ಮೈಸೂರು| ದಸರಾ ಆಹಾರ ಮೇಳ; ಮಳಿಗೆ ತೆರೆಯಲು ಅವಕಾಶ ನೀಡದೇ ಅಧಿಕಾರಿಗಳು ತೊಂದರೆ

ಮೈಸೂರು: ದಸರಾ ಆಹಾರ ಮೇಳದಲ್ಲಿ ಮಳಿಗೆ ತೆರೆಯಲು ಅವಕಾಶ ನೀಡದೇ ಅಧಿಕಾರಿಗಳು ತೊಂದರೆ ನೀಡಿದ್ದಾರೆ. ಮಳಿಗೆ ಹಾಕಿಕೊಳ್ಳಲು ₹1 ಲಕ್ಷ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸ್‌ ಠಾಣೆಗೆ ದೂರು ನೀಡಿ ಮನಸ್ಸು ನೋಯಿಸಿದ್ದಾರೆ ಎಂದು ಪ್ರಕೃತಿ ಆದಿವಾಸಿ ಫೌಂಡೇಶನ್ ಟ್ರಸ್ಟ್‌ ಅಧ್ಯಕ್ಷ, ಆದಿವಾಸಿ ಮುಖಂಡ ಕೃಷ್ಣಯ್ಯ ತಮ್ಮ ಅಳಲು ತೋಡಿಕೊಂಡಿದ್ದಾರೆ.  ದಸರಾ 

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2014ರಿಂದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಮಳಿಗೆ ಹಾಕಿಕೊಳ್ಳುತ್ತಿದ್ದೇವೆ. ಅಂದಿನಿಂದಲೂ ಯಾರೂ ಬಾಡಿಗೆ ಕೇಳಿಲ್ಲ. ಆದರೆ “ಈ ವರ್ಷ ಮಳಿಗೆ ಹಾಕಿಕೊಳ್ಳಲು ಒಂದು ₹1 ಲಕ್ಷ ರೂ. ಬಾಡಿಗೆ ಕೇಳುತ್ತಿದ್ದಾರೆ” ಎಂದು ಆರೋಪಿಸಿದರು.

ಇದನ್ನೂ ಓದಿ:Mahisha Dasara| ಪೊಲೀಸ್‌ ಭದ್ರತೆಯಲ್ಲಿ ಮಹಿಷ ದಸರಾ; ನಿಷೇದಾಜ್ಞೆ ಜಾರಿ

ಸ್ಥಳಕ್ಕೆ ಆಗಮಿಸಿದ ಪೊಲೀಸರು ನಮ್ಮನ್ನು ಮಾತನಾಡಿಸಿ, ಅನುಮತಿ ಪಡೆದು ಮಳಿಗೆ ತೆರೆಯುವಂತೆ ಹೇಳಿದ್ದಾರೆ. ಅರಣ್ಯ ರಕ್ಷಣೆಯಲ್ಲಿ ಕೈಜೋಡಿಸುವ ನಮಗೆ ವರ್ಷಕ್ಕೊಮ್ಮೆ ಆಹಾರ ಮೇಳಕ್ಕೆ ಬಂದರೂ ಬಾಡಿಗೆ ದರ ವಿಧಿಸುವುದು ಎಷ್ಟು ಸರಿ’ ಎಂದು ಭಾವುಕರಾದರು.

“ಅನುಮತಿ ಇಲ್ಲದೇ ನಿಯಮ ಉಲ್ಲಂಘಿಸಿ ಆಹಾರ ಮೇಳದಲ್ಲಿ ಮಳಿಗೆ ತೆರೆದಿದ್ದಾರೆ ಎಂದು ಸಂಸ್ಥೆ ಹಾಗೂ ನಮ್ಮ ವಿರುದ್ಧ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಲಕ್ಷ್ಮೀಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದೆ. ಎಚ್‌.ಡಿ.ಕೋಟೆಯ ಮಹದೇಶ್ವರ ಕಾಲೊನಿ, ಅಂಕನಾಥಪುರ, ಬಸವನಗಿರಿ ಹಾಡಿ, ಹುಣಸೂರಿನ ಅಂಬೇಡ್ಕರ್‌ ನಗರ, ವೀರನಹೊಸಹಳ್ಳಿ, ಯಶೋಧರಪುರ, ಪಿರಿಯಾಪಟ್ಟಣದ ರಾಣಿಗೇಟು, ಆಯರಬೀಡು, ಹದಿನಾರು ಸೈಟು, ಅಬ್ಬಳತಿ, ಲಕ್ಷ್ಮೀಪುರದ 50 ಮಂದಿ ಹಾಡಿ ನಿವಾಸಿಗಳು ದಸರೆ ವೇಳೆ ಮೈಸೂರಿಗೆ ಬಂದು ಬುಡಕಟ್ಟು ಆಹಾರವನ್ನು ನಗರದವರಿಗೆ ಪರಿಚಯಿಸುತ್ತಿದ್ದಾರೆ. ಶೆಡ್‌ ಹಾಕಿಕೊಳ್ಳುವುದಕ್ಕೆ ₹2 ಲಕ್ಷ ಬೇಕು. ಆಹಾರ ಸಾಮಗ್ರಿ ಖರೀದಿಸಲು ₹1 ಲಕ್ಷ ಬೇಕು. ಈಗ ಬಾಡಿಗೆ ₹1 ಲಕ್ಷ ಕೇಳಿದರೆ, ನಾವು ಎಲ್ಲಿಗೆ ಹೋಗಬೇಕು”ಎಂದು ಬೇಸರ ವ್ಯಕ್ತಪಡಿಸಿದರು.

“ಸ್ಥಳಕ್ಕೆ ಮುಡಾ ಎಇಇ ಸಂಪತ್‌ ಕುಮಾರ್‌ ಹಾಗೂ ಆಯುಕ್ತ ಜಿ.ಟಿ.ದಿನೇಶ್‌ ಕುಮಾರ್‌ ಅವರೂ ಬಂದಿದ್ದರು. ಆದಿವಾಸಿಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲು ಹೋದರೆ, ಆಹಾರ ಮೇಳ ಉಪಸಮಿತಿಯ ಕಾರ್ಯಾಧ್ಯಕ್ಷರೂ ಆದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಅವರಲ್ಲಿ ಕೇಳಿ ಎಂದರು. ಸಚಿವ ಮಹದೇವಪ್ಪ ಅವರಲ್ಲಿ ಮನವಿ ಸಲ್ಲಿಸುತ್ತೇವೆ” ಎಂದರು.

ಇದನ್ನೂ ಓದಿ:10 ದಿನಗಳ ದಸರಾ ಮಹೋತ್ಸವ ಭದ್ರತೆಗೆ 5485 ಪೊಲೀಸರ ನಿಯೋಜನೆ: ಡಾ.ಚಂದ್ರಗುಪ್ತ

2014ರಿಂದಲೂ ಶೆಡ್‌ ಹಾಕಿಕೊಳ್ಳುತ್ತಿದ್ದವು. ಹಿಂದೆ ಎರಡು ಸ್ಟಾಲ್ ಕೊಡುತ್ತಿದ್ದರು. ಬಾಡಿಗೆಯನ್ನೇನು ಕೇಳುತ್ತಿರಲಿಲ್ಲ. ಆಹಾರ ಮೇಳದಲ್ಲಿ ಬುಡಕಟ್ಟು ಸಮುದಾಯಗಳಾದ ಜೇನುಕುರುಬ, ಎರವ, ಸೋಲಿಗ, ಡೋಂಗ್ರಿ ಗ್ರೆಸಿಯಾ, ರಾಮನಗರದ ಇರುಳಿಗ ಜನರು ಬರುತ್ತಾರೆ. ಬಂದ ಲಾಭದಲ್ಲಿ ಎಲ್ಲಾರು ಹಂಚಿಕೊಳ್ಳುತ್ತೇವೆ. ಕಳೆದ ದಸರೆಯಲ್ಲಿ ಏನೂ ಗಿಟ್ಟಲಿಲ್ಲ. 2019ರಲ್ಲಿ ₹1 ಲಕ್ಷ ಲಾಭ ಇತ್ತು. ಅದರಿಂದ ಸಮುದಾಯದವರಿಗೆ ರಗ್ಗು, ಸೊಳ್ಳೆ ಪರದೆ ಕೊಟ್ಟಿದ್ದೆವು. ಲಾಭವನ್ನೂ ಸಮುದಾಯದವರಿಗೆ ಖರ್ಚು ಮಾಡುತ್ತೇವೆ. ಈಗ ನೋವಾಗಿದೆ. ನುಂಗಿಕೊಳ್ಳಬೇಕಷ್ಟೇ’ ಎಂದು ನಿಟ್ಟುಸಿರು ಬಿಟ್ಟರು.

ಅವಕಾಶ ನೀಡಲು ಕ್ರಮ: ಸಚಿವ

“ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದ ಮರದ ಕೆಳಗೆ ಬಂಬೂ ಬಿರಿಯಾನಿ ಮಾಡುತ್ತಿರುವ ಆದಿವಾಸಿಗಳ ಸಮಸ್ಯೆ ಗಮನಕ್ಕೆ ಬಂದಿದೆ. ಅವರು ಪ್ರತಿ ವರ್ಷವೂ ಬರುತ್ತಾರೆ. ಅವರಿಗೆ ಅವಕಾಶ ನೀಡಲು ಕ್ರಮವಹಿಸಲಾಗುವುದು” ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು. “ಪೊಲೀಸರ ಮೂಲಕ ಆದಿವಾಸಿಗಳಿಗೆ ಬೆದರಿಕೆ ಹಾಕುವುದು ಎಷ್ಟು ಸರಿ” ಎಂಬ ಸುದ್ದಿಗಾರರ ಪ್ರಶ್ನೆಗೆ ‘ಅವರು ಮಳಿಗೆ ಹಾಕುತ್ತಿರುವುದು ಹೊಸತೇನಲ್ಲ. ಸಣ್ಣ–ಪುಟ್ಟದ್ದಾಗಿದೆ. ನಾವು ಸರಿ ಮಾಡುತ್ತೇವೆ’ ಎಂದು ಹೇಳಿದರು.

ವಿಡಿಯೋ ನೋಡಿ:

Donate Janashakthi Media

Leave a Reply

Your email address will not be published. Required fields are marked *