‘ನಾ ನಿಲ್ಲುವಳಲ್ಲ’, ‘ಹಾಡಾಗಿ ಹರಿದಾಳೆ’ – ಆತ್ಮಚರಿತ್ರೆಗಳು

– ಸಂಧ್ಯಾ ರಾಣಿ

ಇವು ನಾನು ಇತ್ತೀಚೆಗೆ ಓದಿದ ಎರಡು ಆತ್ಮಚರಿತ್ರೆಗಳು. ಎರಡೂ ಒಂದಕ್ಕಿಂತ ಒಂದು ಭಿನ್ನವಾಗಿದ್ದರೂ ಎರಡೂ ಆತ್ಮಕಥೆಗಳ ಅಂತರಾಳದಲ್ಲಿ ಹರಿಯುವ ನದಿ ಮಾತ್ರ ಸೋಲೊಪ್ಪಿಕೊಳ್ಳದ, ಹಿನ್ನಡೆ, ಅಡೆತಡೆಗಳನ್ನು ಮೀರಲೆಂದು ತುಡಿಯುವ, ‘ನಾ ನಿಲ್ಲುವಳಲ್ಲ’ ಎನ್ನುವ ಹೆಣ್ಣಿನ ನದಿಯಂತಹ ಮನೋಶಕ್ತಿ. Juggernaut, ನಾವೆಲ್ಲರೂ ಪ್ರೀತಿಯಿಂದ ಶೈಲಜಾ ಟೀಚರ್ ಎಂದು ಕರೆಯುವ ಕೆ ಕೆ ಶೈಲಜಾ ಅವರ ಆತ್ಮಚರಿತ್ರೆಯನ್ನು ಪ್ರಕಟಿಸಿದ್ದರೆ, ವಿಕಾಸ ಪ್ರಕಾಶನದ ಪೂರ್ಣಿಮಾ ಅವರು ಎಚ್ ಆರ್ ಲೀಲಾವತಿಯವರ ‘ಹಾಡಾಗಿ ಹರಿದಾಳೆ’ಯನ್ನು ಹೊರತಂದಿದ್ದಾರೆ.

ಶೈಲಜಾ ಟೀಚರ್ ಹಲವಾರು ಕಾರಣಗಳಿಂದಾಗಿ ಗಮನ ಸೆಳೆದ ಹೆಸರು. ಕಳೆದ ವರ್ಷಗಳಲ್ಲಿ ಕೇರಳ ಒಂದಾದ ನಂತರ ಒಂದರಂತೆ ವಿಪತ್ತುಗಳನ್ನು ಎದುರಿಸಿತು. ನೆರೆಯಿಂದ ಶುರುವಾದ ಈ ವಿಪತ್ತುಗಳು, ನಿಫಾ ವೈರಸ್ ನಿಂದ ಮುಂದುವರೆದು, ನಂತರ ಕೊರೋನವರೆಗೂ ಸಾಗಿತು. ನಿಫಾ ಮತ್ತು ಕೊರೋನಾ ವಿಪತ್ತುಗಳಲ್ಲಿ ಶೈಲಜಾ ಅವರು ತೆಗೆದುಕೊಂಡು ಕ್ಷಿಪ್ರ ನಿರ್ಣಯಗಳು, ಅವುಗಳನ್ನು ಅವರು ಎದುರಿಸಿದ ರೀತಿಯಿಂದ ಎಲ್ಲರ ಗಮನ ಅವರ ಕಡೆಗೆ ಹರಿದಿತ್ತು. ಆನಂತರ ಚುನಾವಣೆಗೆಗಳು ನಡೆದು ಮತ್ತೆ ಅವರ ಪಕ್ಷ ಅಧಿಕಾರ ಹಿಡಿದಾಗ ಅವರಿಗೆ ಮತ್ತಷ್ಟು ಹೊಣೆಗಾರಿಕೆ, ಅಧಿಕಾರ ನೀಡಬಹುದು ಎನ್ನುವ ನಿರೀಕ್ಷೆ ಸಹಜವಾಗಿತ್ತು. ಆದರೆ ಅದ್ಯಾವುದೂ ಅವರಿಗೆ ದಕ್ಕಲಿಲ್ಲ. ಆಗ ನಿರಾಶೆ ಆಗಿದ್ದು ಹೌದು. ಆತ್ಮಚರಿತ್ರೆ

ಇದನ್ನು ಓದಿ : ಎಂ. ಜಿ. ಹೆಗಡೆಯವರ ಆತ್ಮಕಥೆ “ಚಿಮಣಿ ಬೆಳಕಿನಿಂದ” ಸೆ.22ರಂದು ಬಿಡುಗಡೆ

ಗಂಡಿನ ವಿಷಯಕ್ಕೆ ಸಾಧನೆ ಎಂದು ಪರಿಗಣಿಸಲ್ಪಡುವ ಖ್ಯಾತಿ, ಜಾಗತಿಕ ಗುರುತಿಸುವಿಕೆಗಳು ಹೆಣ್ಣಿನ ವಿಷಯಕ್ಕೆ ಬಂದಾಗ ಅದು ಹೇಗೆ ಹಿನ್ನಡೆಯಾಗಿಬಿಡುತ್ತದೆ, ಆಕೆಯ ಬೆಂಬಲಕ್ಕೆ ನಿಲ್ಲಲು ಯಾವುದೇ ವ್ಯಕ್ತಿ ಅಲ್ಲ, ಒಂದು ಸಪೋರ್ಟ್ ಸಿಸ್ಟಂ ಕಟ್ಟಿಕೊಳುವಲ್ಲಿ ನಾವು ಎಲ್ಲಿ ಸೋಲುತ್ತಿದ್ದೇವೆ ಅನ್ನಿಸಿತ್ತು. ಆ ಕಾರಣಕ್ಕೆ ಈ ಪುಸ್ತಕ ಬಂದಾಗ ಆಸಕ್ತಿಯಿಂದ ಓದಲು ಶುರು ಮಾಡಿದ್ದೆ. ಆರೋಗ್ಯಕ್ಕೆ ಸಂಬಂಧಿಸಿದ್ದ ಸವಾಲುಗಳಷ್ಟೇ ಅಲ್ಲದೆ ಸಾಮುದಾಯಿಕ ಕ್ಷೇಮದ ಕಾರ್ಯಾಚರಣೆಗಳನ್ನು ಇವರು ಹೇಗೆ ಸಮುದಾಯವನ್ನೂ ಅದರಲ್ಲಿ ತೊಡಗಿಸಿಕೊಳ್ಳುವ ಮೂಲಕವೇ ಎದುರಿಸಿದರು, ಪರಿಹರಿಸಿದರು ಎನ್ನುವುದು ನಿಜಕ್ಕೂ ಆಸಕ್ತಿದಾಯಕ. ಮೂಲತಃ ಇವರು ಬರಹಗಾರರಲ್ಲ, ಬಹುಶಃ ಹಾಗಾಗಿ ಹಲವಾರು ಕಡೆ ವಿಪರೀತ ವಿವರಗಳಿವೆ, ಅಷ್ಟೊಂದು ವಿವರಳ ಅಗತ್ಯ ಇರಲಿಲ್ಲ ಅನ್ನಿಸುತ್ತದೆ. ನನಗೆ ಗಮನ ಸೆಳೆದ ಅಂಶ ಎಂದರೆ ಅವರು ತಮ್ಮ ಸಾಧನೆಗಳ ಬಗ್ಗೆ ಬರೆಯುವುದಕ್ಕೂ ಮೊದಲು ಬರೆಯುವುದು ತಮ್ಮ ಸಾರ್ವಜನಿಕ ಜೀವನದ ನಡುವೆ ಮನೆಗಾಗಿ, ಅದರಲ್ಲೂ ಮಕ್ಕಳಿಗಾಗಿ ತಾವು ಸಮಯ ಕೊಡಲಾಗಲಿಲ್ಲ ಎನ್ನುವ ಗಿಲ್ಟ್ ಬಗ್ಗೆ. ಅದನ್ನು ಅವರು ಇಂದಿಗೂ ಹೊರುತ್ತಿದ್ದಾರೆ. ಏಕೋ ವಿಷಾದವೆನಿಸಿತು.

ಇನ್ನು ಎರಡನೆಯ ಪುಸ್ತಕ ‘ಹಾಡಾಗಿ ಹರಿದಾಳೆ’. ಲೀಲಾವತಿಯವರು ಕೇವಲ ಅವರ ಹಾಡುಗಾರಿಕೆಯ ಕಾರಣಕ್ಕೆ ಮಾತ್ರವಲ್ಲ, ಆಕಾಶವಾಣಿಯಲ್ಲಿ ಮಕ್ಕಳಿಗೆ ಕಥೆ ಹೇಳುವ ಆತ್ಮೀಯ, ಅಕ್ಕರೆಯ ದನಿಯ ‘ಚಿಕ್ಕಮ್ಮ’ನಾಗಿ ಸಹ ಎಲ್ಲರಿಗೂ ಹತ್ತಿರವಾದವರು. ಈ ಪುಸ್ತಕ ವಿಶೇಷವಾಗುವುದು ಅವರು ಯಾವುದೇ ಮುಚ್ಚುಮರೆಯಿಲದೆ ತಮ್ಮ ಬದುಕು, ತಮ್ಮ ಮೇಲಾದ ಶೋಷಣೆ, ಪ್ರೀತಿ ಎನ್ನುವ ಸುಡುದೀಪದ ಆಕರ್ಷಣೆಯಲ್ಲಿ ಸುಟ್ಟುಕೊಂಡ ಪತಂಗದ ರೆಕ್ಕೆ, ಎದುರಿಸಿದ ಅವಮಾನ, ಅಪಮಾನ ಎಲ್ಲದರ ಬಗ್ಗೆ ಬರೆಯುತ್ತಾರೆ. ಅಲ್ಲೆಲ್ಲೂ victimhood ಇಲ್ಲದೆ ಅವರು ಇವುಗಳನ್ನು ನಿರೂಪಿಸುತ್ತಾರೆ ಎನ್ನುವುದು ವಿಶೇಷ.

ಗುರುಗಳಾಗಿದ್ದ ಪದ್ಮಚರಣರು ಹೇಗೆ ತಮ್ಮ ಮೇಲೆ ದೌರ್ಜನ್ಯ ಎಸಗಿದರು ಎಂದು ಬರೆಯುವ ವೇಳೆಯಲ್ಲೇ ಬಹುಶಃ ಅವರ ಸಂಗೀತ ನಿರ್ದೇಶನದ ಕಾರಣಕ್ಕೇ ಆನು ಅವುಗಳನ್ನೆಲ್ಲಾ ಸಹಿಸಿಕೊಂಡೆನೇನೋ, ಅದನ್ನು ಪ್ರತಿಭಟಿಸದೆ ಉಳಿದೆನೇನೋ ಎಂದು ತಮ್ಮನ್ನು ಸಹ ಅವರು ನಿಕಶಕ್ಕೊಡ್ಡಿಕೊಳ್ಳುತ್ತಾರೆ. ಅಲ್ಲಲ್ಲಿ ಹೆಮ್ಮೆ, ಸ್ವಪ್ರಶಂಸೆ ಇಣುಕುತ್ತದೆಯಾದರೂ, ಆಗಲೇ ಹೇಳಿದಹಾಗೆ ಹೆಣ್ಣುಗಳು ಹಾಗಿರಬಾರದು ಎಂದುಕೊಳ್ಳುವುದು ಸಹ ನಮಗೆ ಲೋಕ ಕಲಿಸಿದ ಕಣ್ಣುಕಟ್ಟಾಗಿರಬಹುದು. ಪುಸ್ತಕವನ್ನು ಒಂದೆರಡು ಸಲ ಎಡಿಟ್ ಮಾಡಿದ್ದರೆ ಅನೇಕ ಪುನರಾವರ್ತನೆಗಳು ತಪ್ಪುತ್ತಿದ್ದವು ಅನ್ನಿಸಿತು.
ಒಟ್ಟಿನಲ್ಲಿ ಇವೆರಡೂ ಹಲವಾರು ಕಾರಣಗಳಿಗಾಗಿ ಓದಬೇಕಾದ ಪುಸ್ತಕಗಳು. ಆತ್ಮಚರಿತ್ರೆ

ಇದನ್ನು ನೋಡಿ : ವಚನಾನುಭವ – 12 | ಇಂದ್ರಿಯ ನಿಗ್ರಹವ ಮಾಡಿದಡೆ ಹೊಂದುವವು ದೋಷಂಗಳು | ಮೀನಾಕ್ಷಿ ಬಾಳಿ Janashakthi Media

 

Donate Janashakthi Media

Leave a Reply

Your email address will not be published. Required fields are marked *