ವಿಶೇಷ ವರದಿ: ಸಂಧ್ಯಾ ಸೊರಬ
ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಒಂದು ಕಡೆಯಾದ್ರೆ, ಇತ್ತ ಕಮಲದ ದಳಗಳು ಒಂದೊಂದಾಗೇ ಉದುರತೊಡಗಿವೆ. ಅಷ್ಟಕ್ಕೂ ಕಮಲದ ಪಾಳಯದಲ್ಲೀಗ ಬಂಡಾಯದ ಭುಗಿಲು ಮುಗಿಲು ಮುಟ್ಟೋಕೆ ಕಾರಣಗಳೇನು ಅನ್ನೋದನ್ನ ನೋಡೋದಾದ್ರೆ
ಟಿಕೆಟ್ ಹಂಚಿಕೆಯ ಭಿನ್ನಮತ ಬಿಜೆಪಿಯನ್ನು ಸುಡುತ್ತಿದೆ. ಹಲವು ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ಬಂಡಾಯದ ಬಾವುಟ ಹಾರಿಸಿದ್ದು, ಕೆಲವರು ಪಕ್ಷ ತೊರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಬಿಜೆಪಿ ಪಾಳಯದಲ್ಲೀಗ ಬಂಡಾಯದ ಬುಗಿಲು ಕಾಣಿಸಿಕೊಂಡಿದ್ದು, ಒಡೆದ ಮನೆಯಂತಾಗಿದೆ. ಜೊತೆಗೆ ಒಂದೊಂದಾಗೆ ಕಮಲದ ದಳಗಳು ಉದುರುತ್ತಿವೆಯಾ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಲೋಕಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಕರ್ನಾಟಕದಲ್ಲಿ ಯಾರ್ಯಾರು ಸ್ಪರ್ಧಿಸಬೇಕು ಅಂತ ಮೊದಲ ಹಂತದ ಪಟ್ಟಿಯನ್ನೇನೋ ಬಿಟ್ಟಿದೆ. ಆದ್ರೆ ಇದೇ ಮೊದಲ ಪಟ್ಟಿಯೇ ಸಾಕಷ್ಟು ಗೊಂದಲದ ಗೂಡಾಗಿ ಮಾಡಿದೆ. ಬಿಜೆಪಿಯ ದಕ್ಷಿಣದ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳೋ ಕರ್ನಾಟಕವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳೋಕೆ ಕಮಲದ ನಾಯಕರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೈಕೊಟ್ಟ ಬಿಸಿಯಿಂದ ಕಮಲದ ದಳಗಳು ಅಲ್ಲಾಡತೊಡಗಿದ್ದವು. ಅದಕ್ಕಾಗಿಯೇ ಮುಗಿದರೂ ಮುಗಿಯದಂತೆ ಉಸಿರಾಡುತ್ತಿರೋ ತೆನೆಹೊತ್ತ ಮಹಿಳೆಯ ಸಖ್ಯ ಬೆಳೆಸೋಕೆ ತಳಮಟ್ಟದ ನಾಯಕರ ಸೂಚನೆ ಮೇರೆಗೆ ಮೇಲ್ಮಟ್ಟದ ನಾಯಕರು ರಾಜಕೀಯ ಡ್ರಿಪ್ನ್ನೆನ್ನೋ ಏರಿಸಲು ಹೊರಟ್ರೋ ಅದೇ ಈಗ ಅವ್ರಿಗೆ ಒಂದು ಕಡೆ ಮುಳುವಾಗ್ತಿದೆ.
ಜನಸಂಘವೇ ಇಲ್ಲದ ಕರ್ನಾಟದಲ್ಲಿ ಬಿಜೆಪಿಯನ್ನು ಕಟ್ಟೋದಕ್ಕೆ ದುಡಿದಿದ್ದ ಕೆ.ಎಸ್.ಈಶ್ವರಪ್ಪ ಇದೀಗ ಅದೇ ಶಿವಮೊಗ್ಗದಲ್ಲಿ ಬಿಜೆಪಿಗೆ ಬಂಡಾಯದ ಅಭ್ಯರ್ಥಿ!. ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರನ ವಿರುದ್ಧ ತೊಡೆತಟ್ಟಿದ್ದಾರೆ. ರಾಜಕೀಯವಾಗಿ ನನ್ನನ್ನು ಕಡೆಗಣಿಸಲಾಗಿದೆ ಅಂತ ಆರೋಪಿಸಿ ಈಶ್ವರಪ್ಪ ಬಂಡಾಯ ಸಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೂ ಗೈರಾಗುವ ಮೂಲಕ ಬಿಎಸ್ವೈ ಬಣಕ್ಕೆ ಸೆಡ್ಡು ಹೊಡೆದಿದ್ದಾರೆ.
ಇತ್ತ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಡಿ.ವಿ.ಸದಾನಂದಗೌಡರಿಗೆ ಟಿಕೆಟ್ ಕೊಡದೇ ಯಡಿಯೂರಪ್ಪರ ಆಪ್ತವಲಯ ಅಂತಾನೋ ಅಥವಾ ಮೋದಿ ಕ್ಯಾಂಡಿಡೇಟ್ ಅಂತಾನೋ ಗೊತಿಲ್ಲ, ಶೋಭಾ ಕರಂದ್ಲಾಜೆಗೆ ಟಿಕೆಟ್ ಕೊಟ್ಟಿದ್ದು. ಇದು ಡಿವಿಎಸ್ನ್ನು ಇರುಸುಮುರುಸು ಮಾಡಿದ್ದಲ್ಲದೇ ಅವ್ರ ಕಾರ್ಯಕರ್ತರು ಮತ್ತು ಜೆಡಿಎಸ್ನ ಕಾರ್ಯಕರ್ತರು ಶೋಭಾ ಕರಂದ್ಲಾಜೆಯನ್ನ ಒಪ್ಪದೇ ಇರುವಂತೆ ಮಾಡಿದೆ. ಮತ್ತೊಂದು ಕಡೆಯಲ್ಲಿ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು ಕೂಡಾ ಬಂಡಾಯದ ಸುಳಿವನ್ನು ನೀಡಿದ್ದಾರೆ. ಬೆಂಗಳೂರು ಉತ್ತರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ಮಿಸ್ ಆಗಿದೆ. ಇದ್ರಿಂದ ಅವರು ಅಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ : ಬಿಜೆಪಿಯಲ್ಲಿನ ಮುಖಂಡರನ್ನು ಬಿಜಪಿಯೇ ಮುಗಿಸಲು ಹೊರಟಿದೆ
ಈ ಇಬ್ಬರು ನಾಯಕರ ಬಂಡಾಯಕ್ಕೆ ಭಿನ್ನ ಆಯಾಮಗಳು ಇವೆ. ಈಶ್ವರಪ್ಪ ಆಕ್ರೋಶ ನೇರವಾಗಿ ಪಕ್ಷದ ಹೈಕಮಾಂಡ್ ವಿರುದ್ಧ ಅಲ್ಲ. ಅಥವಾ ರಾಷ್ಟ್ರೀಯ ಮಟ್ಟದ ನಾಯಕರ ವಿರುದ್ಧನೂ ಅಲ್ಲ. ಬದಲಾಗಿ ಅವರ ವಿರೋಧ ಇರುವುದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ಕುರಿತಾಗಿ. ಬಿಎಸ್ವೈ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ತಮ್ಮವರಿಗೆ ಟಿಕೆಟ್ ಕೊಡಿಸುತ್ತಿದ್ದಾರೆ. ಇತರರನ್ನು ಉದ್ದೇಶಪೂರ್ವಕವಾಗಿ ದೂರ ಮಾಡುತ್ತಿದ್ದಾರೆ ಅಂತ. ಆದರೆ ಡಿವಿ ಸದಾನಂದ ಗೌಡ ಅವರ ಅಸಮಾಧಾನಕ್ಕೆ ಬಿಎಸ್ ಯಡಿಯೂರಪ್ಪ ಕಾರಣ ಅಲ್ಲ. ಇವ್ರ ಬಂಡಾಯ ಇರೋದು ಕೇಂದ್ರದ ಕೆಲವು ನಾಯಕರ ವಿರುದ್ಧ. ಬೆಂಗಳೂರು ಉತ್ತರ ಟಿಕೆಟ್ ಕೈತಪ್ಪುತ್ತೆ ಅಂತಾ ಗೊತ್ತಾದಾಗ ಇವ್ರಿಗೆ ಬಿ.ಎಸ್ ಯಡಿಯೂರಪ್ಪ ಸಾಂತ್ವನ ಹೇಳಿದ್ರು. ಯಾವಾಗ ಪಕ್ಷದ ಹಿಡಿತ ಬಿಎಸ್ವೈ ಬಣಕ್ಕೆ ಸಿಕ್ಕಿತೋ ಅಂದಿನಿಂದ ಡಿವಿಎಸ್ ಮಾತಿನ ವರಸೆ ಕೂಡಾ ಬದಲಾಗಿತ್ತು. ಪಕ್ಷದಲ್ಲಿ ಅವರು ಮತ್ತೆ ಸಕ್ರಿಯರಾಗಿದ್ದರು. ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದ ಅವರು, ಮತ್ತೆ ತಾನು ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ. ನೇರವಾಗಿ ಇದನ್ನ ಉಲ್ಲೇಖಿಸದೇ ಇದ್ರೂ ಸಂದರ್ಭ ಸಿಕ್ಕಾಗೆಲ್ಲಾ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನ ಹೊರಹಾಕುತ್ತಿದ್ದಾರೆ.
ಇತ್ತ ಮೈಸೂರು ಭಾಗಕ್ಕೆ ಬಂದ್ರೆ, ರಾಜವಂಶದ ಕುಡಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಬಿಜೆಪಿ ಟಿಕೇಟ್ ಘೋಷಿಸಿ, ಹಾಲಿ ಸಂಸದ ಪ್ರತಾಪ್ ಸಿಂಹಗೆ ಕೈಕೊಟ್ಟಿದೆ. ಟಿಕೇಟ್ ನಿರೀಕ್ಷೆಯಲ್ಲಿದ್ದ ಪ್ರತಾಪ್ ಸಿಂಹನ ಅಂತರಾಳದ ನೋವಿಗೆ ಇದು ಕಾರಣವಾಯಿತು. ಬಂಡಾಯದ ಬೇಗುದಿ ಬೇಯಲಾರಂಭಿಸಿತು. ಅದ್ಯಾರ್ಯಾರೋ ಹೋಗಿ ಸಿಂಹನ ಓಲೈಸಿದ್ದೂ ಆಯ್ತು, ಮೇಲ್ನೋಟಕ್ಕೆ ಹುಂ ಅಂತ ಸಿಂಹ ಹೇಳಿದ್ರೂನು ಅದು ಎಷ್ಟರಮಟ್ಟಿಗೆ ಒಳಗೊಳಗೆ ಇನ್ಯಾರಿಗೆ ಲಾಭವಾಗಲಿದೆ ಎಂದು ಚುನಾವಣಾ ಫಲಿತಾಂಶವೇ ಹೇಳಲಿದೆ. ಇನ್ನು ತುಮಕೂರಿಗೆ ಬರೋದಾದ್ರೆ ಕಾನೂನು ಮಾಜಿ ಸಚಿವ ಮಾಧುಸ್ವಾಮಿಯತ್ತ ದೃಷ್ಟಿ ಸಹಜವಾಗಿಯೇ ಹೋಗತ್ತೆ. ಕಾರಣ, ಮಾಧುಸ್ವಾಮಿಯ ಚಿತ್ತವೀಗ ಇನ್ನೊಂದು ಪಕ್ಷದ ಕಡೆ ಆದ್ರೆ, ಆಂತರಿಕ ಬೇಗುದಿ ಮತ್ತೊಂದು ಕಡೆ, ಮಾಜಿ ಸಚಿವ .ವಿ.ಸೋಮಣ್ಣಗೆ ತುಮಕೂರಿನಿಂದ ಬಿಜೆಪಿ ಟಿಕೆಟ್ ಘೋಷಿಸಿದ್ದು, ಮಾಧುಸ್ವಾಮಿ ತಲೆಮೇಲೆ ಕೈಇಟ್ಟುಕೊಳ್ಳುವಂತಾಯ್ತು. ಒಳಬೇಗುದಿಯನ್ನ ತಣ್ಣಗಾಗಿಸೋಕೆ ಮಾಧುಸ್ವಾಮಿ, ಕೊರಟಗೆರೆ ಶಾಸಕರೂ ಆಗಿರೋ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೊತೆ ಸಂಪರ್ಕ ಸಾಧಿಸಿರೋದು. ಮತ್ತೊಂದೆಡೆ ಉತ್ತರ ಕನ್ನಡ ಜಿಲ್ಲೆಗಿನ್ನೂ ಕಮಲ ಕ್ಲಿಯರ್ ಆಗಿಲ್ಲ. ಕಾಂಟ್ರವರ್ಸಿ ಕಿಂಗ್ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಬೇಡ ಅಂತ ಬಿಜೆಪಿಯ ಮೂಲಗಳೇ ಹೇಳ್ತಿವೆ.
ಕಾಂಗ್ರೆಸ್ಗೆ ಹೀಗೆ ಬಂದು ಮತ್ತೆ ಪಕ್ಕಾ ಟಿಕೇಟ್ ಕಂಡೀಷನ್ ಮೇಲೆಯೇ ಬಿಜೆಪಿಗೆ ಹಾಗೇ ಹೋದ ಜಗದೀಶ್ ಶೆಟ್ಟರ್ಗೆ ಬೆಳಗಾವಿಯಿಂದ ಟಿಕೆಟ್ ಕೊಡೋಕೆ ಬಿಜೆಪಿಗೆ ಇರುಸು ಮುರುಸು. ಯಾಕಂದ್ರೆ ಶೆಟ್ಟರ್ಗೆ ಕೊಡೋಕೆ ಅಲ್ಲಿ ಲೋಕಲ್ನವರದ್ದೇ ವಿರೋಧ ಇದೆ. ಇನ್ನು ಕೊಪ್ಪಳ ಬಿಜೆಪಿ ಕ್ಯಾಂಡಿಡೇಟ್ ಡಾ.ಬಸವರಾಜ ಅನ್ನೋ ಹೊಸ ಮುಖಕ್ಕೆ ಟಿಕೇಟ್ ಕೊಟ್ಟಿದ್ದಾರೆ. ಇದಕ್ಕೆ ಕೊಪ್ಪಳದಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣನ ಕಡೆಯವರ ವಿರೋಧ ಇದೆ. ಶಕ್ತಿ ಪ್ರದರ್ಶನಕ್ಕೆ ಸಂಗಣ್ಣ ಕರಡಿ ಸಿದ್ದತೆ ನಡೆಸುತ್ತಿದ್ದಾರೆ. ದಾವಣಗೆರೆಯಲ್ಲಿ ಸಿದ್ದೇಶ್ವರ್ ಹೆಂಡತಿಗೆ ಕೊಟ್ಟಿರೋದಕ್ಕೆ ಮಾಜಿ ಸಚಿವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರೋಧವಿದೆ. ಮಂಡ್ಯದಲ್ಲಿ ಸುಮಲತಾಗೆ ಟಿಕೇಟ್ ನೀಡಲು ವಿರೋಧ ಒಂದು ಕಡೆ ವ್ಯಕ್ತವಾಗುತ್ತಿದೆ. ಚಿಕ್ಕಬಳ್ಳಾಪುರ ಸುಧಾಕರ್ ಗೆ ಬಿಟ್ಟುಕೊಡಿ ಅಂತ ಅಮಿತ್ ಷಾ ಕೇಳ್ತಾ ಇದ್ರೆ, ಹಾಸನ ಕ್ಯಾಂಡಿಡೇಟ್ ಚೇಂಜ್ಮಾಡಿ ಅಂತ ಅಮಿತ್ ಷಾ ಹೇಳ್ತಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಲೋಕಸಭಾ ಚುನಾವಣೆಗೆ ಬಿಜೆಪಿ ಅದೆಷ್ಟೇ ಅಳೆದು ತೂಗಿ ಕ್ಯಾಂಡಿಡೇಟ್ಸ್ಗಳನ್ನ ಹಾಕಿದ್ರೂ ಅವ್ರ ಲೆಕ್ಕಾಚಾರವೆಲ್ಲವೂ ಉಲ್ಟಾನೇ ಆಗಿದೆ. ಅತ್ತ ದರಿ ಇತ್ತ ಪುಲಿ ಅನ್ನುವಂತಹ ಅಡ್ಡಕತ್ತರಿಗೆ ಕಮಲವೀಗ ಸಿಕ್ಕು ದಳಗಳು ಮುದುಡುತ್ತಿವೆ.