ಎನ್.ಚಿನ್ನಸ್ವಾಮಿ ಸೋಸಲೆ
ಭಾರತ ಮತ್ತು ಭಾರತೀಯತೆ ಕುರಿತು ಸಮಗ್ರ ಅಧ್ಯಯನಕ್ಕೆ ಹಗಲಿರುಳು ಎನ್ನದೆ ತಮ್ಮನ್ನು ತೊಡಗಿಸಿಕೊಂಡರು. ಭಾರತದ ಸಮಗ್ರ ಪ್ರಭುತ್ವದ ಚರಿತ್ರೆಯನ್ನು ಅರ್ಥೈಸಿಕೊಂಡು ಅದರ ವೈಭವದೊಳಗೆ ಕಳೆದುಹೋದ ಪ್ರಜೆಗಳ ಸಾಂಸ್ಕೃತಿಕ ಚರಿತ್ರೆಯನ್ನು ಸಂಶೋಧನಾತ್ಮಕವಾಗಿ ವಾಸ್ತವದ ನೆಲೆಯಲ್ಲಿ ಹುಡುಕಲಾರಂಭಿಸಿದರು.
ಭಾರತ ಪ್ರಪಂಚದ ಭೂಪಟದಲ್ಲಿ ತನ್ನನ್ನು ಮುಕ್ತ ಎಂದು ಬಾಹ್ಯವಾಗಿ ಹೇಳುವುದರ ಜೊತೆಗೆ ಆಂತರಿಕವಾಗಿ ಏಕಮುಖ ಚಿಂತನೆಯನ್ನೇ ಮೈಗೂಡಿಸಿಕೊಂಡಿರುವುದು ಸ್ವಾಭಾವಿಕವಾಗಿದೆ. ಇದಕ್ಕೆ ನಮ್ಮ ಸಾಂಸ್ಕೃತಿಕ ಚರಿತ್ರೆಯೇ ಸಾಕ್ಷಿಯಾಗಿದೆ. ಈ ಏಕಮುಖ ಸಂಸ್ಕೃತಿಯ ವಿರುದ್ದವೇ ಬಹುಮುಖ ಸಂಸ್ಕೃತಿಯನ್ನು ಈ ದೇಶವಾಸಿಗಳಲ್ಲಿ ಅನಾವರಣಗೊಳಿಸಲು ಕಾಲಕಾಲಕ್ಕೆ ಅನೇಕ ಮಹನೀಯರು ಜನಿಸಿರುವುದಕ್ಕೆ ಭಾರತದ ಇತಿಹಾಸ ಹಾಗೂ ಚರಿತ್ರೆ ಸಾಕ್ಷಿಯಾಗಿದೆ. ಈ ಹಿನ್ನೆಲೆಯಲ್ಲಿಯೇ ಬುದ್ಧ, ಬಸವ, ಬಸವಾದಿಶರಣ-ಶರಣೆಯರು, ದಾಸರು, ತತ್ವಪದಕಾರರು ಜನಿಸಿ ನಮ್ಮ ಪ್ರಗತಿಪರ ಚಿಂತನೆಗೆ ನಾಂದಿ ಹಾಡಿದ್ದಾರೆ. ಇವರೆಲ್ಲರ ಚಿಂತನೆಗೆ ಶತ್ರು ಮತ್ತು ಮಿತ್ರರು ಯಾರು ಎಂಬುದು ಸ್ಪಷ್ಟವಾಗಿ ತಿಳಿದಿತ್ತು. ಇವರೆಲ್ಲರ ಚಿಂತನೆ ಏಕಮುಖವಾಗಿ ದೇಶ ಹಾಗೂ ದೇಶದ ಜನರನ್ನು ಬಳಸಿಕೊಳ್ಳುತ್ತಿದ್ದವರ ವಿರುದ್ಧ ಇತ್ತೇ ಹೊರತು, ಬಹುಮುಖವಾಗಿ ಕಾಯಕ ಸಿದ್ಧಾಂತದ ಮೂಲಕ ರಾಷ್ಟ್ರ ಕಟ್ಟಿದವರ ಹಾಗೂ ಕಟ್ಟುವವರ ಪರ ತಮ್ಮ ಅನುಭಾವದ ಬೌದ್ಧಿಕತೆಯನ್ನು ಅನಾವರಣಗೊಳಿಸಿದರು. ಇಂತಹ ಜನಪರ ಕಾರ್ಯ ಮಾಡುವುದಕ್ಕಾಗಿ ಇವರ ಜಯಂತಿಗಳನ್ನು ನಾವು ಕಾಲಕಾಲಕ್ಕೆ ಆಚರಿಸುತ್ತಾ ಬಂದಿದ್ದೇವೆ. ಇಂತಹ ಸಾಧಕರು ಕಾಣಲು ಬಯಸಿದ ಭಾರತ, ಕಾಲಕಾಲಕ್ಕೆ ಎದುರಾಗುವ ದೇವರ ಹೆಸರಿನ ಧಾರ್ಮಿಕ ಸಂಕೋಲೆಯಲ್ಲಿ ಸಿಲುಕಿ, ಪುರಾಣವನ್ನೇ ಚರಿತ್ರೆಯನ್ನಾಗಿಸಲು ಮುಂದಾಗಿ, ಮತ್ತದೇ ಏಕಮುಖವಾಗಿ ಚಲಿಸಲು ಆರಂಭಿಸಿದ ಸಂದರ್ಭದಲ್ಲಿ ಈ ಚಲನೆಯನ್ನು ಬಹುಮುಖಗೊಳಿಸಲು ಮೇಲಿನವರ ವಾರಸುದಾರರಾಗಿ ಏಪ್ರಿಲ್ ೧೪. ೧೮೯೧ ರಂದು ಜನಿಸಿದವರೇ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು. ಅಂಬೇಡ್ಕರ್‌ರವರ ಜನನವೇ ಎರಡು ಸಾವಿರ ವರ್ಷಗಳಿಂದ ತಟಸ್ಥವಾಗಿದ್ದ ಭಾರತದ ಚರಿತ್ರೆಯ ಚಲನಶೀಲತೆಗೆ ಮುನ್ನುಡಿ ಯಾಯಿತು.
ಒಬ್ಬ ಮಹಾನ್ ಪುರುಷನ ಹುಟ್ಟು ಹಲವಾರು ಸಾಂಸ್ಕೃತಿಕ ಸಂಕೋಲೆಗಳಿಂದ ಮುಕ್ತಿಗೊಳಿಸಿ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಸಾಂಸ್ಕೃತಿಕವಾಗಿ ಸ್ವಾತಂತ್ರ್ಯಗೊಳಿಸುವ ಸಂಕೇತವಾದರೆ, ಕೆಲವು ಮಹಾನ್ ಪುರಷರ ನಿಧನ ರಾಜಕೀಯ ಹಾಗೂ ಸಾಮಾಜಿಕ ದಿಕ್ಕನ್ನೇ ಬದಲಾಯಿಸಿರುವುದಕ್ಕೂ ಭಾರತದ ಮಣ್ಣಿನಲ್ಲಿ ಜ್ವಲಂತ ನಿದರ್ಶನಗಳಿವೆ. ಈ ಮಾದರಿಯ ಜನನ ಮತ್ತು ಮರಣಗಳೆರಡರಿಂದಲೂ ಭಾರತದ ಸಾಂಸ್ಕೃತಿಕ ದಿಕ್ಕನ್ನೆ ಬದಲಾಯಿಸಿದ – ಯಾವುದೇ ದಾಳಿ ಆಕ್ರಮಣ ಗಳನ್ನು ಕತ್ತಿ ಹಿಡಿದು ಮಾಡದೆ – ಶತಶತಮಾನಗಳಿಂದ ಕೈಯಲ್ಲಿ ಹಿಡಿಸದೆ ಇದ್ದಂತಹ ಲೇಖನಿ ಎಂಬ ವಿದ್ವತ್ ಜ್ಞಾನವೆಂಬ ಖಡ್ಗ ವನ್ನು ಹಿಡಿದು ಕಟ್ಟಿದ ಸಾಮ್ರಾಜ್ಯದ ಅಧಿಪತಿಯಾಗಿ , ಜನಮಾನಸದಲ್ಲಿ ನೆಲೆಯೂರಿದ ಏಕೈಕ ಮಹಾನ್ ಮಾನವತವಾದಿ ದೊರೆಯೆಂದರೆ ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರು.
ಅಂಬೇಡ್ಕರ್ ಅವರು ಜನಿಸಿದ ಸಂದರ್ಭ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಭದ್ರಗೊಂಡು ಎರಡು ಸಾವಿರ ವರ್ಷಗಳಿಂದ ಭಾರತದಲ್ಲಿ ಸಾಂಪ್ರದಾಯಿಕವಾಗಿ ಜಾರಿಯಲ್ಲಿದ್ದ ಧಾರ್ಮಿಕ ಹಾಗೂ ಸಾಮಾಜಿಕ ಕಟ್ಟುಪಾಡುಗಳು ಜನತೆ ಮತ್ತು ಪ್ರಭುತ್ವದ ಹಿನ್ನೆಲೆಯಲ್ಲಿ ಚರ್ಚೆಗೆ ಒಳಗಾಗಿದ್ದ ಸಂದರ್ಭವೂ ಆಗಿದ್ದವು. ಈ ಮಾದರಿಯ ಚರ್ಚೆಗಳು ಭಾರತವನ್ನು ಬ್ರಿಟಿಷರಿಗೂ ಪೂರ್ವದಲ್ಲಿ ಅಥವಾ ಬ್ರಿಟಿಷರು ಆರಂಭದಲ್ಲಿ ಆಳ್ವಿಕೆ ಮಾಡಿದ ದಿನಗಳಲ್ಲಿಯೂ ಕಂಡುಬಂದಿರುವುದಿಲ್ಲ. ಬುದ್ಧ- ಬಸವರು ಈ ಕಾರ್ಯವನ್ನು ಮಾಡಿದರೂ ಸಹ ಕಾಲದ ಗರ್ಭದಲ್ಲಿ ಸಿಲುಕಿ ನೆಪತ್ಯಕ್ಕೆ ಸರಿದರು. ಆದರೆ ೧೭೯೯ರಲ್ಲಿ ಟಿಪ್ಪುಸುಲ್ತಾನ್‌ನ ಮರಣದ ನಂತರ ಇಡೀ ಭರತ ಖಂಡವನ್ನು ಬ್ರಿಟಿಷರು ತಮ್ಮ ಆಳ್ವಿಕೆಯ ತೋಳ್ತೆಕ್ಕೆಗೆ ತೆಗೆದುಕೊಂಡು ತಮ್ಮ ಸ್ವಾರ್ಥ ಸಾಧನೆಗಾಗಿಯೂ ಹಾಗೂ ಅಖಂಡ ಭಾರತದಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಹಿನ್ನಲೆಯಲ್ಲ್ಲಿ ಸಾಂಪ್ರದಾಯಕವಾಗಿಯೇ ಜಾರಿಯಲ್ಲಿದ್ದ ಬಾಲ್ಯವಿವಾಹ, ಸತಿಪದ್ಧತಿ, ವಿಧವೆಯರ ಪುನರ್ ವಿವಾಹ, ಸಾಮಾಜಿಕ ಹಿನ್ನಲೆಯ ಅಮಾನವೀಯ ಬದುಕಿನ ಸ್ಥಿತಿಗತಿ, ಜಾತಿ ಪದ್ಧತಿ ಹಾಗೂ ಏಕಮುಖ ಜನಾಂಗವೇ ಶತಶತಮಾನಗಳಿಂದ ಶಿಕ್ಷಣವನ್ನು ತಮ್ಮ ಪಿತ್ರಾಜಿತ ಹಕ್ಕನ್ನಾಗಿಸಿಕೊಂಡಿದ್ದವರ ವಿರುದ್ಧ ಕಾನೂನುಗಳನ್ನು ರೂಪಿಸಿ, ಇವುಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಿಸಲು ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಂಡ ಕಾಲವೂ ಆಗಿತ್ತು. ಇಂತಹ ಪ್ರಗತಿಪರ ಚಿಂತನೆಗೆ ಭಾರತವು ಒಳಗಾಗುತ್ತಿದ್ದ ಪರ್ವಕಾಲದಲ್ಲಿಯೇ ಅಂಬೇಡ್ಕರ್ ಅವರ ಜನನವಾಯಿತು.
ಅಂದು ಚಾರಿತ್ರಿಕವಾಗಿ ಆರ್ಯರ ಉಪಟಳವನ್ನು ಸಹಿಸಲಾರದೆ ಭಾರತ ಮತ್ತು ಭಾರತೀಯರನ್ನು ಉಳಿಸಲು ಅಂದೆ ಪ್ರಜಾಪ್ರಭುತ್ವ ಮಾದರಿಯ ಸಮ ಸಮಾಜವನ್ನು ನಿರ್ಮಾಣ ಮಾಡಲು ಬುದ್ಧ ಜನಿಸಿದಂತೆ – ಕರ್ನಾಟಕಕ್ಕೆ ರಾಮಾನುಜಚಾರ್ಯರ ಪ್ರವೇಶ ಆದ ಮೇಲೆ ಇಡೀ ಕನ್ನಡ ನಾಡು ಶ್ರೀವೈಷ್ಣವಿ ಕರಣ ಗೊಳಿಸಲು ಪ್ರಭುತ್ವವನ್ನೇ ತಮ್ಮ ತೋಳ್ ತೆಕ್ಕೆಗೆ ತೆಗೆದುಕೊಂಡು ಬೃಹತ್ ವೈಷ್ಣವ ದೇವಾಲಯಗಳ ನಿರ್ಮಾಣ ಹಾಗೂ ಬಹುದೊಡ್ಡ ಜನವರ್ಗವನ್ನು ಶ್ರೀವೈಷ್ಣವಿ ಕಾರಣಗೊಳಿಸಿ ಸಾಮಾಜಿಕ ಹಾಗೂ ಧಾರ್ಮಿಕ ಅಂಧಕಾರದ ಕೊಂಪೆನ್ನಾಗಿ ನಿರ್ಮಾಣ ಮಾಡಿದವರ ವಿರುದ್ಧ ಪ್ರಜಾಪ್ರಭುತ್ವದ ಕಲ್ಪನೆಯನ್ನು ಹುಟ್ಟಿದ ಬಸವಣ್ಣ ಹಾಗೂ ಬಸವದಿ ಶರಣ ಶರಣೆಯರ ರೀತಿಯಲ್ಲಿ – ಅಂಬೇಡ್ಕರ್ ಅವರು ಸಾಂಪ್ರದಾಯಿಕವಾಗಿ ಭಾರತದಲ್ಲಿ ಇದ್ದಂತಹ ಧಾರ್ಮಿಕ ಹಾಗೂ ಸಾಮಾಜಿಕ ಅಸ್ಪೃಶ್ಯತೆಯನ್ನು ಈ ರಾಷ್ಟ್ರದ ಮೂಲನಿವಾಸಿಗಳ ವಾರಸುದಾರರಾಗಿ ಜನಿಸಿ, ಈ ನೆಲದ ಸಾಮಾಜಿಕ ಹಾಗೂ ಧಾರ್ಮಿಕ ಹಿನ್ನಲೆಯ ಕಟ್ಟುಪಾಡುಗಳ ಇಕ್ಕಟ್ಟು ಮತ್ತು ಬಿಕ್ಕಟ್ಟುಗಳನ್ನು ಸ್ವತಹ ಅನುಭವಿಸಿ, ಈ ರಾಷ್ಟ್ರದ ಮೂಲನಿವಾಸಿಯಾದರು ಸಹ ತಾನು ಮತ್ತು ತನ್ನ ಜನ ಈ ರಾಷ್ಟ್ರದಲ್ಲಿ ಅನುಭವಿಸುತ್ತಿರುವ ಅಸ್ವಾತಂತ್ರ್ಯ ನೀತಿಯ ವಿರುದ್ಧ ಬೌದ್ಧಿಕವಾಗಿ ಸಿಡಿದೇಳುವ ಗಟ್ಟಿತನವನ್ನು ಮೈಗೂಡಿಸಿಕೊಂಡರು. ಇದಕ್ಕೆ ಮುಖ್ಯ ಕಾರಣ ಅಂಬೇಡ್ಕರ್ ಅವರು ಬಾಲ್ಯದಲ್ಲಿಯೇ ತನ್ನ ಓದು- ಚಿಂತನೆ ಹಾಗೂ ಹೋರಾಟಗಳು ಯಾರ ಪರವಾಗಿ ಮತ್ತು ಯಾರ ವಿರುದ್ಧವಾಗಿ ಎಂಬುದನ್ನು ಸ್ಪಷ್ಟಪಡಿಸಿಕೊಂಡಿದ್ದು ಕಾರಣವಾಗಿತು. ಈ ಮಾತಿನ ಅರ್ಥವೇ ಅವರೇ ಹೇಳಿರುವ ಹಾಗೆ ’ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು’ ಎಂಬ ಮಹತ್ವದ ಮಾತಿಗೆ ಸಾಕ್ಷಿಯಾಗಿದೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತವನ್ನು ನೋಡಿದ ಪರಿ ಕೇವಲ ಭೂಪಟದ ಭಾರತವಾಗಿರಲಿಲ್ಲ – ಬದಲಾಗಿ, ಸಮಗ್ರ ಭಾರತದ ಭೂಪ್ರದೇಶದ ಭಾರತವಾಗಿತ್ತು. ಭೂಪಟದ ಭಾರತ ಬದಲಾವಣೆಯನ್ನು ಬಯಸದೆ ಕೇವಲ ಸಾಂಪ್ರದಾಯಿಕವಾಗಿ, ಏಕಮುಖವಾಗಿ ಚಿಂತಿಸಲು ಬಯಸಿದರೆ, ಭೂಪ್ರದೇಶದ ಭಾರತ – ’ಭಾರತ, ಭಾರತೀಯ ಹಾಗೂ ಭಾರತೀಯತೆ’ ಯನ್ನು ಅನಾವರಣಗೊಳಿ ಸುವುದಾಗಿತ್ತು. ಅಂಬೇಡ್ಕರ್ ಅವರ ಗಟ್ಟಿತನದ ಜ್ಞಾನದ ಭಾರತದಲ್ಲಿ ಮಾತನಾಡುವವರಿದ್ದಾರೆ – ಮಾತು ಕಲಿಯುವವರಿದ್ದಾರೆ ಹಾಗೂ ಮಾತು ಕಲಿಸುವವರಿದ್ದಾರೆ. ಇಷ್ಟು ಮಾತನಾಡಿಸುವ ಕಾರ್ಯವನ್ನು ಮಾಡಿದ್ದು ಎರಡು ಸಾವಿರ ವರ್ಷಗಳಿಂದ ಮಾತು ಬಂದರೂ, ಮೂಕರನ್ನಾಗಿಸಿದವರ – ಶ್ರಮಪಟ್ಟರೂ ಶ್ರಮಕ್ಕೆ ಪ್ರತಿಫಲ ನೀಡದವರ ವಿರುದ್ಧವಾಗಿತ್ತು ಎಂಬುವುದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು . ಈ ಮಾದರಿಯಲ್ಲಿ ಶತಶತಮಾನಗಳಿಂದ ಅರಿಯದೆ ಇದ್ದ ಅಜ್ಞಾನದಿಂದ ಕಶ್ಮಲ ಗೊಂಡಿದ್ದ ನದಿಯ ನೀರನ್ನು ಜ್ಞಾನ ಎಂಬ ಶುದ್ಧವಾದ ವಾಸ್ತವದ ಅಸ್ತ್ರದಿಂದ ಶುದ್ಧಗೊಳಿಸಿ – ವಿಶಾಲ ಭಾರತದ ಎಲ್ಲಾ ನರನಾಡಿಗಳಲ್ಲೂ ಹರಿಯುವಂತೆ ಮಾಡಿದ ಧೀಮಂತ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರು. ಅದಕ್ಕಾಗಿಯೇ ಇವರನ್ನು ಭಾರತದ ಸುಪುತ್ರ – ಜ್ಞಾನದ ಶಿಖರ ಎಂದು ಕರೆಯುವುದು.
ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶ-ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದು ಭಾರತಕ್ಕೆ ಬಂದರು. ಏಕೆಂದರೆ ಭಾರತದ ಕಾಯಕ ಸಿದ್ಧಾಂತದ ಹಿನ್ನಲೆಯ ಬಹುಜನ ತಮ್ಮ ಮೂಲಭೂತ ಹಕ್ಕುಗಳನ್ನು ಕಳೆದುಕೊಂಡದ್ದು ಭಾರತದಲ್ಲಿಯೇ ಎಂಬುವುದು ಸ್ಪಷ್ಟವಾಗಿ ತಿಳಿದಿದ್ದ ಕಾರಣಕ್ಕಾಗಿ . ಈ ಮೂಲಭೂತ ಹಕ್ಕುಗಳ ಕಸಿಯುವಿಕೆಗೆ ಯಾವ ವಿದೇಶಿ ಧರ್ಮ ಅಥವಾ ಯಾವ ವಿದೇಶಿ ಪ್ರಭುತ್ವವೂ ಕಾರಣವಲ್ಲ ಎಂಬುದು ಸ್ಪಷ್ಟವಾಗಿ ತಿಳಿದಿತ್ತು. ಅದಕ್ಕಾಗಿ ಅವರು ತನ್ನ ಜನರಿಗೆ ದೊರಕಲೇಬೇಕಾದ ಮೂಲಭೂತ ಹಕ್ಕುಗಳನ್ನು ಒದಗಿಸಲು ಯಾವುದೇ ಕಾರಣಕ್ಕೂ ವಿದೇಶಿ ನೆಲದಲ್ಲಿ ಚಳುವಳಿಗಳನ್ನಾಗಲಿ, ಮುಷ್ಕರಗಳನ್ನಾಗಲಿ ಮಾಡಲಿಲ್ಲ, ಬದಲಿಗೆ ಅವರು ಕೈಗೊಂಡಿದ್ದು ಭಾರತದ ನೆಲದಲ್ಲಿಯೇ. ಇದು ಅವರು ಭಾರತದ ಭೂಪ್ರದೇಶವನ್ನು ಗ್ರಹಿಸಿದ ಒಡಲಾಳದ ಗಟ್ಟಿತನದ ಬೌದ್ಧಿಕ ಅಂಶ. ಕೆಲವರು ತಮ್ಮ ಕೈ ಬೆರಳಿನ ಉಂಗುರವನ್ನು ( ಉಂಗುರ ಎಂದರೆ : ಭಾರತದಲ್ಲಿ ಇರುವ ಅಸ್ಪೃಶ್ಯತೆ – ವರ್ಣಭೇದ ನೀತಿ – ಜಾತೀಯತೆ – ಧಾರ್ಮಿಕ ಅಂಧಕಾರ ಇತ್ಯಾದಿ ಇತ್ಯಾದಿ ) ಭಾರತದ ನೆಲದಲ್ಲಿ ಕಳೆದುಕೊಂಡು, ಅದನ್ನು ಪತ್ತೆಹಚ್ಚಲು ವಿದೇಶಿ ನೆಲದಲ್ಲಿ ಹುಡುಕಾಟ ನಡೆಸಿರುವುದಕ್ಕೆ ಸಾಕ್ಷಿ ಇದೆ. ಆದರೆ ಅಂಬೇಡ್ಕರ್ ಅವರು ಭಾರತದ ವಾರಸುದಾರರಾಗಿ, ತಮ್ಮ ಹಾಗೂ ತಮ್ಮವರ ಕೈಬೆರಳಿನ ಉಂಗುರವನ್ನು ಯಾರು ಕಸಿದುಕೊಂಡರು ಎಂಬುವುದು ಸ್ಪಷ್ಟವಾಗಿ ತಿಳಿದ ಕಾರಣಕ್ಕಾಗಿ ಎರಡು ಸಾವಿರ ವರ್ಷಗಳಿಂದ ಕಸಿದುಕೊಂಡಿದ್ದವರಿಂದಲೇ ನ್ಯಾಯಯುತವಾಗಿ ಹೋರಾಡಿ- ಸಂವಿಧಾನಾತ್ಮಕವಾಗಿ ಪಡೆಯಲು ಭಾರತದ ನೆಲೆದಲ್ಲಿಯೇ ಬೌದ್ದಿಕ ಮುಷ್ಕರವನ್ನೂಡಿ ಯಶಸ್ವಿಯಾದರು. ಇದು ಅಪ್ಪಟ ಭಾರತೀಯನ ಸಾಂಸ್ಕೃತಿಕ ದಿಗ್ವಿಜಯ ಎಂದು ಹೇಳಿದರೆ ತಪ್ಪಾಗದು.
ಇದರ ಮುಂದುವರಿದ ಭಾಗವೇ ಭಾರತದಲ್ಲಿ ಶತಶತಮಾನಗಳಿಂದ ಜಾರಿಯಲ್ಲಿದ್ದ, ಇಂದಿಗೂ ಕಟಿಬದ್ದವಾಗಿ ಸ್ಪೃಶ್ಯರ ಮನಸ್ಸಿನಲ್ಲಿ ಜಾರಿಯಲ್ಲಿರುವ “ಜಲಾಸ್ಪೃಶ್ಯತೆ” ಯ ವಿರುದ್ಧ ಭಾರತೀಯತೆಯ ಹಿನ್ನಲೆಯಲ್ಲಿ ಸೈದ್ದಾಂತಿಕ ಚಳವಳಿ ಮಾಡಿ ತಮ್ಮ ಬೌದ್ಧಿಕ ಚಳುವಳಿಗೆ ಮುಂದಾದದ್ದು .1920 ಮಾರ್ಚ್ 20 ರಂದು ಅಂಬೇಡ್ಕರ್ ಅವರು ಮಹಾರಾಷ್ಟ್ರದ ಮಹಾಡ್ ಕೆರೆ ನೀರನ್ನು, ಪ್ರತಿಯೊಬ್ಬ ಮಾನವ ಹಾಗೂ ಸಕಲ ಜೀವಿಗಳು ಬದುಕಲು ಅವಶ್ಯಕವಾದ ಮಾನವತ್ವವನ್ನು ಬಯಸುವ ಜೀವಸೆಲೆಯನ್ನು ಎರಡು ಬೊಗಸೆಗಳಿಂದ ತನ್ನ ಲಕ್ಷಾಂತರ ಅನುಯಾಯಿಗಳೊಂದಿಗೆ ಮುಂಚೂಣಿ ನಾಯಕರಾಗಿ ಭಾರತಮಾತೆ ಒಡಲಿನ ತನ್ನೆರಡು ಕೈಗಳಿಂದ ಮೊಗೆದು ಕುಡಿದರು- ತನ್ನವರಿಗೂ ಕುಡಿಸಿದರು. ಇದು ಎರಡು ಸಾವಿರ ವರ್ಷಗಳ ಸಾಂಪ್ರದಾಯಿಕ ಭಾರತದ ಚರಿತ್ರೆಯ ವಿರುದ್ದದ ವಾಸ್ತವದ ಚರಿತ್ರೆಗೆ ವಸ್ತುನಿಷ್ಠವಾದ ಮುನ್ನುಡಿ ಬರೆದಂತಾಯಿತು. ಏಕೆಂದರೆ ಕುಡಿಯುವ ನೀರಿಗೂ ಧಾರ್ಮಿಕ ಹಾಗೂ ಸಾಮಾಜಿಕ ನಿರ್ಬಂಧಗಳನ್ನೇರಿ ನೀರನ್ನು ಸಹ ಜಲಾಸ್ಪೃಶ್ಯತೆಯ ಚೌಕಟ್ಟಿಗೆ ಒಳಪಡಿಸಿದ ದೇಶ ನಮ್ಮದಲ್ಲವೇ?. ಇಂತಹ ಕುಡಿಯುವ ನೀರಿಗಾಗಿ ಪ್ರಪಂಚದಲ್ಲಿ ಬಹುದೊಡ್ಡ ಚಳವಳಿ ನಡೆದಿರುವುದು ಸತ್ಯ ಎನ್ನುವುದಾದರೆ ಅದು ಅಂಬೇಡ್ಕರ್ ಅವರು ಹೂಡಿದ ಮಹಾಡ್ ಕೆರೆ ಚಳುವಳಿಯೇ ಆಗಿದೆ. ಅದು ನಡೆದದ್ದು ಭಾರತದಂತಹ ಸ್ವ ಘೋಷಿತ ಸಾಂಸ್ಕೃತಿಕ ದೇಶದಲ್ಲಿ ಎಂಬುವುದೇ ದುರಂತ.
ಭಾರತ ಬಹು ಪ್ರಾಚೀನ ಕಾಲದಿಂದಲೂ ದೇವಾಲಯಗಳ ನಾಡು ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಆದರೆ ಈ ದೇವಾಲಯಗಳನ್ನು ತಮ್ಮ ಶ್ರಮದ ಮೂಲಕ ಕಟ್ಟಿದ ಈ ಈ ನೆಲದ ಮೂಲ ನಿವಾಸಿಗಳನ್ನೇ ಅವರ ಹುಟ್ಟು – ವಾಸಿಸುವ ಸ್ಥಳ – ಮಾಡುವ ಕಾಯಕ – ವಾಸಿಸುವ ಸ್ಥಳ – ಸೇವಿಸುವ ಆಹಾರದಿಂದ ಅಸ್ಪೃಶ್ಯನಾಗಿಸಿ ಇವರು ದೇವಾಲಯದೊಳಗೆ ಪ್ರವೇಶ ಮಾಡಬಾರದು ಹಾಗೂ ಮಾಡಿಸಬಾರದು ಎಂಬ ಕಠೋರ ಅನೀತಿಯ ನಿಯಮವನ್ನು ಧಿಕ್ಕರಿಸಿ ದೇವಾಲಯದೊಳಗೆ ಹೋಗುವ ಚಳವಳಿಯನ್ನು ೧೯೩೦ರಲ್ಲಿ ಕಾಳರಾಮ್‌ಪುರ ದೇವಸ್ಥಾನದ ಪ್ರವೇಶವನ್ನು ತಾವು ಮತ್ತು ತಮ್ಮೊಂದಿಗಿನ ಲಕ್ಷಾಂತರ ಜನರನ್ನು ದೇವಾಲಯದ ಪ್ರವೇಶ ಮಾಡಿಸಿ ಈ ನೆಲದ ಮೂಲನಿವಾಸಿಗಳು ಸಹ ತಮ್ಮ ನೆಲದ ದೇವಾಲಯಗಳ ಪ್ರವೇಶ ಮಾಡಲೇಬೇಕು ಎಂಬ ತತ್ವ ಸಿದ್ಧಾಂತಕ್ಕೆ ಮುನ್ನುಡಿ ಬರೆದರು. ಈ ಎರಡು ಘಟನೆಗಳೂ ಸಹ ಅಂಬೇಡ್ಕರ್ ಅವರು ಕೇವಲ “ಥಿಯರಿಯ” ( ಬರವಣಿಗೆಯ ) ರೂಪದಲ್ಲಿ ಮಾಡಿದ್ದರೆ ಭಾರತ ಮತ್ತು ಭಾರತೀಯರನ್ನು ಎಚ್ಚರಿಸುತ್ತಿರಲಿಲ್ಲ, ಬದಲಿಗೆ ಅವರು ಮಾಡಿದ್ದು “ಪ್ರಾಕ್ಟಿಕಲ್” ( ಸಾಮಾಜಿಕ ಶಸ್ತ್ರ ಚಿಕಿತ್ಸೆಯ ) ರೂಪದಲ್ಲಿ ಎಂಬುದನ್ನು ಮರೆಯಬಾರದು. ಇದಕ್ಕೆ ಪೂರಕ ಎಂಬುವಂತೆ ಬಸವಣ್ಣನವರ ವಚನ ಚಳವಳಿ ಒಂದರ್ಥದಲ್ಲಿ ಬೌದ್ಧಿಕ ಥಿಯರಿಯ ರೂಪವಾದರೇ – ಅವರ ಅಂತರ್ಜಾತಿ ವಿವಾಹಕ್ಕೆ ಮುಂದಾದ ಸಂದರ್ಭ ಪ್ರಾಕ್ಟಿಕಲ್ ರೂಪದ್ದು. ಈ ಪ್ರಾಕ್ಟಿಕಲ್ ರೂಪಗಳೇ ಅನೇಕ ಪಲ್ಲಟಗಳಿಗೆ ಕಾರಣವಾದವು ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ.
ಮೇಲಿನ ಈ ವಸ್ತುನಿಷ್ಠ ಆಲೋಚನೆಯೇ ಅಂಬೇಡ್ಕರ್ ಅವರಲ್ಲಿ ಭಾರತೀಯತೆಯನ್ನು ಇನ್ನು ಹೆಚ್ಚು ಹೆಚ್ಚು ಅನಾವರಣಗೊಳಿಸಿತು. ಭಾರತ ಮತ್ತು ಭಾರತೀಯತೆ ಕುರಿತು ಸಮಗ್ರ ಅಧ್ಯಯನಕ್ಕೆ ಹಗಲಿರುಳು ಎನ್ನದೆ ತಮ್ಮನ್ನು ತೊಡಗಿಸಿಕೊಂಡರು. ಭಾರತದ ಸಮಗ್ರ ಪ್ರಭುತ್ವದ ಚರಿತ್ರೆಯನ್ನು ಅರ್ಥೈಸಿಕೊಂಡು ಅದರ ವೈಭವದೊಳಗೆ ಕಳೆದುಹೋದ ಪ್ರಜೆಗಳ ಸಾಂಸ್ಕೃತಿಕ ಚರಿತ್ರೆಯನ್ನು ಸಂಶೋಧನಾತ್ಮಕವಾಗಿ ವಾಸ್ತವದ ನೆಲೆಯಲ್ಲಿ ಹುಡುಕಲಾರಂಭಿಸಿದರು. ಹೀಗೆ ಆರಂಭಗೊಂಡ ಇವರ ಸಮಗ್ರ ಬರವಣಿಗೆ ಸಾಂಪ್ರದಾಯಿಕವಾದಿಗಳು – ಪುರಾಣಮಿಶ್ರಿತವಾಗಿ – ಅವರೇ ಕಲ್ಪಿಸಿಕೊಂಡ ಸುಂದರವಾದ ಪ್ರಕೃತಿಯ ಮಡಿಲಿನಲ್ಲಿ ಸೌಮ್ಯ ಸ್ವರೂಪದ ಪ್ರಾಣಿ-ಪಕ್ಷಿಗಳನ್ನು ಜೊತೆಗೂಡಿಸಿಕೊಂಡು – ನದಿ ಸರೋವರಗಳ ದಂಡೆಯಲ್ಲಿ ನವಿಲುಗರಿಯನ್ನು ಹಿಡಿದುಕೊಂಡು ತೀರ್ಥವನ್ನೇ ಅಜ್ಜಿಕೊಂಡು ಬರೆದವರ ಪುರಾಣಮಿಶ್ರಿತ ವೈಭವದ ಚರಿತ್ರೆಯ ವಿರುದ್ಧವಾಗಿತ್ತೇ ಹೊರತು, ಜನಸಾಮಾನ್ಯರ ಜೀವನದ ಭವಣೆಗಳನ್ನು ಅನಾವರಣಗೊಳಿಸುವುದರ ಜೊತೆಗೆ ಈ ನೆಲದಲ್ಲಿ ಬದುಕಲು ವಿಧಿಸಲ್ಟಟ್ಟಿದ್ದ ಅನೇಕ ಸಾಮಾಜಿಕ ಸಂಕೋಲೆಗೊಳಗೆ ಸಿಲುಕಿ ದಿನಪೂರ್ತಿ ದುಡಿದರೂ ಹಸಿವಿನಿಂದ ಮಲಗಿದವರ ಪರವಾಗಿ ಬೆವರನ್ನೇ ಅಜ್ಜಿಕೊಂಡು ಬರೆದ ಚರಿತ್ರೆಯೇ ಆಗಿತ್ತು. ಈ ಚರಿತ್ರೆಯನ್ನು ಬರೆಯಲು ಅಂಬೇಡ್ಕರ್ ಅವರು ತಮ್ಮ ಹತ್ತು ಬೆರಳನ್ನು ಭೂಮಿಗೆ ಊರಿ ಬರೆದ ಕಾರಣಕ್ಕಾಗಿ ಇದು ವಾಸ್ತವದ ಚರಿತ್ರಿಯಾಗಿ ನಮ್ಮ ನಡುವೆ ಕಂಗೊಳಿಸುತ್ತಿದೆ.
ಇಂತಹ ಅಂಶಗಳನ್ನು 1917 ರಲ್ಲಿ ’ಭಾರತದಲ್ಲಿ ಸಾಂಪ್ರದಾಯ’ ಎಂಬ ಪುಸ್ತಕವನ್ನು ಬರೆದು ಪ್ರಕಟಿಸುವುದರ ಮೂಲಕ ಪ್ರಪ್ರಥಮವಾಗಿ ಅನಾವರಣಗೊಳಿಸಿ, ಕಡೆಯದಾಗಿ ಇವರು 1956 ರಲ್ಲಿ ಬರೆದು ಮುಗಿಸಿ ಅವರ ನಿಧನದ ನಂತರ 1957ರಲ್ಲಿ ಪ್ರಕಟಗೊಂಡ ’ಬುದ್ಧ ಮತ್ತು ಆತನ ಧಮ್ಮ’ ಕೃತಿಯವರೆಗೂ ಎಲ್ಲೂ ಜಾಡು ತಪ್ಪದೇ ತಮ್ಮ ದೃಷ್ಟಿಕೋನವನ್ನು ಯಥಾವತ್ತಾಗಿ ಕಾಪಾಡಿಕೊಂಡು ಬಂದಿರುವುದಕ್ಕೆ ಅವರ ಬೌದ್ಧಿಕ ನಿಲುವೇ ಕಾರಣವಾಗಿದೆ. ಎರಡು ಸಾವಿರ ವರ್ಷಗಳಿಂದ ಅಸಂಪ್ರದಾಯಿಕ ಹಿನ್ನಲೆಯಲ್ಲಿ – ದೇವರು ದೇವಾಲಯಗಳ ಹೆಸರಿನಲ್ಲಿ ಅಬೌದ್ಧಿಕವಾಗಿಯೇ ಬೆಳೆದು ನಿಂತಿದ್ದ ಬೃಹತ್ ಜಾಲಿಗಿಡಗಳು ತುಂಬಿದ ರಸ್ತೆಗೆ ಸ್ವತಃ ಅಂಬೇಡ್ಕರ್‌ರವರೇ ಬೌದ್ದಿಕತೆಯ ರಸ್ತೆಯನ್ನು ನಿರ್ಮಾಣ ಮಾಡಲು ಏಕಾಂಗಿಯಾಗಿ ಮುಂದಾದರು. ಈ ರಸ್ತೆಯನ್ನು ಶುದ್ದಗೊಳಿಸಲು ಅವರು ಹಿಡಿದುಕೊಂಡ ಅಸ್ತ್ರವೇ ಬೌದ್ದಿಕತೆಯ ಸಂಕೇತವಾಗಿರುವ ಲೇಖನಿ ಎಂಬ ಖಡ್ಗವನ್ನು. ಈ ಲೇಖನಿ ಎಂಬ ಖಡ್ಗ ಬಾಬಾಸಾಹೇಬರಿಗೆ ಎಂದೆಂದಿಗೂ ಶಾಂತಿಯ ಸಂಕೇತವಾಗಿತ್ತೇ ಹೊರೆತು ಅಶಾಂತಿಯ ಮಾರ್ಗದ್ದಾಗಿರಲಿಲ್ಲ ಎಂಬುವುದಕ್ಕೆ ಅವರ ಬರವಣಿಗೆ ಹಾಗೂ ಹೋರಾಟದ ಮಾದರಿಯೇ ಸಾಕ್ಷಿಯಾಗಿದೆ. ಇದು ಅಂಬೇಡ್ಕರ್ ಅವರ “ರಾಷ್ಟ್ರೀಯತೆ” ಯ ಸಂಕೇತವು ಆಗಿದೆ.
1917 ರಲ್ಲಿ ಪ್ರಕಟಗೊಂಡ ’ಭಾರತದಲ್ಲಿ ಸಾಂಪ್ರದಾಯ’ ಎಂಬ ಕೃತಿಯು ನಾನು ಮೇಲೆ ಉಲ್ಲೇಖಿಸಿದ ಹಾಗೆ ಭಾರತದ ಸಾಂಪ್ರದಾಯಿಕ ಚರಿತ್ರೆಯ ವಿರುದ್ಧದ ಚರಿತ್ರೆಗೆ ಮುನ್ನುಡಿ ಬರೆದಂತಿದೆ. ಈ ಕೃತಿಯಲ್ಲಿಯೇ ಅಂಬೇಡ್ಕರ್ ಅವರು ಧರ್ಮದ ಹಿನ್ನೆಲೆಯಲ್ಲಿ ಚಲನೆಗೊಳ್ಳಬೇಕಾದ ಜಾತಿ ಮತ್ತು ಸಮಾಜ, ಹೇಗೆ ಧಾರ್ಮಿಕತೆಯ ಸಂಕೋಲೆಗೆ ಸಿಲುಕಿ ಜಾತಿ ಮತ್ತು ಸಮಾಜದ ಹಿನ್ನೆಲೆಯಲ್ಲಿ ತಟಸ್ಥಗೊಂಡಿತು ಎಂಬುದನ್ನು ದಾಖಲೆ ಸಮೇತ ವಿವರಿಸಲು ಮುಂದಾಗುತ್ತಾರೆ. ಈ ಕೃತಿಯನ್ನು ರಚನೆ ಮಾಡುವುದಕ್ಕಾಗಿ ಅಂಬೇಡ್ಕರ್ ಅವರು ಸಂಸ್ಕೃತವನ್ನು ಅಧ್ಯಯನ ಮಾಡಲು ಅಸ್ಪೃಶ್ಯರಿಗೆ ಭಾರತದಲ್ಲಿ ಅವಕಾಶವಿಲ್ಲದಿರುವುದನ್ನು ಮನಗಂಡು ಜರ್ಮನಿ ದೇಶಕ್ಕೆ ಹೋಗಿ ಅಲ್ಲಿನ ವಿದ್ವಾಂಸರಿಂದ ಸಂಸ್ಕೃತವನ್ನು ಗಂಭೀರವಾಗಿ ಅಧ್ಯಯನ ಮಾಡಿ, ಮನುಸ್ಮೃತಿ ಮತ್ತು ಶುಕ್ರನೀತಿ ಎಂಬ ಸಂಸ್ಕೃತದ ಸಂಪ್ರದಾಯಿಕವಾದಿ ಗ್ರಂಥಗಳನ್ನು ಗಂಭೀರವಾಗಿ ಅಭ್ಯಾಸ ಮಾಡಿ, ಅವುಗಳು ಏಕಮುಖವಾದ – ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನರ ಸಂಸ್ಕೃತಿಯನ್ನು ಅನಾವರಣಗೊಳಿಸುವ ನೀತಿಯನ್ನು ಹೊರಪ್ರಪಂಚಕ್ಕೆ ಆಚರಣೆ ಮಾಡುತ್ತಿದ್ದವರಿಗೆ ಹಾಗೂ ಅವರ ಆಚರಣೆಗೆ ಒಳಗಾಗುತ್ತಿದ್ದವರಿಗೆ ಮನಮುಟ್ಟುವಂತೆ ಅನಾವರಣಗೊಳಿಸಿದರು. ಹಾಗೂ ಅವುಗಳ ವಿರುದ್ಧವೇ ಬಹು ಜನಮುಖಿಯಾಗಿ ಈ ಕೃತಿಯನ್ನು ರಚಿಸಿ ನಾನು ಈ ದೇಶದ ಬೌದ್ಧಿಕ ವಾರಸುದಾರ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು. ಈ ಕೃತಿಯಲ್ಲಿಯೇ ಅಂಬೇಡ್ಕರ್ ಅವರ ಭಾರತ ಹಾಗೂ ಭಾರತೀಯತೆಯ ಕುರಿತ ಅಪಾರ ಜ್ಞಾನ ವ್ಯಕ್ತವಾಗುತ್ತದೆ.
ಭಾರತದಲ್ಲಿ ಬ್ರಿಟಿಷರು ಆಳ್ವಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಂತಹ ಆರ್ಥಿಕ ಸಮಸ್ಯೆ ಮತ್ತು ಅವುಗಳ ಪರಿಹಾರಕ್ಕೆ ಸಂಬಂಧಿಸಿದಂತೆ 2932 ರಲ್ಲಿ ’ದಿ ಪ್ರಾಬ್ಲಮ್ಸ್ ಆಫ್ ರೂಪಿಸ್’ (ಹಣದ ಸಮಸ್ಯೆ) ಎಂಬ ಕೃತಿಯನ್ನು ರಚಿಸಿದರು. ಈ ಕೃತಿಯ ಆಧಾರದ ಮೇಲೆಯೇ 1935 ರಲ್ಲಿ ಭಾರತದಲ್ಲಿ ’ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ’ ಆರಂಭಗೊಳ್ಳಲು ಪ್ರೇರಣೆಯಾಯಿತು. ಈ ಕೃತಿ ಹಾಗೂ ಇದರ ಆಧಾರದ ಮೇಲೆ ಸ್ಥಾಪಿತಗೊಂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದಾಗಿ ಭಾರತದ ಆರ್ಥಿಕತೆಯ ದಿಕ್ಕೆ ಸ್ವಾವಲಂಬನೆಡೆಗೆ ಮುನ್ನಡೆಯಿತು. ಪ್ರಬುದ್ಧ ಭಾರತದ ನಿರ್ಮಾಣಕ್ಕೆ ಇಂದು ಇದೇ ಆಧಾರಸ್ತಂಭವಾಗಿದೆ. ಇದಕ್ಕೆ ಪೂರಕವಾಗಿ 1926 ರಲ್ಲಿ ’ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಆರ್ಥಿಕ ವ್ಯವಸ್ಥೆಯ ಇತಿಹಾಸ’ ಎಂಬ ಕೃತಿಯನ್ನು ಬರೆದು ನಮ್ಮ ದೇಶವನ್ನು ಆಳ್ವಿಕೆ ಮಾಡುತ್ತಿದ್ದ ಬ್ರಿಟಿಷರಿಗೂ ಸಹ ಭಾರತದ ಜನ ಶ್ರಮಜೀವಿಗಳಾದರೂ ಸಹ ಅವರು ಎದುರಿಸುತ್ತಿರುವ ಆರ್ಥಿಕ ಸಂಪನ್ಮೂಲಗಳ ಕೊರತೆಯ ಸಾಧಕ-ಬಾಧಕಗಳನ್ನು ವಸ್ತುನಿಷ್ಟವಾಗಿ ತಿಳಿಸಿದರು. ಆ ಮೂಲಕ ಬ್ರಿಟಿಷರಿಗೂ ಸಹ ಇವರು ಭಾರತದ ಪ್ರಬುದ್ಧ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಕಾರಣವಾಯಿತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಈ ಪ್ರೌಢಿಮೆಗೆ ಇಂಗ್ಲೀಷ್ ಭಾಷೆಯ ಅಪಾರಜ್ಞಾನ ಹಾಗೂ ವಿದ್ಯುತ್ ಪೂರ್ಣ ಪ್ರೌಢಿಮೆಯು ಕಾರಣವಾಯಿತು. ವಿದ್ಯುತ್ ಪೂರ್ಣವಾದ ಸಂಸ್ಕೃತವನ್ನು ಇವರು ಕಲಿತಿದ್ದರೆ ಈ ಕಾಯಕ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ನಾವು ಅರಿಯಬೇಕಾಗಿದೆ.
ಮತ್ತೆ ನಾನು ಹೇಳುವುದೆಂದರೆ….ಅಂಬೇಡ್ಕರ್ ಅವರು ಈ ಹಂತದಲ್ಲಿ ದೇವರ ಭಾಷೆ, ಧರ್ಮದ ಭಾಷೆ ಎಂದು ಏಕಮುಖವಾಗಿ ಚಲಿಸುತ್ತಿದ್ದ ಸಂಸ್ಕೃತ ಕಲಿತಿದ್ದರೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ನಾವು ಮರೆಯಬಾರದು. ( ಸಂಸ್ಕೃತವನ್ನು ದಲಿತರಿಗೆ ಈ ಭಾಷೆಯ ವಾರಸುದಾರರು ಧರ್ಮದ ಹಿನ್ನೆಲೆಯಲ್ಲಿ ಕಲಿಸಲು ಅಜ್ಞಾನದ ನಿರ್ಬಂಧನೆಗಳಿದ್ದವು ಎಂಬುದು ಬೇರೆ ಮಾತು ). ನಿಜಾರ್ಥದಲ್ಲಿ ಎರಡು ಸಾವಿರ ವರ್ಷಗಳಿಂದ ಭಾರತ ಹಾಗೂ ಭಾರತೀಯರನ್ನು “ಸಂಸ್ಕೃತ ” ಸಂಕುಚಿತಗೊಳಿಸಿದರೆ – ನೂರಾರು ವರ್ಷಗಳಿಂದ ಭಾರತಕ್ಕೆ ಆಗಮನ ಮಾಡಿದ “ಇಂಗ್ಲಿಷ್ ” ವಿಶಾಲತೆಗೊಳಿಸುವ ಮನೋ ಭೂಮಿಕೆಯನ್ನು ಸೃಷ್ಟಿ ಮಾಡಿತ್ತು. ಈ ಅಂಶವನ್ನು ವಿಶಾಲ ದೃಷ್ಟಿಯಿಂದ ಅರ್ಥೈಸಿಕೊಳ್ಳಬೇಕಾಗಿದೆ.
ಭಾರತದ ಸಾಮಾಜಿಕ ವ್ಯವಸ್ಥೆಯನ್ನು ತಳಸ್ಪರ್ಶಿಯವಾಗಿ ಮನಗಂಡಿದ್ದ ಅಂಬೇಡ್ಕರ್‌ರವರು 1936 ರಲ್ಲಿ ’ ಜಾತಿ ವಿನಾಶ ’ ಎಂಬ ಮಹತ್ವದ ಕೃತಿಯನ್ನು ಬರೆದರು. ಈ ಕೃತಿಯು ಭಾರತದಲ್ಲಿ ಕಾಯಕ ಸಿದ್ಧಾಂತದ ಹಿನ್ನೆಲೆಯಲ್ಲಿ ರೂಪಿತಗೊಂಡಿದ್ದ ಜಾತಿಗಳನ್ನು ಪುರಾಣದ ಮೂಲಕ ಧರ್ಮಿಕರಣಗೊಳಿಸಿ – ಅನೇಕ ಸಾಂಸ್ಕೃತಿಕ ಕಟ್ಟುಪಾಡುಗಳ ಒಳಗೆ ಸಿಲುಕಿಸಿ – ಅವರ ಮನ ಹಾಗೂ ಮನೆಯನ್ನು ಅಜ್ಞಾನದ ಸಂಕೋಲೆಗಳ ಎಂದೆಂದಿಗೂ ಬಿಡಿಸಲಾಗದ ಬಂಧನದಲ್ಲಿಟ್ಟಿದ್ದವರ ವಿರುದ್ಧ,, ವಾಸ್ತವ ಅಂಶಗಳೊಂದಿಗೆ ಗುರುತರ ವಾಗಿ ಬರೆದ ಕೃತಿಯಾಗಿತ್ತು. ಬಹು ಪ್ರಾಚೀನ ಕಾಲದಿಂದಲೂ ಸಾಂಪ್ರಾದಾಯಿಕ ಚರಿತ್ರೆಯನ್ನು ತನ್ನ ಒಡಲಿನಲ್ಲಿ ಅದುಮಿಕೊಂಡಿದ್ದ ಭಾರತಕ್ಕೆ ಈ ಕೃತಿಯ ಪ್ರವೇಶದಿಂದಾಗಿ ಅವರ ಸಾಂಪ್ರದಾಯಿಕ ಒಡಲು ಒಡೆದು ಬಹುಜನರು ಬಹುಮುಖವಾಗಿ ಚಿಂತಿಸಲು ಪ್ರೇರಣೆಯಾಯಿತು. ಮುಂದುವರೆದು ಈ ನೆಲದ ಜನ ತನ್ನ ನೆಲೆಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾರಣವಾಯಿತು. ಈ ದೃಷ್ಟಿಯಿಂದಲೇ ಹೇಳುವುದು ಅಂಬೇಡ್ಕರ್ ಅವರು ‘ನೀರಿನಲ್ಲಿ ಕರಗುವ ಬಂಡೆಯಲ್ಲ – ಬದಲಿಗೆ ಹರಿಯುವ ನೀರಿನ ಧಿಕ್ಕನ್ನೇ ಬದಲಾಯಿಸುವ – ಬದಲಾಯಿಸಿದ ಕರಗದ ಗಟ್ಟಿ ಬಂಡೆ “… ಎಂದು.
ಅಶೋಕನ ಕಾಲದಿಂದಲೂ ಇಂದಿನ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಟಿಬೆಟ್‌ಗಳು ಭಾರತದ ಅವಿಭಾಜ್ಯ ಅಂಗವೇ ಆಗಿದ್ದವು ಎಂಬುವುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಬೌದ್ಧ ಧರ್ಮದ ತತ್ವ ಸಿದ್ಧಾಂತದಂತೆ ಈ ಎಲ್ಲಾ ಸಮಗ್ರ ಭರತ ಖಂಡವನ್ನು ಆಳ್ವಿಕೆ ಮಾಡಿದ್ದು ಸಮ ಸಂಸ್ಕೃತಿಯ ಹರಿಕಾರ ಸಾಮ್ರಾಟ ಅಶೋಕನ ಸಾಮ್ರಾಜ್ಯವೇ ಎಂಬುದು ಸಹ ಚರಿತ್ರೆಯ ಅವಿಭಾಜ್ಯ ಅಂಗವೇ ಆಗಿದೆ. ಈ ಭೂಪ್ರದೇಶಗಳು ಕಾಲಾಂತರದಲ್ಲಿ ಪ್ರತ್ಯೇಕಗೊಂಡು ಸ್ವತಂತ್ರ ರಾಷ್ಟ್ರಗಳಾಗಿರುವುದಕ್ಕೂ ನಮ್ಮಲ್ಲಿ ನಿದರ್ಶನಗಳಿವೆ. 1947 ರವರೆಗೂ ಭಾರತದ ಅವಿಭಾಜ್ಯ ಅಂಗವೇ ಆಗಿದ್ದ ಇಂದಿನ ಪಾಕಿಸ್ತಾನದ ಇಕ್ಕಟ್ಟು-ಬಿಕ್ಕಟ್ಟುಗಳ ಕುರಿತು 1941 ರಲ್ಲಿಯೇ ಪಾಕಿಸ್ತಾನ ಅಥವಾ ಭಾರತದ ವಿಭಜನೆ ಎಂಬ ಮಹತ್ವ ಸಂಶೋಧನಾ ಕೃತಿಗಳನ್ನು ಬರೆದು ಪ್ರಕಟಿಸಿದರು. ಈ ಕೃತಿಯು ಪಾಕಿಸ್ತಾನ ಮತ್ತು ಭಾರತದ ಅವಿನಾಭಾವ ಸಂಬಂಧದ ಸಾಂಸ್ಕೃತಿಕ ವಿಷಯಗಳನ್ನು ಅನಾವರಣಗೊಳಿಸುವುದರ ಜೊತೆಗೆ ಒಕ್ಕೂಟ ವ್ಯವಸ್ಥೆಯಲ್ಲಿ ಇದರ ಪ್ರತ್ಯೇಕತೆಯ ಇಕ್ಕಟ್ಟು-ಬಿಕ್ಕಟ್ಟುಗಳನ್ನು ಭೌಗೋಳಿಕ ಹಾಗೂ ಸಾಂಸ್ಕೃತಿಕ ಹಿನ್ನಲೆಯಿಂದ ವಸ್ತುನಿಷ್ಠತೆಯ ಹಿನ್ನೆಲೆಯಲ್ಲಿ ತಿಳಿಸಿತು . ಒಂದರ್ಥದಲ್ಲಿ ಪಾಕಿಸ್ತಾನದ ಸ್ವಾತಂತ್ರ ಹೋರಾಟಗಾರರಿಗೆ ಮತ್ತು ಪ್ರತ್ಯೇಕತವಾದಿಗಳಿಗೂ ಈ ಸಂಶೋಧನಾತ್ಮಕ ಕೃತಿ ಚರ್ಚಾತ್ಮಕವಾದ ಕೃತಿಯಾಗಿಯೇ ಹೊರಹೊಮ್ಮಿತು.
1943 ರಲ್ಲಿ ಬರೆದ ಗಾಂಧಿ ಮತ್ತು ಅಸ್ಪೃಶ್ಯತೆ ನಿವಾರಣೆ ’ ಮತ್ತದೇ 1943 ರಲ್ಲಿ ಬರೆದ ರಾನಡೆ ಗಾಂಧಿ ಮತ್ತು ಜಿನ್ನಾ ಹಾಗೂ 1945 ರಲ್ಲಿ ಬರೆದ ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಏನು ಮಾಡಿದ್ದಾರೆ ಎಂಬ ಮೂರು ಕೃತಿಗಳು ಅಂಬೇಡ್ಕರ್‌ರವರು ಭಾರತ ಮತ್ತು ಈ ನೆಲದ ಮೂಲ ನಿವಾಸಿ ಭಾರತೀಯರನ್ನು ಸ್ವಾತಂತ್ರ ಚಳವಳಿಯ ಸಂದರ್ಭದಲ್ಲಿ ತನು ಮನಗಳನ್ನು ಅರ್ಪಿಸಿ ಭಾಗವಹಿಸಿದ್ದರು ಸಹ – ಹಾಗೂ ದುಡಿದು ಶ್ರಮದ ಮೂಲಕ ರಾಷ್ಟ್ರವನ್ನು ಕಟ್ಟಿತ್ತಿದ್ದರೂ ಸಹ ಜಾತಿಯ ಹಿನ್ನೆಲೆಯಲ್ಲಿ ಪರಿಗಣಿಸದೆ ಅವರನ್ನು ಅಸ್ಪೃಶ್ಯನಾಗಿಸಿದಂತೆ ಅವರ ಚರಿತ್ರೆ ಎನ್ನೋ ಅಸ್ಪೃಶ್ಯತೆಗೆ ಒಳಪಡಿಸಿದ ಮಾದರಿಯನ್ನು ವಸ್ತುನಿಷ್ಠವಾದ ಅಧ್ಯಯನಕ್ಕೆ ಒಳಪಡಿಸಿದ್ದು ಅವರ ಭಾರತ ಮತ್ತು ಭಾರತೀಯತೆಯ ವಾಸ್ತವದ ನೋಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. 1947 ರ ಸಂದರ್ಭ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿ ತನ್ನ ತುತ್ತತುದಿಯನ್ನು ಮುಟ್ಟಿದ ಸಂದರ್ಭವೇ ಆಗಿತ್ತು. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಬ್ರಿಟಿಷರು ಭಾರತೀಯರಿಗೆ ಸ್ವಾತಂತ್ರವನ್ನು ಕೊಡಲೇಬೇಕು ಅವರು ಭಾರತವನ್ನು ಬಿಟ್ಟು ಹೋಗಲೇಬೇಕು ಎಂದು ಬಹುದೊಡ್ಡ ಸಾಂಪ್ರದಾಯಿಕ ವಾದಿಗಳು ನಡೆಸುತ್ತಿದ್ದ ಚಳವಳಿಯ ವಿರುದ್ಧ ಭಾರತೀಯರು – ಭಾರತೀಯರಿಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಕಸಿದುಕೊಂಡಿರುವ ಮೂಲಭೂತ ಹಕ್ಕುಗಳ ಸ್ವಾತಂತ್ರ್ಯ ಕೊಡಬೇಕು ಎಂಬ ಕೂಗಿನೊಂದಿಗೆ ಸೈದ್ದಾಂತಿಕ ಚಳವಳಿಯನ್ನು ಹೂಡಿದರು. ಈ ಸೈದ್ದಾಂತಿಕ ಚಳವಳಿಯಿಂದಾಗಿ ಕೆಲವು ರಾಷ್ಟ್ರೀಯವಾದಿಗಳ ದೃಷ್ಟಿಯಲ್ಲಿ ಅಂಬೇಡ್ಕರ್ ರವರು ರಾಷ್ಟ್ರದ್ರೋಹಿ ಎಂಬ ಹೇಳಿಕೆಯನ್ನು ಹೇಳಿಸಿಕೊಂಡರು. ಆದರೆ ಅಂಬೇಡ್ಕರ್‌ರವರ ಹೋರಾಟ ರಾಷ್ಟ್ರದ್ರೋಹಿತ್ವದ ಹೋರಾಟವಾಗಿರಲಿಲ್ಲ – ಬದಲಿಗೆ ಭಾರತ ಮತ್ತು ಭಾರತೀಯತ್ವದ ಮೂಲಭೂತ ಹಕ್ಕುಗಳ ಸ್ವಾತಂತ್ರ ಹೋರಾಟವಾಗಿತ್ತು. ಇದಕ್ಕೆ ಪೂರಕವಾಗಿ ಗಾಂಧೀಜಿಯವರು ದುಂಡುಮೇಜಿನ ಸಮ್ಮೇಳನ ಹಾಗೂ ಪೂನಾ ಒಪ್ಪಂದಗಳಲ್ಲಿನ ನಿಲುವುಗಳ ವಿರುದ್ಧ, ಗಾಂಧೀಜಿಯವರ ’ಹರಿಜನ’ ಎಂಬ ಪದದ ವಿರುದ್ದ ಬಹುದೊಡ್ಡ ಅಸ್ಮಿತೆಯ ಹೋರಾಟ ಮಾಡಿದ್ದೇ ಸಾಕ್ಷಿಯಾಗಿದೆ.
ಈ ಎಲ್ಲಾ ಅಂಶಗಳನ್ನು ಅಂಬೇಡ್ಕರ್‌ರವರು ಮೇಲಿನ ಕೃತಿಗಳಲ್ಲಿ ಜನಮುಖಿಯಾಗಿ ಚರ್ಚಿಸಲು ಮುಂದಾಗಿದ್ದಾರೆ. ಈ ಕೃತಿಗಳು ಇಂದಿನ ಭಾರತದ ಜನಕೇಂದ್ರಿತ ಸಮಾಜಮುಖಿ ಅಧ್ಯಯನಕಾರರಿಗೆ ಬಹುದೊಡ್ಡ ಅಕರ ಗ್ರಂಥಗಳಾಗಿ ಹೊರಹೊಮ್ಮಿವೆ. ಈ ಕೃತಿಗಳಲ್ಲಿ ಅಂಬೇಡ್ಕರ್ ಅವರು ಎತ್ತಿದ ವಾಸ್ತವದ ಪ್ರಶ್ನೆಗಳಿಗೆ – ಈವರೆಗೂ ಸಾಂಪ್ರದಾಯವಾದಿಗಳಿಂದ ಪುರಾಣದ ಉತ್ತರ ದೊರಕಿದೆ ಹೊರತು, ವಾಸ್ತವದ ಉತ್ತರ ದೊರಕಲಿಲ್ಲ. ಇದಕ್ಕೆ ಮೂಲಕಾರಣ ಭಾರತದ ಐತಿಹಾಸಿಕ ಹಾಗೂ ಜನಕೇಂದ್ರಿತ ಚರಿತ್ರೆ ಪುರಾಣಮಿಶ್ರಿತಗೊಂಡಿರುವುದೇ ಆಗಿದೆ ಎಂಬುದು ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು. ” ಈ ಹಂತದಲ್ಲಿ ಭಾರತದ ವಸ್ತುನಿಷ್ಠ ಚರಿತ್ರೆಯಲ್ಲಿ ಪುರಾಣ ಮಾತನಾಡಿದಷ್ಟು ವಾಸ್ತವ ಮಾತನಾಡಲೇ ಇಲ್ಲ ” ಎಂಬುದು ಅಂಬೇಡ್ಕರ್ ಅವರ ಸ್ಪಷ್ಟ ನಿಲುವಾಗಿತ್ತು.
ಮೇಲಿನ ಈ ಎಲ್ಲಾ ಕೃತಿಗಳ ಸ್ವರೂಪ ಭಾರತಕ್ಕೆ ದಾಳಿ ಮಾಡಿದ ಆರ್ಯ ಮತ್ತು ಮುಸ್ಲಿಂ ಪ್ರಭುತ್ವಗಳ ಆಳ್ವಿಕೆ ಹಾಗೂ ಮುಂದೆ ಭಾರತಕ್ಕೆ ಬರಬೇಕೆಂದುಕೊಂಡಿದ್ದ ಪ್ರಜಾಪ್ರಭುತ್ವಗಳ ವಿಶ್ಲೇಷಣಾತ್ಮಕ ಅಧ್ಯಯನವೇ ಆಗಿದೆ. ೧೯೪೬ರಲ್ಲಿ ಅಂಬೇಡ್ಕರ್ ಅವರ ಮಹತ್ವದ ಕೃತಿ ಶೂದ್ರರು ಯಾರು? ಎಂಬುವುದು. ಈ ಕೃತಿಯ ಜೀವಾಳ ಭಾರತದಲ್ಲಿ ಚಾತುರ್ವರ್ಣ ವ್ಯವಸ್ಥೆಯಲ್ಲಿ ಶೂದ್ರರ ಸ್ಥಾನಮಾನಗಳನ್ನು ವಸ್ತುನಿಷ್ಠವಾಗಿ ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನಲೆಯಲ್ಲಿ ಅನಾವರಣಗೊಳಿಸುವುದೇ ಆಗಿತ್ತು. ದೇವರು ಹಾಗೂ ಧರ್ಮದ ಹೆಸರಿನಲ್ಲಿ ದುಡಿಯದೇ ಸ್ಪೃಶ್ಯರೆಂದು ಗುರುತಿಸಿಕೊಂಡವರ ವಿರುದ್ದ, ದೇವರು ಹಾಗೂ ಧರ್ಮದ ಹೆಸರಿನಲ್ಲಿ ದುಡಿದರು ಸಹ ಅಸ್ಪೃಶ್ಯರೆನೆಸಿಕೊಂಡವರ ನಿಜ ಚರಿತ್ರೆಯನ್ನು ಅನಾವರಣಗೊಳಿಸುವುದೇ ಈ ಕೃತಿಯ ಮತ್ತೊಂದು ಜೀವಾಳ.ಒಟ್ಟಾರೆ ಹೇಳುವುದಾದರೆ ದೇವಾಲಯ ಕಟ್ಟಿದರೂ ದೇವಾಲಯದೊಳಗೆ ಪ್ರವೇಶ ಮಾಡದವರ ಹಾಗೂ ಮಾಡಿಸದವರ, ಕೆರೆ ಕಟ್ಟಿದರೂ ಕೆರೆಯ ನೀರನ್ನು ಮುಟ್ಟದವರ ಹಾಗೂ ಮುಟ್ಟಿಸದವರ, ಸಮೃದ್ಧವಾಗಿ ಬೆಳೆಯನ್ನು ಬೆಳೆದರೂ ಹಸಿವಿನಿಂದ ಮಲಗಿದವರ, ಉತ್ತು-ಬಿತ್ತಿ ಬೆಳೆಯದಿದ್ದರೂ ಹೊಟ್ಟೆ ತುಂಬ ಉಂಡು ತೇಗಿದವರ ವಿರುದ್ದವೇ ಆಗಿತ್ತು. ಮುಂದುವರೆದು ಪಾರಂಪರಿಕ ಆಚರಣೆಯ, ಸಂಪ್ರದಾಯ, ಶ್ರಮದ ಹಿನ್ನೆಲೆಯ ವಾಸ್ತವಂಶದ ದೇವರುಗಳನ್ನು ಪುರಾಣ ಮಿಶ್ರಿತಗೊಳಿಸಿ ತಮ್ಮ ಸ್ವಾರ್ಥದ ತೋಳ್ತೆಕ್ಕೆಗೆ ಪಡೆದುಕೊಂಡವರ ವಿರುದ್ಧವೇ ಬರೆದದ್ದು ಎಂಬುವುದು ಸ್ಪಷ್ಟ. ಈ ಕೃತಿ ಪ್ರಕಟಗೊಂಡಿದ್ದು ೧೯೪೬ರಲ್ಲಿ. ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ೧೯೪೭ರಲ್ಲಿ. ಈ ಸಂದರ್ಭ ಬಹುದೊಡ್ಡ ಸಾಂಸ್ಕೃತಿಕ ಚರ್ಚೆಗೆ ಬಹುದೊಡ್ಡ ಚರ್ಚೆಗೆ ಗ್ರಾಸವಾದ ಸಂದರ್ಭವೂ ಆಯಿತು. ಹಾಗೆಯೇ ಸ್ವಾತಂತ್ರ ರಾಷ್ಟ್ರೀಯವಾದಿ ಚಳವಳಿಗಾರರು ಹಾಗೂ ಅಖಂಡ ಭಾರತದ ಜನತೆ ಅಂಬೇಡ್ಕರ್‌ರತ್ತ ಬಹುದೃಷ್ಟಿಕೋನದಿಂದ ನೋಡುವಂತೆಯೂ ಆಯಿತು. ಈ ಕೃತಿಯ ಹಿನ್ನೆಲೆಯಿಂದಲೇ ಬಂದಂತಹ ಮತ್ತೊಂದು ಮಹತ್ವದ ಕೃತಿ ಅಸ್ಪೃಶ್ಯರು ಎಂಬುವುದು. ಹೆಸರೇ ಹೇಳುವ ಹಾಗೆ ಈ ಕೃತಿಯ ಜೀವಾಳವೇ ಈ ರಾಷ್ಟ್ರದ ಮೂಲನಿವಾಸಿಗಳು ವಾಸಿಸುವ ಸ್ಥಳ, ಸೇವಿಸುವ ಆಹಾರ, ಪೂಜಿಸುವ ದೇವರು, ಮಾಡುವ ಕಸುಬುಗಳು, ಆಡುವ ಭಾಷೆಯ ಹಿನ್ನೆಲೆಯಲ್ಲಿ ಸ್ವಘೋಷಿತ ಸ್ಪೃಶ್ಯರು ಇವರನ್ನು ಅಸ್ಪೃಶ್ಯರು ಎಂದು ಗುರ್ತಿಸಿದರು ಎಂಬುದನ್ನು ಸಂಶೋಧನಾತ್ಮವಾಗಿ ಜನಮುಖಿ ಆಧಾರದಲ್ಲಿ ಅನಾವರಣಗೊಳಿಸಿದರು. ಎರಡು ಸಾವಿರ ವರ್ಷಗಳಿಂದ ಯಾರೋ ಹೇಳದ, ಯಾರು ಹೇಳಬಾರದು ಎಂಬ ನಿರ್ಬಂಧನೆಗೆ ಒಳಗಾಗಿದ್ದ ಅಂಶಗಳನ್ನು ಘಂಟಾಘೋಷವಾಗಿ ಬರೆದು ಅನಾವರಣಗೊಳಿಸಿದ ಧೀಮಂತರು ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ರವರು. ಅದಕ್ಕಾಗಿ ಇವರನ್ನು ನವಭಾರತದ ಶಿಲ್ಪಿ ಎಂದು ಕರೆಯುವುದು.
ಭಾರತದ ಎಲ್ಲ ಭಾಷೆಗಳಿಗೂ ತರ್ಜುಮೆಗೊಂಡಿರುವ ಈ ಕೃತಿ ಈ ನೆಲದ ಮೂಲ ಭಾರತೀಯರಿಗೆ ತಮ್ಮ ರಾಷ್ಟ್ರೀಯತೆಯನ್ನು ಅರ್ಥಮಾಡಿಕೊಳ್ಳಲು ಪ್ರೇರಣೆಯಾಗಿದೆ. ಅಂಬೇಡ್ಕರ್ ಅವರಿಗೆ ಅಸ್ಪೃಶ್ಯರು ಎಂಬ ಸಾಮಾಜಿಕ ಹಿನ್ನೆಲೆಯಿಂದ ಗುರುತುಸಲ್ಪಟ್ಟ ಜನವರ್ಗ ಒಂದಾದರೆ, ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆಯಿಂದ ಸ್ಪೃಶ್ಯ ಮತ್ತು ಅಸ್ಪೃಶ್ಯರೆಂದೆನ್ನದೆ ಶತ ಶತಮಾನಗಳಿಂದಲೂ ಶೋಷಣೆ ಒಳಗಾಗಿದ್ದ ಮಹಿಳೆಯರು, ಅವರ ಸ್ಥಿತಿಗತಿ, ಅವರ ಮೂಲಭೂತ ಹಕ್ಕುಗಳನ್ನು ಈ ನೆಲದಲ್ಲಿ ಸಾಂಸ್ಕೃತಿಕವಾಗಿ ಕಸಿದುಕೊಂಡವರ ವಿರುದ್ಧ ಪ್ರತಿಪಾದನೆ ಅಥವಾ ಒಡಲಾಳದ ಭಾರತೀಯ ತ್ವದ ಹಿನ್ನೆಲೆಯಲ್ಲಿ ವಕಲಾತು ಮಾಡುವ ಹಿನ್ನೆಲೆಯಲ್ಲಿ 1950 ರಲ್ಲಿ ಹಿಂದೂ ಮಹಿಳೆಯರ ಏಳಿಗೆ ಮತ್ತು ಪತನ ಎಂಬ ಮಹತ್ವದ ಕೃತಿಯನ್ನು ರಚಿಸಿದರು. ಈ ಕೃತಿಯನ್ನು ಪ್ರಕಟ ಮಾಡಿದ ಸಂದರ್ಭ ಭಾರತಕ್ಕೆ ಸ್ವಾತಂತ್ರ ಬಂದು, ಬಾಬಾಸಾಹೇಬ್ ಅಂಬೇಡ್ಕರ್ ಅವರೇ ರೂಪಿಸಿದ ಪ್ರಜಾಪ್ರಭುತ್ವ ವ್ಯವಸ್ಥೆಯು ಸಂವಿಧಾನ ಜಾರಿಗೆ ಬಂದ ಸಂದರ್ಭವೂ ಆಗಿತ್ತು. ಶತಶತಮಾನಗಳಿಂದ ಮಹಿಳೆ ಎಂಬ ಕಾರಣಕ್ಕಾಗಿ ಅನೇಕ ಬಿಡಿಸಲಾಗದ ಧಾರ್ಮಿಕ ಹಾಗೂ ಸಾಮಾಜಿಕ ಸಂಕೋಲೆಗಳಿಗೆ ಸಿಲುಕಿದ್ದ ಈ ಬಹುದೊಡ್ಡ ಜನಸಮುದಾಯ ಪುರುಷ ಪ್ರಧಾನ ವ್ಯವಸ್ಥೆಯಿಂದ ಕಾನೂನಾತ್ಮಕವಾಗಿ ಮುಕ್ತಗೊಳಿಸಿ ಅವರನ್ನು ಭಾರತ ಸತ್ಪ್ರಜೆಗಳನ್ನಾಗಿ ಅನಾವರಣಗೊಳಿಸಲು ಭಾರತ ಸರ್ಕಾರದ ಪ್ರಥಮ ಕಾನೂನು ಮಂತ್ರಿಯಾಗಿ ಹಿಂದೂ ಕೋಡ್ ಬಿಲ್ ನ್ನು ಜಾರಿಗೆ ತರಲು ಮುಂದಾದರು. ಆದರೆ ಅವರದೇ ಸರ್ಕಾರದ ಭಾರತಕ್ಕೆ ಸ್ವಾತಂತ್ರ್ಯವೇನು ಬಂದಿತ್ತು. ಭಾರತ ಹಾಗೂ ಭಾರತೀಯರನ್ನು ಆಳ್ವಿಕೆ ಮಾಡಲು ಅಂಬೇಡ್ಕರವರು ರಚಿಸಿದ ಲಿಖಿತ ಸಂವಿಧಾನವು ಜಾರಿಗೆ ಬಂದಿತ್ತು. ಆದರೆ ಭಾರತೀಯರ ಸಾಂಪ್ರದಾಯಿಕ ಪುರುಷ ಪ್ರಧಾನ ವ್ಯವಸ್ಥೆಯ ಮನಸ್ಸುಗಳಿಗೆ ಸ್ವಾತಂತ್ರವಾಗಲಿ, ಸಂವಿಧಾನವಾಗಲಿ ಕಿಂಚಿತ್ತೋ ಜಾರಿಗೆ ಬಂದಿರಲೇ ಇಲ್ಲ. ಇಂತಹ ಅಜ್ಞಾನದ ಮನಸ್ಸುಗಳ ಮುಂದೆ ಅಂಬೇಡ್ಕರ್ ಅವರ ಮಹಿಳಾಪರ ಚಿಂತನೆಯ ಜ್ಞಾನದ ಮಸೂದೆಗಳು ಅಂಗೀಕಾರವಾಗಲಿಲ್ಲ. ತತ್‌ಕ್ಷಣವೇ ಅಂಬೇಡ್ಕರ್ ಅವರು ತಮ್ಮ ಸಂವಿಧಾನಾತ್ಮಕ ನಿಲುವಿಗೆ ನ್ಯಾಯ ದೊರಕದ ಕಾರಣದಿಂದ ತಮ್ಮ ಮಂತ್ರಿ ಪದವಿಗೆ ರಾಜೀನಾಮೆಯನ್ನು ನೀಡಿ ಹೊರ ನಡೆದರು. ಈ ರಾಜೀನಾಮೆ ಅವರ ಸೋಲಾಗಿರಲಿಲ್ಲ – ಬದಲಿಸಿ ತಮ್ಮ ಭಾರತತ್ವದ ಗಟ್ಟಿತನದ ನಿಲುವಿಗೆ ಸಂದ ಜಯವಾಗಿತ್ತು.
ಈ ಮೊದಲೇ ಹೇಳಿದ ಅವರ ಸಮಗ್ರ ಕೃತಿಗಳು ಹಾಗೂ ಅವರು ಜನರಿಗಾಗಿ ಆರಂಭಿಸಿದ ಮೂಕನಾಯಕ – ಬಹಿಷ್ಕೃತ ಭಾರತ – ಸಮತ ಜನತಾ – ಹಾಗೂ ಪ್ರಬುದ್ದ ಭಾರತ ಎಂಬ ಪತ್ರಿಕೆಗಳು ಸಹ ಎರಡು ಸಾವಿರ ವರ್ಷಗಳಿಂದ ಸಾಂಸ್ಕೃತಿಕವಾಗಿ ಗಟ್ಟಿಯಾಗಿದ್ದರೂ, ಅಸಾಂಸ್ಕೃತಿಕ ಹಿನ್ನಲೆಗೆ ಒಳಗಾಗಿ ಮಲಗಿದ್ದ ಹಾಗೂ ಮಲಗಿಸಿದ್ದವರ ಎಚ್ಚರಿಸುವ ಬರವಣಿಗೆಗಳೇ ಆಗಿ ಹೊರಹೊಮ್ಮಿದ್ದು ಚಾರಿತ್ರಿಕ ಹಂಸವೇ ಆಗಿದೆ . ಮುಂದುವರೆದಂತೆ ಈ ಎಲ್ಲದರ ಸಾರವೇ ಭಾರತದ ಸಮ ಸಂಸ್ಕೃತಿಯನ್ನು ಅನಾವರಣಗೊಳಿಸುವ ಪ್ರಪಂಚಕ್ಕೆ ಮಾದರಿಯಾಗಿರುವ ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ.
ಭಾರತದ ಸಂವಿಧಾನ ಭಾರತ ಮತ್ತು ಭಾರತೀಯರಿಗಾಗಿ ನಿರ್ಮಾಣಗೊಂಡು, “ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು” ಎಂಬ ಸಮಸಂಸ್ಕೃತಿಯ ಪ್ರತಿಪಾದನೆಯ ಹಿನ್ನೆಲೆಯಲ್ಲಿ ಅಂಬೇಡ್ಕರ್‌ರವರಿಂದ ರಚನೆಗೊಂಡು ಭಾರತಕ್ಕಲ್ಲದೆ ಪ್ರಪಂಚಕ್ಕೆ ಮಾದರಿಯಾಗಿದೆ. ಇಂದು ಭಾರತ ಅಂಬೇಡ್ಕರ್‌ರವರು ರಚಿಸಿದ ಈ ಬೃಹತ್ ಲಿಖಿತ ಸಂವಿಧಾನದಲ್ಲಿ ಶತಮಾನಗಳಿಂದ ಮಾತನಾಡದೆ ಇದ್ದ ಮೂಕನಾಯಕರನ್ನು ಮಾತನಾಡಿಸುತಿದೆ. ಹಾಗೆಯೇ ಏಕಮುಖವಾಗಿ ಒಬ್ಬರೇ ಮಾತನಾಡಿಸಿದ್ದನ್ನು ಸಂವಿಧಾನಾತ್ಮಕ ಕಾನೂನುಗಳಿಂದ ನಿರ್ಬಂಧಕ್ಕೆ ಒಳಪಡಿಸಿ – ಬಹು ಜನರು ಮುಕ್ತವಾಗಿ ಮಾತನಾಡುವಂತೆ ಮಾಡಿ ಪ್ರಬುದ್ಧ ಭಾರತದ ಕಲ್ಪನೆಯ ಪ್ರಜಾಪ್ರಭುತ್ವದ ಆಶಯಕೇ ಪ್ರಪ್ರಥಮವಾಗಿ ಮುನ್ನುಡಿ ಬರೆದರು.
ಈ ಎಲ್ಲದರ ಸಾರವೇ ಅಂಬೇಡ್ಕರ್ ಅವರು ಭಾರತ ಹಾಗೂ ಭಾರತೀಯರಲ್ಲೂ ತಮ್ಮ ಅಂತರಾಳದ ಭಾರತೀಯತ್ವದ ಒಡಲಾಳದಿಂದ ಕಂಡ ಪರಿಯೇ ತಮ್ಮ ಕೊನೆಯ ದಿನಮಾನಗಳಲ್ಲಿ ರಚಿಸಿದ ಕೃತಿ “ಬುದ್ಧ ಮತ್ತು ಆತನ ಧಮ್ಮ” ಎಂಬ ಮಹತ್ವದ ಕೃತಿ.
ಈ ಕೃತಿಯೂ ಅವರ ಪ್ರೌಢಿಮೆಗೆ ಹಿಡಿದ ಕೈಗನ್ನಡಿಯಾಗಿದೆ. 1956 ರಲ್ಲಿ ನಿಧನರಾದ ಅಂಬೇಡ್ಕರ್ ಅವರ ಈ ಹಸ್ತಪ್ರತಿಯನ್ನು 1957 ರಲ್ಲಿ ಅವರ ಪ್ರೀತಿ ಅಭಿಮಾನಿಗಳ ಸಹಕಾರದೊಂದಿಗೆ ಪ್ರಕಟಗೊಳಿಸಲಾಯಿತು. ದೇಶಿ ಹಾಗೂ ವಿದೇಶಿ ಭಾಷೆಗಳಿಗೆ ವಸ್ತುನಿಷ್ಠವಾಗಿ ತರ್ಜಮೆಗೊಂಡಿರುವ ಕೆಲವೇ ಕೆಲವು ಮಹತ್ವದ ಕೃತಿಗಳಲ್ಲಿ ಈ ಕೃತಿಯು ಮೊದಲ ಪಂಕ್ತಿಯದು. ಇದಕ್ಕೆ ಅದರ ಮೂಲಭೂತ ಸಾರವೇ ಕಾರಣವಾಗಿದೆ. ಈ ಕೃಷಿಯಲ್ಲಿ ಭಾರತ ಇದೆ ಹಾಗೂ ಭಾರತೀಯತೆ ಹೆಚ್ಚು ಹೆಚ್ಚಾಗಿ ಅನಾವರಣಗೊಂಡಿದೆ. ಈ ಕೃತಿಯಲ್ಲಿ ಭಾರತದ ಜನತೆ ಮಾತನಾಡುವ ಅಂಬಲವನ್ನು ಬಯಸಿದ್ದಾರೆ. ಎರಡು ಸಾವಿರ ವರ್ಷಗಳಿಂದ ಮಾತನಾಡದೆ ಇದ್ದ ಮೂಕ ನಾಯಕರಿಗೆ ಈ ಕೃತಿಯು ಮಾತನ್ನು ಬರಿಸಿತು ಎಂದು ಹೇಳಿದರೆ ಖಂಡಿತವಾಗಿಯೂ ತಪ್ಪಾಗಲಾರದು.
ಅಂಬೇಡ್ಕರ್‌ರವರ ಬರಹ ಹಾಗೂ ಭಾಷಣಗಳು ಎಂಬ ಒಟ್ಟು 22 ಬೃಹತ್ ಸಂಪುಟಗಳು – ಭಾರತದ ಜನರನ್ನು ಎಚ್ಚರಿಸಲು ತಾವೇ ಸಂಪಾದಕರಾಗಿ ಹೊರ ತಂದ ೫ ಪತ್ರಿಕೆಗಳು ಹಾಗೂ ಪ್ರಮುಖವಾಗಿ ಅನೇಕ ಸಂದರ್ಭಗಳಲ್ಲಿ ಮಾಡಿದ ಭಾಷಣಗಳು – ಇದೆಲ್ಲವುಗಳನ್ನು ಒಳಗೊಂಡಂತೆ ’ಅಂಬೇಡ್ಕರ್‌ರವರ ಬರಹ ಮತ್ತು ಭಾಷಣಗಳು’ ಎಂಬ ಹೆಸರಿನ ಇಪ್ಪತ್ತೆರಡು ಬೃಹತ್ ಸಂಪುಟಗಳು – ಭಾರತ ಸರ್ಕಾರ ಹಾಗೂ ಭಾರತದ ಎಲ್ಲಾ ರಾಜ್ಯ ಸರ್ಕಾರಗಳು ಕೂಡ ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಅನುವಾದ ಮಾಡಿ ಪ್ರಕಟಿಸಿ ಅಂಬೇಡ್ಕರ್‌ರವರ ಚಿಂತನೆಗಳನ್ನು ಓದುಗರಿಗೆ ತಲುಪಿಸುವ ಜವಬ್ದಾರಿಯನ್ನು ಮಾಡಿವೆ. ಮಾಡುತ್ತಿವೆ
ಈ ಮಹತ್ವದ ಸಂಪುಟಗಳು ತನ್ನೊಡಲೊಳಗೆ ಒಂದಿರುವ ಭಾರತ ಹಾಗೂ ಭಾರತೀಯರನ್ನು ಪ್ರತಿನಿಧಿಸುವ ಪ್ರತಿಯೊಬ್ಬ ಭಾರತೀಯನ ಜೀವಸೆಲೆಯ ಸಾರ. ಈ ಬೃಹತ್ ಸಂಪುಟಗಳ ಜೀವಾಳವೆ ಭಾರತೀಯರಿಗೆ ಭಾರತೀಯತೆಯನ್ನು ಅನಾವರಣ ಗೊಳಿಸುವುದೇ ಆಗಿದೆ ಈ ರಾಷ್ಟ್ರದ ವಾರಸುದಾರರಾದ ಈ ನೆಲ ಸಂಸ್ಕೃತಿ ಹಿನ್ನೆಲೆಯ ಜನರ ಪೂರ್ವಿಕರು ಬದುಕಿ ಬಾಳಿದ ದೇಶದ ನೆಲದ ಐತಿಹಾಸಿಕ ಇತಿಹಾಸವನ್ನು ಅನಾವರಿಸುವ ಜೊತೆಗೆ – ಅನೇಕ ಪ್ರಶ್ನೆಗಳೊಂದಿಗೆ ಉತ್ತರವನ್ನು ತಮಗೆ ತಾವೇ ಹುಡುಕಿಕೊಳ್ಳುವಂತೆ ಮಾಡುವುದೇ ಆಗಿದೆ.
ಕನ್ನಡಕ್ಕೆ ಅನುವಾದ ಗೊಂಡಿರುವ ಈ ಬೃಹತ್
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಹಾಗೂ ಭಾಷಣಗಳು ಎಂಬ ಹೆಸರಿನ 22 ಸಂಪುಟಗಳ ಒಡಲಾಳದ ಹೃದಯ ಸ್ಪರ್ಶಿ ಪ್ರತಿಯೊಂದು ಅಧ್ಯಯನಗಳು ದೇಶವಾಸಿಗಳಲ್ಲಿ ಅನಾವರಣಗೊಳಿಸುವ ದೇಶೀಯತೆಯ ಅಂಶಗಳು ಈ ಕೆಳಗಿನಂತೆ ರೂಪಿತಗೊಂಡಿವೆ .
ಈ ಸಂಪುಟಗಳಲ್ಲಿ ಅಂಬೇಡ್ಕರ್ ಅವರು ಇದ್ದಾರೆ – ಅಂಬೇಡ್ಕರ್ ಅವರು ಬಯಸಿದ ಭಾರತೀಯರಿದ್ದರೆ – ಅಂಬೇಡ್ಕರ್ ಅವರು ಪ್ರಭುದ್ಧರನ್ನಾಗಿ ರೂಪಿಸಲು ಬಯಸಿದ ಭಾರತ ಇದೆ – ಸಮ ಸಂಸ್ಕೃತಿಯ ಆಧಾರದ ಮೇಲೆ ಸಮಸ್ತ ಜನತೆಯು ಉತ್ತಮ ಪ್ರಜೆಗಳಾಗಿ ಬದುಕಲು ಪ್ರಜಾಪ್ರಭುತ್ವದ ನಿಯಮಗಳಿವೆ ಎಂಬುವುದು ಸತ್ಯ.,
ಆದರೆ,…
ಇವುಗಳನ್ನು ಬಳಸಿಕೊಳ್ಳುವುದು ಮಾತ್ರ ಅಂಬೇಡ್ಕರ್ ಅವರು ಬಯಸಿದ ಜನರಿಗೆ ಅರಿವಿಲ್ಲದಿರುವುದು ಬಹುದೊಡ್ಡ ದುರಂತವಾಗಿದೆ. ಅವರು ಯಾರಿಗಾಗಿ ಹೋರಾಟ ಮಾಡಿ – ಅನೇಕ ಕಷ್ಟಗಳ ನಡುವೆಯೂ ನಮಗೆ ಜಯವನ್ನು ದೊರಕಿಸಲು ಮುಂದಾದ – ಯಾರ ಅರಿವನ್ನು ಹೆಚ್ಚಿಸುವ ಸಲುವಾಗಿ ಬರೆದರೋ ಅವರಿಗೆ ಇನ್ನೂ ಅಂಬೇಡ್ಕರ್ ಹಾಗೂ ಅವರ ಬೌದ್ಧಿಕತೆ ಅರ್ಥವಾಗದಿರುವುದು ಬಹುದೊಡ್ಡ ದುರಂತವಾಗಿದೆ. ಇದರ ಕಾನೂನಾತ್ಮಕ ಅರಿವನ್ನು ಪಡೆಯಲು ಬಾಬಾಸಾಹೇಬರು ಹೇಳಿದ ಮೂಲಭೂತ ಹಕ್ಕಿನ ರೂಪದ ಧ್ಯೇಯವಾಕ್ಯ ಶಿಕ್ಷಣ – ಸಂಘಟನೆ – ಹೋರಾಟ- ದ ದಾರಿ ಎಂಬುವುದು. ಇದನ್ನು ಪ್ರತಿಯೊಬ್ಬ ಅಂಬೇಡ್ಕರ್ ಅವರು ರೂಪಿಸಿದ ಭಾರತೀಯನೂ ಅರಿಯಬೇಕಾಗಿದೆ.. ಒಡಲಾಳದಿಂದ ಅರಿಯದಿದ್ದರೆ – ಮತ್ತದೇ ಎರಡು ಸಾವಿರ ವರ್ಷಗಳಿಂದ ತಮ್ಮದೇ ಅಜ್ಞಾನದ ಧ್ಯೇಯ ವ್ಯಾಖ್ಯದ ಮೂಲಕ ಭಾರತದ ಬಹುದೊಡ್ಡ ಶ್ರಮಜೀವಿ ಜನವರ್ಗವನ್ನು ಬಳಸಿಕೊಂಡ – ಅಜ್ಞಾನರೂಪಿತ ಅಂಧಕಾರದ ಕಾನೂನುಗಳನ್ನೇ ಈ ನಾಡಿನ ಅಜ್ಞಾನದ ಸಂವಿಧಾನವೆಂದು ಜಾರಿಗೆ ತರಲು ಮುಂದಾಗಿ ತಮ್ಮ ಸ್ವಾರ್ಥ ಸಾಧನೆಗಾಗಿ ಬದುಕುತ್ತಿರುವ ಕೆಲವೇ ಕೆಲವು ಜನರ ಅಡಿಯಾಳುಗಳಾಗಿಯೇ ಇರಬೇಕಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಅಂಬೇಡ್ಕರ್ ಅವರ ಸಮಗ್ರ ಬರಹ ಹಾಗೂ ಭಾಷಣಗಳನ್ನು ಕನ್ನಡಕ್ಕೆ ಅನುವಾದ ಗೊಳಿಸಿ ಪ್ರಕಟಗೊಳಿಸಿರುವ 22 ವಿದ್ವತ್ ಪೂರ್ಣ ಬೃಹತ್ ಸಂಪುಟಗಳಲ್ಲಿ ಒಳಗೊಂಡಿರುವ ಒಡಲಾಳದ ಭಾರತ – ಭಾರತೀಯ ಹಾಗೂ ಭಾರತೀಯತ್ವದ ದ್ವನಿ ಈ ಕೆಳಗಿನಂತಿದೆ. ಅವರ ಈ ಬರಹ ಹಾಗೂ ಭಾಷಣಗಳಲ್ಲಿನ ಧ್ವನಿ ನಮ್ಮಲ್ಲಿ ದನಿಯನ್ನು ಹುಟ್ಟಿಸುತ್ತದೆ.
ಸಂಪುಟ ಒಂದು
561 ಪುಟಗಳ ಈ ಬೃಹತ್ ಸಂಶೋಧನಾತ್ಮಕ ವಿದ್ವತ್ ಸಂಪುಟವು ಕ್ರಮವಾಗಿ 5 ಭಾಗಗಳಾಗಿ ವಿಂಗಡನೆ ಮಾಡಿ ಅಧ್ಯಯನಕ್ಕೆ ಒದಗಿಸಲಾಗಿದೆ
1 ಜಾತಿ
ಭಾರತದಲ್ಲಿ ಜಾತಿಗಳು
ಜಾತಿಯ ನಿರ್ಮೂಲನೆ
2 ಭಾಷಾವಾರು ಪ್ರಾಂತ್ಯ ರಚನೆ
ಭಾಷಾವಾರು ಪ್ರಾಂತ್ಯವಾಗಿ ಮಹಾರಾಷ್ಟ್ರ
ನಿರ್ಬಂಧ ಮತ್ತು ಸಮದಂಡಿಗಳ ಅವಶ್ಯಕತೆ
ಭಾಷಾ ಬಾರೋ ರಾಜ್ಯಗಳನ್ನು ಕುರಿತ ವಿಚಾರಗಳು
3 ನಾಯಕ ಮತ್ತು ನಾಯಕಾರಾದನೆ
ರಾನಡೆ, ಗಾಂಧಿ ಮತ್ತು ಜಿನ್ನಾ.
4 ಸಂವಿಧಾನಾತ್ಮಕ ಸುಧಾರಣೆಗಳು
ಸೌತ್ ಬಾರೋ ಸಮಿತಿಗೆ ನೀಡಿದ ಸಾಕ್ಷ್ಯ
ಒಕ್ಕೂಟ ವ್ಯವಸ್ಥೆ ಮತ್ತು ಸ್ವಾತಂತ್ರ್ಯ
ಕೋಮು ಪ್ರಾತಿನಿಧ್ಯದ ಬಿಕ್ಕಟ್ಟು : ಒಂದು ಪರಿಹಾರ ಮಾರ್ಗ.
ರಾಜ್ಯಗಳು ಮತ್ತು ಅಲ್ಪಸಂಖ್ಯಾತರ
5 ಆರ್ಥಿಕ ಸಮಸ್ಯೆಗಳು
ಭಾರತದಲ್ಲಿ ಸಣ್ಣ ಇಡುವಳಿಗಳು ಮತ್ತು ಅವುಗಳ ಪರಿಹಾರಗಳು ಶ್ರೀಯುತ ರಸೆಲ್ ಮತ್ತು ಸಾಮಾಜಿಕ ಪುನಾರಚನೆ ಎಂಬ ಮಹತ್ವದ ವಿಷಯಗಳನ್ನು ಮುಕ್ತವಾಗಿ ಚರ್ಚಿಸಲು ತೊಡಗಿಸುತ್ತದೆ ಈ ಸಂಪುಟದ ಬರಹಗಳು.
ಸಂಪುಟ ಎರಡು
1,053 ಪುಟಗಳನ್ನು ಒಳಗೊಂಡಿರುವ ಈ ಬೃಹತ್ ಸಂಶೋಧನಾತ್ಮಕ ವಿದ್ವತ್ಪೂರ್ಣ ಸಂಪುಟವು ಆಯವ್ಯಯ ಪತ್ರಗಳು ಮಸೂದೆಗಳು ಸೈಮನ್ ಕಮಿಷನ್ ನಿನ್ನೊಂದಿಗೆ ಡಾ. ಅಂಬೇಡ್ಕರ್
ದುಂಡು ಮೇಜಿನ ಪರಿಷತ್ತಿನಲ್ಲಿ ಡಾ. ಅಂಬೇಡ್ಕರ್ ಎಂಬ ಮಹತ್ವದ ವಿಷಯಗಳನ್ನು ಚರ್ಚೆಗೆ ಒಳಪಡಿಸುತ್ತದೆ.
ಸಂಪುಟ ಮೂರು
847 ಪುಟಗಳಿರುವ ಈ ಬೃಹತ್ ವಿದ್ಯುತ್ ಪೂರ್ಣ ಸಂಪುಟವು ಹಿಂದೂ ಧರ್ಮಧ ತತ್ವ ಜ್ಞಾನ ಭಾರತ ಮತ್ತು ಸಮತಾವಾದದ ಪೂರ್ವಭಾವಿ ಅವಶ್ಯಕತೆಗಳು ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿ ಕ್ರಾಂತಿ ಬುದ್ಧ ಅಥವಾ ಕಾರ್ಲ್ ಮಾರ್ಕ್ಸ್ ಎಂಬ ಮಹತ್ವದ ವಿಷಯವನ್ನು ಚರ್ಚೆಗೆ ಒಳಪಡಿಸುತ್ತದೆ.
ಸಂಪುಟ ನಾಲ್ಕು
527 ಪುಟಗಳಿರುವ ಈ ಬೃಹತ್ ವಿದ್ವತ್ ಸಂಪುಟವು ಅಸ್ಪೃಶ್ಯನಾಗಿರುವುದೆಂದರೇನು..? ಸಮಸ್ಯೆಯ ಮೂಲಗಳು ಅಸ್ಪೃಶ್ಯರು ಎದುರಿಸಬೇಕಾಗಿರುವ ಸಂಗತಿಗಳು. ಎಂಬ ನೆಲಮೂಲ ಸಂಸ್ಕೃತಿಯನ್ನು ದಮನ ಮಾಡಿದವರ ವಿರುದ್ಧ ಧರ್ಮ ಹಾಗೂ ಜಾತಿಯ ಹಿನ್ನೆಲೆಯಲ್ಲಿ ಸೃಷ್ಟಿಯಾದ ಅನೇಕ ಅಜ್ಞಾನದ ಪ್ರಶ್ನೆಗಳಿಗೆ ಉತ್ತರವನ್ನು ಹುಟ್ಟು ನೀಡುವ ಮೂಲಕ ಮಹತ್ವದ ವಸ್ತುನಿಷ್ಠ ವಿಷಯದ ಸಂಪುಟವಾಗಿ ಅನಾವರಣಗೊಂಡಿದೆ. ಅಂಬೇಡ್ಕರ್ ಅವರ ನೆಲ ಮೂಲ ಸಂಸ್ಕೃತಿಯ ಚಿಂತನೆಗಳ ಅನಾವರಣಕ್ಕೆ ಈ ಸಂಪುಟ ಕೈಗನ್ನಡಿಯಾಗಿದೆ
ಸಂಪುಟ ಐದು
571 ಪುಟಗಳನ್ನು ಹೊಂದಿರುವ ಈ ಬೃಹತ್ ವಿದ್ವತ್ ಸಂಪುಟವು ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಮತ್ತು ಹಣಕಾಸು ವ್ಯವಸ್ಥೆ ಪ್ರಾಂತೀಯ ಹಣಕಾಸು ವ್ಯವಸ್ಥೆ
ಸಂಕೀರ್ಣ ಲೇಖನಗಳು: ಎಂಬ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಹಾಗೂ ಬಹು ಮುಖ್ಯವಾಗಿ ವಿದೇಶದಿಂದ ಬಂದು ಭಾರತವನ್ನು ತಮ್ಮ ತೋಳ್ತೆಕೆಗೆ ತೆಗೆದುಕೊಂಡು ಏಕಮುಷ್ಟಿಯಿಂದಲೇ ಆಳ್ವಿಕೆ ಮಾಡಿದ ಈಸ್ಟ್ ಇಂಡಿಯಾ ಕಂಪನಿ, ಅಂದರೆ ಬ್ರಿಟಿಷ್ ಆಡಳಿತದಲ್ಲಿ ಭಾರತದಲ್ಲಿ ಇದ್ದಂತ ಆರ್ಥಿಕ ವ್ಯವಸ್ಥೆಯನ್ನು ಸಂಕ್ಷಿಪ್ತವಾಗಿ ಅನಾವರಣಗೊಳಿಸುತ್ತದೆ. ಈ ಮಾದರಿಯ ಅಧ್ಯಯನ ಮಾಡಿದ ಭಾರತದ ಪ್ರಪ್ರಥಮ ಪ್ರಜ್ಞಾವಂತ ಪ್ರಜೆಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಮೊದಲಿಗರು.. ಈ ಹಂತದಲ್ಲಿಯೇ ಅಂಬೇಡ್ಕರ್ ಅವರನ್ನು ಭಾರತದ ವಾಸ್ತವದ ಚರಿತ್ರೆಯ ನಿರ್ಮಾತೃ ಎಂದು ಕರೆಯುವುದು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಯ ಅಂಶಗಳನ್ನು ಒಳಪಡಿಸಿಕೊಂಡು ಭಾರತದ ಅಮರ್ತ್ಯ ಸೇನ್ ಅವರು ಬರೆದ ಕೃತಿಗೆ ನೊಬೆಲ್ ಪ್ರಶಸ್ತಿ ದೊರಕಿರುವುದು ಸಹ ಕಾರಣವಾಗಿದೆ. ಈ ಅಂಶಗಳನ್ನು ಸ್ವತಹ ಅಮರ್ತ್ಯ ಸೇನ್ ಅವರೇ ಹೇಳಿರುವುದು ದಾಖಲೆ ಆಗಿದೆ.
ಸಂಪುಟ ಆರು
607 ಪುಟಗಳು ಇರುವ ಈ ಬೃಹತ್ ವಿದ್ವತ್ ಸಂಪುಟವು ಶೂದ್ರರು ಯಾರ ಅಸ್ಪೃಶ್ಯರು ಅಸ್ಪೃಶ್ಯತೆಯ ಉಗಮದ ಸಿದ್ಧಾಂತಗಳು ಪಾಕಿಸ್ತಾನ ಅಥವಾ ಭಾರತದ ವಿಭಜನೆ. ಎಂಬ ವಸ್ತು ನಿಷ್ಠ ವಿಷಯವನ್ನು ಒಳಗೊಂಡ ಈ ಸಂಪುಟವು ಭಾರತದ ಪ್ರತಿಯೊಬ್ಬ ಪ್ರಜೆಯೂ ಸಹ ರಾಷ್ಟ್ರವನ್ನೇ ಪ್ರತಿನಿಧಿಸುವl ಕುರಿತು ವಿದ್ವತ್ಪೂರ್ಣವಾಗಿ ನಮ್ಮೆಲ್ಲರನ್ನು ಎಚ್ಚರಿಸುವ ಸಂಪುಟವಾಗಿದೆ. ಭಾರತ ಹಾಗೂ ಭಾರತೀಯರನ್ನು ಧಾರ್ಮಿಕ ಸೌಹಾರ್ದತೆಯ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ನೋಡಿದ ಜ್ಞಾನದ ಸಂಕೇತವಾಗಿ ಈ ಸಂಪುಟ ಹೊರಹೊಮ್ಮಿದೆ.
ಸಂಪುಟ ಏಳು
ಈ ಬೃಹತ್ ಸಂಪುಟವು 469 ಪುಟಗಳನ್ನು ಹೊಂದಿದ್ದು ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯವಿಗಾಗಿ ಮಾಡಿರುವುದೇನು..? ಎಂಬ ಮಹತ್ವದ ಪ್ರಶ್ನೆಯನ್ನು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಗಾಂಧೀಜಿಯವರು ಅಸ್ಪೃಶ್ಯರ ಕುರಿತು ತಾಳಿದ ನಿಲುವು ಹಾಗೂ ಅಸ್ಪೃಶ್ಯ ಜನಾಂಗವನ್ನು “ಹರಿಜನ” ಎಂದು ಹೊಸದಾಗಿ ನಾಮಕರಣ ಮಾಡಿ ಧಾರ್ಮಿಕ ಹಾಗೂ ಸಾಮಾಜಿಕ ಸಂಕೋಲೆಯಲ್ಲಿ ಸಿಲುಕಿಸಲು ಮುಂದಾದ ಸಾಂಸ್ಕೃತಿಕ ಸಂದರ್ಭಗಳನ್ನು ಕಾಂಗ್ರೆಸ್ ಮತ್ತು ಗಾಂಧಿಯವರನ್ನು ಮುಂದೆ ಮಾಡಿ ವಸ್ತುನಿಷ್ಠವಾದ ಚರ್ಚೆಗೆ ಎಡೆ ಮಾಡಿಕೊಡುವುದೇ ಈ ಸಂಪುಟದ ವಿಷಯ ವಸ್ತು ಆಗಿದೆ. ಭಾರತದ ರಾಜಕಾರಣದೊಳಗೆ ಹುದುಗಿರುವ ಧರ್ಮ ಮತ್ತು ಜಾತಿ ವ್ಯವಸ್ಥೆಗಳ ಇಕ್ಕಳದಲ್ಲಿ ಇತಿಹಾಸದಿಂದ ಚರಿತ್ರೆವರೆಗೂ ಸಿಲುಕಿರುವ – ಸಿಲ್ಕುತ್ತಿರುವ ಅಸ್ಪೃಶ್ಯ ಜನಾಂಗದವರ ಕುರಿತು ಅಧ್ಯಯನ ಮಾಡುವವರಿಗೆ ಈ ಕೃತಿ ಅತ್ಯಂತ ಹೆಚ್ಚಿನ ಮಹತ್ವದಾಗಿದೆ. ಇಲ್ಲಿ ಅಂಬೇಡ್ಕರ್ ಅವರು ಎತ್ತುವ ಮಹತ್ವದ ಪ್ರಶ್ನೆಗಳು ಇಂದಿಗೂ ಸಹ ಕಾಡುವ ಪ್ರಶ್ನೆಗಳೇ ಆಗಿದೆ. ಈ ಕೃತಿಯಲ್ಲಿ ಅಂಬೇಡ್ಕರ್ ಅವರು ಎತ್ತುವ ಪ್ರಶ್ನೆಗಳಿಗೆ ಮಹಾನ್ ಮಹಾನ್ ಧರ್ಮ ಸುಧಾರಕರಾಗಲಿ ಅಥವಾ ಗಾಂಧೀಜಿ ಹಾಗೂ ಅವರ ಸಮಸ್ತ ಬೆಂಬಲಿಗರು ಸಹ ಉತ್ತರವನ್ನು ನೀಡಲು ಸಾಧ್ಯವಾಗಿರುವುದು ಅಂಬೇಡ್ಕರ್ ಅವರು ಎತ್ತಿದ ವಾಸ್ತವದ ಪ್ರಶ್ನೆಗಳಿಗೆ ಇರುವ ನೆಲ ಸಂಸ್ಕೃತಿಯ ವಾಸ್ತವದ ಅಂಶವನ್ನು ಅನಾವರಣಗೊಳಿಸುತ್ತದೆ
ಸಂಪುಟ ಎಂಟು
480 ಪುಟಗಳನ್ನು ಹೊಂದಿರುವ ಈ ಬೃಹತ್ ಸಂಶೋಧನಾತ್ಮಕ ವಿದ್ವತ್ ಸಂಪುಟವು ಕಾರ್ಮಿಕ ವಿಚಾರಗಳು ಪರಿಶಿಷ್ಟ ಜಾತಿಗಳ ಕುಂದುಕೊರತೆಗಳು ಡಾ. ಅಂಬೇಡ್ಕರ್ ಅವರ ಪತ್ರಗಳು. ಎಂಬ ಮಹತ್ವದ ವಿಷಯಗಳ ಕುರಿತು ಚರ್ಚಿಸುತ್ತದೆ. ಕರ್ನಾಟಕದ ಬಹು ದೊಡ್ಡ ಶ್ರಮಿಕ ವರ್ಗ – ಕಾರ್ಮಿಕ ವರ್ಗ ಹಾಗೂ ಮಹಿಳಾ ಕಾರ್ಮಿಕರ ಕುರಿತು ವಿಸ್ತೃತವಾದ ಚರ್ಚೆ ಈ ಸಂಪುಟದಲ್ಲಿ ದೊರಕುತ್ತದೆ. ಕಾರ್ಮಿಕರಿಗೆ ವಿಮೆ – ಕೆಲಸದ ಅವಧಿಯನ್ನು ಕಾಮಾತ್ಮಕವಾಗಿ ನಿಗದಿಗೊಳಿಸಿದ್ದು – ಮಹಿಳಾ ಲೇಖಕಿಯರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿದ್ದು – ಕಾರ್ಖಾನೆಗಳಲ್ಲಿ ಸಮಾನತೆಯನ್ನು ಕಾಪಾಡಲು ಸೂಚಿಸಿದ್ದು ಈ ಕೃತಿಯ ಬಹುದೊಡ್ಡ ಜೀವಾಳವೇ ಆಗಿದೆ. ಈ ತೃತೀಯ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಭಾರತದ ಸಮಸ್ತ ಕಾರ್ಮಿಕರನ್ನು ಮಾತನಾಡಿಸಿದ್ದಾರೆ – ಅವರಿಗೆ ಮಾತನ್ನು ಕಳಿಸಿದ್ದಾರೆ.
ಸಂಪುಟ ಒಂಬತ್ತು
563 ಪುಟಗಳನ್ನು ಹೊಂದಿರುವ ಈ ಬೃಹತ್ ಸಂಶೋಧನಾತ್ಮಕ, ವಸ್ತುನಿಷ್ಠ ಅಧ್ಯಯನದ ಸಂಪುಟವು ಕಾರ್ಮಿಕರು ಹಾಗೂ ನೌಕರರ ಸ್ಥಿತಿಗತಿ ಎಂಬ ಸಮಗ್ರ ಭಾರತದ ಕೈಗಾರಿಕೆಗಳು ಸಂವಿಧಾನಾತ್ಮಕವಾಗಿ ಅನುಸರಿಸಬೇಕಾದ ಕೈಗಾರಿಕಾ ನೀತಿ ಹಾಗೂ ಈ ಎಲ್ಲದರೊಳಗೆ ಕಾರ್ಮಿಕರ ( ಪುರುಷ ಹಾಗೂ ಮಹಿಳಾ ಕಾರ್ಮಿಕರನ್ನು ಪ್ರತ್ಯೇಕ ಪ್ರತ್ಯೇಕವಾಗಿ ಒಳಗೊಂಡಂತೆ ) ಸ್ಥಿತಿಗತಿಯನ್ನು ಕಾನೂನಾತ್ಮಕವಾಗಿ ಅನಾವರಣಗೊಳಿಸುವ ಸಂಪುಟವಾಗಿ ಹೊರ ಬಂದಿದೆ. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರ ಸ್ಥಿತಿಗತಿಗಳನ್ನು ಕಾಂಕ್ಲಾತ್ಮಕವಾಗಿ ಸರಿಪಡಿಸಲು ಈ ಸಂಪುಟವು ಚರ್ಚೆಗೆ ಒಳಪಡಿಸುವ ಅಂಶಗಳು ಅತ್ಯಂತ ಹೆಚ್ಚು ಸಹಕಾರಿಯಾಗುತ್ತದೆ.
ಅದಕ್ಕೆ ಹೇಳುವುದು, ಅಂಬೇಡ್ಕರವರು ಕೇವಲ ಒಂದು ಧರ್ಮ ಅಥವಾ ಜಾತಿಯ ಜನಾಂಗವನ್ನು ಪ್ರತಿನಿಧಿಸುವ ವ್ಯಕ್ತಿ ಅಲ್ಲ – ಬದಲಿಗೆ ಸಮಸ್ತ ಭಾರತೀಯರನ್ನು ಪ್ರತಿನಿಧಿಸಿದ ಏಕೈಕ ಭಾರತೀಯ ಎಂದು ಹೇಳಿದರೆ ಖಂಡಿತವಾಗಿಯೂ ತಪ್ಪಾಗದು.
ಸಂಪುಟ ಹತ್ತು
547 ಪುಟಗಳನ್ನು ಒಳಗೊಂಡಿರುವ ಈ ಸಂಶೋದನಾತ್ಮಕ ವಿದ್ವತ್ ಪೂರ್ಣ ಸಂಪುಟವು
ಸಿದ್ದಾರ್ಥ ಗೌತಮ
ಪರಿವರ್ಜಕರ ಪರಿವರ್ತನೆ
ಬುದ್ಧ ಬೋಧಿಸಿದ್ದು ಏನು..?
ಧರ್ಮ ಮತ್ತು ಧಮ್ಮ
ಸಂಘ
ಬುದ್ಧ ಮತ್ತು ಅವನ ಸಮಕಾಲಿನರು.
ಎಂಬ ಮಹತ್ವದ ವಿಷಯಗಳನ್ನು ಐತಿಹಾಸಿಕ ಹಾಗೂ ಚಾರಿತ್ರಿಕ ವಿಶ್ಲೇಷಣೆಯೊಂದಿಗೆ ಭಾರತದ ಸಾಂಸ್ಕೃತಿಕ ಚರಿತ್ರೆಯನ್ನು ಅನಾವರಣಗೊಳಿಸಿರುವುದು ಈ ಸಂಪುಟದಲ್ಲಿ ಕಂಡು ಬರುತ್ತದೆ. ಭಾರತದಲ್ಲಿ ಬೌದ್ಧ ಧರ್ಮ ಜನ್ಮತಾಳಿದ ಸಂದರ್ಭದ ಪ್ರಭುತ್ವ ಹಾಗೂ ಜನತೆಯ ಇತಿಹಾಸವನ್ನು ಈ ಬರವಣಿಗಳು ಅನಾವರಣಗೊಳಿಸುತ್ತವೆ. ಈ ಸಂಪುಟದ ಪ್ರತಿಯೊಂದು ಬರವಣಿಗೆಗಳು ಸಹ ಅಂಬೇಡ್ಕರ್ ಅವರು ಸ್ವತಹ ತಾವೇ ಅನುಭವಿಸಿ ತನ್ನ ಹಾಗೂ ತನ್ನ ಜನರಿಗಾಗಿಯೇ ಬರೆದ ಹೃದಯಸ್ಪರ್ಶಿ ಅಕ್ಷರಗಳಾಗಿವೆ. ಇಲ್ಲಿ ಬುದ್ಧ ಹಾಗೂ ಬುದ್ದನು ಸ್ಥಾಪಿಸಿದ ಬೌದ್ಧ ಧರ್ಮ ಇದೆ , ಬೌದ್ಧ ಧರ್ಮವನ್ನೇ ಅನುಸರಿಸಿ ಆಳ್ವಿಕೆ ಮಾಡಿದ ಅಶೋಕನಿದ್ದಾನೆ. ಅಶೋಕನು ತನ್ನ ಜನರಿಗಾಗಿ ಉತ್ತಮ ಆಳ್ವಿಕೆ ನೀಡಲು ಅನುಸರಿಸಿದ “ದೇವನಾಂಪ್ರಿಯ- ಪ್ರಿಯದರ್ಶಿನಿ” ಎಂಬ ಮಾನವ ಹಾಗೂ ಮಾನವೀಯತೆಯ ಅಂಶವೂ ಇದೆ. ಬುದ್ಧ ಮತ್ತು ಆತನ ದಮ್ಮ ಎಂಬ ಕೃತಿಯ ಬರವಣಿಗೆಯ ಸಂದರ್ಭವೇ ಅಂಬೇಡ್ಕರ್ ಅವರು ಅತ್ಯಂತ ಹೆಚ್ಚು ಪ್ರಭುದ್ಧತೆಗೆ ಒಳಗೊಂಡಿದ್ದ ಕಾಲಘಟ್ಟವೂ ಆಗಿತ್ತು.
ಬುದ್ಧ ಮತ್ತು ಆತನ ದಮ್ಮ – ಕೃತಿಯ ಬರವಣಿಗೆಯಲ್ಲಿ ಅಂಬೇಡ್ಕರ್ ಅವರು ವ್ಯಕ್ತಪಡಿಸುವ ಭಾರತ ಹಾಗು ಭಾರತೀಯತ್ವದ ಸಮ ಸಂಸ್ಕೃತಿಯ ಧರ್ಮದ ಹಿನ್ನೆಲೆಯ ಒಂದೊಂದು ಅಕ್ಷರಗಳನ್ನು ಓದುತ್ತಿದ್ದರೆ ಅಂಬೇಡ್ಕರ್ ಒಳಗೆ ಬುದ್ಧ – ಬಸವ – ಬಸವದಿ ಶರಣರು – ದಾಸರು – ಕೀರ್ತನೆಕಾರರು – ಸಂತರು – ಸೂಫಿಗಳು – ಮಹಾನ್ ಮಹಾನ್ ದಾರ್ಶನಿಕರು ಬಾಹ್ಯ ಹಾಗು ಆಂತರಿಕವಾಗಿ ಮನೆ ಮಾಡಿಕೊಂಡಿದ್ದರು ಎಂಬುದನ್ನು ಅರಿಯಬೇಕಾಗಿದೆ. ಶತಶತಮಾನಗಳ ಅಂತರದಲ್ಲಿ ಉದಯಿಸಿದ ಈ ಎಲ್ಲಾ ಜ್ಞಾನಿಗಳ ಸಮ್ಮಿಳನಗಳ ಉದಯವೇ ಬಾಬಾ ಸಾಹೇಬ್ ಡಾ. ಬಿಆರ್ ಅಂಬೇಡ್ಕರ್ ಎಂಬ ಯುಗಪುರುಷ.
ಸಂಪುಟ ಹನ್ನೊಂದು
ಈ ಬೃಹತ್ ಸಂಪುಟವು 791 ಪುಟಗಳಷ್ಟು ವಿದ್ಯುತ್ ಪೂರ್ಣ ನೆಲ ಮೂಲ ಸಂಸ್ಕೃತಿಯ ಚರಿತ್ರೆಯನ್ನು ಅನಾವರಣಗೊಳಿಸುತ್ತದೆ.
ಪ್ರಾಚೀನ ಭಾರತದ ವಾಣಿಜ್ಯ
ಅಸ್ಪೃಶ್ಯರು ಮತ್ತು ಬ್ರಿಟಿಷ್ ಆಳ್ವಿಕೆ
ಬ್ರಿಟಿಷ್ ಸಂವಿಧಾನ ಕುರಿತ ಉಪನ್ಯಾಸಗಳು
ಕಾಯ್ದೆಗಳು ಮತ್ತು ಕಾನೂನುಗಳ ಕುರಿತ ಟಿಪ್ಪಣಿಗಳು
ಸಂಕೀರ್ಣ ಟಿಪ್ಪಣಿಗಳು
ಎಂಬ ಮಹತ್ವದ ವಿಷಯಗಳನ್ನು ಈ ಸಂಪುಟವು ಚರ್ಚೆಗೆ ಅನುವು ಮಾಡಿಕೊಡುತ್ತದೆ. ಬ್ರಿಟಿಷರು ಭಾರತಕ್ಕೆ ಬಂದ ಮೇಲೆ ದಲಿತ ಜನಾಂಗದಳದ ಸಾಂಸ್ಕೃತಿಕ ಚಲನೆಯನ್ನು ಈ ಕೃತಿಯು ಸೂಕ್ಷ್ಮವಾಗಿ ಗ್ರಹಿಸಿ ಅನಾವರಣಗೊಳಿಸುತ್ತದೆ. ಬಡ್ಡಿ ಶುರು ಭಾರತದಲ್ಲಿ ಆಳ್ವಿಕೆ ಮಾಡಲು ಆರಂಭಿಸಿದ ಕಾಲಘಟ್ಟ ಜೊತೆಗೆ ಧರ್ಮ ಪ್ರಚಾರಕ್ಕೆ ಮುಂದಾದ ಕಾಲಘಟ್ಟಗಳನ್ನು ಜನ ಚರಿತ್ರೆಯ ಹಿನ್ನೆಲೆಯಲ್ಲಿ ಚರ್ಚಿಸಲು ಮುಂದಾಗುತ್ತಾರೆ. ಭಾರತದಲ್ಲಿ ಧಾರ್ಮಿಕ ಚಲನೆಯ ಕುರಿತು ಅಧ್ಯಯನ ಮಾಡಿದ ಪ್ರಥಮ ವಿದ್ವಾಂಸ ಎಂದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮಾತ್ರ. ವಿದೇಶಿ ಯಾತ್ರಿಕರಾದ ಉಯನ್ಸ್ ಸಾಂಗ್- ಎಡ್ವರ್ಡ್ ಥರ್ಸ್ಟನ್ – ಅಬಿಬ್ ಬಾಯ್ – ಮಾರ್ಕ್ ವಿಲ್ಸ್ – ರೆವರೆಟ್ ಕಿಟಲ್ ಅವರ ಸಾಂಪ್ರದಾಯಿಕ ಅಧ್ಯಯನದ ನಂತರ ಭಾರತವನ್ನು ಒಬ್ಬ ಪ್ರಬುದ್ಧ ಭಾರತೀಯನಾಗಿ ವಸ್ತುನಿಷ್ಠವಾಗಿ ಧರ್ಮ ಹಾಗೂ ಸಾಮಾಜಿಕ ಹಿನ್ನೆಲೆಯಲ್ಲಿ ಜನಕೇಂದ್ರಿತ ಅಧ್ಯಯನ ಮಾಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಮಾತ್ರ ಸಲ್ಲುತ್ತದೆ. ಅದಕ್ಕಾಗಿ ಅಂಬೇಡ್ಕರ್ ಅವರನ್ನು ” ಜನತೆಯ ಚರಿತ್ರೆಕಾರ “ಎಂದು ಕರೆಯುವುದು.
ಸಂಪುಟ ಹನ್ನೆರಡು
ಈ ಬೃಹತ್ ಸಂಪುಟವು 715 ಪುಟಗಳನ್ನು ಒಳಗೊಂಡಿದ್ದು ಪ್ರಜಾಪ್ರಭುತ್ವ ಭಾರತದಲ್ಲಿ ಜಾರಿಗೆ ಬಂದ ಸಂವಿಧಾನದ ಪಿತಾಮಹರಾಗಿ ಸಂವಿಧಾನದ ರಚನೆಯಲ್ಲಿ ತೊಡಗಿದ ಸಂದರ್ಭ ಹಾಗೂ ಸಂವಿಧಾನದ ಕರಡು ಪ್ರತಿಯನ್ನು ನವೆಂಬರ್ 26 – 1949 ರಂದು ಲೋಕಸಭೆಯಲ್ಲಿ ಮಂಡಿಸಿದ ದಿನದಿಂದ ಜನವರಿ 26 – 1950 ರಂದು ಸಂವಿಧಾನ ಭಾರತಕ್ಕೆ ಜಾರಿಗೆ ಬರುವವರೆಗೂ ನಡೆದ ಚರ್ಚೆಗಳನ್ನು ವಿಸ್ತೃತವಾಗಿ ಚರ್ಚಿಸುತ್ತದೆ. ಸಂವಿಧಾನದ ಕುರಿತು ಬಂದ ಅನೇಕ ಇಕ್ಕಟ್ಟು ಬಿಕ್ಕಟ್ಟಿನ ಪ್ರಶ್ನೆಗಳಿಗೆ ಅಂಬೇಡ್ಕರ್ ಅವರು ಭಾರತೀಯತ್ವದ ಹಿನ್ನೆಲೆಯಲ್ಲಿ ನೀಡಿದ ಉತ್ತರಗಳು ಈ ಪುಸ್ತಕದಲ್ಲಿ ದೊರಕುತ್ತವೆ. ಇವು ಸಂಶೋಧಕರಿಗೆ ಹಾಗೂ ಓದುಗರಿಗೆ ವಸ್ತುನಿಷ್ಠವಾದ ಉತ್ತರವನ್ನು ದೊರಕಿಸುವ ಮಾದರಿಯ ವಿಸ್ಮಯಗಳನ್ನು ತಂದೂಡ್ಡುತ್ತದೆ . ಈ ಸಂಪುಟದಲ್ಲಿ ಚರ್ಚೆಗೆ ಒಳಪಡುವ ಪ್ರಮುಖ ಅಂಶಗಳು ಸಂವಿಧಾನ ರಚನೆಗೆ ಸಂಬಂಧಿಸಿದ ವಿಚಾರಗಳು. ಭಾರತ ಸಂವಿಧಾನ ( ಕಲಮುವಾರು ಚರ್ಚೆ ) ಇಂತಹ ಮಹತ್ವದ ವಿಷಯವನ್ನು ಈ ಸಂಪುಟವು ತನ್ನ ಒಡಲಲ್ಲಿ ಅದುಮಿಕೊಂಡು ಓದುಗರಿಗೆ ಪ್ರಜಾಪ್ರಭುತ್ವ ಭಾರತವನ್ನು ಅನಾವರಣಗೊಳಿಸುತ್ತದೆ.
ಸಂಪುಟ ಹದಿಮೂರು
564 ಪುಟಗಳನ್ನು ಹೊಂದಿರುವ ಈ ಬೃಹತ್ ವಿದ್ವತ್ ಪೂರ್ಣ ಪ್ರಜಾಸತ್ತಾತ್ಮಕ ವಿಷಯವನ್ನು ಒಳಗೊಂಡ ಸಂಪುಟವು ಭಾರತ ಸಂವಿಧಾನದ ವಿಧಿಗಳು ಹಾಗೂ ಕಲಮುಗಳ ಮೇಲೆ ಚರ್ಚೆ ಎಂಬ ಮಹತ್ವದ ವಿಷಯವನ್ನೊಳಗೊಂಡ ಸುಂಕಟವಾಗಿದೆ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಜಾರಿಗೆ ಬರಲು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಚರ್ಚಿಸಿದ ವಿಷಯಗಳ ಸಮಗ್ರ ಅಧ್ಯಯನ ಈ ಸಂಪುಟದ ಸಾರ. ಭಾರತದ ಸಂವಿಧಾನದ ಪ್ರತಿ ಹಂತಗಳನ್ನು ಅರ್ಥ ಮಾಡಿಕೊಳ್ಳಲು ಈ ಸಂಪುಟದ ಅಧ್ಯಯನ ಅವಶ್ಯಕವಾಗಿದೆ.
ಸಂಪುಟ ಹದಿನಾಲ್ಕು
765 ಪುಟಗಳಷ್ಟು ವಿದ್ವತ್ ಪೂರ್ಣ ಅಂಶಗಳನ್ನು ಒಳಗೊಂಡಿರುವ ಈ ಸಂಪುಟವು ಹಿಂದೂ ಸಂಹಿತೆ ಮಸೂದೆ ಎಂಬ ವಿಷಯ ಕುರಿತೆ ಸುಧೀರ್ಘವಾಗಿ ಚರ್ಚಿಸುತ್ತದೆ. ಹಿಂದೂ ಧರ್ಮ ಹಾಗೂ ಅದರೊಳಗಿನ ಜಾತಿಗಳ ಕರ್ತವ್ಯ – ಧಾರ್ಮಿಕ ಹಿನ್ನೆಲೆಯಿಂದ ಅವು ರೂಪಿತಗೊಂಡ ವಿಧಾನಗಳು – ಅದನ್ನೇ ನಮ್ಮ ಜನ ಸಂಸ್ಕೃತಿ ಎಂಬ ಅಹಂನಲ್ಲಿ ಮೆರೆದು- ನಾನು ಹೀಗೆ ಬದುಕಬೇಕು – ನೀನು ಹೀಗೆ ಬದುಕಿ ಜೀವಿಸಬೇಕು ಎಂದು ಸಾಂಸ್ಕೃತಿಕ ನಿರ್ಬಂಧನೆಗೆ ಒಳಪಡಿಸಿದವರ ವಿರುದ್ಧ ಬರೆದು ವಸ್ತುನಿಷ್ಠ ಅಂಶಗಳನ್ನು ಈ ಸಂಪುಟವು ಚರ್ಚೆಗೆ ಎಡೆ ಮಾಡಿಕೊಡುತ್ತದೆ.
ಸಂಪುಟ ಹದಿನೈದು
554 ಪುಟಗಳಷ್ಟು ವಸ್ತುನಿಷ್ಠ ಸಂಶೋಧನಾತ್ಮಕ ಮಹತ್ವದ ಮಾಹಿತಿಯನ್ನು ಹೊರ ಚೆಲುವ ಈ ಸಂಪುಟವು ಶತಶತಮಾನಗಳಿಂದ ಈ ಪುರುಷ ಪ್ರಧಾನ ವ್ಯವಸ್ಥೆಯ ಭಾರತದಲ್ಲಿ ಸ್ತ್ರೀ ಅನುಭವಿಸಿದ ಸಾಂಸ್ಕೃತಿಕ ಇಕ್ಕಟ್ಟು ಬಿಕ್ಕಟ್ಟುಗಳನ್ನು ಹಾಗೂ ಅವುಗಳಿಗೆ ಪರಿಹಾರವನ್ನು ಸೂಚಿಸುವ ಹಿನ್ನೆಲೆಯಲ್ಲಿ ಚರ್ಚೆಗೆ ಎಡೆ ಮಾಡಿಕೊಡುತ್ತದೆ. ಈ ಸಂಪುಟದ ಅಕ್ಷರಗಳಲ್ಲಿ ಅಂಬೇಡ್ಕರ್ ಅವರ ಭಾರತೀಯತ್ವ ಸಮಗ್ರವಾಗಿ ಭಾರತ ಮಾತೆಯರ ಮೂಲಭೂತ ಹಕ್ಕು ಬಾಧ್ಯತೆಗಳ ಕುರಿತ ಮನ ಮುಟ್ಟುವ ಅಂಶಗಳು ಅನಾವರಣಗೊಂಡಿರುವುದು ಮಹತ್ವದಾಗಿದೆ.
ಧಾರ್ಮಿಕ ಹಾಗೂ ಜಾತಿಯ ಸಾಂಪ್ರದಾಯಿಕ ಹಿನ್ನೆಲೆಯ ಭಾರತದಲ್ಲಿ ಸಮಸ್ತ ಮಹಿಳೆಯರು ಸಿಲುಕಿರುವ ಅಂಶ ಹಾಗೂ ಅದಕ್ಕೆ ಕಾರಣಗಳನ್ನು ವಸ್ತುನಿಷ್ಠವಾಗಿ ಹೇಳಿ ಅದರಿಂದ ಮುಕ್ತಿಗೊಳಿಸಲು ಇರುವ ಸಂವಿಧಾನಾತ್ಮಕ ಕಾನೂನುಗಳನ್ನು ಈ ಕೃತಿಯು ತಿಳಿಸುತ್ತದೆ. ಪ್ರತಿಯೊಬ್ಬ ಭಾರತೀಯ ಮಹಿಳೆಯರು ಸಹ ತಮ್ಮ ಬೈಬಲ್ ರೂಪದಲ್ಲಿ ಓದಲೇಬೇಕಾದ ಕೃತಿ ಇದು. ಆದರೆ ಕೆಲವು ಭಾರತೀಯ ಮಹಿಳಾ ಮನಸುಗಳಿಗೆ ಅವರನ್ನು ಅಸಮಾನತೆಗೆ ದೂಡಿದ ಪುರಾಣಗಳ ಚರಿತ್ರೆಯೇ ಬೇಕೆ ಹೊರತು ಸಮಾನತೆಗೆ ಕೊಂಡೊಯ್ಯುವ ಅಂಬೇಡ್ಕರ್ ಅವರ ಈ ಸಂವಿಧಾನಾತ್ಮಕ ಬರವಣಿಗಳು ಬೇಕಾಗಿಲ್ಲ. ಇದಕ್ಕೆ ಕಾರಣ ಅಂಬೇಡ್ಕರವರು ಈ ಭಾರತದ ಅಸ್ಪೃಶ್ಯ ಸಮಾಜದಲ್ಲಿ ಜನಿಸಿದ್ದರು ಎಂಬ ಒಂದೇ ಒಂದು ಕಾರಣಕ್ಕಾಗಿ ಅವರ ಚಿಂತನೆ -: ಬರವಣಿಗೆ – ಹೋರಾಟ ಗಳೆಲ್ಲವನ್ನೂ ಸಹ ಅಸ್ಪೃಶ್ಯತೆಗೆ ಒಳಪಡಿಸಿದ ದೇಶ ನಮ್ಮದು. ಈ ಹಂತದಲ್ಲಂತೂ ಭಾರತ ಬಹುದೊಡ್ಡ ಅಸ್ಪೃಶ್ಯತಾ ಆಚರಣಾ ದೇಶವಾಗಿಯೇ ಇಂದಿಗೂ ಸಹ ಜೀವಂತವಾಗಿದೆ. ಇದು ಕೊನೆಗಾಣಬೇಕು. ಹಿಂದೂ ಕೋಡ್ ಮಸೂದೆ. (ಕಲಮುವಾರು ಚರ್ಚೆ) ಎಂಬ ಭಾರತದಲ್ಲಿ ಮಹಿಳೆಯರ ಸ್ಥಾನಮಾನಗಳು ಹಾಗೂ ಅವರ ಹಕ್ಕು ಬಾಧ್ಯತೆಗಳ ಕುರಿತು ಈ ಸುಂಕುಟವು ಅನೇಕ ಮಾಹಿತಿಗಳೊಂದಿಗೆ ಓದುವರನ್ನು ಪ್ರಜ್ಞಾವಂತರಾಗಿಸುತ್ತದೆ.
ಸಂಪುಟ ಹದಿನಾರು
1006 ಪುಟಗಳಷ್ಟು ಬೃಹತ್ ಮಾಹಿತಿಯನ್ನು ಹೊಂದಿರುವ ಈ ವಿದ್ವತ್ ಪೂರ್ಣ ಸಂಪುಟವು ವಿವಿಧ ವಿಧೇಯಕಗಳ ಬಗ್ಗೆ ಚರ್ಚೆಗಳು
ವಿವಿಧ ಮಸೂದೆಗಳ ಬಗ್ಗೆ ಚರ್ಚೆಗಳು
ಸಂಸತ್ತಿನ ಚರ್ಚೆಗಳು. ಎಂಬ ಮಹತ್ವದ ಮಹತ್ವದ ವಿಷಯಗಳನ್ನು ತನ್ನ ಒಡಲಿನಲ್ಲಿ ಓದುಗರಿಗೆ ಅನಾವರಣಗೊಳಿಸುತ್ತದೆ. ಸಂವಿಧಾನದ ಜನಪರ ಕಾನೂನುಗಳನ್ನು ತಿಳಿಯಲು ಈ ಸಂಪುಟದ ಅಧ್ಯಯ ಅವಶ್ಯಕವಾಗಿದೆ. ಸಂವಿಧಾನದ ಆಶಯದಂತೆ ಬದುಕನ್ನು ರೂಪಿಸಿಕೊಳ್ಳಲು ಹಂಬಲಿಸುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಸಹ ಈ ಸಂಪುಟದ ಓದು ಮತ್ತು ತಿಳುವಳಿಕೆ ಅವಶ್ಯಕವಾಗಿದೆ.
ಸಂಪುಟ ಹದಿನೇಳು
698 ಪುಟಗಳನ್ನು ಹೊಂದಿರುವ ಈ ಬೃಹತ್ ವಿದ್ವತ್ಪೂರ್ಣ ಸಂಪುಟವು ಪ್ರತಿಯೊಬ್ಬ ಭಾರತೀಯರು ಸದೃಢ ಭಾರತವನ್ನು ಸಂವಿಧಾನಾತ್ಮಕವಾಗಿ ಸಮ ಸಂಸ್ಕೃತಿಯ ಪ್ರತಿಪಾದನೆ ಹಿನ್ನೆಲೆಯಲ್ಲಿ ಕಟ್ಟುವ ಆಧಾರಕ್ಕೆ ಹಿಡಿದ ಕೈಗನ್ನಡಿಯ ರೂಪದಲ್ಲಿ ರೂಪಗೊಂಡಿದೆ. ಈ ಸಂಪುಟವು ತನ್ನ ಒಡಲಾಳದಲ್ಲಿ
ಮಹದ್ ಸತ್ಯಾಗ್ರಹ
ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮಾ ಗಾಂಧಿ ಅವರ ಭೇಟಿಗಳು.
ಭಾರತೀಯ ರಾಜಕೀಯ ಕ್ಷೇತ್ರಕ್ಕೆ ಅಸ್ಪೃಶ್ಯವನ್ನು ತರುವಲ್ಲಿ ಡಾ.ಅಂಬೇಡ್ಕರ್ ಅವರ ಪಾತ್ರ.
ನಾಸಿಕ್ ನಲ್ಲಿ ಕಾಲಾರಾಂ ದೇವಾಲಯದ ಪ್ರವೇಶಕ್ಕಾಗಿ ಸತ್ಯಗ್ರಹ .
ಲೇಖನಗಳು, ಸಂದೇಶಗಳು, ಮುನ್ನುಡಿಗಳು.
ಕ್ಯಾಬಿನೆಟ್ ಮಿಷನ್ ಹಾಗೂ ಅಧಿಕಾರ ಹಸ್ತಾಂತರದ ಬಗೆಗೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಎಂಬ ಮಹತ್ವದ ವಿಷಯವನ್ನು ಒಳಗೊಂಡ ಸಂಪುಟವಾಗಿ ರೂಪ ತೆಗೆದುಕೊಂಡಿದೆ. ಪ್ರತಿಯೊಬ್ಬ ಭಾರತದ ಪ್ರಜೆಯು ಓದಲೇ ಬೇಕಾದ ಈ ಮಹತ್ವದ ಸಂಪುಟ ಇದು. ಬಹು ಮುಖ್ಯವಾಗಿ ಭಾರತದಲ್ಲಿ ಎರಡು ಸಾವಿರ ವರ್ಷಗಳಿಂದ ಏಕಮುಖವಾಗಿಯೇ ಇದ್ದ ಧರ್ಮಾಧರಿತ ಜಾತಿಯ ಅನೀತಿಗಳನ್ನು ಭಾರತದ ಜನ ಚರಿತ್ರೆಯ ಹಿನ್ನೆಲೆಯಲ್ಲಿ ಇತಿಹಾಸವನ್ನು ಅನಾವರಣಗೊಳಿಸುತ್ತದೆ. ಭಾರತದಲ್ಲಿ ಸ್ಪೃಷ್ಯ- ಅಸ್ಪೃಶ್ಯ , ಊರು ಹಾಗೂ ಕೇರಿಯ ಜನರ ಕುರಿತು ಅಧ್ಯಯನ ಮಾಡಲು ಈ ಕೃತಿಯು ಮಹತ್ವದಾಗಿದೆ. ಈ ರಾಷ್ಟ್ರದಲ್ಲಿ ಸಮ ಸಂಸ್ಕೃತಿ ಪ್ರತಿಪಾದನೆ ಮಾಡಲು ಅಂಬೇಡ್ಕರ್ ಅವರು ಕೈಗೊಂಡ ಶಾಂತಿ ಮಾರ್ಗದ ಹೋರಾಟ ಹಾಗೂ ಅದರಿಂದ ದೊರಕಿದ ಫಲ – ಇತಿಹಾಸವನ್ನು ಮರೆಯದೆ ಇಂದಿಗೂ ಓದಲೇಬೇಕಾದ ಭಾರತದ ಮೂಲ ನಿವಾಸಿಗಳ ಹಕ್ಕುಗಳ ಪ್ರತಿಪಾದನೆಯ ಅಂಶಗಳು ಈ ಸಂಪುಟದ ಪ್ರತಿಪುಟಪುಟದಲ್ಲಿಯೂ ಅನಾವಣಗೊಂಡಿರುವುದು ಇದರ ವಿಶೇಷ.
ಕುಡಿಯುವ ನೀರಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ನೆಲದಲ್ಲಿ ಹಮ್ಮಿಕೊಂಡ ಮಹಡ್ಕೆರೆ ಚಳುವಳಿ – ದೇವಾಲಯಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆದ ಕಾಲರಾಂಪುರ ಟೆಂಪಲ್ನ ಪ್ರವೇಶಕ್ಕೆ ಸಂಬಂಧಿಸಿದ ಚಳುವಳಿಯ ಹಾಗೂ ಅವುಗಳ ಸಾಧಕ ಬಾದಕಗಳನ್ನು ಈ ಕೃತಿ ಚಾರಿತ್ರಿಕವಾಗಿ ಅನಾವರಣಗೊಳಿಸುತ್ತದೆ.ಈ ಎಲ್ಲಾ ಚಳುವಳಿಗಳಿಗೆ ಶತಮಾನೋತ್ಸವ ಆಗುತ್ತಿರುವ ಸಂದರ್ಭದಲ್ಲಿ ಇಂತಹ ಕೃತಿಗಳ ಸಮಗ್ರ ಓದು ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ.
ಸಂಪುಟ ಹದಿನೆಂಟ
787 ಪುಟಗಳಷ್ಟು ಮಹತ್ವದ ವಿದ್ಯುತ್ ಮಾಹಿತಿಯನ್ನು ಅನಾವರಣಗೊಳಿಸುವ ಈ ಸಂಪುಟವು
ರಾಷ್ಟ್ರ ನಿರ್ಮಾಣ ಮತ್ತು ಅದರಲ್ಲಿನ ಪ್ರಜಾಪ್ರಭುತ್ವ
ಸಂಸ್ಥೆಗಳು, ಸಂಘಟನೆಗಳು ಮತ್ತು ಅವುಗಳ ಸಂವಿಧಾನ
ಪರಿಶಿಷ್ಟಗಳು ಎಂಬ ಮಹತ್ವದ ವಿಷಯಗಳನ್ನು ಚರ್ಚೆಗೆ ಎಡೆ ಮಾಡಿಕೊಡುತ್ತದೆ. ಪ್ರಪಂಚದಲ್ಲಿ ನಮ್ಮ ದೇಶವನ್ನು ಹೇಗೆ ಸದೃಢವಾಗಿ ನಿರ್ಮಾಣ ಮಾಡಬೇಕು ಎಂಬ ಎಂಬುದನ್ನು ಪ್ರಜಾಪ್ರಭುತ್ವದ ಕಾನೂನುಗಳ ಹಿನ್ನೆಲೆಯಲ್ಲಿ ಈ ಸಂಪುಟವು ವಿಸ್ತೃತವಾಗಿ ಅನಾವರಣಗೊಳಿಸುತ್ತದೆ. ಬಹು ಮುಖ್ಯವಾಗಿ ಇಂದು ಸಂಘಟನೆಗಳನ್ನು ಕಟ್ಟುವ – ಆ ಸಂಘಟನೆಗಳು ಸಂವಿಧಾನಾತ್ಮಕವಾಗಿ ಒಂದಲೇ ಬೇಕಾದ ಬೈಲಾ – ಸಂಘಟನೆಗಳು ಮಾಡಬೇಕಾದ ಕಾರ್ಯಗಳನ್ನು ವಿಸ್ತೃತವಾಗಿ ಚರ್ಚೆಗೆ ಎಡೆ ಮಾಡಿಕೊಡುತ್ತದೆ.
ಸಂಪುಟ ಹತ್ತೊಂಬತ್ತು
756 ಪುಟಗಳಷ್ಟು ಬೃಹತ್ ಮಾಹಿತಿಯನ್ನು ತನ್ನ ಒಡಲಿನೊಳಗೆ ಅದುಮಿ ಕೊಂಡಿರುವ ಈ ಮಹತ್ವದ ಸಂಪುಟವು ಅಸ್ಪೃಶ್ಯತೆ , ಜಾತಿ ತಾರತಮ್ಯ, ಅಸಮಾನತೆ ಇತ್ಯಾದಿ ವಿಷಯಗಳ ಬಗ್ಗೆ ಭಾಷಣಗಳು ಎಂಬ ವಿಷಯವನ್ನೇ ಆಧಾರವಾಗಿಸಿಕೊಂಡು ರಚನೆಗೊಂಡ ಸಂಪುಟವಾಗಿದೆ . ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಶಾಂತಿಯುತ ಹೋರಾಟ ಹಾಗೂ ಭಾರತದ ಪ್ರತಿಯೊಬ್ಬ ಪ್ರಜೆಗೂ ಮನೆ- ಮನ ಮುಟ್ಟುವಂತೆ ಹೇಳಿದ ವಸ್ತುನಿಷ್ಠ ವಿಶ್ಲೇಷಣೆಯ ಮಾತುಗಳು ಈ ಕೃತಿಯ ಆಧಾರ ಸ್ತಂಭವಾಗಿವೆ. ದುಡಿಸಿಕೊಂಡು ದೊಡ್ಡವರಾದವರ ಹಾಗೂ ದುಡಿದು ಸಾಂಸ್ಕೃತಿಕವಾಗಿ ಚಿಕ್ಕವರಾದವರ ಕಾರಣಕ್ಕೆ ಈ ಕೃತಿ ಉತ್ತರವನ್ನು ದೊರಕಿಸುತ್ತದೆ.
ಸಂಪುಟ ಇಪ್ಪತ್ತು
877 ಪುಟಗಳನ್ನು ಹೊಂದಿರುವ ಈ ಬೃಹತ್ ವಿದ್ಯುತ್ ಪೂರ್ಣ ಸಂಪುಟವು ಅಸ್ಪೃಶ್ಯತೆ, ಜಾತಿಭೇದ, ದಲಿತರಿಗೆ ಪ್ರಾತಿನಿಧ್ಯ ಇತ್ಯಾದಿ ವಿಷಯಗಳ ಬಗ್ಗೆ ಭಾಷಣಗಳು. ಎಂಬ ವಿಷಯವನ್ನು ಒಳಗೊಂಡ ಸಂಪುಟವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ದೇಶ ವಿದೇಶದಲ್ಲಿ ಪಡೆದ ವಿದ್ವತ್ತು ಹಾಗೂ ಸ್ವತಃ ತಾವು ಅನುಭವಿಸಿದ ಭಾರತದ ಸಾಂಸ್ಕೃತಿಕ ಸಂಕೋಲೆಗಳನ್ನು ಅರ್ಥೈಸುವುದೆ ಈ ಬೃಹತ್ ಸಂಪುಟದ ಜೀವಾಳ. ಈ ಸಂಪುಟದಲ್ಲಿ ಈ ರಾಷ್ಟ್ರದ ಮೂಲ ನಿವಾಸಿಗಳ ಆದರೂ ಸಹ ಅಸ್ಪೃಶ್ಯರು ಎಂದು ಕರೆಸಿಕೊಂಡಿದ್ದ ವಿಷಯಕ್ಕೆ ಪೂರಕವಾದ ಇತಿಹಾಸವಿದೆ. ಇತಿಹಾಸಕ್ಕೆ ಸೆಡ್ ಹೊಡೆದು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಮನಾಗಿ ಹೇಗೆ ಬದುಕಬೇಕು ಎಂದು ಹೇಳುವ ಉತ್ತರವೂ ಇದೆ.
ಸಂಪುಟ ಇಪ್ಪತ್ತೊಂದು
561 ಪುಟಗಳಷ್ಟು ಮಾಹಿತಿಯನ್ನು ತನ್ನ ಒಡಲಿನಲ್ಲಿ ಸಂಗ್ರಹಿಸಿಕೊಂಡಿರುವ ಈ ಮಹತ್ವದ ಸಂಪುಟವು ಜಾತಿಭೇದ, ಅಸ್ಪೃಶ್ಯತೆ ಇತ್ಯಾದಿ ವಿಷಯಗಳು. ಎಂಬ ವಿಷಯವನ್ನು ಭಾರತದ ಜನಕೇಂದ್ರಿತ ಧಾರ್ಮಿಕ ಹಿನ್ನೆಲೆಯ ಸಾಂಸ್ಕೃತಿಕ ಚರ್ಚೆಯನ್ನು ಅನಾವರಣಗೊಳಿಸುವ ವೆಡೆ ಓದುಗರನ್ನು ತನ್ನತ್ತ ಸೆಳೆದುಕೊಳ್ಳುತ್ತದೆ.
ಸಂಪುಟ ಇಪ್ಪತ್ತೆರಡು
587 ಪುಟಗಳಷ್ಟು ಮಹತ್ವದ ಮಾಹಿತಿಯನ್ನು ತನ್ನ ಒಡಲಿನಲ್ಲಿ ಸಂಗ್ರಹಿಸಿಕೊಂಡಿರುವ ಈ ಸಂಪುಟವು ಪ್ರತಿಯೊಬ್ಬ ಭಾರತದ ಶ್ರಮಜೀವಿಗೂ ಭಾರತ ಮತ್ತು ಭಾರತೀಯತೆಯನ್ನು ಅನಾವರಣಗೊಳಿಸುತ್ತದೆ. ಅಸ್ಪೃಶ್ಯರ ಸ್ಥಿತಿಗತಿ , ಕಾರ್ಮಿಕರ ಹಿತಾಶಕ್ತಿ , ರಾಜಕೀಯ ಬೆಳವಣಿಗೆಗಳು, ಗಾಂಧೀಜಿಯ ಚಿಂತನೆ ಮುಂತಾದ ವಿಷಯಗಳು. ಎಂಬ ಮಹತ್ವದ ವಿಷಯವನ್ನು ಚರ್ಚೆಗೆ ಎಡೆ ಮಾಡಿಕೊಡುತ್ತದೆ .
ಈ ಮಾದರಿಯ ಇಪ್ಪತ್ತೆರಡು ಬೃಹತ್ ಸಂಪುಟಗಳೊಂದಿಗೆ – ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದಲ್ಲಿ ಬೌದ್ಧ ಧರ್ಮ ಹಾಗೂ ಅದರ ಸಾರವನ್ನು ತಿಳಿದು, ಭಾರತದ ನೆಲದ ಮೂಲ ಧರ್ಮ ವಾದ ಬೌದ್ಧ ಧರ್ಮವನ್ನು ಪುನರ್ ಸ್ಥಾಪಿಸಲು ಬೌದ್ಧ ಧರ್ಮದ ಸಾರಾ ರೂಪಿತಗೊಂಡಿದ್ದ ಪಾಲಿ ಭಾಷೆಯನ್ನು ಸಮಗ್ರವಾಗಿ ಕಲಿತು ಅದಕ್ಕಾಗಿ ಬೃಹತ್ ಪದಕೋಶವನ್ನೇ ರೂಪಿಸಿಕೊಂಡಿದ್ದರು.ಈ ಪಾಲಿ ಪದಕೋಶವನ್ನು ಪಾಲಿ – ಕನ್ನಡ ಪದಕೋಶ ವನ್ನಾಗಿಯೂ ಅನುವಾದ ಮಾಡಿ ನೀಡಿರುವುದು,, ಬಹುಮುಖ್ಯವಾಗಿ ಪಾಲಿಭಾಷೆಯ ವ್ಯಾಕರಣವನ್ನು ಪ್ರತ್ಯೇಕವಾಗಿ ಅನುವಾದ ಮಾಡಿ ಓದುಗರಿಗೆ ನೀಡಿರುವುದು ಇವುಗಳ ಮೌಲ್ಯವನ್ನು ಹೆಚ್ಚಿಸಿದೆ.
ಅಂಬೇಡ್ಕರ್ ಅವರ ಸಮಗ್ರ ಬರಹ ಮತ್ತು ಭಾಷಣಗಳನ್ನು ಸಂಗ್ರಹಿಸಿ ಸಮಗ್ರವಾಗಿ ಈ 22 ಸಂಪುಟಗಳ ಮಾದರಿಯಲ್ಲಿ ಕನ್ನಡದಲ್ಲಿ ಪ್ರಕಟಿಸಿರುವುದು ವಿಶೇಷ. ಈ ಸಂಪುಟಗಳ ಕನ್ನಡ ಅನುವಾದಕ ಸಂಪಾದನಾ ಸಮಿತಿಯಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸಿದ ನಮ್ಮ ನಾಡಿನ ಸಾಂಸ್ಕೃತಿಕ ಅಸ್ಮಿತೆ ಎನಿಸಿಕೊಂಡಿರುವ ಡಾ. ಸಿದ್ದಲಿಂಗಯ್ಯ ಹಾಗೂ ಡಾ. ದೇವನೂರು ಮಹದೇವ ಅವರಿಗೆ ಹೃದಯಪೂರ್ವಕ ಭೀಮ ವಂದನೆಗಳು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕಠಿಣ ಇಂಗ್ಲಿಷ್ನ ಒಡಲಾಳದ ಭಾವನೆಯನ್ನು ಅರ್ಥ ಮಾಡಿಕೊಂಡು ಕನ್ನಡಕ್ಕೆ ತರ್ಜಮೆ ಮಾಡಿದ ಎಲ್ಲಾ ಅನುವಾದಕರಿಗೂ ಸಹ ಭೀಮ ವಂದನೆಗಳು.
ಈ ಬೃಹತ್ ಇಪ್ಪತ್ತೆರಡು ಸಂಪುಟಗಳು ಭಾರತ ಮತ್ತು ಭಾರತೀಯರನ್ನು ಮಾತನಾಡಿಸುತ್ತವೆ. ಇವುಗಳನ್ನು ಓದಿ ನಾವು ಮಾತನಾಡುವುದೊಂದೇ ಉಳಿದಿರುವ ದಾರಿ. ಆದರೆ ಇಂದು ಆಗುತ್ತಿರುವುದಾದರೂ ಏನು?. ನಿಜಾರ್ಥದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಯಾರ ಪರವಾಗಿ- ಯಾರ ಉದ್ಧಾರಕ್ಕಾಗಿ – ಸ್ವತಃ ಈ ದೇಶದಲ್ಲಿ ಅಸ್ಪೃಶ್ಯರಾಗಿ ನೋವನ್ನು ಅನುಭವಿಸಿ ಇದನ್ನು ಹೋಗಲಾಡಿಸಲೇಬೇಕು ಎಂಬ ಸ್ವಾಭಿಮಾನದ ಹಠದಿಂದ ದೇಶ ವಿದೇಶದಲ್ಲಿ ಶಿಕ್ಷಣ ಪಡೆದು, ಸ್ವಾಹಿತ ಶಕ್ತಿಯನ್ನು ತ್ಯಾಗ ಮಾಡಿ – ಇಷ್ಟೆಲ್ಲ ಶ್ರಮಪಟ್ಟು ಬೆವರು ಹಾಗೂ ರಕ್ತವನ್ನೇ ಲೇಖನಿಯ ಶಾಹಿಯನ್ನಾಗಿಸಿಕೊಂಡು ಬರೆದರೂ ಅವರಿಗೆ ಇಂದಿಗೂ ಸಹ ಓದಲು ಬರುತ್ತಿಲ್ಲ, ಇವರ ಬರವಣಿಗೆ ಸಾರ – ಆಳವೂ ಸಹ ತಿಳಿಯದಂತಾಗಿದೆ. ಮುಂದುವರೆದು ಹೇಳಬೇಕೆಂದರೆ ಇನ್ನೂ ಸಹ ಪುರಾಣದ ಚರಿತ್ರೆಯಲ್ಲಿಯೇ ತಮ್ಮ ಮನೆ ಹಾಗೂ ಮನವನ್ನು ತೊಡಗಿಸಿಕೊಳ್ಳುತ್ತಿರುವುದು ಇಂದಿನ ಸಾಂಸ್ಕೃತಿಕ ಸಂದರ್ಭದ ದುರಂತವೂ ಆಗಿದೆ..
ಆದರೆ
ಯಾರ “ವಿರುದ್ಧ” ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಒಡಲಾಳದ ಧ್ವನಿಯನ್ನು ಅನಾವರಣಗೊಳಿಸುವ ಹಿನ್ನೆಲೆಯಲ್ಲಿ ಬರೆದರೂ, ಅವರಿಗೆ ಓದಲು ಸ್ಪಷ್ಟವಾಗಿ ಬರುವ ಕಾರಣದಿಂದ ಅಂಬೇಡ್ಕರ್ ಅವರ ಚಿಂತನೆ – ಬರವಣಿಗೆ ಹಾಗೂ ಸಂವಿಧಾನವನ್ನು ಅರ್ಥ ಮಾಡಿಕೊಂಡು ಸಕಲ ಸೌಲಭ್ಯಗಳನ್ನು ಯಾವ ಚಳುವಳಿ- ಮುಷ್ಕರ – ಹೋರಾಟಗಳನ್ನು ಮಾಡದೆ ಕುಂತಲ್ಲೇ ತಮ್ಮ ಸಕಲ ಮೂಲಭೂತ ಹಕ್ಕುಗಳನ್ನು ಸಂವಿಧಾನಾತ್ಮಕವಾಗಿ ಪಡೆಯುತ್ತಿದ್ದಾರೆ.
ಈ ಮಹತ್ವದ ಹಿನ್ನೆಲೆಯಿಂದಲೇ ವಸ್ತುನಿಷ್ಠವಾಗಿ ಹೇಳುವುದಾದರೆ ಅಂಬೇಡ್ಕರ್ ಅವರನ್ನು ಬೌದ್ಧಿಕವಾಗಿ ಅರ್ಥಮಾಡಿಕೊಂಡರೆ ಮಾತ್ರ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯು ಪ್ರಭುದ್ಧವಾರಾಗಲು ಸಾಧ್ಯ ಎಂದು. ಕೇವಲ ಭೌತಿಕವಾಗಿ ಅಂಬೇಡ್ಕರ್ ಅವರನ್ನು ಸ್ವಾರ್ಥಪರ ಸಾಧನೆಗಾಗಿಯೇ ಬಳಸಿಕೊಂಡು ಬಿಸಾಡಲು ಮುಂದಾದರೆ ಭಾರತದ ಪ್ರಜೆಗಳಾಗಿ ನಾವೆಲ್ಲರೂ ಬಹುದೊಡ್ಡ ಸಾಂಸ್ಕೃತಿಕವಾಗಿ ಕಟ್ಟಲಾಗದ ಬೆಲೆಯನ್ನು ಮತ್ತೊಮ್ಮೆ ಕಟ್ಟಬೇಕಾಗುತ್ತದೆ. ಅದಕ್ಕೆ ಭಾರತದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬಹುದೊಡ್ಡ ಪಾರಂಪರಿಕ ಇತಿಹಾಸ ಹಾಗೂ ಚರಿತ್ರೆಯೇ ಸಾಕ್ಷಿಯಾಗಿದೆ. ನಾವು ಇತಿಹಾಸವನ್ನು ನಿರ್ಮಿಸದಿದ್ದರೂ ಸಹ ಇತಿಹಾಸವನ್ನು ಅರಿಯಬೇಕಾಗಿದೆ. ಇತಿಹಾಸವನ್ನು ಅರಿತಾಗ ಮಾತ್ರ ಬದುಕಿನ ದಾರಿ ಗೊತ್ತಾಗುತ್ತದೆ. ಇದು ಅಂಬೇಡ್ಕರ್ ಅವರ ತತ್ವ- ಆದರ್ಶವೂ ಆಗಿತ್ತು.
ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ರವರು ಆರಂಭಿಸಿದ ಪತ್ರಿಕೆಗಳು
ಮೂಕನಾಯಕ
(1920 ಜನವರಿ 31 ಆರಂಭ )
ಬಹಿಷ್ಕೃತ ಭಾರತ
(1927 – 1929)
ಜನತಾ (1930 – 1956)
ಪ್ರಬುದ್ಧ ಭಾರತ (1956)
ಅಂಬೇಡ್ಕರ್ ಅವರು ಆರಂಭಿಸಿದ ಪತ್ರಿಕೆಗಳ ಸ್ವರೂಪ ಧರ್ಮ :
ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನಗಳು – ಈ ರಾಷ್ಟ್ರದ ಮೂಲ ನಿವಾಸಿಗಳ ಸ್ಥಿತಿಗತಿಯ ಇಕ್ಕಟ್ಟು ಬಿಕ್ಕಟ್ಟುಗಳನ್ನು ಭಾರತೀಯತ್ವದ ಮೇಲೆ ಕೇಂದ್ರೀಕರಿಸಿರುವುದು ಪ್ರಮುಖ ಲಕ್ಷಣಗಳಲ್ಲಿ ಒಂದಾಗಿತ್ತು. ಬಹು ಮುಖ್ಯವಾಗಿ ಅವರ ಆಲೋಚನೆಗಳು ಜಾತಿ ಮತ್ತು ದಲಿತ ರಾಜಕಾರಣದ ಕುರಿತಾದ ಸಮಕಾಲೀನ ಚರ್ಚೆಗಳನ್ನು ರೂಪಿಸಿದ್ದು ಮಾತ್ರವಲ್ಲದೇ, ನಮ್ಮ ಸಮಾಜ, ಅದರ ಇತಿಹಾಸ ಮತ್ತು ರಾಜಕೀಯದ ಬಗ್ಗೆ ಪ್ರತಿಯೊಬ್ಬರ ತಿಳುವಳಿಕೆಯನ್ನು ಇನ್ನಷ್ಟು ತಿಳುವಳಿಕೆಯನ್ನು ನೀಡಲು ಪ್ರೇರಣೆಯಾದವು. ಇಂಥ ಹಿನ್ನೆಲೆ ಇದ್ದರೂ ಸಹ ಅಂಬೇಡ್ಕರ್ ಅವರ ಪತ್ರಿಕೋದ್ಯಮ ಇಂದಿಗೂ ಸಹ ಬೌದ್ಧಿಕ ಚರ್ಚೆಗೆ ಎಡೆ ಆಗದಿರುವುದು ದುರಂತವೇ ಸರಿ. ಇದಕ್ಕೆ ಪ್ರಮುಖ ಕಾರಣ ಎರಡು ಸಾವಿರ ವರ್ಷಗಳಿಂದ ಚಲನೆಯಾಗದೆ ನಿಂತಲ್ಲಿ ನಿಂತು ಜಡ್ಡು ಕಟ್ಟಿರುವ ಭವ್ಯ ಸ್ತೃಷ್ಯ ಹಿನ್ನೆಲೆಯ ಸಾಂಸ್ಕೃತಿಕ ಐಡೆಂಟಿಟಿಯ ದುರಂತವೇ ಆಗಿದೆ. ಬಾಬಾ ಸಾಹೇಬರು ಹೊರ ತಂದ ಪತ್ರಿಕೆಗಳು ಆಮೂಲಗ್ರಹವಾಗಿ ರಾಜಕೀಯ ವಿಚಾರಗಳನ್ನು ಪ್ರಸಾರ ಮಾಡಲು ಮತ್ತು ಅ- ಸಮಾಜ ನೀತಿಯನ್ನು ಪಾಲಿಸುವವರಿಗೆ ಸಮ- ಸಮಾಜದ ಕಲ್ಪನೆಯನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಗಿ ರೂಪಿತವಾಗಿದ್ದವು. ಇದು ಸಂಪ್ರದಾಯವಾದಿಗಳಿಗೆ ಸಹಿಸಲಾಗದ ಸಂದರ್ಭವೂ ಆಗಿತ್ತು. 1920 ರಲ್ಲಿ ಅಂಬೇಡ್ಕರ್ ಪತ್ರಿಕಾ ಲೋಕಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭವೇ ಭಾರತದಲ್ಲಿ ಪತ್ರಿಕ ರಂಗದ ಚರಿತ್ರೆಯ ದಿಕ್ಕೇ ಬದಲಾಯಿತು. ತಮ್ಮ ಸಮಸಂಸ್ಕೃತಿಯ ಭಾರತವನ್ನು ತನ್ನ ಜನರಿಗೆ ತಿಳಿಸಲು ಆಯ್ಕೆ ಮಾಡಿಕೊಂಡ ಅನೇಕ ದಾರಿಗಳಲ್ಲಿ ಇದು ಬಾಬಾಸಾಹೇಬ್ರಿಗೆ ಪ್ರಮುಖ ಜನ ಸಂಪರ್ಕದ ಸಾಧನವಾಗಿಯೂ ಕೆಲಸ ಮಾಡಿತು . ಎರಡು ಸಾವಿರ ವರ್ಷಗಳಿಂದ ಮಾತು ಬಂದರೂ – ಅಸಂಸ್ಕೃತಿಯನ್ನೇ ನಮ್ಮ ವೈಭವದ ಸಂಸ್ಕೃತಿ ಎಂದು ಪ್ರತಿಪಾದನೆ ಮಾಡಿಕೊಂಡಿದ್ದವರ ಅಜ್ಞಾನದ ತೋಳ್ತೆಕ್ಕೆಯಲ್ಲಿ ಸಿಲುಕಿ ಸಾಂಸ್ಕೃತಿಕವಾಗಿ ಮೂಕರಾಗಿದ್ದ ತನ್ನ ಜನರಲ್ಲಿ ಅರಿವು ಮೂಡಿಸಲು ಇದ್ದ ಪ್ರಮುಖ ದಾರಿಗಳಲ್ಲಿ ಪತ್ರಿಕ ರಂಗವೂ ಒಂದು ಎಂಬುದನ್ನು ಅಂಬೇಡ್ಕರ್ ತಮ್ಮ ಅಪಾರಜ್ಞಾನ ಮತ್ತು ಒಡಲಾಳದ ಭಾವನೆಗಳಿಂದ ಅರಿತಿದ್ದರು.
ಮೂಕನಾಯಕ ಹಾಗೂ ಬಹಿಷ್ಕೃತ ಭಾರತ ಗಳೆರಡರ ಪತ್ರಿಕೆಯ ಸಂಪಾದಕತ್ವ :
ಹಾಗೂ ಸಮಗ್ರ ಬರವಣಿಗೆಯನ್ನು ಅಂಬೇಡ್ಕರ್ ಅವರು ನೇರವಾಗಿ ಬರೆದು ಸಂಪೂರ್ಣ ಪ್ರಕಟಣೆಯ ಕಾರ್ಯವನ್ನು ಸ್ವತಹ ನಿರ್ವಹಿಸಿದರು..ಕೇವಲ ಬ್ರಿಟಿಷರ ವಿರುದ್ಧವೇ ಭಾರತ ದೇಶವನ್ನು ಮಾತ್ರ ಮುಕ್ತಗೊಳಿಸಲು ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದವರಿಗೆ, ಭಾರತದಲ್ಲಿ ಭಾರತೀಯರು ಭಾರತೀಯರ ವಿರುದ್ಧವೇ ಹೋರಾಡಿ ತಮ್ಮ ಮೂಲಭೂತ ಹಕ್ಕುಗಳ ಸ್ವಾತಂತ್ರ್ಯವನ್ನು ತಮ್ಮವರಿಂದಲೇ ಪಡೆಯುವ ಹಿನ್ನೆಲೆಯಲ್ಲಿ ಭಾರತದಲ್ಲಿ ಜನತಾ ಸ್ವಾತಂತ್ರ್ಯ ಚಳುವಳಿಯನ್ನು ಹೂಡಿ – ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಭಾರತದ ರಾಷ್ಟ್ರೀಯತೆ ಹಿನ್ನೆಲೆಗೆ ಸ್ವಾತಂತ್ರ್ಯ ಚಳುವಳಿಯ ದಿಕ್ಕನ್ನೇ ಬದಲಾಯಿಸಿದ್ದ ಕೀರ್ತಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ .
1930 ರಲ್ಲಿ ಆರಂಭಗೊಳಿಸಿದ ” ಜನತಾ” ಪತ್ರಿಕೆಯನ್ನು ತಮ್ಮ ಅನುಯಾಯಿ ಹಾಗೂ ಆತ್ಮೀಯ ಮಿತ್ರರಾದ ದೇವರಾವ್ ನಾಯಕ್, ಬಿ ಆರ್. ಕಡ್ರೆeಕರ್, ಜಿ ಎನ್ ಸಹಸ್ತಬುದ್ದೆ, ಆರ್ ಡಿ ಭಂಡಾರೆ ಮತ್ತು ಬಿ ಸಿ ಕಾಂಬ್ಳೆ ಅವರಿಗೆ ಈ ವಹಿಸಿಕೊಟ್ಟರು. ಇವರಲ್ಲಿ ಬಹು ಕುತೂಹಲಕಾರಿಯಾದ ಅಂಶವೆಂದರೆ ನಾಯಕ್ ಕದ್ರೇಕರ್ ಮತ್ತು ಸಹಸ್ತಬುದ್ದೆ ಅವರು ಅಸ್ಪೃಶ್ಯ ಸಮಾಜದವರೆಲ್ಲ ಎಂಬುದು ವಿಶೇಷ. ಇವರೆಲ್ಲರೂ ಸಹ ಬಾಬಾ ಸಾಹೇಬರ ವಾಸ್ತವದ ಭಾರತವನ್ನು ಬೌದ್ಧಿಕವಾಗಿ ಅರ್ಥಮಾಡಿ ಕೊಂಡಿದ್ದವರೇ ಆಗಿದ್ದರು.
ಧ್ವನಿ ಇಲ್ಲದ ನಾಯಕರೇ ಪರವಾಗಿ – ಅವರಲ್ಲಿ ಧನಿ ಮೂಡಿಸುವ ಸಲುವಾಗಿ ಮೂಕನಾಯಕ ಪತ್ರಿಕೆಯನ್ನು ಆರಂಭಿಸಿದ ಅಂಬೇಡ್ಕರ್ ಅವರು, ಪತ್ರಿಕೆ ಅಲ್ಪಾವಧಿಯ ಸಂದರ್ಭದಲ್ಲಿಯೇ ಸಮರ್ಥನೀಯ ಮತ್ತು ಸಂಘಟಿತ ದಲಿತ ರಾಜಕಾರಣಕ್ಕೆ ಅಡಿಪಾಯವನ್ನು ಭದ್ರವಾಗಿಯೇ ಹಾಕಿದರು. ಅಂಬೇಡ್ಕರ್ ಅವರ ಈ ಪತ್ರಿಕಾ ರಂಗಕ್ಕೆ ಪ್ರವೇಶವೇ ಭಾರತದ ಸಾಂಸ್ಕೃತಿ ಚರಿತ್ರೆಗೆ ಮುನ್ನುಡಿ ಬರೆದಂತಾಗಿತ್ತು. ಭಾರತದಲ್ಲಿ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಪ್ರಕಟಗೊಳ್ಳುತ್ತಿದ್ದ ಭೌತಿಕವಾಗಿ ಮಾತು ಬಂದರೂ ಬೌದ್ಧಿಕವಾಗಿ ಮೂಕವಾಗಿದ್ದ ಬಾಲಗಂಗಾಧರ್ ತಿಲಕರ “ಕೇಸರಿ” – ಗಾಂಧೀಜಿ ಅವರ ಸಂಪಾದಕತ್ವದ “ಹರಿಜನ” ಇದೇ ಮಾದರಿಯ ಕೆಲವು ಪತ್ರಿಕೆಗಳಿಗೆ ಮಾತು ಬಂದರೂ ನಿಜವಾಗಲೂ ಮೂಕ ವಾಗಿದ್ದವು. ಏಕೆಂದರೆ ಈ ಪತ್ರಿಕೆಗಳು ಅತಿಯಾಗಿ ಪುರಾಣವನ್ನೇ ಮಾತನಾಡುವುದನ್ನು ಕಲಿತವರಿಗೆ ವಾಸ್ತವದ ಮಾತನ್ನು ಕಲಿಸಲು ಮುಂದಾಗಲಿಲ್ಲ – ಮತ್ತದೆ ಪುರಾಣವನ್ನೇ ಮಾತನಾಡಲು ಹೆಚ್ಚು ಹೆಚ್ಚು ಕಲಿಸಿದವು. ಆದರೆ ಇವರೆಲ್ಲರಿಗೂ ಸೆಡ್ಡು ಹೊಡೆದಂತೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಮೂಕನಾಯಕರಿಗೆ ಮಾತು ಕಲಿಸಲು ಆರಂಭ ಮಾಡಿದ ಪಕ್ಷಿಗೆಗಳು ಪುರಾಣವನ್ನು ಹಲ್ಲೆಗಳಿದ್ದು ವಾಸ್ತವದ ಮಾತನ್ನು ಹೇಳಿ ಮಾತು ಕಲಿಸುವುದಾಗಿತ್ತು.. ಈ ಮಾದರಿಯ ಮಾತು ಕಲಿತ ಅಂಬೇಡ್ಕರ್ ಅವರ ಪತ್ರಿಕೆ ಭದ್ರವಾಗಿ ಎರಡು ಸಾವಿರ ವರ್ಷಗಳಿಂದ ಕಾದಿದ್ದ ಅಚ್ಚರಿಯನ್ನೇ ಮೂಡಿಸಿತು. ಮೂಕ ನಾಯಕ ಪತ್ರಿಕೆಯು ಅಕ್ಷರಶಹ ಧನಿ ಇಲ್ಲದ ಬಹು ಜನರಿಗೆ ಧ್ವನಿ ಯಾಗಿ ಅನಾವರಣಗೊಂಡಿತು. ಇದರ ಮೂಲಕ ಭಾರತ ಹಾಗೂ ಭಾರತೀಯ ಮನಸ್ಸುಗಳು ಮಾತನಾಡಲು ಆರಂಭಗೊಂಡವು.
ಬಹು ಮುಖ್ಯವಾಗಿ ಅಂಬೇಡ್ಕರ್ ಅವರ ಪತ್ರಿಕೆಯ ಸಾರ ಬದಲಾವಣೆ ಎಂದರೆ ಏನು ಎಂಬುದನ್ನು ಅನಾವರಣಗೊಳಿಸುವುದಾಗಿತ್ತು. ಉತ್ತಮ ಬಟ್ಟೆ ಹಾಕಿಕೊಳ್ಳುವುದು – ಉತ್ತಮ ಮನೆ ಕಟ್ಟಿಕೊಳ್ಳುವುದು – ತಾಂತ್ರಿಕ ವಸ್ತುಗಳನ್ನು ಬಳಸುವುದು – ವಾಹನಗಳನ್ನು ಕೊಂಡುಕೊಂಡು ಓಡಾಡುವುದು – ಸರ್ಕಾರಿ ಕೆಲಸಕ್ಕೆ ಸೇರಿ ಸ್ಥಾನಮಾನಗಳನ್ನು ಗಳಿಸಿಕೊಂಡು ಹಣವಂತರಾಗುವುದು – ಉನ್ನತ ಶಿಕ್ಷಣ ಪಡೆಯುವುದು – ಇದ್ಯಾವುವು ಸಹ ಅಂಬೇಡ್ಕರ್ ದೃಷ್ಟಿಯಲ್ಲಿ ಬದಲಾವಣೆ ಎಂಬುದಕ್ಕೆ ಸಂಬಂಧಿಸಿದಲ್ಲ. ಬದಲಿಗೆ ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಬದಲಾವಣೆ ಎಂದರೆ ಶತಶತ ಮಾನಗಳಿಂದ ರಾಜಪ್ರಭುತ್ವಗಳ ಕಾಲದಿಂದಲೂ ಭಾರತದಲ್ಲಿರುವ ಅಸ್ಪೃಶ್ಯತೆಯನ್ನು ಪ್ರಜಾಪ್ರಭುತ್ವ ಭಾರತದಲ್ಲಿ ಸಂಪೂರ್ಣವಾಗಿ ನಿರ್ಮೂಲನೆ ಒಳಪಡಿಸುವುದು – ಸಮ ಸಮಾಜದ ಆಧಾರದ ಮೇಲೆ ಭಾರತವನ್ನು ಭದ್ರವಾಗಿ ಕಟ್ಟುವುದು – ಧರ್ಮ ಧರ್ಮಗಳ ನಡುವೆ ಸಾಮರಸ್ಯವನ್ನು ಕಾಪಾಡುವುದು – ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎಂಬ ತತ್ವದಲ್ಲಿ ಭಾರತವನ್ನು ಸದೃಢವಾಗಿ ಕಟ್ಟುವುದು – ಮಹಿಳಾ ವರ್ಗಕ್ಕೆ ಶತಶತಮಾನಗಳಿಂದ ಆಗಿರುವ ಸಾಂಸ್ಕೃತಿಕ ಅನ್ಯಾಯವನ್ನು ಸರಿಪಡಿಸಿ ಅವರು ನ್ಯಾಯಯುತವಾಗಿ ಸದೃಢವಾಗಿ ಬದುಕಲು ಪ್ರೇರಣೆ ನೀಡುವುದೇ ಬದಲಾವಣೆ ಎಂಬುದು ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಶಾಶ್ವತವಾಗಿ ನೆಲೆಉರಿಯುತ್ತು. ಇದೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಯಸಿದ ಬದಲಾವಣೆ. ನಾವು ನೀವೆಲ್ಲರೂ ಬಯಸಬೇಕಾದ ಬದಲಾವಣೆ. ಈ ಬದಲಾವಣೆಯ ಅಂಶಗಳನ್ನು ಕುರಿತೆ ಅಂಬೇಡ್ಕರ್ ಅವರು ತಮ್ಮ ಪತ್ರಿಕೆಯಲ್ಲಿ ಬರೆಯಲು ಆರಂಭಿಸಿದರು. ಶತಶತಮಾನಗಳಿಂದ ಬದಲಾವಣೆ ಬಯಸದೆ ಯಥವತ್ತಾಗಿ ಸ್ವಗೋಷಿತ ಸ್ಪೃಶ್ಯ ಸಮುದಾಯದವರ ಪತ್ರಿಕ ರಂಗಕ್ಕೆ ಅಂಬೇಡ್ಕರ್ ಅವರು ಬಯಸಿದ ಈ ಬದಲಾವಣೆಯ ಅಂಶ ಜನಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದೆ ಅಂಬೇಡ್ಕರ್ ಅವರ ಪತ್ರಿಕಾ ರಂಗದ ತಾಕತ್ತು. ಒಟ್ಟಾರೆ ಹೇಳುವುದಾದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯೇ ನವ ಭಾರತದ ಜನಮುಖಿ ಆಧಾರದ ನಿರ್ಮಾಣಕ್ಕೆ ಅಡಿಪಾಯ ಎಂದು ಸ್ಪಷ್ಟವಾಗಿ ಹೇಳಬಹುದು. ಅಂಬೇಡ್ಕರ್ ಎಂಬುವುದೇ ವಾಸ್ತವದ ಸಂಕೇತ – ಅವರು ತಮ್ಮ ಕಡೆಗಾಲದಲ್ಲಿ ಅನುಸರಿಸಿದ ಈ ನೆಲ ಸಂಸ್ಕೃತಿಯ ಬೌದ್ಧ ಧರ್ಮವೂ ಸಹ ವಾಸ್ತವದ ಧರ್ಮ ಎಂಬುದನ್ನು ನಾವೆಲ್ಲರೂ ಅರಿಯಬೇಕಾಗಿದೆ . ಆದರೆ ಇಂದು ನಾವು ವಾಸ್ತವವನ್ನು ಬದಿಗೆ ಸರಿಸಿ , ಪುರಾಣವನ್ನೇ ನಂಬುತ್ತಿರುವುದು ಬಹುದೊಡ್ಡ ದುರಂತವಾಗಿದೆ. ಇಂತಹ ಸಂದರ್ಭದಲ್ಲಿಯೇ ಅಂಬೇಡ್ಕರ್ ಅವರು ಆರಂಭಿಸಿದ ಪತ್ರಿಕಾ ಮಾದರಿಯ ಪತ್ರಿಕೆಗಳು ಇನ್ನೂ ಹೆಚ್ಚು ಹೆಚ್ಚು ಬೇಕಾಗಿದೆ. ಆದರೆ ಏನು ಮಾಡುವುದು ಇಂದಿಗೂ ಸಹ ಕೇಸರಿ ಹಾಗೂ ಹರಿಜನ ಪತ್ರಿಕೆಗಳಂತಹ ಮಾದರಿಯ ಪತ್ರಿಕೆಗಳೇ ಮೆರೆಯುತ್ತಿವೆ .
ಇದಕ್ಕೆ ಬಹುದೊಡ್ಡ ಕಾರಣ ಶಿಕ್ಷಣ ಇನ್ನೂ ಸಮಸ್ತವಾಗಿ ಭಾರತೀಯರಿಗೆ ದೊರಕದಿರುವುದು.. ಗುರುಕುಲ ಘಟಿಕಾಲೆಯ ಅಗ್ರಹಾರ ಹಾಗೂ ದೇವಾಲಯಗಳಲ್ಲಿ ಶತಶತಮಾನಗಳಿಂದ ಯಾವುದೇ ಕುಂದು ಕೊರತೆಗಳಿಲ್ಲದೆ ಏಕಮುಖವಾಗಿಯೇ ಶಿಕ್ಷಣ ಪಡೆದವರಿಗೆ ಇಂತಹ ಪತ್ರಿಕೆಗಳೇ ಬೇಕು. ಆದರೆ ಭಾರತಕ್ಕೆ ಸ್ವಾತಂತ್ರ್ಯ ಬಂದು ಸಂವಿಧಾನ ಜಾರಿಗೆ ಬಂದ ನಂತರ ಶಿಕ್ಷಣವನ್ನು ಪಡೆಯುತ್ತಿರುವವರಿಗೆ ಈ ಮಾದರಿಯ ಪತ್ರಿಕೆಗಳು ಖಂಡಿತವಾಗಿಯೂ ಬೇಕಾಗಿಲ್ಲ. ರಾಜ ಪ್ರಭುತ್ವಕ್ಕಿಂತಲೂ ಪ್ರಜಾಪ್ರಭುತ್ವ ಭಾರತದಲ್ಲಿಯೇ ದಲಿತರ ಮೇಲೆ ಅತ್ಯಂತ ಹೆಚ್ಚಿನ ದೌರ್ಜನ್ಯ ಅತ್ಯಾಚಾರ ಬಹಿಷ್ಕಾರ ಅಸ್ಪೃಶ್ಯತಾ ಆಚರಣೆ ಹಾಗೂ ಸಾಂಸ್ಕೃತಿಕ ತೊಂದರೆಗಳ ಸಂಕೋಲೆಗಳೇ ಹೆಚ್ಚು ಹೆಚ್ಚು ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ಅಂಬೇಡ್ಕರ್ ಅವರು ರೂಪಿಸಿದ ಮಾದರಿಯ ಪತ್ರಿಕಾ ರಂಗ ಇಂದು ಅತ್ಯಂತ ಹೆಚ್ಚು ಕ್ರಿಯಾಶೀಲಕ್ಕೆ ಒಳಪಡಬೇಕಾಗಿದೆ.
ಏಕೆಂದರೆ….
ಪುರಾಣದ ದೇವರುಗಳನ್ನು ನಾವು ಕಣ್ಮುಚ್ಚಿ ನಮಿಸುತ್ತೇವೆ- ಅಜ್ಞಾನದ ಹಿನ್ನೆಲೆಯಲ್ಲಿ ಇದು ಸರಿಯಾದ ಕ್ರಮವೇ ಆಗಿದೆ, ಏಕೆಂದರೆ ದೇವರಿಗೂ ಕಣ್ಣಿಲ್ಲ-ಅದನ್ನು ಪೂಜೆ ಮಾಡುವಾಗ ನಮ್ಮ ಕಣ್ಣು ಮುಚ್ಚಿರುವುದರಿಂದ ಅಜ್ಞಾನದಲ್ಲಿ ನಾವು ಸಹ ನಮ್ಮನ್ನು ನಾವೇ ಕಣ್ಣಿದ್ದು ಕುರುಡರ ಹಾಗೆ ಮಾಡಿಕೊಳ್ಳುತ್ತೇವೆ. ನಿಜ ಅರ್ಥದಲ್ಲಿ ಇದು ಜ್ಞಾನವಂತರಾದರೂ ಸಹ ಅಜ್ಞಾನಿಗಳಂತೆ ಬದುಕುವ ಮಾದರಿ. ಸುಂದರ ಕಲ್ಪನೆಗಳ ಧಾರ್ಮಿಕ ಅಂಧಕಾರದೊಳಗಿನ ಜಾತಿಯ ಗತ್ತಿನ ಜಗತ್ತಿನಲ್ಲಿ ಜೀವಿಸಿ ಇದೇ ಪ್ರಪಂಚ ಎಂದು ನಂಬಿಕೊಂಡಿರುವವರ ಮುಂದೆ ಭಾರತ ಮುತ್ತು ಭಾರತೀಯ ಹೇಗೆ ತಾನೇ ಇಂದಿನ ಆಧುನಿಕ ಪ್ರಪಂಚಕ್ಕೆ ಬೌದ್ಧಿಕಥೆಯಿಂದ ಗುರುತಿಸಿಕೊಳ್ಳಲ ಸಾಧ್ಯ ಆದರೆ ಭಾರತದ ಸಂವಿಧಾನವನ್ನು ಎರಡು ಕಣ್ಣು ಹಾಗೂ ಮನಸ್ಸುಗಳನ್ನು ಶುದ್ಧವಾಗಿ ತೆರೆದು ನೋಡಬೇಕು. ಏಕೆಂದರೆ ಸಂವಿಧಾನವು ಸಹ ನಮ್ಮ ಕಣ್ಣನ್ನು ತೆರೆಸುತ್ತದೆ – ನಮ್ಮ ಮನಸ್ಸನ್ನು ವಿಶಾಲಗೊಳಿಸುತ್ತದೆ. ನಮ್ಮನ್ನು ಬೌದ್ಧಿಕ ಹಿನ್ನೆಲೆಯ ಸದೃಢವಾಗಿ ಮಾತನಾಡಲು ಕಲಿಸುತ್ತದೆ. ಅಮೂಲಕ ಭಾರತವು ಗಟ್ಟಿತನದಿಂದ ಪ್ರಪಂಚಕ್ಕೆ ಬೌದ್ಧಿಕವಾಗಿ ನಿಲ್ಲುವಂತೆ ಮಾಡುತ್ತದೆ. ಎಂಬ ಹಿನ್ನೆಲೆಯಿಂದಲೇ ಅಂಬೇಡ್ಕರ್ ಅವರ ಪತ್ರಿಕಾ ಬರವಣಿಗೆ ಆರಂಭಗೊಂಡದ್ದು. ಇಲ್ಲಿ ಚರ್ಚೆಗೆ ಒಳಪಡಿಸಿದ ಅಂಶಗಳೇ ಮುಂದೆ ಅವರೇ ಅಧ್ಯಕ್ಷರಾಗಿ ಭಾರತದ ಸಂವಿಧಾನ ಬರಿಯೋ ಸಂದರ್ಭದಲ್ಲಿ ಅತ್ಯಂತ ಹೆಚ್ಚಿನ ಉಪಯೋಗಕ್ಕೆ ಬಂದದ್ದನ್ನು ಅವರ ಬರವಣಿಗೆಯಲ್ಲಿ ನಾವು ಕಾಣಬಹುದು.
ಏಕೆಂದರೆ
ಇದು ವಾಸ್ತವ – ಇಂದು “ವಾಸ್ತವ” ದ ಈ ದೇಶದಲ್ಲಿ ಹೆಚ್ಚು ಹೆಚ್ಚು ಮಾತನಾಡಬೇಕಾದ್ದು ಹಾಗೂ ಮಾತು ಕಲಿಸಬೇಕಾದ್ದು. ಈ ತತ್ವ ಸಿದ್ಧಾಂತದ ಹಿನ್ನೆಲೆ ಅಂಶವೇ ಪತ್ರಿಕಾ ರಂಗದ ಮೂಲ ಸಿದ್ಧಾಂತ ಎಂಬುದನ್ನು ಮರೆಯಬಾರದು. ಆದರೆ 75 ವರ್ಷಗಳ ಪ್ರಜಾಪ್ರಭುತ್ವ ಭಾರತದ ಅಂಬೇಡ್ಕರವರು ರಚಿಸಿದ ಸಮಸಂಸ್ಕೃತಿಯ ವಾಸ್ತವದ ಸಂವಿಧಾನದ ಸಂದರ್ಭದಲ್ಲಿಯೂ ಸಹ “ಪುರಾಣ” ಕೇಂದ್ರಿತ ಪತ್ರಿಕೆಗಳೇ ಹೆಚ್ಚು ಹೆಚ್ಚು ಮಾತನಾಡುತ್ತಿರುವುದು ಎರಡು ಸಾವಿರ ವರ್ಷಗಳಿಂದ ಹಿಡಿದಿರುವ ಅಜ್ಞಾನ ಅಂಧಕಾರ ಎಂಬ ಬಿಡಿಸಲಾಗದ ಗ್ರಹಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಗ್ರಹಣದಿಂದ ಹೊರ ಬರಬೇಕಾದರೆ ಅಂಬೇಡ್ಕರ್ ಅವರ ಪತ್ರಿಕಾ ಮಾದರಿಯೇ ಸರಿಯದು. ಇಂದು ಸಂವಿಧಾನದ ಕನ್ನಡಿಯಿಂದ ತಮ್ಮ ಮುಖವನ್ನು ಶುದ್ಧವಾಗಿ ನೋಡಿಕೊಂಡು – ತಮ್ಮ ಶ್ರಮ ಸಿದ್ಧಾಂತದ ದುಡಿಮೆಯ ಮೂಲಕ ತಮ್ಮ ಕೈ ನ ಹತ್ತು – ತಮ್ಮ ಎರಡು ಕಾಲಿನ ಹತ್ತು ಬೆರಳುಗಳನ್ನು ಭೂಮಿಗೆ ಊರಿ ಕಾಯಕ ಸಿದ್ಧಾಂತದ ಮೂಲಕ ದುಡಿದು, ದುಡಿಮೆಗೆ ತಕ್ಕಂತಹ ದಾಸೋಹವನು ಪಡೆದು ಸದೃಢ ಭಾರತವನ್ನು ಕಟ್ಟಬೇಕಾಗಿದೆ. ಇದೆ ಭಾರತ ಹಾಗೂ ಭಾರತೀಯರ ಮೂಲಭೂತ ಸಂಸ್ಕೃತಿ ಎಂಬುದನ್ನು ಮರೆಯಬಾರದು. ಬುದ್ಧ ಬಸವ ಅಂಬೇಡ್ಕರ್ ಅವರು ಹೇಳಿದ್ದು ಸಹ ಇದೆ ಮಾದರಿಯ ಭಾರತವನ್ನು ಕಟ್ಟುವ ಪರಿಯನ್ನೇ ಹೊರತು ಬೇರೇನು ಅಲ್ಲ.
ಇಂತಹ ಮಹತ್ವದ ಸಾಧನೆಯನ್ನು ಮಾಡಿದ ಈ ಮಣ್ಣಿನ ಸುಪುತ್ರ – ಸಮಸ್ತ ಭಾರತ ಹಾಗೂ ಭಾರತೀಯರ ಸಂವಿಧಾನಾತ್ಮಕ ವಾರಸುದಾರ – ದನಿ ಇಲ್ಲದವರ ಧ್ವನಿ – ಪ್ರಪಂಚಕ್ಕೆ ಮಾದರಿಯಾದ ಮಾನವೀಯತೆಯ ನೊಬೆಲ್ – ಭಾರತ ಮಣ್ಣಿನ ಧೀಮಂತ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಅವರ 132ನೇ ಜನ್ಮದಿನದ ಹೆಮ್ಮೆಯ ಶುಭಾಶಯಗಳು.