ನವೆಂಬರ್ 30ರಂದು ದಿಲ್ಲಿಯ ಜಂತರ್ ಮಂತರ್ ನಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ನೂರಾರು ಅಧಿಕಾರಿಗಳು ಬ್ಯಾಂಕುಗಳ ಖಾಸಗೀಕರಣದ ವಿರುದ್ಧ ಮತಪ್ರದರ್ಶನ ನಡೆಸಿದರು. ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು, ರೈತರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾಒಕ್ಕೂಟ(ಎಐಬಿಒಸಿ) ನೇತೃತ್ವದಲ್ಲಿ ಈ ಪ್ರಚಾರಾಂದೋಲನ ನಡೆಯುತ್ತಿದೆ. ಈ ಸಂಘಟನೆಯ ಮುಖಂಡರುಗಳು ಬ್ಯಾಂಕ್ ಖಾಸಗೀಕರಣದ ವಿರುದ್ಧ ಸಂದೇಶವನ್ನು ದೇಶಾದ್ಯಂತ ಪಸರಿಸುವ ‘ಭಾರತ ಯಾತ್ರೆ’ಯನ್ನು ನವೆಂಬರ್ 24ರಂದು ಮುಂಬೈ ಮತ್ತು ಕೋಲ್ಕತಾದಿಂದ ಆರಂಭಿಸಿದರು. ನವೆಂಬರ್ 30ರಂದು ಇದರ ಸಮಾರೋಪವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಜಂತರ್ ಮಂತರ್‌ನಲ್ಲಿ ಮತಪ್ರದರ್ಶನ ನಡೆಸಿದರು.
ಕಳೆದ ಬಜೆಟ್ ಭಾಷಣದಲ್ಲಿ ಪ್ರಕಟಿಸಿದಂತೆ ಎರಡು ಬ್ಯಾಂಕುಗಳ ಖಾಸಗೀಕರಣಕ್ಕೆ ಅನುಕೂಲ ಮಾಡಿಕೊಳ್ಳಲು ಸಂಸತ್ತಿನ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ಮಂಡಿಸುವ ಸಂಭವ ಇದೆಯೆಂದು ಹೇಳಲಾಗಿದೆ. ಇದರಲ್ಲಿ ಬ್ಯಾಂಕುಗಳಲ್ಲಿ ಸರಕಾರದ ಪಾಲುದಾರಿಕೆಯನ್ನು ಈಗಿರುವ ಶೇಕಡಾ 51 ರಿಂದ ಶೇಕಡಾ 26ಕ್ಕೆ ಇಳಿಸಲಾಗುವುದು. ಇದನ್ನು ಸಾಧ್ಯವಾಗಿಸಲು 1970ರ ಬ್ಯಾಂಕ್ ರಾಷ್ಟ್ರೀಕರಣಕ್ಕೆ ಸಂಬಂಧಪಟ್ಟ ಕಾಯ್ದೆ ಮತ್ತು ಬ್ಯಾಂಕಿಂಗ್ ನಿಯಮಾವಳಿಗಳ ಕಾಯ್ದೆ, 1949ಕ್ಕೆ ತಿದ್ದುಪಡಿಗಳನ್ನು ತರಲಾಗುತ್ತದೆ ಎಂದೂ ವರದಿಯಾಗಿದೆ. ಇವಕ್ಕೆ ಸಂಸತ್ತಿನ ಒಪ್ಪಿಗೆಯನ್ನು ಪಡಕೊಂಡರೆ 1970ರಲ್ಲಿ ರಾಷ್ಟ್ರೀಕರಣಗೊಂಡ ಬ್ಯಾಂಕುಗಳನ್ನು ಮತ್ತೆ ಖಾಸಗಿಯವರಿಗೆ ಪೂರ್ಣವಾಗಿ ಒಪ್ಪಿಸುವ ಕೆಲಸ ಆರಂಭವಾಗಲಿದೆ. ಇದು ಇಂಡಿಯನ್ ಓವರ್‍ಸೀಸ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಆರಂಭವಾಗಲಿದೆ. ಸದ್ಯ ಭಾರತ ಸರಕಾರ ಈ ಬ್ಯಾಂಕುಗಳಲ್ಲಿ 90%ಕ್ಕಿಂತಲೂ ಹೆಚ್ಚಿನ ಪಾಲುದಾರಿಕೆ ಹೊಂದಿವೆ.
ಈಗಾಗಲೇ ಹತ್ತು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು 4 ಬ್ಯಾಂಕುಗಳಾಗಿ ವಿಲೀನ ಮಾಡಲಾಗಿದೆ. ಇದರಿಂದಲೇ ಬ್ಯಾಂಕ್ ಗ್ರಾಹಕರು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗಿ ಬಂದಿದೆ. ಇನ್ನು ಸಂಪೂರ್ಣ ಖಾಸಗೀಕರಣ ಮಾಡಿದರೆ ಗ್ರಾಹಕರು ಇನ್ನಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಇದು ಮುಖ್ಯವಾಗಿ ರೈತರು, ಸಣ್ಣ ಉದ್ಯಮಗಳು ಮತ್ತು ಸಮಾಜದ ದುರ್ಬಲ ವಿಭಾಗಗಳನ್ನೇ ಹೆಚ್ಚಾಗಿ ತಟ್ಟುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.
ಬ್ಯಾಂಕ್ ಅಧಿಕಾರಿಗಳ ಈ ಚಳುವಳಿಯನ್ನು ಬೆಂಬಲಿಸುತ್ತ ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೆನ್ ಬ್ಯಾಂಕ್ ಅಧಿಕಾರಿಗಳ ಈ ಚಳುವಳಿಗೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಬೆಂಬಲವನ್ನು ವ್ಯಕ್ತಪಡಿಸಿದರು. ಬಜೆಟ್ ಅಧಿವೇಶನದದ ವೇಳೆಯಲ್ಲಿ ನಡೆಸಲಿರುವ ಎರಡು ದಿನಗಳ ಸಾರ್ವತ್ರಿಕ ಮುಷ್ಕರದಲ್ಲಿ ಈ ಪ್ರಶ್ನೆಯನ್ನು ಮತ್ತೆ ಎತ್ತಲಾಗುವುದು ಎಂದು ಅವರು ಹೇಳಿದರು.
ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ವಿಜೂ ಕೃಷ್ಣನ್ ಮಾತಾಡುತ್ತ ಕೇಂದ್ರ ಸರಕಾರ ಈ ಪ್ರಸ್ತಾವವನ್ನು ಹಿಂತೆಗೆದುಕೊಳ್ಳಬೇಕು ಎಂದು ಹೇಳಿದರು.
ಈ ಮಸೂದೆಯಿಂದ ಬ್ಯಾಂಕ್ ಸಿಬ್ಬಂದಿಗೂ ಪ್ರಯೋಜನವಿಲ್ಲ, ಜನಗಳಿಗೂ ಪ್ರಯೋಜನಿಲ್ಲ, ಹಾಗಿರುವಾಗ ಲಾಭವಾದರೂ ಯಾರಿಗೆ ಎಂದು ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರ ಗೌರವ್ ವಲ್ಲಭ್ ಕೂಡ ಪ್ರಶ್ನಿಸಿದ್ದಾರೆ.
Govt should not take decision to merge the Banks. Nobody will get benefit and already people are struggling to get benefits.