ಬನಾರಸ್ ಹಿಂದೂ ವಿಶ್ವವಿದ್ಯಾಲಯ: ಮನುಸ್ಮೃತಿ ಸುಡಲು ಪ್ರಯತ್ನಿಸಿದ್ದಕ್ಕಾಗಿ 13 ವಿದ್ಯಾರ್ಥಿಗಳನ್ನು ಬಂಧನ

ಬನಾರಸ್ : ಮನುಸ್ಮೃತಿಯ ಪ್ರತಿಗಳನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯ(ಬಿಎಚ್‌ಯು)ದ ಕ್ಯಾಂಪಸ್‌ನಲ್ಲಿ ಡಿಸೆಂಬರ್ 25 ರಂದು ಸುಡಲು ಪ್ರಯತ್ನಿಸಿದ್ದಕ್ಕಾಗಿ ಭಗತ್ ಸಿಂಗ್ ಛಾತ್ರ ಮೋರ್ಚಾಗೆ ಸಂಬಂಧಿಸಿದ 13 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

1927ರಲ್ಲಿ ಡಿ.25ರಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಐತಿಹಾಸಿಕ ಮನುಸ್ಮೃತಿಯನ್ನು ಸುಟ್ಟು ಹಾಕಿದ ಸ್ಮರಣಾರ್ಥ ಬಿಎಚ್‌ಯು ಕ್ಯಾಂಪಸ್‌ನಲ್ಲಿರುವ ಕಲಾ ವಿಭಾಗದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಮನುಸ್ಮೃತಿಯ ಪ್ರತಿಗಳನ್ನು ಸುಡಲು ಯೋಜಿಸುತ್ತಿದ್ದಾರೆ ಎಂಬ ವರದಿಗಳು ಹರಡಿತು ಮತ್ತು ವಿಶ್ವವಿದ್ಯಾಲಯದ ಮಂಡಳಿಯ ಸದಸ್ಯರು ಅವರನ್ನು ತಡೆಯಲು ಪ್ರಯತ್ನಿಸಿದ್ದರು.

ಮನುಸ್ಮೃತಿಯು ಒಂದು ಪವಿತ್ರ ಹಿಂದೂ ಗ್ರಂಥವಾಗಿದೆ. ಇದು ಜನರ ಬದುಕಿನ ವಿವಿಧ ಹಂತಗಳಲ್ಲಿ ನಾನಾ ಜಾತಿ ಮತ್ತು ವ್ಯಕ್ತಿಗಳ ಸಾಮಾಜಿಕ ಕಟ್ಟುಪಾಡುಗಳು ಮತ್ತು ಮಾಡಬೇಕಾದ ಕರ್ತವ್ಯಗಳಂತಹ ವಿಷಯಗಳನ್ನು ಒಳಗೊಂಡಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯದ ಕೆಲವು ಹಳೆಯ ವಿದ್ಯಾರ್ಥಿಗಳು ಸೇರಿದಂತೆ ವಿವಿಯ ಕೆಲ ಹಾಲಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಈ ಸಂಬಂಧ ಘರ್ಷಣೆ ನಡೆಸಿದರು. ಆರಂಭದಲ್ಲಿ 10 ವಿದ್ಯಾರ್ಥಿಗಳನ್ನು ಬಂಧಿಸಲಾಯಿತು.ನಂತರ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಬಂಧಿತ ಎಲ್ಲ 13 ವಿದ್ಯಾರ್ಥಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ತಂಡವು ಆರೋಪಿ ವಿದ್ಯಾರ್ಥಿಗಳು “ನಗರ ನಕ್ಸಲೀಯರೊಂದಿಗಿನ ಸಂಪರ್ಕ” ಕುರಿತ ತನಿಖೆಗಾಗಿ ವಿಚಾರಣೆಗೆ ನಡೆಸುತ್ತಿದೆ. ಡಿಸೆಂಬರ್ 25ರಂದು ಬಿಎಚ್‌ಯು ಮುಖ್ಯಸ್ಥ ಎಸ್‌ಪಿ ಸಿಂಗ್‌ ಅವರು ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : ಆರೆಸ್ಸೆಸ್-ಬಿಜೆಪಿಗಳು ಸಮಾಜವನ್ನು ಮತೀಯ ನೆಲೆಗಟ್ಟಿನಲ್ಲಿ ವಿಭಜಿಸುತ್ತಿವೆ – ಎಂ.ಎ. ಬೇಬಿ

ವಿಶ್ವವಿದ್ಯಾನಿಲಯದ ಅಧಿಕಾರಿಗಳು ವಿದ್ಯಾರ್ಥಿಗಳ ಗುಂಪನ್ನು ಚದುರಿಸಲು ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಂತೆ ದುಷ್ಕರ್ಮಿಗಳು ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ಮಾಡಿದರು ಮತ್ತು ಆವರಣವನ್ನು ಧ್ವಂಸಗೊಳಿಸಿದರು. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದರು. ಈ ಗಲಾಟೆಯಲ್ಲಿ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ತಿಪಾಸ್ತಿಗೆ ಹಾನಿಗೊಳಿಸಿದ್ದಾರೆ ಮತ್ತು ಸರ್ಕಾರಿ ಚಟುವಟಿಕೆಗಳಿಗೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಮಹಿಳಾ ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ ಮತ್ತು ಅವರಲ್ಲಿ ಇಬ್ಬರು ಬಿಎಚ್‌ಯು ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಲಂಕಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶಿವಕಾಂತ್ ಮಿಶ್ರಾ ಹೇಳಿದ್ದಾರೆ.
ಮತ್ತೊಂದೆಡೆ, ಭದ್ರತಾ ಸಿಬ್ಬಂದಿ ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತಿಸಿದರು, ಎಳೆದೊಯ್ದರು ಮತ್ತು ದೌರ್ಜನ್ಯ ಎಸಗಿದರು ಎಂದು ಪ್ರತ್ಯಕ್ಷದರ್ಶಿಗಳ ವರದಿಗಳು ತಿಳಿಸಿವೆ.

ಪೊಲೀಸರು ವಿದ್ಯಾರ್ಥಿಗಳ ಮೇಲೆ ಜಾಮೀನು ರಹಿತ ಸೆಕ್ಷನ್ 132 (ಸರ್ಕಾರಿ ನೌಕರನ ಮೇಲೆ ಹಲ್ಲೆ), 121 (2) (ಸರ್ಕಾರಿ ನೌಕರನಿಗೆ ತೀವು ನೋವುಂಟುಮಾಡುವುದು), 196 (1) (ಬಿ) (ಸಾರ್ವಜನಿಕ ಸಾಮರಸ್ಯಕ್ಕೆ ಭಂಗ ತರುವುದು), 299 (ಧರ್ಮವನ್ನು ಅವಮಾನಿಸುವುದು) ಸೇರಿದಂತೆ 110 (ಅಪರಾಧೀಯ ನರಹತ್ಯೆಯ ಪ್ರಯತ್ನ), 191(1) (ಗಲಭೆ), ಮತ್ತು 115(2) (ಉದ್ದೇಶಪೂರ್ವಕವಾಗಿ ನೋವುಂಟುಮಾಡುವುದು) ಮುಂತಾದ ಗಂಭೀರ ಆರೋಪಗಳಡಿ ದೂರು ದಾಖಲಿಸಿದ್ದಾರೆ.

ಹಿಂದುತ್ವವಾದಿ ಫ್ಯಾಸಿಸ್ಟ್ ಶಕ್ತಿಗಳ ಇಚ್ಛೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಬಿಎಚ್‌ಯು ಆಡಳಿತ ಮತ್ತು ಪೊಲೀಸ್ ಆಡಳಿತದ ದಮನಕಾರಿ ಧೋರಣೆಯ ಹಿಂದೆ ಬಿಜೆಪಿ-ಆರ್‌ಎಸ್‌ಎಸ್‌ ಇರುವುದು ಬಹಿರಂಗವಾಗಿದೆ. ಪ್ರಜಾಸತ್ತಾತ್ಮಕ ದೇಶ ಎಂದು ಹೆಮ್ಮೆಪಡುವ ಭಾರತದಲ್ಲಿ ಮನುಸ್ಮೃತಿಯ ಕುರಿತು ಚರ್ಚಿಸಿದರೆ ಜೈಲು ಸೇರುವಂತೆ ಮಾಡುವ ಸ್ಥಿತಿಯಲ್ಲಿದೆ ಎಂದು ಹಲವಾರು ಸಾಮಾಜಿಕ ಸಂಘಟನೆಗಳು ಸಹಿ ಮಾಡಿದ ಹೇಳಿಕೆ ತಿಳಿಸಿದೆ.

ಮನುಸ್ಮೃತಿಯು ಮಹಿಳೆಯರು, ಶೂದ್ರರು ಮತ್ತು ದಲಿತರಿಗೆ ಪ್ರಾಣಿಗಿಂತ ಕೆಟ್ಟ ಸ್ಥಾನಮಾನವನ್ನು ನೀಡುವ ಪಠ್ಯವಾಗಿದೆ. ಇದು ದೇಶದ ಜನರ ಪ್ರಜಾಸತ್ತಾತ್ಮಕ ಆಶಯಗಳಿಗೆ ವಿರುದ್ಧವಾಗಿದೆ. ರಾಜ್ಯದ ದಬ್ಬಾಳಿಕೆಯನ್ನು ಹೊರಹಾಕುವ ಮೂಲಕ ಪ್ರಜಾಪ್ರಭುತ್ವ ಸಮಾಜಕ್ಕಾಗಿ ಜನರ ಚಳುವಳಿಯನ್ನು ಮುರಿಯುವ ಹಿಂದುತ್ವ ಶಕ್ತಿಗಳ ಭ್ರಮೆಯು ತುಳಿತಕ್ಕೊಳಗಾದ ಮತ್ತು ಶೋಷಿತ ಜನರ ವಿಶಾಲ ಏಕತೆಯಿಂದ ಛಿದ್ರವಾಗುತ್ತದೆ ಎಂದು ಈ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ನೋಡಿ : ದಮನಿತರ ಪರವಾಗಿ ಕೆಂಬಾವುಟ ಮಾತ್ರವೇ ನಿಲ್ಲಲು ಸಾಧ್ಯ- ಎಂ.ಎ.ಬೇಬಿ

Donate Janashakthi Media

Leave a Reply

Your email address will not be published. Required fields are marked *