ಎಲ್ಗಾರ್ ಪರಿಷತ್ ಪ್ರಕರಣ: ಗೌತಮ್ ನವ್ಲಾಖಾಗೆ ಸುಪ್ರೀಂ ಕೋರ್ಟ್ ಜಾಮೀನು

ನವದೆಹಲಿ: ಎಲ್ಗಾರ್‌ ಪರಿಷತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವರ್ಷಗಳ ಹಿಂದೆ ಬಂಧಿಸಲ್ಪಟ್ಟಿದ್ದ ಸಾಮಾಜಿಕ ಕಾರ್ಯಕರ್ತ ಗೌತಮ್ ನವ್ಲಾಖಾಗೆ ಸುಪ್ರೀಂಕೋರ್ಟ್‌ ಜಾಮೀನು ನೀಡಿದೆ. ಗೌತಮ್ 

ವರದಿ ಪ್ರಕಾರ ನವ್ಲಾಖಾ ಅವರ ವಯಸ್ಸನ್ನು ಪರಿಗಣಿಸಿ ನ್ಯಾಯಾಲಯ ಜಾಮೀನು ನೀಡಿದೆ. ವಿಚಾರಣೆ ಸುದೀರ್ಘವಾಗಿ ನಡೆಯಲಿದ್ದು, ಪ್ರಕರಣದ ಕೆಲವು ಸಹ ಆರೋಪಿಗಳಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ ಎಂಬ ಅಂಶವನ್ನೂ ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ.

ಗೌತಮ್ ನವ್ಲಾಖಾ ಅವರನ್ನು ಏಪ್ರಿಲ್ 14, 2020 ರಂದು ಬಂಧಿಸಿದ ಬಳಿಕ ನವ್ಲಾಖಾ, ಆರಂಭಿಕ ವರ್ಷಗಳಲ್ಲಿ ಜೈಲಿನಲ್ಲಿಯೇ ಇದ್ದರು. ಬಳಿಕ ಸುಪ್ರೀಂ ಕೋರ್ಟ್‌ನ ಆದೇಶದ ನಂತರ, ಅವರನ್ನು ನವೆಂಬರ್ 10, 2022 ರಿಂದ ನವಿ ಮುಂಬೈನಲ್ಲಿ ಗೃಹಬಂಧನದಲ್ಲಿ ಇರಿಸಲಾಗಿತ್ತು.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಂಬೆ ಹೈಕೋರ್ಟ್ ನವ್ಲಾಖಾ ಅವರಿಗೆ ಜಾಮೀನು ನೀಡಿತ್ತಾದರೂ, ಎನ್‌ಐಎ ಕೋರಿಕೆಯ ಮೇರೆಗೆ ನ್ಯಾಯಾಲಯ ತನ್ನ ಆದೇಶವನ್ನು ಮೂರು ವಾರಗಳ ಕಾಲ ಮುಂದೂಡಿ ನಂತರ ಸುಪ್ರೀಂ ಕೋರ್ಟ್ ಈ ಅವಧಿಯನ್ನು ವಿಸ್ತರಿಸಿತು.

ನವ್ಲಾಖಾ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಏಪ್ರಿಲ್ 9 ರಂದು ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. 1.64 ಕೋಟಿ ರೂಪಾಯಿ ವೆಚ್ಚದ ಅವರ ಬಂಧನದ ಸಂದರ್ಭದಲ್ಲಿ ಮಹಾರಾಷ್ಟ್ರ ಸರ್ಕಾರ ಅವರ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ಒದಗಿಸಿದೆ. ನವ್ಲಾಖಾ ಅವರು ಸ್ವತಃ ಗೃಹಬಂಧನಕ್ಕೆ ವಿನಂತಿಸಿದ್ದರಿಂದ ಇದನ್ನು ಪಾವತಿಸಬೇಕಾಗುತ್ತದೆ.

ವರದಿಯ ಪ್ರಕಾರ, ಮೇ 14 ರ ತೀರ್ಪಿನಲ್ಲಿ, ನವ್ಲಾಖಾ ಅವರ ಬಂಧನದ ಸಮಯದಲ್ಲಿ ಒದಗಿಸಲಾದ ಭದ್ರತೆಗಾಗಿ 20 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನು ಓದಿ : ಭಾರತದ ಜೈಲುಗಳಲ್ಲಿ ಯಾವುದೇ ತಪ್ಪು ಮಾಡದ 9,600 ಕ್ಕೂ ಮಕ್ಕಳು

ಏನಿದು ನವ್ಲಾಖಾ ವಿರುದ್ಧದ ಪ್ರಕರಣ?

ಎಲ್ಗಾರ್ ಪರಿಷತ್ತಿನ ಸಮ್ಮೇಳನವನ್ನು ಡಿಸೆಂಬರ್ 31, 2017 ರಂದು ಪುಣೆಯಲ್ಲಿ ಆಯೋಜಿಸಲಾಗಿತ್ತು. ಗೌತಮ್ ನವ್ಲಾಖಾ ಆ ಸಮ್ಮೇಳನದಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದಾರೆ ಎನ್ನೋ ಆರೋಪವಿದ್ದು, ಭಾಷಣದ ಮರುದಿನ ಪಶ್ಚಿಮ ಮಹಾರಾಷ್ಟ್ರದ ಹೊರವಲಯದಲ್ಲಿರುವ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ದೂರಿದ್ದಾರೆ.

ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಮಾನವ ಹಕ್ಕುಗಳ ಕಾರ್ಯಕರ್ತರು, ವಕೀಲರು, ಬರಹಗಾರರು ಮತ್ತು ಶಿಕ್ಷಣತಜ್ಞರು ಸೇರಿದಂತೆ ಒಟ್ಟು 16 ಜನರನ್ನು ಬಂಧಿಸಲಾಗಿದ್ದು, ಈ ಬಂಧನವನ್ನು ವರ್ಷಗಳಿಂದಲೂ ಟೀಕಿಸುತ್ತಲೇ ಬರಲಾಗುತ್ತಿದೆ. ತನಿಖಾ ಸಂಸ್ಥೆಗಳು ಆರೋಪಿಗಳ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸಾಕ್ಷ್ಯವನ್ನು ನೀಡಲು ಹ್ಯಾಕರ್‌ಗಳನ್ನು ಬಳಸಿಕೊಂಡಿವೆ ಎಂದು ಆರೋಪಿಸಲಾಗಿದೆ.

ಯಾರಿಗ್ಯಾರಿಗೆ ಜಾಮೀನು ಸಿಕ್ಕಿದೆ?

ಏಪ್ರಿಲ್‌ನಲ್ಲಿ ಈ ಪ್ರಕರಣದಲ್ಲಿ ಶೋಮಾ ಸೇನ್‌ಗೆ ಜಾಮೀನು ಸಿಕ್ಕಿತ್ತು. 2021 ರಲ್ಲಿ, ಟ್ರೇಡ್ ಯೂನಿಯನಿಸ್ಟ್ ಮತ್ತು ವಕೀಲೆ ಸುಧಾ ಭಾರದ್ವಾಜ್ ಅವರಿಗೆ ಜಾಮೀನು ನೀಡಲಾಯಿತು. ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ 2022 ರಲ್ಲಿ ಜಾಮೀನು ಪಡೆದರು. 2022 ರಲ್ಲಿ, ಕವಿ ವರವರ ರಾವ್ ಅವರಿಗೆ ಆರೋಗ್ಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಜಾಮೀನು ನೀಡಿತು.

2023 ರಲ್ಲಿ ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರೇರಾ ಅವರು ಅರ್ಹತೆಯ ಆಧಾರದ ಮೇಲೆ ಜಾಮೀನು ಪಡೆದರು. ಬಾಂಬೆ ಹೈಕೋರ್ಟ್ ಮೆರಿಟ್ ಆಧಾರದ ಮೇಲೆ ಮಹೇಶ್ ರಾವುತ್‌ಗೆ ಜಾಮೀನು ನೀಡಿತ್ತು, ಆದರೆ ನ್ಯಾಯಾಲಯವು ತನ್ನದೇ ಆದ ಆದೇಶಕ್ಕೆ ತಡೆ ನೀಡಿ, ಸುಪ್ರೀಂ ಕೋರ್ಟ್ ಅದನ್ನು ವಿಸ್ತರಿಸಿತ್ತು.

ವೈದ್ಯಕೀಯ ಆರೈಕೆಯ ಕೊರತೆಯಿಂದಾಗಿ ಫಾದರ್‌ ಸ್ಟಾನ್ ಸ್ವಾಮಿ ಜುಲೈ 2021 ರಲ್ಲಿ ಕಸ್ಟಡಿಯಲ್ಲಿ ನಿಧನರಾದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಜೈಲಿನಲ್ಲಿರುವವರಲ್ಲಿ ಜ್ಯೋತಿ ಜಗತಾಪ್, ಸಾಗರ್ ಗೋರ್ಖೆ, ರಮೇಶ್ ಗೈಚೋರ್, ಮಹೇಶ್ ರಾವುತ್, ಸುರೇಂದ್ರ ಗಡ್ಲಿಂಗ್, ಸುಧೀರ್ ಧವಳೆ, ರೋನಾ ವಿಲ್ಸನ್ ಮತ್ತು ಹನಿ ಬಾಬು ಸೇರಿದ್ದಾರೆ.

ಇದನ್ನು ನೋಡಿ : ಖಾಸಗಿ ಆಸ್ಪತ್ರೆಗಳ ಬಣ್ಣದ ಮಾತುಗಳಿಗೆ ಮರುಳಾದರೆ ಜೇಬಿಗೆ ಕತ್ರಿ ಬಿದ್ದಂತೆ – ಮರುಳಸಿದ್ದಪ್ಪ ಮಾತುಗಳು

Donate Janashakthi Media

Leave a Reply

Your email address will not be published. Required fields are marked *