ರೈತರಿಂದ, ರೈತರಿಗಾಗಿ, ರೈತರ ಒಳಿತಿನ ಮೇಳಗಳು ಇಂದಿನ ಅಗತ್ಯ; ಅವರೆ ಮೇಳ ಇದಕ್ಕೆ ಮಾದರಿ: ಡಿಸಿಎಂ ಡಿ. ಕೆ. ಶಿವಕುಮಾರ್

ಬೆಂಗಳೂರು : “ಬಲ್ಲವನೇ ಬಲ್ಲ ಅವರೆ ರುಚಿಯ. ಎಲ್ಲಾ ಕಾಳುಗಳಿಗೆ ರಾಜ ಅವರೆ. ನಾನೂ ಸಹ ಅವರೆಯನ್ನು ಬೆಳೆಯುವ ರೈತ. ರೈತರಿಂದ, ರೈತರಿಗಾಗಿ, ರೈತರ ಒಳಿತಿಗಾಗಿ ಇಂತಹ ಮೇಳಗಳು ಹೆಚ್ಚು ನಡೆಯಬೇಕು. ಇತರೇ ಮೇಳಗಳಿಗಿಂತ ರೈತರ ಪರವಾದ ಮೇಳಗಳು ಇಂದಿನ ಅಗತ್ಯ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ವಾಸವಿ ಕಾಂಡಿಮೆಂಟ್ಸ್ ಅವರು ನಗರದಲ್ಲಿ ಆಯೋಜಿಸಿರುವ ಅವರೆ ಮೇಳದಲ್ಲಿ ಭಾಗವಹಿಸಿ ಹಾಗೂ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು “ನಮ್ಮ ಭಾಗಕ್ಕಿಂತ ಮಾಗಡಿ ಭಾಗದ ಅವರೆಯಲ್ಲಿ ಸೊಗಡು ಹೆಚ್ಚು. ಒಂದೊಂದು ಭೂಮಿಯಲ್ಲಿ ಬೆಳೆಯುವ ಅವರೆ ರುಚಿ ವಿಭಿನ್ನವಾಗಿರುತ್ತದೆ” ಎಂದರು.

“ನಮ್ಮ ಮನೆಯಲ್ಲಿಯೂ ಸಹ ಸೊಪ್ಪಿನ ಜೊತೆ ಅವರೆ ಕಾಳು ಹಾಕಿ ಸಾರು ಮಾಡುತ್ತಾರೆ. ಮೊದಲು ಚಳಿಗಾಲದ ಮೂರು ತಿಂಗಳು ಮಾತ್ರ ದೊರೆಯುತ್ತಿತ್ತು ಈಗ ವರ್ಷದ ಎಲ್ಲಾ ಕಾಲವೂ ದೊರೆಯುತ್ತದೆ. ಈ ಮೇಳದಲ್ಲಿ ಅವರೆ ದೋಸೆಯ ರುಚಿ ನೋಡಿದೆ. ಮನೆಯಲ್ಲಿಯೂ ಮಾಡುವಂತೆ ನನ್ನ ಪತ್ನಿಗೆ ಹೇಳುವೆ” ಎಂದರು.

ಇದನ್ನೂ ಓದಿ : ಪ್ರಜಾಪ್ರಭುತ್ವ ನಾಶವಾದರೆ ಮೊದಲ ದಾಳಿ ನಡೆಯುವುದು ಶೋಷಿತರ ಮೇಲೆ – ಬಿ.ವಿ ರಾಘವಲು

“ವಾಸವಿ ಕಾಂಡಿಮೆಂಟ್ಸ್ ಅವರು ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಅವರೆ ಮೇಳ ನನ್ನ ಈ ವರ್ಷದ ಕೊನೆಯ ಕಾರ್ಯಕ್ರಮ. ಪ್ರತಿ ವರ್ಷವೂ ಇದರಲ್ಲಿ ಭಾಗವಹಿಸಲು ನನಗೆ ವೈಯಕ್ತಿಕವಾಗಿ ಸಂತೋಷವಾಗುತ್ತದೆ. ಮನಮೋಹನ್ ಸಿಂಗ್ ಅವರು ನಿಧನ ಹೊಂದಿದ ಕಾರಣಕ್ಕೆ ಅವರೆ ಮೇಳದ ಉದ್ಘಾಟನೆಗೆ ಬರಲು ಸಾಧ್ಯವಾಗಲಿಲ್ಲ. ಖಾಸಗಿ ಕಾರ್ಯಕ್ರಮವಾದ ಕಾರಣಕ್ಕೆ ಭಾಗವಹಿಸಿದ್ದೇನೆ” ಎಂದರು.

“2024 ಮುಗಿಯುತ್ತಿದ್ದು 2025 ಹೊಸ ವರ್ಷವನ್ನು ಸ್ವಾಗತಿಸಲು ನಾವು ಸಜ್ಜಾಗಿದ್ದೀವೆ. ರೈತರ ಬದುಕು ಪರಂಪರೆ, ನಮ್ಮ ಸಂಸ್ಕೃತಿ ಉಳಿಸುವ ಕೆಲಸ ಈ ಮೇಳದಿಂದ ನಡೆಯುತ್ತಿದೆ. ಈ ಉತ್ತಮ ಕೆಲಸಕ್ಕೆ ಡಿ. ಕೆ. ಶಿವಕುಮಾರ್ ಬೆಂಬಲ ಇರುತ್ತದೆ” ಎಂದರು.

“ಸಾವಿರಾರು ಜನರು ತಮ್ಮ ಕುಟುಂಬಸಮೇತರಾಗಿ ಬಂದು ಮೇಳವನ್ನು ಸಂಭ್ರಮಿಸುತ್ತಿದ್ದಾರೆ. ಜೀವನದಲ್ಲಿ ಹೊಟ್ಟೆ ತುಂಬಾ ತಿನ್ನಬೇಕು, ಆಹಾರದ ರುಚಿಯನ್ನು ಸವಿಯಬೇಕು. ಹೊಸವರ್ಷ ಎಲ್ಲರಿಗೂ ಒಳಿತನ್ನು ಮಾಡಲಿ” ಎಂದು ತಿಳಿಸಿದರು.

ಇದನ್ನೂ ನೋಡಿ : ದಮನಿತರ ಪರವಾಗಿ ಕೆಂಬಾವುಟ ಮಾತ್ರವೇ ನಿಲ್ಲಲು ಸಾಧ್ಯ- ಎಂ.ಎ.ಬೇಬಿ

Donate Janashakthi Media

Leave a Reply

Your email address will not be published. Required fields are marked *