ಶ್ರೀಪಾದ್ ಭಟ್
ಇಂದು ಬ್ರೆಕ್ಟ್ ಬದುಕಿದ್ದರೆ ಏನು ಹೇಳುತ್ತಿದ್ದ?. ಆತ ‘ರಂಗಾಯಣ ಕೊಳೆತಿದೆ, ಅಲ್ಲಿ ನೋಡಿ ದೂರದಲ್ಲಿ ಹೊಸ ಜೀವ ಮಿಸುಕಾಡುತ್ತಿದೆ’ ಎಂದು ಹಾಡುತ್ತಿದ್ದ. ನಾವು ಸಹ ಇದನ್ನು ಹಾಡಬೇಕು
ಅದಿಕಾರದಲ್ಲಿರುವ ಆರೆಸ್ಸೆಸ್ ಎಲ್ಲಾ ಸಂಸ್ಥೆಗಳನ್ನು ಕಬ್ಜಾ ಮಾಡಿಕೊಳ್ಳುತ್ತಿದೆ. ರಂಗಾಯಣವೂ ಇದಕ್ಕೆ ಹೊರತಲ್ಲ. ಅಡ್ಡಂಡ ಕಾರ್ಯಪ್ಪ ಎನ್ನುವ ಅವಿವೇಕಿ ಒಂದು ಬಾಣ ಮಾತ್ರ. ಆತ ನಿರ್ಗಮಿಸಿದರೆ ಆರೆಸ್ಸೆಸ್ ಬತ್ತಳಿಕೆಯಲ್ಲಿ ಪ್ರಯೋಗಿಸಲು ನೂರಾರು ವಿಷಬಾಣಗಳಿವೆ. ಅಂದರೆ ರಂಗಾಯಣವನ್ನು ಉಳಿಸಿ ಎಂದು ಹೋರಾಟ ಮಾಡುವುದು ನೇರವಾಗಿ ಆರೆಸ್ಸೆಸ್ ಆಕ್ರಮಿತ ಸಂಸ್ಥೆಯ ಪರವಾಗಿ ಶ್ರಮಿಸಿದಂತೆ. ರಂಗಾಯಣ ಅಪ್ರಸ್ತುತಗೊಳಿಸುವುದೊಂದೆ ಈಗಿರುವ ದಾರಿ.
38 ವರ್ಷಗಳ ಹಿಂದೆ ಪ್ರಜಾಪ್ರಭುತ್ವ ಕೊಂಚ ಉಸಿರಾಡುತ್ತಿದ್ದ ಸಂದರ್ಭದಲ್ಲಿ ಬಿ. ವಿ. ಕಾರಂತರು ತಮ್ಮ ಕನಸುಗಳನ್ನು ರಂಗಾಯಣದ ರೆಪರ್ಟರಿ ಮೂಲಕ ಸಾಕಾರಗೊಳಿಸಲು ಯತ್ನಿಸಿದರು. ಆದರೆ ಯಾವುದೇ ಪ್ರಜಾಪ್ರಭುತ್ವವಿಲ್ಲದ ಇಂದಿನ ಫ್ಯಾಸಿಸಂ ದಿನಗಳಲ್ಲಿ ಹಳೆಯ ಕನಸುಗಳು ತನ್ನ ಚಲಾವಣೆ ಕಳೆದುಕೊಂಡಿರುತ್ತವೆ. ಇದಕ್ಕೆ ಬಿ. ವಿ. ಕಾರಂತರೂ ಹೊರತಲ್ಲ. ಗ್ರಾಂಮ್ ಶಿ ಹೇಳಿದಂತೆ ‘ಹಳೆ ಜಗತ್ತು ಸತ್ತಿದೆ, ಹೊಸದು ಹುಟ್ಟಿಲ್ಲ’.ಆದರೆ ಮದ್ಯದ ವರ್ತಮಾನದಲ್ಲಿ ನಾವು ಹೊಸ ಕನಸುಗಳು ಮತ್ತು ಅದರ ಕಾರ್ಯನಿರ್ವಹಣೆಯನ್ನು ತಂತ್ರಗಾರಿಕೆ ಮೂಲಕ ರೂಪಿಸಬೇಕಿದೆ.
ಗ್ರಾಂಮ್ ಶಿ ಇದನ್ನೇ ಕುಶಲತೆ ಅಂತ
ಕರಿತಾನೆ. ನಮ್ಮ ಮುಂದೆ ‘ಸಾಂಸ್ಕೃತಿಕ ಪ್ರತಿರೋಧದ ಮೂಲಕ ಸಾಂಸ್ಕೃತಿಕ ರಾಜಕಾರಣ’ ವೆಂಬ ಕುಶಲತೆ ಇದೆ. ಇದನ್ನು ಸಮರ್ಥವಾಗಿ ಬಿತ್ತಿ ಬೆಳೆಯಬೇಕು. ಇದರ ಆರಂಭಿಕ ಬೀಜವಾಗಿ ಮೂರು ದಿನಗಳ ‘ಪರ್ಯಾಯ ಬಹುರೂಪಿ’ ಎಂಬ ಸಾಂಸ್ಕೃತಿಕ ಪ್ರತಿರೋಧವನ್ನು ಸಂಘಟಿಸಬೇಕು. ಇದಕ್ಕೆ ನಾಡಿನ ಎಲ್ಲಾ ಪ್ರಗತಿಪರ ಸಂಘಟನೆಗಳು ಕೈ ಜೋಡಿಸಬೇಕು. ನಂತರ ಈ ಸಾಂಸ್ಕೃತಿಕ ಪ್ರತಿರೋಧ ಪ್ರತಿ ಜಿಲ್ಲೆ, ತಾಲೂಕುಗಳಿಗೆ ಹಬ್ಬಿಕೊಳ್ಳಬೇಕು
ಈಗಾಗಲೇ ರಾಮಯ್ಯನವರು ರಚಿಸಿದ ಬಸವಲಿಂಗಯ್ಯನವರು ನಿರ್ದೇಶನ ಮಾಡಿದ ‘ಗಂಗವ್ವ ನೀರಿಗಾಗಿ ಜಡೆ ಹೆಣಿತಾ ಅವ್ಳೆ’ ನಾಟಕ ಪ್ರಯೋಗಕ್ಕೆ ಸಿದ್ದವಾಗಿದೆ. ಇದು ಜನಕಲಾ ನಡೆ. ಸೂಕ್ತ ಬೆಂಬಲ ದೊರೆತರೆ ಬಹು ಮುಖ್ಯ ಸಾಂಸ್ಕೃತಿಕ ಪ್ರತಿರೋಧವಾಗುತ್ತದೆ
ಧಾರವಾಡದಲ್ಲಿ ಮಹಾದೇವ ಹಡಪದ ಅವರು ‘ಹುಲಿಯ ನೆರಳಿನೊಳಗೆ’ ನಾಟಕದ ಮೂಲಕ ಸಾಂಸ್ಕೃತಿಕ ಚಲನಶೀಲತೆ ಆರಂಭಿಸಿದ್ದಾರೆ
ಬೆಂಗಳೂರಿನಲ್ಲಿ ಕೆ. ಪಿ. ಲಕ್ಷ್ಮಣರ ‘ಜಂಗಮ ಕಲೆಕ್ಟಿವ್’ ಇದೆ. ಹೀಗೆ ನೂರಾರು ಜೀವಗಳು ಮಿಡಿಯುತ್ತಿವೆ. ನಮಗೆ ಕೇಳಿಸಿಕೊಳ್ಳುವ ಕಿವಿ, ಮಾನವೀಯ ಮನಸ್ಸು ಬೇಕು. ಮುಖ್ಯವಾಗಿ ರಂಗ ಚಳುವಳಿ ಎಲ್ಲಾ ಕಾಲಕ್ಕೂ ಜಂಗಮ ಸ್ವರೂಪಿಯಾಗಿರುತ್ತದೆ.
ಇದನ್ನೂ ಓದಿ : ಅಡ್ಡಂಡ ಕಾರ್ಯಪ್ಪ ವರ್ತನೆಗೆ ವ್ಯಾಪಕ ವಿರೋಧ
ಈಗ ಅಂತಹ ಕಾಲ ಕೂಡಿ ಬಂದಿದೆ. ಅಡ್ಡಂಡ ಕಾರ್ಯಪ್ಪನನ್ನು ಕೆಳಗಿಸುವ ಹೋರಾಟದ ಜೊತೆಗೆ ಬಿಜೆಪಿ ಸರಕಾರ ಇರುವವರೆಗೂ ನಾವ್ಯಾರೂ ರಂಗಾಯಣದ ಕಾರ್ಯಕ್ರಮಗಳಲ್ಲಿ ಬಾಗವಹಿಸುವುದಿಲ್ಲ, ಯಾವುದೇ ಸ್ಥಾನ ಅಲಂಕರಿಸುವುದಿಲ್ಲ ಎನ್ನುವ ಖಚಿತವಾದ ನಿರ್ದಾರ ತೆಗೆದುಕೊಳ್ಳಬೇಕು. ಇದು ಕಲಾವಿದರ ಭವಿಷ್ಯಕ್ಕೆ ಕಂಟಕವಲ್ಲವೇ ಎನ್ನುವ ಪ್ರಶ್ನೆ ತಳ್ಳಿ ಹಾಕುವಂತಿಲ್ಲ. ಆದರೆ ರಂಗಾಯಣದ ನಾಟಕಗಳ ಮೂಲಕವೇ ಕಲಾವಿದರು ಬದುಕುತ್ತಿಲ್ಲ ಎಂಬುದು ಸಹ ವಾಸ್ತವ. ಇಂತಹ ಅಸಂವಿಧಾನಿಕ ವ್ಯವಸ್ಥೆಯ ಕುರಿತು ಮೌನ ವಹಿಸುವುದೆಂದರೆ ಅವರ ಪಾಲುದಾರರು ಎಂದರ್ಥ.
ಸಾಂಸ್ಕೃತಿಕ ಪ್ರತಿರೋಧವಾಗಿ ಮೈಸೂರಿನಲ್ಲಿಯೇ ಒಂದು ‘ಪರ್ಯಾಯ ಬಹುರೂಪಿ’ಯನ್ನು ಕನಿಷ್ಟ ಮೂರು ದಿನಗಳ ಕಾಲ ನಡೆಸಬೇಕು ಮತ್ತು ಇದಕ್ಕೆ ಈ ನಾಡಿನ ಪ್ರಗತಿಪರ ಸಂಘಟನೆಗಳು ಕೈ ಜೋಡಿಸಬೇಕು.
ಈ ಮತಾಂದರ ಆಡಳಿತದಲ್ಲಿ ಅನಿವಾರ್ಯವಾದ ‘ಸಾಂಸ್ಕೃತಿಕ ಪ್ರತಿರೋಧ’ವನ್ನು ವ್ಯಕ್ತಪಡಿಸದೇ ಹೋದರೆ ಅದು ಎಷ್ಟು ಅನಿವಾರ್ಯ ಎಂಬುದು ಗೊತ್ತಾಗುವುದಿಲ್ಲ. ಸಫ್ದರ್ ಹಶ್ಮಿ ತನ್ನ ಬೀದಿ ನಾಟಕಗಳ ಮೂಲಕ ಮಾಡಿದ್ದೂ ಇದನ್ನೇ. ರಾಮಯ್ಯ ಹೆಣಗುತ್ತಿರುವುದೂ ಸಹ ಇದರ ಕುರಿತಾಗಿ
ನಮ್ಮ ಮುಂದಿರುವ ದಾರಿ ” ಸಾಂಸ್ಕೃತಿಕ ಪ್ರತಿರೋಧದ ಮೂಲಕ ಸಾಂಸ್ಕೃತಿಕ ರಾಜಕಾರಣ”. ಇದು ತೀವ್ರತೆ ಪಡೆದುಕೊಂಡರೆ ಆರೆಸ್ಸೆಸ್ ನ ಪಟ್ಟವನ್ನೂ ಅಲುಗಾಡಿಸಬಹುದು. “ನಾವು ನಡೆದರಷ್ಟೆ ದಾರಿ”