ಬಿಡದಿ ಹೋಬಳಿಯ ಭದ್ರಾಪುರ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಮೇ 12 ರಂದು ರೈಲು ಹಳಿ ಬಳಿ ಶವವಾಗಿ ಪತ್ತೆಯಾದ 15 ವರ್ಷದ ಬಾಲಕಿ ರೈಲು ಅಪಘಾತದಿಂದ ಮೃತಪಟ್ಟಿದ್ದು, ಇದು ಕೊಲೆಯಲ್ಲ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಬಾಲಕಿ ಸಾವಿಗೆ ರೈಲು ಅಪಘಾತವೇ ಕಾರಣ. ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿರುವುದು ದೃಢಪಡಿಸಿದೆ. ಇದೇ ವೇಳೆ ಎಫ್‌ಎಸ್‌ಎಲ್ ವರದಿಯಲ್ಲೂ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎಂಬ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯದಿಂದ ದುರಂತದ ದೃಢೀಕರಣ
ಮೇ 12 ರಂದು ಸಂಜೆ 6 ಗಂಟೆ 7 ನಿಮಿಷಕ್ಕೆ ಬಾಲಕಿ ಹಳಿ ಬಳಿ ಹೋಗಿದ್ದಾರೆ. ಅದೇ ಸಮಯದಲ್ಲಿ ಅದೇ ಮಾರ್ಗವಾಗಿ ಬಂದ ರೈಲು ಬಾಲಕಿಗೆ ಡಿಕ್ಕಿ ಹೊಡೆದಿರುವ ದೃಶ್ಯಗಳು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿವೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ದೃಶ್ಯಗಳು ಘಟನೆಗೆ ಸಂಬಂಧಪಟ್ಟದ್ದೇ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಬಾಲಕಿಗೆ ಡಿಕ್ಕಿ ಹೊಡೆದ ರೈಲನ್ನು ಸಹ ಪರಿಶೀಲಿಸಿ, ಡಿಕ್ಕಿ ಹೊಡೆದ ಭಾಗದ ಮಾದರಿ ಹಾಗೂ ಬಾಲಕಿಯ ದೇಹದ ಮಾದರಿಯನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳಿಸಲಾಗಿತ್ತು. ವರದಿಯಲ್ಲಿ ಎರಡಕ್ಕೂ ಹೋಲಿಕೆಯಾಗಿದೆ. ಕೊಲೆ ಸಾಧ್ಯತೆ ಆಯಾಮದಲ್ಲೂ ತನಿಖೆ ನಡೆಸಲಾಗಿದೆ. ಬಾಲಕಿ ಶವವಿದ್ದ ಸ್ಥಳದ ಮಣ್ಣನ್ನು ಸಹ ಪರಿಶೀಲನೆಗೆ ಒಳಪಡಿಸಲಾಗಿದ್ದು, ದೇಹದಲ್ಲಿ ಘಟನಾ ಸ್ಥಳದ್ದು ಬಿಟ್ಟರೆ ಬೇರೆ ಕಡೆಯ ಮಣ್ಣು ಆಕೆಯ ದೇಹಕ್ಕೆ ಮೆತ್ತಿಕೊಂಡಿಲ್ಲ. ಇದರಿಂದಾಗಿ ಬೇರೆ ಕಡೆ ಕೊಲೆ ಮಾಡಿ ತಂದು ಇಲ್ಲಿಗೆ ಎಸೆದಿದ್ದಾರೆ ಎಂಬ ಆರೋಪವೂ ಸುಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.