ಹೊಸದಿಲ್ಲಿ: ಬಿಜೆಪಿ ನೇತೃತ್ವದ ಕೇಂದ್ರವು ತನ್ನ ವಿರುದ್ಧ “ಆರ್ಥಿಕ ಭಯೋತ್ಪಾದನೆ”ಯಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ. ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಸರ್ಕಾರ ಪಕ್ಷದ ಖಾತೆಗಳಿಂದ 65 ಕೋಟಿ ರೂ.ಗೂ ಹೆಚ್ಚು “ಲೂಟಿ” ಮಾಡಿದೆ ಎಂದು ಅದು ಆರೋಪಿಸಿದೆ.
ಆಡಳಿತ ಪಕ್ಷವು “ಪ್ರಜಾಪ್ರಭುತ್ವವನ್ನು ಕೊಲ್ಲಲು” ಪ್ರಯತ್ನಿಸುತ್ತಿದೆ ಮತ್ತು ದೇಶವನ್ನು “ಸರ್ವಾಧಿಕಾರಿ ರಾಜ್” ಗೆ ಎಳೆಯಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆಕ್ರೊಶ ವ್ಯಕ್ತಪಡಿಸಿದೆ. ಎಐಸಿಸಿ ಪ್ರಧಾನ ಕಛೇರಿಯಲ್ಲಿ ಪಕ್ಷದ ಮುಖಂಡರಾದ ಕೆ ಸಿ ವೇಣುಗೋಪಾಲ್ ಮತ್ತು ಅಜಯ್ ಮಾಕನ್ ಅವರೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂವಹನ ಉಸ್ತುವಾರಿ ಜೈರಾಮ್ ರಮೇಶ್, ಪಕ್ಷದ ವಿರುದ್ಧ ತೆರಿಗೆ ಭಯೋತ್ಪಾದನೆ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯುಪಿ | ಎಐಸಿಸಿ ಜೊತೆಗೆ ಎಲ್ಲವೂ ಚೆನ್ನಾಗಿದೆ ಎಂದ ಅಖಿಲೇಶ್ ಯಾದವ್; ಶೀಘ್ರದಲ್ಲೆ ಮೈತ್ರಿ ಘೋಷಣೆ ಸಾಧ್ಯೆತೆ
ಪಕ್ಷವನ್ನು ಆರ್ಥಿಕವಾಗಿ ಕುಗ್ಗಿಸಲು ಷಡ್ಯಂತ್ರ ನಡೆಸಲಾಗುತ್ತಿದೆ, ಇದು ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಪ್ರಯತ್ನವಾಗಿದೆ ಎಂದು ಎಐಸಿಸಿ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಭಾರತ್ ಜೋಡೋ ನ್ಯಾಯ್ ಯಾತ್ರೆ, ರೈತರ ಆಂದೋಲನ ಮತ್ತು ಏರುತ್ತಿರುವ ಹಣದುಬ್ಬರದಿಂದ ಬಿಜೆಪಿ ಸರ್ಕಾರವು ಜರ್ಜರಿತವಾಗಿದೆ ಎಂಬುದನ್ನು ಈ ಕ್ರಮವು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರವು ಆದಾಯ ತೆರಿಗೆ ಇಲಾಖೆಯ ಮೂಲಕ ತನ್ನ ಖಾತೆಗಳಿಂದ ಸುಮಾರು 65 ಕೋಟಿ ರೂ.ಗಳನ್ನು ಲೂಟಿ ಮಾಡಿದೆ ಎಂದು ಮಾಕನ್ ಹೇಳಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಪಕ್ಷವನ್ನು ಆರ್ಥಿಕವಾಗಿ ಕುಗ್ಗಿಸುವ ಮೂಲಕ ಚುನಾವಣೆ ಎದುರಿಸಲು ಸಾಧ್ಯವಾಗದಂತೆ ಮಾಡಲು ಸರ್ಕಾರ ನಡೆಸುತ್ತಿರುವ ಪ್ರಯತ್ನ ಇದಾಗಿದೆ ಎಂದರು.
ಬಿಜೆಪಿ ಸರ್ಕಾರವು ಪ್ರಮುಖ ವಿರೋಧ ಪಕ್ಷದ ವಿರುದ್ಧ “ಆರ್ಥಿಕ ಭಯೋತ್ಪಾದನೆ” ಪ್ರಾರಂಭಿಸಿದೆ ಎಂದು ಅವರು ಆರೋಪಿಸಿದ್ದಾರೆ. ಐದು ಖಾತೆಗಳಿಂದ ಈ ಹಣವನ್ನು ಸರ್ಕಾರ ಪಡೆದಿದೆ ಎಂದು ಅವರು ಹೇಳಿದ್ದಾರೆ. ಈ ಕ್ರಮವು ಪ್ರಜಾಪ್ರಭುತ್ವದ ತತ್ವಗಳು ಮತ್ತು ಮೌಲ್ಯಗಳ ಮೇಲಿನ ದಾಳಿಗೆ ಸಮಾನವಾಗಿದೆ ಎಂದು ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋ ಹೋರಾಟ | ಪೊಲೀಸರ ಮತ್ತು ರೈತರ ನಡುವೆ ಘರ್ಷಣೆ; 21 ವರ್ಷದ ರೈತ ಸಾವು
“ಅವರು (ಸರ್ಕಾರ) ಪ್ರತಿಪಕ್ಷಗಳ ಧ್ವನಿಯನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ. ಈ ರೀತಿಯ ಕೀಳುಮಟ್ಟದ ದಾಳಿಯು ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ, ನಾವು ಅದರ ವಿರುದ್ಧ ಹೋರಾಡಲಿದ್ದೇವೆ. ಇದು ಸರ್ವಾಧಿಕಾರಕ್ಕೆ ನಿಚ್ಚಳವಾದ ನಿದರ್ಶನವಾಗಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವನ್ನು ಬಿಜೆಪಿ ಸರ್ವಾಧಿಕಾರದ ರಾಜ್ಗೆ ಎಳೆಯುತ್ತಿದೆ” ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.
ಬಿಜೆಪಿ ಎಂದಾದರೂ ಆದಾಯ ತೆರಿಗೆ ಪಾವತಿಸಿದೆಯೇ ಎಂದು ಕಾಂಗ್ರೆಸ್ ನಾಯಕ ಮಾಕೆನ್ ಪ್ರಶ್ನಿಸಿದ್ದಾರೆ. “ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆಯೇ? ಇದು ಸಮತಟ್ಟಾದ ಮೈದಾನವೇ?. ನಾವು 2 ನೇ ಫೆಬ್ರವರಿ 2019 ರಂದು ನಮ್ಮ ರಿಟರ್ನ್ ಅನ್ನು ಸಲ್ಲಿಸಿದ್ದೇವೆ. ಆದರೆ, ಚುನಾವಣೆಗಳು ಘೋಷಣೆಯಾಗುವ ಎರಡು ವಾರಗಳ ಮೊದಲು ನಮ್ಮ ಹಣವನ್ನು ತೆಗೆದುಕೊಳ್ಳುವ ಪ್ರಕ್ರಿಯೆಯು ಐದು ವರ್ಷಗಳ ನಂತರ ನಡೆಯಿತು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಲೋಕಸಭೆಗೆ ಇಂಡಿಯಾ ಮೈತ್ರಿ | ದೆಹಲಿ ಮಾತುಕತೆ ಫಲಪ್ರದ; ಎಎಪಿಗೆ 4, ಕಾಂಗ್ರೆಸ್ಗೆ 3
ಫೆಬ್ರವರಿ 14 ರಂದು ಐಟಿ ಇಲಾಖೆಯು ಎಐಸಿಸಿ, ಯೂತ್ ಕಾಂಗ್ರೆಸ್ ಮತ್ತು ಎನ್ಎಸ್ಯುಐನ 11 ಶಾಖೆಗಳ ನಾಲ್ವರು ಬ್ಯಾಂಕರ್ಗಳಿಗೆ ನೋಟಿಸ್ ನೀಡಿತ್ತು. ಆದಾಯ ತೆರಿಗೆ ಇಲಾಖೆ 210 ಕೋಟಿ ರೂ.ಗೂ ಹೆಚ್ಚು ಬೇಡಿಕೆ ಇಟ್ಟಿದೆ ಎಂದು ಪಕ್ಷ ಹೇಳಿದೆ. ಯಾವುದೇ ಬ್ಯಾಂಕ್ಗಳ ನಮ್ಮ ಖಾತೆಗಳಲ್ಲಿ ಅಷ್ಟೊಂದು ಮೊತ್ತವನ್ನು ಹೊಂದಿಲ್ಲದ ಕಾರಣ, ನಮ್ಮ ಖಾತೆಗಳನ್ನು ತಡೆಹಿಡಿಯಲಾಗಿದೆ ಎಂದು ಪಕ್ಷವು ಅಂದು ಹೇಳಿತ್ತು.
“ನಾವು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯನ್ನು ಸಂಪರ್ಕಿಸಿದ್ದೇವೆ, ಅದಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದೇವೆ. ಇದು ‘ಹಣವನ್ನು ಗುರುತಿಸುವ’ ಪ್ರಕ್ರಿಯೆ ಎಂದು ಐಟಿ ಅಧಿಕಾರಿಗಳು ನ್ಯಾಯಮಂಡಳಿಯ ಮುಂದೆ ಸ್ಪಷ್ಟನೆ ನೀಡಿದ್ದಾರೆ” ಎಂದು ಪಕ್ಷ ಹೇಳಿದೆ. ಆದರೆ ನಿರ್ಲಜ್ಜವಾಗಿ ಐಟಿ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಹಣವನ್ನು ಸರ್ಕಾರದ ಖಾತೆಗಳಿಗೆ ವರ್ಗಾಯಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ವಿಡಿಯೊ ನೋಡಿ: ಮೋದಿ ನೇತೃತ್ವ ಸರ್ಕಾರದ ದೊಡ್ಡ ಭ್ರಷ್ಟಾಚಾರ : ಚುನಾವಣಾ ಬಾಂಡ್ ಹಗರಣ Janashakthi Media