ಬದುಕಿನ ಓಟಕ್ಕೆ ಗೋಲಿಸೋಡ ಕಾಯಕ

– ಎಚ್.ಆರ್. ನವೀನ್ ಕುಮಾರ್, ಹಾಸನ
ಬೆಂಗಳೂರಿನ ಪ್ರತಿಷ್ಟಿತ ಗಾಂಧಿನಗರದ ಮಧ್ಯಭಾಗದಲ್ಲಿ ಗೋಲಿಸೋಡದ ಒಂದು ಸಣ್ಣ ತಳ್ಳುವ ಗಾಡಿ. ಸರಿಸುಮಾರು 30 ವರ್ಷ ಆಸುಪಾಸಿನ ಯುವಕ ಸೋಡಾ ಮಾರುತ್ತಾ ನಿಂತಿದ್ದ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿದ್ದ ದುಡಿಯುವ ಜನರ ಮಹಾಧರಣಿಯಲ್ಲಿ ಭಾಗವಹಿಸಿ ಟೀ ಕುಡಿದು ಬರೋಣ ಅಂತ ಸ್ನೇಹಿತರೊಂದಿಗೆ ಗಾಂಧಿನಗರಕ್ಕೆ ಪ್ರವೇಶಿಸಿದಾಗ ನಮಗೆ ಈ ಯುವಕ ದಾರಿ ಮಧ್ಯದಲ್ಲಿ ಸೋಡಾ ಮಾರುತ್ತ ನಿಂತಿದ್ದು ಕಾಣಿಸಿತು.

ಇವನನ್ನು ನೋಡಿದ ಕೂಡಲೇ ಟೀ ಬದಲು ಇಲ್ಲೇ ಸೋಡ ಕುಡಿಯಬಹುದಲ್ಲಾ ಅನಿಸಿ ಅಲ್ಲೇ ನಿಂತೆವು.ಮಸಾಲಸೋಡ ಕೊಡಲು ಹೇಳಿ ಅವನನ್ನ ಮಾತಿಗೆ ಎಳೆದೆವು. ಕೊಳ್ಳೆಗಾಲದಿಂದ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಡ್ಯಾನ್ಸ್ ಬಾರ್ ನಲ್ಲಿ ಸಪ್ಲೆರ್ ಆಗಿ ಕೆಲಸಕ್ಕೆ ಸೇರಿದ್ದ ಈ ಯುವಕನ ಬದುಕು ಸಾಧಾರಣವಾಗಿ ನಡೆಯುತ್ತಿತ್ತು. ಅವನು ಕೆಲಸ ಮಾಡುತ್ತಿದ್ದ ಬಾರ್ ನಲ್ಲಿ ಸಂಬಳ ಇಲ್ಲ. ಬದಲಿಗೆ ಅಲ್ಲಿಗೆ ಬರುವವರು ಕೊಡುವ ಟಿಪ್ಸೇ ಇವರ ಬದುಕಿನ ಆಧಾರ. ತಮ್ಮ ಶ್ರಮದಾಯಕ ಕೆಲಸದಿಂದ ಬಂದವರನ್ನು ತೃಪ್ತಿಗೊಳಿಸಿ ಅವರಿಂದ ಟಿಪ್ಸ್ ಪಡೆಯುತ್ತಿದ್ದರು. ಸರಾಸರಿ ದಿನಕ್ಕೆ ಒಂದು ಸಾವಿರ ರೂಗಳಷ್ಟು ಆಧಾಯ, ಊಟ ತಿಂಡಿ ಇತರೆ ಖರ್ಚುಗಳನ್ನು ಕಳೆದು ಹೇಗೋ ಕಷ್ಟಾಪಟ್ಟು ಜೀವನ ಸಾಗಿಸುತ್ತಿದ್ದರು.

ಇತ್ತೀಚೆಗೆ ಇದ್ದಕ್ಕಿದ್ದಂತೆ ಸರ್ಕಾರ ಈ ರೀತಿಯ ಡ್ಯಾನ್ಸ್ ಬಾರ್‌ಗಳನ್ನು ಮುಚ್ಚುವ ಆದೇಶ ಹೊರಡಿಸಿತೊ, ಆಗ ರಾತ್ರೋರಾತ್ರಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಐದು ಸಾವಿರದಷ್ಟು ಜನ ಸಪ್ಲೆಯರ್ಸ್, ಡ್ಯಾನ್ಸ್‌ ಮಾಡುವ ಹುಡುಗಿಯರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದರು. ಬದುಕು ಮೂರಾಬಟ್ಟೆ ಆಯ್ತು. ಇವರ ಬದುಕಿನ ಬಗ್ಗೆ ಬಾರ್ ಮಾಲೀಕನೂ ತಲೆ ಕೆಡಿಸಿಕೊಳ್ಳಲಿಲ್ಲ, ಮುಚ್ಚಲು ಆದೇಶಿಸಿದ ಸರ್ಕಾರವೂ ತಲೆಕೆಡಿಸಿಕೊಳ್ಳಲಿಲ್ಲ. ಕೆಲಸ ಕಳೆದುಕೊಂಡು ಊರಿಗೂ ಹೋಗಲಾರದೆ, ಕೆಲಸ ವಿಲ್ಲದೆ ಇಲ್ಲಿಯೂ ಇರಲಾಗದ ಅಂತತ್ರ ಸ್ಥಿತಿಯಲ್ಲಿ ನರಳಿದವರ ಸಂಖ್ಯೆಯೇ ಹೆಚ್ಚು. ಇಷ್ಟು ಮಾತ್ರವಲ್ಲ ಇವರು ಯಾವ ಕೆಲಸ ಮಾಡುತ್ತಿದ್ದರು ಎಂದು ಹೇಳಿಕೊಂಡರೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ ಎಂದುಕೊಂಡಿದ್ದವರು ಕೆಲಸ ಕಳೆದುಕೊಂಡ ಮೇಲೂ ಎಂತಹ ಕೆಲಸ ಹೋಯಿತು ಎಂದು ಹೇಳುವ ಸ್ಥಿತಿಯಲ್ಲಿರಲಿಲ್ಲ.

ಈ ರೀತಿ ಡ್ಯಾನ್ಸ್ ಬಾರ್ ನಿಂದ ಬೀದಿಗೆ ಬಂದ ಸುಮಾರು ಐದು ಸಾವಿರ ಮಂದಿಯಲ್ಲಿ ನಮ್ಮ ಮುಂದೆ ಸೋಡಾ ಮಾರುತ್ತಿದ್ದವನೂ ಒಬ್ಬ. ಅತ್ಯಂತ ಕರುಣಾಜನಕ ಜೀವನ ಕಥೆಯನ್ನ ಈತ ನಮ್ಮೆದುರು ತೆರದಿಟ್ಟ.

ಇವನಿಗೆ ಮೂರು ಜನ ತಂಗಿಯರು, “ಕೈಯಲ್ಲಿ ಸಂಪಾದನೆ ಇರುವಾಗಲೇ ಎಲ್ಲರನ್ನೂ ಮದುವೆ ಮಾಡಿದೆ, ನಾನು ಸೆಟ್ಲಾಗೋಣ ಅನ್ನುವಷ್ಟರಲ್ಲಿ ಈ ಸ್ಥಿತಿ ನಿರ್ಮಾಣ ಆಯ್ತು, ಊರಿಗೆ ಹೋಗಿ ವ್ಯವಸಾಯ ಮಾಡೋಣ ಅಂದ್ರೆ ನಮ್ಮದೇ ಆದ ಸ್ವಂತ ಭೂಮಿ ಇಲ್ಲ. ಭೂಮಿ ಇದ್ದವರೆಲ್ಲ ಅದನ್ನ ಬಿಟ್ಟು ಬೆಂಗಳೂರಿಗೆ ಬಂದು ಕೆಲಸ ಹುಡುಕುತ್ತಿದ್ದಾರೆ. ಹಿಂಗಾದರೆ ನಾವು ಬದುಕೋದು ಹೆಂಗೆ?” ಎಂದು ಪ್ರಶ್ನೆಕೇಳಿದಾಗ ಒಂದು ಕ್ಷಣ ದೇಶದಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ, ಯುವಜನತೆಯ ಸ್ಥಿತಿಗತಿ ಕಣ್ಣಮುಂದೆ ಬಂದು ಹೋಯಿತು.

ಇದನ್ನು ಓದಿ : ಗಣರಾಜ್ಯೋತ್ಸವ ಪಥಸಂಚಲನದಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅನುಮತಿ ನಿರಾಕರಣೆ – ಸಿದ್ದರಾಮಯ್ಯ ಕಿಡಿ

ಇವನ ಸ್ಟೋರಿ ಕೇಳುತ್ತಾ ಹಾಗೆ ಹೆಜ್ಜೆಯಾಕುತ್ತಾ ನಿರಂತರ ಮೂರು ದಿನಗಳ ಕಾಲ ಧರಣಿ ನಡೆಸುತ್ತಿದ್ದ ದುಡಿಯುವ ಜನರ ಜೊತೆ ಸೇರಿಕೊಂಡೆವು. ತಮ್ಮ ಬೆವರಿನ ಪಾಲನ್ನು ಕೇಳಲು ನಾಡಿನ ಮೂಲೆ ಮೂಲೆಗಳಿಂದ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿ, ಯುವಜನರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಒಂದೆಡೆ ಕೆಲಸವಿಲ್ಲದ ಜನ ಮತ್ತೊಂದೆಡೆ ಕೆಲಸ ಮಾಡಿಯೂ ಸರಿಯಾದ ಸಂಬಂಳ- ಸೌಲತ್ತುಗಳಿಲ್ಲದ ಜನ. ಈ ಎರಡೂ ಸ್ಥಿತಿಗೆ ಆಳುವ ಸರ್ಕಾರಗಳ ನೀತಿಗಳೇ ಕಾರಣ ಎನ್ನುವುದನ್ನು ಮಹಾಧರಣಿಯಲ್ಲಿ ಮುಖಂಡರು ವಿವರಿಸುತ್ತಿದ್ದರು.

ಧರಣಿ ಮುಗಿಸಿ ಕಛೇರಿಗೆ ಹೋಗುವ ಅನಿವಾರ್ಯತೆಯಿಂದ ಆಟೋ ಹತ್ತಿ ಹೊರಟೆ. ಆಟೋ ಡ್ರೈವರ್ ಮಾತಿಗೆ ಸಿಕ್ಕಿ ಅವನು ಹೇಳಿದ ಸ್ಟೋರಿಗೂ ಬೆಳಿಗ್ಗೆ ಗಾಂಧಿನಗರದಲ್ಲಿ ನೋಡಿದ ಸ್ಟೋರಿಗೂ ಸಾಮ್ಯತೆ ಇದ್ದಂತಿತ್ತು. ಈ ಆಟೋ ಡ್ರೈವರ್ ಕೂಡ ಮೊದಲು ಬೆಂಗಳೂಗೆ ಬಂದಾಗ ಲಾಡ್ಜ್ ಒಂದರಲ್ಲಿ‌ ಕೆಲಸ ಮಾಡುತ್ತಿದ್ದ. ಮದುವೆಯ ವಯಸ್ಸು ಮೀರುತ್ತಿದ್ದ ಸಂದರ್ಭದಲ್ಲಿ ಮದುವೆಗೆ ಹುಡುಗಿ ಹುಡುಕುತ್ತಿದ್ದರೆ ಎಲ್ಲರೂ ಈ ಹುಡುಗನನ್ನ ತಿರಸ್ಕರಿಸುತ್ತಿದ್ದರು. ಅದಕ್ಕೆ ಕಾರಣ ಅವನು ಅಂದವಾಗಿಲ್ಲಾ ಅಂತ ಅಲ್ಲ. ಬದಲಿಗೆ ಬೆಂಗಳೂರಿನಲ್ಲಿ ಲಾಡ್ಜ್ ನಲ್ಲಿ‌ ಕೆಲಸ ಮಾಡಿದರೆ ನಮ್ಮ ಮಗಳನ್ನು ನೋಡಿಕೊಳ್ಳುವುದು ಕಷ್ಟವೆಂದು ಭಾವಿಸಿ. ಹೀಗಿರುವಾಗ ಅವನಿಗೆ ಮದುವೆಯಾಗಲು ಈ ಉದ್ಯೋಗವನ್ನು ತೊರೆಯಲೇ ಬೇಕಾಯ್ತು. ಆಗ ಬೆಂಗಳೂರಿನಲ್ಲಿ ಅಟೋಗಳ ಸಂಖ್ಯೆ ಕಡಿಮೆ ಇತ್ತು. ಆಟೋ ಓಡಿಸಿದರೆ ಜೀವನ ನಿರ್ವಹಣೆಗೆ ಸಮಸ್ಯೆಯಾಗುವುದಿಲ್ಲವೆಂದು ಒಂದು ಆಟೋವನ್ನ ಬಾಡಿಗೆಗೆ ಪಡೆದೆ, ನಂತರ ಮದುವೆಯೂ ಆಯ್ತು, ಈಗಲೂ ಇದೇ ಬಾಡಿಗೆ ಆಟೋವನ್ನೇ ಓಡಿಸುತ್ತಿದ್ದೇನೆ. ನನ್ನ ದುಡಿಮೆ ಜೀವನಕ್ಕೆ ಸಾಕಾಗುತ್ತೆ, ಸ್ವಂತಕ್ಕೊಂದು ಹೊಸ ಆಟೋ ಕೊಂಡುಕೊಳ್ಳೋಣ ಅಂತ ಕೂಡಿಟ್ಟಿದ್ದ ಸ್ವಲ್ಪ ಹಣದಲ್ಲಿ ತಾಯಿಯ ಆರೋಗ್ಯಕ್ಕೆ ಖರ್ಚಾಯ್ತು, ಈಗ ಮಕ್ಕಳು ಓದುತ್ತಿದ್ದಾರೆ, ಖರ್ಚು ಜಾಸ್ತಿ ಇನ್ನುಮುಂದೆ ಸ್ವಂತ ಆಟೋ‌ ಮಾಡುವುದು ಕನಸಷ್ಟೆ ಎಂದ….

ಇದನ್ನು ನೋಡಿ : ಹೆಂಚುಗಳು ನಿರ್ಮಾಣವಾಗುವುದು ಹೇಗೆ? ಅದರ ಹಿಂದಿರುವ ಕಾರ್ಮಿಕರ ಶ್ರಮ ಎಂತದ್ದು? ಈ ವಿಡಿಯೋ ನೋಡಿ Janashakthi Media

 

Donate Janashakthi Media

Leave a Reply

Your email address will not be published. Required fields are marked *