ಮಳವಳ್ಳಿ: ಅರ್ಜಿ ಸಲ್ಲಿಸಿದರೂ ಸಹ ಹಕ್ಕುಪತ್ರ ಹಾಗೂ ಆರ್.ಟಿ.ಸಿ. ಕೊಡಲು ಸಾಧ್ಯವಾಗದಿರುವ ಸರ್ಕಾರ ಕ್ರಮವನ್ನು ಖಂಡಿಸಿ, ಹಲವು ಹೋರಾಟ ಮಾಡಿದರೂ ಸಹ ಕ್ರಮ ಕೈಗೊಳ್ಳದೆ ಇರುವುದನ್ನು ಖಂಡಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯು) ವತಿಯಿಂದ ತಾಲ್ಲೂಕು ತಹಶೀಲ್ದಾರ್ ಕಛೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಹಲವು ಗ್ರಾಮಗಳ ಸಾವಿರಾರು ಜನತೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಹತ್ತು ವರ್ಷಗಳು ಕಳೆದರೂ ನಿವೇಶನ ಮಂಜೂರು ಆಗಿರುವುದಿಲ್ಲ. ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಹಲವು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಯಾಗಿರುವುದಿಲ್ಲ. ಅಲ್ಲದೇ, ಹಲವು ಮೂಲಭೂತ ಸೌಲಭ್ಯಗಳಿಂದ ಜನರು ವಂಚನೆಗೆ ಒಳಗಾಗಿದ್ದಾರೆ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಈಗಾಗಲೇ ಹಲವು ಬಾರಿ ಪ್ರತಿಭಟನೆಗಳನ್ನು ಮಾಡಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಲಾಗಿದೆ. ಅಲ್ಲದೆ, ಮನವಿಯನ್ನು ಸಲ್ಲಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಈಗಾಗಲೇ ಹಲವು ಬಾರಿ ಸಭೆಗಳು ನಡೆದರೂ ಸಹ ಸಭೆಯಲ್ಲಿನ ತೀರ್ಮಾನದಂತೆ ಕ್ರಮಗಳನ್ನು ಜರುಗಿಸದಿರುವುದರಿಂದ ಸಮಸ್ಯೆಗಳು ಹಾಗೇ ಉಳಿದಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಕೆಲ ಅಧಿಕಾರಿಗಳು ಪ್ರಭಾವಿಗಳು ಮತ್ತು ಶ್ರೀಮಂತರ ಕೈವಶವಾಗಿ ಕೆಲಸ ಮಾಡುತ್ತಿರುವುದು ಕಂಡುಬಂದಿದ್ದು, ಬಡಜನತೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಜೀವ ಸವೆಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದಿದ್ದಾರೆ.
ಸರ್ಕಾರಿ ಜಾಗದಲ್ಲಿ ಹಲವು ದಶಕಗಳಿಂದಲೂ ವಾಸವಾಗಿರುವ ಕಾಲಕಾಲಕ್ಕೆ ಕೆಲವು ಸೌಲಭ್ಯಗಳು ಲಭ್ಯವಾಗುತ್ತಿದ್ದವು. ಈಗ ಮತ್ತೆ ಹಲವು ರೀತಿಯ ಸೌಲಭ್ಯಗಳಿಂದ ವಂಚಿತರಾಗಿರುವ ಇಲ್ಲಿನ ಜನರು ಜೀವನ ಸಾಗಿಸುವುದೇ ದುಸ್ತರವಾಗಿರುವ ಪರಿಸ್ಥಿತಿ ಎದುರಾಗಿದೆ. ಕೆಲವೆಡೆ ಬಡವರು ವಾಸಿರುವ ಜಾಗಗಳಿಂದ ಅವರನ್ನು ಒಕ್ಕಲೆಬ್ಬಿಸುವ ಕ್ರಮಗಳು ನಡೆಯುತ್ತಿದ್ದು ಅದನ್ನು ತಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವಸತಿ ವಂಚಿತ ಸಾವಿರಾರು ಬಡ ಜನತೆ ಇದ್ದು ಅವರಿಗೆ ವಸತಿಯನ್ನು ಒದಗಿಸಬೇಕು. ಹಕ್ಕುಪತ್ರ ಇಲ್ಲದವರಿಗೆ ಹಕ್ಕುಪತ್ರವನ್ನು ವಿತರಿಸಬೇಕು. ಅಧಿಕಾರಿಗಳಿಂದ ಆಗುತ್ತಿರುವ ಕಿರುಕುಳವನ್ನು ತಪ್ಪಿಸಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ. ಪುಟ್ಟಮಾದು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಮಳವಳ್ಳಿ ತಾಲ್ಲೂಕು ಅಧ್ಯಕ್ಷ ಬಿ.ಎಂ. ಶಿವಮಲ್ಲಯ್ಯ, ತಾಲ್ಲೂಕು ಕಾರ್ಯದರ್ಶಿ ಸರೋಜಮ್ಮ, ಮಂಡ್ಯ ತಾಲ್ಲೂಕು ಅಧ್ಯಕ್ಷ ಅಮಾಸಯ್ಯ, ತಾಲ್ಲೂಕು ಕಾರ್ಯದರ್ಶಿ ರಾಜು, ಪಾಂಡವಪುರ ತಾಲ್ಲೂಕು ಅಧ್ಯಕ್ಷ ಎನ್. ಸುರೇಂದ್ರ, ಮದ್ದೂರು ತಾಲ್ಲೂಕು ಅಧ್ಯಕ್ಷೆ ಅನಿತಾ, ಜಿಲ್ಲಾ ಸಹ ಕಾರ್ಯದರ್ಶಿ ಮಧುಕುಮಾರ್, ಕೆ.ಆರ್.ಪೇಟೆ ತಾಲ್ಲೂಕು ಸಂಚಾಲಕ ಗಿರೀಶ, ಜಿಲ್ಲಾ ಮುಖಂಡರಾದ ಅಬ್ದುಲ, ಅರುಣ್‌ಕುಮಾರ್, ಎನ್. ಶಿವಕುಮಾರ್, ಕಪನೀಗೌಡ@ ಪಾಪಣ್ಣ, ರಾಮಣ್ಣ, ಮತ್ತಿತರರು ಭಾಗವಹಿಸಿದ್ದರು.