ಬಹುರೂಪಿ ನಾಟಕೋತ್ಸವಕ್ಕೆ ಚಕ್ರವರ್ತಿ ಸೂಲಿಬೆಲೆಯನ್ನು ಏಕೆ ಕರೆಸುತ್ತೀರಿ?

ರಂಗಾಯಣ ನಾಟಕೋತ್ಸವದ ಪೂರ್ವ ತಯಾರಿಯಲ್ಲಿನ ಹೊಸ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಲವು ಮಾತುಗಳು

ವಸಂತ ಬನ್ನಾಡಿ

ಯುವ ಕಲಾವಿದೆ ಚಿತ್ರಾ ವೆಂಕಟರಾಜ್ ಮೈಸೂರಿನ ರಂಗಾಯಣದಲ್ಲಿ ಈ ತಿಂಗಳು ನಡೆಯಲಿರುವ ಬಹುರೂಪಿ ನಾಟಕೋತ್ಸವದ ಒಂದು ಸಭೆಯಲ್ಲಿ ಉಪನ್ಯಾಸ ನೀಡಲು ಚಕ್ರವರ್ತಿ ಸೂಲಿಬೆಲೆಯನ್ನು ಕರೆಸುತ್ತಿರುವ ಬಗ್ಗೆ ಆತಂಕವ್ಯಕ್ತಪಡಿಸಿದ್ದಾರೆ. ಅವರ ಆತಂಕ ಸಕಾರಣವಾದದು. ಆ ಬಗ್ಗೆ ಇನ್ನೂ ಅನೇಕರು ತಮ್ಮ ಕಳವಳ ವ್ಯಕ್ತಪಡಿಸಿರುವುದನ್ನೂ ನೋಡಿದೆ. ಈಗ ನಾವೇನು ಮಾಡಬಹುದು?

ಇಲ್ಲಿ ಕೆಲವು ಮುಖ್ಯ ವಿಷಯಗಳನ್ನು ಗಮನಿಸಬೇಕು:

೧) ಮಧ್ಯಪ್ರದೇಶದ ಭಾರತ್ ಭವನದಲ್ಲಿ ಬಿಜೆಪಿಯ ಮಧ್ಯಪ್ರವೇಶದಿಂದ ಏನಾಯಿತು ಎಂಬುದರ ಬಗ್ಗೆ ನಾನು ಈಗಾಗಲೇ ಬರೆದಿದ್ದೇನೆ.ಅಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಭಾರತ ಭವನದ ಚಹರೆಯೇ ಬದಲಾಗಿ ಹೋಗಿತ್ತು. ಅಂತಿಮವಾಗಿ ಇಡೀ ಸಂಸ್ಥೆಯೇ ಅಪ್ರಸ್ತುತವಾಗಿಬಿಟ್ಟಿತು. ಕಲೆಯ ಬಗ್ಗೆ ತಿಳುವಳಿಕೆಯೇ ಇಲ್ಲದವರು ಸೇರಿಕೊಂಡ ಕಾರಣದಿಂದ ಮಹತ್ವಾಕಾಂಕ್ಷೆಯಿಂದ ಹುಟ್ಟಿದ ಒಂದು ಸಂಸ್ಥೆ ನಾಶವಾದುದರ ಒಳ್ಳೆಯ ಉದಾಹರಣೆ ಇದು.

ಇಷ್ಟಾಗಿಯೂ ಬಿಜೆಪಿ ಸಾಂಸ್ಕೃತಿಕ ವಲಯದಲ್ಲಿ ಒಡ್ಡೊಡ್ಡಾಗಿದರೂ ತನ್ನ ಮೂಗು ತೂರಿಸಲು ಪ್ರಯತ್ನ ಮಾಡದೇ ಇರುವ ಪೈಕಿ ಅಲ್ಲ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಎನ್.ಎಸ್.ಡಿ ಮತ್ತು ಪೂನಾ ಫಿಲಂ ಇನ್ಸ್ಟಿಟ್ಯೂಟ್‌ಗಳಲ್ಲೂ ಅಂತ ಪ್ರಯತ್ನ ನಡೆದಿತ್ತು.

೨) ಭಾರತ್ ಭವನದ ಸಂದರ್ಭದಲ್ಲಿ ಬಿಜೆಪಿ ಪ್ರವೇಶದಿಂದ ಅಲ್ಲಿದ್ದ ಅತ್ಯುತ್ತಮ ಕಲಾವಿದರನ್ನು ಒಂದೋ ತೆಗೆಯಲಾಯಿತು,ಇಲ್ಲ ಅವರಾಗಿ ಬಿಟ್ಟು ಹೋದರು.ಹೀಗಾಗಿ ಇಡೀ ಸಮುಚ್ಚಯವೇ ಸಾಂಸ್ಕೃತಿಕವಾಗಿ ಅರ್ಥಹೀನವಾಯಿತು.

ಇಲ್ಲಿನ ರಂಗಾಯಣಗಳಿಗೆ ಸಂಬಂಧಪಟ್ಟ ಹಾಗೆ ಪರಿಸ್ಥಿತಿ ಸ್ವಲ್ಪ ಭಿನ್ನವಿತ್ತು. ಆಗಲೇ ಒಂದು ನಾಟಕ ರೆಪರ್ಟರಿ ಇತ್ತು.ಹೀಗಾಗಿ ತಮ್ಮ ಉದ್ದೇಶಕ್ಕೆ ಪೂರಕವಾಗಿ ಕೆಲಸ ಮಾಡಬಹುದಾದ ನಿರ್ದೇಶಕರನ್ನು ನೇಮಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸಿತು. ಮೈಸೂರು ರಂಗಾಯಣಕ್ಕೆ ಅಡ್ಡಡ್ಡ ಕಾರ್ಯಪ್ಪ ಅಂಥವರು ನೇಮಕವಾದದ್ದು ಈ ಹಿನ್ನೆಲೆಯಲ್ಲಿ.

೩) ಕಾರ್ಯಪ್ಪ ಇಲ್ಲಿ ಕಾಲಿಡುವಾಗಲೇ ಅಸಂಬದ್ಧ ಹೇಳಿಕೆಗಳ ಮೂಲಕ ‘ತಾನು ಇದ್ದೇನೆ’ ಎಂದು ತೋರಿಸಿಕೊಳ್ಳುವ ಪ್ರಯತ್ನವನ್ನು ಮಾಡಿದರು. ಎಸ್.ಎಲ್ .ಭೈರಪ್ಪ ಅವರ ನಾಟಕವನ್ನೂ ಆಡಿಸಿದರು. ಇದ್ಯಾವುದೂ ಅಷ್ಟು ಫಲ ಕಾಣಲಿಲ್ಲ. ಈಗ ರಂಗಭೂಮಿಗೆ ಸಂಬಂಧವೇ ಇಲ್ಲದ ಸೂಲಿಬೆಲೆ ಕರೆಸುವುದರ ಮೂಲಕ ಇನ್ನಷ್ಟು ಗೊಂದಲವನ್ನು ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಸೂಲಿಬೆಲೆಯನ್ನು ಸಾಮಾಜಿಕ ಕಾರ್ಯಕರ್ತ ಎಂಬ ಹಿನ್ನೆಲೆಯಲ್ಲಿ ಕರೆಸುವುದರ ಅಭಾಸದ ಬಗ್ಗೆ ಪ್ರಶ್ನಿಸಿದ ಮಾಧ್ಯಮದವರಿಗೆ ಕಾರ್ಯಪ್ಪ ಉತ್ತರಿಸಿದ ರೀತಿಯಲ್ಲಿ ಇದು ಸ್ಪಷ್ಟವಾಗಿ ಕಾಣಿಸುತ್ತದೆ. ಕರ್ನಾಟಕದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇರುವ ಹಿನ್ನೆಲೆಯಲ್ಲಿ ತನಗೊಂದು ಭದ್ರತೆ ಇದೆ ಎಂದೂ ಅದಕ್ಕೆ ಪೂರಕವಾಗಿ ತಾನು ಏನು ಬೇಕಾದರೂ ಮಾಡಬಲ್ಲೆ ಎಂದೂ  ಅವರ ಮನಸ್ಸಿನಲ್ಲಿ ಇರುವ ಹಾಗಿದೆ.

ತಾನು ಇನ್ನೂ ಒಂದು  ವರ್ಷ ಇಲ್ಲಿರುವುದರಿಂದ ತನಗೆ ಬೇಕಾದನ್ನು ನಾನು ಮಾಡುತ್ತೇನೆ, ನೀವು ನಿಮಗೆ ಬೇಕಾದ್ದನ್ನು ಮಾಡಿಕೊಳ್ಳಿ ಎಂಬ ಠೇಂಕಾರವನ್ನು ಅವರು ಪ್ರದರ್ಶಿಸಿದರು.ಉಡಾಫೆತನಕ್ಕೂ ಒಂದು ಆವರಣ ಸೃಷ್ಟಿಯಾಗುವುದು ಇಂತಹ ಸಂದರ್ಭದಲ್ಲೇ.ರಂಗಾಯಣದ ನಿರ್ದೇಶಕ  ಸ್ಥಾನಕ್ಕೆ ಆತ ಬಂದಿರುವುದೇ ಹಿಂದುತ್ವವಾದವನ್ನು ಸಮರ್ಥಿಸುವವರನ್ನು ಒಳಗೊಳ್ಳಬೇಕು ಎಂಬ ಉದ್ದೇಶದಿಂದಲೇ ಎಂಬುದನ್ನು ಇಲ್ಲಿ ಗಮನಿಸಬೇಕು.

೪) ಈಗ ನಿಜವಾದ ಸಮಸ್ಯೆ ಇರುವುದು ನಮ್ಮ ಸಾಂಸ್ಕೃತಿಕ ವಲಯದ ಮಂದಿಯ ಮನಸ್ಥಿತಿಯಲ್ಲಿ. ಕನ್ನಡ ಸಾಹಿತ್ಯ ಪರಿಷತ್ ಆಗಲೀ ರಂಗಾಯಣವಾಗಲೀ ತಮ್ಮ ತೆರಿಗೆ ದುಡ್ಡಲ್ಲಿ ನಡೆಯುವುದರಿಂದ ತಮ್ಮದೇ ಸಂಸ್ಥೆ ಎಂಬ ಭಾವನೆ ಅನೇಕರಲ್ಲಿದೆ. ಇದರಲ್ಲಿ ಸತ್ಯವೂ ಇದೆ.ಆದರೆ ಬದಲಾದ ಸಂದರ್ಭಕ್ಕೆ ಈ ಮಾತು ಹೊಂದುವುದಿಲ್ಲ ಎಂಬುದು ಮುಖ್ಯ. ಇವತ್ತು ಏನಾಗುತ್ತಿದೆ ಎಂಬುದನ್ನು ಗ್ರಹಿಸಬೇಕಾಗುತ್ತದೆ. ಏಕೆ ಇಂತಹ ಸಂಸ್ಥೆಗಳಲ್ಲಿ ಈಗ ಬಿಜೆಪಿ ಮಂದಿ ಅದರಲ್ಲೂ ಹಿಂದುತ್ವದ ಸಮರ್ಥಕರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ? ಅವರ ನಡುವೆ ಒಳಗಿದ್ದುಕೊಂಡು ತಮಗೆ ಕೆಲಸ ಮಾಡಲು ಸಾಧ್ಯವೇ? ಇವುಗಳ ಬಗ್ಗೆ ಗಮನ ಇಲ್ಲದಿದ್ದರೆ ಕಾಲಕ್ಕೆ ತಕ್ಕ ಹಾಗೆ ಪ್ರತಿಕ್ರಿಯೆ ನೀಡುವುದಷ್ಟೇ ಆಗಿಬಿಡುತ್ತದೆ. ಅದೂ ಒಂದು ಘಟನೆ ನಡೆದ ಮೇಲೆ.ಬಳಿಕ ಇನ್ನೊಂದು ಘಟನೆ ನಡೆಯುವವರೆಗೆ ಸುಮ್ಮನಿರುವುದೂ ನಡೆಯುತ್ತಿರುತ್ತದೆ.ಹೀಗಾಗಿ ಒಂದು ಪ್ರಬಲವಾದ ಪ್ರತಿರೋಧ ಕಟ್ಟಲು ಕೊನೆಗೂ ಸಾಧ್ಯವಾಗುವುದೇ ಇಲ್ಲ.

೫) ನಮ್ಮ ಬರಹಗಾರರು ಮತ್ತು ಕಲಾವಿದರ ವರ್ತನೆ ಇನ್ನೂ ಅಭಾಸಕಾರಿಯಾದುದು.ರಂಗಾಯಣದಂತಹ ಸಂಸ್ಥೆಯ ತಮ್ಮನ್ನು ಕರೆಯುವುದೇ ದೊಡ್ಡದು ಎಂಬ ಯೋಚನಾಲಹರಿಯಲ್ಲೇ ಇದ್ದಾರೆ ಇವರು. ರಂಗಾಯಣದ ನಿರ್ದೇಶಕರ ನಿಲುವು ಗೊತ್ತಿದ್ದೂ ‘ಗಾಂಧಿ ವಿಚಾರಸಂಕಿರಣ’ ಮಾಡಿದಾಗ ಅದು ತಮಗೆ ಸಂದ ಗೌರವ ಎಂಬಂತೆ ಹೋಗಿ ಉಪನ್ಯಾಸ ಮಾಡಿರುವವರನ್ನು ನೋಡಿದ್ದೇವೆ. ರಂಗಾಯಣ ಹೋಗುತ್ತಿರುವ ದಾರಿಯನ್ನು ಗಮನಿಸಿ,ತಾನು ಬರುವುದಿಲ್ಲ ಎಂದು ಇವರು ಹೇಳುವುದಿಲ್ಲ.ಹೇಳಿದ್ದರೆ ಅದರ ಪರಿಣಾಮವೇ ಬೇರೆ ಇರುತ್ತಿತ್ತು. ಹಾಗೆ ಹೇಳುವಷ್ಟು ವೈಚಾರಿಕ ಪ್ರಖರತೆ ಇಂಥವರಲ್ಲಿ ಇಲ್ಲ ಎಂದೇ ಹೇಳಬೇಕಾಗುತ್ತದೆ.ಅಂಥ ಇಚ್ಛಾಶಕ್ತಿ ಹತ್ತು ಜನರಿಗಾದರೂ ಇದ್ದಿದ್ದರೆ ಭಾರತ ಭವನದ ಹಾಗೆ ರಂಗಾಯಣ ಇಷ್ಟರಲ್ಲಾಗಲೇ ಅಪ್ರಸ್ತುತವಾಗಿ ಬಿಡುತ್ತಿತ್ತು.

೬) ಈಗ ಮುನ್ನೆಲೆಗೆ ಬಂದಿರುವ ಸೂಲಿಬೆಲೆ ಪ್ರಕರಣವನ್ನೇ ನೋಡಿ.ಸೂಲಿಬೆಲೆ ಜೊತೆ ವೇದಿಕೆ ಹಂಚಿಕೊಳ್ಳಲಿರುವ ನಾ.ಡಿಸೋಜ ಅಂತವರು ತಾನು ಭಾಗವಹಿಸಲಾರೆ ಎಂದು ಹೇಳಲು ತಯಾರಿದ್ದಾರೆಯೇ?ಖಂಡಿತ ಇಲ್ಲ. ಇದು ಹೀಗೇ ನಡೆದುಕೊಂಡು ಹೋಗುತ್ತಿರುತ್ತದೆ. ನಾಳೆ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಲ್ಲೂ ಆಗುವುದೂ ಅದೇ. ಹೀಗಾಗಿಯೇ ಸರ್ಕಾರದ ಪ್ರತಿನಿಧಿಗಳಾಗಿ ಮೇಲೆ ಕೂತವರಿಗೆ ಠೇಂಕಾರ ಬಂದುಬಿಡುವುದು.ಇದು ಸದ್ಯದ ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇರುವ ದೊಡ್ಡ ಸಮಸ್ಯೆ. ಮೌನ,ನಿಷ್ಕ್ರಿಯತೆ ಮತ್ತು ಸಮಯಸಾಧಕತನ!

೭) ಕಥೆ,ಕಾದಂಬರಿ ನಾಟಕಗಳನ್ನು ಬರೆದು ತುಸು ಹೆಸರು ಮಾಡಿರುವ ನೂರು ಜನರನ್ನು ಮಾತನಾಡಿಸಿ ನೋಡಿದರೆ ಇದು ಸ್ಪಷ್ಟವಾಗುತ್ತದೆ. ಒಂದೋ ಅವರು ಉತ್ತರಿಸುವುದಿಲ್ಲ.ಇಲ್ಲ ಕಣ್ಣುತಪ್ಪಿಸಿ ತಿರುಗುತ್ತಾರೆ.

ಅಥವಾ ಭಾಗವಹಿಸಲು ಒಪ್ಪಿಕೊಳ್ಳುವ ಮೂಲಕ ಹೇಗೆ ತಾವೂ ಪ್ರಚನ್ನ  ಹಿಂದುತ್ವವಾದಿಗಳು ಎಂಬುದನ್ನು ಸಾಬೀತು ಪಡಿಸುತ್ತಾರೆ.ಇನ್ನು ಡಿಸೋಜ ಅಂತವರಿಗೆ ಇದೆಲ್ಲ ಹಿಂದುತ್ವವಾದದ ಬೆಳವಣಿಗೆಗೆ ಪೂರಕವಾದ ಹುನ್ನಾರಗಳು ಎಂದು ಯೋಚಿಸುವಷ್ಟು ಬುದ್ಧಿಮತ್ತೆಯೂ ಇರುವಹಾಗಿಲ್ಲ.

೮) ಒಂದೇ ವೇದಿಕೆಯಲ್ಲಿ ಸೂಲಿಬೆಲೆ, ಮಾಳವಿಕಾ, ನಾ.ಡಿಸೋಜ, ಹೆಚ್.ಎಸ್. ವೆಂಕಟೇಶಮೂರ್ತಿ ಕುಳಿತುಕೊಳ್ಳುತ್ತಾರಲ್ಲ, ಈ ಪೈಕಿ ಸಾಹಿತಿಗಳು ಎಂದು ಕರೆಸಿಕೊಂಡಿರುವ ಕೊನೆಯ ಇಬ್ಬರಿಗಾದರೂ ಇನ್ನೂ ಏನಾದರೂ ನಾಚಿಕೆ ಮರ್ಯಾದೆ ಉಳಿದಿದೆಯೇ ಹೇಗೆ ಎಂಬುದು ಪರೀಕ್ಷೆಗೊಳಗಾಗಬೇಕು. ಆಗಲೇ ಎಲ್ಲರ ಠೇಂಕಾರವೂ ನಿಧಾನಕ್ಕೆ ಕರಗುತ್ತಾ ಹೋಗುವುದು. ಹಾಗಾಗುವ ಸಂಭವ ಕಡಿಮೆ ಇರುವುದರಿಂದಲೇ ಯಥಾಸ್ಥಿತಿ ಮುಂದುವರೆದುಕೊಂಡು ಹೋಗುತ್ತಿರುವುದು.

ಪ್ರತಿರೋಧ ತೋರುವವರಿಗೆ ಎದುರಾಗಬಹುದಾದ ಸಮಸ್ಯೆಗಳನ್ನು ನೋಡಿ ಹೆದರಿಯೇ ಅನೇಕರು ಈ ರೀತಿಯ ರಾಜಿ ಕಬೂಲಿಗೆ ಇಳಿದಿರಲೂಬಹುದು.

ಅಲ್ಲದೆ ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಸಾಮೂಹಿಕ ಇಚ್ಛಾಶಕ್ತಿ ಕಾಣಿಸಿಕೊಂಡಿದ್ದು ಬಹಳ ಕಡಿಮೆ.ವೈಯಕ್ತಿಕ ಸಾಹಸ, ಬಾಜಾ ಭಜಂತ್ರಿಗಳೇ ಇಲ್ಲಿ ಮುಖ್ಯವಾಗಿಬಿಟ್ಟಿದೆ. ತಮ್ಮವ, ತಮ್ಮ ಜಾತಿಯವ, ತಮ್ಮ ಗುಂಪಿನವ ಎಂಬ ಒಳ ಲೆಕ್ಕಾಚಾರ ಬೇರೆ.ಇದೆಲ್ಲದರ ಪರಿಣಾಮವಿದು. ಈ ವಾತಾವರಣ ಯಾವಾಗ ಹೋದೀತು? ಹೋಗಬೇಕು.

೯) ರಂಗಾಯಣ ಮತ್ತು ಸಾಹಿತ್ಯ ಪರಿಷತ್ತುಗಳ ಈಚಿನ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಬರೆಯುತ್ತಿದ್ದೇನಾದರೂ ಅದಷ್ಟೇ ಮುಖ್ಯವಲ್ಲ.ಇವೆಲ್ಲ ಈಚೆಗೆ ಆತಂಕಕಾರಿಯಾಗಿ ಹಬ್ಬುತ್ತಿರುವ ರೋಗದ ಲಕ್ಷಣಗಳು.ಆದುದರಿಂದ  ಎಲ್ಲ ವಿದ್ಯಮಾನಗಳ ಮೂಲವನ್ನು ಸಮಗ್ರವಾಗಿ ಗ್ರಹಿಸಿ ಪ್ರತಿರೋಧ ರೂಪಿಸಬೇಕಾಗುತ್ತದೆ. ಅದು ಒಂದು ದಿವಸದ ಕೆಲಸವಲ್ಲ. ಸತತವಾಗಿ ಮಾಡುತ್ತಿರಬೇಕಾಗುತ್ತದೆ.

ಅಂತಿಮವಾಗಿ ಅದು ಮನಸ್ಸನ್ನು ರೂಪಿಸುವ ಕೆಲಸವೂ ಹೌದು.ಘಟನೆಯೊಂದು ನಡೆದಮೇಲೆ ತೋರುವ ಸಣ್ಣಮಟ್ಟಿಗಿನ ಪ್ರತಿಕ್ರಿಯೆ,ಅಲ್ಲೇ ತಣ್ಣಗಾಗುವ ಸಂಭವವೇ ಜಾಸ್ತಿ.

ಇವತ್ತಿನ ಈ ಬದಲಾದ ಸಾಂಸ್ಕೃತಿಕ ಸನ್ನಿವೇಶಕ್ಕೂ ದೇಶದಲ್ಲಿ ವೇಗವಾಗಿ ಹಬ್ಬುತ್ತಿರುವ ಫ್ಯಾಸಿಸಂ ಮತ್ತು ಹಿಂದುತ್ವವಾದಕ್ಕೂ ನೇರವಾದ ಸಂಬಂಧ ಇದೆ ಎಂದು ಗ್ರಹಿಸಿದಾಗಲೇ ನಮ್ಮ ಪ್ರತಿರೋಧಕ್ಕೆ ಒಂದು ಅರ್ಥ ಬರುವುದು.

Donate Janashakthi Media

Leave a Reply

Your email address will not be published. Required fields are marked *