ಮೂಲ: ನೀಲೊತ್ಪಲ ಬಸು
ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಅಕ್ಟೋಬರ್ 13 ರಿಂದ 16 ರ ಅವಧಿಯಲ್ಲಿ ದುರ್ಗಾ ಪೂಜಾ ಸಂಭ್ರಮಾಚರಣೆಗಳ ಮೇಲೆ ಅಭೂತಪೂರ್ವ ದಾಳಿ ಮತ್ತು ಹಿಂಸಾಚಾರ ನಡೆಯಿತು. ಭಾರತ ಸೇರಿದಂತೆ ಇಡೀ ಜಗತ್ತೇ ಈ ವಿದ್ಯಮಾನಗಳಿಂದ ಆಘಾತ ಮತ್ತು ಆಕ್ರೋಶಗೊಳಗಾಗಿದ್ದವು. ಕೊಮಿಲ್ಲಾದ ನಾನುವರ್ ದಿಘಿ ಯಲ್ಲಿ ಆರಂಭವಾಗಿ ದಾಳಿ ಮತ್ತು ಹಿಂಸಾಚಾರಗಳು ಚಾಂದ್ ಪುರ್, ನೌಖಾಲಿ ಮತ್ತು ಚಿತ್ತಗಾಂಗ್ ಗಳಿಗೆ ಹರಡಿದ್ದವು. ದೇಶದ 70 ದುರ್ಗಾ ಪೂಜಾ ಪೆಂಡಾಲುಗಳ ಮೇಲೆ ದಾಳಿ, ಅಗ್ನಿಸ್ಪರ್ಶ, ಹಿಂಸಾಚಾರಗಳು ನಡೆದವು ಈ ಘಟನೆಗಳು ಬಾಂಗ್ಲಾದೇಶದಲ್ಲಿ ವಾಸಿಸಿರುವ ಹಿಂದೂ ಮತ್ತಿತರ ಧಾರ್ಮಿಕ ಅಲ್ಪಸಂಖ‍್ಯಾತರಲ್ಲಿ ಭಯ. ಆತಂಕ, ಅಸುರಕ್ಷೆಯ ಭಾವ ಉಂಟು ಮಾಡಿವೆ. ಇದು ಭಾರತದಲ್ಲಿ (ಅದರಲ್ಲೂ ವಿಶೇ಼ಷವಾಗಿ ಆಸ್ಸಾಂ, ತ್ರಿಪುರಾ, ಪಶ್ಚಿಮ ಬಂಗಾಳಗಳಲ್ಲಿ ವಾಸಿಸಿರುವ) ಬಂಗಾಳಿಗಳಲ್ಲೂ ತೀವ್ರ ಆತಂಕ ಉಂಟು ಮಾಢಿದೆ.
ನಡೆದಿದ್ದೇನು ?
ಈ ಹಿಂಸಾಚಾರಗಳಿಗೆ ಕಿಡಿಯಾದ ಘಟನೆ ಪೂರ್ವನಿಯೋಜಿತ ಮತ್ತು ಸಂಘಟಿತ ಪ್ರಯತ್ನವಾಗಿತ್ತು ಎಂಬುದು ಆ ಮೇಲಿನ ಅಧಿಕೃತ ತನಿಖೆಗಳಿಂದಲೇ ಸಿದ್ಧವಾಗಿದೆ. ಕೊಮಿಲ್ಲಾದ ನಾನುವರ್ ದಿಘಿ ಯಲ್ಲಿ ಮೂವರು ಪಿತೂರಿಗಾರರ ಗುಂಪೊಂದು ಕುರಾನನ್ನು ಸ್ತಳೀಯ ಮಸೀದಿಯಿಂದ ತಂದು ಪೂಜಾ ಪೆಂಡಾಲಿನಲ್ಲಿದ್ದ ಹನುಮಾನ್ ವಿಗ್ರಹದ ತೊಡೆಯ ಮೇಲೆ ಇಟ್ಟಿದ್ದಾರೆ, ಇಟ್ಟ ಮೇಲೆ ಅವರಲ್ಲಿ ಒಬ್ಬ ಅದರ ಫೇಸ್ ಬುಕ್ ಲೈವ್ ಪ್ರಸಾರ ಸಹ ಮಾಡಿದ ಎಂದು ಸಿಸಿಟಿವಿ ವಿಡಿಯೊಗಳಿಂದ ತಿಳಿದು ಬಂದಿದೆ. ಅವರನ್ನು ಬಂಧಿಸಲಾಗಿದೆ. ಇದು ಅಲ್ಪಸಂಖ‍್ಯಾತ ಹಿಂದೂಗಳ ಮತ್ತು ಬಹುಸಂಖ್ಯಾತ ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ನೋಯಿಸಿ ಕೆರಳಿಸಲು ಎಂಬುದು ಸ್ವಯಂವಿದಿತವಾಗಿದೆ. ಫೇಸ್ ಬುಕ್ ಲೈವ್ ಪ್ರಸಾರದ ಜತೆ ಪ್ರಚೋದಕ ಧಾರ್ಮಿಕ ಅಪೀಲು ಸೇರಿ ಹಲವು ಕಡೆ ಹಿಂಸಾಚಾರ, ದಾಳಿಗಳು ಆರಂಭವಾದವು. ನಾನುವರ್ ದಿಘಿ ಅಲ್ಲದೆ ಹಿಂಸಾಚಾರ ನಡೆದ ಇತರ ಕಡೆ ಸಹ ಈ ಪಿತೂರಿಗಾರ ಗುಂಪಿನ ಸದಸ್ಯರು ಓಡಾಡಿದ್ದು ಸಿಸಿಟಿವಿಗಳಿಂದ ಪತ್ತೆಯಾಗಿದೆ.
ಇದನ್ನು ಓದಿ: ಬಾಂಗ್ಲಾದೇಶದಲ್ಲಿ ಕೋಮು ಹಿಂಸಾಚಾರ ಬಹಳ ಆತಂಕಕಾರಿ: ಸಿಪಿಐ(ಎಂ) ಪೊಲಿಟ್ ಬ್ಯುರೊ
ಈ ಹಿಂಸಾಚಾರದ ವಿರುದ್ಧ ಬಾಂಗ್ಲಾದೇಶದ ಸರಕಾರ ಶೀಘ್ರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿತು ಎಂದು ಭಾರತ ಸರಕಾರ ಸೇರಿದಂತೆ ಎಲ್ಲರೂ ಒಪ್ಪುತ್ತಾರೆ. ಆದರೆ ಹಿಂದೂ ಅಲ್ಪಸಂಖ‍್ಯಾತರನ್ನು ಗುರಿ ಮಾಡಿ ವಿವಿಧ ರೀತಿಯ ದಾಳಿಯ ಘಟನೆಗಳು ಸತತವಾಗಿ ನಡೆಯುತ್ತಲೇ ಇವೆ ಎನ್ನಲಾಗಿದೆ. ಜನವರಿ 2013ರಿಂದ ಸೆಪ್ಟೆಂಬರ್ 2021 ವರೆಗೆ ಇಂತಹ 3710 ಘಟನೆಗಳು ನಡೆದಿವೆ ಎಂದು ಸ್ಥಳೀಯ ಮಾನವ ಹಕ್ಕು ಸಂಘಟನೆಗಳು ಎತ್ತಿ ತೋರಿಸಿವೆ. ಆದರೆ ನಡೆಯುತ್ತಿರುವ ಹಿಂಸಾಚಾರದ ಪ್ರಮಾಣ, ತೀವ್ರತೆಗಳು ಬಲಪಂಥೀಯ ಶಕ್ತಿಗಳು, ವಿಶೇ಼ಷವಾಗಿ ಭಾರತದ ಬಲಪಂಥೀಯ ಶಕ್ತಿಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿರುವಂತೆ ‘ನರಮೇಧ’ ಖಂಡಿತ ಅಲ್ಲ ಎಂಬುದನ್ನು ಗಮನಿಸಬೇಕು.
ಹಿಂಸಾಚಾರದ ಮೂಲ ಎಲ್ಲಿದೆ ?
ಈ ಹಿಂಸಾಚಾರದ ಮೂಲದಲ್ಲಿರುವುದು ಧಾರ್ಮಿಕ ಆಧಾರದ ಮೇಲೆ ಒಡೆದು ಆಳುವ, ಅದು ಸಾಧ್ಯವಾಗದಾಗ ಧಾರ್ಮಿಕ ಆಧಾರಿತ ದೇಶಗಳ ನಿರ್ಮಾಣದ ವಸಾಹತುಶಾಹಿಯ ಹುನ್ನಾರಗಳೇ. ಇದು ಈಗಿನ ಬಾಂಗ್ಲಾದೇಶ ಸೇರಿದಂತೆ ಪಾಕಿಸ್ತಾನದ ನಿರ್ಮಾಣಕ್ಕೆ ಕಾರಣವಾಯಿತು. ಆದರೆ ಧಾರ್ಮಿಕ ಆಧಾರಿತ ದೇಶದಲ್ಲಿ ಮಾನ್ಯತೆ ಪಡೆಯದ ಬಂಗಾಳಿ ಭಾಷಾ-ಸಾಂಸ್ಕೃತಿಕ ಅಸ್ಮಿತೆಗೆ ನಡೆದ ಹೋರಾಟ 1971ರಲ್ಲಿ ಅದರ ವಿಮೋಚನೆ ಮತ್ತು ಬಾಂಗ್ಲಾದೇಶದ ಸ್ಥಾಪನೆಯಲ್ಲಿ ಕೊನೆಗೊಂಡಿತು. ಸ್ವತಂತ್ರ ಬಾಂಗ್ಲಾದೇಶ ತನ್ನ ಸಂವಿಧಾನದಲ್ಲಿ ಸೆಕ್ಯುಲರ್ ಎಂದು ಘೋಷಿಸಿಕೊಂಡಿತು. ಇದು ಧಾರ್ಮಿಕ ಆಧಾರಿತ ದೇಶದ ಪರಿಕಲ್ಪನೆಯ ವೈಫಲ್ಯವನ್ನು ಎತ್ತಿ ತೋರಿಸಿತು. ಆದರೆ ಮುಸ್ಲಿಂ ಮೂಲಭೂತವಾದಿಗಳು, ಪಾಕಿಸ್ತಾನ ಪರಿಕಲ್ಪನೆಯ ಬೆಂಬಲಿಗರು ಮತ್ತು ಅವರ ಮಿಲಿಟರಿ ಸಮರ್ಥಕರು ಯಾವತ್ತೂ ಇದನ್ನು ಒಪ್ಪಿಕೊಳ್ಳಲೇ ಇಲ್ಲ. ಸ್ವತಂತ್ರ ಬಾಂಗ್ಲಾದೇಶದಲ್ಲಿ ಅಲ್ಪಸಂಖ‍್ಯಾತರಾಗಿದ್ದರೂ ಈ ವಿಭಾಗ ತನ್ನ ಹಠ ಸಾಧಿಸಲು ತನ್ನ ಪ್ರಯತ್ನವನ್ನು ಮುಂದುವರೆಸಿತು. ಇದೇ ಬಾಂಗ್ಲಾದೇಶದ ವಿಮೋಚನಾ ಹೋರಾಟದ ನಿರ್ವಿವಾದಿತ ನಾಯಕ ಮುಜಿಬುರ್ ರಹಮಾನ್ ಅವರ ಬರ್ಬರ ಹತ್ಯೆ ಮತ್ತು ಎರಡು ಮಿಲಿಟರಿ ಸರ್ವಾಧಿಕಾರಿಗಳ ಆಳ್ವಿಕೆಗೆ ಎಡೆ ಮಾಡಿತು. ಮಿಲಿಟರಿ ಸರ್ವಾಧಿಕಾರದ ಅವಧಿಯಲ್ಲಿ ಸಂವಿಧಾನದಲ್ಲಿ ಸೆಕ್ಯುಲರ್ ಎಂಬ ಪದವನ್ನು ತೆಗೆದು ಹಾಕಿ ಇಸ್ಲಾಂ ಅಧಿಕೃತ ಮತಧರ್ಮ ಎಂದು ಸೇರಿಸಲಾಯಿತು. ಪ್ರಾಯೋಗಿಕವಾಗಿ ಎಲ್ಲ ಮತಧರ್ಮಗಳ ಸ್ವಾತಂತ್ರ್ಯ ಮುಂದುವರೆದರೂ ಸೆಕ್ಯುಲರ್ ಮತ್ತು ಧಾರ್ಮಿಕ ಶಕ್ತಿಗಳ ನಡುವೆ ಸಂಘರ್ಷ ಮುಂದುವರೆದಿದೆ.
ಇದನ್ನು ಓದಿ: ದಕ್ಷಿಣ ಏಷ್ಯಾದಲ್ಲಿ ಅಲ್ಪಸಂಖ್ಯಾತರ ಮೇಲೆ ಆಕ್ರಮಣಗಳು ಕೋಮುವಾದ, ಮೂಲಭೂತವಾದಕ್ಕೆ ಆಳುವವರ ಪೋಷಣೆ
ಬಾಂಗ್ಲಾದೇಶದ ವಿಮೋಚನಾ ಹೋರಾಟದ ಮೌಲ್ಯಗಳು ಪ್ರಬಲವಾಗಿ ಜನಜನಿತವಾಗಿದ್ದರಿಂದ ಸಂವಿಧಾನದಲ್ಲಿ ಬದಲಾವಣೆಯಾದರೂ ರಾಜಕಾರಣದಲ್ಲಿ ಈ ಶಕ್ತಿಗಳಿಗೆ ಹೆಚ್ಚಿನ ಅವಕಾಶವಿರಲಿಲ್ಲ. ಜಮಾತೇ ಇಸ್ಲಾಮಿ, ರಜಾಕಾರ್ ಮುಂತಾದ ಈ ಶಕ್ತಿಗಳು ವಿಮೋಚನಾ ಹೋರಾಟವನ್ನು ವಿರೋಧಿಸಿ ಪಾಕಿಸ್ತಾನಿ ಮಿಲಿಟರಿ ದೌರ್ಜನ್ಯಗಳಲ್ಲಿ ಪಾಲುಗೊಂಡಿದ್ದರಿಂದಲೂ ಅವುಗಳಿಗೆ ಹೆಚ್ಚಿನ ಜನಬೆಂಬಲವಿರಲಿಲ್ಲ. ಆದರೆ ಬಾಂಗ್ಲಾದೇಶ ನ್ಯಾಶನಲ್ ಪಾರ್ಟಿ (ಬಿ.ಎನ್.ಪಿ) ಯ ಖಲೀದಾ ಜಿಯಾ ಜಮಾತೇ ಇಸ್ಲಾಮಿ ಯನ್ನು ಆಗಿನ ಆಳುವ ಕೂಟದಲ್ಲಿ ಸೇರಿಸಿಕೊಂಡ ನಂತರ, ಇವು ರಾಜಕಾರಣದ ಮುಖ್ಯಧಾರೆ ಪ್ರವೇಶಿಸಿ ಅಧಿಕಾರದಲ್ಲೂ ಪಾಲು ಪಡೆದಿದ್ದು, ಈ ಶಕ್ತಿಗಳಿಗೆ ಬಲ ಬಂದಿದೆ. ಆ ಮೇಲಿನ ಚುನಾವಣೆಯಲ್ಲಿ ಅವಾಮಿ ಲೀಗ್ ನಾಯಕತ್ವದ ಕೂಟವು ಅಧಿಕಾರಕ್ಕೆ ಬಂದು ‘ಸೆಕ್ಯುಲರಿಸಂ”ನ್ನು ಮತ್ತೆ ಸಂವಿಧಾನದಲ್ಲಿ ಸೇರಿಸಲಾಯಿತು. ಆದರೆ ಇಸ್ಲಾಂ ಅಧಿಕೃತ ಮತಧರ್ಮ ಎಂಬುದು ಮುಂದುವರೆದಿದ್ದು ವಿಚಿತ್ರ ಪರಿಸ್ಥಿತಿ ಉಂಟಾಗಿದೆ. ಅವಾಮಿ ಲೀಗ್ ಅಧಿಕಾರಕ್ಕೆ ಬಂದರೂ ಈ ಧಾರ್ಮಿಕ ರಾಜಕಾರಣದ ಶಕ್ತಿಗಳನ್ನು ಪೂರ್ಣವಾಗಿ ನೆಲೆ ಇಲ್ಲದಂತೆ ಮಾಡುವುದು ಸಾಧ್ಯವಾಗಲಿಲ್ಲ.
ಹಿಂಸಾಚಾರ ಯಾರ ಪ್ರಯೋಜನಕ್ಕಾಗಿ ?
ಯು.ಎಸ್-ಸೌದಿ ಅರೇಬಿಯ ಸರಕಾರಗಳ ಹಣಕಾಸು-ಸಂಘಟನಾತ್ಮಕ ಕುಮ್ಮಕ್ಕಿನಿಂದಾಗಿ ಜಾಗತಿಕವಾಗಿ ಇಸ್ಲಾಮಿಕ್ ಮೂಲಭೂತವಾದದ ಹರಡುವಿಕೆ ಬಾಂಗ್ಲಾದೇಶವನ್ನೂ ತಟ್ಟದೆ ಬಿಟ್ಟಿಲ್ಲ. ಈ ಸನ್ನಿವೇಶದಲ್ಲಿ ಜೆ.ಎಂ.ಬಿ (ಜಮಾತೇ ಮುಜಹಿದ್ದೀನ್ ಬಾಂಗ್ಲಾದೇಶ) ಎಂಬ ಉಗ್ರಗಾಮಿ ಸಂಘಟನೆ ತಲೆಯೆತ್ತಿದೆ. ಅದು 2005ರಲ್ಲಿ 63 ಜಿಲ್ಲೆಗಳಲ್ಲಿ 300 ಸ್ಥಳಗಳಲ್ಲಿ ಒಂದೇ ಸಮಯದಲ್ಲಿ ಸ್ಫೋಟಗಳನ್ನು ನಡೆಸಿ ತನ್ನ ಇರವನ್ನು ಸಾರಿತು. 1996-2001 ಅವಧಿಯಲ್ಲಿ ಅಫ್ಘಾನಿಸ್ತಾನದಿಂದ ವಾಪಸು ಬಂದ ಮುಜಾಹಿದ್ ಗಳು ಸ್ಥಾಪಿಸಿದ ಹೂಜಿ ಎಂಬ ಉಗ್ರಗಾಮಿ ಸಂಘಟನೆ ಶೇಖ್ ಹಸೀನಾ ಅವರ ಕೊಲೆ ಪ್ರಯತ್ನ ಮಾಡಿತು. 2008ರ ನಂತರ ‘ಇಸ್ಲಾಮಿಕ್ ಸ್ಟೇಟ್’ ಉಗ್ರಗಾಮಿ ಸಂಘಟನೆಯಿಂದ ಸ್ಫೂರ್ತಿ ಪಡೆದ ಹಲವು ಗುಂಪುಗಳು ಹುಟ್ಟಿಕೊಂಡಿವೆ. ಇವೆಲ್ಲ ಸಂಘಟನೆಗಳು ಸೆಕ್ಯುಲರ್ ಉದಾರವಾದಿ ಚಿಂತಕರು, ಲೇಖಕರು, ಕಲಾವಿದರು, ಬುದ್ಧಿಜೀವಿಗಳು, ಕೆಲವು ಧಾರ್ಮಿಕ ಮುಖಂಡರು, ಶಿಯಾ ಪಂಥೀಯರ ಮೇಲೆ ದಾಳಿ, ಮರಣಾಂತಿಕ ಹಲ್ಲೆಗಳನ್ನು ಮಾಡಿವೆ.
ಇದನ್ನು ಓದಿ: ದಾಂಧಲೆಕೋರರ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಬಂಗಾಳದ ಬುದ್ದಿಜೀವಿಗಳಿಂದ ಬಾಂಗ್ಲಾ ಪ್ರಧಾನಿಗೆ ಪತ್ರ
ಈ ಸರಣಿ ದಾಳಿ ಮತ್ತು ಹಿಂಸಾಚಾರದ ಉದ್ದೇಶ ಈಗ ದುರ್ಬಲಗೊಂಡಿರುವ ಬಲಪಂಥೀಯ ರಾಜಕೀಯ ಶಕ್ತಿಗಳ ಚುನಾವಣಾ ಭವಿಷ್ಯ ಉತ್ತಮ ಪಡಿಸಲು ಎಂಬುದು ಸ್ಪಷ್ಟ. ವಿಮೋಚನಾ ಹೋರಾಟವನ್ನು ವಿರೋಧಿಸಿದ ಮತ್ತು ಪಾಕಿಸ್ತಾನಿ ಮಿಲಿಟರಿಯ ಯುದ್ಧಕಾಲದ ದೌರ್ಜನ್ಯಗಳಲ್ಲಿ ಸಾಥ್ ಕೊಟ್ಟ ಜಮಾತೇ ಇಸ್ಲಾಮಿ, ರಜಾಕಾರ್ ಮುಂತಾದ ಪಡೆಗಳ ನಾಯಕರು ಕಾರ್ಯಕರ್ತರನ್ನು ಶಿಕ್ಷಿಸುವ ಹೋರಾಟವನ್ನು, ಪ್ರಜಾಸತ್ತಾತ್ಮಕ ಚಳುವಳಿ ಮತ್ತು ಸರಕಾರ ಸುಪ್ರೀಂ ಕೋರ್ಟಿನವರೆಗೆ ಹೋಗಿ ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿತ್ತು. ಇದರಿಂದಾಗಿ ಈ ಸಂಘಟನೆಗಳ ಹಲವು ಹಿರಿಯ ನಾಯಕರು ಮತ್ತು ಪ್ರಮುಖ ಕಾರ್ಯಕರ್ತರು ಮರಣದಂಡನೆ ಎದುರಿಸುತ್ತಿದ್ದಾರೆ. ಇದರಿಂದಾಗಿ ಅದರ ಉಳಿದ ಕಾರ್ಯಕರ್ತರಲ್ಲಿ ಆತಂಕ, ಹಿಂಜರಿಕೆ ಮೂಡಿದೆ. ಸಾಲದೆಂಬಂತೆ ಶೇಖ್ ಹಸೀನಾ ಸರಕಾರದ ಆಡಳಿತದ ಕಾಲದಲ್ಲಿ ಸೀಮಿತವಾದರೂ ಆರ್ಥಿಕ ಬೆಳವಣಿಗೆ, ಮಾನವ ಅಭಿವೃದ್ಧಿಯ ಸೂಚಕಗಳಲ್ಲಿ ದೇಶ ಗಮನಾರ್ಹ ಪ್ರಗತಿ ಸಾಧಿಸಿದೆ. ಇದು ಬಲಪಂಥೀಯ ಮತ್ತು ಉಗ್ರಗಾಮಿ ಸಂಘಟನೆಗಳಲ್ಲಿ ಏನಾದರೂ ಮಾಡಬೇಕೆಂಬ ಹತಾಶೆ ಮೂಡಿಸಿದೆ. ಈ ದಾಳಿಗಳ ಮೂಲಕ ತಮ್ಮ ಇರವನ್ನು ಮತ್ತೆ ಘೋಷಿಸುವುದು ಮತ್ತು ರಾಜಕಾರಣದ ಸಂಕಥನವನ್ನು ಮತ್ತೆ ಧಾರ್ಮಿಕ ಪ್ರಚೋದನೆಗಳತ್ತ ತಿರುಗಿಸಲು ಪ್ರಯತ್ನಿಸುವುದು ಅವಕ್ಕೆ ಅನಿವಾರ್ಯವಾಗಿದೆ.
ಮುಂದೇನು?
ಯಾವ ಉಗ್ರಗಾಮಿ ಸಂಘಟನೆ ಈ ದಾಳಿಗಳನ್ನು ಎಸಗಿತು ಎಂದು ಇನ್ನೂ ತಿಳಿದು ಬಂದಿಲ್ಲ. ಬಂಗಾಳಿ ಹಿಂದುಗಳು ಸಾಮಾನ್ಯವಾಗಿ ರಾಮ, ಸೀತೆ, ಹನುಮಾನ್ ಮೂರ್ತಿಗಳ ಪೂಜೆ ಮಾಡುವುದಿಲ್ಲ. ಅದರಲ್ಲೂ ದುರ್ಗಾಪೂಜೆ ಪೆಂಡಾಲುಗಳಲ್ಲಂತೂ ಖಂಡಿತ ಇಡುವುದಿಲ್ಲ. ಇದು ಹಿಂದುತ್ವದ ಪ್ರತೀಕವಾದ ಆಚರಣೆ. ಆದರೆ ಕೊಮಿಲ್ಲ ಪೆಂಡಾಲಿನಲ್ಲಿ ಈ ರಾಮ, ಸೀತೆ, ಹನುಮಾನ್ ಮೂರ್ತಿಗಳನ್ನು ‘ಅಪವಿತ್ರ’ ಗೊಳಿಸಿರುವುದು ಮತ್ತು ಅದೇ ನೆಪದಲ್ಲಿ ಹಿಂಸಾಚಾರ ನಡೆದಿರುವುದು, ಪಶ್ಚಿಮ ಬಂಗಾಳದಲ್ಲಿ ಭಜರಂಗ ದಳ ಮತ್ತಿತರ ಸಂಘಪರಿವಾರದ ಸಂಘಟನೆಗಳು ಈ ವಿಷಯದಲ್ಲಿ (ಬಾಂಗ್ಲಾದೇಶದಲ್ಲಿ ಹಿಂದೂಗಳ ‘ನರಮೇಧ’ ನಡೆಯುತ್ತಿದೆ ಎಂಬಂತಹ) ಭಾರೀ ಅಪಪ್ರಚಾರ ಮಾಡುತ್ತಿರುವುದು, ಹಲವು ನಿಗೂಢ ಶಕ್ತಿಗಳ ಕೂಟ ಈ ಹಿಂಸಾಚಾರದ ಹಿಂದಿವೆ ಎಂಬ ಅನುಮಾನ ಹುಟ್ಟಿಸುತ್ತವೆ.
ಇದನ್ನು ಓದಿ: ಭಾವನೆಗಳ ವಾರಸುದಾರರೂ ಧಕ್ಕೆಗೊಳಗಾದ ವಿವೇಚನೆಯೂ
ಈಗಾಗಲೇ ಹೇಳಿದ ಹಾಗೆ ಅವಾಮಿ ಲೀಗ್ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈ ಹಿಂಸಾಚಾರದಲ್ಲಿ ತೊಡಗಿದ್ದ ನೂರಾರು ಪುಂಡರನ್ನು ಬಂಧಿಸಲಾಗಿದೆ. ಈ ವ್ಯಾಪಕ ಪಿತೂರಿ ಹಿಂದಿರುವ ಶಕ್ತಿಗಳು ಸಂಘಟನೆಗಳು ಯಾವುದು ಎಂಬುದರ ಬಗ್ಗೆ ತನಿಖೆ ನಡೆದಿದೆ. ಹಿಂದೂ ಅಲ್ಪ ಸಂಖ್ಯಾತರಿಗೆ ಸುರಕ್ಷೆಯ ಭಾವ ಕೊಡುವ ಪ್ರಯತ್ನ ಮಾಡುತ್ತಿದೆ. ಆದರೆ ಬಾಂಗ್ಲಾದೇಶದಲ್ಲಿ ಸೆಕ್ಯುಲರಿಸಂ ನ ಎಳೆಗಳು ದುರ್ಬಲವಾಗಿವೆ. ಇಸ್ಲಾಮಿಕ್ ಮೂಲಭೂತವಾದದ ದಾಳಿ ತಾಳಿಕೊಂಡು ಸೆಕ್ಯುಲರಿಸಂನ್ನು ರಕ್ಷಿಸಿ ಮುನ್ನಡೆಯಬೇಕಾದರೆ ಸರಕಾರ, ಶಾಂತಿಯುತ ಪ್ರಗತಿಯಲ್ಲಿ ನಂಬಿಕೆಯಿರುವ ಶಕ್ತಿಗಳು ಮತ್ತು ಜನತೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಐದು ದಶಕಗಳ ನಂತರ ವಿಮೋಚನಾ ಸಮರದ ನೆನಪು ಮಾಸುತ್ತಿರುವಂತೆ, ಈ ನೆನಪುಗಳೇ ಇಲ್ಲದ ಹೊಸ ಪೀಳಿಗೆ ಮೂಡುತ್ತಿರುವಾಗ ಇದಕ್ಕೆ ಹಲವು ಹೊಸ ಕ್ರಮಗಳ ಅಗತ್ಯವಿದೆ. ಈ ಹಿಂಸಾಚಾರದ ದಾಳಿಗಳು ಇದಕ್ಕೆ ಎಚ್ಚರಿಕೆಯ ಗಂಟೆಯಾಗಿವೆ.
ಎಡ ಪ್ರಗತಿಪರ ಶಕ್ತಿಗಳು ಈ ದಾಳಿಯನ್ನು ಅರ್ಥ ಮಾಡಿಕೊಂಡು ಕಾರ್ಯಪ್ರವೃತ್ತವಾಗಿವೆ ಎಂಬ ವರದಿಗಳು ಬರುತ್ತಿವೆ. ದೇಶದ ಧಾರ್ಮಿಕ ಸೌಹಾರ್ದತೆ, ಉದಾರವಾದಿ ಸೆಕ್ಯುಲರ್ ಪರಂಪರೆ ಗಳನ್ನು ಎತ್ತಿ ಹಿಡಿಯುವ ಸಾಂಸ್ಕೃತಿಕ ಚಳುವಳಿ, ಯುವ ನಿರುದ್ಯೋಗ (ಇವರನ್ನೆ ಯಾವುದೇ ಧಾರ್ಮಿಕ ಮೂಲಭೂತವಾದ ದಾಳವಾಗಿ ಬಳಸುವುದು) ಕ್ಕೆ ಪರಿಹಾರ – ಇವೆರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಬೇಕಿದೆ. ಅವಾಮಿ ಲೀಗ್ ಸರಕಾರದಲ್ಲಿ ಈ ಕುರಿತು ಇನ್ನೂ ಸಾಕಷ್ಟು ಸ್ಪಷ್ಟತೆಯಿಲ್ಲ. ವಿಮೋಚನಾ ಸಮರದ ಮೌಲ್ಯಗಳು ಇನ್ನೂ ಬಲವಾಗಿವೆ ಎಂದು ಅದು ನಂಬಿದಂತಿದೆ. ಹಾಗಾಗಿ ಅದನ್ನು ಅರ್ಥ ಮಾಡಿಸಲು ಎಡ ಶಕ್ತಿಗಳು ಒತ್ತಡ ಹೇರುತ್ತಿವೆ.
ಸಂಗ್ರಹಾನುವಾದ: ವಸಂತರಾಜ ಎನ್.ಕೆ