ಆಟೋರಿಕ್ಷಾಗಳಿಗೆ ಮೀಟರ್ ದರ ಹೆಚ್ಚಿಸಲು ಎಆರ್‌ಡಿಯು ಆಗ್ರಹ

ಬೆಂಗಳೂರು: ಪ್ರಸಕ್ತ ನಗರದಲ್ಲಿ ಎರಡು ಲಕ್ಷ ಆಟೋ ಚಾಲಕರುಗಳಿದ್ದು, ಇವರನ್ನು ನಂಬಿಕೊಂಡು ಅವರ ಕುಟುಂಬಗಳು ಮತ್ತು ಇತರೆ ಅವಲಂಬಿತರು ಸೇರಿ ಸುಮಾರು 10 ಲಕ್ಷ ಕುಟುಂಬಗಳು ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬೆಲೆ ಏರಿಕೆಯ ಪರಿಣಾಮವಾಗಿ ಜೀವನ ದುಸ್ಥರವಾಗಿದೆ ಕೂಡಲೇ ಸಾರಿಗೆ ಸಚಿವರು ಮದ್ಯಪ್ರವೇಶಿಸಿ ಆಟೋ ಮೀಟರ್‌ ದರ ಹೆಚ್ಚಿಸಬೇಕೆಂದು ಎಆರ್‌ಡಿಯು ಸಂಘಟನೆ ಆಗ್ರಹಿಸಿದೆ.

ಆಟೋ ಚಾಲಕ ವರ್ಗಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಬದಲಾಗಿ ಈ ವರ್ಗದ ಮೇಲೆ ಹಲವಾರು ರೀತಿಯಲ್ಲಿ, ಬೆಲೆ ಏರಿಕೆಯ ಪರಿಣಾಮವಾಗಿ ಇಂದಿನ ಬದುಕು ಕಷ್ಟಕರವಾಗಿದೆ. ಅಲ್ಲದೆ, ಆಟೋ ಮೀಟರ್‌ನ ಈಗಿನ ದರ ಬೆಲೆ ಏರಿಕೆಗೆ ಅನುಗುಣವಾಗಿಲ್ಲ ಎಂದು ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ, ವಾಹನಗಳಿಗೆ ಉಪಯೋಗಿಸುವ ಇಂಧನಗಳಾದ ಪೆಟ್ರೋಲ್, ಡೀಸೆಲ್, ಆಟೋ ಎಲ್‌ಪಿಜಿ ದರಗಳನ್ನು ಜಾಗತೀಕರಣದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆ ಅನುಸಾರವಾಗಿ ಪ್ರತಿ ತಿಂಗಳು ಏರಿಕೆ ಮಾಡುತ್ತಿದೆ. ಇದರ ಭಾಗವಾಗಿ ಬೆಂಗಳೂರು ನಗರದಲ್ಲಿ ಆಟೋ ಎಲ್‌ಪಿಜಿ ಇಂಧನದ ಈಗಿನ ಬೆಲೆ ರೂ.57.88 ಇದೆ.

ಈಗಾಗಲೇ ಸಂಚಾರಿ ನಿಯಮ ಉಲ್ಲಂಘನೆಗಳಿಗೆ ದುಬಾರಿ ದಂಡ, ಆಹಾರ ಪದಾರ್ಥಗಳ ಬೆಲೆ ಏರಿಕೆ, ಆಟೋರಿಕ್ಷಾಗಳ ಖರೀದಿ ಬೆಲೆ, ಎಲ್‌ಪಿಜಿ ಆಟೋ ಇಂಧನ, ಆಟೋರಿಕ್ಷಾಗಳ ಬಿಡಿ ಭಾಗಗಳು, ಆಯಿಲ್, ಟೈರ್, ವಾಹನಗಳ ವಿಮಾ ಪ್ರೀಮಿಯಂ ದರ, ಆರ್‌ಟಿಓ ಶುಲ್ಕಗಳು, ಮನೆ ಬಾಡಿಗೆ, ಹಾಲಿನ ದರ, ನೀರಿನ ದರ, ವಿದ್ಯುತ್ ದರ, ಅಡುಗೆ ಅನಿಲ, ಮಕ್ಕಳ ವಿದ್ಯಾಭ್ಯಾಸದ ಖರ್ಚು, ದುಬಾರಿ ಬಡ್ಡಿ ಇನ್ನೂ ಮುಂತಾದ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಚಾಲಕರು ಕಷ್ಟಪಡುತ್ತಿದ್ದಾರೆ.

ಕೋವಿಡ್-19 ನಿಂದಾಗಿ ಜನರ ಆರ್ಥಿಕ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಆಹಾರ ಪದಾರ್ಥಗಳ ಬೆಲೆಯನ್ನು ಪದೇಪದೇ ಏರಿಸುತ್ತಿದೆ. ಇದರಿಂದಾಗಿ ಉದ್ಯೋಗವಿಲ್ಲದೆ, ವೇತನಗಳಿಲ್ಲದೆ ಜನ ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಈ ಎಲ್ಲಾ ಬೆಲೆ ಏರಿಕೆಗಳು ಆಟೋ ಚಾಲಕರಾದ ನಮಗೆ ತಟ್ಟುತ್ತಿವೆ ಎಂದು ಎಆರ್‌ಡಿಯು ಸಂಘಟನೆಯು ತಿಳಿಸಿದೆ.

ಈ ಬೆಲೆ ಏರಿಕೆ ಸರ್ಕಾರದ ಕಣ್ಣಿಗೆ ಕಾಣುವುದಿಲ್ಲವೆ? ಇದು ಸಾರ್ವಜನಿಕರಿಗೆ ಹೊರೆಯಲ್ಲವೆ? ಸರ್ಕಾರ ಆಟೋರಿಕ್ಷಾ ಮೀಟರ್ ದರ ಹೆಚ್ಚಳ ಮಾಡಿ ಎಂಟು (30 ಡಿಸೆಂಬರ್ 2013) ವರ್ಷಗಳು ಕಳೆದಿವೆ. ಈಗಲಾದರೂ ಮೀಟರ್ ದರವನ್ನು ಹೆಚ್ಚಿಸಲು ಎಆರ್‌ಡಿಯು ಮನವಿ ಮಾಡಿದೆ.

ಬೆಲೆ ಏರಿಕೆಗೆ ಅನುಗುಣವಾಗಿ ಮೀಟರ್ ದರ ಹೆಚ್ಚಳ ಮಾಡುವ ಅಧಿಕಾರ ಸಂಬಂಧಪಟ್ಟ ಸಾರಿಗೆ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. ಹಾಗಾಗೀ ಈ ವಿಚಾರವಾಗಿ ಸಾರಿಗೆ ಸಚಿವರ ಮದ್ಯಪ್ರವೇಶಿಸಿ ಕ್ರಮಕ್ಕೆ ಮುಂದಾಗಬೇಕೆಂದು ಆಟೋರಿಕ್ಷಾ ಡ್ರೈವರ‍್ಸ್‌ ಯೂನಿಯನ್(ಎಆರ್‌ಡಿಯು)(ರಿ) (ಸಿಐಟಿಯು ಸಂಯೋಜಿತ) ಜಿಲ್ಲಾ ಸಮಿತಿ ಅಧ್ಯಕ್ಷ ಮೀನಾಕ್ಷಿ ಸುಂದರಂ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಎನ್‌.ಶ್ರೀನಿವಾಸ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *