ನವದೆಹಲಿ: ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ, ಹೆಚ್ಚುವರಿ ಎಟಿಎಂ ವಹಿವಾಟುಗಳು ಮತ್ತು ಎಸ್‌ಎಂಎಸ್ ಸೇವೆಗಳ ಮೂಲಕ 2018 ರಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು 5 ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳು ₹35,000 ಕೋಟಿಗೂ ಹೆಚ್ಚು ಶುಲ್ಕವನ್ನು ಸಂಗ್ರಹಿಸಿವೆ ಎಂದು ಹಣಕಾಸು ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ.
ಹಣಕಾಸು ಸಚಿವಾಲಯದ ರಾಜ್ಯ ಸಚಿವ ಡಾ. ಭಾಗವತ್ ಕರದ್ ಅವರು ಲಿಖಿತವಾಗಿ ಸಲ್ಲಿಸಿದ ಮಾಹಿಯ ಪ್ರಕಾರ ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಐದು ಪ್ರಮುಖ ಖಾಸಗಿ ವಲಯದ ಬ್ಯಾಂಕುಗಳಾದ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ಗಳು ಈ ಮೊತ್ತವನ್ನು ಸಂಗ್ರಹಿಸಿದೆ. ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದ ಕಾರಣದಿಂದ ₹21,000 ಕೋಟಿ, ಹೆಚ್ಚುವರಿ ಎಟಿಎಂ ವಹಿವಾಟು ನಡೆಸಿದ ಕಾರಣಕ್ಕೆ ₹8,000 ಕೋಟಿ ಹಾಗೂ ಎಸ್‌ಎಂಎಸ್ ಶುಲ್ಕವಾಗಿ ₹6,000 ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿವಾಹ ನಿರಾಕರಿಸಿದ ಯುವತಿ ತಂದೆಯ 800 ಅಡಕೆ ಮರಗಳನ್ನು ತುಂಡರಿಸಿದ ಯುವಕ
ಬ್ಯಾಂಕುಗಳ ಶುಲ್ಕಗಳು
ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿರುವುದು, ಉಚಿತ ವಹಿವಾಟುಗಳನ್ನು ಮೀರಿ ಎಟಿಎಂಗಳ ಬಳಕೆ, ಮಿತಿ ಮೀರಿದ ಹಣವನ್ನು ಠೇವಣಿ ಮಾಡುವುದು ಸೇರಿದಂತೆ ಇತ್ಯಾದಿಗಳಿಗೆ ಶುಲ್ಕ ವಿಧಿಸುತ್ತವೆ. ಇವುಗಳಲ್ಲಿ, ಕನಿಷ್ಟ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಎಂದರೆ ಗ್ರಾಹಕರು ಪ್ರತಿ ತಿಂಗಳು ತಮ್ಮ ಖಾತೆಯಲ್ಲಿ ನಿರ್ವಹಿಸಲು ಅಗತ್ಯವಿರುವ ಮೊತ್ತವಾಗಿದೆ. ಇದನ್ನು ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) ಅಥವಾ ಸರಾಸರಿ ಮಾಸಿಕ ಬ್ಯಾಲೆನ್ಸ್ (AMB) ಎಂದು ಕರೆಯಲಾಗುತ್ತದೆ. ಈ ಮೊತ್ತವು ಮೆಟ್ರೋ ನಗರ, ಸಣ್ಣ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಿಗೆ ಬದಲಾಗುತ್ತದೆ. ಈ ಅಂಕಿಅಂಶವನ್ನು ಪ್ರತಿ ತಿಂಗಳ ಕೊನೆಯಲ್ಲಿ ಲೆಕ್ಕಹಾಕಲಾಗುತ್ತದೆ ಮತ್ತು ಈ ಸಮತೋಲನವನ್ನು ಕಾಪಾಡಿಕೊಳ್ಳಲು ವಿಫಲವಾದರೆ ದಂಡ ಪಾವತಿ ಮಾಡಬೇಕಾಗುತ್ತದೆ.
ವಿವಿಧ ಬ್ಯಾಂಕ್‌ಗಳಿಗೆ, ಮಹಾನಗರಗಳಲ್ಲಿ ₹3,000 ರಿಂದ ₹10,000, ನಗರ ಪ್ರದೇಶಗಳಲ್ಲಿ ₹2,000-₹5,000 ಮತ್ತು ಗ್ರಾಮೀಣ ಪ್ರದೇಶದಲ್ಲಿ ₹500-₹1,000 ವರೆಗೆ AMB ಇರುತ್ತದೆ. ಕನಿಷ್ಠ ಮೊತ್ತವನ್ನು ನಿರ್ವಹಣೆ ಮಾಡದೆ ಇದ್ದರೆ ₹ 400ರಿಂದ ₹ 500 ರವರೆಗಿನ ಶುಲ್ಕಗಳನ್ನು ವಿಧಿಸಲಾಗುತ್ತದೆ. ಕೆಲವು ಖಾಸಗಿ ಬ್ಯಾಂಕ್‌ಗಳು AMB ಶುಲ್ಕಗಳ ನಿರ್ವಹಣೆ ಮಾಡದಿರುವ ಖಾತೆಗಳಿಗೆ ಪ್ರತಿ ವಹಿವಾಟಿಗೆ 125 ರಂತೆ ನಗದು ವಹಿವಾಟು ಶುಲ್ಕವನ್ನು ವಿಧಿಸುತ್ತವೆ.
ಆರ್‌ಬಿಐ ಸುತ್ತೋಲೆಯು ಬ್ಯಾಂಕ್‌ಗಳು ತಮ್ಮ ಬೋರ್ಡ್ ಅನುಮೋದಿತ ನೀತಿಯ ಪ್ರಕಾರ ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸದಿರುವ ಕಾರಣಕ್ಕೆ ದಂಡ ಶುಲ್ಕವನ್ನು ನಿಗದಿಪಡಿಸಲು ಅನುಮತಿ ನೀಡುತ್ತದೆ. ಆದರೆ ಅಂತಹ ಎಲ್ಲಾ ಶುಲ್ಕಗಳು ಸಮಂಜಸವಾಗಿದ್ದು, ಸೇವೆಗಳನ್ನು ಒದಗಿಸುವ ಸರಾಸರಿ ವೆಚ್ಚಕ್ಕೆ ಅನುಗುಣವಾಗಿಲ್ಲ ಎಂದು ಖಚಿತಪಡಿಸುತ್ತದೆ.
ಇದನ್ನೂ ಓದಿ: 6 ವರ್ಷಗಳಲ್ಲಿ 237 ಹೊಸ ಟಿವಿ ಚಾನೆಲ್‌ಗಳಿಗೆ ಅನುಮತಿ: ಕೇಂದ್ರ ಸರ್ಕಾರ
ಆದಾಗ್ಯೂ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಖಾತೆಗಳಲ್ಲಿ ಮತ್ತು ಮೂಲ ಉಳಿತಾಯ ಬ್ಯಾಂಕ್ ಠೇವಣಿ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವ ಅಗತ್ಯವಿಲ್ಲ. ಅದೇ ಸಮಯದಲ್ಲಿ, ಈ ಖಾತೆಗಳಿಗೆ, ಒಂದು ತಿಂಗಳಲ್ಲಿ ಮಾಡಬಹುದಾದ ಠೇವಣಿಗಳ ಸಂಖ್ಯೆ ಮತ್ತು ಮೌಲ್ಯದ ಮೇಲೆ ಯಾವುದೇ ಮಿತಿಯಿಲ್ಲ. ಆದರೆ, ಎಟಿಎಂ ಸೇರಿದಂತೆ ಹಣ ಹಿಂಪಡೆಯುವುದನ್ನು ಮಾತ್ರ ತಿಂಗಳಿಗೆ ನಾಲ್ಕು ಬಾರಿ ಎಂದು ಸೀಮಿತಗೊಳಿಸಲಾಗಿದೆ.
ಬ್ಯಾಂಕ್ ಎಂಪ್ಲಾಯಿಸ್ ಫೆಡರೇಷನ್ ಆಫ್ ಇಂಡಿಯಾ ಸಂಘಟನೆಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ. ನಾಗರಾಜ ಶಾನುಭೋಗ ಅವರು ಮಾತನಾಡಿ, “ಗ್ರಾಹಕರಿಂದ ಯಾವುದೆ ಶುಲ್ಕ ಪಡೆಯದೆ ಬ್ಯಾಂಕ್‌ಗಳು ಸೇವೆಯನ್ನು ಒದಗಿಸುತ್ತಿದ್ದವು. ಆದರೆ ಈಗೀಗ ಬ್ಯಾಂಕ್‌ಗಳು ಕೂಡಾ ಗ್ರಾಹಕರನ್ನು ಲೂಟಿ ಮಾಡುತ್ತಿವೆ. ಸೇವೆಯ ಮನೋಭಾವವನ್ನು ಬಿಟ್ಟು ಬ್ಯಾಂಕ್‌ಗಳು ಕೂಡಾ ನೇರವಾಗಿ ವ್ಯಾಪಾರಕ್ಕೆ ಇಳಿದಿವೆ. ಗ್ರಾಹಕ ಈಗ ಪ್ರತಿಯೊಂದಕ್ಕೂ ಶುಲ್ಕ ಪಾವತಿ ಮಾಡಬೇಕಾದ ಸ್ಥಿತಿಯಿದೆ. ಈ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ನಾವು ಹಿಂದಿನಿಂಲೂ ಒತ್ತಾಯಿಸುತ್ತಲೆ ಬಂದಿದ್ದೇವೆ” ಎಂದರು.
“ಈ ರೀತಿಯಾಗಿ ಸಂಗ್ರಹಿಸಿದ ಹಣವನ್ನು ಬ್ಯಾಂಕ್‌ಗಳು ಲಾಭ ಎಂದು ಪರಿಗಣಿಸುತ್ತವೆ. ಮರು ಪಾವತಿ ಮಾಡದ ದೊಡ್ಡ ಉದ್ಯಮಿಗಳ ಸಾಲಮನ್ನಾ ಮಾಡಲು ಈ ಹಣವನ್ನು ಸಾಮಾನ್ಯ ಜನರ ಕೈಯಿಂದ ಪಡೆಯಲಾಗುತ್ತಿದೆ. ಇವೆಲ್ಲವೂ ಬಡ ಗ್ರಾಹಕರನ್ನು ಲೂಟಿ ಮಾಡಿ ಸಂಗ್ರಹ ಮಾಡಿರುವ ಹಣವಾಗಿದೆ” ಎಂದು ಹೇಳಿದರು.
ವಿಡಿಯೊ ನೋಡಿ: ಬಾರದ ಅಂಬುಲೆನ್ಸ್ ; ಹುಟ್ಟುವ ಮುನ್ನವೇ ಕಣ್ಮುಚ್ಚಿದ ಮಗು Janashakthi Media