“ಅವರು ಪ್ಯೂಡಲ್ ಭಾಷೆ ಬಳಸಲಿಲ್ಲ, ಕಿರುಚಾಡಲಿಲ್ಲ, ಅವರಲ್ಲಿ ಅಬ್ಬರ ಇರಲಿಲ್ಲ, ವಿಚಾರ ಇತ್ತು”: ಯೆಚೂರಿಯವರ ಕುರಿತು ಬರಗೂರು

“ಇತರೆ ರಾಜಕೀಯ ನಾಯಕರಂತೆ ಸೀತಾರಾಮ್ ಯೆಚೂರಿ ಅವರು ಕಿರುಚಾಡಲಿಲ್ಲ, ಅವರ ಮಾತುಗಳಲ್ಲಿ ಅಬ್ಬರ ಇರಲಿಲ್ಲ, ಆದರೆ ಅವರಲ್ಲಿ ಬಹಳಷ್ಟು ವಿಚಾರಗಳಿರುತ್ತಿದ್ದವು” ಎಂದು ಬರಗೂರು ರಾಮಚಂದ್ರಪ್ಪನವರು ಹೇಳಿದರು. ಭಾಷೆ 

ಅಕ್ಟೋಬರ್ 6ರಂದು ಸಿಪಿಐ(ಎಂ) ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಕಾಮ್ರೆಡ್ ಸೀತಾರಾಮ್ ಯೆಚೂರಿ ಶ್ರದ್ಧಾಂಜಲಿ ಸಭೆ’ಯಲ್ಲಿ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಬರಗೂರು ಅವರು, ಅಂದು ನಾವೆಲ್ಲಾ ಕಾಂಗ್ರೆಸ್ ಪಕ್ಷದ ವಿರೋಧಿಗಳೇ ಆಗಿದ್ದೆವು. ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಿದ್ದ ಎಡಪಕ್ಷಗಳೇ ಕಾಂಗ್ರೆಸ್ ಜತೆ ಕೈಜೋಡಿಸುವ ಸ್ಥಿತಿ ಎದುರಾಗಿತ್ತು. ಅದನ್ನು ಸರಿಯಾಗಿ ನಿರ್ವಹಿಸಿದ ಶ್ರೇಯ ಸೀತಾರಾಮ್ ಯೆಚೂರಿ ಅವರಿಗೆ ಸಲ್ಲುತ್ತದೆ. ಎಡ ಪಕ್ಷಗಳು ಕಾಂಗ್ರೆಸ್ ಜೊತೆಗೆ ಸೇರದೇ ಉಳಿದಿದ್ದರೆ, ದೇಶದಲ್ಲಿ ಇನ್ನೂ ಭೀಕರವಾದ ಸನ್ನಿವೇಶ ಸೃಷ್ಟಿಯಾಗುತ್ತಿತ್ತು, ದೇಶದ ಸ್ಥಿತಿ ಇನ್ನಷ್ಟು ಹೀನಾಯವಾಗುತ್ತಿತ್ತು. ಅಂತಹ ಅಪಾಯವನ್ನು ಯೆಚೂರಿ ಮತ್ತು ಅವರ ಪಕ್ಷ ತಪ್ಪಿಸಿದರು. ಕಾಂಗ್ರೆಸ್ ಜೊತೆಗೆ ಹೋದರೂ ತಮ್ಮ ಮತ್ತು ತಮ್ಮ ಪಕ್ಷದ ಮೂಲ ಆಶಯ ಹಾಗೂ ಸಿದ್ದಾಂತವನ್ನು ಅವರು ಬಿಟ್ಟುಕೊಡಲಿಲ್ಲ ಎಂದು ಹೇಳಿದ ಬರಗೂರು ಅವರು, ಯೆಚೂರಿ ಅವರು 2015ರಲ್ಲಿ ನನ್ನ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲು ಬೆಂಗಳೂರಿಗೆ ಬಂದಿದ್ದರು, ಪ್ರಜಾವಾಣಿಯಲ್ಲಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಚಿತ್ರ ಪ್ರಕಟವಾಗಿತ್ತು ಎಂದು ನೆನೆಪಿಸಿಕೊಂಡರು. ಭಾಷೆ

ಕೇರಳ, ಪಶ್ಚಿಮ ಬಂಗಾಳದವರೇ ಎಸ್ ಎಫ್ ಐ ಸಂಘಟನೆಯ ರಾಷ್ಟ್ರಾದ್ಯಕ್ಷರಾಗಿರುತ್ತಿದ್ದರು. ಯೆಚೂರಿ ಅವರು ಈ ಎರಡು ರಾಜ್ಯಗಳನ್ನು ಹೊರತುಪಡಿಸಿದವರಾಗಿ ಎಸ್ ಎಪ್ ಐ ಸಂಘಟನೆಯ ರಾಷ್ಟ್ರಾದ್ಯಕ್ಷರಾದರು. ಸಿಪಿಎಂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ದಕ್ಷಿಣ ಭಾರತದ ಮೊದಲಿಗರು ಅವರು. ಸಮಕಾಲೀನ ಸಂದರ್ಭದೊಳಗೆ ಯೆಚೂರಿ ಇರುವುಕೆಯ ಅಗತ್ಯವಿತ್ತು. ಸಂಸದೀಯ ರಾಜಕಾರಣದ ಶಕ್ತಿ ಮತ್ತು ಅದರ ಮಿತಿ ಯೆಚೂರಿಯವರಿಗೆ ಚೆನ್ನಾಗಿ ಗೊತ್ತಿತ್ತು. ಕೆಲವೇ ಕಮ್ಯೂನಿಸ್ಟ್ ನಾಯಕರಲ್ಲಿ ಅವರೂ ಒಬ್ಬರು. ಯೆಚೂರಿಯವರು ಸೈದ್ಧಾಂತಿಕ ದೀಪ ಆಗಿದ್ದರು. ಮೂಲಭೂತವಾದಿ, ಪ್ರತಿಗಾಮಿ ಶಕ್ತಿಗಳನ್ನು ಎದುರಿಸಲು ಸಕಾರಾತ್ಮಕ ಕ್ರಿಯೆ ತೆಗೆದುಕೊಳ್ಳುತ್ತಿದ್ದರು. ಯೆಚೂರಿ ಅವರಿಗೂ ಮೊದಲು ಹರಿಕಿಶನ್ ಸಿಂಗ್ ಸುರ್ಜಿತ್ ಇಂತಹ ಪಾತ್ರ ವಹಿಸುತ್ತಿದ್ದರು. ಯೆಚೂರಿ ಅವರು ಸಮಕಾಲೀನ ನಾಯಕ ಮತ್ತು ಲೇಖಕ ಒಟ್ಟಿಗೆ ಆಗಿದ್ದುದು ವಿಷೇಶ. ಅವರಲ್ಲಿ ಸೈದ್ದಾಂತಿಕ ಕರ್ಮಟತೆ ಇರಲಿಲ್ಲ, ಸೃಜನಶೀಲತೆ ಇತ್ತು. ಅವರು ನನ್ನಂತಹವರ ಅಂತರಂಗದ ನಾಯಕ. ಯೆಚೂರಿ ಅವರ ನಿಧನ ಭಾರತಕ್ಕೆ ನಷ್ಟ ಎಂದು ಬರಗೂರು ಅವರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು.

ಅಗಲಿಕೆ ಸರಿಪಡಿಸಲು ಸಾಧ್ಯವಿಲ್ಲದ್ದು: ಎಂ.ಎ.ಬೇಬಿ

ಸೀತಾರಾಮ್ ಯೆಚೂರಿ ತಮ್ಮ ಐವತ್ತು ವರ್ಷಗಳ ಜೊತೆಗಾರರು ಎಂದು ಮಾತು ಆರಂಭಿಸಿದ ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯರಾದ ಎಂ.ಎ.ಬೇಬಿಯವರು, ‘ಯೆಚೂರಿ ಅವರ ಸಾವು ಭಾರತದ ಕಾರ್ಮಿಕ, ರೈತ ಮತ್ತು ಎಡ ಶಕ್ತಿಗಳಿಗೂ ಬಹಳ ನಷ್ಟ ಉಂಟುಮಾಡಿದೆ. ಯೆಚೂರಿ ಅವರ ಅಗಲಿಕೆ ಸರಿಪಡಿಸಲು ಸಾಧ್ಯವಿಲ್ಲದ್ದು’ ಎಂದು ತಮ್ಮ ಸಂತಾಪ ಸೂಚಿಸಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಕಮ್ಯೂನಿಸ್ಟರು ಬ್ರಿಟೀಷರನ್ನು ಎದುರಿಸಿದ್ದರು. ನಂತರ 1975ರ ತರ್ತುಪರಿಸ್ಥಿತಿ ವಿರುದ್ಧದ ಮತ್ತೊಂದು ಸ್ವಾತಂತ್ರ್ಯ ಹೋರಾಟ ನಡೆಸಬೇಕಾಯಿತು. ಇಂದು ಅಘೋಷಿತ ತುರ್ತುಪರಿಸ್ಥಿತಿ ವಿರುದ್ಧ ಮೂರನೇ ಸ್ವಾಂತಂತ್ರ್ಯ ಹೋರಾಟ ನಡೆಸಬೇಕಾಗಿದೆ.

ಇದನ್ನು ಓದಿ : ಸರ್ಕಾರ ಜಾತಿಗಣತಿ ಜಾರಿ ಮಾಡಲೇಬೇಕು: ಸದಸ್ಯ ಬಿ.ಕೆ.ಹರಿಪ್ರಸಾದ್ ಒತ್ತಾಯ

ಸಾಂವಿಧಾನಿಕ ಮೌಲ್ಯಗಳನ್ನು ನಾಶಮಾಡುವ ಶಕ್ತಿಗಳು ಇಂದು ಪ್ರಬಲವಾಗಿವೆ. ಇದನ್ನು ಎದುರಿಸಲು ನಾವೆಲ್ಲರೂ ಸನ್ನದ್ದರಾಗಬೇಕಿದೆ.

370ನೇ ವಿಧಿ ರದ್ದತಿ ಸಂದರ್ಭದಲ್ಲಿ ಜಮ್ಮು ಕಾಶ್ಮೀರ ದಿಗ್ಬಂದನಕ್ಕೆ ಒಳಗಾಗಿತ್ತು. ಅಲ್ಲಿನ ಜನರು ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಅಲ್ಲಿನ ಸಿಪಿಐ(ಎಂ) ನಾಯಕ ಮತ್ತು ಶಾಸಕ ಯೂಸುಪ್ ತರಿಗಾಮಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ತರಿಗಾಮಿ ಅವರಿಗೆ ಏನಾಗಿದೆ ಎಂದು ತಿಳಿಯಲು ಯೆಚೂರಿ ಕಾಶ್ಮೀರಕ್ಕೆ ಹೋಗಲು ಮುಂದಾದರು. ಆದರೆ, ಪ್ರಭುತ್ವ ಅವರನ್ನು ಅಲ್ಲಿಗೆ ಹೋಗಲು ಬಿಡಲಿಲ್ಲ. ತರಿಗಾಮಿ ನನ್ನ ಸ್ನೇಹಿತ, ಅವರಿಗೆ ಏನಾಗಿದೆ ಏನ್ನುತ್ತಾ, ಅವರನ್ನು ನೋಡಲು ಏಬಿಯಸ್ ಕಾರ್ಪಸ್ ಅರ್ಜಿಯ ಮೂಲಕ ಸುಪ್ರೀಂ ಮೊರೆ ಹೋಗಿ, ಕೋರ್ಟ್ ಅನುಮತಿ ಪಡೆದು ಯೆಚೂರಿ ಜಮ್ಮು ಕಾಶ್ಮೀರಕ್ಕೆ ಹೋಗಿದ್ದರು. ಯಾವ ರಾಜಕಾರಣಿಯೂ ಜಮ್ಮು ಕಾಶ್ಮೀರಕ್ಕೆ ಕಾಲಿಡಲು ಭಯ ಪಡುತ್ತಿದ್ದ ಸಂದರ್ಭದಲ್ಲಿ ಯೆಚೂರಿ ಧೈರ್ಯದಿಂದ ಹೋಗಿ ಬಂದರು. ನ್ಯಾಯಾಲಯದಲ್ಲಿ ಚುನಾವಣಾ ಬಾಂಡ್ ಪ್ರಕರಣ ದಾಖಲಿಸುವಲ್ಲಿಯೂ ಯೆಚೂರಿ ಪಾತ್ರ ಪ್ರಮುಖವಾಗಿದೆ ಎಂದು ಎಂ.ಎ.ಬೇಬಿ ಅವರು ನೆನಪಿಸಿಗೊಂಡರು.

ಮಹಾನ್ ಎಡಪಂಥೀಯ ರಾಜಕೀಯ ಮುತ್ಸದ್ದಿ: ನ್ಯಾ. ವಿ. ಗೋಪಾಲಗೌಡ

“ಕಾಮ್ರೆಡ್ ಸೀತಾರಾಂ ಯೆಚೂರಿಯವರು ಮಹಾನ್ ಎಡಪಂಥೀಯ ಮುತ್ಸದ್ದಿ. 1977 ರಲ್ಲಿ ಜೆಎನ್ ಯು ಚಾನ್ಸುಲರ್ ಆಗಿದ್ದ ಇಂದಿರಾಗಾಂಧಿಗೆ ರಾಜಿನಾಮೆ ಕೊಡಿ ಎಂದು ಹೇಳಿದ ಧೀರ ವಿಧ್ಯಾರ್ಥಿ ನಾಯಕ ಯೆಚೂರಿ. ಇದೆಲ್ಲಾ ಚರಿತ್ರೆಯಲ್ಲಿ ದಾಖಲಾಗುತ್ತದೆ.” ಹೀಗೆಂದವರು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು.
‘ಯೆಚೂರಿ ನನಗೆ 1975ರಿಂದ ಪರಿಚಯ. ಕರ್ನಾಟಕದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ.) ಸಂಸ್ಥಾಪಕ ಅಧ್ಯಕ್ಷ ನಾನು. ಯೆಚೂರಿಯವರು ಮೊದಲೆಲ್ಲಾ ನನ್ನೊಡನೆ ಸಂಪರ್ಕದಲ್ಲಿದ್ದರು. ನ್ಯಾಯಮೂರ್ತಿ ಆದ ನಂತರ ಯೆಚೂರಿ ನನ್ನನ್ನು ಸಂಪರ್ಕಿಸಲಿಲ್ಲ, ಮಾತ್ರವಲ್ಲ ದೂರವಾಣಿ ಕೂಡಾ ಮಾಡಲಿಲ್ಲ. ರಾಜ್ಯಸಭೆಯಲ್ಲಿನ ಅವರ ಚರ್ಚೆ ಅರ್ಥಪೂರ್ಣವಾಗಿರುತ್ತಿತ್ತು. ‘ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದೇನೆ, ನನ್ನ ಹೆಂಡತಿ ರಜಪೂತ, ಆಕೆಯ ತಂದೆ ಮುಸ್ಲೀಂ, ಹೀಗಿರುವಾಗ ನನ್ನ ಮಕ್ಕಳು ಯಾವ ಜಾತಿಗೆ ಸೇರುತ್ತಾರೆ?’ ಎಂದು ರಾಜ್ಯಸಭೆಯಲ್ಲಿ ಯೆಚೂರಿ ಪ್ರಶ್ನಿಸಿದರು’ ಎಂದು ನ್ಯಾ. ವಿ.ಗೋಪಾಲಗೌಡ ಹೇಳಿದರು. ಭಾಷೆ

ನಲವತ್ತು ವರ್ಷಗಳ ಸ್ನೇಹ: ನ್ಯಾ. ನಾಗಮೋಹನ ದಾಸ್

ನನ್ನ ಮತ್ತು ಸೀತಾರಾಮ್ ಯೆಚೂರಿಯವರದು ನಲವತ್ತು ವರ್ಷಗಳ ಸ್ನೇಹ. ಯುಪಿಎ ಆಡಳಿತದ ಸಂದರ್ಭದಲ್ಲಿ ಕನಿಷ್ಟ ಕಾರ್ಯಕ್ರಮದ ಆದಾರದ ಮೇಲೆ ಒಂದು ಕಣ್ಣೋಟ ಕಟ್ಟಿಕೊಟ್ಟರು. ಜಗತ್ತಿನ ವಿದ್ಯಮಾನದ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿದ್ದರು. ಸಂವಿಧಾನದ ಮೂಲ ತತ್ವಗಳಾದ “ಪ್ರಜಾಪ್ರಭುತ್ವ, ಜಾತ್ಯಾತೀತ ಮತ್ತು ಸಾಮಾಜಿಕ ನ್ಯಾಯ“ ಇವುಗಳ ಬಗ್ಗೆ ಯೆಚೂರಿ ಅಪಾರವಾದ ನಂಬಿಕೆ ಇಟ್ಟಿದ್ದರು. ಅದಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಐಕ್ಯ ಹೋರಾಟದಿಂದ ಮಾತ್ರ ಸಾಧ್ಯ ಎಂದು ಅದಕ್ಕೆ ಮಹತ್ವ ನೀಡಿದ್ದರು. ಸಂವಿಧಾನದ ಮೂಲತ್ವಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಯೆಚೂರಿಯವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ” ಎಂದು ನ್ಯಾ. ನಾಗಮೋಹನ ದಾಸ್ ಹೇಳಿದರು.ಭಾಷೆ

ಯೆಚೂರಿ ಅವರು ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿ. ಇಂದಿನ ಕೋಮುವಾದಿ, ಸರ್ವಾಧಿಕಾರಿ, ಏಕ ವ್ಯಕ್ತಿಯ ಪಕ್ಷದ ಪ್ರಭುತ್ವವನ್ನು ಹತ್ತಿಕ್ಕುವ ಮೂಲಕ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಮೂಲಕ ಯೆಚೂರಿಯವರಿಗೆ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಎಎಪಿ ಮುಖಂಡರಾದ ಮುಖ್ಯಮಂತ್ರಿ ಚಂದ್ರು ಹೇಳಿದರು. ಮಾಜಿ ಪ್ರಧಾನಿ ದೇವೇಗೌಡರು ಕಳುಹಿಸಿದ್ದ ಶ್ರದ್ಧಾಂಜಲಿ ಸಂದೇಶವನ್ನು ಓದಲಾಯಿತು.  ಸಭೆಯ ಆರಂಭದಲ್ಲಿ ಯೆಚೂರಿಯವರ ಬಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಅರ್ಪಿಸಿದರು. ನಂತರ ಸಿಪಿಐ(ಎಂ) ನಾಯಕಿ ಕೆ. ನೀಲಾ ಅವರು ಶ್ರದ್ಧಾಂಜಲಿ ನಿರ್ಣಯ ಓದಿದರು.  ಸಚಿವ ರಾಮಲಿಂಗಾರೆಡ್ಡಿ, ಸಿದ್ದನಗೌಡ ಪಾಟೀಲ್, ಸಾತಿ ಸುಂದರೇಶ್, ಜಿ.ಆರ್.ಶಿವಶಂಕರ್, ನಾಗರಾಜ ಪೂಜಾರ್, ಅಮ್ಜದ್ ಪಾಷಾ, ಎಂ.ಎನ್.ಶ್ರೀರಾಮ್ ಸೇರಿದಂತೆ ಎಡ ಮತ್ತು ಪ್ರಜಾಸತ್ತಾತ್ಮಕ ನಾಯಕರು ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.  ರಾಜ್ಯದ ಹಲವು ಕಡೆಗಳಿಂದ ಸಿಪಿಎಂ ಸೇರಿದಂತೆ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು. ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಭಾ ಭಾಷೆಷೆ ಭಾಷೆ

ಇದೇ ಸಂದರ್ಭದಲ್ಲಿ ಯೆಚೂರಿ ಕುರಿತಾದ ‘ಹೀಗಿದ್ದರು ಯೆಚೂರಿ: ಒಡನಾಡಿಗಳ ನೆನಪು’ ಹಾಗೂ ‘ಸೀತಾರಾಂ ಯೆಚೂರಿ; ಅಚ್ಚೇ ದಿನ್ ಗೆ ಸವಾಲು’ ಎಂಬ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಭಾಷೆ

ಇದನ್ನು ನೋಡಿ : ಪ್ಯಾಲೆಸ್ಟೀನ್‌ ಪರವಾಗಿ ಧ್ವನಿಯೆತ್ತುವುದು ಅಪರಾಧವೇ? ಪ್ರತಿಭಟನೆಕಾರರ ಪ್ರಶ್ನೆ Janashakthi Media

Donate Janashakthi Media

Leave a Reply

Your email address will not be published. Required fields are marked *