ಕೆಜಿಎಫ್: ದೊಡ್ಡ ಹೊಂಡವೊಂದು ಊರಿಗಾಂ ಫೈಲೈಟ್ಸ್ ವೃತ್ತದ ಬಳಿ ರಸ್ತೆ ಮಧ್ಯದಲ್ಲಿ ನಿರ್ಮಾಣವಾಗಿದ್ದು, ಸವಾರರು ಹೊಂಡಕ್ಕೆ ಬೀಳುವ ಆತಂಕದಲ್ಲಿಯೇ ಈ ರಸ್ತೆ ದಾಟುವ ಸ್ಥಿತಿ ಇದೆ. ಅಪಾಯವನ್ನು ತಪ್ಪಿಸಲು ಆಟೋ ಚಾಲಕರು ಹೊಂಡ ಬಿದ್ದಿರುವ ಜಾಗದಲ್ಲಿ ಟೈರ್ ಇಟ್ಟು, ಎಚ್ಚರಿಕೆಯ ಬಾವುಟ ಹಾರಿಸಿದ ಘಟನೆ ಮೇ 19 ಸೋಮವಾರ ನಡೆದಿದೆ. ಮಧ್ಯ
ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯನ್ನು ಈಚೆಗೆ ₹10 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಅನತಿ ದೂರದಲ್ಲಿಯೇ ಇರುವ ಫೈಲೈಟ್ಸ್ ವೃತ್ತದಲ್ಲಿ ಕಳೆದ ವಾರ ನಗರಸಭೆಯಿಂದ ಐ ಲವ್ ಕೆಜಿಎಫ್ ಎಂಬ ನಾಮಫಲಕವನ್ನು ಸಹ ಹಾಕಲಾಗಿತ್ತು.
ಶಾಸಕಿ ಎಂ.ರೂಪಕಲಾ ಅದನ್ನು ಉದ್ಘಾಟನೆ ಮಾಡಿದ್ದರು. ಫೈಲೈಟ್ಸ್ ವೃತ್ತವನ್ನು ಸಹ ಈಚೆಗೆ ನವೀಕರಣ ಮಾಡಲಾಗಿತ್ತು. ಆದರೆ ವೃತ್ತದ ಬಳಿ ಇರುವ ರಸ್ತೆಯಲ್ಲಿನ ಈ ದೊಡ್ಡ ಹೊಂಡಗಳು ಮಾತ್ರ ಯಾರ ಕಣ್ಣಿಗೂ ಕಂಡಂತಿಲ್ಲ.
ಇದನ್ನೂ ಓದಿ: ರಾಜ್ಯದ 18 ಜಿಲ್ಲೆಗಳಲ್ಲಿ ಭಾರಿ ಮಳೆ; ಆರೆಂಜ್ ಅಲರ್ಟ್ ಘೋಷಣೆ
ಮೂರ್ನಾಲ್ಕು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಹೊಂಡದಲ್ಲಿ ನೀರು ತುಂಬಿಕೊಂಡಿದ್ದು, ಅದನ್ನು ಗಮನಿಸದೇ ಬೈಕ್ ಸವಾರರು ರಸ್ತೆಯ ಮೇಲೆ ಹೋಗುವಾಗ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಣ್ಣ ವಾಹನಗಳು ಸಹ ಲಯ ತಪ್ಪುತ್ತಿವೆ.
ಇದನ್ನು ಕಂಡು ಕೆಲ ಆಟೋ ಚಾಲಕರು ಹೊಂಡ ಬಿದ್ದಿರುವ ಜಾಗದಲ್ಲಿ ಟೈರ್ ಇಟ್ಟು, ಅದಕ್ಕೆ ಕೆಂಬಾವುಟ ಸಿಕ್ಕಿಸಿದ್ದಾರೆ. ಇದರಿಂದ ಎಚ್ಚರಗೊಂಡ ವಾಹನ ಸವಾರರು ಹೊಂಡವನ್ನು ತಪ್ಪಿಸಿಕೊಂಡು ಚಾಲನೆ ಮಾಡುತ್ತಿರುವುದರಿಂದ ಸ್ವಲ್ಪ ಮಟ್ಟಿಗೆ ಅನಾಹುತಗಳು ತಪ್ಪುತ್ತಿವೆ.
ಜೋಡಿ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯು ಎರಡೂ ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡಿರಲಿಲ್ಲ. ಇದರಿಂದಾಗಿ ಮಳೆ ಬಂದಾಗೆಲ್ಲ ರಸ್ತೆಯಲ್ಲಿ ನೀರು ತುಂಬಿ ರಸ್ತೆ ಹಾಳಾಗಲು ಕಾರಣವಾಗಿತ್ತು. ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿತ್ತು ಎಂದು ಆಟೋ ಚಾಲಕರು ತಿಳಿಸಿದ್ದಾರೆ.
ರಾಜಶೇಖರ್, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ರಸ್ತೆ ಮಧ್ಯದಲ್ಲಿ ಹೊಂಡ ಇರುವುದು ತಿಳಿದುಬಂದಿದೆ. ಜೆಸಿಬಿ ಮೂಲಕ ಹಳ್ಳವನ್ನು ಅಗೆದು ಸಮ ಮಾಡಲಾಗಿದೆ. ಮಳೆ ನಿಂತ ತಕ್ಷಣ ಡಾಂಬರು ಹಾಕಲಾಗುವುದು.
ಇದನ್ನೂ ನೋಡಿ: ಪಿಚ್ಚರ್ ಪಯಣ 158| ಹಲವು ಸಿನಿಮಾಗಳ ಪಕ್ಷಿನೋಟ |ಮ. ಶ್ರೀ. ಮುರಳಿಕೃಷ್ಣ Janashakthi Media