗೆ ಅನುಮತಿ ಇಲ್ಲ. ಇನ್ನು, ಆಸ್ತಿ ತೆರಿಗೆ ಹೆಚ್ಚಳ ಇಲ್ಲ. ಸಂಪನ್ಮೂಲ ಕ್ರೋಡೀಕರಣಕ್ಕೆ ಒತ್ತು. ಕೈ ಬಿಟ್ಟುಹೋಗಿರುವ ಎಲ್ಲಾ ಆಸ್ತಿಗಳು ತೆರಿಗೆ ವ್ಯಾಪ್ತಿಗೆ. ಕೆ.ಆರ್.ಮಾರ್ಕೆಟ್ ಕಟ್ಟಡ ಅಡಮಾನ ಮುಕ್ತಗೊಂಡಿದೆ. ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ₹10 ಕೋಟಿ ಅನುದಾನ ನಿಗದಿ. ಆಸ್ತಿ ತೆರಿಗೆಯಿಂದ 2,800 ಕೋಟಿ ರೂಪಾಯಿ. ಕರಗಳಿಂದ 3500 ಕೋಟಿ ರೂ. ಸಂಗ್ರಹದ ನಿರೀಕ್ಷೆ. ಪ್ರಸಕ್ತ ವರ್ಷ 38 ಕೋಟಿ ರೂ. ಬಾಡಿಗೆ ಸಂಗ್ರಹ ನಿರೀಕ್ಷೆ. 116 ಮಾರುಕಟ್ಟೆ ಸಂಕೀರ್ಣ, 5,918 ಅಂಗಡಿಗಳ ಬಾಡಿಗೆಯಿಂದ ವರ್ಷಕ್ಕೆ 23 ಕೋಟಿ ರೂ ಮಾತ್ರ ಬಾಡಿಗೆ ಸಂಗ್ರಹ ಆಗ್ತಿದೆ ಇದನ್ನು ಈ ವರ್ಷ 38 ಕೋಟಿ ನಿರೀಕ್ಷೆ ಮಾಡಲಾಗಿದೆ.