ರಾಣೇಬೆನ್ನೂರು: ನಗರ ಹೊರವಲಯದ ಹುಣಸೆಕಟ್ಟೆ ರಸ್ತೆಯ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದಲ್ಲಿ ಅವಧಿ ಮುಗಿದ ಕಳಪೆ ಆಹಾರ ತಿಂಡಿ-ತಿನಿಸುಗಳನ್ನು ವಿತರಣೆ ಮಾಡಿರುವುದನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಪ್ರತಿಭಟನೆ ನಡೆಸಿತು.
ರಾಣೇಬೆನ್ನೂರ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ವಸತಿ ನಿಲಯದ ವಿದ್ಯಾರ್ಥಿಗಳು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ಒತ್ತಾಯಿಸಿ ಮನವಿ ಮಾಡಿದರು.
ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ಶ್ರೀಧರ ಛಲವಾದಿ ಮಾತನಾಡಿ, ಜುಲೈ 08ರಂದು, ವಿದ್ಯಾರ್ಥಿಗಳಿಗೆ ಅವಧಿ ಮುಗಿದಿರುವ ಬಿಸ್ಕೇಟ್ಟು ಪೊಟ್ಟಣಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳ ಗಮನಕ್ಕೆ ಬಂದ ಕೂಡಲೇ ಅವುಗಳನ್ನು ಸ್ವತಃ ಮೆಲ್ವಿಚಾರಕರು ನಾಶಪಡಿಸಿದ್ದು ಪ್ರಕರಣನವನ್ನ ಮುಚ್ಚಿಹಾಕಲು ಯತ್ನಿಸಿರುತ್ತಾರೆ. ಗುಣಮಟ್ಟದ ಆಹಾರ ಪೂರೈಕೆಯಲ್ಲಿ ಮೇಲ್ವಿಚಾರಕರು ಮತ್ತು ಆಡಳಿತ ವರ್ಗ ಸಂಪೂರ್ಣ ನಿರ್ಲಕ್ಷ್ಯತೆ ಮತ್ತು ಬೇಜವಾಬ್ದಾರಿತನವು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಕೂಡ ಈ ವಿಚಾರಗಳು ಪುನಃ ಪುನರವರ್ತಿತವಾಗುತ್ತಿರುವದು ಶೈಕ್ಷಣಿಕ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಅವಧಿ ಮೀರಿದ ತಿಂಡಿ ಸೇವನೆಯಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಇದು ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಕೂಡ ಪರಿಣಾಮ ಉಂಟಾಗುತ್ತದೆ. ಇದು ಕೇವಲ ಉನ್ನತ ಶಿಕ್ಷಣದ ವಿದ್ಯಾರ್ಥಿಗಳ ಪರಿಸ್ಥಿತಿ ಹೀಗಾದರೆ ಇನ್ನೂ ತಾಲ್ಲೂಕಿನಾದ್ಯಂತ ಇರುವ ಪದವಿ ಪೂರ್ವ ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ತಾಲ್ಲೂಕಿನಾದ್ಯಂತ ಹಂಚಿಕೆಯಾಗಿರುವ ಬಿಸ್ಕೆಟ್ಟು ಪೊಟ್ಟಣಗಳು ಹಾಗೂ ಆಹಾರದ ಟೆಂಡರ್ ಗಳಲ್ಲಿ ಆಗಿರುವ ಲೋಪಗಳನ್ನು ಪತ್ತೆ ಹಚ್ಚಬೇಕಾಗಿದೆ. ಈ ಭ್ರಷ್ಟಾಚಾರದಲ್ಲಿ ಕೆಲ ಅಧಿಕಾರಿ ವರ್ಗವು ಶಾಮಿಲಾಗಿರುವುದು ಈ ಮೂಲಕ ಎದ್ದು ತೋರುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ಈ ಅವ್ಯವಸ್ಥೆಯಾದಲ್ಲಿ ಇನ್ನು ರಾಜ್ಯದ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ ಶ್ರೀಧರ ಛಲವಾದಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ವಸತಿ ನಿಲಯದ ವಿದ್ಯಾರ್ಥಿ ಸಿದ್ದಪ್ಪ ಮಾತನಾಡಿ, ಅವಧಿ ಮುಗಿದ ಬಿಸ್ಕತ್ತು ನೀಡಿದ್ದನ್ನು ನೋಡಿ ಸ್ನೇಹಿತರೆಲ್ಲರು ಸೇರಿ ಸಹಾಯಕ ವಾರ್ಡನ್ ಅವರಿಗೆ ತಿಳಿಸಿದ್ದೆವು ಬೇಜವಾಬ್ದಾರಿ ವರ್ತನೆಯಿಂದ ಅವುಗಳನ್ನು ಸುಟ್ಟು ಹಾಕಿದ್ದಾರೆ. ಈ ಘಟನೆಯಿಂದ ನೋಡುವುದಾದರೆ ಟೆಂಡರ್ ಪಡೆದುಕೊಂಡಿರುವವರ ಜೊತೆಗೆ ವಸತಿ ನಿಲಯದ, ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಆರೋಪಿಸಿದರು. ಅಲ್ಲದೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆಂದು ಹೇಳಿದರು.
ಸಮಸ್ಯೆ ಬಗೆಹರಿಯದಿದ್ದಲ್ಲಿ, ತಾಲ್ಲೂಕು ಕಛೇರಿ ಮುಂದೆ ಧರಣಿ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ತಾಲ್ಲೂಕ ಸಹ ಕಾರ್ಯದರ್ಶಿ ವೀಣಾ ಎಸ್, ಹಾಸ್ಟೆಲ್ ವಿದ್ಯಾರ್ಥಿಗಳಾದ ಅಭಿಷೇಕ ಎನ್, ಆನಂದ್ ಎನ್, ರಘು ಎಮ್ ಕೆ, ಸುನೀಲ್ ಸೇರಿದಂತೆ ವಸತಿ ನಿಲಯದ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.