ಬಿಬಿಎಂಪಿ ಆಸ್ತಿ ತೆರಿಗೆ ಬಾಕಿ – ದುಬಾರಿ ದಂಡ: ಸಿಪಿಐ(ಎಂ) ಖಂಡನೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಹಾನಗರ ವ್ಯಾಪ್ತಿಯ ಆಸ್ತಿಗಳ ತೆರಿಗೆ ಬಾಕಿಗೆ ದುಬಾರಿ ದಂಡ ವಿಧಿಸಿ ನೋಟಿಸ್ ನೀಡಿ ವಸೂಲಿ ಮಾಡಲು ಮುಂದಾಗಿರುವ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ತೀವ್ರವಾಗಿ ಖಂಡಿಸಿವೆ.

2016-17 ರಲ್ಲಿ ಮಾಡಲಾಗಿದ್ದ ವಲಯ ಪುನರ್ ವಿಂಗಡಣೆ ಆಧಾರಿತ ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಅಗತ್ಯ ನೋಟಿಸ್ ಅನ್ನು ಆಸ್ತಿ ಮಾಲೀಕರಿಗೆ ನೀಡದೆ ಅವರಿಂದ ಹಿಂದಿನ ದರದಲ್ಲೇ ತೆರಿಗೆ ಜಮಾ ಮಾಡಿಕೊಂಡು 5 ವರ್ಷಗಳ ನಂತರ ಇದೀಗ ವ್ಯತ್ಯಾಸದ ತೆರಿಗೆ ಮೊತ್ತವನ್ನು ಬಾಕಿ ಎಂದು ಪರಿಗಣಿಸಿ ದುಬಾರಿ ದಂಡ ವಿಧಿಸಿ ವಸೂಲಿ ಮಾಡುತ್ತಿರುವುದು ಅಕ್ಷಮ್ಯವೆಂದು ಸಿಪಿಐ(ಎಂ) ವಿರೋಧ ವ್ಯಕ್ತಪಡಿಸಿದೆ.

ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಉಮೇಶ್‌ ಹಾಗೂ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್.‌ ಪ್ರತಾಪ್‌ ಸಿಂಹ ಹೇಳಿಕೆ ಬಿಡುಗಡೆ ಮಾಡಿದ್ದು, ಕೋವಿಡ್ ಮೊದಲನೇ ಅಲೆ ಮತ್ತು ಎರಡನೇ ಅಲೆಯ ಸಾಂಕ್ರಾಮಿಕದಿಂದ ಮಹಾನಗರದ ಜನತೆ ಸಂತ್ರಸ್ತರಾಗಿದ್ದು ಲಾಕ್‌ಡೌನ್‌ನಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಪಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಜನತೆಯ ನೆರವಿಗೆ ಧಾವಿಸಬೇಕಿರುವ ಸರ್ಕಾರ ಮತ್ತು ಬಿಬಿಎಂಪಿ ಈ ಹಿಂದಿನ ಬಾಕಿ ನೆಪದಲ್ಲಿ ದುಬಾರಿ ದಂಡ ವಿಧಿಸುತ್ತಿರುವುದು ಜನತೆಯ ಗಾಯದ ಮೇಲೆ ಬರೆ ಎಳೆಯುವ ಕ್ರಮವಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಜನತೆಯು ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳ ಬೆಲೆ ಏರಿಕೆಯಿಂದ  ಜೀವನ ನಡೆಸುವುದೇ ಕಷ್ಟ ಎಂಬ ಪರಿಸ್ಥಿತಿಯಲ್ಲಿರುವಾಗ ಇದೀಗ ಇಂತಹ ದುಬಾರಿ ದಂಡವು ಅವರನ್ನು ಮತ್ತಷ್ಟು ತೀವ್ರ ಸಂಕಟಕ್ಕೆ ದೂಡಲಿದೆ.

ಬಿಜೆಪಿ ಸರ್ಕಾರದ ಜನವಿರೋಧಿ ಕ್ರಮಗಳ ಮುಂದುವರೆದ ಭಾಗವಾಗಿ ಇಂತಹ ದುಬಾರಿ ದಂಡವನ್ನು ಜನತೆಯ ಮೇಲೆ ಹೇರಲಾಗುತ್ತಿದೆ. 5 ವರ್ಷದಿಂದ ಬಾಕಿ ವಸೂಲಿಗೆ ಯಾವುದೇ ಕ್ರಮವಹಿಸದೆ ಏಕಾಏಕಿ ಇದೀಗ ದಂಡದ ಮೇಲೆ ದಂಡ ಪೋಣಿಸಿ ದುಬಾರಿ ದಂಡ ವಸೂಲಿಗೆ ಮುಂದಾಗಿರುವ ಬಿಬಿಎಂಪಿ ಕ್ರಮವನ್ನು ರಾಜ್ಯ ಸರ್ಕಾರವು ಮಧ್ಯಪ್ರವೇಶಿಸಿ ಕೂಡಲೇ ತಡೆಹಿಡಿಯಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ.

ವಲಯ  ಪುನರ್ ವಿಂಗಡಣೆ ಕುರಿತು ಅದರೊಂದಿಗೆ ಸಂಬಂಧಿತವಾದ ಪರೋಕ್ಷ ತೆರಿಗೆ ಹೆಚ್ಚಳ ಕುರಿತು ಈ ಹಿಂದೆಯೇ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದ್ಯಾವುದನ್ನೂ ಲೆಕ್ಕಿಸದೆ ವಲಯ ಪುನರ್ ವಿಂಗಡಣೆ ಮತ್ತು ಸಂಬಂಧಿತ ತೆರಿಗೆ ಹೆಚ್ಚಳಕ್ಕೆ ಮುಂದಾಗಿದ್ದ ಬಿಬಿಎಂಪಿಯು ತೆರಿಗೆ ಪಾವತಿ ವೇಳೆಯಲ್ಲಿಯೇ ಸಂಬಂಧಿತ ವ್ಯತ್ಯಾಸದ ಮೊತ್ತ ಕುರಿತು ಅಗತ್ಯ ತಿಳುವಳಿಕೆ ನೀಡಿ ವಸೂಲಿ ಮಾಡಲು ಮುಂದಾಗದೆ, ಇದೀಗ ಇಂತಹ ದುಬಾರಿ ದಂಡ ಹೇರಿಕೆಗೆ ಮುಂದಾಗಿರುವುದು ಜನತೆಯ ಸಂಕಟಕ್ಕೆ ಸ್ಪಂದಿಸುವ ಸಂವೇದನೆ ಹೊಂದಿರದ ಬಿಜೆಪಿ ಸರ್ಕಾರದ ಸುಲಿಗೆಕೋರ ನೀತಿಗಳ ಪ್ರತೀಕವಾಗಿದೆ ಎಂದಿರುವ ಸಿಪಿಐ(ಎಂ) ಕೂಡಲೇ ಇಂತಹ ಎಲ್ಲ ಕ್ರಮಗಳನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದೆ.

Donate Janashakthi Media

Leave a Reply

Your email address will not be published. Required fields are marked *