ಹುಣಸೂರು: ಕಳೆದ 50-60 ವರ್ಷಗಳಿಂದ ಗೋಮಾಳ, ಗುಂಡು ತೋಪು, ಅರಣ್ಯ ಭೂಮಿಗಳಲ್ಲಿ ಬಡ ಬಗರ್ ಹುಕುಂ ಸಾಗುವಳಿದಾರರು ಉಳುಮೆ ಮಾಡುತ್ತಾ ಬರುತ್ತಿದ್ದಾರೆ. ಆಳುವ ಸರಕಾರವು ಬಡ ಬಗರ್ ಹುಕ್ಕುಂ ಸಾಗುವಳಿದಾರರನ್ನು ಮರೆತಿವೆ. ಅಲ್ಲದೆ ಸಾಗುವಳಿ ಪತ್ರ ನೀಡದೆ ಇರುವ ಪರಿಣಾಮವಾಗಿ ಸರ್ಕಾರಿ ಸವಲತ್ತುಗಳು, ಸಾಲ ಸೌಲಭ್ಯ, ಬರ ಪರಿಹಾರ ಇತ್ಯಾದಿ ಸೌಲಭ್ಯಗಳು ಸಿಗದೇ ರೈತರು ವಂಚಿತರಾಗಿದ್ದಾರೆ. ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಬೇಕು. ಸಾಗುವಳಿ ಪತ್ರಕ್ಕೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಬೇಕು. ಗೊಬ್ಬರ ಅಭಾವ ನೀಗಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್)ದ ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ಫಾರಂ ನಂಬರ್ 50-52 ರಲ್ಲಿ ಅರ್ಜಿ ಸಲ್ಲಿಸಿದ್ದರೂ, ಆ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅಲ್ಲದೆ ಕರ್ನಾಟಕ ಪ್ರಾಂತ ರೈತ ಸಂಘದ ಹೋರಾಟದ ಒತ್ತಡಕ್ಕೆ ಮಣಿದು ಫಾರಂ ನಂಬರ್ 57 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಲೋಕಸಭೆ ಚುನಾವಣೆ ಬಂದಿದ್ದರಿಂದ ಸಾಕಷ್ಟು ರೈತರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಈಗ ಮತ್ತೊಮ್ಮೆ ಫಾರಂ ನಂಬರ್ 57ರಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಿದೆ. ಆದರೆ ತಾಲೂಕಿನಲ್ಲಿ ಇನ್ನೂ ಅರ್ಜಿ ಪಡೆಯುತ್ತಿಲ್ಲ. ಮತ್ತೊಂದೆಡೆ ಅರ್ಜಿ ಸಲ್ಲಿಸಿದ ರೈತರಿಗೆ ಇಲ್ಲಿಯವರಿಗೂ ಸಾಗುವಳಿ ಪತ್ರ ನೀಡಿಲ್ಲ ಎಂದರು.
ಅಗತ್ಯ ವಸ್ತುಗಳ ಬೆಲೆ ಕೂಡಲೇ ಇಳಿಸಬೇಕು ಎಂದಿರುವ ಅವರು, ಒಂದೆಡೆ ರೈತರು ಸಾಗುವಳಿ ಪತ್ರ ನೀಡಬೇಕೆಂದು ಒತ್ತಾಯಿಸುತ್ತಿದ್ದರೆ, ಬಿಜೆಪಿ ಸರ್ಕಾರ ಸಾಗುವಳಿ ಪತ್ರ ನೀಡುವ ಬದಲು ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ರೈತರಿಗೆ ನೀಡಲು ಹೊರಟಿರುವುದು ರೈತರಿಗೆ ಮಾಡಿರುವ ಅನ್ಯಾಯವಾಗಿದೆ. ಆದ್ದರಿಂದ ಕೂಡಲೇ ಫಾರಂ ನಂಬರ್ 57ರಲ್ಲಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ಕೇಂದ್ರವು ಹಾಲು ಮತ್ತು ಹಾಲಿನ ಉತ್ಪನ್ನಗಳು ಹಾಗೂ ಯಂತ್ರೋಪಕರಣಗಳ ಮೇಲೆ ಜಿ.ಎಸ್.ಟಿ. ತೆರಿಗೆಯನ್ನು ವಿಧಿಸಿದೆ. ಇದರಿಂದ ದೇಶದ 9 ಕೋಟಿ ಹಾಲು ಉತ್ಪಾದಕರ ಕುಟುಂಬಗಳ ಮೇಲೆ ದೊಡ್ಡ ಹೊರೆ ಬೀಳಲಿದೆ. ಎರಡು ರೀತಿಯ ತೆರಿಗೆಗಳಿಂದಾಗಿ ಶೇ. 17 ರಿಂದ ಶೇ. 30 ಏರಿಕೆ ಕಾಣಲಿದೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ನೀಡಿದ್ದ ನರೇಂದ್ರ ಮೋದಿ ಸರ್ಕಾರ ಇದೀಗ ವಂಚಿಸಿದೆ ಎಂದು ಆರೋಪಿಸಿದರು.
ಪ್ರತಿಭಟನಾ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಸೀಲ್ದಾರ್ ಡಾ. ಅಶೋಕ್‌ರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಮುಖಂಡರಾದ ಅಭಿಮಾನ್ ಚಂದರಾಜ್, ಪುಟ್ಟರಾಜು, ಚಂದ್ರಶೇಖರ್, ಮನಹದೇವು, ಅನುಸೂಯ, ಉಪೇಂದ್ರ ಕುಮಾರ್, ವಜೀರ್ ಸಾಬ್, ಚೇತನ್, ಜವರೇಗೌಡ, ವಿನೋದ್, ಸುರೇಶ್ ಸೇರಿದಂತೆ ಅನೇಕರಿದ್ದರು.