ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಗ್ರಾಪಂ ನೌಕರರ ಪ್ರತಿಭಟನೆ

ಮಂಡ್ಯ : ಸರ್ಕಾರದ ಆದೇಶದಂತೆ 15ನೇ ಹಣಕಾಸಿನಲ್ಲಿ ಬಾಕಿ ವೇತನ ಪಾವತಿ, ವಸೂಲಾತಿಯಲ್ಲಿ ಶೇ.40ರಷ್ಟು ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಪಂ ನೌರರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಅನುಮೋದನೆ ಆಗದಿರುವ ಇಎಫ್‌ ಎಂಎಸ್‌ ವೇತನಕ್ಕೆ ಸೇರದಿರುವ ನೌಕರರ ಕಡತಗಳ ವಿಲೇವಾರಿ ಮಾಡಬೇಕು, ಉಳಿದಿರುವ ಎಲ್ಲ ನೌಕರರ ಕಡತಗಳನ್ನು ತರಿಸಿಕೊಂಡು ಅನುಮೋದನೆ ನೀಡಬೇಕು, ನಿವೃತ್ತಿ ಹಾಗೂ ಅಕಾಲಿಕ ಮರಣ ಹೊಂದಿದ ನೌಕರರ ಉಪಧನ ಕೊಡಲೇ ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು ಸರ್ಕಾರಕ್ಕೆ ಒತ್ತಾಯಿಸಿದರು

ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಮಾಡದಿರುವ ಗ್ರಾಪಂ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಗ್ರಾಪಂ ಕರ ವಸೂಲಿ, ಗುಮಾಸ್ತರಿಂದ ಗ್ರೇಡ್-2‌  ಕಾರ್ಯದರ್ಶಿ, ದ್ವಿತೀಯ ದರ್ಜೆಲೆಕ್ಕ ಸಹಾಯಕ ಹುದ್ದೆಗಳಿಗೆ ಆಯ್ಕೆ ಮುಖಾಂತರ ನೇಮಕಾತಿ ತಡೆಹಿಡಿದಿರುವ ಆದೇಶವನ್ನು ತೆರವುಮಾಡಿ ಆ ಹುದ್ದೆಗಳನ್ನು ತುಂಬಬೇಕು ಎಂದು ನೌಕರರು ಆಗ್ರಹಿಸಿದರು.

ಹೋರಾಟದ ಫಲವಾಗಿ ನೌಕರರ ಹಲವು ಬೇಡಿಕೆಗಳನ್ನು ಸರ್ಕಾರ ಈಡೇರಿಸಿ ಆದೇಶ ಹೊರಡಿಸಲಾಗಿದೆ. ಆದರೆ, ಸ್ಥಳೀಯ ಗ್ರಾಮ ಪಂಚಾಯಿತಿಗಳಲ್ಲಿ ಜಾರಿಮಾಡುತ್ತಿಲ್ಲ ಹಾಗಾಗಿ ಸರ್ಕಾರದ ಆದೇಶವನ್ನು ಈ ಕೂಡಲೆ ಜಾರಿಮಾಡಬೇಕೆಂದು ಪ್ರತಿಭಟನಾಕಾರರು ಜಿಪಂ ಸಿಇಒಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಎಂ.ಶಿವಕುಮಾರ್‌, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮತ್ತಿತರರು ಭಾಗವಹಿಸಿದರು.

Donate Janashakthi Media

Leave a Reply

Your email address will not be published. Required fields are marked *