ಬೆಂಗಳೂರಿನ ಬೃಹತ್ ಕಸ ಮತ್ತು ವಲಸೆ ಕಾರ್ಮಿಕರು

ಈ ಅಂತರರಾಜ್ಯ ವಲಸೆ ಕಾರ್ಮಿಕರೊಂದಿಗೆ ಬೆಂಗಳೂರಿನ ಬೃಹತ್ ಕಸ ಸಂಗ್ರಹದಲ್ಲಿ 25 ಸಾವಿರಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಗುತ್ತಿಗೆದಾರರು ಸರಿಯಾದ ಕನಿಷ್ಟ ವೇತನ, ಪಿಎಫ್, ಇಎಸ್‌ಐ ಮತ್ತು ಸ್ವಚ್ಛತಾ ಸಾಮಾಗ್ರಿಗಳನ್ನು ಒದಗಿಸುತ್ತಿಲ್ಲ. ತಿಂಗಳಿಗೆ ಸರಿಯಾಗಿ ವೇತನವನ್ನೂ ಪಾವತಿಸುತ್ತಿಲ್ಲ. ಈ ನಡುವೆ ಅವರಿಗೆ ನೀಡಲಾಗುತ್ತಿದ್ದ ಬೆಳಿಗಿನ ಬಿಸಿ ಊಟ ಮೊದಲಿಗೆ ಇಸ್ಕಾನ್ ಊಟವಾಗಿ ನಂತರ ಇಂದಿರಾ ಕ್ಯಾಂಟೀನ್ ಊಟವಾಗಿ ಇದೀಗ ಬಿಜೆಪಿ ಸರ್ಕಾರ ಬಂದ ಮೇಲೆ ಅದೂ ಇಲ್ಲದಾಗಿದೆ

– ಕೆ.ಎನ್.ಉಮೇಶ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಬಿಎಂಪಿ ಯ ಹೆಸರೇ ಸೂಚಿಸುವಂತೆ ಬೆಂಗಳೂರಿನ ಪ್ರತಿಯೊಂದು ಸಹಾ ಬೃಹದಾಕಾರವಾಗಿದೆ. ಬೆಂಗಳೂರಿನ ಕಸದ ಉತ್ಪತ್ತಿಯೂ ಸಹಾ ನಿತ್ಯ 5 ಸಾವಿರ ಟನ್‌ಗಳಷ್ಟು ಬೃಹತ್ತಾಗಿದೆ. ಇದರಲ್ಲಿ ನಿತ್ಯ 3 ಸಾವಿರ ಟನ್‌ಗಳಷ್ಟು ಮಿಶ್ರ ಕಸವು ಭೂಭರ್ತಿ ಕೇಂದ್ರವನ್ನು ತಲುಪುತ್ತಿದೆ.

ಮಿಶ್ರ ಕಸವು ಭೂಭರ್ತಿ ಕೇಂದ್ರಗಳನ್ನು ತಲುಪಬಾರದೆಂಬ ಹಸಿರು ನ್ಯಾಯ ಮಂಡಳಿಯ ತೀರ್ಪಿಗೆ ವ್ಯತಿರಿಕ್ತವಾಗಿ ಇಂದೂ ಸಹಾ ಭೂಭರ್ತಿ ಕೇಂದ್ರಗಳನ್ನು ತಲುಪುತ್ತಿದೆ ಎಂಬುದನ್ನು ಸರ್ಕಾರದ ಅಂಕಿಅಂಶಗಳು ತೋರುತ್ತವೆ. ಇದಕ್ಕೆ ಬಿಬಿಎಂಪಿ ವ್ಯಾಪ್ತಿಯ ಕಸದ ಮಾಫಿಯದಲ್ಲಿರುವ ಗುತ್ತಿಗೆದಾರರು, ಅಧಿಕಾರಿಗಳು, ಭ್ರಷ್ಟ ಕಾರ್ಪೊರೇಟರ್‌ಗಳು ಮತ್ತು ರಿಯಲ್ ಎಸ್ಟೇಟ್ ಕುಳಗಳ ಅಪವಿತ್ರ ಮೈತ್ರಿಯು ಕಾರಣವಾಗಿದೆ.

ಕಸ ರೂಪಿಸಿದ ಬದುಕು:

ಈ ನಿಟ್ಟಿನಲ್ಲಿ ಮಿಶ್ರ ಕಸವನ್ನು ವಿಂಗಡಿಸುವ ಅದರಲ್ಲಿ ಮರುಬಳಕೆಗೆ ಯೋಗ್ಯವಾಗುವ ಕಸವನ್ನು ಬೇರ್ಪಡಿಸಿ ಮಾರಾಟ ಮಾಡುವ ದೊಡ್ಡ ಜಾಲವೊಂದು ಬೆಂಗಳೂರಿನಲ್ಲಿದೆ. ಈ ಕಸ ವಿಂಗಡಣೆ ಮತ್ತು ಪ್ರತ್ಯೇಕಗೊಳಿಸುವಿಕೆಯಲ್ಲಿ ಸಾವಿರಾರು ಸಂಖ್ಯೆಯ ಅಂತರರಾಜ್ಯ ವಲಸೆ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ಅವರನ್ನು ಕೆಲಸಕ್ಕೆಂದು ಕರೆತರುವ ಅವರವರ ರಾಜ್ಯದ ಗುತ್ತಿಗೆದಾರರು ಅವರನ್ನು ಈ ಕೆಲಸಗಳಿಗೆ ನಿಯೋಜಿಸಿಕೊಂಡಿದ್ದಾರೆ. ಮಿಶ್ರ ಕಸವನ್ನು ಹೊತ್ತು ತರಲು ಇರುವ ಬಿಬಿಎಂಪಿ ಟ್ರಿಪ್ಪರ್ ಆಟೋಗಳು, ಮುಂತಾದ ವಾಹನಗಳು ತಂದು ಸುರಿಯುವ ಮಿಶ್ರ ಕಸದಲ್ಲೇ ಮಿಂದೆದ್ದು ಕಸ ಬೇರ್ಪಡಿಸುವ ಮತ್ತು ಪ್ರತ್ಯೇಕಗೊಳಿಸುವ ನಿತ್ಯ ಕಾಯಕದಲ್ಲಿ ಈ ಅಂತರರಾಜ್ಯ ವಲಸೆ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ.

ಕಸದ ನಡುವೆ ವಾಸ:

ಕಸದ ರಾಶಿ ಪಕ್ಕದಲ್ಲೇ ಪ್ರತ್ಯೇಕಗೊಳಿಸಿದ ಕಸದ ಜೊತೆಯಲ್ಲೇ ಶೆಡ್‌ಗಳಲ್ಲಿ ಬದುಕನ್ನು ಕಟ್ಟಿಕೊಳ್ಳುವ ಜೀವನ ಇವರದಾಗಿದೆ. ಈ ಕೆಲಸಗಳು ಮತ್ತು ಅವರ ನೆಲೆಸುವಿಕೆ ಸರ್ಕಾರಿ ಬೀಳು ಜಮೀನಿನಲ್ಲಿ ನಡೆಯುತ್ತಿದೆ. ಈ ಬೀಳು ಜಮೀನಿನಲ್ಲಿ ಕೆಲವರು ಸ್ವಯಂ ಘೋಷಿತ ಅದರ ಮಾಲೀಕರು ಒಂದು ಶೆಡ್‌ಗೆ ಕನಿಷ್ಟ ಸಾವಿರದಿಂದ ಒಂದುವರೆ ಸಾವಿರ ಮಾಸಿಕ ನೆಲಬಾಡಿಗೆಯನ್ನು ಪಡೆಯುವ ಪುಡಾರಿಗಳಿದ್ದಾರೆ. ಈ ಬಾಡಿಗೆಯಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿನ ದರವೂ ಬಹುತೇಕ ಸೇರಿರುತ್ತದೆ. ಆ ಬೀಳು ಭೂಮಿಯಲ್ಲಿ ಜಂಕ್‌ಶೀಟ್ ಶೆಡ್ ಹಾಕುವ ಜವಾಬ್ದಾರಿ ಅವರನ್ನು ಕರೆತಂದ ಗುತ್ತಿಗೆದಾರರದ್ದಾಗಿರುತ್ತದೆ. 8 ಅಡಿ 10 ಅಡಿಯೂ ಉದ್ದಗಲವಿಲ್ಲದ ಶೆಡ್‌ಗಳಿಗೆ ಮಾಸಿಕ ಒಂದರಿಂದ ಒಂದೂವರೆ ಸಾವಿರ ಬಾಡಿಗೆ ತೆತ್ತು ಈ ವಲಸೆ ಕಾರ್ಮಿಕರು ಕೊಚ್ಚೆ ಮೋರಿ ಚರಂಡಿಯ ಪಕ್ಕದಲ್ಲಿಯೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಆ ಶೆಡ್‌ಗಳಲ್ಲೇ ಟಿ.ವಿ.ಗಳನ್ನು ಮತ್ತು ಆ ಶೆಡ್‌ಗಳ ಸುತ್ತಮುತ್ತ ವಠಾರದಲ್ಲೇ ತಮ್ಮ ಊರುಗಳನ್ನು ಕಟ್ಟಿಕೊಂಡಿದ್ದಾರೆ. ಅಲ್ಲಿನ ಪ್ರತಿ ಶೆಡ್‌ನಲ್ಲೂ ಒಂದೊಂದು ಕುಟುಂಬ ವಾಸವಿದ್ದರೆ, ಆ ಕುಟುಂಬಕ್ಕೆ ಕನಿಷ್ಟ 2 ರಂತೆ ಅದೇ ವಠಾರದಲ್ಲಿ ನೂರಾರು ಮಕ್ಕಳು ಆ ಕಸದ ನಡುವೆ ಬದುಕನ್ನು ದೂಡುತ್ತಿದ್ದಾರೆ. ಶಾಲೆಯೂ ಇಲ್ಲ, ಪಾಠವೂ ಇಲ್ಲ, ಆಟವೂ ಇಲ್ಲ ಎಂಬುದು ಮಕ್ಕಳ ಬಾಲ್ಯವಾಗಿದೆ. ಆದರೆ ಬೆಂಗಳೂರಿನ ಈ ಬೃಹತ್ ಕಸದ ನಡುವೆ ಬಿದ್ದ ಹೊರಳಾಡುವ ಭಾಗ್ಯವೇ ಅವರಿಗೆ ಲಭಿಸಿರುವ ಆಟ-ಪಾಠವಾಗಿದೆ.

ಬೀಳು ಭೂಮಿಗೂ ದಣಿಗಳು:

ಇಂತಹ ಪ್ರತಿ 20 ರಿಂದ 30 ಶೆಡ್‌ಗಳಿಗೆ ಮಾಸಿಕ 50,000 ರೂಗಳ ಬಾಡಿಗೆ ಪಡೆಯುವ ಸ್ಥಳೀಯ ರಾಜಕೀಯ ಭಂಟರು ಆ ಜಮೀನುಗಳ ಮಾಲೀಕರಾಗಿದ್ದಾರೆ. ಆದರೆ ವಾಸ್ತವದಲ್ಲಿ ಅದು ಸರ್ಕಾರಿ ಜಮೀನಾಗಿದೆ. ಈ ವಲಸೆ ಕಾರ್ಮಿಕರ ಶೆಡ್‌ಗಳ ಬಗಲಲ್ಲೇ ದೊಡ್ಡ ದೊಡ್ಡ ಗಗನಚುಂಬಿ ಅಪಾರ್ಟ್ಮೆಂಟ್‌ಗಳು ತಲೆ ಎತ್ತಿ ನಿಂತಿವೆ. ಆ ಅಪಾರ್ಟ್ಮೆಂಟ್‌ಗಳಲ್ಲಿರುವ ಅಂತರರಾಜ್ಯ ಭೌದ್ಧಿಕ ವಲಸಿಗರ ಮನೆಗಳಿಗೆ ಈ ಶೆಡ್‌ಗಳಲ್ಲಿನ ಹೆಣ್ಣುಮಕ್ಕಳು ಮನೆಕೆಲಸಕ್ಕೆಂದು ಹೋಗಿಬರುತ್ತಾರೆ. ಆ ಮೂಲಕ ಮನೆಕೆಲಸಗಾರರಾದ ಅವರು ಮಾಸಿಕ ಐದರಿಂದ ಆರು ಸಾವಿರ ದುಡಿದರೆ ಅವರ ಗಂಡಂದಿರು ಅಥವಾ ಅವರ ಮನೆಯಲ್ಲಿರುವ ಗಂಡಸರು ಹಾಗೂ ಇವರು ಸೇರಿ ಕಸ ಬೇರ್ಪಡಿಸುವಿಕೆ ಮೂಲಕ ಆರು-ಏಳು ಸಾವಿರ ದುಡಿದು ಬದುಕನ್ನು ಕಟ್ಟಿಕೊಂಡಿದ್ದಾರೆ. ದೂರದ ಪಶ್ಚಿಮ ಬಂಗಾಳ, ಓಡಿಸ್ಸಾ, ಬಿಹಾರ, ಉತ್ತರಪ್ರದೇಶ, ಅಸ್ಸಾಂ, ಜಾರ್ಖಂಡ್, ಉತ್ತರಖಂಡ್, ಛತ್ತೀಸ್‌ಗಡ ಮತ್ತು ಮಧ್ಯಪ್ರದೇಶದಿಂದ ವಲಸೆ ಬಂದಿರುವ ಈ ಕಾರ್ಮಿಕರು ಈ ಕೆಲಸವೇ ಅವರಿಗೆ ಲಭಿಸಿರುವ ಭಾಗ್ಯವೆಂದು ಭಾವಿಸುತ್ತಾ ಕಸದಲ್ಲೇ ಮಿಂದೆದ್ದು ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ.

ರಿಯಲ್ ಎಸ್ಟೇಟ್ ಮಾಫಿಯಾ : ಬೇನಾಮಿ ಭೂಮಿ :

ವಲಸೆ ಕಾರ್ಮಿಕರ ಈ ಶೆಡ್‌ಗಳ ಪಕ್ಕದಲ್ಲಿನ ಗಗನಚುಂಬಿ ಅಪಾರ್ಟ್ಮೆಂಟ್‌ಗಳ ಕಾಪೌಂಡ್ ವಿಸ್ತರಣೆಗೊಳ್ಳುವ ಸಮಯ ಬಂದೊಡನೆ ಇವರಿಂದ ಬಾಡಿಗೆ ಪಡೆಯುತ್ತಿದ್ದ ಸ್ವಘೋಷಿತ ಆ ಭೂಮಿಯ ಮಾಲೀಕರು ನಾಪತ್ತೆಯಾಗುತ್ತಾರೆ. ಅಲ್ಲಿ ನೆಲೆಸಿರುವ ವಲಸಿಗರು ಬಾಂಗ್ಲಾದೇಶಿಗರೋ ಅಥವಾ ರೋಹಿಂಗ್ಯಾ ಮುಸಲ್ಮಾನರೋ ಆಗಿಬಿಡುತ್ತಾರೆ. ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಲು ಬಿಬಿಎಂಪಿ, ಪೋಲಿಸರು ಮತ್ತು ಸ್ಥಳೀಯ ರಿಯಲ್ ಎಸ್ಟೇಟ್ ಕುಳಗಳು, ದೊಡ್ಡ ದೊಡ್ಡ ಜೆಸಿಬಿಗಳು ಮತ್ತು ಬುಲ್ಡೋಸರ್‌ಗಳ ಮೂಲಕ ಬಂದು ನಿಲ್ಲುತ್ತಾರೆ. ಅಲ್ಲಿಂದ ಒಕ್ಕಲೆಬ್ಬಿಸುತ್ತಾರೆ, ಇಲ್ಲದಿದ್ದರೆ ಬಾಂಗ್ಲಾ ದೇಶೀ ಅಥವಾ ರೋಹಿಂಗ್ಯಾ ನಿರಾಶಿತರೆಂದು ಹಣೆಪಟ್ಟಿ ಕಟ್ಟಿ ಜೈಲಿಗೆ ಹೋಗಿ ಎನ್ನುತ್ತಾರೆ. ಬದುಕುಳಿಯಲು ವಲಸಿಗ ಕಾರ್ಮಿಕರು ತಮ್ಮ ಸಾಮಾನು ಸರಂಜಾಮನ್ನು ಎತ್ತಿಕೊಂಡು ಮತ್ತಿನ್ನೊಬ್ಬ ಸ್ವಘೋಷಿತ ಬೀಳು ಭೂಮಿಯ ಮಾಲೀಕ ತೋರುವ ಜಾಗಕ್ಕೆ ಹೋಗಿ ಮತ್ತೆ ಟೆಂಟ್ ಹೊಡೆಯುತ್ತಾರೆ. ಇವರು ಖಾಲಿ ಮಾಡಿದ ಜಾಗಗಳಿಗೆ ಪಕ್ಕದ ಅಪಾರ್ಟ್ಮೆಂಟ್ ಮಾಲೀಕರೇ ಮಾಲೀಕರಾಗಿ ಅವರ ಅಪಾರ್ಟ್ಮೆಂಟ್‌ಗಳ ಅನೆಕ್ಷರ್ ಕಟ್ಟಡಗಳು ತಲೆ ಎತ್ತಿ ನಿಲ್ಲುತ್ತವೆ. ಇಂತಹ ವಸಲಿಗರಿದ್ದು ತೆರವುಗೊಳಿಸಿದ ಹಲವು ಜಾಗಗಳಿಗೆ ಕಾಂಗ್ರೆಸ್, ಬಿಜೆಪಿ ನಾಯಕರುಗಳ ಜುಗಲ್‌ಬಂದಿ ಮಾಲೀಕತ್ವ, ಕಾಪೌಂಡ್ ಗೋಡೆಗಳು ನಿರ್ಮಿತವಾಗುತ್ತವೆ. ಒಟ್ಟಾರೆ ಅಂತರರಾಜ್ಯ ವಲಸೆ ಕಾರ್ಮಿಕರು ಒಂದೆಡೆ ಹಸಿರು ನ್ಯಾಯಮಂಡಳಿಯ ಆದೇಶದಂತೆ ಮಿಶ್ರ ಕಸ ಬೇರ್ಪಡಿಸುವಿಕೆಯಲ್ಲಿ ಬದುಕಿನ ರಸವನ್ನು ಸವಿಯುತ್ತಲೇ ಇನ್ನೊಂದೆಡೆ ರಿಯಲ್ ಎಸ್ಟೇಟ್ ಭೂ ಮಾಫಿಯಾದ ಅಕ್ರಮ ಬೇನಾಮಿ ಭೂಮಿಯನ್ನು  ಸಕ್ರಮಗೊಳಿಸುವಲ್ಲಿ ನಿರತರಾಗಿದ್ದಾರೆ. ಈ ಪ್ರಕ್ರಿಯೆಯಲ್ಲಿ ರಿಯಲ್ ಎಸ್ಟೇಟ್ ಕುಳಗಳು ಸಾವಿರಾರು ಕೋಟಿ ಮಾಡಿದರೆ, ಬೃಹತ್ ಕಸದ ಗುತ್ತಿಗೆದಾರರು ನೂರಾರು ಕೋಟಿ ಕಮಾಯಿಸುತ್ತಾ, ಅಧಿಕಾರಿಗಳು ಹತ್ತಾರು ಕೋಟಿಯ ಒಡೆಯರಾಗುತ್ತಿದ್ದಾರೆ.

ಮಹಾನಗರದ ಕಸಸಂಗ್ರಹ – ಗುತ್ತಿಗೆ ಕಾರ್ಮಿಕರು :

ಈ ಅಂತರರಾಜ್ಯ ವಲಸೆ ಕಾರ್ಮಿಕರೊಂದಿಗೆ ಬೆಂಗಳೂರಿನ ಬೃಹತ್ ಕಸ ಸಂಗ್ರಹದಲ್ಲಿ 25 ಸಾವಿರಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಗುತ್ತಿಗೆದಾರರು ಸರಿಯಾದ ಕನಿಷ್ಟ ವೇತನ, ಪಿಎಫ್, ಇಎಸ್‌ಐ ಮತ್ತು ಸ್ವಚ್ಛತಾ ಸಾಮಾಗ್ರಿಗಳನ್ನು ಒದಗಿಸುತ್ತಿಲ್ಲ. ತಿಂಗಳಿಗೆ ಸರಿಯಾಗಿ ವೇತನವನ್ನೂ ಪಾವತಿಸುತ್ತಿಲ್ಲ. ಈ ನಡುವೆ ಅವರಿಗೆ ನೀಡಲಾಗುತ್ತಿದ್ದ ಬೆಳಿಗಿನ ಬಿಸಿ ಊಟ ಮೊದಲಿಗೆ ಇಸ್ಕಾನ್ ಊಟವಾಗಿ ನಂತರ ಇಂದಿರಾ ಕ್ಯಾಂಟೀನ್ ಊಟವಾಗಿ ಇದೀಗ ಬಿಜೆಪಿ ಸರ್ಕಾರ ಬಂದ ಮೇಲೆ ಅದೂ ಇಲ್ಲದಾಗಿದೆ. ಬಹುತೇಕ ಮಹಿಳಾ ಕಾರ್ಮಿಕರೇ ಇರುವ ಈ ಗುತ್ತಿಗೆ ಕಾರ್ಮಿಕರಿಗೆ ಕುಡಿಯುವ ನೀರಿಗೂ ಮತ್ತು ಮಲಮೂತ್ರ ವಿಸರ್ಜನೆಗೂ ವ್ಯವಸ್ಥೆ ಇಲ್ಲದ ಪರಿಸ್ಥಿತಿಯಿದೆ. ಇವರಲ್ಲಿ ಬಹುತೇಕರು ಅಂತರಜಿಲ್ಲಾ ವಲಸಿಗರಾಗಿದ್ದಾರೆ. ಕಳೆದ ರಾಜ್ಯ ಸರ್ಕಾರದ ನೇರ ವೇತನ ಪಾವತಿ ಮತ್ತು ಹದಿನೇಳು ಸಾವಿರ ಕನಿಷ್ಟ ವೇತನ ಪೂರ್ಣ ಪ್ರಮಾಣದಲ್ಲಿ ಲಭಿಸುತ್ತಿಲ್ಲ. ಕರೋನಾ ಕೋವಿಡ್ ಲಾಕ್ಡೌನ್‌ನಲ್ಲೂ ಜನರೆಲ್ಲ ಮನೆಯಲ್ಲೇ ಬಂಧಿಗಳಾಗಿದ್ದಾಗ, ಮಹಾನಗರದ ಬಯಲು ಬಂಧಿಖಾನೆಯ ನೌಕರರಾಗಿ ಮಹಾನಗರದ ಸ್ವಚ್ಛತೆಯಲ್ಲಿ ಇವರು ತೊಡಗಿದ್ದರು. ಮಾತ್ರವಲ್ಲದೆ ಕೆಲವರು ಕೋವಿಡ್‌ಗೂ ಬಲಿಯಾಗಿದ್ದಾರೆ.

940 ಕೋಟಿ ರೂಗಳ ವ್ಯವಹಾರ : ಕಾರ್ಪೊರೇಟ್ ಕುಳಗಳ ಕಣ್ಣು :

ಒಟ್ಟಾರೆ ವಾರ್ಷಿಕ 940 ಕೋಟಿ ರೂಗಳ ಬಿಬಿಎಂಪಿ ಯ ಈ ಬೃಹತ್ ಕಸದ ವಹಿವಾಟಿನ ಮೇಲೆ ಇದೀಗ ಕಾರ್ಪೊರೇಟ್ ಕುಳಗಳ ಕಣ್ಣು ಬಿದ್ದಿದೆ. ಪರಿಣಾಮವಾಗಿ ಆಸ್ತಿ ತೆರಿಗೆಯ ಭಾಗವಾಗಿ ಮಹಾನಗರದ ನಿವಾಸಿಗಳು ಪಾವತಿಸುವ ತ್ಯಾಜ್ಯ ಸೆಸ್ ಒಟ್ಟು ಕೇವಲ 65 ಕೋಟಿ ರೂಗಳಾಗಿರುವಾಗ ಮತ್ತು ಘನ ತ್ಯಾಜ್ಯ ನಿರ್ವಹಣೆಯನ್ನು ಬಿಬಿಎಂಪಿ ಸಮರ್ಪಕವಾಗಿ ನಿರ್ವಹಣೆ ಮಾಡದಿರುವಾಗ ಮತ್ತು ಕಸದ ಮಾಫಿಯ ಮತ್ತು ಗುತ್ತಿಗೆದಾರರು, ಕಾರ್ಪೊರೇಟರ್‌ಗಳು ಹಾಗೂ ಅಧಿಕಾರಿಗಳ ಕಪಿಮುಷ್ಠಿಯಲ್ಲಿ ಅದು ನಲುಗಿರುವಾಗ ಅದರ ನಿರ್ವಹಣೆಯನ್ನು ಪ್ರತ್ಯೇಕ ನಿಗಮ ಸ್ಥಾಪಿಸಿ ವಹಿಸಬೇಕೆಂದು ಕೆಲವು ಕಾರ್ಪೊರೇಟ್ ಪರ ವ್ಯಕ್ತಿಗಳು, ಶಕ್ತಿಗಳು ಒತ್ತಾಯಿಸುತ್ತಿವೆ. ಅಭಿಪ್ರಾಯವನ್ನು ಮೂಡಿಸುತ್ತಿವೆ. ಅದಕ್ಕೆ ಮೂರ್ತರೂಪ ನೀಡುವಂತೆ ಬಿಜೆಪಿ ರಾಜ್ಯ ಸರ್ಕಾರವು ಮೊದಲಿಗೆ ಪ್ರತ್ಯೇಕ ನಿಗಮ ಸ್ಥಾಪನೆಯ ಮತ್ತು ಕಸ ನಿರ್ವಹಣೆ ಬಳಕೆದಾರರ ಶುಲ್ಕದ ಪ್ರಸ್ತಾಪ ತೇಲಿಬಿಟ್ಟು ಜನತೆಯ ಪ್ರತಿರೋಧದಿಂದಾಗಿ ಮುಂದೂಡಿರುವುದಾಗಿ ಪ್ರಕಟಿಸಿತು. ಆನಂತರ ಮತ್ತೊಂದು ದಾರಿಯಲ್ಲಿ ಅದರ ಜಾರಿಗಾಗಿ “ಬೆಂಗಳೂರು ಮಿಷನ್ 2022” ಪ್ರಕಟಿಸಿ ಅದರಲ್ಲಿ ಸ್ವಚ್ಛ ಬೆಂಗಳೂರು ಉಪಕ್ರಮದಲ್ಲಿ ಘನ ತ್ಯಾಜ್ಯ ನಿರ್ವಹಣೆಗೆ ಸಾಂಸ್ಥಿಕ ರೂಪ ನೀಡುವ ಪ್ರಕಟಣೆ ಮಾಡಿತು. ಅದನ್ನು ಸ್ವಚ್ಛ ಭಾರತ, ಸ್ವಚ್ಛ ಕರ್ನಾಟಕ ಅಭಿಯಾನದಡಿ ಕೈಗೊಂಡು ಸ್ವತಂತ್ರ್ಯತ್ಸವದ ವರ್ಷಾಚರಣೆ ವೇಳೆಗೆ ಸುಂದರ ಬೆಂಗಳೂರನ್ನು ನಿರ್ಮಿಸುವ ಘೋಷಣೆ ಮಾಡಿತ್ತು.

ಕಸ ವಿಲೆವಾರಿಗೂ ಪಾವತಿಸಿ :

ಕಸವನ್ನು ಸಹಾ “ಪಾವತಿಸಿ ವಿಲೇವಾರಿ ಮಾಡಿ” ಎಂಬ ನೀತಿಗೆ ಒಳಪಡಿಸಲು ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ ಹೆಸರಿನಲ್ಲಿ  ರಾಜ್ಯ ಬಿಜೆಪಿ ಸರ್ಕಾರವು “ಬಿಬಿಎಂಪಿ ಕಾಯ್ದೆ 2020” ಅನ್ನು ರೂಪಿಸಿ ಅಂಗೀಕರಿಸಿ ಅದರಲ್ಲಿ ಕಸವಿಲೇವಾರಿಯನ್ನು ಕಾರ್ಪೊರೇಟ್ ಮಾದರಿಯಲ್ಲಿ ನಿರ್ವಹಿಸಲು ಕಂಪನಿ ಸ್ಥಾಪನೆಗೆ ಅನುವುಗೊಳಿಸಿತ್ತು. ಇದೀಗ ಬಿಬಿಎಂಪಿ ಕಸ ನಿರ್ವಹಣೆಗೆ ರಾಜ್ಯ ಹಾಗೂ ಬಿಬಿಎಂಪಿಯ 51:49 ಪಾಲುದಾರಿಕೆಯಲ್ಲಿ ಪ್ರತ್ಯೇಕ ಕಂಪನಿ ಸ್ಥಾಪಿಸಲು ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟವು 03-03-2021 ರಂದು ತೀರ್ಮಾನ ಮಾಡಿದೆ. ಅದರಡಿ ನೂತನ ಕಂಪನಿಯ ನಿರ್ವಹಣೆಯನ್ನು ರಾಜ್ಯ ಮತ್ತು ಬಿಬಿಎಂಪಿಯ ಅನುದಾನಗಳು ಹಾಗೂ ಬಳಕೆದಾರರ ಶುಲ್ಕ ಸಂಗ್ರಹದ ಮೂಲಕ ನಡೆಸಲು ರಾಜ್ಯ ಬಿಜೆಪಿ ಸರ್ಕಾರವು ತೀರ್ಮಾನಿಸಿದೆ. ಮೊದಲಿಗೆ ಸರ್ಕಾರಿ ಕಂಪನಿಯಾಗಿ ಸ್ಥಾಪಿಸಿ ಆನಂತರ ಕ್ರಮೇಣ ಕಾರ್ಪೊರೇಟ್ ಕಂಪನಿಗಳಿಗೆ ಇದನ್ನು ವಹಿಸಿಕೊಡುವ ಹುನ್ನಾರ ಬಿಜೆಪಿ ಸರ್ಕಾರದ್ದಾಗಿದೆ. ಅದಕ್ಕಾಗಿ ಕಸ ವಿಲೇವಾರಿಯನ್ನು ವೃತ್ತಿಪರವಾಗಿ ಕೌಶಲ್ಯಪೂರ್ಣ ಮತ್ತು ನೈಪುಣ್ಯತೆಯಿಂದ ನಿರ್ವಹಿಸುವ ಹಾಗೂ ವೈಜ್ಞಾನಿಕವಾಗಿ ಮರುಬಳಕೆ ಮಾಡುವ ಮಾತುಗಳನ್ನು ಹಾಡುತ್ತಿವೆ. ಅದೇ ವೇಳೆ ಕಸ ನಿರ್ವಹಣೆಯಲ್ಲಿ ಗುತ್ತಿಗೆ ಕಾರ್ಮಿಕರು ಇರುವುದಿಲ್ಲ, ಗುತ್ತಿಗೆದಾರರೂ ಇರುವುದಿಲ್ಲ ಎಂಬುದನ್ನು ಪ್ರಕಟಿಸಿದೆ. ಅಂದರೆ ಹಾಲೀ ಕಸ ಸಂಗ್ರಹದಲ್ಲಿ ತೊಡಗಿರುವ ಇಪ್ಪತ್ತೆöÊದು ಸಾವಿರ ಗುತ್ತಿಗೆ ಕಾರ್ಮಿಕರು ಮತ್ತು ಮಿಶ್ರ ಕಸ ವಿಂಗಡಣೆ ಮತ್ತು ಪ್ರತ್ಯೇಕಗೊಳಿಸುವುಲ್ಲಿ ಬದುಕು ಕಟ್ಟಿಕೊಂಡಿರುವ ಸಾವಿರಾರು ವಲಸಿಗ ಕಾರ್ಮಿಕರು ತಮ್ಮ ಬದುಕನ್ನು ಕಳೆದುಕೊಳ್ಳಲಿದ್ದಾರೆ ಎಂಬುದೇ ಈ ಬಣ್ಣದ ಮಾತುಗಳ ಹಿಂದಿನ ಸತ್ಯವಾಗಿದೆ.

ಕಸದಲ್ಲೂ ರಸ ಉಣಿಸುವ ಯತ್ನ:

ವ್ಯವಹಾರ ನಡೆಸುವುದು ಸರ್ಕಾರದ ವ್ಯವಹಾರವಲ್ಲ ಎಂಬ ಪ್ರಧಾನಿ ಮೋದಿಯವರ ಇತ್ತೀಚಿನ ಘೋಷಣೆ ಮತ್ತು ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಿಸುವ ಅವರ ಕ್ರಮ ಮತ್ತು ಯೋಜನೆಗಳು ಒಂದೆಡೆ ಎಲ್ಲವನ್ನೂ ಖಾಸಗೀಕರಣಕ್ಕೆ ಬಲಿಕೊಡುತ್ತಿರುವಾಗ ರಾಜ್ಯ ಬಿಜೆಪಿ ಸರ್ಕಾರ ಬಿಬಿಎಂಪಿ ಕಸ ನಿರ್ವಹಣೆಗೆ ಸರ್ಕಾರೀ ಕಂಪನಿಯನ್ನು ಸ್ಥಾಪಿಸುತ್ತೇವೆ ಎಂಬ ತೀರ್ಮಾನ ಜನತೆಯ ಮೂಗಿಗೆ ತುಪ್ಪ ಸವರುವ ಮಾತ್ರವಲ್ಲದೆ ಬೆಂಗಳೂರಿನ ಬೃಹತ್ ಕಸದ 940 ಕೋಟಿ ರೂಗಳ ವ್ಯವಹಾರವನ್ನು ಕ್ರಮೇಣ ಕಾರ್ಪೊರೇಟ್ ಕುಳಗಳ ಪಾಲಾಗಿಸಿ ಕಾರ್ಪೊರೇಟ್ ಧಣಿಗಳಿಗೆ ಕಸದಲ್ಲೂ ರಸವುಣಿಸುವ ಬಿಜೆಪಿ ಸರ್ಕಾರದ ಕ್ರಮವಾಗಿದೆ.

ಕಾರ್ಪೋರೇಟ್ ಲೂಟಿಗೆ ಕಂಪನಿ ಸ್ಥಾಪನೆ :

ಬಳಕೆದಾರರ ಶುಲ್ಕದ ಹೆಸರಿನಲ್ಲಿ ಜನತೆಯನ್ನು ದೋಚುವ ಕ್ರಮವಾಗಿದೆ. ಬಿಬಿಎಂಪಿ ಯ ಮುನ್ಸಿಪಲ್ ಕೆಲಸವಾದ ಕಸ ಸಂಗ್ರಹ ಮತ್ತು ನಿರ್ವಹಣೆ ಮುಂತಾದ ನಾಗರೀಕ ಕರ್ತವ್ಯಗಳ ನಿರ್ವಹಣೆಯನ್ನು ಬಿಬಿಎಂಪಿ ಯಿಂದ ಹೊರಗುಳಿಸಿ ಸ್ಥಳೀಯ ಆಡಳಿತದಲ್ಲಿ ಜನತೆಯ ಪಾಲ್ಗೊಳ್ಳುವಿಕೆಯ ಪ್ರಜಾಸತ್ತೆಯನ್ನು ಇಲ್ಲದಾಗಿಸುವ ಕ್ರಮವಾಗಿದೆ. ಆರಂಭದಲ್ಲಿ ಪ್ರತಿ ಮನೆಯ ಬೆಸ್ಕಾಂ ವಿದ್ಯುತ್ ಮೀಟರ್ ಒಂದಕ್ಕೆ ಮಾಸಿಕ ಕನಿಷ್ಟ 200 ರೂಗಳಂತೆ ಆರಂಭವಾಗುವ ಬಳಕೆದಾರರ ಶುಲ್ಕವು ವಾರ್ಷಿಕ 5 ಶೇಕಡ ಹೆಚ್ಚಳದಂತೆ ಮುಂದೊಂದು ದಿನ ತಲಾ ಗ್ರಾಂ ಕಸಕ್ಕೊಂದಿಷ್ಟು ಹಣ ಎಂಬ ನೀತಿಗೆ ನಾಂದಿಯಾಡುವ ನವ ಉದಾರೀಕರಣದ ನೀತಿಗಳ ಭಾಗವಾಗಿ ಪ್ರತ್ಯೇಕ ಕಂಪನಿಯ ನಿರ್ಣಯ ಬಿಜೆಪಿ ಸರ್ಕಾರದಿಂದ ಹೊರಬಂದಿದೆ. ಇದನ್ನು ವಿರೋಧಿಸಿ ಪ್ರತಿರೋಧಿಸುವುದರಲ್ಲೇ ಮಹಾನಗರದ ಜನತೆಯ ಕ್ಷೇಮ ಅಡಗಿದೆ ಮಾತ್ರವಲ್ಲದೆ ನೆಮ್ಮದಿಯ ಬೆಂಗಳೂರಿನ ಕನಸನ್ನು ನನಸಾಗಿಸುವ ಯತ್ನ ಅಡಗಿದೆ.

Donate Janashakthi Media

Leave a Reply

Your email address will not be published. Required fields are marked *