ಬಳ್ಳಾರಿ : ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಿದಂತೆ ಬಯಲಾಟ ಪ್ರದರ್ಶನಕ್ಕೂ ಅನುಮತಿ ನೀಡಬೇಕೆಂದು ಕರ್ನಾಟಕ ಬಯಲಾಟ (ದೊಡ್ಡಾಟ) ಕಲಾವಿದರ ಕ್ಷೇಮಾಭಿವೃದ್ಧಿ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಸುವ ಮೂಲಕ ಆಗ್ರಹಿಸಿದ್ದಾರೆ. ಯಕ್ಷಗಾನಕ್ಕೆ ಅವಕಾಶ ನೀಡಿರುವ ಸರಕಾರ ನಮಗ್ಯಾಕೆ ಅವಕಾಶ ನೀಡುತ್ತಿಲ್ಲ. ಸರಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಒರೆಸುವ ಕೆಲಸ ಮಾಡುತ್ತಿರುವುದ ಖಂಡನೀಯ ಎಂದು ದೊಡ್ಡಾಟ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ತಿಪ್ಪೆಸ್ವಾಮಿ ಆರೋಪಿಸಿದ್ದಾರೆ.
ಸರಕಾರ ಘೋಷಿಸಿದ್ದ ಕೋವಿಡ್ ಸಹಾಯಧನವಾದ 2 ಸಾವಿರ ರೂ. ಕೇವಲ 6 ಸಾವಿರ ಜನರಿಗೆ ಮಾತ್ರ ಸಿಕ್ಕಿದೆ. ಉಳಿದವರಿಗೆ ಕೂಡಲೇ ವಿತರಿಸಬೇಕು. ಪ್ರತಿ ತಿಂಗಳು ಮಾಸಾಶನವನ್ನು ಸರಿಯಾಗಿ ವಿತರಿಸಿ, 50 ವರ್ಷ ವಯೋಮಾನಕ್ಕೆ ಇಳಿಸಬೇಕು. ಬಯಲಾಟ ಕಲಾ ಪ್ರದರ್ಶನಕ್ಕೆ ಉತ್ತೇಜನ ನೀಡಲು ಬಳ್ಳಾರಿಯಲ್ಲಿ ಬಯಲಾಟ ಕಲಾ ಅಕಾಡೆಮಿ ಸ್ಥಾಪಿಸಬೇಕು. ರಂಗ ತರಬೇತಿ ಶಿಕ್ಷಣ ಕೇಂದ್ರ ಆರಂಭಿಸಬೇಕು. ಕಲಾವಿದರ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು. ಯಕ್ಷಗಾನದಂತೆ ಬಯಲಾಟ ಕಲೆಯನ್ನೂ ಪಠ್ಯಕ್ಕೆ ಸೇರಿಸಬೇಕು. ಈ ಕುರಿತು ಪಠ್ಯ ರಚನಾ ಸಮಿತಿಯಲ್ಲಿದ್ದ ಬರಗೂರು ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಗ್ರಾಮೀಣ ಪ್ರದೇಶದ ಗಂಡು ಕಲೆ ಬಯಲಾಟದ ಕಲಾವಿದರಿಗೂ ಕರೋನ್ ಸಂಕಷ್ಟ ಎದುರಾಗಿದ್ದು. ನಮಗೂ ಸಹಾಯ ಧನ ನೀಡಿ. ಅಲ್ಲದೆ ಅರ್ಜಿ ಸಲ್ಲಿಸಲು ಮತ್ತಷ್ಟು ಅವಕಾಶ ನೀಡಿ. ಸಹಾಯಧನವನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕು. ಕರೋನಾ ಸಂಕಷ್ಟದ ಹಿನ್ನಲೆಯಲ್ಲಿ ಸಹಾಯ ಧನಕ್ಕೆ ಹತ್ತು ಸಾವಿರ ಜನ ಬಳ್ಳಾರಿ ಜಿಲ್ಲೆಯಿಂದ ಅರ್ಜಿ ಸಲ್ಲಿಸಿದರೆ, ಕೇವಲ ಆರು ಸಾವಿರ ಜನರಿಗೆ ನೀಡಿದೆ. ಉಳಿದವರಿಗೂ ನೀಡಬೇಕು ಎಂದು ತಿಪ್ಪೆಸ್ವಾಮಿ ಒತ್ತಾಯಿಸಿದ್ದಾರೆ.
ಬಯಲಾಟ ಕಲೆಯ ಕಲಾವಿದರು ರಾಜ್ಯದ 23 ಜಿಲ್ಲೆಗಳಲ್ಲಿ ಇದ್ದಾರೆ. ಹಳ್ಳಿಗಳಲ್ಲಿ ಪ್ರದರ್ಶನಗೊಳ್ಳುವ ಈ ಕಲೆಗೆ ಈ ಹಿಂದೆ ಸಾಕಷ್ಟು ನೆರವು ದೊರೆಯುತ್ತಿತ್ತು. ಆದರೆ ಈಗ ಕಡಿಮೆಯಾಗಿದೆ. ಅದಕ್ಕಾಗಿ ಸೆಕಾರ ಪ್ರದರ್ಶನ ಒಂದಕ್ಕೆ ಈಗ ನೀಡುವ 25 ಸಾವಿರವನ್ನು ಒಂದು ಲಕ್ಷ ರೂ. ಗೆ ಹೆಚ್ಚಿಸಬೇಕು. ಬಯಲಾಟ ಕಲಾವಿದರನ್ನು ಸಹ ಜನ ಜಾಗೃತಿ ಕಾರ್ಯಕ್ರಮಗಳಗೆ ಬಳಸಿಕೊಳ್ಳಬೇಕು. ಹಳ್ಳಿಗಳಲ್ಲಿ ತರಬೇತಿ ಕೊಠಡಿ, ವೇದಿಕೆ ನಿರ್ಮಾಣ ಆಗಬೇಕು ಎಂದು ದೊಡ್ಡಾಟ ಕಲಾವಿದರ ರಾಜ್ಯ ಕಾರ್ಯದರ್ಶಿ ಸೊಮಶೇಖರ್ ಆಗ್ರಹಿಸಿದ್ದಾರೆ.