ಗುರುರಾಜ ದೇಸಾಯಿ
ಮೇಲ್ನೋಟಕ್ಕೆ ಎಲ್ಲದರಿಂದಲೂ, ಎಲ್ಲಕ್ಕೂ ಎಂಬಂತೆ ಕಾಣುವ ಬಜೆಟ್ ಗಾಳಿ ತುಂಬಿದ ಬಲೂನಿನಂತೆ ಕಾಣುತ್ತಿದೆ. ಆರೋಗ್ಯ, ಶಿಕ್ಷಣ, ಕೃಷಿ, ಸಾರ್ವಜನಿಕ ವ್ಯವಸ್ಥೆಯನ್ನು ನಿರ್ಲಕ್ಷಿಸಿರುವ ಆಯುಷ್ಯವಿಲ್ಲದ ಬಜೆಟ್ ಬಣ್ಣಕ್ಕೆ ರಾಜ್ಯದ ಜನ ಮರುಳಾಗದಿರಲಿ
ಫೆಬ್ರವರಿ 17ರಂದು ರಾಜ್ಯ ಬಜೆಟ್ ಮಂಡನೆಯಾಗಿದೆ. ಈ ಬಜೆಟ್ ರಾಜ್ಯದ ಅಭಿವೃದ್ಧಿಗೆ ಅನುಕೂಲಕರವಾಗಿದೆ, ಹಲವು ಹೊಸ ಯೋಜನೆಗಳ ಮೂಲಕ ಬಡಜನರನ್ನು ತಲುಪಲು ಸಾಧ್ಯವಾಗಿದೆ ಎಂದು ಬಿಜೆಪಿ ಬಜೆಟ್ ಅನ್ನು ಸಮರ್ಥಿಸಿಕೊಳ್ಳುತ್ತಿದೆ. ಇದು ಬಿಸಲ ಕುದುರೆ ಇದ್ದಂತೆ, ಹಿಡಿಯಲು ಸಾಧ್ಯವಿಲ್ಲ, ಜನರ ಕಿವಿಗೆ ಹೂ ಇಟ್ಟಿರುವ ಬಜೆಟ್ ಆಗಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಬಜೆಟ್ ನಲ್ಲಿ ಏನೂ ಇಲ್ಲ, ಅರ್ಥವಿಲ್ಲದ ಬಜೆಟ್ ಇದಾಗಿದೆ ಎಂದು ಜನಪರ ಸಂಘಟನೆಗಳು ಆಕ್ಷೇಪವ್ಯಕ್ತಪಡಿಸಿವೆ. ವಾಸ್ತವ ಏನೆಂದರೆ ಆಯುಷ್ಯವಿಲ್ಲದ ಬಜೆಟ್ ನಲ್ಲಿ ಭರಪೂರ ಯೋಜನೆಗಳನ್ನು ಮಂಡಿಸಲಾಗಿದೆ ಎಂಬುದು ತೆರೆದಿಟ್ಟ ಸಂಗತಿಯಾಗಿದೆ.
ಅರೇ ಇದೇನಿದು? ಆಯುಷ್ಯವಿಲ್ಲದ ಬಜೆಟ್? ಹೇಗೆ ಎಂದು ಯೋಚಿಸುತ್ತಿದ್ದೀರಾ? ಹೌದು ಇದು ಆಯುಷ್ಯವಿಲ್ಲದ ಬಜೆಟ್, ಮೇ ತಿಂಗಳಲ್ಲಿ ಚುನಾವಣೆ ನಡೆದು ಹೊಸ ಸರಕಾರ ರಚನೆಯಾಗಿ, ಜೂನ್ ಇಲ್ಲ ಜುಲೈಗೆ ಮತ್ತೊಮ್ಮೆ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಅಲ್ಲಿ ಹೊಸ ಸರಕಾರ ಬಜೆಟ್ ಮಂಡಿಸಲಿದೆ. ಹಾಗಾಗಿ ಈ ಬಜೆಟ್ ಗೆ ಮೂರು ತಿಂಗಳ ಆಯುಷ್ಯ ಮಾತ್ರ, ಇದನ್ನರಿತು ಹಾಗೂ ಚುನಾವಣೆಯಲ್ಲಿ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಸಹಜವಾಗಿಯೇ ಜಾರಿಗೇ ಬಾರದೇ ಇರುವ ಭರಪೂರ ಯೋಜನೆಗಳನ್ನು ನೀಡಿದೆ.
ಇದನ್ನು ಓದಿ: ರಾಜ್ಯ ಬಜೆಟ್-2023-24: ರೈತರಿಗೆ ₹5 ಲಕ್ಷ ಬಡ್ಡಿ ರಹಿತ ಸಾಲ
ದೊಡ್ಡ ಬಜೆಟ್ ನಲ್ಲಿ ಜಾರಿಗೆ ದಾರಿಯೇ ಇಲ್ಲ
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಬಜೆಟ್ ಗಾತ್ರ ದೊಡ್ಡದಿದೆ. ಕಳೆದ ಬಾರಿಯ ಬಜೆಟ್ ಗಾತ್ರ 2,65,720 ಕೋಟಿ ಇದ್ದರೆ ಈ ಬಾರಿಯ ಬಜೆಟ್ ಗಾತ್ರ 3,09,182 ಕೋಟಿ ಇದೆ. ಕಳೆದ ಬಜೆಟ್ ನಲ್ಲಿ ಏನೇನು ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು, ಕಳೆದ ಬಜೆಟ್ ನಲ್ಲಿ 206 ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದರು, ಅದರಲ್ಲಿ 60 ಕಾರ್ಯಕ್ರಮಗಳನ್ನು ಜಾರಿ ಮಾಡಿಲ್ಲ ಎಂಬುದನ್ನು ಸರಕಾರದ ಅಂಕಿಅಂಶಗಳೇ ಹೇಳುತ್ತಿವೆ. ಕಳೆದ ಬಾರಿಯ ಬಜೆಟ್ ನಲ್ಲಿ ಕೋವಿಡ್ ಕಾರಣದಿಂದಾಗಿ ಜನರ ಮೇಲೆ ತೆರಿಗೆ ಹಾಕುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಅದರೆ ತೆರಿಗೆ ಕಟ್ಟದೆ ಯಾವುದೇ ವಸ್ತುವನ್ನು ಜನ ಪಡೆಯಲು ಸಾಧ್ಯವಾಗಿಲ್ಲ, ಶ್ರೀಮಂತರಿಗೆ ತೆರಿಗೆ ವಿನಾಯ್ತಿ ನೀಡಿದ್ದ ಸರಕಾರ ಬಡ ಜನರ ಹಣವನ್ನು ದೋಚಿತ್ತು. ಈ ಬಾರಿಯ ಬಜೆಟ್ ನಲ್ಲೂ ಹೊಸ ಯೋಜನೆಗಳು ಎದ್ದು ಕಾಣುತ್ತಿವೆಯಾದರೂ ಜಾರಿ ಸಾಧ್ಯವೇ? ಎಂಬುದನ್ನು ನಾವೊಮ್ಮೆ ಯೋಚಿಸಬೇಕಿದೆ.
ಕಳೆದ ಬಾರಿಯ ಘೋಷಣೆಗಳು ಏನಾದವು?!
ಕಳೆದ ಬಾರಿಯ ಬಜೆಟ್ ನಲ್ಲೂ ‘ಭರವಸೆಯ ಬಜೆಟ್’ ಎಂದೇ ಹೇಳಲಾಗಿತ್ತು. ಜನರ ಕಲ್ಯಾಣಕ್ಕಾಗಿ ‘ಪಂಚ ಸೂತ್ರ’ ಯೋಜನೆಯನ್ನು ಘೋಷಣೆ ಮಾಡಿತ್ತು. ಆ ಘೋಷಣೆಗಳು ಏನಾದವು ಎಂಬುದನ್ನು ನೋಡಬೇಕಿದೆ.
ಇದನ್ನು ಓದಿ: ರಾಜ್ಯ ಬಜೆಟ್‌ನಲ್ಲಿ ಕಾರ್ಮಿಕರ ಬೇಡಿಕೆಗಳಿಗೆ ಆದ್ಯತೆ ನೀಡಲು ಆಗ್ರಹಿಸಿ ಫೆ.10ರಂದು ಸಿಐಟಿಯು ಪ್ರತಿಭಟನೆ
‘ಪಂಚ ಸೂತ್ರ’ (ಐದು ಅಂಶಗಳ ಸೂತ್ರ) ಅಡಿಯಲ್ಲಿ ಎಲ್ಲಾ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಸುಧಾರಿಸಲು ಕರ್ನಾಟಕದ ಹಿಂದುಳಿದ ಪ್ರದೇಶಗಳನ್ನು ವೈಜ್ಞಾನಿಕ ರೀತಿಯಲ್ಲಿ ಗುರುತಿಸಲಾಗುತ್ತದೆ ಎಂದು ಹೇಳಿದ್ದರು. ಬೆಂಗಳೂರಿನ ಪ್ರಮುಖ ನಗರಗಳು ಮತ್ತು ಎಲ್ಲಾ ವಾರ್ಡ್ ಗಳಲ್ಲಿ ‘ನಮ್ಮ ಕ್ಲಿನಿಕ್’ಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದರು. ಈ ಚಿಕಿತ್ಸಾಲಯಗಳು ಸಾಂಕ್ರಾಮಿಕವಲ್ಲದ ಕಾಯಿಲೆಗಳಿಗೆ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಒದಗಿಸುತ್ತವೆ ಮತ್ತು ಅಗತ್ಯವಿದ್ದರೆ ತಜ್ಞರ ಚಿಕಿತ್ಸೆಗಾಗಿ ರೋಗಿಗಳನ್ನು ಉನ್ನತ ಸೌಲಭ್ಯಗಳಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿತ್ತು, ಆದರೆ ಎಷ್ಟು ಕಡೆ ಜಾರಿಯಾಗಿದೆ ಎಂಬುದಕ್ಕೆ ಸರಕಾರದ ಬಳಿ ಉತ್ತರವಿಲ್ಲ.
ಹುಬ್ಬಳ್ಳಿಯಲ್ಲಿ 350 ಹಾಸಿಗೆಗಳ ಜಯದೇವ ಶಾಖೆ ಮತ್ತು ತುಮಕೂರಿನಲ್ಲಿ ಟ್ರಾಮಾ ಸೆಂಟರ್ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಲಾಗಿತ್ತು, ವರ್ಷ ಕಳೆದರೂ ಇನ್ನೂ ಶಂಕುಸ್ಥಾಪನೆ ಕಂಡಿಲ್ಲ. ಬೆಳಗಾವಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರವನ್ನು ಸ್ಥಾಪಿಸಲಾಗುವುದು. ಮೈಸೂರಿನ ಕೆ ಆರ್ ಆಸ್ಪತ್ರೆಯನ್ನು ಆಧುನೀಕರಣಗೊಳಿಸಲು ₹89 ಕೋಟಿ ಮತ್ತು ರಾಮನಗರದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ ಜಿ ಯು ಎಚ್ ಎಸ್) ಕ್ಯಾಂಪಸ್ ಗೆ ₹1,000 ಕೋಟಿ ಮಂಜೂರು ಮಾಡಲಾಗುವುದು ಎಂದು ಹೇಳಿದ್ದರು. ಆದರೆ ವರ್ಷ ಕಳೆದರೂ ಯಾವುದೇ ಪ್ರಗತಿ ಕಂಡಿಲ್ಲ. 300 ಮಹಿಳಾ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿತ್ತು, ಇವು ಕಲ್ಯಾಣ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತದೆ. ಏಳು ತಾಲೂಕು ಆಸ್ಪತ್ರೆಗಳನ್ನು 100 ಹಾಸಿಗೆ ಸೌಲಭ್ಯಗಳಿಗೆ ಮೇಲ್ದರ್ಜೆಗೇರಿಸಲಾಗುವುದು. ಪಿ ಎಚ್ ಎಸ್ ಗಳನ್ನು ಸುಧಾರಿಸಲು ₹1,000 ಕೋಟಿ ನೀಡಲಾಗುವುದು ಎಂದು ಹೇಳಿದ್ದರು. ಅದು ವಿಧಾನಸೌಧ ದಾಟಿ ಬರಲೇ ಇಲ್ಲ.
ಇದನ್ನು ಓದಿ: ವೇತನ ಪರಿಷ್ಕರಣೆ-ನಿಶ್ಚಿತ ಪಿಂಚಣಿ ಪದ್ದತಿ ಕುರಿತು ಸ್ಪಂದಿಸದ ನೌಕರ ವಿರೋಧಿ ಬಜೆಟ್: ಜೈಕುಮಾರ್
ಪ್ರಾಥಮಿಕ ಶಾಲೆಗಳಲ್ಲಿ ಮೂಲಸೌಕರ್ಯಕ್ಕಾಗಿ ಸರ್ಕಾರ ₹500 ಕೋಟಿ ಮೀಸಲಿಟ್ಟಿತ್ತು, ಮಾದರಿ ವಿಶ್ವವಿದ್ಯಾಲಯಗಳು ಚಾಮರಾಜನಗರ, ಬೀದರ್, ಹಾವೇರಿ, ಕೊಪ್ಪಳ, ಹಾಸನ, ಕೊಡಗು ಮತ್ತು ಬಾಗಲಕೋಟೆಯಲ್ಲಿ ಹೊಸ ಮಾದರಿಯ ವಿಶ್ವವಿದ್ಯಾಲಯಗಳು ಬರಲಿವೆ ಎಂದು ಹೇಳಲಾಗಿತ್ತು? ತಂತ್ರಜ್ಞಾನದ ಬಳಕೆಗೆ ಒತ್ತು ನೀಡುವ ಮೂಲಕ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಂದ ಅವು ಭಿನ್ನವಾಗಿರುತ್ತವೆ ಎಂದು ಹೇಳಲಾಗಿತ್ತು? ಬಹುಮಹಡಿ ಹಾಸ್ಟೆಲ್ ಗಳು; ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರು ಶಿಕ್ಷಣ ಕೇಂದ್ರಗಳಲ್ಲಿ ಬಹುಮಹಡಿ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದ್ದರೂ, ಆದರೆ ಎಷ್ಟು ಕಡೆ ಜಾರಿ ಆಗಿದೆ ಎಂಬುದಕ್ಕೆ ಲೆಕ್ಕವೇ ಇಲ್ಲದಾಗಿದೆ. ಆ ವಿವಿಗಳಿಗೆ ಸರಿಯಾಗಿ ವಿದ್ಯುತ್ ಸೌಲಭ್ಯಗಳು ಇಲ್ಲ ಇನ್ನೂ ತಂತ್ರಜ್ಞಾನ ಸುಧಾರಣೆ ಗಗನ ಕುಸಮುವೇ ಸರಿ.
ಉಚಿತವೆಂಬ ಖಚಿತವಲ್ಲದ ಘೋಷಣೆ
ಉಚಿತ ಬಸ್ ಪಾಸ್ ಎಂಬ ಘೋಷಣೆಯನ್ನು ಕಳೆದ ಎರಡು ಬಜೆಟ್ ಗಳಿಂದ ಘೋಷಿಸಿಕೊಂಡು ಬರಲಾಗುತ್ತಿದೆ. ಆದರೆ ಆ ಉಚಿತಗಳು ಜನರಿಗೆ ಖಚಿತವಾದುದರ ಬಗ್ಗೆ ಮಾಹಿತಿಯೇ ಇಲ್ಲ. ಉಚಿತ ಬಸ್ ಪಾಸ್ ಸಿಕ್ಕಿದಿಯೇ? ಎಂದು ವಿದ್ಯಾರ್ಥಿಗಳನ್ನು ಹಾಗೂ ಗಾರ್ಮೆಂಟ್ ಕಾರ್ಮಿಕರನ್ನು ಕೇಳಿದರೆ ಉತ್ತರ ಸಿಕ್ಕು ಬಿಡುತ್ತದೆ. ಸಮಯಕ್ಕೆ ಸರಿಯಾಗಿ ಬಸ್ ಗಳೇ ಇಲ್ಲ, ಕೆಲವಡೆ ಬಸ್ ಸೌಲಭ್ಯಗಳೇ ಇಲ್ಲ. ಹೀಗಿದ್ದಾಗಿ ಉಚಿತ ಎಂಬುದು ಖಚಿತವಾಗುವುದಾದರೂ ಹೇಗೆ?
ಕಳೆದ ಬಾರಿ ಸುರಿದ ಬಾರೀ ಮಳೆಗೆ ರಾಜ್ಯದಲ್ಲಿ 42 ಸಾವಿರ ಸರಕಾರಿ ಶಾಲೆಗಳು ನಲುಗಿ ಹೋಗಿದ್ದವು. ಅದರಲ್ಲಿ 22 ಸಾವಿರ ಸರಕಾರಿ ಶಾಲೆಗಳ ಕಟ್ಟಡಗಳು ತೀವ್ರ ಹಾನಿಗೊಳಗಾಗಿದ್ದವು. ಆದರೆ ಸರಕಾರ ಈ ಬಾರಿಯ ಬಜೆಟ್ ನಲ್ಲಿ 2777 ದುರಸ್ತಿ ಹಾಗೂ 8 ಸಾವಿರ ಹೊಸ ಕೊಠಟಿಗಳನ್ನು ನಿರ್ಮಾಣ ಮಾಡಲು ಪ್ರಸ್ತಾಪಿಸಲಾಗಿದೆ. ಉಳಿದ 12 ಸಾವಿರ ಕೊಠಡಿಗಳ ಕಥೆ ಏನು? ಅವುಗಳನ್ನು ವಿಲೀನದ ಹೆಸರಲ್ಲಿ ಸದ್ದಿಲ್ಲದೆ ಮುಚ್ಚಿಬಿಟ್ಟರಾ? ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಉಗುಳುನುಂಗಿ ಮಾತನಾಡುವುದನ್ನು ಗಮನಿಸಿದರೆ ಬಹುಶಃ 40% ಕಮೀಷನ್ ನಲ್ಲಿ ಅವುಗಳನ್ನು ನುಂಗಿದಂತೆ ಕಾಣುತ್ತದೆ.
ಮಳೆ ಪ್ರವಾಹಕ್ಕೆ ಲಕ್ಷಾಂತ ಹೆಕ್ಟೇರ್ ಭೂಮಿ ಮಳೆಯಿಂದಾಗಿ ಹಾನಿಯಾಗಿ ರೈತರ ಕೈ ಸುಟ್ಟು ಹಾಕಿತ್ತು. ರೈತರ ಕೈಗೆ ಸುಳ್ಳು ಭರವಸೆಯ ಯೋಜನೆಗಳನ್ನು ನೀಡದರೆ ಹೊರತು ಆರ್ಥಿಕ ಸಹಾಯ ಸಿಕ್ಕಿದ್ದು ಇಲ್ಲವೇ ಇಲ್ಲ. ರೈತರ ಖಾತೆಗೆ ಬರಬೇಕಿದ್ದ ಬೆಳೆ ಹಾನಿ, ಬೆಳೆ ವಿಮೆ ಬರೆದೇ ಎರಡು ವರ್ಷಗಳಾಗಿವೆ? ಈ ಬಾರಿಯ ಬಜೆಟ್ ರೈತ ಬಜೆಟ್ ಎನ್ನುವವರು ಕಳೆದ ಬಾರಿಯ ಬಜೆಟ್ ವಿಮರ್ಶಿಸಿಕೊಂಡು ನಿರ್ಧರಿಸಬೇಕಿದೆ.
ಇದನ್ನು ಓದಿ: ದೂರದೃಷ್ಟಿಯಿಲ್ಲದ, ಕೃಷಿಕರ ಪರವಿಲ್ಲದ ಬಜೆಟ್ : ಬಡಗಲಪುರ ನಾಗೇಂದ್ರ
ಮೇಲ್ನೋಟಕ್ಕೆ ಎಲ್ಲದರಿಂದಲೂ, ಎಲ್ಲಕ್ಕೂ ಎಂಬಂತೆ ಕಾಣುವ ಬಜೆಟ್, ಗಾಳಿ ತುಂಬಿದ ಬಲೂನಿನಂತೆ ಕಾಣುತ್ತಿದೆ. ಆರೋಗ್ಯ, ಶಿಕ್ಷಣ, ಕೃಷಿ, ಸಾರ್ವಜನಿಕ ವ್ಯವಸ್ಥೆಯನ್ನು ನಿರ್ಲಕ್ಷಿಸಿರುವ ಆಯುಷ್ಯವಿಲ್ಲದ ಬಜೆಟ್ ಬಣ್ಣಕ್ಕೆ ರಾಜ್ಯದ ಜನ ಮರುಳಾಗದಿರಲಿ, ಕಳೆದ ಬಾರಿಯ ಬಜೆಟ್ ನ 20% ಕೂಡ ಈಡೇರಿಸಲು ಸರಕಾರದ ಕಡೆಯಿಂದ ಸಾಧ್ಯವಾಗಿಲ್ಲ. ಹಾಗಾಗಿ ಈ ಬಜೆಟ್ ಹೇಗೆ ಜಾರಿಯಾಗಬಹುದು ಎಂಬುದನ್ನು ಒಂದು ಬಾರಿ ಯೋಚಿಸಿ. ಜನರ ಕಲ್ಯಾಣವನ್ನು ನಿರ್ಲಕ್ಷಿಸಿರುವ ಸರಕಾರವನ್ನು ಚುನಾವಣೆಯಲ್ಲಿ ಸೋಲಿಸುವುದು, ಬಿಡುವುದು ಜನರ ಕೈಯ್ಯಲಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ