ಜ್ಯೋತಿ ಶಾಂತರಾಜು
ಸತತ ಪರಿಶ್ರಮ ಮತ್ತು ಧೃಡ ಸಂಕಲ್ಪ ಇದ್ದರೆ ಯಾವುದೂ ಅಸಾಧ್ಯ ಅಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿರುವ ರಂಗಭೂಮಿ ಕಲಾವಿದ, ನಟ, ನಿರ್ದೇಶಕ, ಸಂಗೀತ ನಿರ್ದೇಶನವನ್ನೂ ಮಾಡಿರುವ ಅಂತಾರಾಷ್ಟ್ರೀಯ ಜಾನಪದ ಕಲಾವಿದ, ಬಹುಮುಖ ಪ್ರತಿಭೆ 27 ವರ್ಷದ ಅಂಕರಾಜು. ಬಾಲ್ಯದಲ್ಲಿ ಶಾಲಾ ಕಲಿಕೆಯಲ್ಲಿ ತುಂಬ ಹಿಂದಿದ್ದರೂ ಇವತ್ತು ಉತ್ತಮ ಪ್ರತಿಭೆಯಾಗಿ ತುಂಬ ಜನರಿಗೆ ಪ್ರೇರಣೆಯಾಗಿದ್ದಾರೆ. ಇಂದಿನ ನನ್ನ ಸಾಧನೆಗೆ ನನ್ನವ್ವನೇ ಸ್ಫೂರ್ತಿ ಎನ್ನುತ್ತಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದವರಾದ ಅಂಕರಾಜು ಎನ್. ನಂಜುಂಡ ಮತ್ತು ರಾಜಮ್ಮ ದಂಪತಿಗಳ ಒಬ್ಬರೇ ಮಗ. ತಮ್ಮ ಪ್ರತಿಭೆಯ ಮೂಲಕ ರಾಜ್ಯ ಅಂತರಾಜ್ಯಗಳಲ್ಲಿ ಗುರುತಿಸಿಕೊಂಡಿರುವ ಇವರ ಸಾಧನೆಯ ಹಾದಿ ಇವತ್ತಿನ ನಿಮ್ಮ ಓದಿಗೆ.
‘ನನ್ನವ್ವನಿಗೆ ಕಿವಿ ಕೇಳಿಸುವುದಿಲ್ಲ. ಮಾತು ಬರುವುದಿಲ್ಲ. ಅಪ್ಪ ಬೇರೆ ಊರುಗಳಿಗೆ ಕಾಫಿ ಎಸ್ಟೇಟ್, ತೋಟದ ಕೆಲಸಕ್ಕೆ ಅಂತ ತಿಂಗಳಾನುಗಟ್ಟಲೆ ಹೋಗಿಬಿಡುತ್ತಿದ್ದರು. ನಾನು ಹುಟ್ಟಿದಾಗಲೂ ಅಪ್ಪ ಊರಿನಲ್ಲಿ ಇರಲಿಲ್ಲವಂತೆ. ಯಾವುದೋ ಊರಿಗೆ ಕೆಲಸಕ್ಕೆ ಅಂತ ಹೋಗಿದ್ದರಂತೆ. ನನ್ನ ಸಾಕಿ ಬೆಳೆಸಿದ್ದು ನನ್ನವ್ವನೇ. ಇವತ್ತು ನಾನು ಏನೇ ಆಗಿದ್ದರೂ ನನ್ನವ್ವನಿಂದಲೇ’ ಎನ್ನುತ್ತಾರೆ ಅಂಕರಾಜು.
‘ನನ್ನ ತಾಯಿ ಸದಾ ನನ್ನ ಮಗ ಇದ್ದಾನೆ ಅವನಿಗಾಗಿ ದುಡೀಬೇಕು ಅಂತ ಕೂಲಿ ಕೆಲಸಕ್ಕೆ ಹೋಗುವುದು, ನಾಟಿ ಮಾಡುವುದು, ಕಳೆ ಕೀಳುವುದು, ಕಣ ಮಾಡುವುದು, ಗಾರೆ ಕೆಲಸ ಮಾಡುವುದು ಹೀಗೆಲ್ಲಾ ನನ್ನ ಸಾಕಲು ತುಂಬ ಕಷ್ಟಪಟ್ಟಿದ್ದಾಳೆ.
ನನ್ನವ್ವನಿಗೆ ಕಿವಿ ಕೇಳಿಸಲ್ಲ, ಮಾತು ಬರಲ್ಲ ಅಂದ್ರು ಕೆಲಸವನ್ನು ತುಂಬ ಅಚ್ಚುಕಟ್ಟಾಗಿ ಮಾಡುತ್ತಾಳೆ. ತಾನು ಆಯ್ತು ತನ್ನ ಕೆಲಸ ಆಯ್ತು ಅಂತ ಮಾಡಿಕೊಂಡು ಹೋಗ್ತಾ ಇರುತ್ತಾಳೆ. ಆದ್ದರಿಂದ ಎಲ್ಲರೂ ನನ್ನವ್ವನ ಕೆಲಸ ಮೆಚ್ಚಿಕೊಂಡು ರಾಜಮ್ಮನನ್ನ ಕೆಲಸಕ್ಕೆ ಕರೀರಿ ಅನ್ನುತ್ತಿದ್ದರಂತೆ. ಅಮ್ಮ ಕೂಲಿ ಕೆಲಸ ಮಾಡಿದರೂ ನನ್ನ ಬಹಳ ಮುದ್ದಿನಿಂದ ಸಾಕಿದ್ಲು. ನನಗಾಗಿ ಅವ್ವ ಒಂದೊಂದು ರೂಪಾಯಿ ಕಾಸನ್ನೂ ಬಟ್ಟೆಯಲ್ಲಿ ಗಂಟು ಕಟ್ಟಿ ಎತ್ತಿಟ್ಟಿರುತ್ತಿದ್ದಳು. ಆಗಿನಿಂದ ಕಷ್ಟಪಟ್ಟು ದುಡಿದ ಜೀವ ಇವತ್ತು ಸಾಕು ನೀನು ದುಡಿದದ್ದು ಮನೆಯಲ್ಲಿ ಇರವ್ವ ಅಂದ್ರೆ ಇರಲ್ಲ. ಏನಾದರೂ ಕೆಲಸ ಮಾಡುತ್ತ ಇರುತ್ತಾಳೆ’.
‘ನಾನು ಬಾಲ್ಯದಲ್ಲಿ ಬಹಳ ತುಂಟನಾಗಿದ್ದೆ. ಶಾಲೆಗೆ ಹೋಗಲ್ಲ ಅಂತ ಹಠ ಮಾಡುತ್ತಿದ್ದೆ. ಯಾರಾದರೂ ಕೆಲಸ ಹೇಳಿದ್ರೆ ಮಾತ್ರ ಆರಾಮವಾಗಿ ಇಷ್ಟ ಪಟ್ಟು ಮಾಡುತ್ತಿದ್ದೆ. ಶಾಲೆಗೆ ಹೋಗುವುದು ತಪ್ಪುತ್ತದೆ ಕೆಲಸ ಮಾಡಿಕೊಂಡು ಮನೆಯಲ್ಲೇ ಇರಬಹುದು ಅಂತ. ನಾನು ಶಾಲೆಗೆ ಸರಿಯಾಗಿ ಹೋಗುವುದಿಲ್ಲ ಅಂತ ಅಪ್ಪ ಬೇವಿನ ಮರಕ್ಕೆ ಕಟ್ಟಿ ಹೊಡೆದ ನೆನಪು ಇನ್ನೂ ಹಸಿಯಾಗಿದೆ ಎಂದು ಮುಗುಳ್ನಗೆಯನ್ನು ಮುಖದ ಮೇಲೆ ತಂದುಕೊಳ್ಳುತ್ತಾರೆ ಅಂಕರಾಜು. ಆಟ ಆಡಿಕೊಂಡು ಇದ್ದವನು ನಾನು. ಎಸ್.ಎಸ್.ಎಲ್.ಸಿ ಗೆ ಬರುವ ತನಕ ನಾನು ಶತದಡ್ಡ ಅಂತ ಅಂದುಕೊಂಡಿದ್ದೆ. ಮತ್ತು ಅದು ಸಾಬೀತು ಕೂಡ ಆಗಿತ್ತು. ಯಾವಾಗಲು ಅನುತ್ತೀರ್ಣ ಇಲ್ಲವೇ ಜಸ್ಟ್ ಪಾಸ್ ಆಗಿರುತ್ತಿದ್ದೆ. ನಾನು ಒಂಭತ್ತನೇ ತರಗತಿಗೆ ಹೋದರೂ ಇಂಗ್ಲೀಷ್ ಬರುತ್ತಿರಲಿಲ್ಲ. ಆದರೂ ಅವ್ವ ಅಪ್ಪ ಒಬ್ಬನೇ ಮಗ ಅಂತ ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅವ್ವ ಅಪ್ಪನಿಗೆ ನಾನು ಶಾಲೆಗೆ ಹೋಗಿ ಚೆನ್ನಾಗಿ ಓದಬೇಕು ಅಂತ ಆಸೆ.
ಎಸ್.ಎಸ್.ಎಲ್.ಸಿ ಯಲ್ಲಿ ನಮ್ಮ ಸಮುದಾಯದಲ್ಲಿ ಪಾಸ್ ಆದವರೇ ಇಬ್ಬರು. ಅದರಲ್ಲಿ ನಾನು ಒಬ್ಬನಾಗಿದ್ದೆ. ಮೂರು ವಿಷಯಗಳಲ್ಲಿ 30 ಅಂಕಗಳು ಬಂದಿದ್ದವು. ಯಾವುದಾದರು ಒಂದು ವಿಷಯದಲ್ಲಿ ಒಂದು ಅಂಕ ಕಡಿಮೆ ಬಂದಿದ್ದರೂ ನಾನು ಆಗ ಅನುತ್ತೀರ್ಣನಾಗಿರುತ್ತಿದ್ದೆ. ಒಟ್ಟಿನಲ್ಲಿ ಅಂಕರಾಜು ಎಂಬ ನನಗೆ ಅಂಕಗಳೇ ಬರುತ್ತಿರಲಿಲ್ಲ. ಹಾಗೇನಾದರೂ ಅನುತ್ತೀರ್ಣನಾಗಿದ್ದರೆ ನನಗೂ ಕೂಡ ಎಲ್ಲರಂತೆ ಬೆಂಗಳೂರು, ಮೈಸೂರಿನಲ್ಲೋ ಯಾವುದಾದರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬದುಕುವ ಪರಿಸ್ಥಿತಿ ಬಂದೊದಗುತ್ತಿತ್ತು’.
‘ಪಿ.ಯು.ಸಿ ಗೆ ಕೊಳ್ಳೇಗಾಲದಲ್ಲಿರುವ ವರ್ಮಾ ಕಾಲೇಜಿಗೆ ಸೇರಿಕೊಂಡೆ. ಇಂಗ್ಲೀಷ್ ಬರುವುದಿಲ್ಲ ಅಂತ ಆರ್ಟ್ಸ್ ತಗೊಂಡೆ. ಹೇಗೋ ಓದಬೇಕು ಅಂತ ಅದೇ ಕಾಲೇಜಿನ ಹಾಸ್ಟೆಲ್ಲಿನಲ್ಲಿ ಉಳಿದುಕೊಂಡೆ. ನನಗೆ ಆಗಾಗ ಆರೋಗ್ಯದಲ್ಲಿ ಏರುಪೇರು ಕೂಡ ಉಂಟಾಗುತ್ತಿತ್ತು. ಭೂಗೋಳಶಾಸ್ತ್ರ ಪಾಠ ಮಾಡುತ್ತಿದ್ದ ನಂಜುಂಡಸ್ವಾಮಿ ಮೇಷ್ಟ್ರು ನನ್ನ ಹಿನ್ನೆಲೆಯನ್ನೆಲ್ಲ ವಿಚಾರಿಸಿ ನನ್ನ ಬಗ್ಗೆ ಸಂಪೂರ್ಣ ತಿಳಿದುಕೊಂಡು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧಿ ಕೊಡಿಸಿದರು. ಆಗಾಗ ಹಣ್ಣುಗಳನ್ನು ತಂದುಕೊಡುತ್ತಿದ್ದರು. ಏಕೆಂದರೆ ಮನೆಯವರಿಗೆ ಅದನ್ನೆಲ್ಲ ತಂದುಕೊಡಲು ಶಕ್ತಿ ಇರಲಿಲ್ಲ. ಅಂದಿನಿಂದ ಮೇಷ್ಟ್ರು ಮೇಲೆ ನನಗೆ ಪ್ರೀತಿ ಹುಟ್ಟಿತು ಅವರ ಮೇಲೆ ಗೌರವ ಜಾಸ್ತಿ ಆಯ್ತು. ಅವರು ಮಾಡುವ ಪಾಠವನ್ನು ಶ್ರದ್ಧೆಯಿಂದ ಕೇಳಲು ಆರಂಭ ಮಾಡಿದೆ. ಅವರ ಜೊತೆಗೆ ಹೆಚ್ಚಿನ ಒಡನಾಟವನ್ನು ಬೆಳೆಸಿಕೊಂಡೆ. ಅವರ ವಿಷಯವನ್ನು ಚೆನ್ನಾಗಿ ಓದಿ 90 ಅಂಕಗಳನ್ನು ತೆಗೆದುಕೊಂಡಿದ್ದೆ. 120 ಜನರಲ್ಲಿ ನಾನೊಬ್ಬನೇ ಅಷ್ಟು ಅಂಕಗಳನ್ನು ತೆಗೆದಿದ್ದೆ. ಮೇಷ್ಟ್ರು ಎಲ್ಲರ ಎದುರು ನನ್ನನ್ನು ಕರೆದು ಇವನ ತರ ಓದಬೇಕು ಅಂತ ಹೇಳಿದ್ದರು. ಮೊಟ್ಟಮೊದಲ ಬಾರಿಗೆ ಆ ಸಂದರ್ಭ ನನ್ನ ಬದುಕಿನ ಪಥವನ್ನೇ ಬದಲಾಯಿಸಿತು. ಅದಾದ ನಂತರ ಎಲ್ಲಾ ವಿಷಯಗಳಲ್ಲೂ ಅಷ್ಟೇ ಶ್ರದ್ಧೆಯಿಂದ ಓದಲು ಶುರುಮಾಡಿದೆ. ರಿಸಲ್ಟ್ ಬಂದ ಮೇಲೆ ಇಡೀ ಕಾಲೇಜಿಗೆ ನಾನೆ ಟಾಪರ್ ಆಗಿದ್ದೆ. ಏನೂ ಗೊತ್ತಿಲ್ಲದಿದ್ದವನು ಮೂರು ವಿಷಯಗಳಲ್ಲಿ 30 ಅಂಕಗಳನ್ನು ತೆಗೆದುಕೊಂಡು ಇನ್ನೋಂದೇ ಮಾರ್ಕ್ಸ್ ಕಡಿಮೆ ಬಂದಿದ್ದರೂ ಅನುತ್ತೀರ್ಣನಾಗುತ್ತಿದ್ದವನಿಂದ ಇಷ್ಟು ಸಾಧ್ಯವಾದದ್ದು ನಂಜುಂಡಸ್ವಾಮಿ ಮೇಷ್ಟ್ರು ಮೇಲಿನ ಪ್ರೀತಿಯಿಂದ. ಆಸಕ್ತಿ ಶ್ರದ್ಧೆ ಇಟ್ಟು ಓದಿದ್ದರಿಂದ. ಪಿ.ಯು.ಸಿ ಮುಗಿದ ನಂತರ ಡಿಗ್ರಿ ಓದಲು ಮಹಾರಾಜ ಕಾಲೇಜಿನಲ್ಲಿ ಫೀಸ್ ಕಡಿಮೆ ಇದೆ, ಹಾಸ್ಟೆಲ್ ಸೌಲಭ್ಯ ಇದೆ ಎಂದು ಕೇಳಿದ್ದೆ. ವಿಳಾಸ ಕೇಳಿ, ತಿಳಿದುಕೊಂಡು ಮಹಾರಾಜ ಕಾಲೇಜಿಗೆ ಬಂದು ಅಡ್ಮಿಶನ್ ಎಲ್ಲ ವಿಚಾರಿಸಿದಾಗ 2700/- ರೂಪಾಯಿಗಳನ್ನು ಕಟ್ಟಬೇಕಿತ್ತು. ಆದರೆ ನಮ್ಮ ಹತ್ತಿರ ಹಣವಿಲ್ಲ. ಆಗ ನನ್ನವ್ವ ನೀನೇನು ಚಿಂತೆ ಮಾಡಬೇಡ ಅಂತ ತನ್ನ ಕಿವಿಯಲ್ಲಿದ್ದ ಒಂದು ಜೊತೆ ಓಲೆಯನ್ನು ಬಿಚ್ಚಿ 3000/- ರೂಪಾಯಿಗೆ ಅಡವಿಟ್ಟು ಹಣಕೊಟ್ಟ ಅವ್ವ ತನ್ನ ಮೂಕ ಮುಗ್ದ ಸನ್ನೆಯಿಂದ ಒಂದೇ ಮಾತು ಹೇಳಿದ್ಲು, ನೀನು ಚೆನ್ನಾಗಿ ಓದಬೇಕು ಮಗ ಅಂತ. ಆ ಕ್ಷಣಕ್ಕೆ ನನಗೆ ಏನೂ ಅನ್ನಿಸಲಿಲ್ಲವಾದರೂ ದಿನ ಕಳೆದಂತೆ ಅದರ ಬೆಲೆ ಗೊತ್ತಾಗ್ತಾ ಹೊಯ್ತು. ಅವ್ವನೆಂದರೆ ಹೀಗೆ ಅಲ್ಲವೇ… ಅವಳ ವಾತ್ಸಲ್ಯಕ್ಕೆ ನಿಸ್ವಾರ್ಥ ಪ್ರೇಮಕ್ಕೆ ಸಾಟಿಯಾದರೂ ಯಾವುದಿರುವುದು ಈ ಜಗದಲಿ.. ಮಕ್ಕಳ ಏಳ್ಗೆಯಲ್ಲಿ ತಾನು ಸುಖಿಸುವವಳು ಅವಳು. ಮೊದಲ ವರ್ಷದ ಬಿ.ಎ. ಪದವಿ ಓದುತ್ತಿರುವಾಗ ವಿದ್ಯಾಭ್ಯಾಸದ ಜೊತೆಗೆ ವಾರಕ್ಕೊಮ್ಮೆ ಮದುವೆ ಛತ್ರಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದೆ. ಅವರು 350/- ರೂಪಾಯಿ ಸಂಬಳ ಕೊಡುತ್ತಿದ್ದರು. ಹಾಗೆ ರಜಾ ದಿನಗಳಲ್ಲಿ ಗಾರೆ ಕೆಲಸ, ಹೋಟೆಲ್ ನಲ್ಲಿ ಸಪ್ಲೈ ಮಾಡುವ ಕೆಲಸವನ್ನು ಮಾಡಿದ್ದೇನೆ. ಬಂದ ಹಣದಿಂದಲೇ ನನ್ನ ಮುಂದಿನ ವಿದ್ಯಾಭ್ಯಾಸ, ಪುಸ್ತಕವನ್ನು ತೆಗೆದುಕೊಳ್ಳಲು, ಊರಿಗೆ ಹೋಗಲು ಬಸ್ ಚಾರ್ಜ್ ಎಲ್ಲದಕ್ಕೂ ಉಪಯೋಗಕ್ಕೆ ಬರುತ್ತಿತ್ತು’.
‘ಬೇರೆಯವರು ನಾಟಕ ಅಭಿನಯಿಸುವಾಗ ಅದನ್ನು ನೋಡುತ್ತಿದ್ದೆ, ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅವರು ಇಷ್ಟು ಚೆನ್ನಾಗಿ ಮಾಡುತ್ತಾರೆ ನನ್ನಿಂದ ಯಾಕೆ ಸಾಧ್ಯ ಇಲ್ಲ ನಾನು ಮಾಡಬೇಕು ಎಂಬ ಹಂಬಲವಿರುತ್ತಿತ್ತು. ಹುಡುಕಾಟ ಮಾಡುತ್ತಿದ್ದೆ. ನನ್ನಿಂದ ಯಾಕೆ ಸಾಧ್ಯ ಇಲ್ಲ ಎಂದು ನನ್ನ ನಾನೆ ಪ್ರೆರೇಪಿಸಿಕೊಳ್ಳುತ್ತಿದ್ದೆ. ಅವರಿಗೆ ಸಾಧ್ಯವಾದರೆ ನನಗೂ ಸಾಧ್ಯ ಅಂತ ಪ್ರಯತ್ನ ಮಾಡುತ್ತಿದ್ದೆ’.
‘ರಾಷ್ಟ್ರೀಯ ಸೇವಾ ಯೋಜನೆ (NSS)ಯಲ್ಲಿ ನನ್ನ ತೊಡಗಿಸಿಕೊಂಡೆ. ಅಜ್ಜಿ ಲಕ್ಷ್ಮಮ್ಮ ಹಾಡುತ್ತಿದ್ದ ಜಾನಪದ ಹಾಡು ‘ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗಬಾರದಮ್ಮ’… ಈ ಹಾಡನ್ನು ಮೊದಲ ಬಾರಿಗೆ ಸ್ಟೇಜ್ ಮೇಲೆ ಹಾಡಿದಾಗ ಎಲ್ಲರೂ ಖುಷಿಪಟ್ಟರು ಚೆನ್ನಾಗಿ ಹಾಡುತ್ತೀಯಾ ಅಂತ ಹೇಳಿ ನಾಟಕಗಳನ್ನು ಕಲಿಯಲು ರಮೇಶ್ ಸರ್, ನಾರಾಯಣ ಸ್ವಾಮಿ ಸರ್ ಬೆನ್ನೆಲುಬಾಗಿ ನಿಂತರು. ಅಲ್ಲಿಯವರೆಗೆ ಊರಲ್ಲಿ ಬಂಡಿ ಹಬ್ಬ ಆದರೆ ಜಾತ್ರೆ ಆದರೆ ಅಲ್ಲಿ ಕುಣಿಯುವುದು ತಾಳ ಜ್ಞಾನ ಅಂತ ಅಷ್ಟೇ ನನಗೆ ಗೊತ್ತಿತ್ತು. ಊರುಗಳಲ್ಲಿ ಆಗ ಪೌರಾಣಿಕ ನಾಟಕಗಳನ್ನು ಆಡುತ್ತಿದ್ದರು ನೋಡುತ್ತಿದ್ದೆ. ಅದನ್ನು ಹೊರತುಪಡಿಸಿ ಬೇರೆ ಯಾವ ಕಲೆಯ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ’.
‘ಸ್ಕ್ರಿಪ್ಟ್, ಮೂಕಾಭಿನಯ, ನಾಟಕ, ಡೊಳ್ಳುಕುಣಿತ, ಕಂಸಾಳೆ, ಪೂಜಾ ಕುಣಿತ, ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ ಎಲ್ಲಾ ಸ್ಪರ್ಧೆಗಳು ನಡೆಯುತ್ತಿದ್ದವು. ರಾಜ್ಯ, ಅಂತರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡೆ. 2016 ರಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ವಿಶ್ವ ವಿದ್ಯಾನಿಲಯದಲ್ಲಿ ಒಟ್ಟು ಒಂಭತ್ತು ದೇಶಗಳು ಭಾಗವಹಿಸಿದ್ದವು. ನಮ್ಮ ತಂಡ ಭಾರತವನ್ನು ಪ್ರತಿನಿಧಿಸಿತ್ತು. ಒಂದು ವಾರ ಲಕ್ನೋದಲ್ಲಿ ಇದ್ದು ಡೊಳ್ಳು ಕುಣಿತವನ್ನು ಪ್ರದರ್ಶನ ಮಾಡಿದೆವು. ಸುಂದರೇಶ್, ಭಾರ್ಗವ್ ಸೇನ್ ರವರು ನನ್ನನ್ನು ನಿರಂತರವಾಗಿ ಸಾಂಸ್ಕೃತಿಕ ಕಲೆಗಳನ್ನು ಕಲಿಯಲು ಸಹಾಯ ಮಾಡಿದರು. ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲೂ ಇಲ್ಲಿಯವರೆಗೆ ಐವತ್ತಕ್ಕೂ ಹೆಚ್ಚು ಡೊಳ್ಳು ಕುಣಿತ, ನಾಲ್ಕನೂರಕ್ಕೂ ಹೆಚ್ಚು ಮೂಕಾಭಿನಯ ಪ್ರದರ್ಶನಗಳನ್ನು ಮಾಡಿದ್ದೇನೆ’.
“ಧ್ವನಿ ಬೆಳಕು” ಕಾರ್ಯಕ್ರಮದ ಮುಖೇನ ‘ಭಾರತ ಭಾಗ್ಯವಿಧಾತ’ ಎಂಬ ನಾಟಕದಲ್ಲಿ ಅಭಿನಯಿಸಿದ್ದೇನೆ. 2013ರಿಂದ ನಿರಂತರವಾಗಿ ಮೈಸೂರಿನ ಹವ್ಯಾಸಿ ಕಲಾ ತಂಡಗಳಲ್ಲಿ ಸಕ್ರಿಯವಾಗಿ ನನ್ನನ್ನು ನಾನು ತೊಡಗಿಸಿಕೊಂಡು ನಾಟಕಗಳನ್ನು ಮಾಡುತ್ತ ಬಂದಿದ್ದೇನೆ. ರಾಕ್ಷಸ, ಊರುಭಂಗ, ಬದುಕಿ ಸತ್ತವರು, ತಾಮ್ರ ಪತ್ರ, ಕಿಸಾ ಗೌತಮಿ, ಅಂಗುಲಿಮಾಲ, ಬೆಲ್ಲದ ದೋಣಿ, ದೇವನಾಂಪ್ರಿಯ, ಅಶೋಕ ಮಹಾ ಪೌರ್ಣಿಮೆ, ಅನ್ನಾವತಾರ, ನನಗ್ಯಾಕೋ ಡೌಟು, ಕೋರ್ಟ್ ಮಾರ್ಷಲ್ ಇನ್ನೂ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಕೋರ್ಟ್ ಮಾರ್ಷಲ್ ನಾಟಕದಲ್ಲಿ ಬಿಕಾಷ್ ರಾಯ್ ಪಾತ್ರವನ್ನು ಮಾಡಿದ್ದೆ. 2019 ರಲ್ಲಿ ಉಡುಪಿ ರಾಜ್ಯ ಮಟ್ಟದ ನಾಟಕದ ಸ್ಪರ್ಧೆಯಲ್ಲಿ ಬೆಸ್ಟ್ ಆಕ್ಟರ್ ಅವಾರ್ಡ್ ಬಂತು. ರಾಜ್ಯ ಯುವರತ್ನ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸ್ಕ್ರಿಪ್ಟ್, ಮೂಕಾಭಿನಯ, ನಿರ್ದೇಶನ, ಮಾಡುತ್ತ ಬಹುರೂಪಿ ನಾಟಕೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲೂ ಅಭಿನಯಿಸಿದ್ದೇನೆ’.
‘ಬಿ. ಎ. ಪದವಿ ಮುಗಿದ ನಂತರ ನಾನು ಯಾಕೆ ಇಂಗ್ಲೀಷ್ ಕಲಿಯಬಾರದು ಅಂತ ಎಂ. ಎಸ್ಸಿ ಇನ್ ಲೈಬ್ರರಿ ಸೈನ್ಸ್ ಓದಿದೆ. ಅದರಲ್ಲಿ ಚೆನ್ನಾಗಿ ಓದಿ 76% ಅಂಕ ಗಳಿಸಿದೆ. ಏಳು ವರ್ಷದ ಅನುಭವ ಇದ್ದರೂ ನಾನು ಯಾವುದೇ ರೀತಿಯ ರಂಗ ಶಿಕ್ಷಣ ಪಡೆದುಕೊಂಡಿರಲಿಲ್ಲ ಎಂಬ ಕೊರಗು ಇತ್ತು. ಆಗ ಮೈಸೂರು ರಂಗಾಯಣದಲ್ಲಿ ಒಂದು ವರ್ಷದ ಕೋರ್ಸ್ ಮಾಡಿದೆ. ಅಲ್ಲಿ ಕಲಹರಿ, ನಟನೆ, ಆಕ್ಟಿಂಗ್ ಮೆಥಡ್ಸ್ ಗಳನ್ನು
ರಾಮನಾಥ, ದಿಗ್ವಿಜಯ ಹೆಗ್ಗೋಡು, ಅಪೂರ್ವ ಹಾನಗಳ್ಳಿ, ಮಂಜು ಕಾಸರಗೋಡು ಅಲ್ಲದೆಯೂ ಕೇರಳ, ಮಣಿಪುರ, ಲಂಡನ್ ಅಲ್ಲಿಂದೆಲ್ಲ ತರಬೇತುದಾರರು ಬಂದು ಪಾಠ ಹೇಳಿಕೊಡುತ್ತಿದ್ದರು. ತರಗತಿಗಳು ಬೆಳಗ್ಗೆ 5:30ಕ್ಕೆ ಪ್ರಾರಂಭವಾದರೆ ರಾತ್ರಿ 11ರವರೆಗೂ ನಡೆಯುತ್ತಿದ್ದವು. ಒಂದು ವರ್ಷ ಅಲ್ಲಿ ಕಲಿತು ನಂತರ ಅದೇ ಮೈಸೂರು ರಂಗಾಯಣದಲ್ಲಿ ಅಸಿಸ್ಟೆಂಟ್ ಲೈಬ್ರರಿಯನ್ ಆಗಿ ಕೆಲಸ ಮಾಡುತ್ತಿದ್ದೆ. ‘ಚಂದ್ರಗಿರಿ ತೀರದಲ್ಲಿ’ ಕಾದಂಬರಿಯನ್ನು ರಂಗರೂಪ ಮಾಡಿ ಆ ನಾಟಕದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದೆ. ಅದಕ್ಕೂ ಮೊದಲು ಅರಿವು, ರಾಕ್ಷಸ ಎಂಬ ನಾಟಕಗಳ ನಿರ್ದೇಶನವನ್ನು ಮಾಡಿದ್ದೆ. ಅಡ್ಡಂಡ ಸಿ. ಕಾರ್ಯಪ್ಪ ಅವರ ನೇತೃತ್ವದಲ್ಲಿ ಮೂವತ್ತು ವರ್ಷ ಅನುಭವವಿರುವ ಮೈಸೂರು ರಂಗಾಯಣದ ಕಲಾವಿದರಿಗೆ ಸಂಗೀತ ನಿರ್ವಹಣೆ ಮಾಡಿದ್ದೇನೆ. 2018ರಲ್ಲಿ ವಿಶ್ವಜ್ಞಾನಿ ಸಾಂಸ್ಕೃತಿಕ ಕಲಾ ಸಂಸ್ಥೆಯನ್ನು ಪ್ರಾರಂಭಿಸಿದ್ದೇನೆ. ಸಂಸ್ಥೆಯ ಮುಖಾಂತರ ಹಲವಾರು ಜಾನಪದ ಶಿಬಿರ, ರಂಗ ಶಿಬಿರಗಳನ್ನು ಉಚಿತವಾಗಿ ಮಾಡುತ್ತಿದ್ದೇನೆ. ಇದೆಲ್ಲ ಸಾಧ್ಯವಾದದ್ದು ನನ್ನವ್ವನ ತ್ಯಾಗದಿಂದ’ ಎಂದು ತಮ್ಮೆಲ್ಲ ಏಳ್ಗೆಯನ್ನು ತಾಯಿಯ ಪಾದಕ್ಕೆ ಅರ್ಪಿಸಿ ಧನ್ಯತೆ ಮೆರೆದರು.
‘ವಿಶ್ವ ಎಂದರೆ ಇಡೀ ಪ್ರಪಂಚ. ನನ್ನ ಕಲ್ಪನೆ ಪ್ರಪಂಚದಲ್ಲಿರುವ ಎಲ್ಲಾ ಕಲೆಗಳನ್ನು ನಾನು ಕಲಿತುಕೊಂಡು ನಮ್ಮ ಸಂಸ್ಥೆಗೆ ಬರುವ ಎಲ್ಲಾ ವಿದ್ಯಾರ್ಥಿಗಳಿಗೆ ನಾನು ಆ ಜ್ಞಾನವನ್ನು ತುಂಬಬೇಕು. ನಮ್ಮ ಸಂಸ್ಥೆಯಿಂದ ಕಲಿತ ಎಲ್ಲ ಮಕ್ಕಳು, ಯುವಕರು, ವಿಶ್ವಜ್ಞಾನಿಗಳಾಗಿ ಹೊರಗಡೆ ಹೋಗಬೇಕು. ನಾನು ಕಲಿತಿರುವುದನ್ನು, ನನ್ನ ಕಲೆಯನ್ನು ಧಾರೆ ಎರೆಯಬೇಕು ರಂಗಭೂಮಿಯಲ್ಲಿ ಇನ್ನೂ ಒಳ್ಳೆಯ ನಾಟಕಗಳನ್ನು ನಿರ್ದೇಶನ ಮಾಡಬೇಕು. ಹೊಸ ಕಲಾವಿದರನ್ನು ಹುಟ್ಟುಹಾಕಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಅದ್ಭುತ ಪ್ರತಿಭೆಗಳು ಇದ್ದಾರೆ. ಅವರನ್ನು ಗುರುತಿಸಿ ಮುನ್ನೆಲೆಗೆ ತರಬೇಕು. ಅವರಿಗೆ ವೇದಿಕೆ ಸಿಗಬೇಕು. ನಾನು ಏನೇ ಸಾಧನೆ ಮಾಡಿದರೂ ರಂಗಭೂಮಿಯಲ್ಲೇ ಮಾಡಬೇಕು’ ಎನ್ನುವ ತಮ್ಮ ಮಹತ್ವಾಕಾಂಕ್ಷೆಯನ್ನು ಹಂಚಿಕೊಂಡರು.
ತಾಯಿಯ ತ್ಯಾಗ, ಆಶೀರ್ವಾದ, ತಮ್ಮ ಅವಿರತ ಪ್ರಯತ್ನದಿಂದ ಒಂದು ಚೆಂದದ ಬದುಕು ಕಟ್ಟಿಕೊಂಡಿದ್ದಾರೆ. ಮತ್ತು ಹತ್ತು ಹಲವು ಕನಸುಗಳನ್ನು ಹೊಂದಿದ್ದಾರೆ. ಅವರಿಗೆ ಶುಭವಾಗಲಿ.