ದಿನೇಶ್ ಅಮೀನ್ ಮಟ್ಟು
ನೇರ, ನಿಷ್ಠುರ , ಪ್ರಾಮಾಣಿಕ, ಜಾತ್ಯತೀತ, ಸಿದ್ದಾಂತ ಬದ್ದ… ಎಂಬೀತ್ಯಾದಿ ವಿಶೇಷಣಗಳನ್ನು ಅಳುಕಿಲ್ಲದೆ ಬಳಸಲು ಸಾಧ್ಯವಿರುವ ನಮ್ಮ ನಡುವಿನ ಒಂದು ಕೈಬೆರಳೆಣಿಕೆಯ ವ್ಯಕ್ತಿಗಳಲ್ಲಿ ಡಿ.ಎಸ್.ನಾಗಭೂಷಣ್ ಒಬ್ಬರಾಗಿದ್ದರು.
ತರಗತಿಗಳಲ್ಲಿ ಎಂದೂ ಪಾಠ ಮಾಡದೆ ಇದ್ದರೂ ನನ್ನಂತಹ ಸಾವಿರಾರು ಕಿರಿಯರಿಗೆ ಅವರು ಬದುಕಿನ ಶಾಲೆಯ ಮೇಷ್ಟ್ರು ಆಗಿದ್ದರು. ಅವರ ಪ್ರತಿಯೊಂದು ಜಗಳ, ಮುನಿಸುಗಳಲ್ಲಿ ಕಲಿಯುವ ಪಾಠ ಇತ್ತು.
ಹೆಚ್ಚು ಪರಿಚಯವೇ ಇಲ್ಲದ ದಿನಗಳಲ್ಲಿ ಅಂದರೆ ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ದೆಹಲಿಯಲ್ಲಿದ್ದಾಗ ನನಗೆ ಪೋನ್ ಮಾಡಿ ಅವರ ಪುಸ್ತಕಕ್ಕೆ ಬೆನ್ನುಡಿ ಬರೆಸಿದ್ದರು. ಅವರ ಕೋರಿಕೆಯನ್ನು ಕೇಳಿದಾಗಲೇ ಆಘಾತಕ್ಕೀಡಾಗಿದ್ದ ನಾನು ಒಲ್ಲೆ ಎಂದಾಗ ಗದರಿಸಿ ಬರೆಸಿದ್ದರು.
ಅದರ ನಂತರ ನಿರಂತರವಾಗಿ ನನ್ನ ಮತ್ತು ಅವರ ನಡುವೆ ಸಣ್ಣ ಪುಟ್ಟ ಜಗಳಗಳು ನಡೆಯುತ್ತಲೇ ಇತ್ತು. ಇದೇ ವೇಳೆ ಅವರ ‘ಆದೇಶ’ಗಳನ್ನು ಗಳನ್ನು ನಾನು ವಿಧೇಯನಾಗಿ ಪಾಲಿಸುತ್ತಲೇ ಹೋಗುತ್ತಿದ್ದೆ.
ದೆಹಲಿಯಿಂದ ಬಂದ ನಂತರ ಬಹುಷ: ನಾನು ಭಾಗವಹಿಸಿದ್ದ ಮೊದಲ ಕಾರ್ಯಕ್ರಮ ಅವರೇ ಕುಪ್ಪಳ್ಳಿಯಲ್ಲಿ ಆಯೋಜಿಸಿದ್ದ ಸಮಾಜವಾದಿ ಶಿಬಿರ ಆಗಿತ್ತು.
ಹೊಸಮನುಷ್ಯ ಪತ್ರಿಕೆಗೆ ಮೂರೋ ನಾಲ್ಕೋ ದೀರ್ಘ ಲೇಖನಗಳನ್ನು ಬರೆಸಿದ್ದರು. ಅವರೇ ಏರ್ಪಡಿಸುತ್ತಿದ್ದ ಕಾರ್ಯಕ್ರಮಗಳಿಗೆ ಕರೆಸಿ ಮಾತನಾಡಿಸುತ್ತಿದ್ದರು. ಅವುಗಳೆಲ್ಲ ಅವರು ನೀಡುತ್ತಿದ್ದ ‘ಆದೇಶ’ಗಳೇ ಆಗಿರುತ್ತಿದ್ದವು. ವಿಧೇಯ ಶಿಷ್ಯನ ರೀತಿ ನಾನು ತಲೆಯಾಡಿಸುತ್ತಿದ್ದೆ. ನನ್ನೊಳಗೆ ಅವರ ಬಗ್ಗೆ ಇದ್ದ ಗೌರವ ಇದಕ್ಕೆ ಕಾರಣ.
ಅಪ್ಪಟ ಲೋಹಿಯಾವಾದಿಯಾಗಿದ್ದ ಡಿಎಸ್ ಎನ್ ಕೇವಲ ಭಾಷಣ ಮಾಡಿಲ್ಲ, ಬರೆದು ಸಾಲು ಸಾಲು ಪುಸ್ತಕಗಳನ್ನು ಪ್ರಕಟಿಸಿದ್ದರು. ಅವೆಲ್ಲವೂ ಲೋಹಿಯಾವಾದ ಪಾಠಕ್ಕೆ ಪಠ್ಯಗಳಂತಿವೆ.
ಲೋಹಿಯಾ ಅವರಂತೆ ಕೊನೆಯ ವರೆಗೂ ಕಾಂಗ್ರೆಸ್ ಪಕ್ಷದ ಬಗ್ಗೆ ಭಿನ್ನಾಭಿಪ್ರಾಯ ಮತ್ತು ಅಂತರ ಇಟ್ಟುಕೊಂಡೇ ಬದುಕಿದರು. ಇದೇ ಕಾರಣದಿಂದಾಗಿ ಇತ್ತೀಚಿನ ವರೆಗೆ ಬಿಜೆಪಿಯನ್ನು ವಿರೋಧಿಸಬೇಕಾಗಿರುವಷ್ಟು ವಿರೋಧಿಸುತ್ತಿರಲಿಲ್ಲ. ನಾನು ಮುಖ್ಯಮಂತ್ರಿ ಕಚೇರಿ ಸೇರಿದ ನಂತರ ಉದ್ದೇಶಪೂರ್ವಕವಾಗಿ ನನ್ನೊಡನೆ ಕಾಂಗ್ರೆಸ್ ಬಗ್ಗೆ ಕಟುವಾಗಿ ಮಾತನಾಡುತ್ತಿದ್ದರು. ನಾನು ಅಷ್ಟೇ ಕಟುವಾಗಿ ಬಿಜೆಪಿ, ಆರ್ ಎಸ್ ಎಸ್ ಗಳನ್ನು ಟೀಕಿಸುತ್ತಿದ್ದೆ. ನಮ್ಮ ನಡುವಿನ ಬಹುತೇಕ ಕೋಳಿಜಗಳಗಳಿಗೆ ಇದೇ ಕಾರಣವಾಗಿರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಈ ವಿಷಯದ ಚರ್ಚೆಗಳನ್ನು ನಡೆಸುತ್ತಿರಲಿಲ್ಲ.
ಹಣಕಾಸಿನ ವ್ಯವಹಾರದಲ್ಲಿ ಅವರಷ್ಟು ಪ್ರಾಮಾಣಿಕ, ನಿಷ್ಠುರರ ವ್ಯಕ್ತಿಗಳನ್ನೇ ನಾನು ಕಂಡಿಲ್ಲ, ಬಹುಷ: ಕಾಣಲು ಸಾಧ್ಯವೇ ಇಲ್ಲವೇನೋ?
ಹೊಸಮನುಷ್ಯ ವಿಶೇಷಾಂಕಕ್ಕೆ ಲೇಖನಗಳನ್ನು ಬರೆದಾಗ ತಪ್ಪದೆ ಸಂಭಾವನೆ ಕೊಡುತ್ತಿದ್ದರು. ವಿಶೇಷಾಂಕಕ್ಕೆ ಜಾಹೀರಾತಿನಿಂದ ಬಂದಿರುವ ಹಣ ಮತ್ತು ಖರ್ಚಾಗಿರುವ ಹಣವನ್ನು ಲೆಕ್ಕಮಾಡಿ ಲೇಖಕರಿಗೆ ಹಂಚುತ್ತಿದ್ದರು.
‘ಸಾರ್, ಪತ್ರಿಕೆ ನಡೆಸುವುದು ಕಷ್ಟ ಇದೆ, ಉಳಿದ ಹಣ ಇಟ್ಕೊಳ್ಳಿ’ ಎಂದರೆ ಒಪ್ಪುತ್ತಿರಲಿಲ್ಲ. ಕೊನೆಗೆ ಪುಸ್ತಕ ಕಳಿಸಿ ಎಂದು ಹೇಳಿದಾಗ ಲೆಕ್ಕಹಾಕಿ ಅಷ್ಟೇ ಬೆಲೆಯ ಪುಸ್ತಕ ಕಳಿಸಿದ್ದರು. ಇಂತಹ ನಿಷ್ಠುರ ಪ್ರಾಮಾಣಿಕತೆಯನ್ನು ಸಣ್ಣ ಪತ್ರಿಕೆಗಳು ಬಿಡಿ ದೊಡ್ಡ ಪತ್ರಿಕೆಗಳಿಂದಲೂ ನಿರೀಕ್ಷಿಸಲು ಸಾಧ್ಯ ಇಲ್ಲ.
ನಾಗಭೂಷಣ್ ಅವರಿಂದ ಕಲಿಯಬೇಕಾದ ಹಲವಾರು ಪಾಠಗಳಿವೆ, ಅವುಗಳಲ್ಲಿ ಎಂದೂ ಬತ್ತಿಹೋಗದ ಹಾಗೆ ಕಾಪಿಟ್ಟುಕೊಂಡ ಬಂದಿದ್ದ ಅವರ ಜೀವನೋತ್ಸಾಹವೂ ಒಂದು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರೂ ಅದೆಂದೂ ಅವರ ಓದು-ಬರವಣಿಗೆಗಳಿಗೆ ಅಡ್ಡಿಯಾಗಿರಲಿಲ್ಲ.
ನಾಗಭೂಷಣ್ ಅವರ ಬದುಕಿನ ಯಶಸ್ಸಿನಲ್ಲಿ ಈ ಕಪ್ಪು ಹುಡುಗನ ಪ್ರೀತಿಗೆ ಬಿದ್ದು ಕೊನೆಯ ವರೆಗೂ ಅದನ್ನು ನಿಭಾಯಿಸಿದ ಸವಿತಾ ನಾಗಭೂಷಣ್ ಪಾತ್ರ ದೊಡ್ಡದು. ಗಂಡನ ಆರೈಕೆಗಾಗಿ ಸ್ವಯಂನಿವೃತ್ತಿ ಪಡೆದು ತಾಯಿಯಂತೆ ಸಲಹಿದ್ದಾರೆ. ಒಂದು ರೀತಿಯಲ್ಲಿ ಇಬ್ಬರೂ ಪರಸ್ಪರರಿಗೆ ಮಕ್ಕಳಂತಿದ್ದರು. ಅನಿವಾರ್ಯವಾದ ಅಗಲಿಕೆಯ ದಿನಗಳಲ್ಲಿ ಹೇಗೆ ಬದುಕಬೇಕೆಂಬುದನ್ನು ನಾಗಭೂಷಣ್ ಖಂಡಿತ ಹೇಳಿಕೊಟ್ಟು ಹೋಗಿರುತ್ತಾರೆ, ಹಾಗೆಯೇ ಅವರು ಬದುಕಲಿ, ನಾಗಭೂಷಣ್ ಅವರನ್ನು ಪ್ರೀತಿಸುವವರೆಲ್ಲರೂ ಸವಿತಾ ಅವರ ಜೊತೆಯಲ್ಲಿಯೂ ಇರುತ್ತಾರೆ.
ನಾಲ್ಕು ದಿಕ್ಕುಗಳಿಂದಲೂ ನಿರಾಶೆ, ಹತಾಶೆ, ಸೋಲುಗಳ ಕಾರ್ಮೋಡ ಆವರಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ನಾವೆಲ್ಲರೂ ಡಿಎಸ್ ಎನ್ ಅವರ ನಿಷ್ಠುರತೆ, ಪ್ರಾಮಾಣಿಕತೆ, ಬದ್ಧತೆಯ ಜೊತೆಗೆ ಒಂದೆರಡು ಬೊಗಸೆ ಅವರಲ್ಲಿದ್ದ ಜೀವನೋತ್ಸಾಹವನ್ನು ಪಡೆದುಕೊಳ್ಳಲು ಸಾಧ್ಯವಾದರೆ ನಮ್ಮ ಬದುಕು ಅರ್ಥಪೂರ್ಣವಾದೀತು, ಅವರ ಹಾಗೆ.
ಪ್ರೀತಿಯ ಮೇಸ್ಟ್ರೇ, ನಿಮ್ಮೆಲ್ಲ ಪ್ರೀತಿ, ಜಗಳ, ಕಾಳಜಿ, ನಂಬಿಕೆಗಳನ್ನು ಸದಾ ನೆನಪಲ್ಲಿಟ್ಟುಕೊಳ್ಳುವೆ. ಬದುಕು ಹೇಗಿರಬೇಕೆನ್ನುವುದನ್ನು ಬದುಕಿ ತೋರಿಸಿದ್ದೀರಿ. ನಿಮಗೆ ಗೌರವಾದರದ ವಿದಾಯ…