1992 ಡಿಸೆಂಬರ್ 6. ಅಂದು ಅಯೋಧ್ಯೆಯಲ್ಲಿ ನೂರಾರು ವರ್ಷಗಳಷ್ಟು ಪ್ರಾಚೀನವಾಗಿದ್ದ ಮುಸ್ಲಿಂ ಪ್ರಾರ್ಥನಾಲಯವನ್ನು ಹಾಡೇ ಹಗಲಲ್ಲೇ, ಬಿಜೆಪಿ ಮತ್ತು ಸಂಘಪರಿವಾರದ ೩೨ ನಾಯಕರ ಸಮಕ್ಷಮದಲ್ಲಿ ಕರಸೇವಕರು ಎಂಬ ಸಮಾಜಘಾತುಕರು ದ್ವಂಸಮಾಡಿ ಕೇಕೆ ಹಾಕಿದರು? ಇಡೀ ದೇಶವೇ ಈ ಆತಂಕದ ಘಟನೆಯನ್ನು ವೀಕ್ಷಿಸಿತ್ತು. ಅಂದು ನಮ್ಮ ಸಂವಿಧಾನದ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತೆಯ ಕಿರೀಟಗಳನ್ನು ನೆಲಕ್ಕುರುಳಿಸಿ ಮಣ್ಣು ಪಾಲು ಮಾಡಲಾಯಿತು.
ದಾಖಲಾದ ವಿವಿಧ ಎಫ್ಐಆರ್ಗಳಲ್ಲಿ ೪೯ ವ್ಯಕ್ತಿಗಳನ್ನು ಹೆಸರಿಸಲಾಗಿತ್ತು. ಅವರಲ್ಲಿ ೩೨ ಮಂದಿ ಮಾತ್ರ ಜೀವಂತವಾಗಿದ್ದಾರೆ. ಅಂದಿನ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಸಂವಿಧಾನ ಪೀಠವು ಮಸೀದಿ ಧ್ವಂಸಗೊಳಿಸಿದ ಕೃತ್ಯವನ್ನು ಕಾನೂನಿನ ಹೀನಾಯ ಉಲ್ಲಂಘನೆ ಎಂದು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು. ಆದರೆ ಇಂದು ೨೮ ವರ್ಷಗಳ ಕಾಲ ಸುಧೀರ್ಘ ವಿಚಾರಣೆ ನಡೆಸಿದ ಸಿಬಿಐ ಲಕ್ನೊ ವಿಶೇಷ ನ್ಯಾಯಾಲಯವು ಅಷ್ಟೂ ಜನ ಆರೋಪಿಗಳನ್ನು ನಿರ್ದೋಷಿಗಳೆಂದು ಪ್ರಕಟಿಸಿದೆ. ಮಸೀದಿ ಧ್ವಂಸಗೊಳಿಸಿದ್ದು ಪೂರ್ವಯೋಜತ ಕೃತ್ಯವಲ್ಲ ಎಂದು ವಿಶೇಷ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ ಎಂಬುದಾಗಿ ವರದಿಯಾಗಿದೆ. ಸುಪ್ರೀಂ ಕಾನೂನಿಗೆ ಅನುಗುಣವಾಗಿ ಆಡಳಿತ ನಡೆಸುವುದಕ್ಕೆ ಬದ್ಧತೆ ತೋರಿರುವ ಧರ್ಮನಿರಪೇಕ್ಷ ರಾಷ್ಟ್ರವೊಂದರಲ್ಲಿ ಈ ರೀತಿ ಆಗಬಾರದಾಗಿತ್ತು ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ಹೇಳಿದ್ದಕ್ಕೂ ಸಿಬಿಐ ವಿಶೇಷ ಕೋರ್ಟ್ ಹೇಳಿರುವುದಕ್ಕೂ ಎಷ್ಟೊಂದು ವಿರೋಧಾಭಾಸಗಳು!
ಯಾವುದೇ ನ್ಯಾಯಾಲಯವು ನೀಡುವ ತೀರ್ಪನ್ನು ನಾವು ಗೌರವಿಸಬೇಕಾಗುತ್ತದೆ. ಆದರೆ ಆ ಕುರಿತು ಆರೋಗ್ಯಕರವಾದ ಚರ್ಚೆ ನಡೆಸಲು ನಾವು ಹಿಂಜರಿಯಬಾರದು. ಸದರಿ ಪ್ರಕರಣದ ತನಿಖೆ ನಡೆಸಿದ ಸಿಬಿಐ ಪ್ರಾಸಿಕ್ಯೂಷನ್ ಹೊಣೆ ಹೊತ್ತವರ ಬಹುದೊಡ್ಡ ವೈಫಲ್ಯ ಎದ್ದು ಕಾಣುತ್ತದೆ. ದೇಶದ ಉದ್ದಗಲಕ್ಕೂ ರಥಯಾತ್ರೆ ನಡೆಸಲಾಗಿತ್ತು. ಎಲ್.ಕೆ.ಆಡ್ವಾಣಿ ಅದರ ನೇತೃತ್ವ ವಹಿಸಿದ್ದರು. ದಾರಿಯುದ್ದಕ್ಕೂ `ದೇವಸ್ಥಾನವನ್ನು ಅಲ್ಲೇ ಕಟ್ಟುತ್ತೇವೆ’ ಎಂಬ ಪ್ರಚೋದನಾಕಾರಿ ಘೋಷಣೆಯನ್ನು ಕೂಗಲಾಗುತಿತ್ತು. ಕೆಲವು ದಿನಗಳ ಮೊದಲೇ, ಕರಸೇವಕರು ಎಂಬ ಪುಂಡರನ್ನು ಅಯೋಧ್ಯೆ ತಲಪುವಂತೆ ವ್ಯವಸ್ಥೆ ಮಾಡಲಾಗಿತ್ತು. ಡಿಸೆಂಬರ್ ೩ ಕ್ಕೆ ಅಯೋಧ್ಯೆ ತಲುಪಿದ್ದ ಸಿ.ಟಿ. ರವಿ ಮತ್ತು ತಂಡದವರಿಗೆ ಸರಯೂ ನದಿಯಿಂದ ಮೂರು ದಿನ ಮರಳು ತರುವ ಕೆಲಸವನ್ನು ನೀಡಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ. ನಾನು ಸಹ ಅಂದು ಆ ಸ್ಥಳದಲ್ಲಿ ಇದ್ದೇ ಎಂದು ಯಡಿಯೂರಪ್ಪನವರು ಹೇಳಿದ್ದಾರೆ. ಲಕ್ಷಾಂತರ ಕರಸೇವಕರನ್ನು ಅಂದು ಅಯೋಧ್ಯೆಗೆ ಬರಮಾಡಿಕೊಂಡಿರುವವರು ಯಾರು? ಯಾರೋ ಪುಂಡರು ಬಂದು ಮಸೀದಿಯನ್ನು ಧ್ವಂಸ ಮಾಡುತ್ತಾರೆ, ಆಗ ನಾವು ಕರಸೇವಕರು ರಾಮನ ಪ್ರತಿಮೆಯನ್ನು ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದೆವು ಎಂದು ಹೇಳಲಾಗುತ್ತದೆ. ಇದು ನಂಬಲರ್ಹವಾದ ವಾದವೆ?
ರಥಯಾತ್ರೆಯಿಂದ ಆರಂಭಿಸಿ ಮಸೀದಿ ಮೇಲಿನ ದಾಳಿವರೆಗೂ ಎಲ್ಲವೂ ಪೂರ್ವಯೋಜಿತವೇ. ನ್ಯಾಯಾಲಯಕ್ಕೆ ಸರಿಯಾದ ಸಾಕ್ಷಾಧಾರಗಳನ್ನು ಒದಗಿಸುವಲ್ಲಿ ಸಿಬಿಐ ಸೋತಿದೆ. ಇದು ಉದ್ದೇಶಪೂರ್ವಕವಾಗಿ ನಡೆದದ್ದೇ ಎಂಬ ಅನುಮಾನವು ಹುಟ್ಟುತ್ತದೆ. ಗುಂಪು ಗಲಭೆಗಳು ನಡೆದಾಗ ನಿಜವಾದ ಅಪರಾಧಿಗಳನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯವಾಗಿರುತ್ತದೆ. ಆದರೆ ಸಮರ್ಥ ತನಿಖಾಧಿಕಾರಿ ಜನಜಂಗುಳಿಯಲ್ಲಿ ಸೇರಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು, ಅವರ ವಿರುದ್ಧ ಬಲವಾದ ಸಾಕ್ಷಾದಾರಗಳನ್ನು ಸಂಗ್ರಹಿಸಿ ನ್ಯಾಯಾಲಯದ ಮುಂದಿಡಲು ಪ್ರಯತ್ನ ಪಡುತ್ತಾರೆ. ಗಲಭೆಗೆ ನೇತೃತ್ವ ಕೊಟ್ಟಂತಹವರ ವಿರುದ್ಧ, ಅಕ್ರಮ ಸಭೆ ಸೇರಿಸಿದವರ ವಿರುದ್ಧ ತಪ್ಪದೆ ಪ್ರಕರಣವನ್ನು ದಾಖಲು ಮಾಡುತ್ತಾರೆ. ಆದರೆ ಮಸೀದಿ ದ್ವಂಸದ ವಿಷಯದಲ್ಲಿ ತನಿಖೆ ನಡೆಸುತ್ತಿದ್ದ ಸಿಬಿಐ ಇಂತಹ ಯಾವುದೇ ಪೂರ್ವ ಸಿದ್ಧತೆಗೆ ಗಮನ ನೀಡದಂತೆ ಕಾಣುವುದಿಲ್ಲ. ಹೀಗಾಗಿ ವಿಶೇಷ ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ಸಾಕ್ಷಗಳ ಕೊರತೆಯನ್ನು ಮುಂದಿಟ್ಟು ಖುಲಾಸೆ ಮಾಡಿದೆ.
ಸಿಬಿಐ ದೋಷಾರೋಪ ಹೊರಿಸಿದ ಯಾವುದೇ ವ್ಯಕ್ತಿ ಅಥವ ಗುಂಪು ಆ ಕೃತ್ಯಕ್ಕೆ ಹೊಣೆಗಾರ ಅಲ್ಲ ಎಂದಾದರೆ ಅದನ್ನು ಮಾಡಿದ್ದು ಯಾರು? ಅವರಿಗೆ ಹಾಗೆ ಮಾಡಲು ಪ್ರೇರಣೆ ಏನಿತ್ತು ಎಂಬುದನ್ನು ಪತ್ತೆ ಮಾಡಬೇಕಾದ ಜವಾಬ್ದಾರಿ ಸಿಬಿಐ ಮೇಲೆಯೇ ಇರುತ್ತದೆ. ಸಾಮಾಜಿಕ, ರಾಜಕೀಯ ಆಯಾಮಗಳನ್ನು ಹೊಂದಿರುವ ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರು ಯಾರು ಎಂಬುದನ್ನು ಪತ್ತೆ ಮಾಡಿ ಅವರನ್ನು ಶಿಕ್ಷೆಗೆ ಗುರಿಪಡಿಸಲು ಆಗದಿರುವುದು ಸಿಬಿಐನ ಬಾರೀ ದೊಡ್ಡ ಸೋಲು.