ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ; ಕಾಂಗ್ರೆಸ್-ಜೆಡಿಎಸ್ ಜಗಳ ಬಿಜೆಪಿಗೆ ಲಾಭವಾಗಲಿದೆಯೇ ?

ಮಂಜುನಾಥ ದಾಸನಪುರ

 

 

ರಾಜ್ಯದ ಬದಲಾಗುತ್ತಿರುವ ರಾಜಕೀಯ ಇತಿಹಾಸವನ್ನು ಗಮನಿಸುವುದಾದರೆ ಗ್ರಾಮೀಣ ಪ್ರದೇಶಗಳು ಕಾಂಗ್ರೆಸ್. ನಗರ ಪ್ರದೇಶಗಳು ಬಿಜೆಪಿಯ ಪ್ರಾಬಲ್ಯ ಹೊಂದಿರುವುದನ್ನು ನಾವು ಗಮನಿಸಬಹುದು. ಬೆಂಗಳೂರಿನ ಸುತ್ತಮುತ್ತ ಪ್ರದೇಶಗಳು ನಗರ ವ್ಯಾಪ್ತಿಗೆ ಬರುವುದಕ್ಕೂ ಅಲ್ಲಿ ಬಿಜೆಪಿ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಳ್ಳವ ಪ್ರಕ್ರಿಯೆಗಳು ಜೊತೆ ಜೊತೆಯಾಗಿಯೇ ಸಾಗುತ್ತಿದೆಯೇನೊ ಎಂಬ  ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಬೆಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಬೇಗೂರು ವಾರ್ಡ್ ನ್ನೆ ನಾವು ಗಮನಿಸಬಹುದು. ೨ಸಾವಿರದ ಇಸವಿವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಪ್ರದೇಶವು, ಆ ನಂತರದ ವರ್ಷಗಳಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಒಳಪಡುತ್ತಿದ್ದಂತೆ ನಿಧಾನವಾಗಿ ಆ ಪ್ರದೇಶಗಳಲ್ಲಿ ಕೇಸರಿ ಬಾವುಟಗಳು ಹಾರಾಡ ತೊಡಗಿದವು.

ಕ್ಷೇತ್ರದಲ್ಲಿ ಬಿಜೆಪಿ ಪಾರುಪತ್ಯ :

೨೦೦೮ರಲ್ಲಿ ಕ್ಷೇತ್ರಗಳ ಪುನರ್ ವಿಂಗಡನೆಯ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ರಚನೆಯಾಯಿತು. ೨೦೦೮ರಿಂದ ೨೦೧೮ರವರೆಗಿನ ಮೂರು ಅವಧಿಯಲ್ಲೂ ಎಂ.ಕೃಷ್ಣಪ್ಪ ಅವರೇ ಜಯಭೇರಿ ಭಾರಿಸಿದ್ದಾರೆ. ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ ಹಾಗೂ ಒಕ್ಕಲಿಗರ ಸಂಖ್ಯೆ ಹೆಚ್ಚಿದೆ. ಈ ಮತಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಹಂಚಿ ಹೋಗುವುದರಿಂದ ಬಿಜೆಪಿಗೆ ಗೆಲುವು ಸುಲಭವಾಗುತ್ತಿದೆಯೆಂದು ಸ್ಥಳೀಯರು ಅಭಿಪ್ರಾಯಿಸುತ್ತಾರೆ.

೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೃಷ್ಣಪ್ಪ ಅವರು ೧,೫೨,೪೨೭, ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಅವರು ೧,೨೨,೦೬೮ ಹಾಗೂ ಜೆಡಿಎಸ್ ಅಭ್ಯರ್ಥಿ ಆರ್.ಪ್ರಭಾಕರ್ ರೆಡ್ಡಿ ಅವರು ೩೬,೧೩೮ ಮತಗಳನ್ನು ಪಡೆಯುತ್ತಾರೆ. ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಇದ್ದ ಸಂದರ್ಭದಲ್ಲಿ ಜೆಡಿಎಸ್ ಸ್ಪರ್ಧೆಯಿಂದಾಗಿ ಕಾಂಗ್ರೆಸ್‌ಗೆ ಗೆಲುವು ಅಸಾಧ್ಯವಾಯಿತು ಎಂಬ ಅಭಿಪ್ರಾಯವಿದೆ.

ಈ ಬಾರಿಯೂ ಬಿಜೆಪಿಗೆ ಲಾಭ :
೨೦೧೮ರ ವಿಧಾನಸಭಾ ಚುನಾವಣೆಯಿಂತೆ ಈ ಬಾರಿಯೂ ಕಾಂಗ್ರೆಸ್-ಜೆಡಿಎಸ್ ನಡುವೆ ಮತ ವಿಭಜನೆಯಿಂದ ಬಿಜೆಪಿಗೆ ಸುಲಭವಾಗಿ ಗೆಲ್ಲಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕಳೆದ ೩೦ವರ್ಷಗಳಿಂದ ಕಾಂಗ್ರೆಸ್‌ನಲ್ಲಿದ್ದು, ಆ ಪ್ರದೇಶಗಳಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಹೊಂದಿರುವ ರಾಜಗೋಪಾಲ್ ರೆಡ್ಡಿ ಅವರ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗಲಿಲ್ಲವೆಂದು ಮುನಿಸಿಕೊಂಡು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನ ಸಾಕಷ್ಟು ಮತಗಳು ಜೆಡಿಎಸ್ ಪಾಲಾಗಲಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಜಗಳ ಬಿಜೆಪಿಗೆ ಲಾಭ ಮಾತುಗಳು ಈಗಾಗಲೇ ಕ್ಷೇತ್ರದಲ್ಲಿ ಮನೆ ಮಾತಾಗಿದೆ.

ರಿಯಲ್ ಎಸ್ಟೇಟ್ ಉದ್ಯಮ ಬಿಜೆಪಿಗೆ ವರದಾನ :

ರಾಜಧಾನಿಯ ಶಕ್ತಿಕೇಂದ್ರವಾಗಿರುವ ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿರುವ ಬೆಂಗಳೂರು ದಕ್ಷಿಣ ಪ್ರದೇಶಗಳಲ್ಲಿ ೨ಸಾವಿರನೇ ಇಸವಿಯ ನಂತರ ರಿಯಲ್ ಎಸ್ಟೇಟ್ ಉದ್ಯಮ ವೇಗವಾಗಿ ಬೆಳೆಯ ತೊಡಗಿತು. ಇದರಿಂದ ಈ ಪ್ರದೇಶಗಳಲ್ಲಿ ಆರ್ಥಿಕ ಸಂಪತ್ತು ದಿನೆ ದಿನೆ ಹೆಚ್ಚಳವಾಗುತ್ತಾ ಹೋಯಿತು. ಜಮೀನು ಮಾರಾಟದಿಂದ ಕೋಟ್ಯಂತರ ರೂ. ಹಣ, ಹೊಸ ಹೊಸ ಲೇಔಟ್‌ಗಳ ನಿರ್ಮಾಣದಿಂದ ಅದರ ಅವಲಂಭಿತ ಉದ್ಯಮಗಳಿಂದ ಹಣ ಗಳಿಕೆ. ಇದೆಲ್ಲ ಆರ್ಥಿಕ ಸಂಪತ್ತು ಶೇ.೯೦ರಷ್ಟು ಬಲಿಷ್ಟ ಜಾತಿಗಳಲ್ಲಿಯೇ ಕ್ರೂಢೀಕರಣಗೊಳ್ಳುವಂತೆ ಮಾಡಲಾಯಿತು.
ಹಾಗೂ ಹೊಸ ಹೊಸ ಲೇಔಟ್‌ಗಳಲ್ಲಿ ವಾಸಿಸುವ ಬಹುತೇಕರು ಬಲಿಷ್ಟ ಜಾತಿಗಳ ಮಂದಿಯೇ ಆಗಿದ್ದಾರೆ. ಈ ಬಲಿಷ್ಟ ಜಾತಿ ಸಮುದಾಯಗಳ ಬಹುತೇಕ ಮಂದಿ ಬಿಜೆಪಿ ಬೆಂಬಲಿಗರೇ ಆಗಿದ್ದಾರೆ. ಇವರಿಗೆ ಬೆಲೆ ಏರಿಕೆ ಆಗಲಿ, ಭ್ರಷ್ಟಾಚಾರವಾಗಲಿ, ಸ್ವಜನ ಪಕ್ಷಪಾತದ ಸಮಸ್ಯೆಗಳು ಸಮಸ್ಯೆಗಳೇ ಅಲ್ಲಯೆಂಬ ಭಾವನೆಯಿದೆ. ಮುಖ್ಯವಾಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಆರ್ಥಿಕ ಸಂಪತ್ತು ಹೊಂದಿರುವ ಬಲಿಷ್ಟ ಜಾತಿಯೇ ಮಂದಿ ಸ್ಥಳೀಯ ಪ್ರದೇಶಗಳ ಹಿಡಿತವನ್ನು ಹೊಂದಿದ್ದು, ಜನರ ಮತಗಳನ್ನು ಯಾವ ಪಕ್ಷಕ್ಕೆ ಚಲಾಯಿಸಬೇಕೆಂಬ ನಿರ್ಣಯಕ ಪಾತ್ರ ಹೊಂದಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಬಿಜೆಪಿಯ ಬೆಂಬಲಿಗರೇ ಆಗಿದ್ದಾರೆ.

ಬೆಂ.ದಕ್ಷಿಣ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳು :

ಕ್ಷೇತ್ರದಾದ್ಯಂತ ದಿನಕ್ಕೊಂದರAತೆ ಹೊಸ, ಹೊಸ ಲೇಔಟ್‌ಗಳು ತಲೆ ಎತ್ತುತ್ತಿವೆ. ಅಪಾರ್ಟ್ಮೆಂಟ್‌ಗಳು ಮುಗಿಲೆತ್ತರಕ್ಕೆ ಏರುತ್ತಿವೆ. ಆದರೆ, ಅದಕ್ಕೆ ಸೂಕ್ತವಾದ ಸೂಕ್ತವಾದ ಮೂಲ ಸೌಕರ್ಯವಿಲ್ಲ. ಮಳೆ ಬಂದರೆ ಮನೆಗಳಿಗೆ ನೀರು ನುಗ್ಗುತ್ತದೆ. ಸರಿಯಾದ ಚರಂಡಿ, ರಸ್ತೆ ಸೇರಿದಂತೆ ಮೂಲಭೂತ ವ್ಯವಸ್ಥೆಯಿಲ್ಲ. ರಿಯಲ್ ಎಸ್ಟೇಟ್ ಮಾಫಿಯಾದಿಂದ ಹೊಲ, ಗದ್ದೆ, ತೋಟಗಳನ್ನು ಕಳೆದುಕೊಂಡವರಿಗೆ ಸರಿಯಾದ ಉದ್ಯೋಗ ವ್ಯವಸ್ಥೆಯಿಲ್ಲ. ಕೆರೆ ಕುಂಟೆಗಳು ಚರಂಡಿನ ನೀರಿನ ಆವಾಸ ಸ್ಥಾನವಾಗಿದೆ. ಹೀಗೆ ಹೇಳುತ್ತಾ ಹೋದರೆ ಸಮಸ್ಯೆಗಳ ಮಹಾಪೂರವೇ ಇದೆ. ಇದೆಲ್ಲವು ಚುನಾವಣೆಯಲ್ಲಿ ಪ್ರಮುಖ ಅಂಶಗಳು ಆಗದಿರುವುದು ದುರಂತವೇ ಸರಿ. ಇನ್ನು ಕ್ಷೇತ್ರದಲ್ಲಿ ಅಂದಾಜು ೫,೮೧,೪೦೮ ಮತದಾರರಿದ್ದು, ಒಕ್ಕಲಿಗ(೧,೪೦,೦೦೦), ಲಿಂಗಾಯತ (೫೫೦೦೦) ಹಾಗೂ ದಲಿತ (೧,೫೪,೦೦೦) ಸಮುದಾಯದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ

Donate Janashakthi Media

Leave a Reply

Your email address will not be published. Required fields are marked *