ಜೀತಕ್ಕಷ್ಟೇ ವಿಮುಕ್ತಿ, ಸೆರೆಯಲ್ಲೇ ಉಳಿದ ಬದುಕು

ಆ ಕಣ್ಣುಗಳಲ್ಲಿ ಅಘಾದವಾದ ನಿರೀಕ್ಷೆಗಳು ಮಾತ್ರವಲ್ಲ ತಮ್ಮ ಬದುಕನ್ನ ಬೀದಿಪಾಲು ಮಾಡಿದ ಆಳುವ ವರ್ಗದ ವಿರುದ್ಧ ಆಕ್ರೋಶ ಮತ್ತೊಂದೆಡೆ ನಮ್ಮ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇನೋ ಎಂಬ ಹತಾಶ ಭಾವನೆ ಇವೆಲ್ಲವು ಅವರ ಮುಖಭಾವದಲ್ಲಿ ಎದ್ದು ಕಾಣುತ್ತಿದ್ದವು. ಕಿತ್ತುತಿನ್ನುವ ಬಡತನ, ಬಡಕಲು ದೇಹಗಳು, ಮುರುಕಲು ಮನೆಗಳು ಇವೇ ಅವರ ಆಭರಣ. ನಾನು ಮಾತನಾಡಲು ಹೊರಟಿರುವುದು ಮತ್ತಾರ ಬಗ್ಗೆಯೂ ಅಲ್ಲ 20-30 ವರ್ಷಗಳ ಕಾಲ ಜೀತ ಮಾಡಿ ನಂತರ ಜೀತ ವಿಮುಕ್ತರಾದರೂ ಜೀತ ಮಾಡುತ್ತಿದ್ದಾಗಿನ ಪರಿಸ್ಥಿತಿಗೂ ಈಗಿನ ಪರಿಸ್ಥಿತಿಗೂ ಯಾವುದೇ ವ್ಯತ್ಯಾಸವಿಲ್ಲದಂತೆ ಬದುಕುತ್ತಿರುವ ಗಂಗೂರು ಜೀತವಿಮುಕ್ತರ ಬಗ್ಗೆ ಮಾತನಾಡುತ್ತಿದ್ದೇನೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಹೋಬಳಿಯ ಗಂಗೂರು ಗ್ರಾಮದಲ್ಲಿ 1974 ರಿಂದ 91 ಜನ ಆದಿದ್ರಾವಿಡ ಮತ್ತು ಪರಿಶಿಷ್ಠ ಜನಾಂಗಕ್ಕೆ ಸೇರಿದವರು. ಮೇಲ್ಜಾತಿಯವರ ಮನೆಗಳಲ್ಲಿ ಜೀತಮಾಡುತ್ತಿದ್ದರು. 1994 ರಲ್ಲಿ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಜಿಲ್ಲಾಡಳಿತ ಇವರನ್ನು ಪಟ್ಟಿ ಮಾಡಿ ಜೀತದಿಂದ ವಿಮುಕ್ತಿಗೊಳಿಸಿ ಇವರನ್ನು ‘ಜೀತವಿಮುಕ್ತರು” ಎಂದು ಘೋಷಿಸಿತು. ಈ ಪ್ರಕರಣ ಗಂಗೂರು ಜೀತ ವಿಮುಕ್ತರ ಪ್ರಕರಣವೆಂದೆ ರಾಜ್ಯದಲ್ಲಿ ದೊಡ್ಡ ಸುದ್ದಿಯನ್ನು ಮಾಡಿತ್ತು. 1994 ರಲ್ಲಿ ರಾಜ್ಯದ ಪ್ರಮುಖ ದಲಿತ ಹೋರಾಟಗಾರರಾಗಿದ್ದ ಹಾಸನದವರೇ ಆದ ಬಿ.ವಿ.ಚಂದ್ರಪ್ರಸಾದ್ ತ್ಯಾಗಿಯವ ನೇತೃತ್ವದಲ್ಲಿ ದಲಿತ ಸಂಘಟನೆಯಿಂದ ನಡೆದ ಚಳುವಳಿಯ ಭಾಗವಾಗಿ ಇವರನ್ನು ಜೀತದಿಂದ ಮುಕ್ತಿಗೊಳಿಸಲು ಸಾಧ್ಯವಾಯಿತು.

ಹೀಗೆ ಜೀವನಕ್ಕೆ ಯಾವುದೇ ಆಸರೆಯಿಲ್ಲದೆ ಬದುಕಿಗಾಗಿ ಮೇಲ್ಜಾತಿಯವರ ಮನೆಗಳಲ್ಲಿ ಸಾಲಮಾಡಿ ಅದರ ಬಡ್ಡಿ ಕಟ್ಟುವ ಸಲುವಾಗಿ ಮತ್ತು ಜೀವನ ನಡೆಸುವ ಸಲುವಾಗಿ ಹತ್ತಾರು ವರ್ಷಗಳು ಜೀತ ಮಾಡುತ್ತಿದ್ದರೂ ಇದು ಜೀತ ಪದ್ಧತಿ ಇದನ್ನು ಮಾಡುವುದು, ಮಾಡಿಸುವುದು ಎರಡೂ ಕಾನೂನಿನ ಪ್ರಕಾರ ಅಪರಾಧ ಎಂಬ ಹರಿವೇ ಇಲ್ಲದೆ ಬಿಟ್ಟಿ ದುಡಿಯುತ್ತಿದ್ದರು. ಸರ್ಕಾರ ಇವರನ್ನು ಜೀತದಿಂದ ಮುಕ್ತಿಗೊಳಿಸಿತು. ಆದರೆ ಇವರು ಬದುಕು ಕಟ್ಟಿಕೊಳ್ಳಲು ಬೇಕಾದ ಅಗತ್ಯ ವ್ಯವಸ್ಥೆಗಳನ್ನು ನಿರ್ಮಾಣ ಮಾಡಲಿಲ್ಲ. ಮಾತ್ರವಲ್ಲದೆ ಇವರನ್ನು ಜೀತದಿಂದ ಬಿಡಿಸುವುದು ಮಾತ್ರ ನನ್ನ ಕರ್ತವ್ಯ ಉಳಿದದ್ದಕ್ಕೂ ನಮಗೂ ಯಾವ ಸಂಭಂದವೂ ಇಲ್ಲ ಎಂಬಂತೆ ಅಧಿಕಾರಿಗಳು ಇದುವರೆಗು ನಡೆದುಕೊಂಡಿದ್ದಾರೆ. ಜೀತ ವಿಮುಕ್ತರೆಂದು ಘೋಷಣೆಯಾಗಿ 27 ವರ್ಷಗಳು ಕಳೆದಿದ್ದರೂ ಇವರ ಬದುಕು ಮಾತ್ರ ಹಸನಾಗಿಲ್ಲ. ಮಾತ್ರವಲ್ಲದೆ ಇವರು ಆಡುವ ಮಾತುಗಳು ಅತ್ಯಂತ ಗಾಬರಿ ಹುಟ್ಟಿಸುತ್ತವೆ. ಗೋವಿಂದಯ್ಯ ಎಂಬ 65 ವರ್ಷದ ಹಿರಿಯರೊಬ್ಬರು ಹೇಳುತ್ತಾರೆ “ನಾವು ಜೀತ ಮಾಡುತ್ತಿದ್ದಾಗ ಕನಿಷ್ಟ ನಮಗೆ ಮಾಡಲು ಕೆಲಸವಾದರೂ ಇತ್ತು. ಇದರಿಂದ ನಾವು ಹೊಟ್ಟೆಗೆ ಹಿಟ್ಟು ತಿಂದು ಜೀವನವನ್ನಾದರೂ ಮಾಡುತ್ತಿದ್ದೆವು, ಆದರೆ ಸರ್ಕಾರ ನಮ್ಮನ್ನ ಜೀತದಿಂದ ಬಿಡಿಸಿತು. ಈಗ ಮಾಡಲು ಕೆಲಸವಿಲ್ಲ, ಮೇಲ್ ಜಾತಿಯ ಜನ ಭಯದಿಂದ ನಮಗೆ ಕೆಲಸವನ್ನೂ ನೀಡುತ್ತಿಲ್ಲ, ಗೊತ್ತಿರುವುದು ವ್ಯವಸಾಯದ ಕೆಲಸ ಅದನ್ನು ಮಾಡಲು ಭೂಮಿಯಿಲ್ಲ, ಸರ್ಕಾರವೂ ಯಾವುದೇ ಕೆಲಸವನ್ನೂ ಕೊಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ಹೇಗೆ ಜೀವನ ಮಾಡಬೇಕು” ಎಂದು ಪ್ರಶ್ನಿಸಿದರು. ಅವರ ಪ್ರಶ್ನೆಗಳು ಸರಿಯಾಗಿಯೇ ಇದ್ದವು ಆದರೆ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಆಳುವ ವರ್ಗ ಮೌನವಾಗಿರುವುದು ಅಥವ ಇವರನ್ನು ನಿರ್ಲಕ್ಷಿಸಿರುವುದು ದುರಂತವೇ ಸರಿ.

ಆದರೆ ಸರ್ಕಾರಿ ಕಡತದಲ್ಲಿ ಮಾತ್ರ ಜೀತ ವಿಮುಕ್ತರ ಬದುಕನ್ನ ಹಸನು ಮಾಡಲು ಬೇಕಾದ ಎಲ್ಲ ರೀತಿಯ ಶಿಫಾರಸ್ಸುಗಳನ್ನು ಸರ್ಕಾರ ಮಾಡಿದೆ ಆದರೆ ವಾಸ್ತವದಲ್ಲಿ ಇವುಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. 2003 ರಲ್ಲಿ ಜೀತ ಪದ್ಧತಿ ಕುರಿತು ನಡೆದ ಎರಡು ದಿನಗಳ ಸರ್ಕಾರಿ ಕಾರ್ಯಾಗಾರದಲ್ಲಿ ಕೆಲವು ಶಿಫಾರಸ್ಸುಗಳನ್ನು ಸರ್ಕಾರ ಸೂಜಿಸಿದೆ.

ಜೀತ ವಿಮುಕ್ತರಿಗೆ ಕೃಷಿಯಲ್ಲಿ ಆಸಕ್ತಿ ಇದ್ದಲ್ಲಿ, ವ್ಯವಸಾಯ ಯೋಗ್ಯ ಸರ್ಕಾರಿ ಜಮೀನುಗಳನ್ನು ಗುರುತಿಸಿ ಮಂಜೂರು ಮಾಡುವುದು ಹಾಗೂ ಕೃಷಿ ಸಲಕರಣೆಗಳನ್ನು ಒದಗಿಸಿವುದು. ಬಿಡುಗಡೆ ಹೊಂದಿದ ಜೀತ ವಿಮುಕ್ತರಿಗೆ ಜೀವನೋಪಾಯಕ್ಕಾಗಿ ಸಂಪೂರ್ಣ ಗ್ರಾಮೀಣ ರೋಜಗಾರ್ ಯೋಜನೆಯಡಿಯಲ್ಲಿ ಕೂಲಿ ಕೆಲಸ ಒದಗಿಸಿ, ಅಕ್ಕಿ ಹಾಗು ಕೂಲಿಯನ್ನು ಒದಗಿಸುವುದು.

ಜೀತ ವಿಮುಕ್ತರಿಗೆ ಕೃಷಿಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದಲ್ಲಿ, ಅಂತಹ ಚಟುವಟಿಕೆಗಳ ವೃತ್ತಿಪರ ಬೆಳವಣಿಗೆಗೆ ಸ್ಥಳೀಯ ಬ್ಯಾಂಕುಗಳ ಮುಖಾಂತರ ಕನಿಷ್ಠ ಬಡ್ಡಿದರದಲ್ಲಿ ಅಗತ್ಯ ಸಾಲ ಸೌಲಭ್ಯಗಳನ್ನು ಒದಗಿಸುವುದು ಮತ್ತು ಹಾಲಿ ಅನುಷ್ಠಾನಗೊಳಿಸುತ್ತಿರುವ ಎಸ್‌ಜಿಎಸ್‌ವೈ ಯೋಜನೆಯಲ್ಲಿ ಅವರನ್ನು ಆಯ್ದುಕೊಳ್ಳುವುದು.

ಸರ್ಕಾರದ ಎಲ್ಲಾ ಯೋಜನೆಗಳ ಫಲಾನುಭವಿಗಳನ್ನು ಗುರುತಿಸುವಾಗ ಪ್ರಥಮ ಆಧ್ಯತೆಯನ್ನು ಜೀತ ವಿಮುಕ್ತರಿಗೂ ಹಾಗೂ ಬಾಲಜೀತ ಕಾರ್ಮಿಕರ ಕುಟುಂಬದ ಒಬ್ಬ ಹಿರಿಯ ಸದಸ್ಯರಿಗೂ ನೀಡುವ ಮುಖಾಂತರ ಸಂಪೂರ್ಣ ಪುನರ್ವಸತಿಯನ್ನು ಕಲ್ಪಿಸುವುದು.

ಆದರೆ ಈ ಮೇಲಿನ ಶಿಫಾರಸ್ಸುಗಳಲ್ಲಿ ಯಾವ ಶಿಫಾರಸ್ಸು ಕಳೆದ 27 ವರ್ಷಗಳಿಂದ ಗಂಗೂರಿನಲ್ಲಿ ಜಾರಿಯಾಗಿಲ್ಲ. ಮಾತ್ರವಲ್ಲದೆ ಜೀತ ಮಾಡುತ್ತಿರುವಾಗಲೇ ಕೆಲವರು ಊರಿನ ಅಕ್ಕಪಕ್ಕದಲ್ಲಿರುವ ಪಾಳುಬಿದ್ದಿದ್ದ ಸರ್ಕಾರಿ ಅರಣ್ಯ ಜಾಗವನ್ನು ಉಳುಮೆ ಮಾಡಿ 1983ರಲ್ಲಿ ಸಕ್ರಮೀಕರಣಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಹಾಗೂ ಜೀತದಿಂದ ಮುಕ್ತಿಯಾದ ಮೇಲೂ ಅದೇ ಸರ್ಕಾರಿ ಜಾಗವನ್ನ ಊರಿನವರೆಲ್ಲ ಸೇರಿ ಉಳುಮೆ ಮಾಡಲು ಪ್ರಾರಂಬಿಸಿದ್ದಾರೆ. ಈ ಜಾಗ ಅರಣ್ಯ ಇಲಾಖೆಗೆ ಸಂಬಂದಿಸಿದ್ದೆಂದು ಉಳುಮೆ ಮಾಡುತ್ತಿದ್ದ ಜೀತ ವಿಮುಕ್ತರ ಮೇಲೆ ಅರಣ್ಯ ಇಲಾಖೆ ಪ್ರಕರಣಗಳನ್ನು ಧಾಖಲಿಸಿದೆ. ಆದ್ದಾಗ್ಯೂ ಜೀವನಕ್ಕೆ ಬೇರೆ ದಾರಿ ಇಲ್ಲದೆ ಅದೇ ಸರ್ಕಾರಿ ಭೂಮಿಯನ್ನು ಉಳುಮೆ ಮಾಡಲು ತೀರ್ಮಾನಿಸಿ ಪಾಳು ಭೂಮಿಯನ್ನು ಹಸನು ಮಾಡಿ ಅದರಲ್ಲಿ ರಾಗಿ, ಜೋಳ, ಹುರುಳಿಯನ್ನು ಬೆಳೆಯಲು ಪ್ರಾರಂಬಿಸಿದ್ದರು. ಇತ್ತೀಚೆಗೆ ಅಂದರೆ 1 ಏಪ್ರಿಲ್ 2021 ರಂದು ಅರಣ್ಯ ಇಲಾಖೆಯವರು ಉಳುಮೆ ಮಾಡುತ್ತಿದ್ದ ಜಾಗವನ್ನು ಮೀಸಲು ಅರಣ್ಯವೆಂದು ಖುಲ್ಲಾ ಮಾಡಿಸಲು ಜೆಸಿಬಿಗಳ ಮೂಲಕ ಸುತ್ತಲೂ ಸರಹದ್ದನ್ನು ಗುರುತಿಸಿ ಗುಂಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಆ ಜಾಗದಲ್ಲಿ ಗಿಡಗಳನ್ನು ನೆಡಲು ಬೇಕಾದ ಗುಂಡಿಗಳನ್ನು ತೆಗೆಯುತ್ತಿದ್ದಾರೆ. ಈ ಜಾಗದ ಪಕ್ಕದಲ್ಲೇ ನೀಲಗಿರಿ ಕಾಡು ಇದೆ. ನೀಲಗಿರಿ ಅಂತರ್ಜಲವನ್ನು ಸಂಪೂರ್ಣ ಹೀರುತ್ತದೆ ಹಾಗಾಗಿ ನೀಲಗಿರಿ ಅರಣ್ಣೀಕರಣವನ್ನು ನಿಷೇಧಿಸಿದ್ದರೂ ಅರಣ್ಯ ಇಲಾಖೆಯವರು ಮತ್ತೆ ಮತ್ತೆ ಇದೇ ನೀಲಗಿರಿಗಳನ್ನು ನೆಟ್ಟು ರೈತರಿಗೆ ಮತ್ತು ಅಂತರ್ಜಲಕ್ಕೆ ಮರಣ ಶಾಸನ ಬರೆಯುತ್ತಿದ್ದಾರೆ.

 

ಈ ವಿಷಯ ತಿಳಿದು ಮಧ್ಯಪ್ರವೇಶ ಮಾಡಿದ ದಲಿತ ಹಕ್ಕುಗಳ ಸಮಿತಿ (ಡಿಹೆಚ್‌ಎಸ್) ತೆರವು ಕಾರ್ಯಾಚರಣೆಯನ್ನು ತಡೆಯಲು ಪ್ರಯತ್ನಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಲಾಗಿದೆ. ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರರ ಭರವಸೆಯ ಮೇಲೆ ಕೂಡಲೇ ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸುವ ಆಶ್ವಾಸನೆಯೊಂದಿಗೆ ಪ್ರತಿಭಟನೆಯನ್ನು ನಿಲ್ಲಿಸಲಾಗಿದೆ. ನಂತರ ಈ ಕುರಿತು ತಾಲ್ಲೂಕು ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ಸಿಗದ ಕಾರಣಕ್ಕೆ ಗಂಗೂರಿನ ಎಲ್ಲಾ ಜೀತ ವಿಮುಕ್ತರು 3 ಏಪ್ರಿಲ್ 2021 ರಂದು ಹಾಸನ ಜಿಲ್ಲಾಧಿಕಾರಿ ಕಛೆರಿ ಎದುರು ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಧರಣಿಯನ್ನು ನಡೆಸಿ ಜಿಲ್ಲಾಡಳಿತಕ್ಕೆ ಮನವಿಯನ್ನು ಸಲ್ಲಿಸಲಾಗಿದೆ.

ಈ ಪ್ರತಿಭಟನೆಯಲ್ಲಿ ಡಿಎಚ್‌ಎಸ್ ಜಿಲ್ಲಾ ಸಂಚಾಲಕರಾದ ಎಂ.ಜಿ.ಪೃಥ್ವಿ ಮುಖಂಡರಾದ ಬಿ.ಎಸ್.ಲಿಂಗರಾಜು, ಡಾ.ಮಧುಸೂಧನ, ರಾಜು ಸಿಗರನಹಳ್ಳಿ ಮತ್ತು ಹಿರಿಯ ದಲಿತ ಮುಖಂಡರಾದ ಹೆಚ್.ಕೆ.ಸಂದೇಶ್, ಕೃಷ್ಣದಾಸ್, ರಾಜಶೇಖರ್, ವಿಜಯ್‌ಕುಮಾರ್ ದಂಡೋರ ಮುಂತಾದವರು ಭಾಗವಹಿಸಿದ್ದರು.

ಜೀತ ವಿಮುಕ್ತರಿಗೆ ಪುನರ್ವಸತಿ ಕಲ್ಪಿಸಿ ಅವರಿಗೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ಹೋರಾಟವನ್ನು ಮುಂದುವರೆಸಲು ಗಂಗೂರು ಜೀತ ವಿಮುಕ್ತರು ಒಕ್ಕೊರಲಿನಿಂದ ನಿರ್ಧರಿಸಿದ್ದು ಗಂಗೂರು ಜೀತ ವಿಮುಕ್ತರು ಮತ್ತು ಭೂರಹಿತರ ಹೋರಾಟಸಮಿತಿಯನ್ನು ರಚಿಸಿಕೊಂಡಿದ್ದಾರೆ.

ಒಂದೆಡೆ ಸಾವಿರಾರು ಎಕ್ಕರೆ ಸರ್ಕಾರಿ/ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಲೂಟಿ ಮಾಡಿ, ಲಾಭ ಮಾಡುತ್ತಿರುವವರನ್ನು ಮಾತನಾಡಿಸಲೂ ಸಾಧ್ಯವಾಗದ ಅರಣ್ಯ ಇಲಾಖೆ ಮತ್ತು ಸರ್ಕಾರ ಜೀವನೋಪಾಯಕ್ಕಾಗಿ 1-2 ಎಕ್ಕರೆ ಪಾಳು ಭೂಮಿಯನ್ನು ಬಡವರು, ಜೀತ ವಿಮುಕ್ತರು ಉಳುಮೆ ಮಾಡುತ್ತಿದ್ದರೆ ಅವರನ್ನು ತೆರವುಗೊಳಿಸಲು ತುದಿಗಾಲ ಮೇಲೆ ನಿಂದಿದೆ. ಇದು ಸರ್ಕಾರದ ಬಡಜನ ವಿರೊಧಿ ದೋರಣೆಯನ್ನು ಸ್ಪಷ್ಟಪಡಿಸುತ್ತಿದೆ. ಭೂಮಿಗಾಗಿ ಹೋರಾಟವೆಂಬ ಏಕೈಕ ಅಸ್ತçವನ್ನು ಮುಂದಿಟ್ಟುಕೊಂಡು ಗಂಗೂರು ಜೀತ ವಿಮುಕ್ತರು ಬೀದಿಗಿಳಿದಿದ್ದಾರೆ. ಇವರ ಬೇಡಿಕೆಗಳು ಈಡೇರಲು, ಸರ್ಕಾರದ ಮೇಲೆ ಒತ್ತಡ ತರಲು ಪ್ರಜ್ಞಾವಂತ ನಾಗರೀಕರು ಇವರ ಚಳುವಳಿಗೆ ಕೈಜೋಡಿಸಬೇಕಿದೆ.

ಹೆಚ್.ಆರ್.ನವೀನ್ ಕುಮಾರ್, ಹಾಸನ

Donate Janashakthi Media

Leave a Reply

Your email address will not be published. Required fields are marked *