ಬಳ್ಳಾರಿಯಲ್ಲಿ ಆಕ್ಸಿಜನ್ ಬೆಡ್‍ಗಳ ಕೊರತೆ ಇಲ್ಲ: ಡಿಸಿ ಪವನಕುಮಾರ ಸ್ಪಷ್ಟನೆ

ಬಳ್ಳಾರಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಬೆಡ್‍ಗಳ ಕೊರತೆ ಇಲ್ಲ. ಜನರು ಈ ಬಗ್ಗೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ತಿಳಿಸಿದ್ದಾರೆ.

ರೋಗಲಕ್ಷಣಗಳು ನಿರ್ಲಕ್ಷಿಸಬೇಡಿ; ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಳ್ಳಿ ಮತ್ತು ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ.

ಇದನ್ನು ಓದಿ: ಅಡೆತಡೆಯಿಲ್ಲದೆ ಆಕ್ಸಿಜನ್ ಪೂರೈಕೆ, ಸಾರ್ವತ್ರಿಕ ಉಚಿತ ಲಸಿಕೆ ಖಾತ್ರಿಪಡಿಸಬೇಕು- 13 ಪ್ರತಿಪಕ್ಷಗಳ ಆಗ್ರಹ

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಸದ್ಯ 1228 ಆಕ್ಸಿಜನ್ ಬೆಡ್‍ಗಳಿದ್ದು, ಅವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಜಿಲ್ಲಾಡಳಿತ ಸಕಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಿಂದಾಲ್ ಎದುರುಗಡೆಯ ವಿಶಾಲ ಮೈದಾನದಲ್ಲಿ 1 ಸಾವಿರ ಆಕ್ಸಿಜನ್ ಬೆಡ್‍ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಿಸಲಾಗುತ್ತಿದ್ದು, ಮೇ 09ರ ವೇಳೆಗೆ ಈ ಆವರಣದಲ್ಲಿ 220 ಬೆಡ್‍ಗಳು ಲಭ್ಯವಾಗಲಿವೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿಯೂ ತಲಾ 50 ಆಕ್ಸಿಜನ್‍ಬೆಡ್‍ಗಳಿವೆ. ನಮ್ಮಲ್ಲಿ ಸದ್ಯಕ್ಕೆ ಲಭ್ಯವಿರುವ ಆಕ್ಸಿಜನ್ ಬೆಡ್‍ಗಳಿಗೆ ಪ್ರತಿನಿತ್ಯ 27 ಟನ್ ಆಕ್ಸಿಜನ್ ಬೇಕಾಗುತ್ತಿದ್ದು, ಸಮರ್ಪಕ ಪ್ರಮಾಣದಲ್ಲಿದೆ; ಯಾವುದೇ ರೀತಿಯ ಆಕ್ಸಿಜನ್ ಕೊರತೆ ಜಿಲ್ಲೆಯಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದ ಡಿಸಿ ಮಾಲಪಾಟಿ ಅವರು ಜನರು ಆಕ್ಸಿಜನ್ ಬೆಡ್‍ಗಳು ಮತ್ತು ಆಕ್ಸಿಜನ್ ಕೊರತೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬೇಡಿ ಎಂದರು.

ಸದ್ಯ ಬಳ್ಳಾರಿಯ ಟ್ರಾಮ್ ಕೇರ್, ಜಿಂದಾಲ್ ಸಂಜೀವಿನಿ ಮತ್ತು ಬಳ್ಳಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ 108 ಐಸಿಯು ಬೆಡ್‌ಗಳ ವ್ಯವಸ್ಥೆ ಇದೆ. 70 ವೆಂಟಿಲೇಟರ್‌ಗಳಿದ್ದು ಇನ್ನೂ 50 ವೆಂಟಿಲೇಟರ್‍ಗಳು ವಾರದೊಳಗೆ ಬಳ್ಳಾರಿ ಜಿಲ್ಲಾಡಳಿತಕ್ಕೆ ಸರಕಾರದಿಂದ ಬರಲಿವೆ ಎಂದರು.

ಈಗ ಸದ್ಯ ಜಿಲ್ಲೆಯಲ್ಲಿ 9531 ಸಕ್ರಿಯ ಪ್ರಕರಣಗಳಿದ್ದು 829 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ಸಾವಿರಕ್ಕೂ ಹೆಚ್ಚು ಜನರು ಹೋಮ್ ಐಸೊಲೇಷನ್‍ನಲ್ಲಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದು, ನಮ್ಮ ಆರ್‍ಆರ್‍ಟಿ ತಂಡಗಳು ಸದಾ ಅವರ ಆರೋಗ್ಯದ ಮೇಲೆ ನಿಗಾವಹಿಸಿವೆ ಎಂದರು.

ಕಳೆದ ಏಪ್ರಿಲ್ ಎರಡನೇ ವಾರದಿಂದ ಸೋಂಕು ಹರಡುವುದು ಹೆಚ್ಚಾಗಿದೆ. ಸೊಂಕಿನ ಬಗ್ಗೆ ನಿರ್ಲಕ್ಷ್ಯ ಮತ್ತು ಸೋಂಕಿನಿಂದ ಬಳಲಿ ತಡವಾಗಿ ಚಿಕಿತ್ಸೆಗೆ ಬರುತ್ತಿರುವುದರಿಂದ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಪರೀಕ್ಷಾ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ: ರೋಗಲಕ್ಷಣವಿರುವವರ ತಪಾಸಣೆ ಮಾಡಲಾದ ಸ್ವ್ಯಾಬ್‍ಗಳನ್ನು ಪರೀಕ್ಷಿಸಲು ಸದ್ಯ ವಿಮ್ಸ್‍ನಲ್ಲಿ ವೈಯಕ್ತಿಕ 1600 ಮತ್ತು ಪೂಲಿಂಗ್ ಮಾಡಿದ್ರೇ 2 ಸಾವಿರದವರೆಗೆ ಪರೀಕ್ಷಿಸಬಹುದಾಗಿದೆ. ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆಯಲ್ಲಿ ಹೆಚ್ಚಿನ ಕೊರೊನಾ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಇಲ್ಲಿಯ ಸ್ವ್ಯಾಬ್‍ಗಳನ್ನು ಪೂಲಿಂಗ್ ಮಾಡದೇ ವೈಯಕ್ತಿಕವಾಗಿಯೇ ಪರೀಕ್ಷಿಸಬೇಕಾಗಿದೆ. ಉಳಿದವುಗಳನ್ನು ಬೇರೆಡೆ ಪರೀಕ್ಷಾ ಲ್ಯಾಬ್‍ಗೆ ಕಳುಹಿಸಿಕೊಡಲಾಗುತ್ತಿದೆ. ಹಾಗಾಗಿ ಪರೀಕ್ಷಾ ಫಲಿತಾಂಶ ಬರುವುದು ಸ್ವಲ್ಪ ತಡವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ತಿಳಿಸಿದರು.

ಇದನ್ನು ಓದಿ: ಸಿಪಿಐ(ಎಂ)ನ ಕೆ.ಕೆ.ಶೈಲಜಾ ಟೀಚರ್‌ಗೆ 60 ಸಾವಿರ ಅಂತರದ ಗೆಲುವು

ಅಜೀಂಫ್ರೇಮಜೀ ಫೌಂಡೇಶನ್‍ನವರು ಉಚಿತವಾಗಿ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಅಳವಡಿಸುವುದಕ್ಕಾಗಿ ಕೊರೊನಾ ಸಂಬಂಧಿತ ಆರ್‍ಟಿಪಿಸಿಆರ್ ಮಶೀನ್ ನೀಡಿದ್ದು, ಟೆಕ್ನಿಶಿಯನ್‍ರಿಗೆ ತರಬೇತಿ ನೀಡಲಾಗುತ್ತಿದೆ. ಇನ್ನೂ ಮೂರು ದಿನಗಳಲ್ಲಿ ಈ ಪ್ರಯೋಗ ಕಾರ್ಯಾರಂಭ ಮಾಡಲಿದೆ. ಇದರ ಜೊತೆಗೆ ಜಿಲ್ಲಾಡಳಿತ ಎರಡು ಆರ್‍ಟಿಪಿಸಿಆರ್ ಮಶೀನ್‍ಗಳ ಖರೀದಿಗೆ ನಿರ್ಧರಿಸಿದ್ದು,ಅವುಗಳು ಒಂದು ವಾರದೊಳಗೆ ಬಳ್ಳಾರಿಗೆ ಬರಲಿದ್ದು, ಅವುಗಳು ಕಾರ್ಯಾರಂಭ ಮಾಡಿದರೆ 3500ರವರೆಗೆ ಸ್ವ್ಯಾಬ್‍ಗಳನ್ನು ಪರೀಕ್ಷಿಸಿ ತಕ್ಷಣ ವರದಿ ಪಡೆಯಲು ಮತ್ತು ಚಿಕಿತ್ಸೆ ನೀಡಲು ಅನುಕೂಲಕರವಾಗಲಿದೆ ಎಂದರು.

ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ರೋಗಲಕ್ಷಣ ಕಂಡುಬಂದಲ್ಲಿ ತಕ್ಷಣ ಹೋಗಿ ತಪಾಸಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದ ಡಿಸಿ ಮಾಲಪಾಟಿ ಅವರು ಸೆಂಟನರಿ ಹಾಲ್‍ನ ಆರಂಭಿಸಲಾಗಿರುವ ಫೀವರ್ ಕ್ಲಿನಿಕ್‍ನಲ್ಲಿ ಒತ್ತಡ ಹೆಚ್ಚುತ್ತಿರುವುದರಿಂದ ತಾಳೂರು ರಸ್ತೆಯ ಶಾಂತಿ ಶಿಶುವಿಹಾರ ಬಳಿ ಮತ್ತೊಂದು ಫೀವರ್ ಕ್ಲಿನಿಕ್ ಆರಂಭಿಸಲಾಗಿದೆ ಎಂದರು.

ಹೆಚ್ಚಿನ ದರ ವಿಧಿಸುವ ದೂರು ಬಂದರೆ ಪರಿಶೀಲಿಸಿ ಕ್ರಮ:

ಬಳ್ಳಾರಿ ಜಿಲ್ಲೆಯಲ್ಲಿ ನಗರದ ಶಾವಿ, ವಾಯ್ಸ್, ಆರುಣೋದಯ, ನವೋದಯ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿರುವ ಡಿಸಿ ಮಾಲಪಾಟಿ ಅವರು ಈ ಆಸ್ಪತ್ರೆಗಳಲ್ಲಿ ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಹೆಚ್ಚಿನ ಸೊಂಕಿತರು ಕಂಡುಬರುತ್ತಿರುವ ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ತಾಲೂಕುಗಳಲ್ಲಿ ಜಿಲ್ಲಾಡಳಿತವು ಮನೆ-ಮನೆ ಸಮೀಕ್ಷೆ ನಡೆಸಿ ಜನರ ಆರೋಗ್ಯ ತಪಾಸಣೆಗೆ ಮುಂದಾಗಿದೆ. ಸೊಂಕಿನ ಲಕ್ಷಣಗಳು ಕಂಡುಬಂದವರನ್ನು ಅಗತ್ಯ ಚಿಕಿತ್ಸೆಗೆ ಕ್ರಮವಹಿಸಲಾಗುತ್ತಿದೆ ಎಂದರು.

ಇದನ್ನು ಓದಿ: ಕೋವಿಡ್‌ ನಿರ್ವಹಣೆ : ವೈದ್ಯಕೀಯ ಸಿಬ್ಬಂದಿ ಕೊರತೆ ಎದುರಾಗಲಿದೆ – ಡಾ. ದೇವಿಶೆಟ್ಟಿ ಎಚ್ಚರಿಕೆ

4.03 ಲಕ್ಷ ಜನರಿಗೆ ಲಸಿಕೆ ನೀಡಿಕೆ:

ಜಿಲ್ಲೆಯಲ್ಲಿ ಇದುವರೆಗೆ 4.03 ಲಕ್ಷ ಜನರು ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ವಿವರಿಸಿದರು.

45 ವರ್ಷ ವಯಸ್ಸು ದಾಟಿದ 3.50 ಲಕ್ಷ ಸಾರ್ವಜನಿಕರು ಲಸಿಕೆ ಪಡೆದುಕೊಂಡಿದ್ದಾರೆ. ಇವರಲ್ಲಿ 3 ಲಕ್ಷ ಜನರು ಮೊದಲ ಡೋಸ್ ಪಡೆದುಕೊಂಡಿದ್ದಾರೆ. 50 ಸಾವಿರ ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ.

63 ಸಾವಿರ ಆರೋಗ್ಯ ಇಲಾಖೆ, ಕಂದಾಯ, ಪೊಲೀಸ್ ಸೇರಿದಂತೆ ಫ್ರಂಟ್‌ಲೈನ್ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ ಎಂದು ಅವರು ವಿವರಿಸಿದರು.

ಕೋವ್ಯಾಕ್ಸಿನ್ ಕೊರತೆ ಇದೆ. ಅದರ ಪೂರೈಕೆಯಾಗಿಲ್ಲ, 45 ವರ್ಷ ಮೇಲ್ಪಟ್ಟವರಿಗೆ ಸದ್ಯ ಕೋವಿಶೀಲ್ಡ್ ನೀಡಲಾಗುತ್ತಿದೆ. ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದವರಿಗೆ ಅದು ಬಂದ ಮೇಲೆ 2ನೇ ಡೋಸ್ ನೀಡಲಾಗುವುದು ಹಾಗಾಗಿ ಜನರು ಸಹಕರಿಸಬೇಕು ಎಂದರು.

ಜಿ.ಪಂ. ಸಿಇಒ ಕೆ.ಆರ್.ನಂದಿನಿ ಅವರು  ಗ್ರಾಮೀಣ ಮಟ್ಟದಲ್ಲಿ ಗ್ರಾಪಂ ಟಾಸ್ಕ್‍ಫೋರ್ಸ್ ಬಲಪಡಿಸಲಾಗಿದ್ದು, ಅವುಗಳು ಮಹಾನಗರಗಳಿಂದ ಲಾಕ್‍ಡೌನ್ ಸಂದರ್ಭದಲ್ಲಿ ಗ್ರಾಮಗಳಿಗೆ ಬಂದವರ ಮೇಲೆ ಮತ್ತು ರೋಗಲಕ್ಷಣವಿರುವವರ ಮೇಲೆ ನಿಗಾವಹಿಸಿ ಚಿಕಿತ್ಸೆಗೆ ಕ್ರಮವಹಿಸಲಿವೆ ಎಂದರು.

ನಗರದಿಂದ ಹಳ್ಳಿಗಳಿಗೆ ಬಂದವರಿಗೆ ನರೇಗಾ ಅಡಿ ಕೂಲಿಕೆಲಸ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಡಿಎಚ್‍ಒ ಡಾ.ಜನಾರ್ಧನ್ ಮತ್ತಿತರರು ಇದ್ದರು.

 

ವರದಿ: ಪಂಪನಗೌಡ. ಬಿ.

Donate Janashakthi Media

Leave a Reply

Your email address will not be published. Required fields are marked *