ಪ್ರೊ. ರಾಜೇಂದ್ರ ಚೆನ್ನಿ
ಕರ್ನಾಟಕದ ರಾಜಕೀಯದಲ್ಲಿ ಒಂದೂ ರೂಪಾಯಿ ಖರ್ಚು ಇಲ್ಲದೆ, ಯಾವ ಶ್ರಮವೂ ಇಲ್ಲದೆ ಮಾಡಬಹುದಾದ ರಾಜಕೀಯವೆಂದರೆ ಕನ್ನಡ ಅಭಿಮಾನದ ರಾಜಕೀಯ. ಈ ರಾಜಕೀಯದಲ್ಲಿ ಕನ್ನಡವೆಂದರೆ ಒಂದು ಗಾಳಿಮಾತು, ಒಂದು ಘೋಷಣೆ. ಅದು ಸಾಮಾಜಿಕವಾಗಿ, ಆರ್ಥಿಕವಾಗಿ ಅಮೂರ್ತವಾದುದು. ಗಂಭೀರವಾದ ವಿಚಾರವೆಂದರೆ ಕನ್ನಡ ಪರ ರಾಜಕೀಯವು ಒಂದು ನಗೆನಾಟಕದ ಮಟ್ಟಕ್ಕೆ ಕುಸಿದಿದೆ. ಊರಿನ ಹೆಸರುಗಳ ಬಗೆಗಿನ ಸುಳ್ಳು ಸುದ್ದಿಯೇ ರಾಜಕಾರಣವಾಗಬೇಕೆ? ಇದನ್ನು ವಿಸ್ತರಿಸಿ ನೋಡುವುದಾದರೆ ಇಡೀ ಬಲಪಂಥೀಯ ರಾಜಕಾರಣವೇ ಹೆಸರು ಬದಲಿಸುವ ರಾಜಕಾರಣವಾಗಿದೆ. ಮುಖ್ಯವಾಗಿ ಭಾರತದ ಮುಸ್ಲಿಮ್ ಚರಿತ್ರೆಗೆ ಸಂಬಂಧಿಸಿದ ಊರುಗಳ, ಕಟ್ಟಡಗಳ ಹೆಸರು ಬದಲಿಸುವ ರಾಜಕಾರಣವಿದಾಗಿದೆ. ಆದರೆ ಸಾಮಾಜಿಕ, ಆರ್ಥಿಕ ರಚನೆಗಳನ್ನು, ವಾಸ್ತವಗಳನ್ನು ಬದಲಾಯಿಸುವ ಕಾರ್ಯಸೂಚಿಯೇ ಈ ರಾಜಕಾರಣದಲ್ಲಿಲ್ಲ.
ಕರ್ನಾಟಕದಲ್ಲಿಯೂ ಸುಳ್ಳುಸುದ್ದಿ ಕಾರ್ಖಾನೆಗಳು ಕೋವಿಡ್ ಕಾಲದಲ್ಲಿ ಭರಾಟೆಯಿಂದ ಕೆಲಸ ಮಾಡುತ್ತಿವೆ ಮತ್ತು ಈ ಸುದ್ದಿಗಳ ಸೃಷ್ಟಿಗೆ ಮುಖ್ಯಕಾರಣರಾದ ಬಿ.ಜೆ.ಪಿ. ರಾಜಕಾರಣಿಗಳು ಅವುಗಳ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡಿ ನಗೆಪಾಟಲಾಗುತ್ತಿದ್ದಾರೆ. ಇತ್ತೀಚೆಗೆ ಕೇರಳ ಸರಕಾರವು ಕಾಸರಗೋಡಿನ ಅನೇಕ ಊರುಗಳ ಕನ್ನಡ ಹೆಸರುಗಳನ್ನು ಬದಲಾಯಿಸಿ ಮಲಯಾಳೀಕರಿಸುತ್ತಿದೆ ಎಂಬ ಸುದ್ದಿಯು ಹೊರಟಿತು. ನಮ್ಮ ಮುಖ್ಯಮಂತ್ರಿಗಳಿಗೆ ತಮ್ಮ ಸ್ಥಾನದ ಗೌರವ, ಶಿಷ್ಠಾಚಾರ ಇವುಗಳ ಬಗ್ಗೆ ಮೊದಲಿನಿಂದಲೂ ಅಜ್ಞಾನವಿರುವುದರಿಂದ ಈ ಸುದ್ದಿಗೆ ತಕ್ಷಣ ಪ್ರತಿಕ್ರಿಯಿಸಿ ಕೇರಳದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ ಎಂದು ಇನ್ನೊಂದು ಸುದ್ದಿಯು ಹೊರಟಿತು. ಒಬ್ಬ ಮುಖ್ಯಮಂತ್ರಿಯ ಕ್ಷಮತೆ ಅವರಲ್ಲಿರುವ ವಾಸ್ತವಗಳ ಅರಿವು ಮತ್ತು ವಸ್ತುಸಂಗತಿಗಳನ್ನು ಸಂಗ್ರಹಿಸುವ ಇಲಾಖೆಗಳ ಮೇಲೆ ಅವರಿಗಿರುವ ಹಿಡಿತವನ್ನು ಅವಲಂಬಿಸಿರುತ್ತದೆ. ದುರ್ದೈವದಿಂದ ನಮ್ಮ ಸನ್ಮಾನ್ಯ ಮುಖ್ಯಮಂತ್ರಿಯವರು ತಾವು ಸಾಮಾನ್ಯ ಕಾರ್ಯಕರ್ತರು ಎಂದು ಭಾವಿಸಿದ್ದಾರೆ. ಹೀಗಾಗಿ ನೆರೆ ರಾಜ್ಯದ ಮುಖ್ಯಮಂತ್ರಿಯವರೊಡನೆ ಚರ್ಚಿಸದೆ, ಬಂದಿರುವ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಕನ್ನಡ ಹೆಸರುಗಳನ್ನು ಬದಲಾಯಿಸುವುದರ ವಿರುದ್ಧ ಹೇಳಿಕೆಯನ್ನು ಕೊಟ್ಟರು. ಈಗ ನೋಡಿದರೆ ಕೇರಳದ ಮುಖ್ಯಮಂತ್ರಿಯವರು ಹೀಗೆ ಮಾಡುವ ಪ್ರಸ್ತಾಪವೇ ಇಲ್ಲವೆಂದೂ ಮತ್ತು ಇಲ್ಲದ ಸಮಸ್ಯೆಯನ್ನು ಹುಟ್ಟುಹಾಕಿರುವುದು ಆಶ್ಚರ್ಯಕರವೆಂದೂ ಹೇಳಿಕೆ ನೀಡಿದ್ದಾರೆ.
ಇದರಿಂದಾಗಿ ಹರಾಜಾಗಿದ್ದು ನಮ್ಮ ಮುಖ್ಯಮಂತ್ರಿಗಳ ಮಾನವೇ. ಕಮ್ಯೂನಿಸ್ಟ್ ಆಡಳಿತವಿರುವ ಸರಕಾರದ ವಿರುದ್ಧ ಕನ್ನಡಾಭಿಮಾನದ ಅಸ್ತ್ರವನ್ನು ಪ್ರಯೋಗಿಸಲು ಅವಕಾಶ ಸಿಕ್ಕಿದೆಯೆಂದು ಉತ್ಸಾಹದಿಂದ ಒಬ್ಬ ಸಂಸದರು ಮತ್ತು ಇತರರು ತಾವೂ ಇಂಥ ಹೇಳಿಕೆಗಳನ್ನು ನೀಡಿದರು. ಕರ್ನಾಟಕದ ರಾಜಕೀಯದಲ್ಲಿ ಒಂದೂ ರೂಪಾಯಿ ಖರ್ಚು ಇಲ್ಲದೆ, ಯಾವ ಶ್ರಮವೂ ಇಲ್ಲದೆ ಮಾಡಬಹುದಾದ ರಾಜಕೀಯವೆಂದರೆ ಕನ್ನಡ ಅಭಿಮಾನದ ರಾಜಕೀಯ. ಈ ರಾಜಕೀಯದಲ್ಲಿ ಕನ್ನಡವೆಂದರೆ ಒಂದು ಗಾಳಿಮಾತು, ಒಂದು ಘೋಷಣೆ. ಅದು ಸಾಮಾಜಿಕವಾಗಿ, ಆರ್ಥಿಕವಾಗಿ ಅಮೂರ್ತವಾದುದು. ಉದಾಹರಣೆಗೆ ಇತ್ತೀಚೆಗೆ ಕರಾವಳಿಯಲ್ಲಿ ಎಂ.ಆರ್.ಪಿ.ಎಲ್. ಕಂಪನಿಯಲ್ಲಿ ಅತಿ ಕಡಿಮೆ ಸಂಖ್ಯೆಯ ಕನ್ನಡಿಗರು ಉದ್ಯೋಗಗಳಿಗಾಗಿ ಆಯ್ಕೆಯಾಗಿ ಬೃಹತ್ ಪ್ರತಿಭಟನೆ ನಡೆದಾಗ ಇದೇ ಸಂಸದರು ಹುಟ್ಟು ಮೂಕರಾಗಿಬಿಟ್ಟಿದ್ದರು. ಇನ್ನೊಬ್ಬ ಸುಪ್ರಸಿದ್ಧ ಕೂಗುಮಾರಿಯವರು ಚಾತುರ್ಮಾಸ ಪ್ರವೇಶ ಮಾಡಿದ ಕರ್ನಾಟಕದ ಮೊದಲ ಮಹಿಳೆಯಾಗಿ ಮೌನವಾದರು.
ಇದನ್ನು ಓದಿ: ಕಾಸರಗೋಡಿನಲ್ಲಿನ ಗ್ರಾಮಗಳ ಕನ್ನಡ ಹೆಸರು ಬದಲಾವಣೆ ಇಲ್ಲ ; ಕೇರಳ ಸರಕಾರ ಸ್ಪಷ್ಟನೆ
ಕಾರಣ ಸರಳವಿದೆ. ಬಿ.ಜೆ.ಪಿ. ಪಕ್ಷವು ಉತ್ತರ ಭಾರತದ, ಹಿಂದಿ ಪ್ರಾಂತ್ಯಗಳ ಪಕ್ಷ. ಅದು ದಕ್ಷಿಣಭಾರತವನ್ನು ಪ್ರತಿನಿಧಿಸುವುದಿಲ್ಲ. ಇತ್ತೀಚಿನ ಲೇಖನವೊಂದರಲ್ಲಿ ಇತಿಹಾಸಕಾರ ರಾಮಚಂದ್ರ ಗುಹಾ ವಿವರಿಸಿದಂತೆ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಇತರ ಎಲ್ಲಾ ಸೂಚ್ಯಂಕಗಳಲ್ಲಿ ಮುಂದಿರುವ ದಕ್ಷಿಣ ಭಾರತದ ರಾಜ್ಯಗಳು ರಾಷ್ಟ್ರ ರಾಜಕಾರಣದಲ್ಲಿ ಕೇವಲ ಅಂಚಿನಲ್ಲಿವೆ. ನನ್ನ ದೃಷ್ಟಿಯಲ್ಲಿ ಇದಕ್ಕೆ ಕಾರಣವೆಂದರೆ ಸಿದ್ಧಾಂತದಲ್ಲಿ ಹಾಗೂ ಕಾರ್ಯಚಟುವಟಿಕೆಯಲ್ಲಿ ಇಲ್ಲಿಯ ಬಿ.ಜೆ.ಪಿ. ರಾಜಕಾರಣಿಗಳನ್ನು ಲೆಕ್ಕಕ್ಕೇ ಇಲ್ಲದಷ್ಟು ಅಪ್ತಸ್ತುತರು. ಅವರನ್ನು ಉತ್ತರಭಾರತದ ರಾಜಕೀಯವು ಎಂದಿಗೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಏನೇ ಇದ್ದರೂ ಅವರು ಸಂಖ್ಯಾ ಬಲಕ್ಕೆ ಬೇಕಾಗಿರುವ ಅಂಕಿಗಳು ಮಾತ್ರ. ನಮ್ಮ ಬಿ.ಜೆ.ಪಿ. ಸಂಸದರಲ್ಲಿ ಒಂದು ಸಾರಿಯೂ ಸಂಸತ್‌ನಲ್ಲಿ ಬಾಯಿಬಿಡದವರ ಸಂಖ್ಯೆಯು ಗಿನ್ನೆಸ್ ದಾಖಲೆಯಾಗಿದೆ. ಹೀಗಾಗಿ ಅವರುಗಳು ಪ್ರಮಾಣ ಸ್ವೀಕರಿಸಿದ ಮೇಲೆ ಕರ್ನಾಟಕದಲ್ಲಿಯೇ ಇದ್ದುಕೊಂಡು ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಭ್ರಷ್ಠಾಚಾರ ಹಾಗೂ ಲೈಂಗಿಕ ಹಗರಣಗಳನ್ನು ಮಾಡುತ್ತಾ ಕ್ರಿಯಾಶೀಲರಾಗಿದ್ದಾರೆ. ಇವರಿಗೆ ಕೇರಳದ ಎಡಪಂಥೀಯ ಸರಕಾರವು ಊರುಗಳ ಕನ್ನಡ ಹೆಸರುಗಳನ್ನು ಬದಲಾಯಿಸುತ್ತಿದೆ ಎನ್ನುವ ಸಂಗತಿ ಒಂದು ವರವಾಗಿ ಕಂಡಿತು. ಆದರೇನು ಮಾಡುವುದು ಪಿಣರಾಯಿ ವಿಜಯನ್ ಅವರು ಇವರೆಲ್ಲ ನೆಲಕ್ಕೆ ಮೂಗು ತಿಕ್ಕುವಂತೆ ಅಂಥ ಪ್ರಸ್ತಾಪವೇ ಇಲ್ಲವೆಂದು ಬಿಟ್ಟಿದ್ದಾರೆ!
ಗಂಭೀರವಾದ ವಿಚಾರವೆಂದರೆ ಕನ್ನಡ ಪರ ರಾಜಕೀಯವು ಒಂದು ನಗೆನಾಟಕದ ಮಟ್ಟಕ್ಕೆ ಕುಸಿದಿದೆ. ನಾನು ಪ್ರಸ್ತಾಪಿಸಿದ ಗುಹಾ ಅವರ ಲೇಖನದಲ್ಲಿ ಬರುವ ಒಂದು ವಿವರವೆಂದರೆ ಇಲ್ಲಿಯ ಅನುಕೂಲ ಪರಿಸ್ಥಿತಿಯಿಂದಾಗಿ ಇಲ್ಲಿಗೆ ವಲಸೆ ಬಂದು ಉದ್ಯಮ, ವ್ಯಾಪಾರಗಳನ್ನು ಆರಂಭಿಸುವ ಉತ್ತರ ಭಾರತೀಯರ, ಇತರ ಪ್ರದೇಶಗಳ ಸಂಖ್ಯೆಯು ದೊಡ್ಡದಾಗಿದೆ. ಆದರೆ ಇಲ್ಲಿಂದ ಹೊರಗಡೆಗೆ ಹೋಗಿ ಉದ್ಯಮಶೀಲರಾದ ಕನ್ನಡಿಗರ ಸಂಖ್ಯೆ ಬಹಳ ಕಡಿಮೆ. ಇದಕ್ಕೆ ಕಾರಣವೆಂದರೆ ಕನ್ನಡಿಗರ ಸಾಹಸಹೀನತೆ ಮಾತ್ರವಲ್ಲ ಉತ್ತರದ ರಾಜ್ಯಗಳು ಈಗ ತಲುಪಿರುವ ಅಮಾನವೀಯ ಪರಿಸ್ಥಿತಿ ಕೂಡ. ಬಿ.ಜೆ.ಪಿ. ಆಳ್ವಿಕೆಯ ಉತ್ತರ ಪ್ರದೇಶ ಮತ್ತು ಬಿಹಾರಗಳು ಅನುಭವಿಸುತ್ತಿರುವ ದೊಂಬಿ, ಹಿಂಸೆ, ಅರಾಜಕತೆಗಳು ಭೀಕರವಾಗಿವೆ. ಪ್ರಶ್ನೆಯೆಂದರೆ ವಲಸೆ ಬಂದಿರುವ ಉದ್ಯಮಿಗಳು ಅದೆಷ್ಟು ಜನ ಕನ್ನಡಿಗರಿಗೆ ಉದ್ಯೋಗ ನೀಡಿದ್ದಾರೆ? ಈ ಅಂಕಿ ಸಂಖ್ಯೆಗಳು ನಮ್ಮ ರಾಜಕೀಯ ಪಕ್ಷಗಳ ಬಳಿ ಇವೆಯೆ? ಸಮೀಕ್ಷೆಗಳನ್ನು ನಡಸಲಾಗಿದೆಯೆ? ಇದನ್ನು ಕನ್ನಡದ ದುರಭಿಮಾನ ಎಂದು ಹೇಳುವುದು ಸುಲಭ, ಅಥವಾ ಕರಾವಳಿಯ ಬಲಪಂಥೀಯ ರಾಜಕಾರಣಿಗಳು ಹೇಳಿದ ಹಾಗೆ “ನಮ್ಮ ಹುಡುಗರಿಗೆ ಕೌಶಲ್ಯವಿಲ್ಲ” ಎಂದೂ ಹೇಳಬಹುದು! ನಾನು ಮಾತನಾಡುತ್ತಿರುವುದು ಶ್ರಮಜೀವಿಗಳಲ್ಲಿ ಕನ್ನಡಿಗರಿಗೆ ಎಷ್ಟು ಪಾಲು ಸಿಕ್ಕಿದೆ ಎನ್ನುವುದರ ಬಗ್ಗೆ. ಬೇರೆ ರಾಜ್ಯಗಳಿಗೆ ಅನಿವಾರ್ಯವಾಗಿ ವಲಸೆ ಹೋಗುವವರ ಬಗ್ಗೆ. ಹಿಂದಿ ಹೇರಿಕೆಯಿಂದಾಗಿ ನಮ್ಮ ಬ್ಯಾಂಕುಗಳಿಂದಲೂ ಕಣ್ಮರೆಯಾದ ಕನ್ನಡ ಉದ್ಯೋಗಿಗಳ ಬಗ್ಗೆ. ಇದೆಲ್ಲವೂ ಕನ್ನಡ ರಾಜಕೀಯವಲ್ಲವೆ? ಅದರ ಬದಲಾಗಿ ಊರಿನ ಹೆಸರುಗಳ ಬಗೆಗಿನ ಸುಳ್ಳು ಸುದ್ದಿಯೇ ರಾಜಕಾರಣವಾಗಬೇಕೆ?
ಇದನ್ನು ವಿಸ್ತರಿಸಿ ನೋಡುವುದಾದರೆ ಇಡೀ ಬಲಪಂಥೀಯ ರಾಜಕಾರಣವೆ ಹೆಸರು ಬದಲಿಸುವ ರಾಜಕಾರಣವಾಗಿದೆ. ಮುಖ್ಯವಾಗಿ ಭಾರತದ ಮುಸ್ಲಿಮ್ ಚರಿತ್ರೆಗೆ ಸಂಬಂಧಿಸಿದ ಊರುಗಳ, ಕಟ್ಟಡಗಳ ಹೆಸರು ಬದಲಿಸುವ ರಾಜಕಾರಣವಿದಾಗಿದೆ. ಆದರೆ ಸಾಮಾಜಿಕ, ಆರ್ಥಿಕ ರಚನೆಗಳನ್ನು, ವಾಸ್ತವಗಳನ್ನು ಬದಲಾಯಿಸುವ ಕಾರ್ಯಸೂಚಿಯೇ ಈ ರಾಜಕಾರಣದಲ್ಲಿಲ್ಲ. ನನ್ನ ವಾಸದ ಊರಾಗಿರುವ ಶಿವಮೊಗ್ಗೆಯಲ್ಲಿ ಅನೇಕ ಬೀದಿಗಳ, ಗಲ್ಲಿಗಳ ಹೆಸರುಗಳನ್ನು ಬದಲಾಯಿಸಿ ಅವುಗಳಿಗೆ ಆರ್.ಎಸ್.ಎಸ್. ನಾಯಕರುಗಳ ಹೆಸರಿಡಲಾಗಿದೆ. ಈ ಬೀದಿಗಳು, ಗಲ್ಲಿಗಳು ಮೊದಲಿನಷ್ಟೇ ಕೊಳಕಾಗಿರುವುದು ಸಾಂಕೇತಿಕವಾಗಿದೆ! ಹೆಸರು ಬದಲಿಸಿದರೆ ಚರಿತ್ರೆ ಬದಲಾಗುವುದಿಲ್ಲವೆಂದು ಗೊತ್ತಿದ್ದರೂ ಇಂಥ ಸಾಂಕೇತಿಕ ಭಾವುಕ ಕಾರ್ಯಾಚರಣೆಯು ನಡೆಯುತ್ತಲೆ ಇರುತ್ತದೆ. ಚರಿತ್ರೆಯ ಪುನರ್‌ರಚನೆಯ ಸೈದ್ಧಾಂತಿಕ ರಾಜಕೀಯವೂ ಈ ಕಾರ್ಯಾಚರಣೆಯ ಹಿಂದಿದೆ. ಅನೇಕ ಶತಮಾನಗಳವರೆಗೆ ಸ್ವರಾಜ್ಯವಿಲ್ಲದೆ “ಇನ್ನೊಬ್ಬರ” ಆಳ್ವಿಕೆಗೆ ಒಳಗಾಗಿದ್ದರ ಬಗೆಗಿನ ಕೀಳರಿಮೆಯ ರಾಜಕೀಯವಿದಾಗಿದೆ. ಅಲ್ಲದೆ ಭಾರತದ ಚರಿತ್ರೆಯ ಬಹುತ್ವವನ್ನು ನಿರಾಕರಿಸಿ ಅದರ ಕೋಮುವಾದೀಕರಣವನ್ನು ಮಾಡುವ ಉದ್ದೇಶವು ಈ ರಾಜಕಾರಣಕ್ಕಿದೆ. ಇದು ಪಠ್ಯಪುಸ್ತಕಗಳ ಮೂಲಕ, ಸುಳ್ಳು ಸಂಶೋಧನೆಗಳ ಮೂಲಕ ಹಾಗೂ ಇಂಥ ನಾಮಾಂತರಗಳ ಮೂಲಕ ಮಾಡುವ ಪ್ರಯತ್ನವು ಪ್ರಬಲವಾಗುತ್ತಿದೆ. ಮಹಾರಾಷ್ಟ್ರದಲ್ಲಿ ವಿಶ್ವವಿದ್ಯಾಲಯವೊಂದರ ಹೆಸರನ್ನು ಬಾಬಾ ಸಾಹೇಬ ಅಂಬೇಡ್ಕರ್ ಅವರ ಹೆಸರಿಗೆ ಬದಲಾಯಿಸಬೇಕೆಂದು ನಡೆದ ‘ನಾಮಾಂತರ’ ಚಳುವಳಿಯು ಸ್ವಾತಂತ್ರೋತ್ತರ ಕಾಲದ ಹಿಂಸಾತ್ಮಕ ಚಳುವಳಿಗಳಲ್ಲಿ ಒಂದಾಗಿತ್ತು. ಆದರೆ ಈ ಹಿಂಸೆಗೆ ಬಲಿಯಾದವರು ದಲಿತರು ಮತ್ತು ಮಾನಭಂಗಕ್ಕೆ ಒಳಗಾದವರು ದಲಿತ ಮಹಿಳೆಯರು. ಅಂದರೆ ನಾಮಾಂತರ ರಾಜಕೀಯವು ನಮ್ಮ ಸಮಾಜದ ವಾಸ್ತವಗಳಾದ ವರ್ಗ, ಜಾತಿ, ಲಿಂಗತ್ವಗಳನ್ನು ಒಳಗೊಂಡೇ ಇರುತ್ತದೆ.
——————————————————————————
ಕಾಸರಗೋಡು ಹಳ್ಳಿಗಳ ಹೆಸರು ಬದಲಾವಣೆ – ಫೇಸ್ ಬುಕ್ಕಿನಲ್ಲಿ
ನಮ್ಮ ಕರ್ನಾಟಕದ ಹೆಮ್ಮೆಯ ಬ್ಯಾಂಕುಗಳನ್ನು ಉತ್ತರ ಭಾರತೀಯರು ಮುಕ್ಕಿ ತಿನ್ನುವಾಗ ನೀವೆಲ್ಲಿ ಕತ್ತೆ ಕಾಯೋಕೆ ಹೋಗಿದ್ದಿರಿ?
ನಿಮ್ಮ ದೊಡ್ಡ ಸಾಹೇಬ್ರು ನಮ್ಮ ಏರ್ಪೋರ್ಟ್ ಅನ್ನು ಅದಾನಿಯ ಕಾಲಬುಡದಲ್ಲಿ ಇಡುವಾಗ ಯಾಕೆ ಗೋಣು ಅಲ್ಲಾಡಿಸಿ ಸುಮ್ಮನಾದಿರಿ?
ಕನ್ನಡದಲ್ಲಿದ್ದ ನಾಮಫಲಕಗಳನ್ನು ಹಿಂದಿಯಲ್ಲಿ ಬದಲಾಯಿಸಿ ಬರೆದಾಗ ನಿಮ್ಮ ನಾಲಗೆ ಯಾಕೆ ಹೊರಳದೇ ಹೋಯ್ತು?
ದಕ್ಷಿಣ ಕನ್ನಡದ ಹೆಚ್ಚಿನ ಬ್ಯಾಂಕುಗಳಲ್ಲಿ ಕನ್ನಡ/ತುಳು ಜನರ ಬದಲಾಗಿ ಹಿಂದಿಯವರು ‘ಆಪ್ ಕೋ ಕ್ಯಾ ಚಾಹಿಯೇ’ ಎಂದು ಹಲ್ಲು ಕಿರಿಯುವಾಗ, ನಿಮ್ಮ ಸದ್ದೇ ಇರುವುದಿಲ್ಲ?
ಮೊನ್ನೆ ಮೊನ್ನೆ ನಮ್ಮ ಎಂ.ಆರ್.ಪಿ.ಎಲ್. ಉದ್ಯೋಗಗಳನ್ನು ಉತ್ತರ ಭಾರತೀಯರು ಕಸಿದುಕೊಂಡಾಗಲೂ ನಿಮ್ಮ ಕೈಯಲ್ಲಿ ಏನೂ ಕಿಸಿಯೋಕ್ಕಾಗಲಿಲ್ಲವಲ್ಲ?
ಈಗ ಯಾವುದೋ ಅನಧಿಕೃತ ಮಾಹಿತಿ ಹಿಡಿದುಕೊಂಡು, ಕೇರಳದ ಮುಖ್ಯಮಂತ್ರಿಗಳಿಗೆ ಬುದ್ಧಿ ಹೇಳಲು ಹೊರಟಿದ್ದೀರಲ್ಲಾ… ಅದ್ಯಾವ ರಾಜಕೀಯ ಬೇಳೆ ಬೇಯಿಸಲು ಹವಣಿಸುತ್ತಿದ್ದೀರಿ ಸ್ವಾಮೀ? ಕೇರಳಿಗರು ಅಲ್ಲಿದ್ದ ನಿಮ್ಮ ಪಕ್ಷದ ಒಂದು ಗೂಡಂಗಡಿಯನ್ನು ಕೂಡಾ ಕಳೆದ ಚುನಾವಣೆಯಲ್ಲಿ ಮುಚ್ಚಿಬಿಟ್ಟಿದ್ದಾರೆ… ಇನ್ನೂ ಬೇಕಾ ಮಂಗಳಾರತಿ ನಿಮಗೆ?
ನಮ್ಮ ಜಿಲ್ಲೆಯಲ್ಲಿ, ಅಂದರೆ ನಿಮ್ಮ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ… ಪಟ್ಟಿ ಬೇಕಾದರೆ ಕೇಳಿ, ಕೊಡುತ್ತೇನೆ… ಸಾಧ್ಯವಾದರೆ ಅವುಗಳನ್ನು ಬಗೆಹರಿಸಿ… ಮೇಲೆ ಕೆಳಗೆ ನಿಮ್ಮದೇ ಸರಕಾರವಿದೆ, ನೆನಪಿರಲಿ!!
– Oscar
(Youth Voice ಗೋಡೆಯಲ್ಲಿ ಕಂಡದ್ದು)
ಊರಿನ ಸ್ಥಳ ನಾಮಗಳ ಬದಲಾವಣೆ
ಊರಿನ ಸ್ಥಳ ನಾಮಗಳು ಆಡಳಿತಾತ್ಮಕ ಪ್ರಭಾವ ಮತ್ತು ಭಾಷಿಕ ಪ್ರಭಾವದಿಂದ ಸಹಜವಾಗಿಯೇ ಬದಲಾಗುವುದು ರೂಢಿ. ಉದಾಹರಣೆಗೆ ನೂರು, ಸಾವಿರ ಮತ್ತು ಹಿಂದೆ ನಮ್ಮೂರುಗಳ ಹೆಸರು ಏನಿತ್ತು? ಅದೆಲ್ಲ ಉಳಿದು ಕೊಂಡಿದೆಯಾ?
ಇದು ಸಮರ್ಥನೆಯಲ್ಲ… ಆದರೆ ವಾಸ್ತವ.
ನಾನಿಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಂದರೆ ತುಳುನಾಡಿನ ಮೂಲ ಅಂದರೆ ಮೊದಲಿದ್ದ ಹೆಸರು ಹಾಗೂ ಇತ್ತೀಚೆಗೆ ಕನ್ನಡೀಕರಣಗೊಂಡ ಹೆಸರುಗಳ ಸಣ್ಣ ಉದಾಹರಣೆ ನನ್ನ ಅನುಭವದಲ್ಲಿ ಉಲ್ಲೇಖಿಸುತ್ತೇನೆ…
ತುಳು ಮೂಲ – ಕನ್ನಡ
- ಉಬಾರ್ – ಉಪ್ಪಿನಂಗಡಿ
ಇಟ್ಟೆಲ್ – ವಿಟ್ಲ
ಕಾರ್ಲ – ಕಾರ್ಕಳ
ಬೋಲ್ತೆರ್ – ಬೆಳ್ತಂಗಡಿ
ಅಜ್ಜೆರೆಕಲ್ಲ್ – ಉಜಿರೆ
ಬಂಟಕಲ್ಲ್ – ಬಂಟ್ವಾಳ
ಏನೂರು – ವೇಣೂರು
ಪಾಣೆರ್ -ಪಾಣೆ ಮಂಗಳೂರು
ಕುಡ್ಳ -ಮಂಗಳೂರು
ಒಡಿಪು – ಉಡುಪಿ
ಕುಡುಮಪುರ – ಧರ್ಮಸ್ಥಳ
ಬೆದ್ರ – ಮೂಡುಬಿದಿರೆ
(ಇದೇ ಥರ ಪಡುಬಿದ್ರೆಗೂ ತುಳುನಾಮ ಇದೆ. )
ಪೊಸಂಗಡಿ – ಹೊಸಂಗಡಿ
ಮಾರಿಪ್ಪಳ್ಳ – ಮಣಿಪಾಲ
ಪೆರಂಗಡಿ – ಹಳೆಯಂಗಡಿ
ಮೂಜಿಕಾರ್ಯ -ಮೂರು ಕಾವೇರಿ
ಕಣಿಯಾರ (ಕಣಿಪುರ) -ಕುಂಬಳೆ, ಕುಂಬ್ಲಾ
ಕುರ್ಚಿಪ್ಪಳ್ಳ -ಉಪ್ಪಳ
ಹೀಗೆ ಹೆಸರಿಸುತ್ತಾ ಹೋದರೆ ಒಂದೊಂದು ಭಾಷೆಯಲ್ಲೂ ಒಂದೂರಿಗೆ ನೂರೆಂಟು ಹೆಸರು.
ಒಂದೂರಿಗೆ ಯಾವ ಭಾಷಿಕ ಹೆಸರು ಬೇಕು..?
ಊರಿಗೊಂದು ಹೆಸರು ಸೃಷ್ಟಿ ಆದದ್ದು ಹೇಗೆ?
ಈಗ ಈ ಚರ್ಚೆ ಯಾಕೆ???
ಇದರ ಹಿಂದೆ ಗೌಪ್ಯ ಅಜೆಂಡಾ ಇದೆ….