ಮುಂಬಯಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಬ್ಯಾಡ್ ಬ್ಯಾಂಕ್ ಅನುಷ್ಠಾನಗೊಳಿಸಲು ಆರ್‌ಬಿಐ ನಿಂದ ಅನುಮೋದನೆ ಪಡೆದುಕೊಂಡಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ವಸೂಲಿಯಾಗದ ಸಾಲಗಳನ್ನು ಈ ಬ್ಯಾಂಕಿಗೆ ವರ್ಗವಣೆ ಮಾಡಲಾಗುತ್ತದೆ.
ಎಸ್‌ಬಿಐ ತನ್ನ 38 ಬ್ಯಾಂಕ್ ಖಾತೆಗಳಿಂದ 82,845 ಕೋಟಿ ರೂಪಾಯಿ ವಸೂಲಿಯಾಗದ ಸಾಲವಿದ್ದು, ಅಂತಹ ಸಾಲವನ್ನು ಬ್ಯಾಡ್ ಬ್ಯಾಂಕ್ಗೆ ವರ್ಗಾವಣೆ ಮಾಡಲು ನಿರ್ಧರಿಸಿದೆ. ಈ ವರ್ಗಾವಣೆ ಪ್ರಕ್ರಿಯೆ ಹಲವು ಹಂತಗಳಲ್ಲಿ ಜರುಗಲಿದೆ ಎಂದು ತಿಳಿದುಬಂದಿದೆ.
ವರ್ಗಾವಣೆಯು ಹಂತಹಂತವಾಗಿ ಆಗಲಿದೆ. ಮೊದಲನೇ ಹಂತವಾಗಿ 15 ಖಾತೆಗಳ 50 ಸಾವಿರ ಕೋಟಿ ರೂಪಾಯಿ ಎನ್ಎಆರ್ಸಿಎಲ್ಗೆ ವರ್ಗಾವಣೆ ಆಗುವ ನಿರೀಕ್ಷೆ ಇದೆ. ಅಗತ್ಯ ಪ್ರಕ್ರಿಯೆಗಳು ಮುಗಿದ ಬಳಿಕ ಈ ಹಣಕಾಸು ವರ್ಷದಲ್ಲಿ ಈ ಖಾತೆಗಳನ್ನು ವರ್ಗಾವಣೆ ಮಾಡಲಾಗುತ್ತದೆ.
ಭಾರತದ ಬ್ಯಾಡ್ ಬ್ಯಾಂಕಿ ಗೆ ನಿಯಂತ್ರಕರಿಂದ ಅಗತ್ಯ ಮಂಜೂರಾತಿಯನ್ನು ಪಡೆದಿದೆ ಮತ್ತು ಕನಿಷ್ಠ 50 ಸಾವಿರ ಕೋಟಿ ರೂಪಾಯಿ ನಂಜಿನ ಸ್ವತ್ತು (ಮಾರುವುದಕ್ಕೆ ಕಷ್ಟವಾದ ಅಥವಾ ಸಾಧ್ಯವೇ ಇಲ್ಲದ ಸ್ವತ್ತು) ಮಾರ್ಚ್ 31, 2022ರೊಳಗೆ ವರ್ಗಾವಣೆ ಮಾಡುವ ಯೋಜನೆಯನ್ನು ಸಾಲ ನೀಡಿರುವವರು ಹೊಂದಿದ್ದಾರೆ ಎಂಬುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾದ ದಿನೇಶ್ ಖರ ಹೇಳಿದ್ದಾರೆ.
ಬ್ಯಾಡ್ ಬ್ಯಾಂಕ್ ಎಂಬುದು ಆಡುಭಾಷೆಯಲ್ಲಿ ಕರೆಯಲಾಗುವ ಪದವಾಗಿದ್ದು, ಇದನ್ನು ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ (ಎನ್‌ಎಆರ್‌ಸಿಎಲ್) ಎಂದು ವ್ಯಾವಹಾರಿಕ ಪರಿಭಾಷೆಯಲ್ಲಿ ಕರೆಯಲಾಗುತ್ತದೆ.
ಭಾರತದ ಬ್ಯಾಡ್ ಸಾಲ ಆತಂಕವನ್ನು ಗಮನದಲ್ಲಿ ಇಟ್ಟುಕೊಂಡು, ಜುಲೈ 7ರಂದು ಎನ್‌ಎಆರ್‌ಸಿಎಲ್ ಸ್ಥಾಪಿಸಲಾಯಿತು. ಅದಕ್ಕಾಗಿ ಅಧಿಕೃತ ಬಂಡವಾಳ 100 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದನ್ನು “ಕೇಂದ್ರ ಸರ್ಕಾರದ ಕಂಪೆನಿ” ಎಂದು ಗುರುತಿಸಲಾಗಿದೆ. ಭಾರತೀಯ ಆರ್ಥಿಕ ವ್ಯವಸ್ಥೆಯನ್ನು ಶುದ್ಧೀಕರಿಸುವ ದೃಷ್ಟಿಯಿಂದ ಸರ್ಕಾರ ಈ ಪ್ರಯತ್ನ ಮಾಡುತ್ತಿದೆ. ವಿಶ್ವದಲ್ಲೇ ಅತಿ ದೊಡ್ಡ ಪ್ರಮಾಣದ ಬ್ಯಾಡ್ ಅಸೆಟ್ಸ್ (ಸ್ವತ್ತು) ಹೊಂದಿರುವ ಆರ್ಥಿಕ ವ್ಯವಸ್ಥೆ ಭಾರತದ್ದಾಗಿದೆ. ಸಾಲಗಳನ್ನು ಎನ್ಎಆರ್ಸಿಎಲ್ಗೆ ವರ್ಗಾವಣೆ ಮಾಡುವ ಮೂಲಕ ಬ್ಯಾಂಕ್ಗಳು ನಷ್ಟವನ್ನು ಕಡಿತಗೊಳಿಸಬಹುದು ಹಾಗೂ ಸಾಲದ ನವೀಕರಣ ಮಾಡಬಹುದು.
ಅಂದರೆ, ವಸೂಲಾಗದ ಸಾಲದ ಮೊತ್ತವನ್ನು ವಸೂಲಿ ಮಾಡುವ ಸಲುವಾಗಿರುವ ಸಂಸ್ಥೆಯೇ ಬ್ಯಾಡ್ ಬ್ಯಾಂಕ್ ಆಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ವಸೂಲಿಯಾಗದ ಸಾಲಗಳನ್ನು ಈ ಬ್ಯಾಂಕ್ಗೆ ವರ್ಗಾಯಿಸುವ ಮೂಲಕ ಬ್ಯಾಂಕ್ಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲಾಗುತ್ತದೆ. ಒಂದು ಬಾರಿ ವರ್ಗಾವಣೆಯಾದ ಸಾಲವನ್ನು ಕೊನೆಯ ತನಕ ನಿರ್ವಹಿಸುವ ಜವಾಬ್ದಾರಿ ಈ ಬ್ಯಾಡ್ ಬ್ಯಾಂಕ್ ಮೇಲಿದೆ.
ಮೊದಲ ಹಂತದಲ್ಲಿ 15 ಬ್ಯಾಂಕ್ ಖಾತೆಗಳ ಸುಮಾರು 50,335 ಕೋಟಿ ವಸೂಲಾಗದ ಸಾಲದ ಜವಾಬ್ದಾರಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಡ್ ಬ್ಯಾಂಕ್ಗೆ ವರ್ಗಾವಣೆ ಮಾಡಲಿದೆ. ಇದೇ ಹಣಕಾಸು ವರ್ಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಭಾರತೀಯ ಸಾಲ ಪರಿಹಾರ ಕಂಪನಿ (ಐಡಿಆರ್‌ಸಿಎಲ್) ಅನುಷ್ಠಾನಗೊಳಿಸಲೂ ಆರ್ಬಿಐನಿಂದ ಅನುಮೋದನೆಗಳನ್ನು ಪಡೆಯಲಾಗಿದ್ದು, ಈಗಾಗಲೇ ಬ್ಯಾಡ್ ಬ್ಯಾಂಕ್ ಮತ್ತು ಭಾರತೀಯ ಸಾಲ ಪರಿಹಾರ ಕಂಪನಿಗಳು ಹಲವಡೆ ಕಾರ್ಯನಿರ್ವಹಿಸುತ್ತಿವೆ.